ಕಾಣದ ಕಡಲಿಗೇ





ಮತ್ತೊಮ್ಮೆ ಅವಕಾಶ ಸಿಕ್ಕರೆ
ಪುನಹ ಅಪರಿಚಿತರಾಗಿ
ಶುರುವಿಂದ ಮಾತನಾಡಿ,
ಓರೆಗೂ ಕೋರೆಗೂ ಸಮಚಿತ್ತದ
ಧ್ವನಿಯಾಗಿ...
ನಿರೀಕ್ಷೆಗೂ, ನಿರಾಸೆಗೂ
ಗಟ್ಟಿಯದೊಂದು ಹಗ್ಗ ಬಿಗಿದು
ಸಿಕ್ಕಷ್ಟು ಹೊತ್ತು
ದಕ್ಕಿದ ಖುಷಿಯ ಮೊಗೆದು
ತೆಗೆದು ಬಾಂಧವ್ಯದ
ಸ್ವಾದ ಬಗೆಯುವಂತಾದರೆ...


ಮತ್ತೆ ಚಿಕ್ಕವನಾಗಿ
ತಿಳಿದದ್ದನ್ನೆಲ್ಲವ ಮರೆತು
ಕಳೆದು ಹೋದಲ್ಲಿಗೇ ಸೇರಿ
ಪುಟ್ಟ ಪುಟ್ಟ ಅಚ್ಚರಿಗೂ
ಬೆಕ್ಕಸ ಬೆರಗಾಗಿ
ಗೊತ್ತಾಗುವ ವರೆಗೂ
ಪರಮ ಮುಗ್ಧನಾಗಿ
ಎಂದಿಗೂ ದೊಡ್ಡವನಾಗದೇ
ಕಾಣದ ಕಡಲಿಗೂ
ಹಂಬಲಿಸದೆ
ಕಂಡದನ್ನಷ್ಟೇ ನಂಬುವ ಪ್ರಾಯವೊಂದು ಸಿಕ್ಕರೆ...



ಕಾಡಿದ್ದು, ಬೇಡಿದ್ದು
ಕಾದಿದ್ದು, ಕಳೆದದ್ದು
ದಾಟಿದ್ದು, ದೂರಿದ್ದು,
ಹತ್ತಿವಿದ್ದೂ ಕಾಣದ್ದು,
ಸಿಕ್ಕಿದ್ದನ್ನೂ ದೂಡಿದ್ದು
ಕಾಣದ್ದಕ್ಕೆ ಹುಡುಕಿದ್ದು
ಎಲ್ಲದನ್ನೂ ಮೂಟೆಕಟ್ಟಿ
ಅನ್ ಡೂ ಮಾಡಿ
ಮತ್ತೊಮ್ಮೆ ಹೊಸದಾಗಿ
ಹಠ ಕಟ್ಟುವಂತಿದ್ದರೆ...


ಕೂಡಿದ್ದಕ್ಕಿಂತ ಹೆಚ್ಚು ಕಳೆದದ್ದು
ದಕ್ಕದನ್ನು ಭಾಗಿಸಿದ್ದು
ಗುಣಿಸಿದ ಮೊತ್ತ ಕಳೆದುಕೊಂಡದ್ದು...
ಇದ್ದಲ್ಲೇ ಇದ್ದು
ಕಾಣದ್ದನ್ನು ನೋಡುವ
ಹಂಬಲ ಕಳೆದುಕೊಂಡದ್ದು...
ನೋಡುವುದಕ್ಕೂ
ಕಾಡಬೇಕೆನಿಸುವುದಕ್ಕೂ
ಮೊದಲು
ಹಂಬಲಕ್ಕೊಂದು ಅಂಕುಶ
ಹಾಕಿ, ಕಂಡದ್ದರೊಳಗೆ
ಈಜುವ ಭಂಡತನವಿದ್ದಿದ್ದರೆ...!

-KM

No comments: