ಬೆಂಕಿ ಬಿಸಿ ಎಂದು ಸ್ಪರ್ಶಿಸಿಯೇ ತಿಳಿಯಬೇಕಾಗಿಲ್ಲ...!

ಪ್ರತಿದಿನ ಕೊರೋನಾ ಸೋಂಕಿನ ಪ್ರಮಾಣದ ಕುರಿತು ಆರೋಗ್ಯ ಇಲಾಖೆಯಿಂದ ಬರುವ ವರದಿಯ ಪ್ರಕಾರ ತೀವ್ರತೆ ಕಡಿಮೆಯಾಗುತ್ತಿದೆ. ಆದರೆ, ದೇಶದಿಂದ ಕೊರೋನಾ ತೊಲಗಿಲ್ಲ. ಕೊರೋನಾದ ಆತಂಕ ಕಡಿಮೆಯಾಗಿಲ್ಲ. ಕಡಿಮೆಯಾಗಿರುವುದು ಕೊರೋನಾದ ಕುರಿತ ಭಯ ಮಾತ್ರ.

ತನ್ನ ತಲೆ ಮೇಲೆ ತನ್ನದೇ ಕೈ ಅಂತ ಒಂದು ಮಾತಿದೆ. ಈಗಿನ ಪರಿಸ್ಥಿತಿ ಹಾಗೆ. ತನಗೆ ಕೊರೋನಾ ಸೋಂಕದ ಹಾಗೆ ತಾನೇ ಜಾಗ್ರತೆ ಮಾಡಬೇಕು. ಯಾಕಂದರೆ ಕೊರೋನಾ ಬರುತ್ತದೆ ಅಂತ ದೇಶವನ್ನು ತಿಂಗಳುಗಟ್ಟಲೆ ಲಾಕ್ ಡೌನ್ ಮಾಡುವ ಹಾಗಿಲ್ಲ. ಕೊರೋನಾಗೆ ಪ್ರತಿರೋಧ ಶಕ್ತಿಗಳನ್ನು ಕಟ್ಟಿಕೊಡದೆ ಮನೆಯೊಳಗೆ ಕುಳಿತ ತಕ್ಷಣ ವಕ್ಕರಿಸಿರುವ ಕೊರೋನಾ ತೊಲಗುವುದೂ ಇಲ್ಲ. ಹಾಗಾಗಿ ಅನ್ ಲಾಕ್ ಪರ್ವದ ಬೀಜ ಮಂತ್ರವೆಂದರೆ ಕೊರೋನಾ ಜೊತೆ ಬದುಕಲು ಕಲಿಯಬೇಕು...

 

ಆದರೆ, ನಮ್ಮದೊಂದು ಮನಃಸ್ಥಿತಿ ಇದೆ. ಕಡ್ಡಾಯ, ಶಿಕ್ಷಾರ್ಹ, ದಂಡನಾರ್ಹ ಅಂತ ಮಾಡಿದರೆ ಮಾತ್ರ ನಾವು ಗಂಭೀರವಾಗಿ ನಿಯಮಗಳನ್ನು ಪಾಲಿಸುತ್ತೇವೆ. ನಿಯಮಗಳು ಕಡ್ಡಾಯವಲ್ಲದ ಹೊರತು ಅವಕ್ಕೆ ಮರ್ಯಾದೆ ಕೊಡುವುದಿಲ್ಲ. ನಮಗೋಸ್ಕರವೇ ಇರುವ ಹೆಲ್ಮೆಟ್ ಧರಿಸು, ಸಿಗರೇಟ್ ಎಳೆಯಬೇಡ, ವರದಕ್ಷಿಣೆ ಪಡೆಯಬೇಡ ಎಂಬಿತ್ಯಾದಿ ಕಾನೂನುಗಳ ಹಾಗೆ. ನಾಳೆಯಿಂದ ಕರ್ಫ್ಯೂ ಜಾರಿ, ಬೀದಿಗಿಳಿದರೆ ಕಂಡಲ್ಲಿ ಗುಂಡು ಅಂತ ಕಟ್ಟೆಚ್ಚರ ಹೊರಡಿಸಿದರೆ ಎಲ್ಲರೂ ಕಾನೂನಿಗೆ ಮರ್ಯಾದೆ ಕೊಡುತ್ತೇವೆ... ಮತ್ತೆ ಜಾಲತಾಣಗಳಲ್ಲಿ ನೈತಿಕತೆ ಕುರಿತು ದೊಡ್ಡದಾಗಿ ಭಾಷಣ ಬಿಗಿಯುತ್ತೇವೆ.

ಇರಲಿ... ಕೊರೋನಾ ಅನ್ಲಾಕ್ ಬಳಿಕ ನಾನು ಕಂಡ, ಗಮನಿಸಿದ ಕೆಲವು ವೈರುಧ್ಯಗಳು

1)      ಮಾಸ್ಕ್ ಧರಿಸಿ ಮನೆಯಿಂದ ಹೊರಡುತ್ತೇವೆ. ಪೊಲೀಸರನ್ನು ಕಾಣುವ ತನಕ ಅದು ನಮ್ಮ ಗಡ್ಡದ ಮೇಲೆ ಪವಡಿಸಿರುತ್ತದೆ!

2)      ಮಾಸ್ಕ್ ಧರಿಸಿಯೇ ಹೊರಡುತ್ತೇವೆ. ಯಾರಾದರೂ ಮಾತನಾಡಲು ಸಿಕ್ಕಾಗ ನಮ್ಮ ಮಾತು ಅವರಿಗೆ ಕೇಳುವುದಿಲ್ಲ ಎಂಬ ಕಾರಣಕ್ಕೆ ಮಾಸ್ಕ್ ಜಾರಿಸಿ ಮಾತನಾಡುತ್ತೇವೆ! ಪಾಪ ಅವರಿಗೆ ಬೇಸರ ಆಗಬಾರದು ಅಂತ.

3)      ಬಸ್ಸಿನಲ್ಲಿ ಜನ ಮೈಮೇಲೆ ಬಿದ್ದುಕೊಂಡು, ನಿಂತುಕೊಂಡು, ನೇತಾಡಿಕೊಂಡು ಪ್ರಯಾಣಿಸುತ್ತಾರೆ, ಆಗ ಮಾಸ್ಕ್ ನ ಸ್ಥಿತಿ ಹೇಳಿ ಪ್ರಯೋಜನ ಇಲ್ಲ. ಆದರೆ ಸ್ವಂತ ಕಾರಿನಲ್ಲಿ ಒಬ್ಬನೇ ವ್ಯಕ್ತಿ ಪ್ರಯಾಣಿಸುತ್ತಿದ್ದರೂ ಆತ ಮಾಸ್ಕ್ ಧರಿಸಿರಬೇಕು, ಇಲ್ಲವಾದರೆ ದಂಡ ವಿಧಿಸಲಾಗುತ್ತದೆ.

4)      ಕೊರೋನಾವೇ ಇಲ್ಲವಂತೆ, ಎಲ್ಲವೂ ಬೋಗಸ್ ಅಂತೆ, ಅದು ವೈದ್ಯಕೀಯ, ರಾಜಕೀಯ ಲಾಬಿಯಂತೆ ಎಂಬ ವಿಚಾರಗಳು ಬಹುಬೇಗ ವೈರಲ್ ಆಗುತ್ತವೆ. ಕೊರೋನಾವನ್ನು ಎದುರಿಸಿ ಗುಣಮುಖರಾಗಿ ಬಂದವರು (ಗುಣವಾಗದೇ ಇದ್ದವರು ಹೇಳಲು ಈಗ ಜೊತೆಗಿಲ್ಲವಲ್ಲ) ತಮ್ಮ ಅನುಭವಗಳನ್ನು ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ, ಇಂತಹ ಪೋಸ್ಟುಗಳು ವೈರಲ್ ಆಗುವುದೇ ಕಮ್ಮಿ!

5)      ಇಂದಿಗೂ ಬಹಳಷ್ಟು ಮಂದಿ ಕೊರೋನಾ ಎಂಬುದು ಒಂದು ಭ್ರಮೆ ಹಾಗೂ ಅದು ನನಗಂತೂ ಬರಲು ಸಾಧ್ಯವೇ ಇಲ್ಲ ಅಂತ ಬಲವಾಗಿ ನಂಬಿದ್ದಾರೆ.

6)      ಇತರ ವಾಣಿಜ್ಯೋದ್ಯಮಗಳು ಶುರುವಾದ ರೀತಿ ಪ್ರವಾಸೋದ್ಯಮವೂ ಶುರುವಾಗಿದೆ. ಇದೇ ಕಾರಣಕ್ಕೆ ವಾರಾಂತ್ಯಗಳಲ್ಲಿ ಗಿರಿಧಾಮಗಳಲ್ಲಿ ಜನ ಮುಗಿಬೀಳುತ್ತಿದ್ದಾರೆ. ಹೊರಗಡೆ ಧಾರಾಳವಾಗಿ ಆಹಾರ ತಿನ್ನುತ್ತಾರೆ, ಸಮುದ್ರದಲ್ಲಿ ಗುಂಪಿನ ನಡುವೆ ಈಜಾಡುತ್ತಾರೆ, ಸ್ನಾನ ಮಾಡುತ್ತಾರೆ, ದೇವಸ್ಥಾನಗಳಲ್ಲಿ ನೂಕು ನುಗ್ಗಲಿನಲ್ಲೇ ತೀರ್ಥ ಪ್ರಸಾದ ಸ್ವೀಕರಿಸುತ್ತಾರೆ. ಐದಾರು ತಿಂಗಳು ಕೊರೋನಾಗಾಗಿ ಕಟ್ಟಿಕೊಂಡ ನಿಷ್ಠೆ ಎರಡು ತಿಂಗಳ ಅವಧಿಯಲ್ಲಿ ಮಣ್ಣುಪಾಲಾಗುತ್ತಿದೆ. ಕೊರೋನಾ ತಗಲುವ ಆತಂಕ ಏಪ್ರಿಲ್, ಮೇಯಲ್ಲಿ ಇದ್ದಷ್ಟು ಅಪಾಯ ಈಗಲೂ ಇದೆ ಎಂಬ ಸರಳ ಸತ್ಯ ನಮ್ಮ ತಲೆಗೆ ಹೋಗುತ್ತಿಲ್ಲ.

ಒಂದೋ ಆರು, ಇಲ್ಲವೇ ಮೂರು ಎಂಬಂಥ ಮನಃಸ್ಥಿತಿ ತುಂಬ ಅಪಾಯಕಾರಿ. ಕೊರೋನಾ ಬಂತೆಂದು ಮನೆಯೊಳಗೆ ಕೂರುವ ಹಾಗಿಲ್ಲ ನಿಜ. ಆದರೆ ಹೊರಗಡೆ ಓಡಾಡುವಾಗಲೂ ಸಾಕಷ್ಟು ಜಾಗ್ರತೆ ವಹಿಸಲು ಇಂದಿಗೂ ಅವಕಾಶ ಇದೆ. ಓಡಾಟ, ಪ್ರಯಾಣ, ಪ್ರವಾಸದ ಸಂದರ್ಭವೂ ಸಾಕಷ್ಟು ಸ್ವಂತ ವಾಹನಕ್ಕೆ ಆದ್ಯತೆ ನೀಡಬಹುದು, ಸ್ವಂತ ವಾಹನ ಇಲ್ಲದ ಸಂದರ್ಭ ಮಾಸ್ಕ್ ಧಾರಣೆ ಮರೆಯದೆ, ಜನಜಂಗುಳಿ ನಡುವೆ ಗರಿಷ್ಠ ಮಟ್ಟದಲ್ಲಿ ಸಿಲುಕದೆ, ಸಾರ್ವಜನಿಕ ಸಂಪರ್ಕಕ್ಕೆ ಬಂದ ಸಂದರ್ಭ ಆಗಿಂದಾಗ್ಗೆ ಕೈತೊಳೆಯುವ ಅವಕಾಶ ಮುಕ್ತವಾಗಿಡುವ ಮೂಲಕ, ಯಾರ ಬಳಿಗೂ ತೀರಾ ಹತ್ತಿರದಿಂದ ಸಂಭಾಷಿಸುವ ಸಾಧ್ಯತೆ ಕಡಿಮೆ ಮಾಡುವ ಮೂಲಕ ದಿನದೂಡಬಹುದು. ಪ್ರವಾಸಕ್ಕೂ ಹೆಚ್ಚು ಜನಜಂಗುಳಿ ಸೇರದ ಸ್ಥಳಗಳನ್ನು ಆರಿಸಬಹುದು, ವಾರಾಂತ್ಯದ ಪ್ರವಾಸಗಳನ್ನು ತಪ್ಪಿಸಬಹುದು... ಇಂತಹ ಸಾಕಷ್ಟು ವಿವೇಚನೆ ಉಳ್ಳ ಕ್ರಮಗಳನ್ನು ಕಾನೂನಿನ ಹೊರತಾಗಿ ನಮಗೆ ನಾವೇ ವಿಧಿಸಿಕೊಂಡರೆ, ಅದೃಷ್ಟವಿದ್ದರೆ ಇನ್ನೂ ಸ್ವಲ್ಪ ಕಾಲ, ಲಸಿಕೆ ಸಿಗುವ ವರೆಗೆ ಕೊರೋನಾದ ಕೈಗೆ ಸಿಗದಂತ ಓಡಾಡಲು ಪ್ರಯತ್ನ ಮಾಡಬಹುದು...

 

ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ ಬರುತ್ತದೆ ಅಂತ ಚಿಕ್ಕಂದಿನಿಂದಲೂ ಜಾಹೀರಾತು ನೋಡುತ್ತಲೇ ಬಂದಿದ್ದೇನೆ. ಆದರೆ ಸಿಗರೇಟ್ ಸೇದುತ್ತಲೇ 70 ವರ್ಷಕ್ಕೂ ಅಧಿಕ ಕಾಲ ಬದುಕಿದವರಿದ್ದಾರೆ. ಹೆಲ್ಮೆಟ್ ಧರಿಸದೆಯೂ ಸುರಕ್ಷಿತವಾಗಿ ವಾಹನ ಸವಾರಿ ಮಾಡುವವರಿದ್ದಾರೆ. ಅದರ ಅರ್ಥ ಎಚ್ಚರಿಕೆ ಎಂದರೆ ಕಡೆಗಣಿಸಬೇಕು ಅಂತಲ್ಲ. ನೋಡಿ... ಹೀಗೆ ವರ್ತಿಸಿದರೆ ಹೀಗಾಗಬಹುದು ಎಂಬ ನಮ್ಮ ಒಳಿತಿಗೇ ನೀಡುವ ಮುನ್ನೆಚ್ಚರಿಕೆ ಅದು. ಬೆಂಕಿ ಬಿಸಿ ಅಂತ ಬೆಂಕಿಯನ್ನು ಮುಟ್ಟಿಯೇ ಕಲಿಯಬೇಕಾಗಿಲ್ಲ. ಬೆಂಕಿಯನ್ನು ಮುಟ್ಟಿ ಕೈಸುಟ್ಟುಕೊಂಡ ಇನ್ನೊಬ್ಬನ ಅನುಭವವೂ ನಮಗೆ ಪಾಠವಾಗಬಹದು. ಅದೇ ರೀತಿ, ಕೊರೋನಾ ಸುಳ್ಳಲ್ಲ, ಕೊರೋನಾದಿಂದ ವಯಸ್ಸಾದವರು, ಇತರ ಆರೋಗ್ಯ ಸಮಸ್ಯೆ ಇರುವವರು, ಮುಖ್ಯವಾಗಿ ಉಸಿರಾಟ ಸಂಬಂಧಿ ಕಾಯಿಲೆ ಪೀಡಿತರು ಗುರಿಯಾಗಿರುವುದು ನಮ್ಮ ಕಣ್ಣೆದುರೇ ಇದೆ. ಕೊರೋನಾ ಕಾರಣದಿಂದ ನಮ್ಮನ್ನಗಲಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪ್ರಣವ್ ಮುಖರ್ಜಿ, ಸುರೇಶ್ ಅಂಗಡಿ, ಅಹ್ಮದ್ ಪಟೇಲ್ ಸಹಿತ ಹಲವು ಗಣ್ಯರ ಪಟ್ಟಿಯೇ ನಮ್ಮೆದುರಿಗಿದೆ...

ಯಾವುದೇ ಕಷ್ಟದ ಸನ್ನಿವೇಶವನ್ನೂ ದುರುಪಯೋಗ ಮಾಡುವ ಒಂದು ವರ್ಗವೇ ಇದೆ, ಲಾಬಿಗಳೂ ಇವೆ. ಹಾಗಂತ ಕೊರೋನಾವೇ ಸುಳ್ಳು ಖಂಡಿತಾ ಅಲ್ಲ. ಯುವಕರಿಗೆ ಕೊರೋನಾ ಹೆಚ್ಚು ಉಪದ್ರ ಮಾಡದಿರಬಹುದು. ಆದರೆ ಅವರ ಮೂಲಕ ಮನೆಯಲ್ಲಿರುವ ವೃದ್ಧರು, ಅನಾರೋಗ್ಯಪೀಡಿತರನ್ನು ಅದು ಕಾಡಬಹುದು. ಉಸಿರಾಟದ ಸಮಸ್ಯೆ ಬಂದರೆ ಆಸ್ಪತ್ರೆಗೆ ದಾಖಲಾಗಬೇಕಾದ್ದು ಕಡ್ಡಾಯ... ದೇಶ ಅನ್ಲಾಕ್ ಆಗುತ್ತಿರುವುದು ಆರ್ಥಿಕ ಪುನಶ್ಚೇತನದ ಉದ್ದೇಶದಿಂದ. ಹಾಗಂತ ನಮ್ಮ ಸುರಕ್ಷತೆಯ ಹೊಣೆ ಸರ್ಕಾರದ್ದು ಮಾತ್ರವಲ್ಲ, ನಮ್ಮದೂ ಹೌದು ಎಂಬುದು ನೆನಪಿರಬೇಕು. ಎಲ್ಲದಕ್ಕಿಂತ ಹೆಚ್ಚು ಬೇಕಾಗಿರುವುದು ವಿವೇಚನೆ ಹಾಗೂ ಕೊರೋನಾ ಬಂದರೆ ಏನಾಗಬಹುದು, ಕೊರೋನಾ ಹೇಗೆ ಬರುತ್ತದೆ ಎಂಬ ಕುರಿತ ಖಚಿತ ಮೂಲದ ಮಾಹಿತಿ... ಆರೇಳು ತಿಂಗಳುಗಳಿಂದ ಇದನ್ನೇ ಕೇಳುತ್ತ ಬಂದಿರುವ ನಿಮಗೆಲ್ಲ ಕೊರೋನ ಹೇಗೆ ಬರುತ್ತದೆ ಅಂತ ಹೇಳುವುದಕ್ಕೆ ಹೊರಟರೆ ನೀವು ನನ್ನನ್ನು ಅಟ್ಟಿಸಿಕೊಂಡು ಬಂದು ಹೊಡೆಯುವ ಅಪಾಯ ಇದೆ... ಹಾಗಾಗಿ ಇಲ್ಲಿಗೆ ನಿಲ್ಲಿಸುತ್ತೇನೆ.

-ಕೃಷ್ಣಮೋಹನ ತಲೆಂಗಳ (29.11.2020)

No comments: