ವ್ಯಾಲಿಡಿಟಿ ಇದೆ...


ವೇಗದೂತ ವಾಹನಕ್ಕೂ
ನಿಯಂತ್ರಕವಿದೆ,
ಓಘ ಮಿತಿ ಮೀರದ ಹಾಗೆ...
30 ಸೆಕುಂಡಿನ
ಸ್ಟೇಟಸ್ಸಿನ ಮಾದರಿ
ಖುಷಿಗೂ, ತಲ್ಲಣಕ್ಕೂ
ಕಾಲಮಿತಿಯಿದೆ...!


ಕೆಲವೊಮ್ಮ ತನ್ನಷ್ಟಕ್ಕೆ...
ಮತ್ತೊಂದಿಷ್ಟು ಸಂದರ್ಭ
ಸಂಭವಿಸಿದ್ದು, ಅಂದುಕೊಂಡಿದ್ದರ
ಫಲಶೃತಿಯಾಗಿ
ಸಂತಸಕ್ಕೂ, ಗೆಲವಿಗೂ
ವಾಸ್ತವದ ಸಂಕೋಲೆಯ
ಬಂಧನ ಭೀತಿಯಿದೆ....

ಹಣೆಬರಹಕ್ಕಿಲ್ಲ ಕನಸು
ಕಂಡ ಕಂಗಳ
ಅರಳಿಸುವ ಹಂಗು
ನಿರೀಕ್ಷೆಗಳ ಉಳಿಸುವ
ದಾಕ್ಷಿಣ್ಯದ ಪರಿಧಿ...
ಪೂರ್ವನಿಗದಿತ ಬರಹಗಳ
ಅಳಿಸದಂತೆ ಕಾಯುವುದೇ ವಿಧಿನಿಯಮ


ಅಂದುಕೊಂಡದ್ದು
ಕಂಡುಕೊಂಡದ್ದು
ಕಂಡ ಬಳಿಕ ತಿಳಿದುಕೊಂಡದ್ದು
ತಿಳಿದ ಬಳಿಕ ಅಂದುಕೊಂಡದ್ದು
ಅಂದುಕೊಂಡಂತೆ ಸಾವರಿಸಿದ್ದು
ಸಾವಿರದ ಭಾವಗಳಿಗೆ
ವಾಸ್ತವದ ಹಂಗು ಇದೆ

ಪವಾಡಕ್ಕೂ, ವಿಧಿ ಬರಹಕ್ಕೂ
ಆಗಿ ಬರುವುದಿಲ್ಲ
ನಂಬಿಕೆಗೂ ಪರಿಸ್ಥಿತಿಗೂ
ತಾಳಮೇಳವಿರುವುದಿಲ್ಲ...
ಕಂಡೂ ಕಾಣದ ಹಾಗೆ
ಜಾರು ದಾರಿಯಲ್ಲೂ ಕಾಲು

ತಪ್ಪದ ನಡಿಗೆ ನಿರ್ಲಿಪ್ತ ಸತ್ಯ!
-KM

No comments: