ಹಳೆ ಮನೆ....

ಅಲ್ಲಿ ಹೆಂಚಿನ ಮಾಡಿನೆಡೆಯಿಂದ
ಸುರುಳಿ ಹೊಗೆ ಹೊರಬರುವುದಿಲ್ಲ
ದೂರದಿಂದ ಒಗ್ಗರಣೆ ಹುರಿವ
ಪರಿಮಳ ಅಡರುವುದಿಲ್ಲ...
ಪಡಸಾಲೆಯ ಹೊರಗಿನ ಕೊಟ್ಟಿಗೆಯ
ಮೂಲೆಯ ತಿರುವಿನಲ್ಲಿ
ಗಬಕ್ಕನೆ ಬೌ ಎಂದು ನಾಯಿ ಬೊಗಳುವುದಿಲ್ಲ
ಬಾಗಿಲು ತೆರೆದಾಗ
ಹಲ್ಲಿಯೊಂದು ಅಡಗಿ ಕೂರಲು
ಆಚೆಗೆ ಸರಿಯುವ ದೃಶ್ಯವೂ ಇಲ್ಲ
....


ಪಾರಿಜಾತ ಮರದಡಿಯ
ಮಣ್ಣಿನ ಅಂಗಳದಲ್ಲಿ ಬಾಡಿದ ಹೂಗಳ ಪದರ
ಸ್ವಲ್ಪ ಒಣಗಿ ಎಡೆಯಲ್ಲಿ ಹಸಿರುಳಿದು
ತಲೆದೂಗುವ ಬೆಂಡೆ ಗಿಡದ ಅಸ್ತಿಪಂಜರ
ಒಣಗಿ ಕೃಶವಾಗಿ ಸುತ್ತಮುತ್ತ
ಚದುರಿ ನಿಂತ ತರಗೆಲೆಗಳ ನಿಶ್ಯಬ್ಧ ನರ್ತನ
ಜೇಡನಿಗೂ, ಇರುವೆಗೂ ಹಕ್ಕುಸ್ಥಾಪನೆಗೆ
ಪೈಪೋಟಿ, ಬಿಂದು ಬಿಂದು ನೀರು ಸುರಿಸುವ
ನಳ್ಳಿಯ ಕೆಳಗಿನ ಬಣ್ಣ ಮಾಸಿದ ಬಕೆಟ್ಟಿಗೂ ವಯಸ್ಸಾಯ್ತು

......
ಹಳತಾದ ಬಣ್ಣದ ಗೋಡೆಯ
ಸಂಧಿಗಳಲ್ಲಿ ಕೈಗಳಿರಿಸಿದ ಕಲೆಗಳ ಚಿತ್ತಾರ
ಮತ್ತೆಂಥದ್ದೋ ಬಣ್ಣಗಳ ವಿಚಿತ್ರ ಗೆರೆಗಳು
ಒರಸಿ ಒರಸಿ ಕೆಂಪಾಗಿ ಹೊಳೆಯುವ ಕಾವಿಯ ನೆಲ
ಚಳಿಗೆ ಹಿಗ್ಗಿ, ಬೇಸಿಗೆಗೆ ಸಡಿಲಾಗುವ ಮರದ ಬಾಗಿಲು
ಅಳುವಿಗೂ, ನಗುವಿಗೂ ಸಾಕ್ಷಿಗಳಾದ
ಕಿರಿದು ಕೋಣೆಗಳು, ಭೋರ್ಗರೆದ ಮಳೆಗೆ
ಹಪ್ಪಳ ತಿನ್ನಲು ವೇದಿಕೆಯಾದ ಜಗಲಿಯ
ಮಸುಕಾದ ಗೋಡೆಯ ಆಸರೆ,
ಅಟ್ಟದ ತುಂಬ ಬಲೆಗಳ ಬೇಲಿಗೆ ಮಸಿಕಪ್ಪಿನ ತೋರಣ
.......
ವರ್ಷಗಳ ವಸತಿಗೆ ನಿಶ್ಚಬ್ಧ ಸೇವಕನಾಗಿ,
ಬದುಕಿನ ಮೈಲಿಗಲ್ಲುಗಳಿಗೆಲ್ಲ ಆಧಾರವಾಗಿ...
ಮುಸ್ಸಂಜೆಯ ಮಲ್ಲಿಗೆಯ ಘಮಕ್ಕೆ ಅಸ್ತಾನ ಹೂವಿನ ಅಲಂಕಾರ,
ಶಂಖನಾದದ ಪ್ರತಿಧ್ವನಿ, ಚಂದಿರನ ಬೆಳದಿಂಗಳು
ಛಾವಣಿಯ ಕನ್ನಡಿಯೊಳಗಿಳಿದು ಬೆಳಗಿದ
ಹೊತ್ತಿಗೆ ಹಳೆ ರೇಡಿಯೋದಲ್ಲಿ ಬಂದ ಯಕ್ಷಗಾನಕ್ಕೆ
ಕಿವಿಯಾಗಿ, ಲಾಟೀನಿನ ಬೆಳಕಲ್ಲಿ ಚಂದಮಾಮಾ ಓದಿದ ನೆನಪು,
ನೆಲವೇ ಮೇಜಾಗಿ, ಕಿಟಕಿಯೇ ಫ್ಯಾನಾಗಿ,
ಚಿಮಿಣಿ ದೀಪವೇ ಬೆಳಕಾಗಿ ಕೂಲಾಗಿ, ಹಾಯಾಗಿದ್ದ
ದಿನಗಳ ಪರ್ವವೇ ಈಗ ಇತಿಹಾಸ
.......

ಅಂಗಳದ ತುದಿಯ ತಂಪಾಗಿಸಿದ ಹಸಿರ ತೋಟಕ್ಕೆ
ಹಾಳೆ ಚಿಳ್ಳಿಯ ನೀರಿನ ಸೇಚನ, ಬಗೆ ಬಗೆಯ ದಾಸವಾಳದ ರಂಗು
ಮಣ್ಣಿನ ತುಳಸಿಕಟ್ಟೆಗೆ ಸೆಗಣಿ ಬಳಿದು
ಅಲಂಕರಿಸಿ ಭಜನೆಗೆ ಕೂರುವ ಸಡಗರ,
ಪೋಸ್ಟುಮ್ಯಾನು ಹೊತ್ತ ತರುವ ಪತ್ರವೇ ಹಿಗ್ಗುವ ಸಂದೇಶವಾದ
ದಿನಗಳಿಗೆ, ಗಡಿಬಿಡಿಯಿಲ್ಲದೆ, ಕಸಿವಿಸಿ ತಾಳದೆ
ಊಟಕ್ಕೂ, ನಿದ್ರೆಗೂ ಅವರಸರ ಮಾಡದೆ
ಆಸೆಯ ತಾರದೆ, ಬೇಸರ ನೀಡದೆ,
ಕಾಲಘಟ್ಟಕ್ಕೆ ಕಿವಿಯಾಗಿ, ಕಣ್ಣಾಗಿ
ಮತ್ತೀಗ ಹಳತಾಗಿ, ನೆನಪಾಗುವ ಸೌಧ...
---

-ಕೃಷ್ಣಮೋಹನ ತಲೆಂಗಳ.

3 comments:

Unknown said...

ಸುಮಾರು ನೆನಪು ಗಳು ಕಣ್ಣು ಮುಂದೆ ಬಂತು, ನಮ್ಮ cricket tournament ಬೇರೆ

Unknown said...

ಅಪ್ಪನ ಮನೆ ನೆಂಪಾವ್ತು

Giri said...

👌👍