ಶೇಖರಿಸಿ ಇಡಲಾಗದ ಚಳಿ ನೇರಪ್ರಸಾರದ ಅನುಭೂತಿ!


 

ಬೆಳ್ಳಂಬೆಳಗ್ಗೆ ಚಳಿ ಮುಗಿಯುತ್ತಾ ಬರುವಾಗ ತೊಡಗುವ ಮುಂಜಾವು ಹಾಗೂ ಸಂಜೆ ಸೂರ್ಯಾಸ್ತದ ಜೊತೆಗೆ ಕುಳಿರ್ಗಾಳಿಯ ಜೊತೆ ಆವರಿಸುವ ಚಳಿಯ ಸಂಧಿಕಾಲ ಒಂಥರಾ ಅರ್ಥವಾಗದ ಮನಸ್ಸುಗಳ ಹಾಗೆ!

ಇಷ್ಟೇ ಹೊತ್ತಿಗೆ ಸೆಕೆಂಡು ಲೆಕ್ಕದಲ್ಲಿ ಬರುವ ಚಳಿ ಅದೇ ಮುಹೂರ್ತಕ್ಕೆ ಥಟ್ಟನೆ ಮಾಯವಾಗುತ್ತದೆ ಅಂತಲ್ಲ. ಸೂರ್ಯ ಮೇಲೆರುತ್ತಾ ಬಂದ ಹಾಗೆ ಫೇಡ್ ಔಟ್ ಆಗುವ ಚಳಿಯನ್ನು ಪ್ರಖರ ಬಿಸಿಲು ಫೇಡ್ ಇನ್ ಆಗಿ ಆಕ್ರಮಿಸುವ ಕ್ಷಣವಿದೆಯಲ್ಲ ಅದು ಅಯಾಚಿತವಾಗಿ ಬದಲಾದ ಮನಃಸ್ಥಿತಿಯ ಹಾಗೆ...

 

ತುಂಬ ಸಲ ಖುಷಿ ಎಲ್ಲಿದೆ ಎನ್ನುವುದೇ ಗೊತ್ತಿಲ್ಲದ ಮನಸ್ಸು, ಎಲ್ಲೆಲ್ಲೋ ಖುಷಿಯನ್ನು ಹುಡುಕಿ, ಸರ್ಕಸ್ಸು ಮಾಡಿ, ಹಾಸ್ಯಾಸ್ಪದವಾದ ಹಾಗೆ, ಯಾತಕ್ಕೋಸ್ಕರ ದುಡಿಮೆ, ಯಾತಕ್ಕೋಸ್ಕರ ವ್ಯಸ್ತ ಬದುಕು, ಸಾಧನೆ ಎಂದರೇನು ಎಂಬುದರ ವ್ಯಾಖ್ಯೆ ತಿಳಿಯದೇ ಬಿಝಿಯಾಗಿಯೇ ದಿನ ದೂಡುವವರ ಹಾಗೆ, ಊರಿಡೀ ಹಿತವಚನ ಹೇಳುತ್ತಾ ಬಂದು, ತನ್ನ ಚಪ್ಪರದಡಿ ಸೋರುವುದನ್ನು ತಡೆಯಲಾಗದೆ ಅಸಹಾಯಕನಾಗಿ ಬೆಪ್ಪುತಕ್ಕಡಿ ಆಗುವ ಹಾಗೆ...

 

ಅಕಾಲಿಕ ಜ್ಞಾನೋದಯ, ಪುಟ್ಟದೊಂದು ಖುಷಿಯನ್ನು ಕ್ಷಣಮಾತ್ರದಲ್ಲಿ ಚದುರಿಸುವ ಕಿಡಿಯ ಹಾಗೆ... ಯಾವುದೋ ಮೂಲೆಯತ್ತ ಚಳಿ ಇನ್ನಿಲ್ಲದಾಗುವುದು ಅರಿವಾಗುವಾಗ ಬಿಸಿಲು ಮೈಯನ್ನು ಕಾಯಿಸುತ್ತಿರುತ್ತದೆ!  ಪ್ರಖರ ಬಿಸಿಲಿನಲ್ಲಿ ನಿಂತವನಿಗೆ ತಣ್ಣಗಿನ ಚಳಿಯಲ್ಲಿ ಮಂಜಿನ ಇಬ್ಬನಿ ಹಾಸಿದ ಹುಲ್ಲಿನ ಮೇಲೆ ನಡೆದದ್ದು ಯುಗಗಳ ಹಿಂದೆಯೇನೋ ಎಂಬ ಹಾಗೆ ಭಾಸವಾದೀತು...

 

ಸೂಕ್ತಿಗಳು, ಗಾದೆಗಳನ್ನು ಬಾಯಿ ಪಾಠ ಮಾಡಿ ಅವರಿವರಿಗೆ ಕಳುಹಿಸಿ ಬುದ್ಧಿವಂತರಾಗುವ ನಮಗೆ ಅದರ ಕಾಲು ಭಾಗದಷ್ಟೂ ಆದರ್ಶಗಳನ್ನು ಅಳವಡಿಸಿಕೊಳ್ಳಲಾಗದೆ, ಆ ಅಸಹಾಯಕತೆಯನ್ನು ಒಪ್ಪಿಕೊಳ್ಳಲೂ ಆಗದೆ, ಕೊನೆಗೆ ಇರುವ ಅಧಃಪತನದ ಸ್ಥಿತಿಯನ್ನೇ ಚೆಂದಕ್ಕೆ ಮೇಕಪ್ಪು ಮಾಡಿ ತೋರಿಸಿಕೊಂಡು ತಿರುಗುವುದಿದೆಯಲ್ಲ ಬಿಸಿಲೇ ನನಗಿಷ್ಟ ಅಂತ ಸುಳ್ಳು ಹೇಳಿದ ಹಾಗೆ!

 

 

ಎಲ್ಲಿಯೂ ಖುಷಿಯೇ ಸಿಕ್ಕದಿರುವುದು, ತಪ್ಪುಗಳು ದೊಡ್ಡದೊಡ್ಡದಾಗಿ ಮುಖಕ್ಕೆ ರಾಚುವುದು, ತನ್ನಿಂದಾಗಿ ತಾನೇ ಅಪ್ರಸ್ತುತನಾಗುವುದು, ಸಮಕಾಲೀನವಾಗಿಯೂ ಇರಲಾಗದೆ, ತನ್ನ ಅಧಿಕಪ್ರಸಂಗಗಳನ್ನೂ ಅದುಮಿಟ್ಟುಕೊಳ್ಳಲಾಗದೆ, ತನ್ನಷ್ಟಕ್ಕೂ ತಾನಿರದೆ, ಹೋಲಿಕೆಯಿಂದ ಅತೃಪ್ತನಾಗಿರುವುದು, ನೆಪ ಮಾತ್ರದ ನಿರ್ಲಿಪ್ತತೆ ಚಿಂತನೆಗೆ ಸೀಮಿತವಾಗಿ, ಆಚರಣೆಯಲ್ಲಿ ಶೂನ್ಯವಾಗಿ, ತನ್ನದೇ ಅಂಕೆಯಲ್ಲಿಲ್ಲದ ಮನಸ್ಸು ಮತ್ತಷ್ಟು ಪರಿಪೂರ್ಣತೆಗಾಗಿ, ದೊಡ್ಡ ಗೆಲವು, ತೃಪ್ತಿಗಾಗಿ ಅಲೆದಾಡುವುದು ಒಂದು ರೀತಿಯಲ್ಲಿ ಅಕಾಲಿಕವಾಗಿ ಉಂಡ ಬಳಿಕ ಹಸಿವೆ ಇಲ್ಲವೆಂದು ಹಲುಬಿದ ಹಾಗೆ...

 

ಚಳಿ ಇಷ್ಟವಾದರೆ ಚಳಿ ಇರುವ ಹೊತ್ತಿಗೇ ಚಳಿಯೊಳಗೆ ತೂರಿಕೊಂಡು ನಡೆದಾಡಿ ಖುಷಿ ಪಡಬೇಕು. ಚಳಿಗೆ ಒಗ್ಗಿಕೊಳ್ಳಲು, ಕುಳಿರ್ಗಾಳಿಯ ಕಂಪನಕ್ಕೆ ತೆರೆದುಕೊಳ್ಳುವುದಕ್ಕೆ ಮನಸ್ಸು ಸಿದ್ಧವಿರಬೇಕು. ಪುಟ್ಟ ಅನುಭೂತಿಯನ್ನೇ ಕಟ್ಟಿಟ್ಟು ಕಡು ಬಿಸಿಲಿಗೂ ಆದನ್ನು ಆಗಾಗ ಮೆಲುಕು ಹಾಕುತ್ತಾ ತಂಪಾಗಿರಲು ಪ್ರಯತ್ನಿಸಬೇಕು. ಇಲ್ಲವಾದರೆ, ಸಂಜೆ ಮತ್ತೊಮ್ಮೆ ಗೋಧೂಳಿ ಅದೇ ಚೆಂದದ ನಸು ಕಂಪಿಸುವ ಚಳಿಯನ್ನು ಹೊತ್ತು ತರುತ್ತದೆ ಎಂಬುದನ್ನು ನೆನಪಿಸಬೇಕು... ಆ ಹೊತ್ತೂ ಕಾರಣಾಂತರಗಳಿಂದ ದಕ್ಕದಿದ್ದರೆ, ಬೊಗಸೆಗೆ ಸಿಕ್ಕಿದಷ್ಟು ಚಳಿಯನ್ನು ಹಿಡಿದಿಟ್ಟ ಹಳೆಯ ಕ್ಷಣಗಳೊಂದಿಗೆ ಮೌನವಾಗಿಡಲು ಕಲಿಯಬೇಕು...

-ಕೃಷ್ಣಮೋಹನ ತಲೆಂಗಳ.

 

No comments: