ಕಂಡರೂ ಕಾಣಿಸದ ಮಾರ್ಗ....!

ನೀರು ಸಾಗಿದ
ದಾರಿ ನದಿಯಾಗಿ
ಅಂಕುಡೊಂಕಿನ ಪಥ
ಕೊರಕಲು, ಮತ್ತೆ ಸುಳಿಗಳ ಸಹಿತ
ಸಮುದ್ರ ಸೇರುವ ತನಕ
ಸಾಗಿದ್ದು ದಾರಿಯಾಗಿ
ನೀರು ಹೋದಲ್ಲೇ ನಾವೆಯೂ ಹೋಗಿ
ಪ್ರವಾಹದ ದಿಕ್ಕಿಲ್ಲೇ ಪ್ರಯಾಣ
ಬೆಳೆಸಿದರೆ ಸಮುದ್ರ ಸೇರಬಹುದು...

ಹೊರಟ ಬಳಿಕ ಗಮ್ಯ ಸೇರಲೇಬೇಕು
ಪ್ರಯಾಣ ಹೇಗಿತ್ತೆಂಬುದು ಅಪ್ರಸ್ತುತ
ಅದು ಆಯ್ಕೆಗೂ ಸಿಗದ ವಿಧಿ
ಐಶಾರಾಮವಾದರೂ
ಸಾಮಾನ್ಯವಾದರೂ
ಕುಲುಕಿ, ಜಿಗಿದು ಬಳಲಿದರೂ
ದಾರಿ ಕ್ರಮಿಸಬೇಕೆಂಬುದು
ತಪ್ಪಿಸಲಾಗದ
ಅನಪೇಕ್ಷಿತ ಪ್ರವಾಸ...


ಜೊತೆಗೆ ಹೊರಟು
ಹಿಂದಿಕ್ಕಿ ಮುಂದೆ ಸಾಗಿದವರು
ಇಣುಕಿ ನೋಡಿ
ಅನುಕಂಪ ತೋರಿದವರು
ವೇಗಕ್ಕೂ, ಬೆಳವಣಿಗೆಗೂ
ಸಾಮ್ಯಕ್ಕೇ ಸಿಗದವರು
ಅಷ್ಟು ದೂರ ತಲುಪಿದ ಬಳಿಕ
ಕಣ್ಣಂಚಿಂದ ಮರೆಯಾದವರು
ಎಳೆದೆಳೆದು ಸಾಗುವ ದಾರಿಗೆ ಸಾಕ್ಷಿಗಳು...

ಗೂಗಲ್ ಮ್ಯಾಪೂ ಬೇಡ
ಸೂಚನಾ ಫಲಕ ಬೇಡ
ದಾರಿ ಸಾಗುತ್ತಲೇ ಇರುತ್ತದೆ
ಯಾರೋ ಬರೆದಿಟ್ಟ ಚಿತ್ರದ ಹಾಗೆ
ನಡು ನಡುವೆ ನೇರ ದಾರಿ
ವೇಗ ಹೆಚ್ಚಿದ ತಕ್ಷಣ
ಏರು, ಗುಂಡಿ, ತಿರುವು
ವರ್ಣನೆಗೆ ಸಿಕ್ಕದ
ಅರ್ಥವಾಗದ ಚಿತ್ರದ ಹಾಗೆ!


ಕ್ರಮಿಸಿದ ಬಳಿಕ
ಅರ್ಥವಾಗುವ ಮಾರ್ಗ
ತಿರುವಿನಾಚೆಗೆ ಕಾಣದ ದಾರಿ
ಪ್ರಯಾಣ ಸಫಲವೋ, ವ್ಯರ್ಥವೋ
ಅರ್ಥವಾಗದ ಹೊತ್ತಿನ ಮಹಿಮೆ
ಅತ್ತರೂ ನಕ್ಕರೂ
ರಿಪೇರಿಯಾಗದ ಮಾರ್ಗ
ಹೊತ್ತು ಹೊತ್ತಿಗೂ ತನ್ನೊಳಗೆ
ಲೀನವಾಗಿಸುವ ಸ್ಥಿತಪ್ರಜ್ಞ ಗಮ್ಯ...

-ಕೃ.ಮೋ.

No comments: