ತೆರವಾಗದ ತಿರುವುಗಳು...




ನಿಲ್ದಾಣವಿಲ್ಲದ ದಾರಿಯ ನಡುವೆ
ವಿಶ್ರಾಂತಿಗೆ ಸ್ಥಳವಿಲ್ಲ, ನಿಂತರೂ...
ಓಡುವುದು ತಪ್ಪುವುದಿಲ್ಲ.
ಮಾರ್ಗದ ಮಧ್ಯೆ ಕಾಣುವುದಕ್ಕೂ
ಕಂಡುಕೊಳ್ಳುವುದಕ್ಕೂ,
ಹೇಳಿದ್ದಕ್ಕೂ , ಅರಿತುಕೊಂಡದ್ದಕ್ಕೂ...
ಅಂದುಕೊಂಡದ್ದಕ್ಕೂ, ತಿಳಿದುಕೊಂಡದ್ದಕ್ಕೂ
ವ್ಯತ್ಯಾಸ ಹುಡುಕಲು ಪುರುಸೊತ್ತಿಲ್ಲದೆ,
ಚಿಂತಿಸುವಷ್ಟರೊಳಗೆ ಊರು ಬದಲಾಗಿತ್ತು...

ಕತ್ತಲು ಕವಿದ ಮೋಡ ಮುಸುಕಿದ
ಆಗಸದ ನಡುವೆ ತೂರಿ ಬಂದ ಮಿಂಚು
ಬೆಳ್ಳಿ ಬೆಳಕಿನ ಖುಷಿಯ ಕಸಿಯ ಬಂದ ಗುಡುಗು
ಅಲ್ಪ ಮಳೆಗೆ ನೆನೆದು ಕುಪ್ಪಳಿಸಲೂ ವಿರಾಮವಿಲ್ಲ
ನಾಳೆ ಬರುವ ಕಡುಬಿಸಿಲಿಗೂ
ಕ್ಷಣಿಕ ಮಳೆಯ ನೆರಳಿಗೂ ಅಂತರ ಕಟ್ಟಿಕೊಡದಿದ್ದರೆ
ದಾರಿ ಸಾಗುವುದಿಲ್ಲ...
ಮೈಮರೆತು ನಿಂತು ಹೊತ್ತು ಕಳೆದರೆ
ಮತ್ತೆ ವಿಳಂಬವಾಯ್ತೆಂದು ಅತ್ತು ಪ್ರಯೋಜನವಿಲ್ಲ


ಮತ್ತೆಲ್ಲೋ ಸಿಕ್ಕವರು ಹಬ್ಬವೆಂದು
ಸಿದ್ಧಪಡಿಸಿಟ್ಟ ಶುಭ ಮಾತು ಹೇಳುವವರು,
ಅಂತಹದ್ದೇ ದಿನದೊಳಗೆ ಪರ್ವಕಾಲವ ಆರೋಪಿಸಿ
ಮತ್ತೊಂದು ದಿನಾಂಕಕ್ಕೆ ತೋರಣವ ಕಟ್ಟಿ
ಬರಲೇಬೇಕಾದ ನಾಳೆಯ ಮರೆತು
ಸುಗಮದ ಮಾತನಾಡುವವರು...
ಚಿಂತೆಯಿರದ ದಿನವೇ ಹಬ್ಬ,
ಉಸಿರಾಡಲು ವಿರಾಮ ಸಿಕ್ಕುವುದೇ ಪರ್ವ
ದೀರ್ಘ ದಾರಿಲಿ ಸಿಗುವ ಅಲ್ಪವಿರಾಮಗಳು...

ಸಿಡಿಲ ಹಿಂದಿನ ಮಳೆಯ ಅಂದಾಜಿಸಲಾಗದು
ಸುರಿದ ಮಳೆ ನೀರಿಗೆ ಕೈಹಿಡಿದು ತಡೆದು ನಿಲ್ಲಿಸಲಾಗದು
ಇನ್ನೆಷ್ಟು ಹೊತ್ತು? ಎಷ್ಟು ತೀವ್ರ? ಎಂದು ಕೊನೆ?
ಎಂಬುದಕ್ಕೆ ಚೌಕಟ್ಟುಕಟ್ಟಿ ಹೇಳಲಾಗದು
ದಾರಿ ಪಕ್ಕದ ನಿಲ್ದಾಣವ ಕಂಡು ಸಂಭ್ರಮಿಸುವ ಮೊದಲು
ಗಾಡಿ ಮುಂದ್ಹೋಗಿಯಾಯ್ತು, ದೃಷ್ಟಿ ದೂರ ಹೋಯ್ತು
ಎಲೆ ಮೇಲೆ ಬಿದ್ದ ನೀರ ಬಂದು ಹೊಳೆದು
ಚೆಂದ ಕಂಡರೂ, ನಿಲ್ಲಲಾಗದೆ ಜಾರಿ ಬೀಳಲೇ ಬೇಕು
ಕೆಸುವಿನೆಲೆಯ ನಿಯಮದ ಹಾಗೆ...


ಪಯಣಕ್ಕೊಂದು ಖುಷಿಯ ಬುತ್ತಿ ಕಟ್ಟಿ ಕೊಟ್ಟು
ಟಾಟಾ ಹೇಳುವವರು, ವಿರಾಮಕ್ಕೆ ಕೊಕ್ಕೆಯಿಟ್ಟು
ವೇಗ ತಗ್ಗಿಸುವವರು, ಅಕ್ಕಪಕ್ಕ ಸಿಕ್ಕವರೆಲ್ಲಾ
ಮತ್ತಷ್ಟು ಹತ್ತಿರ ಕಾಣುವ ಹೊತ್ತಿಗೆ...
ದಾರಿ ಸಾಗಿಯಾಯ್ತು ಅಷ್ಟು ದೂರ
ಸಿಕ್ಕರೂ ನಗಲಾಗದೆ, ಪಕ್ಕಕ್ಕೆ ನಿಲ್ಲಿಸಲಾಗದೆ
ವೇಗ ತಗ್ಗಿಸದೇ ಸಾಗುವುದು ನಿರ್ಲಿಪ್ತ ರೈಲಿನ ಹಾಗೆ,
ನಿಗದಿತ ದಾರಿಗೆ ನಕಾಶೆ ಪೂರ್ವನಿಗದಿತ
ಬದಲಿಸಲಾಗದ ಸಂಚಾರದಲ್ಲಿ ತೆರವಾಗದ ತಿರುವುಗಳ ಹಾಗೆ!
-KM

No comments: