ಸೆಕುಂಡುಗಳು ಕಟ್ಟಿಕೊಡುವ ಸ್ಟೇಟಸ್ಸುಗಳು ಮತ್ತು ಅವಸರದಲ್ಲಿ ಕಂಡುಕೊಳ್ಳುವ ಮನಸ್ಸುಗಳು...!

ನಮಗೊಂದು ಸಮಯದ ಮಿತಿ ಅಥವಾ ಗುರಿಗೊಂದು ಚೌಕಟ್ಟು ವಿಧಿಸಿದಾಗ ನಮ್ಮ ಕ್ರಿಯೆಯ ಧಾಟಿಯೂ, ಏಕಾಗ್ರತೆಯ ಶೈಲಿಯೂ ಬದಲಾಗುತ್ತದೆ, ಗಮನಿಸಿದ್ದೀರ? ಉದಾಹರಣೆಗೆ: ಅನ್ ಲಿಮಿಟೆಡ್ ಕರೆ ಸೌಲಭ್ಯ ಇರುವಾಗ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡಿದರೂ ಹೇಳಬೇಕಾದ ಪ್ರಧಾನ ಅಂಶವನ್ನು ಎಷ್ಟೋ ಸಲ ಹೇಳಿಯೇ ಇರುವುದಿಲ್ಲ. ಅಥವಾ ಹೇಗೂ ಫ್ರೀ ಕರೆ ತಾನೆ ಅಂತ ಮಾತನಾಡುತ್ತಾ ಅದೂ ಇದೂ ಮಾತನಾಡಿ ಯಾವುದಕ್ಕೆ ಕರೆ ಮಾಡಿದ್ದೇವೆಯೋ ಈ ವಿಚಾರವೇ ಒಂದೊಮ್ಮೆ ಬದಿಗೆ ಸರಿದಿರುತ್ತದೆ. ಅದೇ, ಮೂರೇ ನಿಮಿಷದಲ್ಲಿ ಎಸ್ ಟಿಡಿ ಕರೆಗೆ ಅವಕಾಶ, ನಂತರ ತನ್ನಷ್ಟಕ್ಕೇ ಕರೆ ತುಂಡಾಗುತ್ತದೆ ಎಂಬಂಥ ಪರಿಸ್ಥಿತಿ ಇದ್ದಾಗ, ಹೇಳಬೇಕಾದ ಅಷ್ಟೂ ವಿಚಾರ ಮೂರೇ ನಿಮಿಷದಲ್ಲಿ ಪ್ರಸ್ತುತಿಯಾಗಿರುತ್ತದೆ! ನಮ್ಮ ವಾಟ್ಸಪ್ಪು ಸ್ಟೇಟಸ್ಸುಗಳೂ ಅಷ್ಟೇ...

 

...

 

ಕೊರೋನಾ ಶುರುವಾಗುವ ಮೊದಲು ವಾಟ್ಸಪ್ಪು ಸ್ಟೇಟಸ್ಸಿನ ಅವಧಿ 30 ಸೆಕೆಂಡು ಇತ್ತು. ನಂತರ ನಡುವೆ ಕೆಲ ಕಾಲ ಅದನ್ನು 15 ನಿಮಿಷಗಳಿಗೆ ಇಳಿಸಲಾಯ್ತು. ನಂತರ ಪುನಃ ಅವಧಿ 30 ಸೆಕೆಂಡಿಗೆ ಏರಿಕೆ ಕಂಡಿತು. ಇಲ್ಲಿ ಗಮನಿಸಬೇಕಾದ ಅಂಶವಿದೆ. 30 ಸೆಕೆಂಡುಗಳ ಅವಧಿಯ ಸ್ಟೇಟಸ್ಸಿಗೆ ಒಗ್ಗಿ ಹೋಗಿದ್ದ ಮನಸ್ಸುಗಳಿಗೆ 15 ಸೆಕೆಂಡಿನಲ್ಲೇ ಹೇಳಬೇಕಾದ್ದನ್ನು ಹೇಳುವುದಕ್ಕೆ ಅವಕಾಶ ಸಿಕ್ಕಾಗ ತುಂಬ ಕಿರಿಕಿರಿ ಅನ್ನಿಸುತ್ತಾ ಇತ್ತು. ಆದರೂ ವಿಡಿಯೋ ಪ್ರೋಮೋಗಳು, ಪ್ರವಾಸದ ವಿಡಿಯೋ ತುಣುಕುಗಳು, ಟಿಕ್ ಟಾಕ್ ಮಾದರಿಯ ವಿಡಿಯೋಗಳು, ಸಂದೇಶಗಳೆಲ್ಲ 15 ಸೆಕೆಂಡುಗಳಿಗೆ ಟ್ರಿಂ ಆಗ ತೊಡಗಿದವು. ನಂತರ ಪುನಃ 30 ಸೆಕೆಂಡಿಗೆ ಸ್ಟೇಟಸ್ಸಿನ ಅವಧಿ ಹೆಚ್ಚಿತು ನೋಡಿ, ಆಗ ಜನರಿಗೆ ದೊಡ್ಡದೊಂದು ಅವಧಿ ಸಿಕ್ಕಂಥ ನಿರಾಳ ಭಾವ ಆವರಿಸಿತು. ಅಷ್ಟಕ್ಕೂ ಸಿಕ್ಕಿದ್ದು ಕೇವಲ ಹದಿನೈದೇ ಹೆಚ್ಚುವರಿ ಸೆಕೆಂಡುಗಳು. ಅದು 15 ಇರಲಿ, 30 ಇರಲಿ ಮನಸ್ಸು ಅದಕ್ಕೆ ಒಗ್ಗಿರುತ್ತದೆ. ಹೇಳಬೇಕಾದ್ದನ್ನು ಅದೇ ಅವಧಿಗೆ ಮನಸ್ಸು ಸಿದ್ಧಪಡಿಸಿರುತ್ತದೆ. ಇದು, ಮಿತಿ ಸಿಕ್ಕಾಗ ಅದರೊಳಗೆ ಹೇಳುವುದು, ಮಾಡುವುದು ಸಂಭವಿಸುವ ಚೌಕಟ್ಟಿಗೆ ಉದಾಹರಣೆ.

 

....

 

ಡೆಡ್ ಲೈನ್ ಸಿಕ್ಕದೆ ಅಸೈನ್ ಮೆಂಟುಗಳು ಕಾಲೇಜಿನಲ್ಲಿ ಸಲ್ಲಿಕೆ ಆಗದಿರುವುದು, ಕೊನೆಯ ದಿನದ ಬಳಿಕ ದಂಡದ ಎಚ್ಚರಿಕೆ ನೀಡದ ಹೊರತು ಶುಲ್ಕ ಪಾವತಿ ಆಗದೇ ಹೋಗುವುದು, ಶಿಕ್ಷೆಯ ಎಚ್ಚರಿಕೆಯ ಹೊರತು ಯಾವುದೇ ಹೊಸ ಕಡ್ಡಾಯದ ಯೋಜನೆಗಳಿಗೆ ಒಳಪಡಲು ಜನ ಮನಸ್ಸು ಮಾಡದೇ ಇರುವುದು ಇವುಗಳು ಇಂಥಹದ್ದೇ ವಾಟ್ಸಪ್ಪು ಸ್ಟೇಟಸ್ಸಿಗೆ ಒಗ್ಗಿ ಹೋದ ಮನಃಸ್ಥಿತಿಯ ವಿಸ್ತೃತ ರೂಪಗಳು ಅಷ್ಟೇ... ನೀನು ಯಾವುದೇ ಒಂದು ವಿಷಯದ ಬಗ್ಗೆ 10 ನಿಮಿಷ ಭಾಷಣ ಮಾಡು ಅಂದರೆ ಮಹಾನ್ ಮಾತುಗಾರನೂ ಕಕ್ಕಾಬಿಕ್ಕಿಯಾಗಲೂ ಬಹುದು. ಅದರ ಬದಲು ಇಂಥದ್ದೇ ವಿಚಾರದ ಬಗ್ಗೆ 10 ನಿಮಿಷ ಮಾತನಾಡು ಅಂದರೆ ಆತ ಸಲೀಸಾಗಿ ಭಾಷಣ ಮಾಡಲೂಬಹುದು. ಕಾರಣ ಸ್ಪಷ್ಟ... ಅಲ್ಲೊಂದು ಮಾರ್ಗವಿದೆ, ಅದರತ್ತ ಚಿತ್ತ ಹರಿಸಲು ಅವಕಾಶ ಸಿಕ್ಕಿದೆ, ಜೊತೆಗೆ ಏನೂ ಅಲ್ಲದಿರುವದಕ್ಕಿಂತ ಏನಾದರೂ ಇದ್ದರೆ ಚಿಂತನೆಗಳು ಹೆಚ್ಚು ಸ್ಪಷ್ಟತೆ ಪಡೆಯುವ ಕಾರಣ ಸಿಕ್ಕಿದ ಅವಧಿ ಹಾಗೂ ಸಿಕ್ಕಿದ ವಿಷಯದ ಬಗ್ಗೆಯೇ ಎಲ್ಲ ಜ್ಞಾನೇಂದ್ರಿಯಗಳೂ ಕೇಂದ್ರೀಕೃತವಾಗಿ ಕೆಲಸ ಮಾಡಿ ಮಾಡುವುದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತವೆ...

 

......

 

ನಿನಗೆ ಖುಷಿ ಬಂದಾಗ ಮಾಡು, ಪುರುಸೊತ್ತಿದ್ದಾಗ ನೀಡು ಎಂದರೆ ಆ ಖುಷಿಯೂ, ಪುರುಸೊತ್ತೂ ಸಿದ್ದಿಸುವುದೇ ಇಲ್ಲ. ಅದರ ಬದಲು ಇಂದು ಸಂಜೆಯ ಮೊದಲು ಕೊಡಲೇಬೇಕು, ಇನ್ನರ್ಧ ಗಂಟೆಯಲ್ಲಿ ನನಗದು ಬೇಕು ಅಂದಾಗ ಎಷ್ಟೋ ದಿನಗಳಿಂದ ಆಗದೇ ಇದ್ದದ್ದೂ ಸರ್ಕಸ್ಸು ಮಾಡಿಯಾದರೂ ಪೂರೈಸಿಬಿಡುತ್ತದೆ... ಯಾವಾಗ, ಹೇಗೆ ಆಗಬೇಕೆಂಬ ಸೂಚನೆ ಬಂದಾಗ, ನಮ್ಮ ಮನಸ್ಸು ಅದಕ್ಕೆ ಒಗ್ಗಿಕೊಂಡಾಗ, ಅನಿವಾರ್ಯತೆ ಎಂಬುದು ಆವರಿಸಿಕೊಂಡಾಗ ಜಾಢ್ಯ ತೊಲಗಿ ಆಗಬೇಕಾದ್ದರ ಕಡೆಗೇ ಯೋಚಿಸಲು ಶುರು ಮಾಡುತ್ತದೆ. ಈಜು ಬಾರದವನೂ ನೀರಿಗೆ ಬಿದ್ದಾಗ ತನ್ನನ್ನು ತಾನು ಉಳಿಸಿಕೊಳ್ಳಲು ಕೈಕಾಲು ಬಡಿಯಲೇಬೇಕಾಗುತ್ತದೆ... ಅನಿವಾರ್ಯತೆ ಸೃಷ್ಟಿಸುವ ಕರ್ಮವದು... ಉತ್ಸಾಹಕ್ಕೂ, ವಿಷಾದಕ್ಕೂ, ಔದಾಸೀನ್ಯಕ್ಕೂ, ಸಕ್ರಿಯ ಬುದ್ಧಿಮತ್ತೆಗೂ ಮನಃಸ್ಥಿತಿಯೇ ಕಾರಣ ಎಂಬುದನ್ನು ಸ್ಟೇಟಸ್ಸಿನ ಚೌಕಟ್ಟು ಸಾರಿ ಹೇಳುತ್ತವೆ...

 

......

 

ಒಂದು ಕಿರುಚಿತ್ರದ ಬಗೆಗಿನ ವಿಡಿಯೋ ಪ್ರೋಮೋವನ್ನು ವಾಟ್ಸಪ್ಪಿನ ಸ್ಟೇಟಸ್ಸಿಗೆ ಹಾಕಬೇಕಾದರೆ ಅಲ್ಲಿ ಹದಿನೈದೇ ಸೆಕೆಂಡು ಸಿಗುವ ಸಂದರ್ಭ ನಾವು ಹೇಳಬೇಕಾದ್ದು ಅದೇ ಅವಧಿಯಲ್ಲಿ ಹೇಳಿ ಮುಗಿಯುತ್ತದೆ. ಹೇಳಲು ಸಿಕ್ಕುವ ಅವಧಿ ಇನ್ನೂ 15 ಸೆಕೆಂಡು ಜಾಸ್ತಿ ಸಿಕ್ಕಾಗ ಮತ್ತಷ್ಟು ಹೇಳುವ ತುಡಿತ ಹುಟ್ಟುತ್ತದೆ. ಪತ್ರಿಕೆಗಳ ವರದಿ, ಕಥೆ, ಲೇಖನಗಳೂ ಅಷ್ಟೇ... ಇಂತಹ ಡೆಡ್ ಲೈನಿನಲ್ಲಿ ಇಷ್ಟೇ ಪದಗಳಲ್ಲಿ ಬೇಕು ಅಂತ ಗಡುವು ವಿಧಿಸಿದಾಗ ಮಾತ್ರ ಅದು ಸ್ಪಷ್ಟವಾಗಿ, ನಿಖರವಾಗಿ ಸಿದ್ಧವಾಗುತ್ತದೆ. ಲಭ್ಯವಿರುವ ಜಾಗದಲ್ಲಿ ಬರಹವೂ ಪ್ರಕಟವಾಗಲು ಸಾಧ್ಯವಾಗುತ್ತದೆ. ಅದರ ಹೊರತು ನಿಮಗೆ ಬೇಕಾದಾಗ ನೀಡಿ ಎಂದು ಬಿಟ್ಟರೆ ಬಹುಶಃ ಅದಕ್ಕೆ ಕಾಲ ಕೂಡಿ ಬರುವುದೂ ನಿಧಾನವಾಗಬಹುದು. ಪದಗಳ ಮಿತಿಯಿಲ್ಲದ ಬರಹ ತಡೆಯಿಲ್ಲದ ವಾಹನದಂತೆ ಎತ್ತೆತ್ತಲೋ ಸವಾರಿ ಹೋಗಲೂ ಬಹುದು. ಬಹಳಷ್ಟು ಸಲ ನಮಗೆ ಗಡುವುಗಳು, ಮಿತಿಗಳು ತಡೆಯಂತೆ ತೋರುತ್ತವೆ. ಆದರೆ ಕ್ಲಪ್ತ ಸಮಯದಲ್ಲಿ ನಮ್ಮನ್ನು ದಡ ಸೇರಿಸುವುದು, ಆಮಿಷಗಳು, ಚಂಚಲತೆಯನ್ನು ನಿವಾರಿಸಿ ಗುರಿಯತ್ತ ಗಮನ ಹರಿಸಲು ನೆರವಾಗುವುದು ಅವುಗಳೇ ಎಂಬುದು ಅರಿವಿಗೆ ಬರುವುದು ಕೆಲಸ ಮುಗಿದಾಗಲೇ!

 

…………………….

ಪ್ರಸ್ತುತಿಗೆ ಮಾತ್ರ ಸಮಯದ ಗಡುವು ಚೌಕಟ್ಟಾದರೆ, ಗ್ರಹಿಕೆ, ಅರಿವು, ಅರ್ಥೈಸಿಕೊಳ್ಳುವಿಕೆಗೆ ಬಳಕೆಯಾಗುವ ವಿವೇಚನೆ ಕೂಡಾ ನಮ್ಮ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ, ಆದರೆ ಬಹಷ್ಟು ಬಾರಿ ನಮಗದು ಅರಿವಿಗೆ ಬರುವುದೇ ಇಲ್ಲ. ಕಂಡ ಹಾಗಿರುವುದಲ್ಲ ಜಗತ್ತು ಎಂಬುದು ಲೋಕಕ್ಕೆ ಗೊತ್ತಿರುವ ಸತ್ಯ. ನಮ್ಮೆದುರಿಗೆ ಕಾಣುವುದು, ಕಾಣುವ ವ್ಯಕ್ತಿಗಳು ನಮ್ಮೆದುರು ಗೋಚರವಾಗಿರುವಂತೆಯೇ ನಿಜ ಬದುಕಿನಲ್ಲೂ ಇರಬೇಕಾಗಿಲ್ಲ. ಅವರನ್ನು ನೇರ ದೃಷ್ಟಿಯಿಂದ ನೋಡುತ್ತಿರುವಷ್ಟೂ ಹೊತ್ತು ನಮ್ಮೊಡನೆ ಮಾತನಾಡುತ್ತಿರುವ ವ್ಯಕ್ತಿಯ ಹಾವಭಾವ, ಸೌಜನ್ಯ, ಚುರುಕು ಮಾತು, ಆಕರ್ಷಿಸುವ ಅಂಗ ಸೌಷ್ಟವ, ವಿಪರೀತ ನಯವಿನಯ ಎಲ್ಲವೂ ನಮ್ಮನ್ನು ಮರಳು ಮಾಡುತ್ತವೆ... ಎಷ್ಟೋ ವ್ಯಕ್ತಿತ್ವಗಳಿಗೆ ನಮ್ಮನ್ನು ಮಾರು ಹೋಗಿಸುತ್ತದೆ. ಅದೇ ವ್ಯಕ್ತಿಯ ಬಗ್ಗೆ ಮೂರನೆಯವರೊಬ್ಬರು ಅವ ಜನ ಸರಿ ಇಲ್ಲ, ಸ್ವಲ್ಪ ಹಾಗೇ... ಅಂತ ಹೇಳಲಿ ನೋಡುವ. ಅಪ್ರಜ್ಞಾಪೂರ್ವಕವಾಗಿಯಾದರೂ ಬಳಿಕ ನಾವು ಅವರನ್ನು ನೋಡುವ ದೃಷ್ಟಿಯೇ ಬದಲಾಗಬಹುದು. ಬದಲಾದ ದೃಷ್ಟಿಯಲ್ಲಿ ನಮಗೆ ಅವರ ಮಾತಿನಲ್ಲಿ ಕೃತ್ರಿಮ, ಅತಿ ಎನಿಸುವ ಹೊಗಳಿಕೆ, ಗಾಳಿಯಲ್ಲಿ ತೇಲಿ ಬಿಡುವಂಥ ಮಾತುಗಳು, ವಿಚಿತ್ರ ಹಾವಭಾವ ಎಲ್ಲ ಒಂದೊಂದಾಗಿ ಅರಿವಿಗೆ ಬರುತ್ತದೆ... ಅದಕ್ಕೇ ಹೇಳುವುದು ಎಲ್ಲ ವಸ್ತುಗಳ ಫೋಟೋ ಸೆರೆ ಹಿಡಿಯಲು ಕ್ಯಾಮೆರಾದಲ್ಲಿ ಇರುವ ಮೂಲ ಮಸೂರ ಸಾಲುವುದಿಲ್ಲ. ಕೆಲವೊಮ್ಮೆ ಹೆಚ್ಚುವರಿ ಲೆನ್ಸು ಅಳವಡಿಸಬೇಕಾಗುತ್ತದೆ ಮತ್ತು ಝೂಮ್ ಮಾಡಿ ಫೋಟೋಗಳನ್ನು ಸೆರೆ ಹಿಡಿಯಬೇಕಾಗುತ್ತದೆ. ವ್ಯಕ್ತಿಗಳೂ ಅಷ್ಟೇ.... ಕೆಲವರ ಆಂತರ್ಯ, ವೈಯಕ್ತಿಕ ನಡವಳಿಕೆ ಝೂಮ್ ಮಾಡಿ ನೋಡಿದಾಗ ಮಾತ್ರ ಕಾಣಿಸುವಂಥದ್ದು, ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಡ್ಡಿದಾಗ ಮಾತ್ರ ಕಾಣಿಸುವ ವೈರಸ್ಸಿನಂತಹ ಸೂಕ್ಷ್ಮಜೀವಿಯ ಹಾಗೆ... ಏನು ಮಾಡೋಣ, ಕೆಲವೊಮ್ಮೆ ವೈರಸ್ಸು ಆವರಿಸಿರುವುದು ಪ್ರಯೋಗಾಲದಲ್ಲಿ ಗೊತ್ತಾಗುವ ಹೊತ್ತಿಗೆ ರೋಗ ಅರ್ಧ ಜೀವವನ್ನೇ ತಿಂದಿರುತ್ತದೆ!

 

…..

 

ಸಂದರ್ಭದ ಸಹಜತೆಯನ್ನು ಕಂಡುಕೊಳ್ಳಲು, ಅರಿತುಕೊಳ್ಳಲು, ಅರ್ಥ ಮಾಡಿಕೊಳ್ಳಲು ಎಷ್ಟು ಬೇಗ ಸಾಧ್ಯವಾಗುತ್ತದೆಯೋ ಅಷ್ಟು ಬೇಗ ನಾವು ಜಾಗೃತರಾಗಿರಲು ಸಾಧ್ಯವಾಗುತ್ತದೆ. ಅದಕ್ಕೆ ನಮ್ಮ ದೃಷ್ಟಿಕೋನ ನೆರವಾಗುತ್ತದೆ. ನಮ್ಮ ಅತಿರೇಕದ ಮುಗ್ಧತೆಯಿಂದ ನಾವು ಮೂರ್ಖರಾಗುವುದು ಇದೆಯಲ್ಲ, ಅದು ದೃಷ್ಟಿಕೋನದ ಸದುಪಯೋಗ ಮಾಡಲಾಗದ ಮೂರ್ಖತನವೇ ಕಾರಣ ಹೊರತು, ಮೂರ್ಖರಾಗಿಸಿದವರದ್ದೇ ಪೂರ್ತಿ ತಪ್ಪು ಅಂತ ಎಲ್ಲ ಸಂದರ್ಭಗಳಲ್ಲಿ ಹೇಳಲಾಗದು.

........

 

ಮುಖತಾ ಭೇಟಿಯೇ ಆಗದ, ವೈಯಕ್ತಿಕ ಒಡನಾಟ ಇಲ್ಲದ ನೂರಾರು ಮಂದಿಯನ್ನು ಪ್ರತಿದಿನ ನಾವು ಕಾಣುವುದು ಜಾಲತಾಣಗಳಲ್ಲಿ. ಅಲ್ಲಿ ಅವರೇ ತೋರಿಸಿಕೊಡುವ ಪ್ರೊಫೈಲ್ ಪಿಕ್ಚರ್ರು, ಡಿಪಿ, ಸ್ಟೇಟಸ್ಸು, ಫೇಸ್ಬುಕ್ ವಾಲ್ ನಲ್ಲಿ ಹಾಕಿಕೊಳ್ಳುವ ಫೋಟೋ, ವಿಡಿಯೋ, ಪೋಸ್ಟುಗಳಿಂದ. ನೆನಪಿಡಿ, ಅದು ಅವರವರೇ ತೋರಿಸಿಕೊಳ್ಳುವಂಥಹ ವ್ಯಕ್ತಿತ್ವ ಅಥವಾ ನಾವಾಗಿ ಕಂಡುಕೊಂಡದ್ದು ಆಗಿರುವುದಲ್ಲ. ಸಮಯದ ಮಿತಿಗೊಳಪಟ್ಟು ಅಷ್ಟರಲ್ಲಿ ಹೇಳಿಕೊಳ್ಳುವ ಅಥವಾ ತೋರಿಸಿಕೊಳ್ಳುವ ಸ್ಟೇಟಸ್ಸು, ಅಷ್ಟೇ ಅವಸರದಲ್ಲಿ ಅದನ್ನು ನೋಡಿ ತನ್ನ ಗ್ರಹಿಕೆಗೆ ತಕ್ಕಂತೆ ಕಂಡುಕೊಳ್ಳುವ ಪ್ರೇಕ್ಷಕ ಈ ನಡುವೆ ಮಿತಿಗಳಾಚೆ ಕಳೆದುಹೋಗಿರುವ ನೈಜ ಚಿತ್ರಣ, ವಾಸ್ತವ ಅಥವಾ ಯಥಾವತ್ತಾದ ವಿಚಾರಗಳು ಎಲ್ಲೋ ಕಳೆದುಹೋಗಿರುತ್ತವೆ. ಇಮೋಜಿ, ಸಿದ್ಧಮಾದರಿಯ ಉತ್ತರಗಳು ಮತ್ತದೇ ಹೆಬ್ಬೆರಳು ಮೇಲೆತ್ತುವ ಅಡ್ಡಗೋಡೆಯ ಮೇಲಿನ ದೀಪದಂಥಹ ಯಾಂತ್ರಿಕ ಪ್ರತಿಕ್ರಿಯೆಗಳ ಆ ಕ್ಷಣದ ಸಿದ್ಧ ಆಹಾರವನ್ನು ತಿಂದ ಮಾದರಿಯ ಸಂವಹನ ವಿಧಾನದ ನಡುವೆ ಅಡಗಿ ಕೂತಿರುವುದು ಅರಿವಿಗೇ ಬರುವುದೇ ಇಲ್ಲ....

 

.........

 

ಆದಾಗ್ಯೂ... ಕಾಲಕ್ಕೆ ತಕ್ಕ ಹಾಗೆ ಬದುಕಲೇ ಬೇಕು. ಸ್ಟೇಟಸ್ಸು ಹೇಳುವ ಸಮಯದೊಳಗೇ ಹೇಳುವುದನ್ನು ಹೇಳಿ ಬಿಡಬೇಕು. ಸಾಧ್ಯವಾದಷ್ಟನ್ನು ಗಂಟುಕಟ್ಟಿ ಅಪ್ಲೋಡ್ ಮಾಡಬೇಕು ಮತ್ತು ಹೇಳುವುದಷ್ಟೂ ನೋಡಿದವರನ್ನು ತಲುಪಬೇಕು ಅದೂ ಕೂಡಾ ಇದ್ದದ್ದು ಇದ್ದ ಹಾಗೆಯೇ... ಮತ್ತೆ 30 ಸೆಕುಡಿನಾಚೆ ಬಾಕಿಯಾದ ವಿಚಾರಗಳನ್ನು ಸ್ಟಾರ್ ಮಾರ್ಕ್ ಹಾಕಿ ವಿವರಿಸಲು ಅವಕಾಶ ಇರುವುದಿಲ್ಲ. ಯಾಕೆ ಗೊತ್ತಾ... 30 ಸೆಕೆಂಡಿನ ಬಳಿಕ ನಿಮ್ಮ ಸ್ಟೇಟಸ್ಸಿನ ವೀಕ್ಷಕ ಇನ್ನೊಬ್ಬರ ಸ್ಟೇಟಸ್ಸಿನ ಹಳಿಯಲ್ಲಿ ಮುಂದೆ ಮುಂದೆ ಹೋಗುತ್ತಾ ಇರುತ್ತಾನೆ...!! ತಿರುಗಿ ನೋಡುವುದಿಲ್ಲ. ಮಾತ್ರವಲ್ಲ, 24 ಗಂಟೆಗಳಲ್ಲಿ ಸ್ಟೇಟಸ್ಸೇ ಬದಲಾಗುತ್ತದೆ... ಈ ಕ್ಷಣ ಬಂದು ಮುಂದಿನ ಹೊತ್ತಿಗೆ ಸುದ್ದಿಯ ದಿಶೆಯನ್ನೇ ಬದಲಿಸುವ ಬ್ರೇಕಿಂಗ್ ನ್ಯೂಸಿನ ಹಾಗೆ!

-ಕೃಷ್ಣಮೋಹನ ತಲೆಂಗಳ (25.11.2020).

No comments: