ತಾಳೆಯಾಗದ ಲೆಕ್ಕಾಚಾರ...

ತಾಳೆಯಾಗದ ಲೆಕ್ಕಾಚಾರ
........

ಕಪಾಟಿನ ಲಾಕರಿನೊಳಗೆ
ಬಚ್ಚಿಡಬಹುದೆ ಭಾವಗಳ?
ಅಗತ್ಯಕ್ಕೆ ತಕ್ಕಂತೆ ತೆಗೆದು,
ಅನುಭವಿಸಿ, ಮತ್ತೆ ಒಳದೂಡಿ....
ಖುಷಿಗೊಂದು, ಬೇಸರಕ್ಕೊಂದು ಗೂಡು ಕಟ್ಟಿ
ಗೋಡೆಯೊಳಗೆ ಮೂಟೆಕಟ್ಟಿ ಮನಸ್ಥಿತಿಗಳಿಗೆ
ಪ್ರತ್ಯೇಕ ಖಾತೆ ತೆರೆಯಬಹುದೇ?
......

ಕಾಣಿಸಿಕೊಂಡದ್ದಕ್ಕೂ
ಕಂಡುಕೊಂಡದ್ದಕ್ಕೂ
ಕೂಡಿಸಿ ಕಳೆದ ಮೊತ್ತಕ್ಕೆ
ಹೇಳದೇ ಬರುವ ಕ್ಷಣಗಳ ಗುಣಿಸಿ, ಕಳೆದ ದಿನಗಳ ಭಾಗಿಸಿ..
ಲೆಕ್ಕಕ್ಕೇ ಸಿಗದ ಅಂಕಿಗೆ
ನಿರ್ಲಿಪ್ತದ ಸೂತ್ರವ ಅನ್ವಯಿಸಿ
ತಾಳೆಯಗದೆ ಓಡುವ
ದಿನಗಳ ಹಿಡಿದಿಡಲು
ವ್ಯರ್ಥ ಪ್ರಯತ್ನದ 'ಭಿನ್ನ'ರಾಶಿ
.......
ಊರು ತಿರುಗದೆ ಬರೆದ ಕಥನ,
ಕಥೆಯೋದದೆ ಟಂಕಿಸಿದ ವಿಮರ್ಶೆ..
ಕವನ ಗೀಚದೆ ಹುಡುಕಿದ ತಪ್ಪು
ಊಹಿಸಲೂ, ಭಾವಿಸಲೂ
ಅನುಭವದ ಮೂಸೆಯಲಿ ಬೇಯದೆ, ಪಕ್ವತೆಯ ಸಾಧಿಸದೆ
ಲೆಕ್ಕವ ಹೊಂದಿಸಲು
ಹೆಣಗಾಡಿ, ಮೇಲೆರಲಾದೆ
ಬರಿದೆ ಕೋಪದ ತಳೆವ
ಬಾವಿಯೊಳಗಿನ ಕಪ್ಪೆಯ ಹಾಗೆ!

-KM

No comments: