ದೂರದಲ್ಲಿ ಯಾರೋ...!

ಭಾರಿ ಸಮಾವೇಶ. ದೊಡ್ಡ ನಾಯಕರೊಬ್ಬರಿಗೆ ಅಭಿಮಾನಿಗಳು ಘಮಘಮಿಸುವ ಬೃಹತ್ ಮಲ್ಲಿಗೆಯ ಹಾರ ಹಾಕಿದ್ದಾರೆ. ನಾಲ್ಕೈದು ಮಂದಿ ದೇಹ ತೂರಿಸುವಷ್ಟು ದೊಡ್ಡದು. ಚಕ ಚಕನೆ ಕ್ಯಾ ಫ್ಲ್ಯಾಶ್ ಕ್ಲಿಕ್ಕಿಸಿದ ತಕ್ಷಣ ಮಾಲೆಯನ್ನು ಮುದ್ದೆ ಮಾಡಿ  ಹಿಂದೆ ನಿಂತಿರುವ ಅಂಗರಕ್ಷಕನ ಕೈಗೆ ನೀಡಲಾಗುತ್ತದೆ. ನಂತರ...
ಆ ಮಾಲೆ ಎಲ್ಲಿಗೆ ಹೋಯಿತು? ಹೂವನ್ನು ಜೋಪಾನವಾಗಿ ಎತ್ತಿಟ್ಟಿರುತಾರಾ? ಉತ್ತರ ಸಿಗುವುದಿಲ್ಲ.
ಜನಪ್ರಿಯ ವ್ಯಕ್ತಿಯೊಬ್ಬರು, ಗಣ್ಯರು ಕೊನೆಯಸಿರೆಳೆದಾಕ್ಷಣವೂ ಅಷ್ಟೆ ವಿಧ ವಿಧದ ಗಾರ್ಲೆಂಡ್‌ಗಳು, ಗಂಧದ ಹಾರಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಪಾರ್ಥಿವ ಶರೀರಕ್ಕೆ ಗೌರವಪೂರ್ವಕವಾಗಿ ಸಮರ್ಪಣೆಯಾಗುತ್ತವೆ. ಒಂದೆರಡು ಸೆಕುಂಡು ಅಷ್ಟೆ, ಮತ್ತೆ ಅದು ಪಕ್ಕಕ್ಕೆೆ ಸರಿಯಲ್ಪಡುತ್ತದೆ. ಇನ್ನೆಲ್ಲಿಯೋ ರಾಶಿಯ ನಡುವೆ ಹತ್ತರ ಜೊತೆಗೆ ಹನ್ನೊಂದಾಗಿ ನಲುಗುತ್ತದೆ.
ಹೂವಿನ ಬೆಲೆಯೇ ಗೊತ್ತಿಿಲ್ಲದ ಗಣ್ಯ ಅತಿಥಿಗೆ ನೀಡಿದ ಚೆಂದದ ಕೆಂಗುಲಾಬಿಯನ್ನು ಅವರು ಅಷ್ಟೇ ನಿರ್ಲಕ್ಷ್ಯದಿಂದ ವೇದಿಕೆಯ ಟಿಪಾಯ್ ಮೇಲೆ ಎಸೆದಿರುತ್ತಾಾರೆ. ಕೊನೆಗೆ ವೇದಿಕೆ ತೆರವು ಮಾಡುವ ವೇಳೆಗೆ ಅದು ಯಾರ ಕಣ್ಣಿಿಗೂ ಬೀಳದೆ ಕೆಳಗುದುರಿ ಅವರಿವರ ಕಾಲಡಿಗೆ ಸಿಲುಕಿ ನಲುಗುತ್ತಿಿರುವಾಗ ಯಾಕೆ ಅದನ್ನು ಗೌರವಪೂರ್ವಕವಾಗಿ ನೀಡಲಾಯಿತು? ಎಂಬ ಪ್ರಶ್ನೆಗೆ ಉತ್ತರವೇ ಸಿಗುವುದಿಲ್ಲ.
ಲಕ್ಷಗಟ್ಟಲೆ ಜನರು ಸೇರುವ ಭಾರಿ ಸಮಾವೇಶ. ಲಕ್ಷಗಟ್ಟಲೆ ಕುರ್ಚಿಗಳು, ಭಾರಿ ಪೆಂಡಾಲ್, ತಿನ್ನಲು, ಉಣ್ಣಲು ವ್ಯವಸ್ಥೆೆ. ಒಂದೆರಡು ಗಂಟೆ ಕಾಲ ದೊಡ್ಡ ದೊಡ್ಡ ಗಣ್ಯರು ಬಂದು ಭಾಷಣ ಮಾಡಿ, ಕೈಕುಲುಕಿ, ಜನ ಚಪ್ಪಾಾಳೆ ತಟ್ಟಿ ಆಹಾರದ ಪೊಟ್ಟಣ ತಿಂದು ಹೋಗುತ್ತಾಾರೆ. ಸಮಾವೇಶ ಆಯೋಜಿಸಿದ ಸ್ಥಳೀಯ ನಾಯಕನಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತದೆ. 
ಆದರೆ...
ಆ ಮೈದಾನದಲ್ಲಿ ಅಂಥದ್ದೊಂದು ಸಮಾರಂಭ ನಡೆಸಲು ಎಷ್ಟು ದಿನಗಳಿಂದ ಎಷ್ಟು ಕಾರ್ಮಿಕರು ದುಡಿದಿದ್ದಾರೆ? ಅವರಿಗೆಲ್ಲ ಎಷ್ಟು ಸಂಬಳ ನೀಡಲಾಗಿದೆ? ಅಷ್ಟೂ ಕಾರ್ಯಕ್ರಮಕ್ಕೆ ಜನ ಸೇರಿಸಲು ಎಷ್ಟು ಮಂದಿ ತಳಮಟ್ಟದ ಕಾರ್ಯಕರ್ತರು ಕಷ್ಟ ಪಟ್ಟಿದ್ದಾರೆ, ವೇದಿಕೆಯನ್ನು ಎಷ್ಟೋ ಕಕ್ಕುಲತೆಯಿಂದ ಅಲಂಕರಿಸಿದ ಜೀವ ಯಾವುದು? ಈ ಯಾವ ವಿಚಾರವೂ ಬೆಳಕಿಗೆ ಬರುವುದಿಲ್ಲ!
ವ್ಯವಸ್ಥೆಯೇ ಹೀಗೆ ಅಲ್ವ...?: ಶಿಷ್ಟಾಾಚಾರ, ಹಣದ ಪ್ರಭಾವದ ಮುಂದೆ ಬಾಕಿ ಸಣ್ಣ ಪುಟ್ಟ ವಿಚಾರಗಳು ಗಮನ ಸೆಳೆಯುವುದೇ ಇಲ್ಲ. ದೊಡ್ಡ ಅಬ್ಬರದ ನಡುವೆ ನಲುಗುವ ಪುಟ್ಟ ಪುಟ್ಟ ಅಂಶಗಳನ್ನು ಗಮನಿಸುವ ಸೂಕ್ಷ್ಮತೆಯನ್ನು ಎಷ್ಟೋ ಬಾರಿ ನಾವು ಕಳೆದುಕೊಂಡಿರುತ್ತೇವೆ.
 ಸ್ವಲ್ಪ ಚಿಂತಿಸಿ... ಅಷ್ಟು ದೊಡ್ಡ ಮಲ್ಲಿಗೆಯ ಹಾರಕ್ಕೆ ಎಷ್ಟೊಂದು ಸಾವಿರಗಟ್ಟಲೆ ಮಲ್ಲಿಗೆ ಬಳಸಿರಬಹುದು? ಎಷ್ಟು ಮಂದಿ ಎಷ್ಟು ಹೊತ್ತು ಕಷ್ಟಪಟ್ಟು ಅದನ್ನು ಪೋಣಿಸಿ ಅಷ್ಟು ದೊಡ್ಡ ಹಾರ ಮಾಡಿರಬಹುದು?. ಆದರೆ ಒಂದು ನಿಮಿಷವೋ ಅಥವಾ ಅದಕ್ಕೂ ಕಡಿಮೆ ಅವಧಿಯಲ್ಲಿ ಯಾರದ್ದೋ ಕುತ್ತಿಗೆ ಸೇರಿ ಮತ್ತೆ ಪಕ್ಕಕ್ಕೆ ಎಸೆಯಲ್ಪಟ್ಟಿರುತ್ತದೆ. ವಾಸ್ತವದಲ್ಲಿ ಹಾರ ಪೋಣಿಸಿದವನಿಗೆ ಅದರ ಆರ್ಥಿಕ ಮೌಲ್ಯ ಸಿಕ್ಕಿರಬಹುದು. ಆದರೆ, ಯಾರದ್ದೋ ಅಭಿಮಾನದ ಪ್ರತೀಕವಾಗಿ ಕೊಡಲ್ಪಟ್ಟ ಹಾರ ಅರೆಕ್ಷಣದಲ್ಲಿ ಕಸವಾಗಿ ಯಾರಿಗೂ ಸಿಕ್ಕದೆ ವ್ಯರ್ಥವಾಗಿ ಹೋಗುವಾಗ ಹೂವಿನ ಕೋಮಲತೆ ಬಾಡುವ ಮೊದಲೇ ಹಳತಾಗುವ ವಾಸ್ತವ ವ್ಯವಸ್ಥೆಯಲ್ಲೊಂದು ವಿಪರ್ಯಾಸ ಅಷ್ಟೆ. 
ಅರೆಕ್ಷಣದ ಆಯುಷ್ಯ ಅವಕ್ಕೆ. ದುಡ್ಡು ಕೊಟ್ಟು ಖರೀದಿಸುವ ಸಾಮರ್ಥ್ಯ ಇರುವುದರಿಂದ, ಅಂಥ ದುಬಾರಿ ಹಾರಗಳನ್ನು ನೀಡುವ ಅರ್ಹತೆ ಹೊಂದಿರುವ ಧೀಮಂತರಿಗೆ ಅದು ಸಾಧ್ಯವಾಗಿರುವುದರಿಂದ ಮತ್ತು ಶಿಷ್ಟಾಾಚಾರ ಪ್ರಕಾರ ಅಂತಹುವುಗಳನ್ನು ಅರೆಕ್ಷಣದ ಮಟ್ಟಿಗಾದರೂ ಸಮರ್ಪಿಸಿದರೆ ಮಾತ್ರ ಗೌರವ ಎಂದು ನಾವು ಬಲವಾಗಿ ಅಂದುಕೊಂಡಿರುವುದರಿಂದಲೂ ನಮಗೆ ಹೂವಿನ ಕೋಮಲತೆಗಿಂತಲೂ ಹೂವನ್ನು ಖರೀದಿಸಿ ಕೊಟ್ಟವನೇ ದೊಡ್ಡವನಾಗಿ ಬಿಡುತ್ತಾಾನೆ.
ಇಷ್ಟು ಮಾತ್ರವಲ್ಲ...: ದೊಡ್ಡ ರೈಲಿನಲ್ಲಿ ಪ್ರಯಾಣಿಸುವಾಗ ನಾವೆಂದೂ ತಲೆ ಕೆಡಿಸುವುದಿಲ್ಲ. ಇಷ್ಟು ದೊಡ್ಡ ಗಾಡಿಯನ್ನು ತೊಳೆದು ಸ್ವಚ್ಛಗೊಳಿಸುವವರು ಯಾರು, ಎಷ್ಟು ಹೊತ್ತು ಬೇಕಾಗಬಹುದು? ದೊಡ್ಡ ಪುರವಣಿ ಸಹಿತ ದಪ್ಪನೆಯ ಪತ್ರಿಕೆಯ ಗುಚ್ಛ ಮನೆ ಬಾಗಿಲಿಗ ಬಂದು ಬಿದ್ದು ಬಿಸಿ ಬಿಸಿ ಕಾಫಿ ಹೀರುತ್ತಾಾ ಓದುವಾಗ ಜಾಸ್ತಿ ಯೋಚಿಸುವುದಿಲ್ಲ. ಇಷ್ಟು ಪುಟಗಳು ತುಂಬಲು ಎಷ್ಟು ಮಂದಿ ನಿದ್ರೆ, ರಜೆ ಬಿಟ್ಟು ಕೆಲಸ ಮಾಡಿರುತ್ತಾಾರೆ? ತಡರಾತ್ರಿ ಎಷ್ಟು ಹೊತ್ತಿನ ತನಕ ಎಚ್ಚರದಿಂದಲೇ ಇದ್ದು ಮನೆಗೆ ಪತ್ರಿಿಕೆ ತಲುಪಿಸುತ್ತಾಾರೆ ಅಂತ, ಯಾರದ್ದೋ ಮದುವೆಗೋ, ಮನೆಯ ಪೂಜೆಗೋ ಊಟದ ಹೊತ್ತಿಗೆ ಹೋಗಿ ಕೈಕುಲುಕಿ, ಉಂಡು ಕೈತೊಳೆದ ತಕ್ಷಣ ಬಾಯ್ ಹೇಳಿ ಬರುವಾಗ ತುಂಬ ಏನೂ ಯೋಚಿಸುವುದಿಲ್ಲ, ಈ ಕಾರ್ಯಕ್ರಮಕ್ಕೋೋಸ್ಕರ ಪಾಪ ಆತಿಥೇಯರು ಎಷ್ಟು ದಿನಗಳಿಂದ ಓಡಾಡಿರಬಹುದು, ಏನೆಲ್ಲಾ ತಲೆ ಬಿಸಿಗಳನ್ನು ಎದುರಿಸಬಹುದು ಅಂತ, ೩೦-೪೦ವರ್ಷ ದುಡಿದು ನಿವೃತ್ತನಾಗುವ ಶಿಕ್ಷಕರೋ ಅಥವಾ ಇನ್ಯಾಾವುದೋ ಸಂಸ್ಥೆಯ ಸಿಬ್ಬಂದಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಷ್ಟಾಾಚಾರಕ್ಕೆಂಬಂತೆ ಹಾಡಿ ಹೊಗಳಲಾಗುತ್ತದೆ, ದಾನಶೂರ ಕರ್ಣನೆಬಂತೆ ವರ್ಣಿಸಲಾಗುತ್ತದೆ, ಮರುದಿವನ ಮಾಧ್ಯಮಗಳಲ್ಲೂ ಅವರ ಬೀಳ್ಕೊೊಡುಗೆಯ ಚಿತ್ರಸಹಿತ ವರದಿ ಬರುತ್ತದೆ. ಆದರೆ ಅಷ್ಟು ವರ್ಷಗಳಲ್ಲಿ ಅವರು ಕೆಲಸ ಉಳಿಸಲು ಹೋರಾಡಿದ್ದರ ವಿವರ, ಎದುರಿಸಿದ ಅವಮಾನಗಳ ಚಿತ್ರಣ, ಕಣ್ಣೀರಿನ ಕಥೆ ಎಲ್ಲಿಯೂ ವಿವರವಾಗಿ ದೊರಕುವುದಿಲ್ಲ.
ಯಶಸ್ಸಿನ ಹಿಂದಿನ ಶ್ರಮ, ನಿರಾಶೆಗಳು, ಅವಮಾನಗಳು, ಜಿಗುಪ್ಸೆಗಳು ಪ್ರಕಟವಾಗಿ ಕಾಣುವುದು ಅಪರೂಪ. ಹೇಳಿಕೊಂಡರೆ, ಭೂತಕನ್ನಡಿ ಹುಡುಕಿ ನೋಡುವ ತಾಳ್ಮೆಯಿದ್ದರೆ ಗೋಚರ. ಮಾತ್ರವಲ್ಲ. ಶಿಷ್ಟಾಾಚಾರ, ಅಧಿಕಾರ, ಸಿರಿವಂತಿಕೆ ಮತ್ತು ಪ್ರಕೃತಿ ಸಹಜ ಕೋಮಲತೆ, ಕಾಸಿನಲ್ಲಿ ಅಳೆಯಲಾಗದ ಮೌಲ್ಯಗಳು, ಹೋರಾಟಗಳು ವಿರುದ್ಧ ಧ್ರುವಗಳಲ್ಲಿ ಗೋಚರಿಸುತ್ತವೆ. ಜನಪ್ರಿಿಯವಾಗಿರುವುದು ದೃಷ್ಟಿಗೋಚರಕ್ಕೆ ಸುಲಭವಾಗಿ ಸಿಕ್ಕರೆ, ನೇಪಥ್ಯದಲ್ಲಿ ಅವುಗಳ ಚಲನೆಯನ್ನು ಕಾಣುವಲ್ಲಿ ನಾವು ಹಿಂದುಳಿಯುತ್ತೇವೆ ಅಲ್ವ...?
-ಕೃಷ್ಣಮೋಹನ ತಲೆಂಗಳ.

No comments: