ನಮ್ಮ ಕನ್ನಡಿಯಲ್ಲಿ ನಮ್ಮದೇ ಬಿಂಬ ಕಾಣಲಿ...!

ನಮ್ಮೂರಿನದ್ದೇ ಬಸ್. ಡ್ರೈವರು, ಕಂಡಕ್ಟರು ಇಬ್ಬರೂ ತುಳು ಮಾತೃಭಾಷೆಯವರು. ಕನ್ನಡವೂ ಗೊತ್ತು. ಇಂಗ್ಲಿಷ್ ಜ್ಞಾನ ನನ್ನ ಹಾಗೆ, ಅಷ್ಟಕ್ಕಷ್ಟೇ... ಆದರೂ ಬಸ್ ನಿಲ್ಲಿಸುವ ಹೊತ್ತು ಬಂದಾಗ ಕಂಡಕ್ಟರ್ ಡ್ರೈವರ್ ನಲ್ಲಿ ಓಲ್ಡೇ ಓಲ್ಡೇ... ಅಂತ ಕಿರುಚುತ್ತಾನೆ. ಅದರ ಅರ್ಥ ಇಬ್ಬರಿಗೂ ಗೊತ್ತಿದೆಯಾ ಅಂತ ಗೊತ್ತಿಲ್ಲ. ಬಸ್ ಅಂತೂ ನಿಲ್ಲುತ್ತದೆ, ರೈಟ್ ಪೋಯ್ ಅಂದಾಗ ಬಸ್ ಹೊರಡುತ್ತದೆ. ಈ ಮೂಲಕ ಸ್ಪೆಲ್ಲಿಂಗೂ ಗೊತ್ತಿಲ್ಲದ ಎರಡು ಪದಗಳನ್ನು ಬಳಸಿ ಬಸ್ ಪ್ರಯಾಣದಲ್ಲಿ ನಿತ್ಯ ವ್ಯವಹಾರ ನಡೆಯುತ್ತದೆ. ತುಳುವರ ಊರಿನಲ್ಲಿ, ತುಳುವರೇ ಪ್ರಯಾಣಿಸುವಲ್ಲಿ, ಎಲ್ಲರಿಗೂ ತುಳು ಗೊತ್ತಿರುವ ಜಾಗದಲ್ಲಿ ಎಲ್ಲಿಯದ್ದೋ ಭಾಷೆಯನ್ನು ಅಪಭ್ರಂಶಗೊಳಿಸಿ (ಓಲ್ಡೇಯ ಮೂಲ ರೂಪ ಹೋಲ್ಡಾನ್ ಅಂತ ನಾನು ಅಂದುಕೊಂಡಿದ್ದೇನೆ) ಮಾತನಾಡುವ ಶೋಕಿಯಲ್ಲಿ ಏನೋ ಒಂದು ಖುಷಿ.
....


ನಿಮ್ಮದೇ ಜೊತೆ ಬೆಳೆದು ದೊಡ್ಡವನಾದ ಸ್ನೇಹಿತ, ಒಡನಾಡಿ, ದಾಯಾದಿ ಅಥವಾ ಇನ್ಯಾರದ್ದೋ ಬರ್ಥ್ ಡೇ ಬರುತ್ತದೆ. ಸಾಧಾರಣವಾಗಿ ಪ್ರತಿದಿನವೂ ಯಾರದ್ದಾದರೂ ಹುಟ್ಟಿದ ದಿನ ಇದ್ದೇ ಇರುತ್ತದೆ. ಈ ಖುಷಿಯನ್ನು ನಮ್ಮದೇ ಭಾಷೆಯಲ್ಲಿ ಹಂಚಿಕೊಂಡರೆ ಸಮಾಧಾನವಾಗುವುದಿಲ್ಲ. ಹ್ಯಾಪ್ಟಿ ಬರ್ಥ್ ಡೇ ಬ್ರೋ.... ಸಿಸ್... ಅಂದಾಗ ಏನೋ ಸಮಾಧಾನ. ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರ ನಿಧನದ ಸುದ್ದಿಗಳು ಬಂದಾಗಲೂ ಅಷ್ಟೇ ಆರ್ ಐಪಿ ಎಂದು ಹಾಕಿದಾಗಲೇ ತುಂಬ ಮಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಸಾರ್ಥಕತೆ ಮೂಡುವುದು...

ಜೀವನ ಶೈಲಿಯೆಂದರೆ ಹೀಗೆಯೇ.... ಹೀಗೆಯೇ ಇರಬೇಕು... ಹೀಗೆ ಬದುಕಿದರೆ ಮಾತ್ರ ನಾವು ಸಮಕಾಲೀನರು, ಹೀಗೆ ಬದುಕಿದರೆ ಮಾತ್ರ ನಾವು ಅಪ್ ಡೇಟ್ ಆಗಿದ್ದೇವೆ ಎಂದು ನಾಲ್ಕು ಮಂದಿಗೆ ಗೊತ್ತಾಗುತ್ತದೆ ಎಂಬ ಭ್ರಮೆಯೇ ನಮ್ಮನ್ನು ಹೀಗಾಡಿಸುತ್ತದೆ. ಇಂಗ್ಲಿಷೇ ಮಾತನಾಡಬಾರದು, ಇಂಗ್ಲಿಷ್ ಪದವನ್ನೇ ಮುಟ್ಟಬಾರದು, ಬೇರೆ ಭಾಷೆಯನ್ನೇ ಕೆಂಪು ಕಣ್ಣಿನಲ್ಲಿ ನೋಡಬೇಕೆಂಬುದು ನನ್ನ ವಾದವೇ ಅಲ್ಲ. ಸ್ಪೆಲ್ಲಿಂಗೇ ಗೊತ್ತಿಲ್ಲದ (ಎಲ್ಲರಿಗೂ ಅಲ್ಲದ) ಯಾವುದೋ ಊರಿನ ಭಾಷೆಯನ್ನು ಮನಸ್ಸಿನ ಭಾಷೆಯಿಂದ ಕೋರುವ ಶುಭಾಶಯಕ್ಕೋ, ಶ್ರದ್ಧಾಂಜಲಿಯೋ, ಬಸ್ಸು ನಿಲ್ಲಿಸುವ ಆದೇಶಕ್ಕೋ ಕೊಡಬೇಕಾದ ಅನಿವಾರ್ಯತೆ ಏನಿದೆ. ನೀರಿಳಿಯದ ಗಂಟಲಿಗೆ ಕಡುಬು ತುರುಕಿದ ಹಾಗೆ....



ಚೆಂದಕೆ ಸಂಬಂಧವನ್ನು ಗೆಳೆಯಾ, ಅಣ್ಣಾ, ಅಕ್ಕಾ, ತಂಗಿ, ತಮ್ಮ, ಚಿಕ್ಕಮ್ಮ, ಚಿಕ್ಕಪ್ಪ, ಗುರುಗಳೇ ಎಂದು ಹೇಳಿದರೆ ಸ್ಟಾಂಡರ್ಡ್ ಕಡಿಮೆಯಾಗುತ್ತದೆ ಎಂದವರು ಯಾರು.... ಬ್ರೋ ಎಂದಾಗ ಮಾತ್ರ ಹೆಚ್ಚು ಖುಷಿ ಸಿಗುತ್ತದೆ ಎಂಬುದು ಎಲ್ಲಿ ಸಿಕ್ಕಿದ ಪಾಠ. ಭಾಷೆಯನ್ನು ಅಪಭ್ರಂಶ ಮಾಡುವುದೇ ಸಮಕಾಲೀನತೆ ಎಂದು ಬೋಧಿಸಿದವರು ಯಾರು. ಅವಸರದ ಬರಹಕ್ಕೆ, ಟೈಪಿಂಗ್ ಅನುಕೂಲಕ್ಕೆ ಶಾರ್ಟ್ ಫಾರಂಗಳು, ಸಂಕ್ಷಿಪ್ತ ಬರಹಗಳು ಸಹಜ. ಅದಕ್ಕೆ ತಕಾರರಿಲ್ಲ. ಆದರೆ ಅಪಭ್ರಂಶಕ್ಕೊಳಗಾಗುವ ಪದಗಳೇ ಸಾಹಿತ್ಯವೋ, ಶುಭಾಶಯಗಳೋ ಆಗುತ್ತಾ ಹೋದರೆ ಮುಂದೊಂದು ದಿನ ಅವುಗಳೇ ಶಬ್ದ ಭಂಡಾರವಾಗಿಬಿಡುವ ಅಪಾಯವಿದೆ. ಸುಂದರವಾದ ಪದಗಳ ಜಾಗಕ್ಕೆ ವೈರಸ್ ಗಳ ಹಾಗೆ ಯಾವುರಿನದ್ದೋ ಭಾಷೆ ಬಂದು ಕೂರುವ ಅಪಾಯ ಇದ್ದೇ ಇದೆ.

.....


ವಾರ್ತಾ ವಾಚನದಲ್ಲಿ, ನಿರೂಪಣೆಯಲ್ಲಿ ಕನ್ನಡದ ಎ ಅಕ್ಷರವನ್ನು ಯೇ ಎಂದು ಎಳೆಯುವುದು. ಜ್ಞಾವನ್ನೋ, ಕ್ಷವನ್ನೋ ಇನ್ಯಾವುದೋ ರೀತಿಯಲ್ಲಿ ಉಚ್ಛರಿಸಿ ನಾವು ಸಮಕಾಲೀನರಾಗಿದ್ದೇವೆ ಎಂದುಕೊಂಡು ಬೀಗುವುದೆಲ್ಲ ನಾವು ಅಪ್ ಡೇಟ್ ಆಗಿದ್ದೇವೆಂದುಕೊಳ್ಳುವ ಭ್ರಮೆಯ ಭಾಗ ಅಷ್ಟೆ. ಸಮಾಜದಲ್ಲಿ ಹೀಗೆಯೇ ಬದುಕಬೇಕೆಂಬ ಶಿಷ್ಟಾಚಾರವನ್ನು ಪಾಲಿಸುವುದು ಬೇರೆ, ಈ ಥರ ಇದ್ದರೆ ಮಾತ್ರ ನಾವು ಬುದ್ಧಿವಂತರು ಎಂದುಕೊಂಡಿರುವ ಭ್ರಮೆ ಬೇರೆ. ಯಾರೂ ರೂಪಿಸಿರದ, ಬಾಯಿಯಿಂದ ಬಾಯಿಗೆ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಹುಟ್ಟಿಕೊಂಡ ಟ್ರೆಂಡುಗಳನ್ನೇ ಶಿಷ್ಟಾಚಾರ ಎಂದು ಆವಾಹಿಸಿಕೊಂಡಿರುವುದೇ ಇದಕ್ಕೆ ಕಾರಣ. ಬಳಸುವ ಪದದ ಬಗೆಗಿನ ಜ್ಞಾನ, ಅದರ ಪ್ರಸ್ತುತತೆಯ ಅರಿವು, ಸ್ಪೆಲ್ಲಿಂಗೂ ಏನೂ ಗೊತ್ತಿಲ್ಲದ ಮೇಲೆ ನಮ್ಮದೇ ಊರಿನಲ್ಲಿ ಅವುಗಳನ್ನು ಬಳಸುವ ಔಚಿತ್ಯವಾದರೂ ಏನೂ. ನಮ್ಮದೇ ಊರಿನ, ನಮ್ಮದೆ ಓರಗೆಯ ವ್ಯಕ್ತಿಗೆ ನಮ್ಮದೆ ಕನ್ನಡವೋ, ತುಳುವಿನಲ್ಲಿ ಶುಭ ಕೋರಿದರೆ, ಚೆಂದಕ್ಕೆ ನಮ್ಮದೇ ಮಾತೃಭಾಷೆಯಲ್ಲಿ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿದರೆ ಅಪಥ್ಯವಾಗುತ್ತದೆಯೇ. ಇಂಗ್ಲಿಷಿನಲ್ಲೇ ಮಾತನಾಡುವವರೆಲ್ಲಾ ಬುದ್ಧಿವಂತರೆಂದು ಹೇಳಿದವರು ಯಾರು... ಯಾವುದೋ ದೇಶದ, ಯಾವನೋ ಭಾಷೆ ಗೊತ್ತಿಲ್ಲದ ವ್ಯಕ್ತಿಗಾದರೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕು. ಆದರೆ, ನಮ್ಮ ಊರಿನ ವಿಚಾರಕ್ಕೆ ಬಂದಾಗ ಹಾಗಲ್ಲವಲ್ಲ... ಮಾತೃಭಾಷೆ ಬಿಟ್ಟು ಬೇರೆಯ ಹಿಡಿತವಿಲ್ಲದ ಭಾಷೆಯಲ್ಲಿ ಮಾತನಾಡಿದರೆ ಮನಸ್ಸಿನ ಮಾತುಗಳು ಹೊರ ಬರಲು ಸಾಧ್ಯವಿಲ್ಲ. ಅನಿವಾರ್ಯವಾದಲ್ಲಿ ಬೇರೆ ಭಾಷೆಯ ಮೊರೆ ಹೋಗಲೇ ಬೇಕು. ಎರಡು ಮಾತಿಲ್ಲ. ಆದರೆ ನಿತ್ಯ ವ್ಯವಹಾರದಲ್ಲಿ, ತಪ್ಪು ತಪ್ಪು ಬಳಸಿ, ತಪ್ಪು ಅಕ್ಷರಗಳನ್ನು ಆರಿಸಿ ನಡೆಸುವ ಸಂವಹನ ಹಾಸ್ಯಾಸ್ಪದ, ಅಪ್ರಸ್ತುತ ಅನಿಸುತ್ತದೆಯೇ ಹೊರತು ಅದೊಂದು ಸಾಧನೆಯೆಂದು ನನಗಂತೂ ಕಂಡು ಬರುವುದಿಲ್ಲ.

...


ಈ ಥರ ಮಾತನಾಡಬೇಕು, ಈ ಥರ ಉಡುಗೆ ತೊಡಬೇಕು, ಮಾತು, ವರ್ತನೆ, ಬಟ್ಟೆಬರೆ ಸಭ್ಯವಾಗಿರಬೇಕು ಎಂಬಿತ್ಯಾದಿ ಮೂಲಭೂತ ಶಿಷ್ಟಾಚಾರ ಸಾಮಾನ್ಯವಾಗಿ ಗೊತ್ತಿರುವ ಅಂಶ. ಅದು ಸಹಜವಾಗಿ ನಮ್ಮ ಸಂಸ್ಕಾರದಲ್ಲಿ ಬೆಳೆದು ಬಂದಿರುತ್ತದೆ. ಆದರೆ ಹೀಗೆ ಇದ್ದರೆ ಮಾತ್ರ ಅದು ಸಮಕಾಲೀನ, ಹಿನ್ನೆಲೆ ಗೊತ್ತಿಲ್ಲದೆಯೂ ಯಾರೋ ಮಾಡಿದ ರೀತಿಯಲ್ಲಿ ನಾವು ಮಾಡಿದರೆ ಮಾತ್ರ ನಾವೂ ಅವರಂತಾಗುತ್ತೇವೆಂದುಕೊಂಡು ಮಾಡುವ ಅಂಧ ಅನುಕರಣೆಗಳೇ ವಿಚಿತ್ರವಾಗಿ ನಮ್ಮನ್ನು ಬೇರೆಯವರಿಗೆ ತೋರಿಸಿಕೊಡುತ್ತದೆ.
ಭಾಷೆ ಜ್ಞಾನವೇ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವುದಾದರೇ ಜಗತ್ತಿ ಹೀಗೆ ಇರುತ್ತಿರಲಿಲ್ಲ. ಅನಕ್ಷರಸ್ಥರು ಮಹಾತ್ಮರಾಗಿದ್ದು, ಶಾಲೆಗೇ ಹೋಗದವರು ಸಂಶೋಧನೆಗಳನ್ನು ನಡೆಸಿದ್ದು, ಇಂಗ್ಲಿಷು ಗೊತ್ತಿಲ್ಲದ ಹಳ್ಳಿಯ ಪುಣ್ಯಾತ್ಮರು ಜಾನಪದ ವಿಧ್ವಾಂಸರಾಗಿದ್ದು, ದೊಡ್ಡ ಕೃಷಿಕರಾಗಿದ್ದು, ಪರಿಸರ ರಕ್ಷಕರಾಗಿದ್ದು ಯಾವುದೂ ನಡೆಯುತ್ತಿರಲಿಲ್ಲ. ಇಲ್ಲೆಲ್ಲ ಇಂಗ್ಲಿಷ್ ಮಾತನಾಡಿ ಅವರು ಪಂಡಿತರಾಗಿದ್ದಲ್ಲ. ಸಹಜ ವರ್ಚಸ್ಸು, ಸಾಧನೆ, ತಪಶ್ಶಕ್ತಿ, ಸಾಮಾನ್ಯ ಜ್ಞಾನವೇ ಅವರನ್ನು ಶ್ರೇಷ್ಠರನ್ನಾಗಿಸಿದ್ದು. ಹಾಗೆ ಪ್ರತಿ ವ್ಯಕ್ತಿಯಲ್ಲೂ ಏನಾದರೂ ಕನಿಷ್ಠ ಒಂದಾದರೂ ಪ್ರತಿಭೆ, ಸಾಮರ್ಥ್ಯ ಅಡಕವಾಗಿರುತ್ತದೆ. ಅದನ್ನು ಹೊರ ತೆಗೆದು ಬದುಕಲು ಯತ್ನಿಸಿದರೆ ಸಾರ್ಥಕತೆ ಮೂಡಬಹುದೇ ಹೊರತು, ಯಾರೋ ನಾಲ್ಕು ಮಂದಿ ಮಾಡುತ್ತಾರೆಂದು ಕುರುಡರಾಗಿ ನಾವೂ ಅದನ್ನೇ ಮಾಡಿ ಹಿಂದೆ ಮುಂದೆ ಗೊತ್ತಿಲ್ಲದೆ ಕಣ್ಣು ಕಣ್ಣು ಬಿಡುವುದು ಸ್ವಂತಿಕೆ ಕಳೆದುಕೊಂಡಂತೆಯೇ ಸರಿ.

...

ನಾಲ್ಕು ಮಂದಿ ಮೆಚ್ಚುವಂಥ ಕೆಲಸ ಮಾಡಿದಾಗ, ನಮಗೆ ನಾವೇ ಖುಷಿ ಕೊಡುವ ಏನಾದರೂ ವಿಚಾರ ಈಡೇರಿದಾಗ ಸಿಗುವ ಮನಶ್ಶಾಂತಿ, ಆತ್ಮತೃಪ್ತಿ ಅಂಧಾನುಕರಣೆಯಲ್ಲಿ ಎಂದಿಗೂ ಸಿಗುವುದಿಲ್ಲ. ಪೌಡರು ಹಚ್ಚಿ, ಟೈ ಕಟ್ಟಿ ನಾವೇ ನಮ್ಮ ಸೆಲ್ಫೀ ತೆಗೆದು ಹಾಕಿ ಬಹು ಬರಾಕ್ ಬಹು ಪರಾಕ್ ಅನ್ನಿಸಿಕೊಳ್ಳುವುದಕ್ಕಿಂತಲೂ ಅಕ್ಕಪಕ್ಕದವರಿಗೆ ನಿಮ್ಮ ಗುಣದಲ್ಲಿ ಇರಬಹುದಾದ ಸೌಂದರ್ಯ ಕಂಡು ಅದನ್ನು ತಿಳಿಸಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.
....

ಬೇರೆ ಭಾಷೆ ಬಗ್ಗೆ ದುರಾಭಿಮಾನ ಬೇಡ. ಆದರೆ, ನಮ್ಮ ಭಾಷೆ ಬಗ್ಗೆ ಪ್ರೀತಿ ಇರಲಿ. ಎರವಲು ಪದಗಳನ್ನು ಬಳಸುವ ಮೊದಲು ಅರ್ಥ ತಿಳಿದುಕೊಳ್ಳಿ. ನಮ್ಮೂರಿಗೆಷ್ಟು ಹೊಂದುತ್ತದೆ ಎಂಬ ಸಹನೆಯೂ ಇದ್ದರೆ ಆರೋಗ್ಯಕ್ಕೆ ಒಳ್ಳೆಯದು.

.....

ಆಗ ಮತ್ತೆ ಮತ್ತೆ ನೆನಪಾಗುವ ಸಾಲುಗಳು

ವೇದಿಕೆಯಲ್ಲಿ ಯಾರಾದರೂ ಬಹುಮಾನ ಪಡೆಯಲು ಹೋಗುವಾಗ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ. ಆದರೆ ಯಾವತ್ತೂ ಸಭೆಯಲ್ಲಿ ಕುಳಿತು ಚಪ್ಪಾಳೆ ತಟ್ಟುವಲ್ಲಿಗೇ ಸೀಮಿತರಾಗಬೇಡಿ. ನೀವೂ ಒಂದು ದಿನ ಅದೇ ವೇದಿಕೆಗೆ ಹತ್ತಿ ಬಹುಮಾನ ಪಡೆಯುವಂತಾಗಲಿ. ಅದರಲ್ಲಿ ಸಿಗುವ ಖುಷಿ ಯಾಂತ್ರಿಕವಾಗಿ ಚಪ್ಪಾಳೆ ತಟ್ಟುವಲ್ಲಿ ಸಿಗಲು ಸಾಧ್ಯವೇ. ಯೋಚಿಸಿ. ಈ ಪ್ರಶ್ನೆಗೆ ಸಿಗುವ ಉತ್ತರದಲ್ಲಿ ಇಡೀ ಬರಹದ ಸಾರ ಅಡಗಿದೆ.


-ಕೃಷ್ಣಮೋಹನ ತಲೆಂಗಳ.

1 comment:

Suma mithun said...

ಬಹಳ ಚಂದದ ಬರಹ. ಪ್ರಸ್ತುತವೆನಿಸುವ ಸಂಗತಿಗಳನ್ನು ಬಹಳ ಚೆನ್ನಾಗಿ ತಿಳಿಸಿದಿರಿ.