ದಾರಿ ತಪ್ಪದ ನದಿ...

ಶಾಂತ ನೋಟ, ಬಲು ಆಳ...
ಸುಳಿಗಳು ಅಗೋಚರ ಒಮ್ಮೊಮ್ಮೆ ಕೊಳದಂತೆ
ಮತ್ತೆ ಸಾಗರದ ಹಾಗೆ, ಮಳೆ ಬಂದಾಗಲೊಮ್ಮ
ತಳಮಳದ ಭಾವ, ಮತ್ತದೇ ಹರಿವು
ನಡೆದೂ ನಡೆಯದ ಹಾಗೆ...
ಪಯಣದಲ್ಲಿ ಜೊತೆ ಸಾಗುವ
ಕಸ ಕಡ್ಡಿ ಮಡ್ಡಿಗಳ ತೋರಿಸವುದೇ ಇಲ್ಲ

ಎಡಕ್ಕೂ ಬಲಕ್ಕೂ ವಾಲುವುದಿಲ್ಲ
ದಾರಿ ತಪ್ಪಿ ಅವರಿವರಲ್ಲಿ ಕೇಳುವುದಿಲ್ಲ
ವಶೀಲಿಗೂ, ಸಂಪತ್ತಿಗೂ ಬಾಗುವುದಿಲ್ಲ
ಅಂಕು ಡೊಂಕಿನ ದಾರಿಲಿ ನೇರ ಪ್ರಯಾಣ
ನಕ್ಕರೂ ನಗದ ಹಾಗಿನ ಪುಟ್ಟ ತೆರೆ
ಒಂದಿಷ್ಟು ಗುಳಿ ಕೆನ್ನಯ ಹಾಗಿನ ನೊರೆ
ಸುಡು ಬಿಸಿಲಲ್ಲೂ ಬಾಡದ ಸೌಂದರ್ಯ ರಾಶಿ


ಸಿಟ್ಟು ಸಿಡುಕುಗಳಿಲ್ಲ, ದಡವ ತಿನ್ನುವುದಿಲ್ಲ
ಹೇಳಿ ಹೋಗುವುದಿಲ್ಲ, ನಿಂತು ಕಾಯುವುದಿಲ್ಲ
ಹಸಿರ ಸೀರೆಗೊಂದು ನೀಲಿ ಕುಪ್ಪಸದ ಛಾಯೆ
ಸರಳತೆಯ ಸಾಕಾರ, ಬದಲಾಗದ ಆಕಾರ
ಹರವು ಕಾಣದೆ, ಆಳ ತಿಳಿಸದೆ
ಸುಳಿಗಳ ಹುದುಗಿಸಿ, ಕಸಿವಿಸಿ
ಅಡಗಿಸಿ ಖುಷಿಯ ಪ್ರತಿಫಲಿಸುವ ಸ್ನಿಗ್ಧತೆ

ನಿಲ್ಲಲಾಗದಷ್ಟು ವ್ಯಸ್ತ
ಕಾಯದೇ ಓಡುವಷ್ಟು ಕಷ್ಟ
ಪಂಥಕ್ಕೆ ಕಾಯದೇ, ಹಂತಕ್ಕೆ ಸಿಲುಕದೆ
ಸಿಕ್ಕಿದ್ದು, ದಕ್ಕಿದ್ದ ಅರಗಿಸಿ, ಕರಗಿಸಿ
ಮರಳ ದಾರಿಯ ನಡುವೆ, ಬಗೆದರೂ
ಅಗೆದರೂ ದಣಿಯದ ಭಾವ...
ಗಂಭೀರವಿದ್ದರೆ ಇರಬೇಕು ನದಿಯ ಹಾಗೆ...

No comments: