ಬಯಲಾಟವೆಂಬೋ ಅನುಭೂತಿ...

ಆಟ ರೈಸಿದರೆ ಭರ್ಜರಿ ಹೊಗಳಿಕೆ, ಪೇಲವ ಎನಿಸಿದರೆ ಗೊಣಗಾಟ, ಎಡಿಟ್ ಮಾಡಿ ಬೇಗ ಮುಗಿಸಿದರೆ ಬೈಗುಳ...ರಾತ್ರಿಯಿಡೀ ಆಟ ಮುಗಿಸಿ ಮುಂಜಾನೆ ಮನೆಗೆ ಮರಳುವಾಗ ತುಸು ಮಂಪರು, ಮುಂಜಾನೆಯ ಸೂರ್ಯೋದಯದ ಪ್ರಶಾಂತ ಸ್ಥಿತಿಯಲ್ಲಿ ಇಡೀ ರಾತ್ರಿಯ ಆಟವೊಂದು ಸುಂದರ ಸ್ವಪ್ನದ ಹಾಗೆ... ಚಿತ್ತಬಿತ್ತಿಯಲ್ಲಿ ಅಚ್ಚಾಗುವ ಕನಸು. ಒಟ್ಟಿನಲ್ಲಿ ಪ್ರೇಕ್ಷಕನನ್ನು ನಿಜಾರ್ಥದಲ್ಲಿ ಬಡಿದೆಬ್ಬಿಸುವ ಕಲೆಯೆಂಬ ಯಕ್ಷಗಾನ ವೀಕ್ಷಣೆ ಒಂದು ಅನುಭೂತಿ...
.....

ದೂರದಲ್ಲಿ ರಂಗಸ್ಥಳ ಕಂಡರೆ ಸಿನಿಮಾ ಪರದೆಯ ಹಾಗೆ, ಔಟ್ ಲೈನ್ ಮಾತ್ರ ಕಾಣುವುದು ಸಂಭಾಷಣೆ ಮಾತ್ರ ಕೇಳುವುದು, ರಂಗಸ್ಥಳಕ್ಕೆ ಹತ್ತಿರ ಕುಳಿದರೆ ವೇಷಧಾರಿಗಳಿಗೆ ಎದುರಾಗಿ ನಾವೇ ಕಾಣಿಸುವುದು, ಧೀಗಿಣದ ವೇಳೆ ರಾಚುವ ಬೆವರು ಮುಖಕ್ಕೂ ಸಿಂಚನವಾದೀತು. ತುಸು ನಿದ್ರೆಗೆ ಜಾರಿದರೂ ಅದು ಮುಜುಗರದ ಸನ್ನಿವೇಶ, ಅರ್ಧದಲ್ಲಿ ಎದ್ದು ಬರುವ ಹಾಗೂ ಇಲ್ಲ... ಆಗಾಗ ಚೌಕಿಗೆ ಹೋಗಿ ನೋಡಿದರೆ ಮತ್ತೊಂದಷ್ಟು ಹೊಸ ವೇಷಗಳು ಮೌನವಾಗಿ ಬಣ್ಣ ಹಚ್ಚುವುದು ಕಾಣುವುದು. ಈ ಕಲಾವಿದರೇನು ಪರಸ್ಪರ ಮಾತನಾಡಿಕೊಳ್ಳುವುದೇ ಇಲ್ಲವೇನೋ ಎಂಬಂಥ ಮೌನ ಚೌಕಿಯಲ್ಲಿ...ಆಟದಲ್ಲೂ ಕೂತು ವಾಟ್ಸಪ್ ಚಾಟಿಂಗ್ ಮುಂದುವರಿಸುವ ಚತುರಮತಿಗಳು, ಅಲ್ಲಿಂದಲೇ ಫೋಟೋ, ವಿಡಿಯೋ ಅಪ್ಲೋಡ್ ಮಾಡುವ ಉದಾರಿಗಳು, ಆಟದ ಓಘ ಇಳಿಯುತ್ತಿದೆ ಅಂದುಕೊಂಡ ಹೊತ್ತಿಗೆ ದೂರ ಹೋಗಿ ತುಸು ನಿದ್ರೆ ಮಾಡಿ ಸಮಯದ ಸದುಪಯೋಗ ಪಡಿಸಿಕೊಳ್ಳುವವರು, ಮರುದಿನ ಡ್ಯೂಟಿ ಇದೆ, ಇಡೀ ರಾತ್ರಿ ನಿದ್ರೆ ಕೆಟ್ಟರೆ ಕಥೆ ಕೈಲಾಸವೆಂದು ಆತಂಕಗೊಂಡು ಬೆಳಗ್ಗಿನ ಜಾವಕ್ಕೂ ಮೊದಲೇ ಆಟ ವಾರ್ಮಪ್ ಆಗುವ ಹೊತ್ತಿನಲ್ಲೇ ಮನಸ್ಸಿಲ್ಲದ ಮನಸ್ಸಿನಿಂದ ಕಂಬಿ ಕೀಳುವವರು...
ಎಷ್ಟೊಂದು ಚಿತ್ರಗಳು ಬಯಲಾಟದ ಎದುರಿನ ಸಭಾಮಂಟಪದಲ್ಲಿ...


.....

ಎಂಥಹದ್ದೇ ದಯನೀಯ ಸ್ಥಿತಿಯಲ್ಲಿರುವ ಮೈದಾನವೂ ಆಟದ ದಿನದ ಮಟ್ಟಿಗೆ ವಿದ್ಯುದ್ದೀಪಾಲಂಕಾರಗೊಂಡು ಕುರ್ಚಿಗಳ ಸಾಲು ಸಾಲುಗಳ ಮೇಳದಿಂದ ಕಂಗೊಳಿಸುತ್ತಿದೆ. ಚೌಕಿ ಎಬ್ಬಿಸಿ, ಕಂಬ ಹುಗಿದು ರಂಗಸ್ಥಳ ಕಟ್ಟಿದ ಬಳಿಕ ಒಂದು ರಾತ್ರಿಯ ಮಟ್ಟಿಗೆ ಅಲ್ಲಿಯೇ ಕದಂಬ ವನ, ಶೋಣಿತಾಪುರ, ಅಮರಾವತಿ ಎಲ್ಲ ಸೃಷ್ಟಿಯಾಗುತ್ತದೆ. ಆಟದಲ್ಲಿ ತಲ್ಲೀನನಾಗುವ ಪ್ರೇಕ್ಷಕನಿಗೆ ತಾನು ದಿನಾ ನೋಡುವ ಮೈದಾನದ ಮಧ್ಯದಲ್ಲೇ ನಡುರಾತ್ರಿ ಕುಳಿತು ಕಾಳಗಗಳಿಗೆ ಸಾಕ್ಷಿಯಾಗುವುದು ಕೆಲ ಕಾಲ ಮರೆತೆಹೋಗಿರುತ್ತದೆ.


ಚಹಾ ಚಟ್ಟಂಬಡೆ ಇಲ್ಲದೆ ರಾತ್ರಿ ಕಳೆದುಯುವುದೇ ಕಷ್ಟವೆಂದು ಕೊಂಡವರು ಮತ್ತೊಂದು ಚಟ್ಟಂಬಡೆ ಪಡೆಯಲು, ಇನ್ನೊಂದು ಗ್ಲಾಸ್ ಚಹಾ ಸುರಿಯಲು ಗೋಗರೆಯುವವರು, ಆಚೆ ಹೋಗಿ ಗ್ಲಾಸಿನ ತುಂಬಾ ಚರ್ಮುರಿ ತಂದು ತಿಂದು, ಗ್ಲಾಸನ್ನು ಅಲ್ಲೇ ಕುರ್ಚಿಯಡಿಗೆ ಎಸೆಯುವವರು, ಮಹಾನ್ ಸಾಧನೆ ಎಂಬಂತೆ ಬೀಡಿಗೆ ಬೆಂಕಿ ಹಚ್ಚಿ ಸುತ್ತಮುತ್ತ ಧೂಮ್ರಾಕ್ಷನನ್ನು ಅಟ್ಟಾಡಿಸಿ ಧ್ಯಾನಸ್ಥ ಸ್ಥಿತಿಯಲ್ಲಿರುವವರಂತೆ ಸ್ಥಿತಪ್ರಜ್ಞರಾಗಿರುವವರು, ಆಟ ಶುರುವಾಗಿ ಸ್ವಲ್ಪ ಹೊತ್ತಿನಲ್ಲೇ ಎದುರಿನ ಕುರ್ಚಿಯೆಳೆದು ಕಾಲು ಚಾಚಿ ಕೊನೆ ತನಕ ನಿದ್ರೆಯನ್ನೇ ಮಾಡುತ್ತಿರುವ ಮಹಾನುಭಾವರು, ಬರುವಾಗಲೇ ತೀರ್ಥ ಸೇವನೆ ಮಾಡಿ ರಂಗಸ್ಥಳದ ಹತ್ತಿರದಲ್ಲೇ ಕುಳಿತು ವಿಚಿತ್ರ ಹಾವಭಾವದಿಂದ ವೇಷಧಾರಿಗಳನ್ನು ಪ್ರೋತ್ಸಾಹಿಸಿ, ಆಗಾಗ ಪುಟ್ಟಕೆ ನೃತ್ಯವನ್ನೂ ಮಾಡಿ ಮನ ರಂಜಿಸುವವರು, ವೇಷಧಾರಿಗಳ ಅಲ್ಪಸ್ವಲ್ಪ ಗುರ್ತವಿದ್ದು, ರಂಗಸ್ಥಳದ ಹಿಂದೆ ಮುಂದಿನ ದೃಶ್ಯದ ಪ್ರವೇಶಕ್ಕೆಂದು ಕುಳಿತಿರುವ ಹೊತ್ತಿನಲ್ಲಿ ಆವರ ಸೆಲ್ಫೀ ತೆಗೆದು ಅದೂ ಇದೂ ಪಟ್ಟಾಂಗ ಮಾಡಿ ತಲೆ ತಿನ್ನುವವರು...ಈಗಷ್ಟೇ ಮುಗಿದ ಪದವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡು ಹತ್ತೂರು ಕೇಳುವಷ್ಟು ವಾಲ್ಯೂಮ್ ಇಟ್ಟು ಆಗಿಂದಾಗ್ಗೆ ಪ್ಲೇ ಮಾಡಿ ಹತ್ತಿರ ಕುಳಿತವರ ತಾಳ್ಮೆ ಪರೀಕ್ಷಿಸುವ ಮಹಾನುಭಾವರು... ಹೀಗೆ ಎಷ್ಟೊಂದು ಮಂದಿ ಆಟ ನೋಡಲು ಬರುತ್ತಾರೆ.

.....


ಕೆಲವೊಮ್ಮೆ ನೀರಸ ಸಂಭಾಷಣೆ, ಎಳೆತದಿಂದ ಆಟ ಬೋರೆನಿಸಿದರೆ ಮೈನವಿರೇಳಿಸುವ ಸಂವಾದ, ರಂಗಸ್ಥಳ ಪುಡಿಗಟ್ಟುವ ವೇಗದ ನರ್ತನದಿಂದ ಇಹವನ್ನೇ ಮರೆಸುವ ದೃಶ್ಯಗಳು. ನಡುವೆ ನಿದ್ರೆ ದೂಗಿ ನಿಮಿಷಗಳಷ್ಟು ಆಟ ಮಿಸ್ ಆದರೂ ನಿರಂತರ 7ರಿಂದ 8 ಗಂಟೆ ಕಾಲ ಕತೆ ಮುಂದುವರಿಯುವ ಪರಿ. ರಾಕ್ಷಸ, ದೇವೇಂದ್ರ ವೇಷ ಹಾಕಿದರೂ ಚೌಕಿ ಹೊರಗೆ ನಿಂದು ಬೀಡಿ ಎಳೆಯುವ ವಿಚಿತ್ರ ಸನ್ನಿವೇಶ, ಇನ್ನೊಂದು ಕಡೆಯ ಆಟ ಮುಗಿಸಿ ಮೇಕಪ್ಪಿನಲ್ಲೇ ಬೈಕಿನಲ್ಲಿ ಬಂದಿಳಿಯುವ ಕಲಾವಿದರು. ಆರಂಭದ ಹೊತ್ತಿಗೆ ಇರುವ ಭಾಗವತರು, ಚೆಂಡೆಯವರು ಮಧ್ಯರಾತ್ರಿಯೇ ಡ್ಯೂಟಿ ಮುಗಿಸಿ ಬೈಕಿನಲ್ಲಿ ತೆರಳಿದರೆ ಆಟ ಮುಗಿಯುವ ಹೊತ್ತಿಗೆ ಇರುವ ಹಿಮ್ಮೇಳದವರೇ ಬೇರೆ. ಕೆಲವೊಮ್ಮೆ ಪ್ರೇಕ್ಷಕರೂ ಅಷ್ಟೆ, ಮುಂಜಾನೆ ವೇಳೆಗೆ ಇರುವ ಪ್ರೇಕ್ಷಕರೇ ಬೇರೆ ಇರುತ್ತಾರೆ....

.........

ಟಿ.ವಿ.ಯಲ್ಲೋ, ಪುಸ್ತಕದಲ್ಲೋ ನೋಡೋವು ಯಕ್ಷಗಾನ ಬಯಲಾಟಕ್ಕೂ, ಬಟಾ ಬಯಲಿನಲ್ಲಿ ಇಡೀ ರಾತ್ರಿ ನಿದ್ರೆ ಗೆಟ್ಟು ಕುಳಿದು ಅನುಭವಿಸುವ ಆಟದ ಸುಖಕ್ಕೂ ಎಷ್ಟೊಂದು ವ್ಯತ್ಯಾಸ... ಆಟದ ಅನುಭೂತಿ ಅನುಭವಕ್ಕೇ ಸೀಮಿತ. ವರ್ಣನೆಗಲ್ಲ.

-ಕೆಎಂ, ಬಲ್ಲಿರೇನಯ್ಯ ಯಕ್ಷಕೂಟ, ಯಕ್ಷಗಾನ ಅಭಿಮಾನಿಗಳ ವಾಟ್ಸಪ್ ಬಳಗ.


No comments: