ಬದುಕಿನ ಜಂಕ್ ಫೈಲ್ಸ್ ಯಾವಾಗ ಕ್ಲಿಯರ್ ಮಾಡ್ತೀರ?

ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗಳಲ್ಲಿ ಆಗಾಗ ಜಂಕ್ ಫೈಲುಗಳು, ಟೆಂಪರರಿ ಫೈಲುಗಳೂ ತುಂಬಿ ಕೆಲಸ ನಿಧಾನ ಆಗುವುದಿದೆ. ಅನಗತ್ಯವಾಗಿ ಶೇಖರಣೆ ಜಾಗವನ್ನು ಅವು ಆಕ್ರಮಿಸಿ ವೇಗ ಕುಂದುತ್ತವೆ. ಆಗೆಲ್ಲ ನಾವು ಜಂಕ್ ಕ್ಲೀನ್ ಮಾಡುತ್ತೇವೆ ಅಥವಾ ರಿಸೈಕಲ್ ಬಿನ್ (ಕಸದ ಬುಟ್ಟಿ ಥರ)ಗೆ ಹೋಗಿ ಬೇಡವಾದ ಫೈಲುಗಳನ್ನೆಲ್ಲಾ ಗುಡಿಸಿ ಸ್ವಚ್ಛಗೊಳಿಸಿ ಮತ್ತೊಮ್ಮೆ ಕಂಪ್ಯೂಟರಿಗೆ ಉತ್ಸಾಹ ತುಂಬುತ್ತೇವೆ.
ಆದರೆ...
ಬದುಕಿಗೋಸ್ಕರ ದುಡಿಮೆ ನಿರತ ನಾವು, ಕೆಲಸ ಕೆಲಸ ಅಂತ ವೇಗವಾಗಿ ಓಡುವ ಬದುಕಿನಲ್ಲಿ ವ್ಯಸ್ತರಾಗಿರುವಾಗ, ಸಮಾಜಸೇವೆ, ಕ್ರಿಯಾತ್ಮಕ ಚಟುವಟಿಕೆ, ಸಾಮುದಾಯಿಕ ಸಂಬಂಧಗಳ ವೃದ್ಧಿಯೆಂದು ವಾರಪೂರ್ತಿ ಏನೇನೋ ಕೆಲಸಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಾಗ, ಯಾರ‌್ಯಾರದ್ದೋ ಖುಷಿಗೋಸ್ಕರ ಏನೇನೋ ಸರ್ಕಸ್ಸುಗಳನ್ನು ಮಾಡಿ ಅಸ್ತಿತ್ವ ಉಳಿಸಿಕೊಳ್ಳುವ ಪ್ರಶ್ನೆ ಬಂದಾಗಲೆಲ್ಲಾ ಇಂತಹದ್ದೇ ಸ್ವಚ್ಛತಾ ಅಭಿಯಾನವನ್ನು ಮರೆತೇ ಬಿಡುತ್ತೇವಲ್ಲ!
ಪ್ರತಿ ಮನಸ್ಸಿಗೂ ಅದರದ್ದೇ ಆದ ಬದುಕಿದೆ. ಅದು ಭಿನ್ನ. ಇನ್ನೊಬ್ಬರೊಂದಿಗೆ ಹೋಲಿಸಲೋ, ಅಳೆಯಲೋ ಆಗದು. ಪ್ರತಿ ವ್ಯಕ್ತಿತ್ವಕ್ಕೂ ಬದುಕಿಗೆ ತನ್ನದೇ ಆದ ದಾರಿ,ತನ್ನದೇ ಆದ ಪರಿಸ್ಥಿತಿ, ತನ್ನದೇ ಆದ ವಿಧಿ ಇರುತ್ತದೆ. ನಡೆಯುವ ವಿಧಾನ ಬೇರೆ ಇದ್ದರೂ, ಉದ್ದೇಶ ಒಂದೇ. ಒಂದು ಉತ್ತಮ ಅಸ್ತಿತ್ವ ಹಾಗೂ ಅಂತಿಮವಾಗಿ ಅದರಿಂದ ಮನಶಾಂತಿಯಿಂದ ಬಾಳು ಸಾಗಿಸಬೇಕು ಅಂತ. ಕುಟುಂಬ, ಉದ್ಯೋಗ, ಸಾಮಾಜಿಕ ಓಡಾಟ, ಕಷ್ಟ ಬಂದಾಗ ಹೋರಾಟ, ಉತ್ತಮ ಬದುಕಿಗೆ ಹುಡುಕಾಟ ಎಲ್ಲದರಲ್ಲಿ ದೇಹ, ಮನಸ್ಸು ದಣಿದಿರುತ್ತದೆ.
ಭಾರ ತಗ್ಗಿಸಿ: ಸಮಸ್ಯೆಗಳು ಎದುರಾದಾಗ ಕಾಡುವ ಅಭದ್ರತೆ, ಭವಿಷ್ಯದ ಬಗ್ಗೆ ಹೆದರಿಸುವಂಥಹ, ಟೀಕಿಸುವಂಥಹ, ಉಚಿತ ಸಲಹೆಗಳನ್ನು ನೀಡುವಂಥಹವರ ನಕಾರಾತ್ಮಕ ಮಾರ್ಗದರ್ಶನ, ದಾರಿ ತಪ್ಪಿಸುವ ಹೇಳಿಕೆಗಳು, ನಮ್ಮದೇ ಅವಗಣನೆಯಿಂದ ಆಗಿರಬಹುದಾದ ತಪ್ಪುಗಳು, ಪ್ರಮಾದಗಳು... ಇವೆಲ್ಲಾ ಬಾಳ ಬಂಡಿ ಸಾಗುವಲ್ಲಿ ಆಗಾಗ ವೇಗವನ್ನು ಕುಂಠಿತಗೊಳಿಸುತ್ತಿರುತ್ತವೆ. ಮನಸ್ಸಿನೊಳಗೆ ತುಂಬಿ ಏಕಾಗ್ರತೆಗೆ ಭಂಗ ತರುತ್ತವೆ. ಕಂಪ್ಯೂಟರಿಗೇ ಹೋಲಿಸಿ ಹೇಳುವುದಾದರೆ, ತೀರಾ ಅನಗತ್ಯ ವಿಚಾರಗಳು ತುಳುಕುತ್ತಿದ್ದರೆ ಮನಸ್ಸಿಗೆ ಶಾಂತವಾಗಿ ಯೋಚಿಸಲು, ಕಾಡುವ ಸಮಸ್ಯೆಗಳಿಂದ ಹೊರಬರಲು ಪರಿಹಾರ ಹುಡುಕಲು ಅವಕಾಶ ಸಿಗುವುದಿಲ್ಲ... ಹಾಗಾದಾಗ ಪ್ರೊಸೆಸಿಂಗ್ ನಿಧಾನವಾಗಿ ಬದುಕು ಮತ್ತಷ್ಟು ಭಾರ ಎನಿಸಬಹುದು.
ಅದಕ್ಕಾಗಿಯೇ ಹೇಳುತ್ತಿರುವುದು...: ದುಡಿಮೆ ನಡುವೆ, ದಿನದ ತಡೆರಹಿತ ಓಟದ ಮಧ್ಯೆ ನಮ್ಮ ಬಗ್ಗೆ ನಾವೇ ಕುಳಿತು ಯೋಚಿಸಲು ಸ್ವಲ್ಪ ಸಮಯ ಮೀಸಲಿಟ್ಟಿರಬೇಕು. ಅದನ್ನು ಚಿಂತನೆಯೆಂದರೂ ಸರಿ, ಧ್ಯಾನವೆಂದರೂ ಸರಿ. ಏಕಾಗ್ರ ಚಿತ್ತದ ಸಿಂಹಾವಲೋಕನ ಎಂದರೂ ಸರಿ. ದಿನಪೂರ್ತಿ ತೊಡಗಿಸಿಕೊಳ್ಳಬೇಕಾದ ಕೆಲಸಗಳು, ಅಪರಿಮಿತವಾದ ಪ್ರವಾಸಗಳು, ಕೈಗೆ ಬಂದು ಮನಸ್ಸನ್ನೂ ಆಕ್ರಮಿಸುವ ಮೊಬೈಲು ಫೋನು ಬಳಕೆ ಇತ್ಯಾದಿಗಳ ಬಳಕೆ ಪ್ರಮಾಣ ಜಾಸ್ತಿಯಾದಂತೆಲ್ಲ ಸಾಮಾಜಿಕ ಸಂವಹನಕ್ಕೆ ಜಾಸ್ತಿ ಮಹತ್ವ ಕೊಡುವ ನಾವು ನಮ್ಮ ಬಗ್ಗೆ ಯೋಚಿಸಲು ಮೀಸಲಿಟ್ಟ ಸಮಯ ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಸಿಕ್ಕ ಒಂದಷ್ಟು ನಿಮಿಷಗಳೂ ಮೊಬೈಲು ಚಾಟಿಂಗು, ಯಾವ್ಯಾವದೋ ಸಂಬಂಧಪಡದ ವಿಚಾರಗಳ ಚರ್ಚೆಗಳಲ್ಲಿ ಕಳೆದು ಹೋಗುತ್ತಿದೆ.
ಅಸಲಿಗೆ ನಮ್ಮ ಬಗ್ಗೆ, ನಮ್ಮ ಸಮಸ್ಯೆಗಳ ಬಗ್ಗೆ, ಹೋರಾಟಗಳ ತೀವ್ರತೆ ಬಗ್ಗೆ ನಮಗೆ ಗೊತ್ತಿರುವಷ್ಟು ಮಟ್ಟಿಗೆ ಇನ್ಯಾರಿಗೂ ತಿಳಿದಿರಲು ಸಾಧ್ಯವೇ ಇಲ್ಲ.ಹಾಗಾಗಿ ನಮ್ಮ ದಿನದ ಓಟಕ್ಕೆ ಭಂಗ ತರುವ ವಿಚಾರಗಳು ಯಾವುವು? ಹೇಗೆ ಎದುರಿಸಬೇಕು? ಎಂಬುದಕ್ಕೆ ಮಾರ್ಗೋಪಾಯಗಳೂ ನಮ್ಮೊಳಗೇ ಅವಿತಿರುತ್ತವೆ. ಶಾಂತವಾಗಿ ಯೋಚಿಸಲು ಪುರುಸೊತ್ತು ಬೇಕು ಅಷ್ಟೇ. ಶರೀರದಲ್ಲಿ ಶೀತ ಬಾಧೆ ಶುರುವಾದಾಗ ಅವನ್ನು ಎದುರಿಸಲು ಬೇಕಾದ ಪ್ರತಿರೋಧಕ ಶಕ್ತಿಯೂ ತನ್ನಷ್ಟಕ್ಕೇ ಸೃಷ್ಟಿಯಾಗಿ ಹೋರಾಡುವ ಹಾಗೆ...
ನನ್ನಿಂದ ಏನು ತಪ್ಪುಗಳು ನಡೆದಿವೆ, ಎಲ್ಲಿ ಎಡವಿದ್ದೇನೆ? ಎಲ್ಲಿ ಸುಧಾರಿಸಬಹುದಿತ್ತು ನಾನು? ನನ್ನ ಮಾತುಗಳು ಎಲ್ಲಿ ಹೆಚ್ಚು ಕಡಿಮೆಯಾಗಿವೆ? ಹೀಗೆ ದಿನದ ಕೊನೆಗೆ ನಿದ್ರೆಗೆ ಜಾರುವ ಮೊದಲಾದರೂ ಶಾಂತವಾಗಿ ಕುಳಿತು ಯೋಚಿಸಿದರೂ ಸಾಕು. ಒಂದಷ್ಟಕ್ಕಾದರೂ ಪರಿಹಾರ ಸಿಕ್ಕು ಬೇಡವಾದ ಫೈಲುಗಳು ಡಿಲೀಟ್ ಆಗಿ ಮನಸ್ಸಲ್ಲೊಂದು ಸಕಾರಾತ್ಮಕ ಜಾಗ ಸೃಷ್ಟಿಯಾಗುತ್ತದೆ. 
ಬದುಕಿನಲ್ಲಿ ತಪ್ಪುಗಳು ನಡೆಯುವುದು, ಕಷ್ಟಗಳು ಕಾಡುವುದು ಸಹಜ. ಎದುರಿಸಲು ಒಂದು ಮನಸ್ಸು ಸಿದ್ಧವಾಗಬೇಕು. ಸಿದ್ಧವಾಗಬೇಕಾದರೆ ಒಂದಷ್ಟು ಚಿಂತನೆ, ಮತ್ತು ಯೋಚಿಸಲು ಶಾಂತವಾದ ಮನಸ್ಸು ಬೇಕು. ಅದಕ್ಕೆ ವೇದಿಕೆ ನಾವೇ ಕಲ್ಪಿಸಬೇಕು. ಇಲ್ಲವಾದಲ್ಲಿ ೨೦-೩೦ ವರ್ಷ ಇಷ್ಟವಿಲ್ಲದ ಕೆಲಸ ಮಾಡಿದ ಬಳಿಕ, ‘ಅಯ್ಯೋ ನನ್ನ ಆಯುಷ್ಯವೆಲ್ಲಾ ಇದರಲ್ಲೇ ಕಳೆದು ಹೋಯಿತಲ್ಲ...’ ಎಂದು ಹಲುಬಿದ ಹಾಗಾದೀತು. ನಮ್ಮ ಬಗ್ಗೆ ನಮಗೇ ಯೋಚಿಸಲು ಸಮಯ ಸಿಗದೇ ಹೋದರೆ ಆ ಕೆಲಸವನ್ನು ಇನ್ಯಾರು ಮಾಡಬೇಕು ಹೇಳಿ?
-ಕೃಷ್ಣಮೋಹನ ತಲೆಂಗಳ.

No comments: