ಸಾಮಾಜಿಕ ಜಾಲತಾಣದ ಭದ್ರತೆ ಮತ್ತು ಶಿಷ್ಟಾಚಾರದ ಅರಿವು ಬೆಳೆಸಿಕೊಳ್ಳೋಣ...

ಕೆಲ ಸಮಯದ ಹಿಂದೆ ಕರಾವಳಿಯ ಒಂದು ಕುಟುಂಬದವರು ಮನೆ ಮಂದಿ ಸಮೇತ ಪರ ಊರಿಗೆ ಪ್ರವಾಸ ಹೋಗಿದ್ರು. ಸುಮಾರು 3-4 ದಿನ ಕಳೆದು ಅವರು ಮನೆಗೆ ಬಂದಾಗ ಅವರ ಮನೆಯಿಂದ ಕಳವಾಗಿತ್ತು. ಅದೂ ಹೇಗೆ? ಪಾತ್ರೆ ಪಗಡಿ, ಪೀಠೋಪಕರಣ ಸಮೇತ ಮನೆಯಲ್ಲಿದ್ದ ಅಷ್ಟೂ ವಸ್ತುಗಳನ್ನು ಕಳ್ಳರು ಹಂತ ಹಂತವಾಗಿ ಕದ್ದೊಯ್ದು ಇಡೀ ಮನೆಯನ್ನು ಅಕ್ಷರಶಃ ಖಾಲಿಯಾಗಿಸಿದ್ದರು. ಕಾರಣ ಏನು ಗೊತ್ತಾ... ಪ್ರವಾಸ ಹೋಗುವ ಮೊದಲು ಈ ಕುಟುಂಬದವರ ಫೇಸ್ಬುಕ್ಕಿನಲ್ಲಿ ದೊಡ್ಡದಾಗಿ ಬರೆದು ಹಾಕಿದ್ದರು ನಾವು ಇಂತಹ ದಿನದಂದು ಪ್ರವಾಸ ಹೋಗ್ತೇವೆ, ಮನೆಯಲ್ಲಿ ಇರುವುದಿಲ್ಲ ನಿಮ್ಮೆನ್ನಲ್ಲ ಮಿಸ್ ಮಾಡ್ಕೊಳ್ತಾ ಇದ್ದೇವೆ ಅಂತ. ನಂತರ ಪ್ರವಾಸ ಹೋದ ಊರಿನಿಂದಲೂ ಪ್ರತಿ ದಿನ ಲೈವ್ ಅಪ್ಡೇಟ್ ಗಳನ್ನು, ಸೆಲ್ಫೀಗಳನ್ನು ಹಾಕುತ್ತಾ ಇದ್ದರು. ಇದನ್ನೆಲ್ಲ ಫೇಸ್ಬುಕ್ಕಿನಲ್ಲಿ ಗಮನಿಸುತ್ತಿದ್ದ ಚಾಣಾಕ್ಷ ಕಳ್ಳ ಈ ಮನೆಯವರು 3-4 ದಿನಗಳ ಕಾಲ ಮರಳುವುದಿಲ್ಲ ಅಂತ ಖಚಿತವಾದ ಬಳಿಕ ಲಾರಿ ತೆಗೆದುಕೊಂಡೇ ಬಂದು ಇಡೀ ಮನೆಯನ್ನು ದೋಚಿದ್ದ. ಇದು ಕಟ್ಟುಕತೆಯಲ್ಲ, ಕೆಲಸಮಯದ ಹಿಂದೆ ನಡೆದ ಘಟನೆ. ಇದೊಂದು ಉದಾಹರಣೆ ಮಾತ್ರ. ಸ್ಮಾರ್ಟ್ ಫೋನ್ ಗಳು, ಜಾಲತಾಣಗಳ ಬಳಕೆ ಕುರಿತು ನಮ್ಮೊಳಗಿರುವ ಅಜ್ಞಾನ, ಭ್ರಮೆಗಳು, ಯಾಂತ್ರಿಕ ಮನಃಸ್ಥಿತಿಗಳಬಗ್ಗೆ ಇಂತಹನೂರಾರು ನಿದರ್ಶನಗಳನ್ನು ನೀಡಬಹುದು.

ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಈ ವರ್ಷಾರಂಭದಲ್ಲಿ ಸ್ಮಾರ್ಟ್ ಫೋನ್ ಬಳಸುತ್ತಿರುವವರ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ.36, ಅಮೆರಿಕಾದಲ್ಲಿ ಈ ಪ್ರಮಾಣ ಶೇ.79. ಇನ್ನೊಂದು ಸಮೀಕ್ಷೆ ಪ್ರಕಾರ, ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಪ್ರಮಾಣ ಪ್ರತಿ ವರ್ಷ ಶೇ.35ರಷ್ಟು ವೃದ್ಧಿಸುತ್ತಿದೆ. 2015ರಲ್ಲಿ ಗ್ರಾಮೀಣ ಭಾಗದಲ್ಲಿ ಶೇ.9ರಷ್ಟು ಮಂದಿ ಸ್ಮಾರ್ಟ್ ಫೋನ್ ಬಳುಸುತ್ತಿದ್ದರೆ 2018ರಲ್ಲಿ ಈ ಪ್ರಮಾಣ ಶೇ.25ಕ್ಕೇರಿದೆ. ಇನ್ನೂ ಒಂದು ಮಾಹಿತಿ ತಿಳಿಸುವಂತೆ ಭಾರತದ 77 ಪ್ರತಿಶತ ಮಂದಿ ವಯರ್ ಲೆಸ್ ಬ್ರಾಡ್ ಬಾಂಡ್ ಸೇವೆಯನ್ನು ಸ್ಮಾರ್ಟ್ ಫೋನ್ ಗಳ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ಅಂದರೆ ಬಹುತೇಕ ಮುಕ್ಕಾಲು ಭಾಗ ಜನಸಂಖ್ಯೆಯನ್ನು ವಯರ್ ಲೆಸ್ ಇಂಟರ್ ನೆಟ್ ತಲುಪಿದೆ. ಇದರಿಂದ ಅರ್ಥ ಮಾಡಿಕೊಳ್ಳಬಹುದು ಭಾರತದಲ್ಲಿ ಸ್ಮಾರ್ಟ್ ಫೋನ್ ಹಾಗೂ ಅಂತರ್ಜಾಲ ತಲಪುವಿಕೆಯ ಅಗಾಧತೆಯನ್ನು

ದೇಶ ಡಿಜಟಲೀಕರಣಗೊಳ್ಳುತ್ತಿದೆ. ಮಾಹಿತಿ ಪ್ರಸಾರ, ಯೋಜನೆಗಳ ನೇರ ವರ್ಗಾವಣೆ, ಶಿಕ್ಷಣ, ಆರೋಗ್ಯಕಾಳಜಿ ಸಹಿತ   300ಕ್ಕೂ ಅಧಿಕ ಸರ್ಕಾರಿ ಆಪ್ ಗಳು ಜನರ ಬಳಕೆಗೆ ಲಭ್ಯ ಇವೆ. ಇಷ್ಟು ಮಾತ್ರವಲ್ಲ ನಗದು ರಹಿತ ಪಾವತಿ ವ್ಯವಸ್ಥೆಯ ಉತ್ತೇಜನ, ಆನ್ ಲೈನ್ ಶಿಕ್ಷಣ, ಮೊಬೈಲಿನಲ್ಲಿ ಬ್ಯಾಂಕ್ ಸೇವೆ, ಆರೋಗ್ಯ ಸೇವೆ, ಶುಲ್ಕಗಳ ಪಾವತಿ, ವರ್ಕ್ ಫ್ರಂ ಹೋಂ ಅವಶ್ಯಕತೆಗಳು, 4ಜಿಯಂತಹ ಕ್ಷಿಪ್ರ ಸಂಪರ್ಕದ ಅಂತರ್ಜಾಲ ವ್ಯವಸ್ಥೆ, ಅಗ್ಗದ ದರದಲ್ಲಿ ಸಿಗುತ್ತಿರುವ ಥರಹೇವಾರಿ ಹ್ಯಾಂಡ್ ಸೆಟ್ಟುಗಳು, ಅನಿಯಮಿತ ಡೇಟಾ ಪ್ಲಾನ್ ಗಳು, ಆನ್ ಲೈನ್ ಖರೀದಿ ಅವಕಾಶ ಇವೆಲ್ಲ ಸೇರಿ ಸ್ಮಾರ್ಟ್ ಫೋನ್ ಬಳಕೆಯನ್ನು ಹೆಚ್ಚಿಸಿವೆ, ಉಗ್ಯೋಗ ಸೇರಿದಂತೆ ಬದುಕಿನ ಹಲವು ಮಜಲುಗಳಲ್ಲಿ ಮೊಬೈಲುಗಳ ಬಳಕೆಯನ್ನು ಅನಿವಾರ್ಯವಾಗಿಸಿವೆ. ಹಾಗಾಗಿ ಹೋಗ್ತಾ ಹೋಗ್ತಾ ನಮ್ಮ ಆಯುಷ್ಯದ ಬಹುಪಾಲು ಆನ್ ಲೈನಿನಲ್ಲಿ ಕಳೆದುಹೋಗುತ್ತಿದೆ, ಮುಷ್ಟಿಯೊಳಗಿನ ಮೊಬೈಲು ದೇಹದ ಒಂದು ಅಂಗದಂತೆ ಭಾಸವಾಗುತ್ತಿದೆ....

 

 

ಇದೆಲ್ಲದರ ಹೊರತಾಗಿ ಚಿಂತಿಸಬೇಕಾದ ವಿಚಾರವೆಂದರೆ, ಅಂತರ್ಜಾಲ ಸಹಿತ ಮೊಬೈಲುಗಳ ಸುರಕ್ಷತೆಯ ಪ್ರಜ್ಞೆ, ಜಾಲತಾಣಗಳಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಹಾಗೂ ಮೊಬೈಲ್ ಬಳಕೆ ಒಂದು ಗೀಳಾಗದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಈ ಮೂರರ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ವಿಪರ್ಯಾಸವೆಂದರೆ ಸುಶಿಕ್ಷಿತರು ಹಾಗೂ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರಿಗೆ ಸಹ ದುಬಾರಿ ಮೊಬೈಲ್ ಕೈಯ್ಯಲ್ಲಿದ್ದರೂ ಅದರ ಬಳಕೆಯ ಶಿಷ್ಟಾಚಾರದ ಅರಿವಿಲ್ಲ.

ಮೊದಲನೆಯದು ಸುರಕ್ಷತೆ:

 

ಕೈಯ್ಯಲ್ಲಿರುವ ನುಣುಪಾದ ಮೊಬೈಲಿಗೆ ವಯರ್ ಲೆಸ್ ಇಂಟರ್ ನೆಟ್ ಅಥವಾ ಡೇಟಾ ಸಂಪರ್ಕ ಸಿಕ್ಕಿದಾಕ್ಷಣ ನಾವು ಜಗತ್ತಿನೊಂದಿಗೆ ನಮಗರಿವಿಲ್ಲದೇ ಅನಾವರಣಗೊಳ್ಳುತ್ತೇವೆ ಎಂಬುದು ನಮಗೆ ಬಹಳಷ್ಟು ಸಾರಿ ಅರಿವಾಗುವುದಿಲ್ಲ. ನಮ್ಮ ಕೈಯ್ಯಲ್ಲಿರುವ ಮೊಬೈಲಿನಲ್ಲಿ ಹಿಂದೆ ಹಾಗೂ ಮುಂದೆ ಕ್ಯಾಮೆರಾಗಳಿವೆ, ಎದುರು ಮೇಲ್ಭಾಗದಲ್ಲಿ ಪುಟ್ಟದಾದಾದ ಸೆನ್ಸರ್ ಗಳಿವೆ, ಮೊಬೈಲಿನೊಳಗೆ ನಾವಿರುವ ಸ್ಥಳವನ್ನು ಗುರುತಿಸಬಲ್ಲ, ಉಪಗ್ರಹದ ಸಹಾಯದಿಂದ ಕೆಲಸ ಮಾಡುವ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ ಜಿಪಿಎಸ್ ಇದೆ, ಮ್ಯಾಪ್ ಇದೆ..ಬ್ಲೂಟೂನ್ ಇದೆ, ವೈಫೈ ಹಾಟ್ ಸ್ಪಾಟ್ ಇದೆ, ಜೊತೆಗೆ ನಮಗೇ ತಿಳಿದಿರಾದ ಹತ್ತಾರು ಆಪ್ ಅಥವಾ ಮೊಬೈಲ್ ಅಪ್ಲಿಕೇಶನ್ ಗಳು ಇರುತ್ತವೆ. ನಮ್ಮ ಮೊಬೈಲು ನಮ್ಮನ್ನೇ ಗಮನಿಸುತ್ತಿರುತ್ತದೆ, ನಾವು ಸುತ್ತಾಡುವ ಜಾಗಗಳನ್ನು ಗುರುತಿಸುತ್ತದೆ, ನೆನಪಿಡುತ್ತದೆ, ನಾವು ಬಳಸುವ ಗೂಗಲ್, ಜಿಮೇಲ್, ಫೇಸ್ಬುಕ್ಕು, ವಾಟ್ಸಪ್ಪು ಸೇರಿದಂತೆ ಹಲವಾರು ಆಪುಗಳು ನಮ್ಮ ಚಟುವಟಿಕೆಗಳು, ಆಸಕ್ತಿ, ಅಭಿರುಚಿಗಳನ್ನು ನಮಗರಿವಿಲ್ಲದೇ ಗಮನಿಸುತ್ತವೆ, ದಾಖಲಿಸುತ್ತವೆ. ಹಾಗಾಗಿ ಕೈಯ್ಯಲ್ಲಿ ಮೊಬೈಲ್ ಹೊಂದಿರುವ ವ್ಯಕ್ತಿ ತಾನೊಬ್ಬ ಸುಭದ್ರ ವೈಯಕ್ತಿಕ ಜೀವನ ಹೊಂದಿರುವ ವ್ಯಕ್ತಿ ಅಂದುಕೊಂಡರೆ ಅದು ನಿಮ್ಮ ಭ್ರಮೆ ಅಷ್ಟೆ.

 

ಅಷ್ಟಕ್ಕೂ ಈ ಥರದ ಮಾಹಿತಿ ಸಂಗ್ರಹಣೆ ಯಾಕೆ ನಡೆಯುತ್ತಿದೆ ಗೊತ್ತ... ನೀವು ಬಳಸುವ ಗೂಗಲ್ ಸರ್ಚ್ ಎಂಜಿನ್, ಯೂಟ್ಯೂಬ್, ವಾಟ್ಸಪ್ಪು, ಫೇಸ್ಬುಕ್ಕು, ಟೆಲಿಗ್ರಾಂ, ಜಿಮೇಲ್ ಇದಕ್ಕೆಲ್ಲ ನೀವು ಯಾವತ್ತಾದರೂ ದುಡ್ಡು ಪಾವಿತಿಸಿದ್ದೀರ. ಇಲ್ವಲ್ಲ... ಹಾಗಾದರೆ ಈ ಸೇವೆಗಳನ್ನೆಲ್ಲ ನಿಮಗೆ ಉಚಿತವಾಗಿ ನೀಡಿದರೆ ಅವರಿಗೆಲ್ಲ ಏನೂ ಲಾಭ, ವಿಷಯ ಸರಳ. ಜಾಹೀರಾತು. ಹೌದು ಉಚಿತವಾಗಿ ಅಥವಾ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ನಿಮ್ಮನ್ನು ತಲಪುವ ಪತ್ರಿಕೆ ಇರಬಹುದು, ಟಿ.ವಿ.ವಾಹಿನಿಗಳು, ವೆಬ್ ಸೈಟುಗಳು ಜಾಹೀರಾತಿನ ಆದಾಯದ ಕಾರಣದಿಂದ ನಿಮ್ಮನ್ನು ತಲಪುತ್ತವೆ. ಇವು ಪ್ರಧಾನ ವಾಹಿನಿಯ ಮಾಧ್ಯಮಗಳಾದರೆ ಜಾಲತಾಣದ ಮಾಧ್ಯಮಗಳ ಪೈಕಿ ಗೂಗಲ್ ನಂತರ ಸೇವೆಗಳು, ವಾಟ್ಸಪ್ಪಿನಂತಹ ಸೋಶಿಯಲ್ ಮೆಸೇಜಿಂಗ್ ಆಪ್ ಗಳು ಸೇವೆ ನೀಡುತ್ತಿರುವುದು ಜಾಹೀರಾತು ಆದಾಯದಿಂದ. ನೀವು ಈ ತಾಣಗಳನ್ನು ಬಳಸುವ ವೇಳೆ ಅಲ್ಲಿ ಕಾಣಿಸುವ ಜಾಹೀರಾತುಗಳಿಂದ ಅವರಿಗೆ ಆದಾಯ ಬರುತ್ತದೆ. ಹಿಟ್ಸ್, ಲೈಕ್ಸ್, ಕಮೆಂಟ್ಸ್, ಶೇರ್ಸ್ ಕೂಡಾ ಒಂದೊಂದು ಪೋಸ್ಟುಗಳ ಜನಪ್ರಿಯತೆಯನ್ನು ನಿರ್ಧರಿಸುತ್ತವೆ. ಮಾತ್ರವಲ್ಲ ಬಹುತೇಕರಿಗೆ ಅರಿವಿಲ್ಲದ ಕೃತಕ ಬುದ್ಧಿಮತ್ತೆ ಅಥವಾ ಅರ್ಟಿಫಿಶಿಯನ್ ಇಂಟೆಲ್ಲಿಜೆನ್ಸ್ ಅಥವಾ ಚಿಕ್ಕದಾಗಿ ಎಐ ಎಂದು ಕರೆಸಿಕೊಳ್ಳುವ ತಂತ್ರಜ್ಞಾನವೊಂದು ನಮ್ಮ ಇಡೀ ಅಭಿರುಚಿಗಳನ್ನು ಮೊಬೈಲ್ ಮೂಲಕ ಅಧ್ಯಯನ ಮಾಡುತ್ತಲೇ ಇರುತ್ತದೆ ಎಂಬುದು ನಿಮಗೆ ಗೊತ್ತ.

ಉದಾಹರಣೆಗೆ-ನೀವೊಂದು ಮೊಬೈಲ್ ಖರೀದಿಗೆ ಆಸಕ್ತರು ಎಂದಿರಿಸಿಕೊಳ್ಳೋಣ. ಅದನ್ನು ನೀವು ಗೂಗಲ್ಲಿನಲ್ಲಿ ಸರ್ಚ್ ಮಾಡುತ್ತೀರಿ. ನಂತರ ಅದನ್ನು ಮರೆತು ಬಿಡುತ್ತೀರಿ. ಆದರೆ ನಿಮ್ಮ ಜಾಲತಾಣ ಜಗತ್ತು ಅದನ್ನು ಮರೆಯುವುದಿಲ್ಲ. ಮರುದಿನ ನಿಮ್ಮ ಈ ಮೇಲ್ ನಲ್ಲಿ, ಫೇಸ್ಬುಕ್ಕು ಪುಟಗಳಲ್ಲಿ, ಮೊಬೈಲ್ ಗೋಡೆಯಲ್ಲಿ ಎಲ್ಲಂದರಲ್ಲಿ ನಿಮಗೆ ತಿಳಿಯಂದೆತ ನೀವು ಸರ್ಚ್ ಮಾಡಿದ ಬ್ರಾಂಡಿನ ಮೊಬೈಲನ್ನು ಖರೀದಿಸಲು ಪ್ರೇರೇಪಿಸುವಂತಹ ಜಾಹೀರಾತುಗಳು ಕಾಣಿಸಿಕೊಳ್ಳುತ್ತೇವೆ. ನಿಮ್ಮಲ್ಲಿ ಎಷ್ಟು ಮಂದಿ ಇಧನ್ನು ಗಮನಿಸಿದ್ದೀರೋ ಗೊತ್ತಿಲ್ಲ. ನಾವು ಮೊಬೈಲಿನಲ್ಲಿ ಏನು ಸರ್ಚ್ ಮಾಡುತ್ತೇವೆ, ಯಾವ ಜಾಗಕ್ಕೆ ಹೆಚ್ಚಾಗಿ ಹೋಗುತ್ತೇವೆ, ಫೇಸ್ಬುಕ್ಕಿನಲ್ಲಿ ಯಾವ ಥರ ಕಮೆಂಟ್ ಹಾಕುತ್ತೇವೆ, ಪದೇ ಪದೇ ಆನ್ ಲೈನ್ ಮೂಲಕ ಯಾವ ವಸ್ತು ಖರೀದಿಸುತ್ತೇವೆ ಇವೆಲ್ಲವನ್ನು ನಮಗೆ ಅರಿವಿಲ್ಲದೆ ಕೆಲವು ಆಪ್ ಗಳು, ನಮ್ಮ ಮೊಬೈಲಿನಲ್ಲಿರುವ ಸೆನ್ಸರ್, ಜಿಪಿಎಸ್ ಇತ್ಯಾದಿಗಳು ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಕಲೆ ಹಾಕಿ ದೈತ್ಯ ಮಾರಾಟ ಸಂಸ್ಥೆಗಳಿಗೆ ತಲುಪಿಸುತ್ತವೆ. ಹಾಗಾಗಿ ಜಾಲತಾಣಗಳ ಬಳಕೆ ಜಾಹೀರಾತು ಪೂರೈಕೆದಾರರಿಗೆ ಬಂಡವಾಳ ಎಂಬ ಸರಳ ಸತ್ಯ ನಮ್ಮ ಅರಿವಿನಲ್ಲಿ ಇರಬೇಕು. ಎಲ್ಲಿಯ ವರೆಗೆ ಎಂದರೆ ಪ್ರತಿದಿನ ನೀವು ಎಲ್ಲಲ್ಲಿ ಓಡಾಡಿದ್ದೀರಿ ಎಂಬ ಒಂದು ವರದಿಯನ್ನು ಗೂಗಲ್  ವರದಿ ರೂಪದಲ್ಲಿ ಸಿದ್ಧ ಮಾಡಿ ತಿಂಗಳ ಕೊನೆಗೆ ನಿಮಗೇ ಮೇಲ್ ಮಾಡುತ್ತದೆ. ನಮಗೆ ಅರಿವಿಲ್ಲದೆ ಜಾಗೃತ ಸ್ಥಿತಿಯಲ್ಲಿರುವ ಲೋಕೇಶನ್ ಆಪ್, ಅನಿವಾರ್ಯವಾಗಿ ಆನ್ ಲೈನಿನಲ್ಲಿ ಇರಬೇಕಾದ ಸಂದರ್ಭಗಳು ಇವೆಲ್ಲ ನಮ್ಮನ್ನು ಜಗತ್ತಿನೆದುರು ಜಗಾಜ್ಜಾಹೀರುಗೊಳಿಸುತ್ತವೆ ನಮಗೆ ಅರಿವಿಲ್ಲದಂತೆ....ಹ್ಯಾಕರುಗಳು ಮೊಬೈಲ್ ಹ್ಯಾಕ್ ಮಾಡಿ ವಂಚಿಸುವುದು, ನಗದು ಲೂಟಿ ಮಾಡುವ ಪ್ರಕರಣಗಳು ಪ್ರತ್ಯೇಕ ಇವೆ. ಆದ್ದರಿಂದ ದಯವಿಟ್ಟು ಈಗ ಹೇಳುವ ವಿಚಾರಗಳ ಕುರಿತು ಎಚ್ಚರವಹಿಸಿ

1)      ತೀರಾ ಖಾಸಗಿ ಮಾಹಿತಿಗಳನ್ನು, ಸಂಗತಿಗಳನ್ನು ಮೊಬೈಲಿನಲ್ಲಿ ಶೇಖರಿಸಡಬೇಡಿ, ಯಾವುದೇ ಲಾಗಿನ್ ಆಗುವ ಸಂದರ್ಭ ಅನಗತ್ಯ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ. ಹೊಸ ಆಪ್ ಗಳನ್ನು ಇನ್ ಸ್ಟಾಲ್ ಮಾಡುವಾಗ ನಮ್ಮ ಖಾಸಗಿತನಕ್ಕೆ ಧಕ್ಕೆ ತರೆತ್ತದೆಯೇ ಎಂಬ ಸೂಚನೆಗಳನ್ನು ಓದಿಕೊಂಡೇ ಮುಂದುವರಿಯಿರಿ.

2)      ಬ್ಯಾಂಕಿಂಗ್ ಆಪ್ ಗಳು, ಸೋಶಿಯಲ್ ಮೆಸೇಜಿಂಗ್ ಆಪುಗಳನ್ನುಬಳಸುವಾಗಲೂ ಸುಲಭದಲ್ಲಿ ಕದಿಯಲಾಗದ, ದೃಢವಾದ ಪಾಸ್ ವರ್ಡ್ ಬಳಸಿ, ಖಾಸಗಿ, ಕೌಟುಂಬಿಕ ವಿಚಾರಗಳನ್ನು ಇದ್ದದ್ದು ಇದ್ದ ಹಾಗೆ ವಾಲ್ ಗಳಲ್ಲಿ, ಸ್ಟೇಟಸುಗಳಲ್ಲಿ ಹಾಕುವ ಹುಚ್ಚು ಸಾಹಸ ಖಂಡಿತಾ ಬೇಡ. ಜಗತ್ತು ನಿಮ್ಮನ್ನು ಗಮನಿಸುತ್ತದೆ ಎಂಬ ಅರಿವಿರಲಿ, ವಂಚಕರು, ಖದೀಮರು, ಸಮಯಸಾಧಕರು ಬೇರೇ ಬೇರೆ ರೀತಿಯಲ್ಲಿ ಸುಲಭದಲ್ಲಿ ವಂಚಿಸಲು ಜಾಲತಾಣ ಅತ್ಯುತ್ತಮ ವೇದಿಕೆ ಎಂಬುದು ತಲೆಯಲ್ಲಿರಲಿ. ಮೊಬೈಲಿಗೆ ಫಿಂಗರ್ ಫ್ರಿಂಟ್ ಲಾಕ್, ಪ್ಯಾಟರ್ನ್ ಲಾಕ್, ಪಿನ್ ಲಾಕ್ ಇತ್ಯಾದಿ ಭದ್ರತಾ ವ್ಯವಸ್ಥೆ ಹಾಕಿ ಬೀಗ ಹಾಕಿಡಿ. ಒಂದು ವೇಳೆ ಮೊಬೈಲ್ ಕಳೆದುಹೋದರೂ ಅದರೊಳಗಿರುವ ದತ್ತಾಂಶ ಅಪಾತ್ರರ ಕೈಪಾಲಾಗದಂತೆ ಗರಿಷ್ಠ ಜಾಗ್ರತೆ ವಹಿಸಿ. ಕಾಣೆಯಾದ ಮೊಬೈಲಿನ ಇರುವಿಕೆ ಪತ್ತೆಹಚ್ಚಲು ಸಾಧ್ಯವಾಗುವ ಆಯ್ಕೆಯನ್ನು ಜಾಗೃತಗೊಳಿಸಿಡಿ.

3)      ಜಾಲತಾಣಗಳಲ್ಲಿ ಅಪರಿಚಿತರ, ಅನಾಮಧೇಯರ ಸ್ನೇಹ ಮಾಡುವಾಗ, ಚಾಟ್ ಮಾಡುವಾಗ, ಮಾಹಿತಿ ವಿನಿಮಯ ಮಾಡುವಾಗ ಕಂಡುಕೇಳರಿಯದವರ ಜೊತೆ ಮಾತನಾಡುತ್ತಿದ್ದೇನೆ ಎಂಬ ಮುನ್ನೆಚ್ಚರಿಕೆ ತಲೆಯೊಳಗಿರಲಿ... ಚಾಟಿಂಗ್ ಭರದಲ್ಲಿ ಹೇಳಬೇಕಾದ್ದು, ಹೇಳಬಾರದ್ದು ಎಲ್ಲವನ್ನೂ ಹೇಳಿಬಿಟ್ಟರೆ ಕಷ್ಟಕ್ಕೆ ಒಳಗಾಗುವವರು ನೀವೇ ಎಂಬ ಪ್ರಜ್ಞೆ ಇರಲಿ.

4)      ಮುಖ್ಯವಾಗಿ ಮಹಿಳೆಯರು ಸೇರಿದಂತೆ ಎಲ್ಲರೂ ಅನಾವಶ್ಯಕ, ಅನುಚಿತ ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳದಿರುವುದು ಸೂಕ್ತ, ಅವುಗಳ ಸ್ಕ್ರೀನ್ ಶಾಟ್ ತೆಗೆಯಲಾಗದಂಥ, ಡೌನ್ ಲೋಡ್ ಮಾಡಲಾಗದಂಥ ಭದ್ರತಾ ಸೆಟ್ಟಿಂಗ್ ಗಳನ್ನು ಜಾಗೃತಗೊಳಿಸಬೇಕಾಗಿದ್ದು ಅಗತ್ಯ. ಫೇಸುಬುಕ್ಕಿನಂತಹ ತಾಣಗಳಲ್ಲಿ ನಿಮ್ಮ ಮೊಬೈಲ್ ನಂಬರ್ ನೀಡದಿರುವುದು, ಅಪರಿಚಿತರು, ಸರಿಯಾದ ಮಾಹಿತಿ ಇಲ್ಲದವರ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸದೇ ಇರುವುದು, ನಿಮ್ಮ ಬ್ಯಾಂಕ್ ಖಾತೆ, ಪಿನ್ ಸಂಖ್ಯೆ ಇತ್ಯಾದಿಗಳನ್ನು ಯಾರೊಂದಿಗೆ ಹಂಚಿಕೊಳ್ಳದಿರುವುದು ಸೂಕ್ತ.

5)      ಫೇಸ್ಬುಕ್ಕಿನಲ್ಲಿ, ವಾಟ್ಸಪ್ಪ್ ಸ್ಟೇಟಸ್ಸಿನಲ್ಲಿ ಖಾಸಗಿ ಭಾವಗಳಾದ ಹತಾಶೆ, ಸಿಟ್ಟು, ವೈರಾಗ್ಯ ಇತ್ಯಾದಿಗಳನ್ನು ಹಂಚಿಕೊಳ್ಳುವುದು, ಖಾಸಗಿ ಕ್ಷಣಗಳ ಚಿತ್ರಣ, ನಾವಿರುವ ಸ್ಥಳವನ್ನು ಊರಿಗಿಡೀ ತಿಳಿಸುವಂಥ ಲೈವ್ ಫೋಟೋ,ವಿಡಿಯೋಗಳನ್ನು ಹಂಚಿಕೊಳ್ಳುವುದು ಇವೆಲ್ಲ ನಿಮ್ಮನ್ನು ಭಾವನಾತ್ಮಕವಾಗಿ ವಂಚಿಸಲು ಹಾಗೂ ಖಾಸಗಿತನವನ್ನು ಉಲ್ಲಂಘಿಸಲು ನೆರವಾಗುತ್ತದೆ ಎಂಬ ಕನಿಷ್ಠ ಪ್ರಜ್ಞೆ ತಲೆಯಲ್ಲಿರಲಿ....

 

ಇನ್ನು ಮೊಬೈಲು ಮತ್ತು ಜಾಲತಾಣಗಳ ಶಿಷ್ಟಾಚಾರದ ಬಗ್ಗೆ ಹೇಳುವುದಾದರೆ.....

 

ಫೇಸ್ಬುಕ್ಕು, ವಾಟ್ಸಪ್ಪು, ಇನ್ ಸ್ಟಾಗ್ರಾಂ, ಬ್ಲಾಗ್, ವೆಬ್ ಸೈಟು ಸೇರಿದಂತೆ ಜಾಲತಾಣಗಳ ಹಲವು ವಿಭಾಗಗಳು ನಮಗೆ ಮುಕ್ತವಾಗಿ ಹಾಗೂ ಯಾವುದೇ ಮಿತಿಯಿಲ್ಲದೆ ಮಾಹಿತಿ ವಿನಿಮಯಕ್ಕೆ ಅವಕಾಶ ನೀಡುತ್ತದೆ.ಸೆಕುಂಡುಗಳ ಮಾತ್ರದಲ್ಲಿ ನಾವು ಸಾವಿರಾರು, ಲಕ್ಷಾಂತರ ಮಂದಿಯನ್ನು ತಲುಪಬಹುದು. ಆದರೆ, ನಾವು ಈ ತಾಣಗಳನ್ನು ಎಷ್ಟು ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಬಳಸುತ್ತೇವೆ ಎಂಬುದು ಪ್ರಶ್ನೆ.

ವಿಷಯಕ್ಕೆ ಹೊರತಾದ ವಿಚಾರಗಳ ಅನಾವಶ್ಯಕ ಚರ್ಚೆ, ಹೊರೆ ಎನಿಸುವಷ್ಟು ಮಾಹಿತಿಗಳ ಹಂಚುವಿಕೆ, ಅಪ್ರಸ್ತುತ ಹಾಗೂ ದೃಝೀಕರಿಸದ ವಿಚಾರಗಳನ್ನು ಜಾಲತಾಣಗಳಲ್ಲಿ ಹರಿಯಬಿಡುವುದು ಇತ್ಯಾದಿ ಕಾರಣಗಳಿಂದ ಜಾಲತಾಣಗಳೂ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ ಮಾತ್ರವಲ್ಲ. ಜನರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಮಾಹಿತಿ ಸಿಕ್ಕದೆ ಮತ್ತಷ್ಟು ಗೊಂದಲಕ್ಕೊಳಗಾಗುತ್ತಿದ್ದಾರೆ.

1)    ಒಂದು ವಾಟ್ಸಪ್ಪು ಗ್ರೂಪನ್ನೇ ತೆಗೆದುಕೊಳ್ಳೋಣ. ಪಾಪ ಓರ್ವ ಅಡ್ಮಿನ್ ಯಾವುದೋ ಒಂದು ವಿಚಾರದ ಪ್ರಸಾರ ಅಥವಾ ತಲಪುವಿಕೆಗೆ ಅಂತ ಒಂದು ಗ್ರೂಪು ಮಾಡಿರುತ್ತಾನೆ. ಆದರೆ ಈ ಆಶಯಗಳನ್ನು ಅರ್ಥ ಮಾಡಿಕೊಳ್ಳದೆ ನಂತರ ಗ್ರೂಪಿನ ಸದಸ್ಯರು ತಮಗಿಷ್ಟ ಬಂದ ವಿಚಾರಗಳನ್ನು ಗ್ರೂಪಿನಲ್ಲಿ ಹಾಕುವುದು, ಗ್ರೂಪಿನ ಆಶಯಗಳಿಗೆ ವಿರುದ್ಧವಾದ ಸಂಗತಿಗಳನ್ನು ಹಂಚಿಕೊಳ್ಳುವುದು, ಹಾಕಿದ ವಿಚಾರಗಳನ್ನೇ ಹಾಕುವುದು, ಇತರ ಸದಸ್ಯರ ಭಾವನೆಗಳಿಗೆ ಗೌರವ ಕೊಡದೆ ತಮ್ಮ ಮೂಗಿನ ನೇರಕ್ಕೆ ಮಾತನಾಡಿ ಗ್ರೂಪಿನ ಶಾಂತಿ ಕದಡುವುದು ಇತ್ಯಾದಿ ಪ್ರವೃತ್ತಿಗಳನ್ನು ತೋರಿಸುತ್ತಿರುತ್ತಾರೆ. ಒಂದು ಹಂತದಲ್ಲಿ ಇದು ಗ್ರೂಪಿನ ಉದ್ದೇಶವನ್ನೇ ಹಾಳು ಮಾಡುವುದಲ್ಲದೆ ಇಂಥವರ ನಿಯಂತ್ರಣ ಗ್ರೂಪಿನ ಅಡ್ಮಿನ್ ಗಳಿಗೆ ತಲೆನೋವಾಗಿ ಬಿಡುತ್ತದೆ.

 

2)    ನಾವು ಇಂತಹ ಸಂದರ್ಭ ಜವಾಬ್ದಾರಿಯುತವಾಗಿ ಚಿಂತಿಸಬೇಕು. ವಾಟ್ಸಪ್ ಗ್ರೂಪಿನಲ್ಲಿ ಗರಿಷ್ಠ 257 ಮಂದಿಯ ಸೇರ್ಪಡೆಗೆ ಅವಕಾಶ ಇದೆ. ನಾನೊಂದು ವಿಚಾರವನ್ನು ಪೋಸ್ಟ್ ಮಾಡಿದರೆ ಅದರ ಪರಿಣಾಮ ಏನು, ಎಷ್ಟು ಮಂದಿಯನ್ನು ತಲಪುತ್ತದೆ, ಗ್ರೂಪು ಅನುಚಿತವಾಗಿದೆಯಾ, ಬಳಸಿದ ಭಾಷೆ ಸಭ್ಯವಾಗಿದೆಯಾ ಎಂದೆಲ್ಲ ಯೋಚಿಸಿ ವಿಚಾರಗಳನ್ನು ಹಂಚಿಕೊಳ್ಳಬೇಕು. ಅಡ್ಮಿನ್ ಗಳ ಮಾತಿಗೆ ಬೆಲೆ ಕೊಟ್ಟು ಗ್ರೂಪಿಗೆ ಬೇಕಾದ್ದು ಮಾತ್ರ ಹಂಚಿಕೊಳ್ಳಬೇಕೆ ವಿನಃ ನಮ್ಮ ಪ್ರಚಾರಕ್ಕೆ, ಸ್ವಾರ್ಥಕ್ಕೋಸ್ಕರ ಯಾರೋ ಕಟ್ಟಿದ ಗ್ರೂಪನ್ನು ಬಳಸಬಾರದು. ನಮ್ಮ ಅನಾವಶ್ಯಕ ಮೆಸೇಜು ಇತರ 256 ಮಂದಿಗೂ ಉಪದ್ರ ಮಾಡುತ್ತದೆ ಎಂಬ ಪ್ರಜ್ಞೆ ಬೇಕು

3)    ಇನ್ನೊಂದು ಜಾಲತಾಣದ ಪಿಡುಗು ಸುಳ್ಳು ಸುದ್ದಿ ಪ್ರಸಾರ ಹಾಗೂ ಅಸಭ್ಯ ಭಾಷೆಯ ಬಳಕೆ. ಯಾರೋ ನಿಧನರಾದರಂತೆ, ನಾಳೆ ಶಾಲೆಗಳಿಗೆ ರಜೆಯಂತೆ ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನು ಯಾರೋ ವಿಘ್ನಸಂತೋಷಿಗಳು ಎಲ್ಲಿಯೋ ಕುಳಿತು ಜಾಲತಾಣಕ್ಕೆ ಹರಿಯಬಿಡುತ್ತಾರೆ. ಬಹಳಷ್ಟು ಮಂದಿ ಇಂತಹ ಪೋಸ್ಟುಗಳನ್ನು ಫೇಸ್ಬುಕ್ಕು ಗೋಡೆಗಳಲ್ಲಿ, ವಾಟ್ಸಪ್ ಸ್ಟೇಟಸ್ಸುಗಳಲ್ಲಿ, ಗ್ರೂಪುಗಳಲ್ಲಿ ಹಂಚಿಕೊಳ್ಳುವಾಗ, ಫಾರ್ವರ್ಡ್ ಮಾಡುವಾಗ ಅದರ ಸತ್ಯಾಸತ್ಯತೆಯನ್ನು ವಿವೇಚಿಸುವುದಿಲ್ಲ. ಇವುಗಳನ್ನು ಓದಿದವರೂ ಸತ್ಯವೆಂದೇ ನಂಬುತ್ತಾರೆ ಇದು ತಪ್ಪು. ಮುಖ್ಯ ವಾಹಿನಿಯ ಮಾಧ್ಯಮಗಳಾದ ಟಿ.ವಿ.., ರೇಡಿಯೋ, ಪತ್ರಿಕೆಗಳಿಗೆ ಸುದ್ದಿಗಳನ್ನು ಸಂಗ್ರಹಿಸಲು, ನಿರೂಪಿಸಲು ಒಂದು ವ್ಯವಸ್ಥೆ ಇರುತ್ತದೆ, ಆದ್ದರಿಂದ ಅವುಗಳ ವಿಶ್ವಾಸಾರ್ಹತೆ ಹೆಚ್ಚು. ಆದರೆ ಜಾಲತಾಣಗಳಲ್ಲಿ ಹೆಸರು ವಿಳಾಸವಿಲ್ಲದೆ ಬರುವ ಸಂಗತಿಗಳ ಸತ್ಯಾಸತ್ಯತೆ ವಿಮರ್ಶಿಸದೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದು ಎಷ್ಟೋ ಮಂದಿಗೆ ನಾವು ಸುಳ್ಳು ಮಾಹಿತಿ ನೀಡಿದ ಹಾಗಾಗುತ್ತದೆ ಎಂಬುದನ್ನು ಮರೆಯಬಾರದು.

4)    ಜಾಲತಾಣಗಳಲ್ಲಿ ವಿಮರ್ಶೆ ಮಾಡುವಾಗ, ಚರ್ಚೆ ಮಾಡುವಾಗ, ವಿಚಾರಗಳನ್ನುಹಂಚಿಕೊಳ್ಳುವಾಗ ವೈಯಕ್ತಿಕ ಸ್ವರೂಪದ ನಿಂದನೆ, ಕೀಳು ಭಾಷೆ ಪ್ರಯೋಗ, ಖಾಸಗಿ ವಿಚಾರಗಳ ಪ್ರಸ್ತಾಪ ಇವೆಲ್ಲ ಸೂಕ್ತವಲ್ಲ. ಇಂತಹ ಬೆಳವಣಿಗೆಗಳು ಮನಸ್ಸನ್ನು ಅರಳಿಸುವುದಿಲ್ಲ, ಕೆರಳಿಸುತ್ತವೆ. ಜೊತೆಗೆ ನಾವು ಬಳಸುವ ಭಾಷೆ ನಮ್ಮ ಸಂಸ್ಕೃತಿಯನ್ನೂ ತೋರಿಸುತ್ತದೆ ಎಂಬ ಪ್ರಜ್ಞೆ ಬೇಕು.

5)    ಜಾಲತಾಣಗಳಲ್ಲಿ ಸಹಸ್ರಾರು ಪೋಸ್ಟುಗಳು, ಕವನಗಳು, ನುಡಿಗಟ್ಟುಗಳು ಹರಿದು ಬರುತ್ತಲೇ ಇರುತ್ತವೆ. ನಾವದನ್ನು ಓದಿ ಫಾರ್ವರ್ಡ್ ಮಾಡುವ ಅಥವಾ ನಮ್ಮ ಸ್ಟೇಟಸ್ಸುಗಳಲ್ಲಿ ಹಂಚಿಕೊಳ್ಳುವ ಆಯ್ಕೆ ಇರುತ್ತದೆ. ಇಂತಹ ಸಂದರ್ಭ ಮೂಲ ಲೇಖಕರ ಹೆಸರು ಕ್ರಾಪ್ ಮಾಡುವುದು, ಎಡಿಟ್ ಮಾಡಿ ನಮ್ಮ ಹೆಸರಿನಲ್ಲಿ ಹಂಚಿಕೊಳ್ಳುವುದು ಅಥವಾ ಅನಾಮಧೇಯ ಬರಹವಾಗಿಸಿ ಫಾರ್ವರ್ಡ್ ಮಾಡುವುದು ನೈತಿಕವಾಗಿ ತಪ್ಪು, ಮೂಲ ಲೇಖಕರಿಗೆ ನಾವು ತೋರುವ ಅಗೌರ್ವ ಮಾತ್ರವಲ್ಲ. ಕೃತಿ ಚೌರ್ಯ ಎಂಬುದು ಕಾನೂನು ದೃಷ್ಟಿಯಲ್ಲೂ ಅಪರಾಧವೂ ಹೌದು ಎಂಬುದು ನೆನಪಿರಲಿ.

ನಮ್ಮ ದೇಶದಲ್ಲಿ ಮೊಬೈಲ್ ಜಾಲ್ತಿಗೆ ಬಂದು ಎರಡು ದಶಕ ಆಗುತ್ತಾ ಬಂತು. ಜಾಲತಾಣಗಳು ಜನಪ್ರಿಯವಾಗಿ ಬಹುತೇಕ ಒಂದು ದಶಕ ಕಳೆದಿದೆ. ಇನ್ನೇನೂ ಕೆಲವೇ ತಿಂಗಳಲ್ಲಿ ಭಾರತಕ್ಕೂ ಅತಿ ವೇಗದ 5ಜಿ ಮೊಬೈಲ್ ಸಂಪರ್ಕ ಕಾಲಿಡಲಿದೆ. ಹೀಗಿರುವಾಗ ಈ ಮೊಬೈಲು, ಅಂತರ್ಜಾಲ ಸಂಪರ್ಕ ಹಾಗೂ ಜಾಲತಾಣಗಳ ವರ್ತುಲ ಇವು ಬದುಕಿಗೆ ಪೂರಕ ಹೊರತು ಇವುಗಳೇ ಬದುಕು ಎಂಬ ಭ್ರಮೆ ಇರಬಾರದು.

 

ಏನೋ ಮೆಸೇಜ್ ಚೆಕ್ ಮಾಡಲು ಹೋದವರು ಗಂಟೆಗಟ್ಟಲೆ ಚಾಟಿಂಗಿನಲ್ಲಿ ಮುಳುಗುವುದು, ಎಲ್ಲೋ ಫೇಸ್ಬುಕ್ಕು ಚರ್ಚೆಯಲ್ಲಿ ಮಾತನಾಡಲು ಹೋಗಿ ಗಂಟೆಗಟ್ಟಲೆ ಇನ್ನೇನನ್ನೋ ನೋಡುತ್ತಾ ಬಾಕಿ ಆಗುವುದು, ಆನ್ ಲೈನ್ ಗೇಂಗಳು, ವಿಡಿಯೋ ಗೇಂಗಳಲ್ಲಿ ಮುಳುಗಿ ಓದು, ಬರಹ, ನಿತ್ಯದ ದಿನಚರಿಗಳನ್ನು ಮರೆತು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗುವುದು ಇವೆಲ್ಲ ಅನಾರೋಗ್ಯಕರ ಬೆಳವಣಿಗೆಗಳು. ನಮಗೋಸ್ಕರ ಮೊಬೈಲ್ ಇದೆಯೇ ವಿನಃ, ಮೊಬೈಲಿಗೋಸ್ಕರ ನಾವಿಲ್ಲ ಎಂಬುದು ನೆನಪಿರಲಿ. ಆಫ್ ಲೈನ್ ಆದಾಕ್ಷಣ ಏನೋ ಕಳೆದುಕೊಂಡ ಹಾಗಾಗುವುದು, ಪದೇ ಪದೇ ಸ್ಟೇಟಸ್ಸನ್ನು ಎಷ್ಟು ಮಂದಿ ನೋಡಿದರು ಎಂದು ಪರೀಕ್ಷಿಸುವ ಆಸೆ ಅದುಮಿಡಲು ಆಗದೇ ಇರುವುದು, ಎಲ್ಲಿಗೇ ಹೋಗಲಿ ಏನೇ ಮಾಡಲಿ ತಕ್ಷಣಕ್ಕೆ ಸೆಲ್ಫೀ ತೆಗೆದು ಕಂಡ ಕಂಡ ಜಾಲತಾಣಗಳಲ್ಲಿ ಇದ್ದ ಸ್ಥಿತಿಯಲ್ಲೇ ಹಾಕಬೇಕೆಂಬ ಮನಃಸ್ಥಿತಿ ಇದೆಯಲ್ಲ ಅದು ನಮ್ಮ ಮೇಲಿನ ನಿಯಂತ್ರಣವನ್ನು ನಮ್ಮಿಂದಲೇ ಕಸಿಯುತ್ತದೆ. ತಂತ್ರಜ್ಞಾನವನ್ನು ಅಗತ್ಯಕ್ಕೆ ಬೇಕಾದಷ್ಟೇ ಹೊತ್ತು, ಅಗತ್ಯವಿದ್ದಷ್ಟು ಮಾತ್ರ ಬಳಸಿದರೆ ಯಾವತ್ತೂ ಹೊರೆ ಆಗುವುದಿಲ್ಲ. ಇದರ ಹೊರತು ಜಾಲತಾಣ, ಮೊಬೈಲ್ ಹೊರೆ, ಒತ್ತಡ ಅಂತ ಅನ್ನಿಸಿದರೆ ಅದಕ್ಕೇ ನಮ್ಮ ನಡವಳಿಕೆಯಲ್ಲಿರುವ ಲೋಪವೇ ಕಾರಣ. ಅದನ್ನು ನಾವೇ ಸರಿಪಡಿಸಬೇಕು ಅಷ್ಟೇ.

 

-ಕೃಷ್ಣಮೋಹನ ತಲೆಂಗಳ

(ಮಂಗಳೂರು ಆಕಾಶವಾಣಿಯಲ್ಲಿ ನ.13,2020ರಂದು ಪ್ರಸಾರವಾದ ಮಾತುಗಳು)

 

No comments: