ಕಟ್ಟಿ ಹಾಕಲು ಸಿಗದ ಹೊತ್ತು....




ಕೈಗೆಟಕುವ ಅಂತರ,
ಚಾಚಿದರೂ ಸಿಕ್ಕದ
ಹಂಬಲಿಸಿದರೂ ದಕ್ಕದ,
ಅಕ್ಕಪಕ್ಕದ ಕಣ್ಣುಕುಕ್ಕುವ
ಅವಕಾಶಗಳಂಬೋ ಸನ್ನಿವೇಶಗಳ
ಮೀರಿ, ಕಂಡರೂ ಕಾಣದಂತೆ,
ಎಟಕಿದರೂ ತಗುಲದಂತಹ
ಸ್ಥಿತಿ ವಿಪರ್ಯಾಸ...


ಕಾಡಿದಷ್ಟೂ ದೂರ ಹೋಗುವ
ನೋಡಿದರೂ ದಾರಿ ಕಾಣದ
ಬಳಿ ಬಂದು ಸುಳಿದಾಡಿ
ಪಾದಕ್ಕೆ ಮುತ್ತಿಕ್ಕಿ,
ತಂಪೆರಚಿ, ಬಾಚಿ ತಬ್ಬಿ
ಕಚಗುಳಿ ಇರಿಸಿ, ಆವರಿಸಿ
ಕೊನೆಗೆ ಕಾಲಡಿಯ ಮರಳು 
ಸಹಿತ ಹೋಗುವ ತೆರೆಗಳ ಹಾಗೆ...

ದಿಗಂತದ ವರೆಗಿನ ನೀರು
ವಿಶಾಲ ಕ್ಷಿತಿಜ, ಸಂಜೆಯ ಹೊಂಬಣ್ಣ
ಭೋರ್ಗರೆದರೂ ಸುನಾದದ ಅಲೆ ರಾಶಿ
ಬೀಸಿ ಬರುವ ಗಂಧದ ತಂಗಾಳಿ
ಜಂಗುಳಿಯ ನಡುವೆಯೂ ಏಕಾಂತದ ಅನುಭೂತಿ
ಆ ಹೊತ್ತಿಗೆ ಸಾಕ್ಷಿಗೆ ಮಾತ್ರ,
ಹೊತ್ತುಕೊಂಡು ಹೋಗಲಿಕ್ಕಲ್ಲ...
ಅಲ್ಲಿಯೇ ಟೆಂಟು ಕಟ್ಟಲೂ ಸಾಧ್ಯವಿಲ್ಲ....

ಕ್ಷಣಮಾತ್ರದ ಅನುಭೂತಿ
ಘಳಿಗೆಗೆ ಕಂಡ ಖುಶಿಯ ಬುತ್ತಿ
ಯೋಚನೆಯ ವೇಗವನ್ನೂ ಮೀರಿ ಬಂದು
ಸುತ್ತು ಹಾಕಿ ಹೋಗುವ ಯೋಗಾಯೋಗ...
ಆಗೀಗ ಸುತ್ತು ಹಾಕಿ ಹೋಗುವ ಪಕ್ಷಿಯ ಹಾಗೆ
ಆ ವೇಳೆಗೆ, ಆ ಜಾಗಕ್ಕೆ, ಆ ವರೆಗೆ...
ಹಕ್ಕುಪತ್ರ ಪಡೆದು, ಧ್ವಜ ಊರಿ
ನಿರಖು ಠೇವಣಿ ಇರಿಸಲಾಗುವುದಿಲ್ಲ...

ತೆರೆ ಬರುವಗ ಆತಂಕ
ಮುತ್ತಿಕ್ಕಿದಾಗ ಪುಳಕ
ಮರಳುವಾಗ ಬೇಜಾರು
ಉಳಿದ ನೊರೆ ಆರಿ ಹೋಗಿ, 
ಮರಳು ಕಾದು ಬಿಸಿಯಾಗಿ ಗಟ್ಟಿ ಪಾದದ
ಅಚ್ಚಿಗೆ ಚಾದರವಾಗಿ,
ಮತ್ತೊಂದು ತೆರೆ ಬರುವಾಗ 
ಹೊಸ ದಾರಿ, ಹೊಸ ವೇಗ, ನೆನಪು ಮಾತ್ರ ಹಳತು!

-KM

No comments: