ಪತ್ತನಾಜೆಗೆ ದಿನಗಣನೆ ಶುರು....

ಮೇ ತಿಂಗಳು ಬಂದಾಯ್ತು. ಬೇಸಿಗೆಯ ಯಕ್ಷಋತು ಮುಗಿಯಲು ಬೆರಳೆಣಿಕೆಯ ದಿನ ಬಾಕಿ. ಸುಡು ಸೆಕೆ ಯಕ್ಷಗಾನ ಪ್ರೇಕ್ಷಕರನಿಗೇನೂ ಕೊರತೆ ಮಾಡಿಲ್ಲ. ಯಕ್ಷರಸಿಕರಿಗೆ ತಿರುಗಾಟ ಮುಗಿಯುತ್ತಾ ಬಂತಲ್ಲ ಎಂಬುದೇ ಚಿಂತೆ. ಪರ್ವಾಗಿಲ್ಲ, ಈ ಯಕ್ಷಗಾನ ಪ್ರದರ್ಶನಕ್ಕೆ ಮಳೆ, ಬೇಸಿಗೆ ಕಾಲಗಳ ಹಂಗಿಲ್ಲ, ನಿರಂತರ ನಡೆಯುತ್ತಾ ಇರುತ್ತದೆ ಎಂಬ ಸಮಾಧಾನವೂ ಜೊತೆಗಿದೆ. 

ಮುಂದಿನ ವರ್ಷ ತಿರುಗಾಟದಲ್ಲಿ ಕಲಾವಿದರ ಬದಲಾವಣೆ ಹೇಗೇಗೆ ಇರಬಹುದು, ಯಾವ ಭಾಗವತರು ಯಾವ ಮೇಳಕ್ಕೆ ಹೋಗುತ್ತಾರೆ, ಹೊಸದಾಗಿ ಯಾರು ಬರುತ್ತಾರೆ, ಹೊಸ ಮೇಳಗಳೇನಾದರೂ ಹುಟ್ಟಿಕೊಳ್ತಾವಾ, ವಿವಾದಗಳು ತಣ್ಣಗಾಗ್ತಾವ ಎಂಬ ಪ್ರಶ್ನೆಗಳನ್ನು 2017 18ನೇ ಸಾಲಿನ ಯಕ್ಷಋತು ಬಿಟ್ಟು ಹೋಗ್ತಾ ಇವೆ.


ಕಲಾವಿದರ ಬದಲಾವಣೆಯ ವಿವಾದೊಂದಿಗೆ ತಿರುಗಾಟ ಶುರುವಾಯ್ತು. ಮೇಳಗಳ ತಿರುಗಾಟ ನಿರ್ವಿಘ್ನವಾಗಿ ಆರಂಭವಾಯಿತು. ಒಂದಷ್ಟು ಹೊಸ ಪ್ರಸಂಗಗಳೂ ರಂಗವನ್ನೇರಿದವು. ಆದರೆ, ಹಿಂದಿನ ಹಾಗೆಲ್ಲಾ ಶತದಿನೋತ್ಸವದಂತಹ ಅಬ್ಬರದ ಆಚರಣೆಗಳ ಸಂದರ್ಭ ಕಂಡು ಬಂದ ಹಾಗಿಲ್ಲ. ಯಾವ ಆಟಕ್ಕೂ ಪ್ರೇಕ್ಷಕರ ಕೊರತೆಯಾಗಿದ್ದು ತಿಳಿದುಬಂದಿಲ್ಲ. ರಾತ್ರಿ 12, 1 ಗಂಟೆ ಹೊತ್ತಿಗೆ ಮುಗಿಯುವ ಕಾಲ ಮಿತಿಯ ಆಟದ ಮಂಗಳ ಪದದ ವರೆಗೂ ಪ್ರೇಕ್ಷಕರು ಸಮಾಧಾನಕರ ಸಂಖ್ಯೆಯಲ್ಲಿರುತ್ತಾರೆ ಎಂಬುದು ಈಗ ಸಾಬೀತಾಗಿರುವ ವಿಚಾರ. ಮತ್ತೆ ಕಲಾವಿದರೂ ಅಷ್ಟೇ ಮೇಳಗಳಿಗೆ ತಮ್ಮನ್ನು ಸೀಮಿತಗೊಳಿಸಿಲ್ಲ. ಕಾಲಮಿತಿಯ ಆಟ ಮುಗಿಸಿ ಮತ್ತೊಂದು ಮೇಳಗಳ ಆಟಗಳಿಗೆ ಹೋಗಿ ತಮ್ಮ ಅಭಿಮಾನಿಗಳನ್ನು ರಂಜಿಸುವುದೂ ಕಂಡುಬಂದಿದೆ. ಈಗ ವಿಶೇಷ ಪ್ರದರ್ಶನಗಳಿಗೆ ಮಳೆಗಾಲವೆಂಬ ಮಿತಿಯಿಲ್ಲ. ಇಡೀ ಬೇಸಿಗೆಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಗಾನವೈಭವ, ತಾಳಮದ್ದಳೆ ಮಾತ್ರವಲ್ಲ ಯಕ್ಷಗಾನ ಬಯಲಾಟಗಳೂ ಹಗಲು ಹೊತ್ತಿನಲ್ಲಿ ಸಾಕಷ್ಟು ನಡೆದಿವೆ.


ಜನಪ್ರಿಯ ಕಲಾವಿದರಿಗಂತೂ ದಿನಪೂರ್ತಿ ಎಂಬಂತೆ ಹಗಲು ಹೊತ್ತಿನ ಪ್ರದರ್ಶನಗಳಿದ್ದವು. ರಾತ್ರಿಯಿಡೀ ಪ್ರದರ್ಶನ ನೀಡುವ ಬೆರಳೆಣಿಕೆಯ ಮೇಳಗಳಲ್ಲಿ ಪೈಕಿ ಕಟೀಲು ಮೇಳದವರು ಈ ವರ್ಷ ಶ್ರೀದೇವಿ ಮಹಾತ್ಮೆಯ ಜೊತೆಗೆ ಬೇರೆ ಕೆಲವು ಅಪರೂಪದ ಪ್ರಸಂಗಗಳನ್ನೂ ಆಡಿ ಜನಮನ ಸೂಲೆಗೊಂಡಿದ್ದಾರೆ.
ಕಟೀಲು ಮೇಳದ ಕಲಾವಿದರ ಬದಲಾವಣೆ, ಲಿಪ್ ಲಾಕ್ ಪ್ರಕರಣ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ, ಕಲಾವಿದರೇ ಚೌಕಿಯಲ್ಲಿ ಕಲಾವಿದರಿಗೆ ಹೊಡೆದರೆಂಬ ಆರೋಪ...ಹೀಗೆ ವಿವಾದಗಳಿದ್ದರೂ ಪ್ರದರ್ಶನಗಳು ಸರಾಗವಾಗಿ ಸಾಗಿದವು ಎಂಬುದು ಸಮಾಧಾನಕರ ಅಂಶ.


ಸಾಕಷ್ಟು ಪ್ಲಾನ್ ಮಾಡ್ಕೊಂಡು ದಿನಗಟ್ಟಲೆ ಆಟಗಳನ್ನು ನೋಡಿ ಖುಷಿಪಟ್ಟವರು, ಸುತ್ತಮುತ್ತ ಆಟಗಳಿದ್ದರೂ ಕಾರ್ಯದೊತ್ತಡ, ಮನೆಯವರ ನಿರ್ಬಂಧದಿಂದ ಆಟ ನೋಡದೆ ಸಂಕಟಪಟ್ಟವರು, ಅರ್ದಂಬರ್ಧ ಆಟ ನೋಡಿ ಸಮಾಧಾನ ಮಾಡಿಕೊಂಡವರು, ಹೋದ ಆಟಗಳ ವಿಡಿಯೋ ಮಾಡ್ಕೊಂಡು ಆಗಾಗ ಮೆಲುಕು ಹಾಕಿ ಖುಷಿ ಅನುಭವಿಸುವವರು ಎಲ್ಲರೂ ಆಟವನ್ನು ಮತ್ತಷ್ಟು ಮುಂದೆ ಕೊಂಡು ಹೋಗಿದ್ದಾರೆ ಹೊರತು ಕಲೆಗೆ ಕೊರತೆ ಮಾಡಿಲ್ಲ.
ಈಗ ಮತ್ತೊಂದು ಟ್ರೆಂಡು ಶುರುವಾಗಿದೆ. ಮನೆಯ ಪಕ್ಕ ಆಟವಿದ್ದರೆ ಮಾತ್ರ ಹೋಗುವುದಲ್ಲ. ಇಷ್ಟದ ಮೇಳದ, ಇಷ್ಟದ ಪ್ರಸಂಗವಿದ್ದರೆ ಬೈಕೋ, ಕಾರೋ ತಗೊಂಡು ಎಷ್ಟು ದೂರವಾದರೂ ಹೋಗಿ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಪ್ರೇಕ್ಷಕನಿಗೆ ಆಯ್ಕೆಯ ಸ್ವಾತಂತ್ರ್ಯ ಈಗ ಹಿಂದಿಗಿಂತ ಜಾಸ್ತಿ ಇದೆ. ಕಲಾವಿದರ ಎಡವಟ್ಟುಗಳು (ಉದ್ದೇಶಪೂರ್ವಕ ಅಲ್ಲದಿದ್ದರೂ) ಎಲ್ಲೋ ಪ್ರೇಕ್ಷಕರ ನಡುವೆ ಕುಳಿತವರ ಮೊಬೈಲುಗಳಲ್ಲಿ ಸೆರೆಯಾಗಿ ಅವಾಂತರಗಳಾಗುತ್ತಿವೆ.
ರಂಗಸ್ಥಳದ ಎದುರು ಕೆಲವೇ ಸಂಖ್ಯೆಯ ಪ್ರೇಕ್ಷಕರಿದ್ದರೂ ನಡೆಯುತ್ತಿರುವ ಆಟದ ಮಾಹಿತಿಗಳು ನೂರಾರು ಯಕ್ಷಗಾನ ಗುಂಪುಗಳ ಸಹಸ್ರಾರು ಪ್ರೇಕ್ಷಕರ ಅಂಗೈಗಯನ್ನು ಕ್ಷಣಮಾತ್ರದಲ್ಲಿ ತಲುಪುತ್ತಾ ಇರುತ್ತವೆ. ಎಲ್ಲಿ, ಯಾವ ಆಟ ನಡೆಯುತ್ತಿದೆ ಎಂಬ ವಿವರ ಮೊಬೈಲಿನಿಂದ ಮೊಬೈಲಿಗೆ ಹರಿದಾಡಿ ಆಟಕ್ಕೆ ಪ್ರಚಾರ ಪುಕ್ಕಟೆಯಾಗಿ ಸಿಗುತ್ತಿದೆ. ಆಟಕ್ಕೆ ಹ್ಯಾಂಡ್ ಬಿಲ್ ಎಂಬ ಪ್ರಚಾರ ಈಗ ಅನಾವಶ್ಯಕ ಎನಿಸುವ ಮಟ್ಟಕ್ಕೆ...
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗ್ರಾಮೀಣ ಭಾಗಗಳಲ್ಲಿ, ಇಕ್ಕಟ್ಟಿನ ಅಪರಿಚಿತ ಜಾಗಗಳಲ್ಲಿ ನಡೆಯುವ ಆಟಕ್ಕೆ ಹೋಗುವ ದಾರಿಯನ್ನು ಗೂಗಲ್ ಮ್ಯಾಪ್ ಲೊಕೇಶನ್ ಕಳುಹಿಸುವ ಮೂಲಕ ಕ್ಲಪ್ತ ಸಮಯದಲ್ಲಿ ನಿಖರವಾಗಿ ತಲಪುವ ಪದ್ಧತಿಯೂ ಈಗೀಗ ಶುರುವಾಗಿದೆ.
ಅಂತೂ ಇಂತೂ ಆಟ ಆಟವೇ ಆಗಿ ಉಳಿಯಬೇಕು. ಆಟ ನೋಡುವ ಪ್ರೇಕ್ಷಕ ಮತ್ತಷ್ಟು ತಾಂತ್ರಿಕನಾಗಿ ಮುಂದುವರಿದು ಹೆಚ್ಚು ಹೆಚ್ಚು ಜನರನ್ನು ತಲುಪಬೇಕು, ತಲಪುತ್ತಿದೆ. ಇದು ಈ ವರ್ಷದ ತಿರುಗಾಟದದ ಸಾರಾಂಶ ಎಂದು ನನ್ನ ಅನಿಸಿಕೆ...
ಯಕ್ಷಗಾನಂ ಗೆಲ್ಗೆ..

-ಕೆಎಂ, ಬಲ್ಲಿರೇನಯ್ಯ ಯಕ್ಷಕೂಟ, ಯಕ್ಷಗಾನ ಪ್ರೇಕ್ಷಕರ ವಾಟ್ಸಪ್ ಬಳಗ.


No comments: