ಸ್ಟೇಟಸ್ಸು ಅಪ್ಡೇಟ್ ಮಾಡದಿದ್ರೆ, ಸತ್ತೋಗಿದ್ದೀರಿ ಅಂದುಕೊಳ್ಳುತ್ತಾರೆ....!!!

 ಆಗಾಗ ಸ್ಟೇಟಸ್ ಅಪ್ಡೇಟ್ ಮಾಡ್ತಾ ಇರಿ, ಇಲ್ದಿದ್ರೆ ನಿಮ್ಗೆ ಕೊರೋನಾ ಬಂದು ಸತ್ತೋಗಿದ್ದೀರಿ ಅಂತ ಜನ ಅಂದ್ಕೋತಾರೆಅಂತ ಇತ್ತೀಚೆಗೆ ಜೋಕೊಂದು ಓದಲು ಸಿಕ್ಕಿತು. ತಮಾಷೆಯಾದರೂ ವಾಸ್ತವಿಕ ಅನ್ನಿಸಿತು.

ಕಳೆದ ವಾರ ನಾಲ್ಕೈದು ದಿನ ವಾಟ್ಸಪ್ಪಿನಲ್ಲೇ ಸ್ಟೇಟಸ್ಸೇ ಹಾಕದೇ ಕುಳಿತಿದ್ದಾಗ, ಮೂರು ನಾಲ್ಕು ಮಂದಿ, ಪರೋಕ್ಷವಾಗಿ ಕೇಳಿದ್ದರು, ಆರೋಗ್ಯ ಹೇಗಿದೆ, ಆರಾಮವಾಗಿದ್ದೀರ ಅಂತ. ಕೊರೋನಾ ಬಂದಾಯ್ತಾ?” ಅನ್ನುವ ಪರೋಕ್ಷ ಪ್ರಶ್ನೆ ಅದು...

.....

ನನ್ನ ಕಾಲದಲ್ಲಿ ಹೀಗಿರಲಿಲ್ಲ, ನನ್ನ ಬಾಲ್ಯ ಸುವರ್ಣಯಗ, ಈಗ ಕಾಲ ಸರಿ ಇಲ್ಲ ಎಂಬುದು ಪ್ರತಿ ತಲೆಮಾರಿನಲ್ಲೂ ಕೇಳಿ ಬರುವ ಮಾತು. ನಮ್ಮ ಹಿರಿಯರೂ ಹೇಳಿದ್ದಾರೆ, ನಮಗೂ ಹೇಳಬೇಕು ಅನ್ನಿಸುತ್ತದೆ... ನಂತರದ ತಲೆಮಾರಿನವರಿಗೆ ಅದೊಂದು ಚರ್ವಿತ ಚರ್ವಣ ಅಂತ ಅನ್ನಿಸುತ್ತದೆ. 1970ರಿಂದ 1990ರ ಅವಧಿಯಲ್ಲಿ ಜನಿಸಿದ ಮಧ್ಯಮ ವಯಸ್ಸಿನ ತಲೆಮಾರಿನ ಮಂದಿ ಬದಲಾದ ಬದುಕಿನ ಶೈಲಿ ಅಥವಾ ಬದಲಾಗಿದ್ದೇವೆ ಅಂದುಕೊಂಡೂ ಮಾನಸಿಕವಾಗಿ 1980, 1990ರ ದಶಕದ ಮನಃಸ್ಥಿತಿಯಲ್ಲಿರುವವರಿಗೆ ಅರ್ಥವಾಗಬಹುದಾದ ಮಾತುಗಳನ್ನು ಹೇಳಲು ಕುಳಿತಿದ್ದೇನೆ...

 

ನಾನು ಗುರುತಿಸಿರುವ ಪಾಯಿಂಟುಗಳು ಇಂದು ಕಾಲ ಕೆಟ್ಟಿದೆ, ಆಗಲೇ ಚೆನ್ನಾಗಿತ್ತು. ಈಗ ಪರಿಸ್ಥಿತಿ ಏನೇನೂ ಚೆನ್ನಾಗಿಲ್ಲ…” ಎಂದು ಆರೋಪಿಸಲು ಅಥವಾ ದೂರಲು, ಪರಿತಪಿಸಲು ಬರೆದಿದ್ದಲ್ಲ. 1990ರ ನಂತರ ಹುಟ್ಟಿದವರು ಕಳೆದುಕೊಂಡದ್ದು ಏನನ್ನು ಅಂತ ನೆನಪಿಸುವ ಪ್ರಯತ್ನ ಅಷ್ಟೇ... ಇದೊಂದು ನೆನಪುಗಳ ಪಟ್ಟಿ ಹೊರತು ಮತ್ತೇನೂ ಸಾಧಿಸಲು, ಪ್ರಮಾಣೀಕರಿಸಲು ಹೊರಟದ್ದಲ್ಲ.... ಸ್ಟೇಟಸ್ಸನ್ನೇ ಮನುಷ್ಯನ ಇರುವಿಕೆ ಅಂದುಕೊಳ್ಳುವ ಹಂತಕ್ಕೆ ನಾವು ತಲುಪಿರುವುದಕ್ಕೂ, ಮೂವತ್ತು ವರ್ಷಗಳ ಹಿಂದೆ ಸ್ಟೇಟಸ್ಸೇ ಇಲ್ಲದೆ ಬದುಕಿದ್ದಾಗ ಇದ್ದ ಮನಃಶಾಂತಿಗೂ ಪುಟ್ಟ ಹೋಲಿಕೆ ಅಷ್ಟೇ....

 

1      1) ಆಗ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದಾಗ ಸಹಜವಾಗಿ ಸಿಗುತ್ತಿದ್ದ ಗೇರು, ಮಾವು, ಕೇಪುಳ, ಮುಳ್ಳಹಣ್ಣುಗಳು. ದನಗಳನ್ನು ಗುಡ್ಡೆಗೆ ಕಳುಹಿಸಿ ಶಾಲೆಗೆ ನಡೆಯುತ್ತಿದ್ದ ಅನುಭವಗಳು, ಮಳೆ ಥರಗುಟ್ಟಿ ಬರುವಾಗ ಕೊಡೆ ಅಡಿಮೇಲಾಗಿ, ಮಾರ್ಗಬಿಟ್ಟು ನೀರು ಹರಿಯುವ ಚರಂಡಿಯಲ್ಲೇ ನಡೆಯುತ್ತಿದ್ದದ್ದು, ಚಪ್ಪಲಿಯೇ ಹಾಕದೆ ಹೋಗುತ್ತಿದ್ದದ್ದು, ತಂಗೀಸ್ ಚೀಲ ಎಂಬ ವಿಶಿಷ್ಟವಾದ ಹಾಗೂ ಅತ್ಯಂತ ಸರಳವಾದ ಚೀಲವನ್ನು ನೆತ್ತಿಯ ಮೇಲೆ ವಿಶಿಷ್ಟವಾಗಿ ತೂಗಾಡಿಸಿಕೊಂಡು ಹೋಗುತ್ತಿದ್ದದ್ದು  ಈಗ ಕಾಣಲು ಸಿಗುವುದಿಲ್ಲ.... ದಾರಿಯಲ್ಲಿ ಗೇರುಬೀಜವನ್ನು ಗೋಲಿಯಾಟದ ಥರ ಕುಟ್ಟುವ ಆಟ ಆಡುತ್ತಿದ್ದದ್ದು, ಬಿದ್ದು ಗಾಯವಾದರೆ ಕಮ್ಯೂನಿಸ್ಟಿನ ಎಲೆಯನ್ನು ಜಜ್ಜಿ ರಸ ಹಿಂಡಿ ಪ್ರಥಮ ಚಿಕಿತ್ಸೆ ಮಾಡುತ್ತಿದ್ದದ್ದು, ಅಕ್ಕಪಕ್ಕದ ಮನೆಯವರು ಒಟ್ಟಿಗೇ ಶಾಲೆಗೆ ಹೋಗುವಾಗ ಮೊದಲು ಯಾರಾದರೂ ರಸ್ತೆ ದಾಟಿ ಹೋದರೆ ಪೊದೆಯ ಎಲೆಯ ಗೆಲ್ಲೊಂದನ್ನು ಗುರುತಿಗಾಗಿ ಇರಿಸಿ ಹೋಗುತ್ತಿದ್ದದ್ದು, ಇವೆಲ್ಲ ಸ್ಕೂಲ್ ಬಸ್ಸಿನಲ್ಲೇ ಶಾಲೆಗೆ ಹೋಗುವವರಿಗೆ ಅರ್ಥವಾಗಲಿಕ್ಕಿಲ್ಲ.

 22)     ಆಗ ಪುಸ್ತಕಗಳಿಗೆ ಬೈಂಡ್ ಹಾಕಲು ಶೀಟು ಖರೀದಿಸುತ್ತಿರಲಿಲ್ಲ. ಕಳೆದ ವರ್ಷದ ಕ್ಯಾಲೆಂಡರ್, ಭಾನುವಾರದ ಪತ್ರಿಕೆಯ ಪುರವಣಿಯಲ್ಲಿ ಬರುತ್ತಿದ್ದ ನೈಸು ಕಾಗದವನ್ನು ತೆಗೆದಿರಿಸಿ ಬೈಂಡು ಹಾಕುತ್ತಿದ್ದದ್ದು, ನಮಗಿಂತ ಹಿರಿಯರ ಬಟ್ಟೆಯನ್ನೇ ಅಡ್ಜಸ್ಟು ಮಾಡಿ ಹಾಕಿ ಶಾಲೆಗೆ ಹೋಗುತ್ತಿದ್ದದ್ದು, ಮಧ್ಯಾಹ್ನದ ಬುತ್ತಿಯನ್ನು ಶಾಲೆಯ ಗ್ರೌಂಡಿನಲ್ಲಿ ಗೇರು ಮರದ ಅಡಿಯಲ್ಲಿ ಕುಳಿತು ಉಂಡು ಬೋರುವೆಲ್ಲಿನಲ್ಲಿ ಬುತ್ತಿ ತೊಳೆಯುತ್ತಿದ್ದದ್ದು... ಈಗ ಬೋರ್ ವೆಲ್ ಜಾಕ್ ಮೇಲೆ ಕೆಳಗೆ ಮಾಡಿ ನೀರು ಸೇದುವ ಮಕ್ಕಳು ಕಾಣಸಿಗುತ್ತಾರೆಯೇ...? ಮಧ್ಯಾಹ್ನದ 50 ಪೈಸೆಯ ಐಸ್ ಕ್ಯಾಂಡಿ, ಪೆಪ್ಸಿ (ಕುಡಿಯುವ ಪೆಪ್ಸಿ ಅಲ್ಲ, ಐಸ್ ಕ್ಯಾಂಡಿಯ ಪ್ಲಾಸ್ಟಿಕ್ ಕೊಳವೆಯಲ್ಲಿ ಬರುತ್ತಿದ್ದದ್ದು), ದೂದ್ ಕ್ಯಾಂಡ್, ಬೆಲ್ಲ ಕ್ಯಾಂಡಿ ತಿನ್ನುವುದು ಈಗಿನ ಇಂಗ್ಲಿಷ್ ಮಾಧ್ಯಮ ಶಾಲೆಯ ಇಂಟರ್ ನ್ಯಾಷನಲ್ ಸಿಲಬಸ್ ವ್ಯವಸ್ಥೆಯಲ್ಲಿ ಬಹುಶಃ ಅಪರೂಪದ ದೃಶ್ಯವೇ ಸರಿ.

    3)     ಆಗ ಸ್ಕೂಲ್ಡೇ ಎಂದರೆ ದೊಡ್ಡ ಹಬ್ಬ. ಸುಮಾರು 2 ತಿಂಗಳು ಅದಕ್ಕೆ ಸಿದ್ಧತೆ. ರಾತ್ರಿಯಿಡೀ ಕಾರ್ಯಕ್ರಮ. ಅದರ ಪ್ರಾಕ್ಟೀಸು, ಸ್ಪೋರ್ಟ್ಸ್ ಎಲ್ಲ ಚಂದ. ಸ್ಕೂಲ್ ಡೇಗಳನ್ನು ಲೈವ್ ನೀಡುವ ಯಾವುದೇ ಚಾನೆಲ್ಲುಗಳು ಆಗ ಇರಲಿಲ್ಲ. ಸ್ಕೂಲ್ ಡೇ ಗೆ ಸಂಬಂಧಿಸಿ ನಡೆಯುತ್ತಿದ್ದ ಛದ್ಮವೇಷ ಸ್ಪರ್ಧೆಯಂತೂ ದೊಡ್ಡ ಆಕರ್ಷಣೆ. ಈಗ ರೆಡಿಮೇಡ್ ಉಡುಪು ಧರಿಸಿ ನಡೆಸುವ ಫ್ಯಾನ್ಸಿ ಡ್ರಸ್ ಕಾಂಪೀಟೀಶನ್ ನೋಡುವಾಗ ಆಗಿನ ಛದ್ಮವೇಷಕ್ಕೆ ಸಾಟಿ ಎನ್ನಿಸುವುದಿಲ್ಲ.

   4)     ಆಗ ಇದ್ದದ್ದು ದೂರದರ್ಶನ ವಾಹಿನಿ ಮತ್ತು ರೇಡಿಯೋ ಮಾತ್ರ ಮನರಂಜನೆಯ ಮೂಲಗಳು. ಹೆಚ್ಚೆಂದರೆ ಟಾಕೀಸಿಗೆ ಹೋಗಿ ಸಿನಿಮಾ ನೋಡಬಹುದಿತ್ತು. ಮತ್ತು ಯಾವತ್ತೋ ಊರಿಗೆ ಬರುವ ಯಕ್ಷಗಾನ ಮೇಳಗಳು ಮಾತ್ರ. ರೇಡಿಯೋ ಎಂದರೆ ಮೀಡಿಯಂ ವೇವ್ ಬ್ಯಾಂಡಿನಲ್ಲಿ ಮಾತ್ರ ಕೇಳಲು ಸಾಧ್ಯ ಇದ್ದದ್ದು, ಎಫ್ಎಂ ಇರಲಿಲ್ಲ. ಹಾಗಾಗಿ ಮಂಗಳೂರು ಆಕಾಶವಾಣಿ ಕೇಳಬೇಕಾದರೆ ಮಂಗಳೂರು ಇರುವ ದಿಕ್ಕಿಗೆ ರೇಡಿಯೋದ ಮೂತಿಯನ್ನು ತಿರುಗಿಸಬೇಕಿತ್ತು. ಗುಡುಗು, ಸಿಡಿಲು ಬಂದರೆ ರೇಡಿಯೋವೋ ಕೆಮ್ಮಲು ಶುರು ಮಾಡುತ್ತಿತ್ತು. ಮಾತ್ರವಲ್ಲ, ರೇಡಿಯೋದ ಬ್ಯಾಟರಿಯ ಆಯುಷ್ಯ ತಿಳಿಯಲು ಬ್ಯಾಟರಿಯಲ್ಲಿ ಬ್ಯಾಟರಿ ಅಳವಡಿಸಿದ ದಿನಾಂಕ ನಮೂದಿಸುತ್ತಿದ್ದದ್ದು ಮತ್ತೊಂದು ವಿಶೇಷ. ಮನೆ ಮಂದಿ ಕುಳಿತು ರೇಡಿಯೋ ಕೇಳುತ್ತಿದ್ದೆವು ಎಂದರೆ ಈಗಿನವರು ನಗಬಹುದು.

   5)      ಊರಿನ ಶ್ರೀಮಂತರ ಮನೆಯಲ್ಲಿ ಮಾತ್ರ ಟಿ.ವಿ. ಇದ್ದದ್ದು. ಅದರಲ್ಲೂ ಅಷ್ಟೇ ಭಾನುವಾರ ಸಂಜೆ 4ಕ್ಕೆ ಮಾತ್ರ ಕನ್ನಡ ಸಿನಿಮಾ. ಅಷ್ಟು ಹೊತ್ತಿಗೆ ಸುತ್ತಮುತ್ತಲಿನ ಮನೆಯವರೆಲ್ಲ ಟಿ.ವಿ. ಇರುವವರ ಮನೆಯ ಚಾವಡಿಯಲ್ಲಿ ಹಾಜರು. ಸಿನಿಮಾ ಮುಗಿಯುವ ತನಕ ಅವರ ಠಿಕಾಣಿ ಅಲ್ಲಿಯೇ... ಟಿ.ವಿ. ಇರುವ ಮನೆಯವರಿಗೂ ಅದೊಂದು ಹೆಮ್ಮೆಯ ವಿಷಯವಾಗಿದ್ದರೂ ಸಿನಿಮಾ ಮುಗಿಯುವ ತನಕ ಅವರ ಖಾಸಗಿತನದ ಹಕ್ಕಿನ ಬಗ್ಗೆ ಯಾರೂ ಯೋಚಿಸುತ್ತಿರಲಿಲ್ಲ ಎನ್ನಿ. ಅದು ಬಿಟ್ಟರೆ ಬುಧವಾರದ ಹಿಂದಿ ಚಿತ್ರಹಾರ್, ಶುಕ್ರವಾರ ಸಂಜೆ ಕನ್ನಡ ಚಿತ್ರಮಂಜರಿ. ಭಾನುವಾರ ಬೆಳಗ್ಗೆ ಹಿಂದಿ ಚಿತ್ರಗೀತೆಯ ರಂಗೋಲಿ ಇಷ್ಟೇ ಇದ್ದದ್ದು. ಚಾನೆಲ್ ಬದಲಾಯಿಸುವಂತಿಲ್ಲ. ಬಹುತೇಕ ಇದ್ದದ್ದು ಕಪ್ಪು ಬಿಳಿಪು ಟಿ.ವಿ. ಅದರಲ್ಲೇ ನೋಡಿರಬಹುದಾದ ನೂರಾರು ಸಿನಿಮಾಗಳು ಇಂದಿಗೂ ಹಸಿರು ನೆನಪು. ಇಂದಿನ ಅಮೆಝಾನ್ ಪ್ರೈಮು, ನೆಟ್ ಫ್ಲಿಕ್ಸು ಕೈಗೊಂದು, ಕಾಲಿಗೊಂದು ಸಿನಿಮಾ ನೋಡುವ ಆಯ್ಕೆಗಳು ಕೂಡಾ ಆ ವಾರಕ್ಕೊಂದು ಸಿನಿಮಾ ನೋಡುತ್ತಿದ್ದ ದಿನಗಳ ಕಚಗುಳಿ ನೀಡುವುದಿಲ್ಲ.

    6)     ಸಾರಣೆ ಆಗದ ಮನೆಗಳಲ್ಲಿ ನೆಲಕ್ಕೆ ಆಗಿಂದಾಗ್ಗೆ ಸೆಗಣಿ ಸಾರಿಸಬೇಕಿತ್ತು. ನೆಂಟರು ಬರುತ್ತಾರೆ ಅಂತ ಗೊತ್ತಾದರೆ ಖಂಡಿತಾ ಸಾರಿಸಬೇಕಿತ್ತು. ಆಗ, ನೆಲ ನುಣುಪಾಗಿ, ಕಪ್ಪಾಗಿ ಕಾಣಿಸಲು ಮಸಿ ಅಥವಾ ಬ್ಯಾಟರಿಯೊಳಗಿರುವ ಕಪ್ಪು ಮಸಿಯನ್ನು ಸೇರಿಸುತ್ತಿದ್ದರು. ಅಡಕೆ ಹಾಳೆಯ ತುಂಡಿನಲ್ಲಿ ಸೆಗಣಿ ಸಾರಿಸಿದಾಗ ಗ್ರಾನೈಟ್ ಅಳವಡಿಸಿದಷ್ಟೇ ಸ್ವಚ್ಛ ಸುಂದರ ಎಂಬ ಭಾವ ಮೂಡುತ್ತಿತ್ತು. ಓದಲು, ಬರೆಯಲು ಬೆಂಚು, ಡೆಸ್ಕು ಇಲ್ಲದಾಗ್ಯೂ ಅದೇ ನೆಲದಲ್ಲಿ ಕುಳಿತು ಬರೆಯುತ್ತಿದ್ದದ್ದು ಅಸಹಜ ಅಂತ ಅನ್ನಿಸಲು ಆಗ ಹೋಲಿಕೆಗಳಿಗೆ ಆಸ್ಪದವೇ ಇರಲಿಲ್ಲ! ಕರೆಂಟಿಲ್ಲದ ಮನೆಯಲ್ಲಿದ್ದ ಲಾಟೀನು, ಅದರ ಗಾಜನ್ನು ಆಗಾಗ ತೊಳೆದ ಬಳಿಕ ಪ್ರಖರವಾಗುತ್ತಿದ್ದ ಬೆಳಕು, ಚಿಮಿಣಿದೀಪದ ಹೊಗೆಯ ಮೇಲೆ ಅಲ್ಯೂಮಿನಿಯ್ ಹಾಳೆ ಇರಿಸಿ ಅದರಡಿ ಶೇಖರವಾಗುತ್ತಿದ್ದ ಮಸಿಯನ್ನು ಸೆಗಣಿ ಸಾರಿಸುವಾಗ ಸೇರಿಸುತ್ತಿದ್ದದ್ದು ಈಗಿನವರಿಗೆ ಯೂಟ್ಯೂಬಿನಲ್ಲಿ ವಿಡಿಯೋ ಮಾಡಿ ತೋರಿಸಬೇಕಷ್ಟೇ.

    7)    ನೆಂಟರ ಮನೆಗೆ ಹೋಗುವಾಗ, ನೆಂಟರು ಮನೆಗೆ ಬರುವಾಗ ಮುನ್ಸೂಚನೆ ಸಿಗುವುದು, ನೀಡುವುದೇ ಅಪರೂಪ. ಆದರೂ ನೆಂಟರು ಬಂದರೆಂದರೆ ತುಂಬ ಖುಷಿ. ಈಗಿನ ಹಾಗೆ ಕ್ಷಣ ಕ್ಷಣದ ಅಪ್ಡೇಟ್ ನೀಡಿ, ಮನೆಯವರ ಸಮಯಾವಕಾಶ ಕೇಳಿ ಹೋಗುವ ಪದ್ಧತಿ ಇರಲಿಲ್ಲ. ನೆಂಟರ ಮನೆಗ ಹೋದರೆ ಎರಡು, ಮೂರು ದಿನ ಉಳಿದುಕೊಳ್ಳುವುದು ಸಾಮಾನ್ಯ ಸಂಗತಿ. ಯಾಕೆಂದರೆ ಸ್ವಂತ ವಾಹನ ಇಲ್ಲದಿದ್ದ ಆ ದಿನಗಳಲ್ಲಿ ಇನ್ನೊಂದು ಊರಿಗೆ ಬಸ್ಸುಗಳಲ್ಲಿ ಹೋಗಿ ತಲುಪುವುದಕ್ಕೇ ಒಂದು ಹೊತ್ತು ಬೇಕಾಗುತ್ತಿತ್ತು. ಅಟ್ಯಾಚ್ಡ್ ಬಾತ್ ರೂಮು, ಗೆಸ್ಟುಗಳಿಗೆ ಪ್ರತ್ಯೇಕ ಕೊಠಡಿ, ಡೈನಿಂಗ್ ಟೇಬಲ್ಲು, ಮನೆಗೆ ಕರೆಂಟು, ಸೋಲಾರ್ ವಾಟರ್ ಹೀಟರು ಯಾವುದೂ ಇಲ್ಲದಿದ್ದ ದಿನಗಳಲ್ಲೂ ಒಂದಿಡೀ ಕುಟುಂಬ ಸೂಚನೆಯನ್ನೇ ನೀಡದೆ ಬಂದು ಒಂದೆರಡು ದಿನ ಆತಿಥ್ಯ ಸ್ವೀಕರಿಸಿ ಹೋಗುವಾಗ ಆಗುತ್ತಿದ್ದ ಖುಷಿ, ಸಂಭ್ರಮ ಈಗ ಎಲ್ಲಿಗೆ ಹೋಗಿದೆ?

8   8)      ಮೊಬೈಲು ಬಿಡಿ, ಲ್ಯಾಂಡ್ ಲೈನ್ ಫೋನ್ ಕೂಡಾ ಇರಲಿಲ್ಲ. ವರ್ತಮಾನ ತಿಳಿಯಲು ಇದ್ದ ಮೂಲವೆಂದರೆ ರೇಡಿಯೋ ವಾರ್ತೆ ಮತ್ತು ಯಾರದ್ದೋ ಮನೆಗಳಿಗೆ ಬರುತ್ತಿದ್ದ ಉದಯವಾಣಿ ಪೇಪರು ಮಾತ್ರ. ಕೆಲವು ದಿನಗಳಿಗೊಮ್ಮ ಖುಷಿ ಕೊಡುತ್ತಿದ್ದ ಸಂಪರ್ಕ ಪತ್ರ ವ್ಯವಹಾರ ಮಾತ್ರ. ಪುಟ ತುಂಬ ಪತ್ರ ಬರೆಯುವುದು, ಉತ್ತರಕ್ಕೆ ಕಾಯುವುದು, ಬಂದ ಮೇಲೆ ಮನೆಯಲ್ಲಿ ಎಲ್ಲರೂ ಓದುವುರು, ಮತ್ತೊಮ್ಮೆ ಓದುವುದು, ಅದರ ಬಗ್ಗೆ ಚರ್ಚಿಸುವುದು, ಇನ್ ಲ್ಯಾಂಡ್ ಲೆಟರಿನಲ್ಲಿ ಜಾಗ ಸಾಲದಿದ್ದರೆ ಮತ್ತೊಂದುಪುಟ್ಟ ಚೀಟಿಯನ್ನು ಇನ್ ಲ್ಯಾಂಡ್ ಲೆಟರಿನೊಳಗೆ ಇರಿಸಿ ಪೋಸ್ಟ್ ಮ್ಯಾನಿಗೆ ಸಂಶಯಬಂದು ತೂಕ ಮಾಡಿ ಒಂದು ರುಪಾಯಿ ಫೈನ್ ಹಾಕುತ್ತಿದ್ದದ್ದೂ ಇದೆ... ಆ ಅಕ್ಷರಗಳು ಹೊತ್ತು ತರುತ್ತಿದ್ದ ಬೆಚ್ಚಗಿನ ಭಾವಗಳು, ಸಾವಧಾನದಿಂದ ಓದುವಾಗಿನ ಪುಳಕವನ್ನು ಈಗಿನ ಆಗಾಂದಾಗ್ಗೆ ಇಡೀ ಜಗತ್ತನ್ನೇ ಸಂಪರ್ಕಿಸಿ ಕೊಡುವ ಚಾಟಿಂಗ್ ಖಂಡಿತಾ ನೀಡುವುದಿಲ್ಲ (ಈಗಿನ ತಲೆಮಾರಿನವರಿಗಲ್ಲ, ಆಗಿನವರಿಗೆ) ಸ್ಟೇಟಸ್ಸಿನ ಹಾಗೆ 24 ಗಂಟೆಗಳಲ್ಲಿ ಪತ್ರಗಳ ಅಕ್ಷರಗಳು ಮಾಸಿ ಹೋಗುತ್ತಿರಲಿಲ್ಲ!

    9)      ಆಗಿನ ಸೆಲೆಬ್ರಿಟಿಗಳು ಕಲ್ಪನೆಗಳಿಗೆ ಸೀಮಿತ. ಈಗಿನ ಹಾಗೆ ವಾಟ್ಸಪ್ಪು, ಫೇಸ್ಬುಕ್ಕಿನಲ್ಲಿ, ಟಿ.ವಿ.ಶೋಗಳಲ್ಲಿ ಎಲ್ಲೆಂದರಲ್ಲಿ ಕಾಣ ಸಿಗುತ್ತಿರಲಿಲ್ಲ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಇವರನ್ನೆಲ್ಲ ಟಿ.ವಿ.ಯಲ್ಲಿ ನೋಡಬಹುದಿತ್ತಾದರೂ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಇವರೆಲ್ಲ ರೇಡಿಯೋ ಮೂಲಕ ತುಂಬ ಪರಿಚಿತರಂತೆ ಭಾಸವಾದರೂ ಅವರು ನೋಡುವುದಕ್ಕೆ ಹೇಗಿದ್ದಾರೆ ಎಂದು ಗೊತ್ತಾಗಿದ್ದು ಟಿ.ವಿ. ಚಾನೆಲ್ಲುಗಳು ಹುಟ್ಟಿಕೊಂಡ ಬಳಿಕವೇ. ಅಲ್ಲೊಂದು ಇಲ್ಲೊಂದು ಪತ್ರಿಕಾ ಲೇಖನಗಳಲ್ಲಿ, ಸುಧಾ, ತರಂಗದ ಸಿನಿಮಾ ಪುಟಗಳಲ್ಲಿ ಅವರದ್ದು ಫೋಟೋ ಕಂಡರೆ ತುಂಬ ಖುಷಿ. ರೇಡಿಯೋದಲ್ಲಿ ಕೇಳುವ ಧ್ವನಿಗಳನ್ನು ಆಲಿಸಿ ಇವರು ನೋಡುವುದಕ್ಕೆ ಹೀಗಿರಬಹುದೆಂಬ ಕಲ್ಪನೆ ಅಷ್ಟೇ... ಯಾರನ್ನೂ ಫೇಸ್ಬುಕ್ಕಿನಲ್ಲಿ, ಮೆಸೆಂಜರಿನಲ್ಲಿ ಮಾತನಾಡಿಸುವ ಸಂಪರ್ಕ ಸಾಧ್ಯತೆಯೇ ಇಲ್ಲದ ಕಾರಣ ಇಂದಿಗೂ ಕೆಲವು ಕಲ್ಪನೆಯಲ್ಲಿ ಉಳಿದ ಧ್ವನಿಗಳ ಮಾಧುರ್ಯ, ಕಲ್ಪನೆಯಲ್ಲಿ ಅಷ್ಟೇ ಆಹ್ಲಾದಕರವಾಗಿ ಉಳಿದಿದೆ.

   10)   ಫಸ್ಟು ಬಸ್ಸು, ಲಾಸ್ಟು ಬಸ್ಸಿನ ಪ್ರಯಾಣ, ಕಾದು ಕುಳಿತು ಓದುತ್ತಿದ್ದ ಚಂದಮಾಮಾ, ಬಾಲಮಿತ್ರ, ಪುಟಾಣಿ, ಬಾಲಮಂಗಳ... ದೊಡ್ಡ ಮನೆಗಳ ಅಟ್ಟಗಳಲ್ಲಿ ಪೇರಿಸಿಟ್ಟ ಹಳೆ ಪುಸ್ತಕಗಳನ್ನು ಓದುವ ಖುಷಿ, ಆ ಪುಸ್ತಕಗಳು ಹೊರಸೂಸುವ ವಿಚಿತ್ರ ಪರಿಮಳ, ವಿಪರೀತ ಕೋಚಿಂಗು, ಬೇಸಿಗೆ ಶಿಬಿರ, ಆ ಕ್ಲಾಸು, ಈ ಕ್ಲಾಸುಗಳ ರಗಳೆಗಳೇ ಇಲ್ಲದೆ ಕಳೆದುಹೋಗುತ್ತಿದ್ದ ಬೇಸಿಗೆ, ಮಧ್ಯಾವಧಿ ರಜೆಗಳು.... ಹೀಗೆ ಹೇಳುತ್ತಾ ಹೋದರೆ ಆ ಕಾಲ, ಆ ಲೋಕ ಹಾಗೂ ಆಗಿನ ಯೋಚನಾ ವಿಧಾನಗಳೇ ಪ್ರತ್ಯೇಕ... ಮಾತ್ರವಲ್ಲ. ಆ ಎಳವೆ, ಅಲ್ಲಿದ್ದ ಅಚ್ಚರಿ ಮತ್ತು ಕುತೂಹಲಗಳೇ ಪ್ರತ್ಯೇಕ. ತಾಂತ್ರಿಕ ಮತ್ತು ಸಂವಹನದ ಕನಿಷ್ಠ ಸಾಧ್ಯತೆಗಳು ಹಾಗೂ ಕೆಳ ಮಧ್ಯಮವರ್ಗದ ಜೀವನ ಮಟ್ಟದ ಪರಿಸ್ಥಿತಿಗಳು ಆ ದಿನಗಳನ್ನು ಹಾಗಾಗಿಸಿದ್ದವು. ಮತ್ತು ಕಡಿಮೆ ನಿರೀಕ್ಷೆ ಹಾಗೂ ಕನಿಷ್ಠ ಹೋಲಿಕೆಗಳೊಂದಿಗೆ ಬದುಕು ಸಾಗುತ್ತಿತ್ತು...



ಆದರೆ ಈಗ....

 

ಕಾಲ ಹಾಳಾಗಿದೆ, ಯಾರೂ ಸರಿ ಇಲ್ಲ... ಹಾಗೆಲ್ಲ ಹೇಳುವುದಕ್ಕೆ ಹೊರಟದ್ದಲ್ಲ. ಅಚ್ಚರಿ ಮತ್ತು ಕುತೂಹಲಗಳನ್ನು ಸ್ಪಷ್ಟವಾಗಿ ಕಳೆದುಕೊಂಡಿದ್ದೇವೆ. ಸಹಜವಾಗಿ ಹರಿಯುವ ನದಿಯನ್ನು ತಿರುಗಿಸುವ ಹಾಗ ಸಹಜವಾದ ಬದುಕಿನ ಓಘಕ್ಕೆ ತಡೆಯೊಡ್ಡಿ ಸಮಕಾಲೀನರಾಗುವ ಪ್ರಕ್ರಿಯೆಯಲ್ಲಿ ಬಲೆ ಹೆಣೆದು ಅದರೊಳಗೇ ಬದುಕು ಸುತ್ತುತ್ತಿದೆ. ಯಾವುದೂ ನಮಗೆ ಅಚ್ಚರಿ ಅನ್ನಿಸುವುದಿಲ್ಲ. ಎಲ್ಲವು ನಿರೀಕ್ಷಿತ ಅನ್ನಿಸುತ್ತಿರುತ್ತದೆ. ಕುತೂಹಲವನ್ನು ತೋಡಿಕೊಳ್ಳಲೂ ಪುರುಸೊತ್ತಿಲ್ಲ. ನಾವೇ ಕಟ್ಟಿಕೊಂಡ ಜಾಲತಾಣಗಳು, ಇಂಟರ್ ನೆಟ್ಟು, ಸಂವಹನದ ಅಪಾರ ಸಾಧ್ಯತೆಗಳು ಬಹಳಷ್ಟು ಸಾರಿ ಉಸಿರು ಕಟ್ಟಿಸುವಂತೆ ಭಾಸವಾಗಿಸುತ್ತಿದೆ. ಯಾವುದನ್ನೂ ಬಿಟ್ಟು ಅರ್ಧ ದಿನವೂ ಆಫ್ ಲೈನ್ ಇರಲಾಗದಂತೆ, ಆಫ್ ಲೈನ್ ಹೋದಾಗ್ಯೂ ಚೈನ್ ಸ್ಮೋಕರ್ ಒಬ್ಬ ಸಿಗರೇಟ್ ಬಿಟ್ಟಾಗ ಚಡಪಡಿಸುವಂತೆ ಚಡಪಡಿಸುತ್ತೇವೆ.

ಒಂದು ಪ್ರವಾಸ ಹೋದಾಗರೂ ವಾಟ್ಸಪ್ಪು, ಫೇಸ್ಬುಕ್ಕು ಸ್ಟೇಟಸ್ ಚೆಕ್ ಮಾಡಬೇಕು ಅನಿಸುತ್ತದೆ... ಎಲ್ಲಿಗೆ ಹೋಗಲಿ, ಏನೇ ಮಾಡಲಿ ತಕ್ಷಣ ಸೆಲ್ಫೀ ತೆಗೆದು ಸ್ಟೇಟಸ್ಸಿಗೆ, ಫೇಸ್ಬುಕ್ ಗೋಡೆಗೆ ಹಾಕುವ ಅನ್ನಿಸುತ್ತದೆ. ಹೋದದ್ದು, ಬಂದದ್ದು, ಕೂತಿದ್ದು, ಒಂದು ಸಣ್ಣ ಕೆಲಸ ಮಾಡಿದ್ದನ್ನು ಕೂಡಾ ನಾಲ್ಕು ಜನರಿಗೆ ಜಾಲತಾಣಗಳಲ್ಲಿ ಹೇಳಿಕೊಳ್ಳೋಣ ಅನ್ನಿಸುತ್ತದೆ. ಚೆಂದದ ಸಾಲುಗಳನ್ನು, ಹಿತವಚನಗಳನ್ನು, ಉಪದೇಶಗಳನ್ನು ಸ್ವತಃ ಪಾಲಿಸಲಾಗದಿದ್ದರೂ ಫಾರ್ವರ್ಡ್ ಮಾಡೋಣ, ಸ್ಟೇಟಸ್ಸಿನಲ್ಲಿ ಹಾಕೋಣ ಅನ್ನಿಸುತ್ತದೆ. ಅಂತಹ ಸ್ಟೇಟಸ್ಸುಗಳನ್ನು ಹಾಕಿಕೊಂಡಾಗ್ಯೂ ಬದುಕು ಬದಲಾಗಿರುವುದಿಲ್ಲ...

ಸೆಲ್ಫೀಗಳಲ್ಲಿ ಹಿಂದಿನ ಜಲಪಾತಕ್ಕಿಂತ ನಮ್ಮ ಮುಖವೇ ಎದ್ದು ಕಾಣುತ್ತಿರುತ್ತದೆ. ಸೆಲ್ಫಿಗೋಸ್ಕರ ದೊಡ್ಡದಾಗಿಸಿದ ಕಣ್ಣು, ವಿಕ್ಟರಿ ಶೇಪಿನಲ್ಲಿ ಸದಾ ಕಾಣುವ ಬೆರಳುಗಳು ನಮ್ಮ ಹಿಂದಿನ ಪ್ರಕೃತಿ ಸೌಂದರ್ಯವನ್ನು ಮಸುಕಾಗಿಸುತ್ತವೆ. ನಾವು ನೋಡಿದ ಬೆಟ್ಟ, ನದಿ, ಜಲಪಾತದ ಸೌಂದರ್ಯವನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಆಸ್ವಾದಿಸುವ ಬದಲು ಫೋಟೋ ತೆಗೆಯೋಣ, ವಿಡಿಯೋ ಮಾಡೋಣ, ಮಾಡಿದ ತಕ್ಷಣ ಅಲ್ಲಿಂದಲೇ ಸ್ಟೇಟಸ್ಸಿಗೆ ಹಾಕೋಣ ಅಂತಲೇ ಅನ್ನಿಸುತ್ತದೆ. ಎಲ್ಲೋ ಗಿರಿಧಾಮದ ತುದಿಯಲ್ಲಿ ನೆಟ್ವರ್ಕ್ ಸಿಗದಿದ್ದರೆ ಅದಕ್ಕೋಸ್ಕರ ಖುಷಿ ಪಡಿಯುವುದು ಬಿಟ್ಟು ತುಂಬ ಮಂದಿ ಅಯ್ಯೋ ನೆಟ್ವರ್ಕ್ ಸಿಗೋದಿಲ್ಲ ಅಂತ ಪರಿತಪಿಸುತ್ತೇವೆ...!!!

ಜೋರಾಗಿ ಕಿರುಚಿ ಪ್ರತಿಧ್ವನಿ ಕೇಳಿಸುವಂತಹ ಬೆಟ್ಟಗಳು ಊರಲ್ಲಿಲ್ಲ, ಸಂಜೆ ಸೈಕಲ್ ಕಲಿಯಲು ಮೈದಾನಗಳೇ ಇಲ್ಲ, ತೋಡಿನಲ್ಲಿ ಹೋಗಿ ಬಟ್ಟೆ ತೊಳೆಯುವವರಿಲ್ಲ, ನಡೆದುಕೊಂಡು ಯಾರೂ ಶಾಲೆಗೆ ಹೋಗುವುದಿಲ್ಲ (ಕೆಲವರು ಇರಬಹುದು, ತೀರಾ ಹತ್ತಿರ ಶಾಲೆ ಇರುವವರು), ಸಿನಿಮಾ ನೋಡಲು ಥಿಯೇಟರೇ ಬೇಕೆಂದಿಲ್ಲ, ಹಾಡು ಕೇಳಲು ರೇಡಿಯೋವೇ ಬೇಕಾಗಿಲ್ಲ, ಮನರಂಜನೆಗೆ ಇಡೀ ರಾತ್ರಿ ನಿದ್ರೆಗೆಟ್ಟು ಯಕ್ಷಗಾನ ನೋಡಬೇಕಾಗಿಲ್ಲ... ಎಲ್ಲವೂ ಮೊಬೈಲಿನಲ್ಲಿ, ಟಿ.ವಿ.ಯಲ್ಲಿ, ಇಂಟರ್ ನೆಟ್ಟಿನಲ್ಲಿ ಸಿಗುತ್ತದೆ...ಮೊಬೈಲ್ ನೆಟ್ವರ್ಕ್ ಇಲ್ಲದ ಊರುಗಳ ಪ್ರಮಾಣವು ಕಡಿಮೆಯಾಗುತ್ತಿದೆ. ನಾಟ್ ರೀಚೇಬಲ್ ಆಗುವವರ ಸಂಖ್ಯೆ ಕಳೆದ ಒಂದು ದಶಕದಲ್ಲಿ ಗಣನೀಯವಾಗಿ ಇಳಿದಿದೆ. ಆದರೂ ಇವತ್ತಿಗೂ ಯಾವುದು ನಿಜ, ಯಾವುದು ಸುಳ್ಳು, ಯಾರ ವಾದವನ್ನು ನಂಬಬಹುದು, ಯಾರ ವಾದ ಮಿಥ್ಯ ಎಂಬಂಥ ಗೊಂದಲಕ್ಕೆ ಜನರಿಗೆ ಉತ್ತರವೇ ಸಿಗುವುದಿಲ್ಲ....

 

.....

 

ಕಾಲದ ಓಟದಲ್ಲಿ ಯಾರೂ ಹಿಂದುಳಿಯಲಿಕ್ಕಾಗುವುದಿಲ್ಲ, ಸಾಗಲೇ ಬೇಕು. ಸಮಕಾಲೀನರಾಗುವುದು ಅಥವಾ 2-3 ದಶಕಗಳ ಹಿಂದಿನ ಮನಃಸ್ಥಿತಿಯಲ್ಲೇ ಉಳಿಯುವುದು ಅವರವರಿಗೆ ಬಿಟ್ಟ ವಿಚಾರ. ಕಾಲಕ್ಕೆ ತಕ್ಕ ಹಾಗೆ ಬದುಕಲಾಗದಿದ್ದರೆ ನೀವು ಬೇಸಿಕ್ ಹ್ಯಾಂಡ್ ಸೆಟ್ಟಿನ ಮೊಬೈಲಿಗೆ 4ಜಿ ಸಿಂ ಹಾಕಿ ಪರದಾಡಿದ ಹಾಗಾಗುತ್ತದೆ. ಅಪ್ಡೇಟ್ ಆಗದ ಆಪರೇಟಿಂಗ್ ಸಿಸ್ಟಂ ಇರುವ ಲ್ಯಾಪ್ಟಾಪು, ಮೊಬೈಲ್ ಹಿಡ್ಕೊಂಡ್ರೆ ಸಿಸ್ಟಂ ಡಸ್ ನೋಟ್ ಸಪೋರ್ಟ್ ಅನ್ನುವ ಸಂದೇಶ ನೋಡಿ ಇಂಗು ತಿನ್ನುವ ಮಂಗನಂತಾಗುತ್ತೇವೆ.

 

ವೈರಲ್ ಹೆಸರಿನ ಸಂದೇಶಗಳನ್ನೇ ತೆಗೆದುಕೊಳ್ಳಿ. ವಾಟ್ಸಪ್ಪು ಗ್ರೂಪುಗಳಲ್ಲೂ ಅದೇ, ಸ್ಟೇಟಸ್ಸುಗಳಲ್ಲೂ ಅದೇ, ಹೋಗಲಿ ಫೇಸ್ಬುಕ್ಕು ತೆರೆದರೆ ಅಲ್ಲೂ ಅದುವೇ... ಒಬ್ಬರು ಇಬ್ಬರು ಮಾತ್ರವಲ್ಲ, ನೂರಾರು ಮಂದಿ ಅದನ್ನೇ ಹಂಚಿಕೊಂಡಿರುತ್ತಾರೆ. ಅವುಗಳಿಂದ ತಪ್ಪಿಸಿಕೊಳ್ಳುವ ಹಾಗೆಯೇ ಇಲ್ಲ... ಆಯ್ತು ಅವುಗಳ ನೋಟಿಫಿಕೇಶನ್ ಎಲ್ಲ ಸ್ಥಗಿತಗೊಳಿಸಿ ಕುಳಿತರೂ ರಾತ್ರಿ ನಿಮ್ಮ ಗ್ರೂಪಿನಲ್ಲಿ ಯಾರೋ ಒಬ್ಬ ಹೊಸದಾಗಿ ಸಿಕ್ಕಿದ ಮಿಠಾಯಿಯ ಹಾಗೇ ಅದೇ ಹಳಸಲು ವೈರಲ್ ಮೆಸೇಜನ್ನು ಫಾರ್ವರ್ಡ್ ಮಾಡಿ ಸಂಭ್ರಮಿಸುತ್ತಾನೆ. ಮನುಷ್ಯ ತನ್ನೆಲ್ಲ ಕೌಟುಂಬಿಕ, ವ್ಯಾವಹಾರಿಕ ತೊಳಲಾಟಗಳ ನಡುವೆ ಎಷ್ಟು ಅಂತ ಮಾಹಿತಿಗಳನ್ನು ಓದಲು, ಗಮನಿಸಲು, ಅರ್ಥ ಮಾಡಿಕೊಳ್ಳಲು, ಪ್ರತಿಕ್ರಿಯಿಸಲು ಸಾಧ್ಯ...? ಮೆದುಳಿನ ಸಾಮರ್ಥ್ಯಕ್ಕೂ ಒಂದು ಮಿತಿ ಇಲ್ಲವೇ...?

 

ಉದಾಹರಣೆಗೆ... ನನ್ನ ಈ ಬರಹವನ್ನೇ ತೆಗೆದುಕೊಳ್ಳಿ. ಬಹಳಷ್ಟು ಮಂದಿ ನೀವಿಗ ಓದುತ್ತಿರುವ ಸಾಲಿನ ತನಕ ಓದಿರುವುದೇ ಇಲ್ಲ. ಎರಡು ಪ್ಯಾರಾ ಓದಿ ಲೈಕ್ ಕೊಟ್ಟು ಮುಂದಿನ ಪೋಸ್ಟು ನೋಡಲು ಹೋಗುತ್ತಾರೆ. ಬಹಳಷ್ಟು ಸಲ ಅದು ಅನಿವಾರ್ಯವೂ ಆಗಿರುತ್ತದೆ. ಆಯ್ಕೆಗಳು ಸಿಕ್ಕಾಪಟ್ಟೆ ಇದ್ದಾಗ, ಎಲ್ಲವೂ ಸ್ವಾರಸ್ಯಕರವೇ ಅನ್ನಿಸುವಾಗ, ಪುರುಸೊತ್ತೇ ಇಲ್ಲದಿರುವಾಗ ಯಾರಾದರೂ ಏನು ತಾನೆ ಮಾಡಲು ಸಾಧ್ಯ...

 

..........

 

ಯಾವುದಕ್ಕೆ ಸಮಯ ನೀಡಬೇಕು ಅಂತ ಗೊಂದಲ. ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮದವರು, ಬುದ್ಧಿಜೀವಿಗಳು, ಜ್ಯೋತಿಷಿಗಳು, ಧಾರ್ಮಿಕ ಮುಖಂಡರು, ವಿಜ್ಞಾನಿಗಳು ಯಾರು ಹೇಳಿದ್ದು ನಂಬಬೇಕು ಅನ್ನುವ ಗಲಿಬಿಲಿ, ಬ್ರೇಕೇ ಇಲ್ಲದೆ ವಾಟ್ಸಪ್ಪಿನಲ್ಲಿ ಬರಿದು ಬರುವ ಸುದ್ದಿ, ಲೇಖನ, ಉಪದೇಶ, ಫೋಟೋ, ವಿಡಿಯೋಗಳಲ್ಲಿ ಎಷ್ಟು ನೋಡಬೇಕು, ಎಷ್ಟು ಬಿಡಬೇಕು. ಇದನ್ನೆಲ್ಲ ಬರೆಯುವವರು ಯಾರು. ಎಲ್ಲಿಂದ ಬರುತ್ತದೆ. ಎಷ್ಟು ಮಂದಿ ಇವುಗಳನ್ನು ಫಾರ್ವರ್ಡ್ ಮಾಡಿರಬಹುದು? ಎಂಬ ಲೆಕ್ಕಕ್ಕೆ ಸಿಗದ ಜಿಜ್ಞಾಸೆ... ಇಷ್ಟವೇ ಇಲ್ಲದಿದ್ದರೂ ಯಾರದ್ದೋ ದಾಕ್ಷಿಣ್ಯಕ್ಕೆ ಉಳಿದುಕೊಂಡ ಹತ್ತಾರು ವಾಟ್ಸಪ್ ಗ್ರೂಪುಗಳು, ತಮ್ಮ ಗುಡ್ ಮಾರ್ನಿಂಗ್, ಗುಡ್ ನೈಟುಗಳಿಂದಲೇ ದಿನ ಶುರುವಾಗಿ, ಮುಗಿಯುತ್ತದೋ ಎಂಬಂತೆ ಇರುವ ಅಷ್ಟೂ ಗ್ರೂಪುಗಳಲ್ಲಿ ದಿನಕ್ಕೆರಡು ಬಾರಿ ಮಾತ್ರ ಪ್ರತ್ಯಕ್ಷವಾಗಿ ಶುಭೋದಯ, ಶುಭರಾತ್ರಿ ಹಾಕಿ ಮತ್ಯಾವತ್ತೂ ಗ್ರೂಪಿನ ಬಗ್ಗೆ ತಲೆಕೆಡಿಸದ ಜೀವನೋತ್ಸಾಹಿಗಳು, ಯಾರೋ ಬರೆದ್ದದ್ದನ್ನು ಎಡಿಟ್ ಮಾಡಿ ತಮ್ಮ ಹೆಸರಿನಲ್ಲಿ ಸ್ಟೇಟಸ್ಸಿನಲ್ಲಿ ಹಾಕುವವರು. ವೈದ್ಯಲೋಕದ ಬಗ್ಗೆ, ರಾಜಕೀಯದ ಬಗ್ಗೆ, ಇತಿಹಾಸದ ಬಗ್ಗೆ ಅರೆದು ಕುಡಿದವರ ಹಾಗೆ ಫೇಸ್ಬುಕ್ಕಿನಲ್ಲಿ ಕಿತ್ತಾಡುವವರು, ಇದಮಿತ್ಥಂ ಎಂಬಂತೆ ಫರ್ಮಾನು ಹೊರಡಿಸುವವರು, ಯಾವುದು ಸೂಕ್ತ, ಯಾವುದೇ ಅನುಚಿತ ಎಂಬ ಪ್ರಜ್ಞೆಯೂ ಇಲ್ಲದೆ ವಿಧ ವಿಧದ ಫೋಟೋಗಳನ್ನು, ಖಾಸಗಿ ಕ್ಷಣಗಳನ್ನೂ ಜಾಲತಾಣಗಳಲ್ಲಿ ಹಾಕಿ ಕೃತಾರ್ಥರಾಗುವವರು, ರಕ್ತಸಂಬಂಧಿಗಳಿಗೆ, ಮನೆ ಮಂದಿಯ ಮೇಲಿನ ಪ್ರೀತಿಯನ್ನು ಪದಗಳಲ್ಲಿ ಕಟ್ಟಿ ಸ್ಟೇಟಸ್ಸಿನಲ್ಲಿ ಹಾಕಿ ವಿಚಿತ್ರವಾದ ಸಾರ್ಥಕತೆ ಕಾಣುವವರು....ಫೇಸ್ಬುಕ್ಕಿನಲ್ಲಿ ತೋರಿಸಿಕೊಳ್ಳುವುದಕ್ಕೂ, ನಿಜಬದುಕಿನಲ್ಲಿ ಬೇರೆಯೇ ಆಗಿರುವವರು.. ಹೀಗೆ ಎಷ್ಟೆಷ್ಟೋ ಅಸಹಜತೆಗಳು, ಅತಿರೇಕಗಳಿಗೆ ನಿತ್ಯ ಸಾಕ್ಷಿಗಳಾಗುತ್ತಿರುತ್ತೇವೆ. ತಲೆಕೆಡಿಸದವರು ಯಾಂತ್ರಿಕವಾಗಿ ಮುಂದೆ ಹೋಗುತ್ತಾರೆ. ಎಲ್ಲವನ್ನೂ ತಲೆಗೆ ಹಚ್ಚಿಕೊಳ್ಳುವವರು ವೃಥಾ ಮಂಡೆಬಿಸಿ ಮಾಡಿಕೊಳ್ಳುತ್ತಾರೆ. ಅಷ್ಟೇ ವ್ಯತ್ಯಾಸ!

 

ಈ ಪೈಕಿ 80, 90ರ ದಶಕದಲ್ಲೂ ಹುಟ್ಟಿದವರೂ ಇದ್ದಾರೆ. ಬಹಳಷ್ಟು ಮಂದಿ ಸಮಕಾಲೀನರಾಗಿದ್ದಾರೆ. ಹಲವರು ಸಮಕಾಲೀನರಾಗಲಾಗದೆ ತೊಳಲಾಡುತ್ತಿದ್ದಾರೆ. ಇನ್ನೂ ಕೆಲವರು ಇದ್ದಾರೆ ತನಗೆ ಜಾಲತಾಣಗಳ ಗೊಡವೆ ಬೇಡವೆಂದು ಮನಃಶಾಂತಿ ಉಳಿಸಿಕೊಂಡವರು. ಆದರೆ ತುಂಬ ಸಲ ಸಾಮಾನ್ಯ ಜ್ಞಾನಕ್ಕೋಸ್ಕರ, ಉದ್ಯೋಗಕ್ಕೋಸ್ಕರ, ಅನಿವಾರ್ಯ ಸಂವಹನಕ್ಕೋಸ್ಕರ ಜಾಲತಾಣ, ಮೊಬೈಲು, ಇಂಟರ್ ನೆಟ್ಟುಗಳನ್ನು ಹೊರಗಿಟ್ಟು ಬದುಕಲು ಸಾಧ್ಯವೇ ಇಲ್ಲ. ಹಿತಮಿತ ಬಳಕೆಯಾಗಲಿ, ಅಗತ್ಯದ ಹೊರತಾಗಿ ತನ್ನ ಪಾಡಿಗೆ ತಾನಿರಬಹುದಾದ ಇಚ್ಛಾಶಕ್ತಿ ಬೆಳೆಸುವುದಾಗಲೀ ಅವರವರಿಗೆ ಬಿಟ್ಟದ್ದು...

 

....

 

ಬರಹದ ಶುರುವಿಗೇ ಹೇಳಿದ ಹಾಗೆ ತುಂಬ ಹೊತ್ತು ಆಫ್ ಲೈನ್ ಇರುವ ವ್ಯಕ್ತಿ ಅನಾರೋಗ್ಯ ಪೀಡಿತನಾಗಿದ್ದಾನೆ. ಸ್ಟೇಟಸ್ಸು ಹಾಕದವ ಸತ್ತೋಗಿದ್ದಾನೆ, ನಿರಂತರ ಆನ್ ಲೈನ್ ಇರುವ ವ್ಯಕ್ತಿ ಕೆಲಸವಿಲ್ಲದೆ ಬಿದ್ಕೊಂಡಿದ್ದಾನೆ... ನಗು ನಗುವ ಡಿಪಿ, ಬ್ಯೂಟಿ ಮೋಡಿನಲ್ಲಿ ಸೆಲ್ಫೀ ತೆಗೆದು ಹಾಕುತ್ತಲೇ ಇರುವವರು ಬದುಕಿನಲ್ಲಿ ಅತ್ಯಂತ ಖುಷಿ ಖುಷಿಯಾಗಿದ್ದಾರೆ ಎಂದೆಲ್ಲ ಅರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ನಾವು ಸಮಕಾಲೀನರಾಗಿದ್ದೇವೆ...

 

......

 

 

ನನಗನ್ನಿಸುವುದು: ಬಹಳಷ್ಟು ಸಾರಿ ನಮ್ಮ ಮನಸ್ಸು ಈ ಸಿದ್ಧ ಮಾದರಿಯ ಯೋಚನೆಗಳಿಂದ ಹೊರ ಬರಲು ಒಪ್ಪುವುದೇ ಇಲ್ಲ. ವಾಟ್ಸಪ್ಪು ಗ್ರೂಪುಗಳಲ್ಲಿ, ಸ್ಟೇಟಸ್ಸುಗಳಲ್ಲಿ, ಫೇಸ್ಬುಕ್ಕಿನಲ್ಲಿ ಒಂದೇ ಮಾದರಿಯ ಬರಹಗಳು, ಅದೇ ಪೋಸುಗಳು ಫೋಟೋಗಳು, ಹಾಡು, ಕವನ, ರಾಶಿ ರಾಶಿ ಫಾರ್ವರ್ಡ್ ಗಳ ಸರಕುಗಳ ಹಿಂದಿರುವುದು ಸಿದ್ಧ ಮಾದರಿಯ ಚಿಂತನೆಯ ಪ್ರತಿರೂಪ. ತುಂಬ ಯೋಚಿಸಬೇಕು ಅನ್ನಿಸುವುದಿಲ್ಲ. ಪ್ರತಿಯೊಬ್ಬರಿಗೂ ಹೇಳಿಕೊಳ್ಳುವ, ತೋರಿಸಿಕೊಳ್ಳುವ ಆತುರ, ತುಡಿತ... ಕೇಳಿಸಿಕೊಳ್ಳುವ, ವೀಕ್ಷಿಸುವ, ಓದುವಷ್ಟು ತಾಳ್ಮೆಯಾಗಲಿ, ವ್ಯವಧಾನವಾಗಲಿ ಇರುವುದಿಲ್ಲ. ಎಲ್ಲರೂ ಫಾರ್ವರ್ಡ್ ಮಾಡುತ್ತಾರೆ, ಯಾರೂ ಓದದಿದ್ದರೂ ಫಾರ್ವರ್ಡ್ ಮಾಡಿದವರಿಗೆ ಬೇಸರ ಆಗುವುದಿಲ್ಲ. ಬಳಸುವ ಭಾಷೆ ಇರಬಹುದು, ಹುಟ್ಟಿದ ದಿನಕ್ಕೆ ಶುಭಾಶಯ ಕೋರುವ ಅದೇ ಸಿದ್ಧ ಮಾದರಿಯ ಶೈಲಿ ಇರಬಹುದು... ಅದನ್ನು ಪಾಲಿಸಿದಲ್ಲಿಗೆ ತಾನು ಸಮಕಾಲೀನನಾದೆ, ನಾನೂ ಬಹಳಷ್ಟು ಕಲಿತಿದ್ದೇನೆ ಎಂದು ಬರಿದೇ ಬೀಗುತ್ತೇವೆ. ಯಾವುದೇ ಬರಹ, ಕಿರುಚಿತ್ರ, ಕವನ ಇರಲಿ ಅದನ್ನು ಸಿದ್ಧಪಡಿಸಿ ಒಂದೇ ಕ್ಲಿಕ್ಕಿಗೆ ಓದಲು ಸಿಗುವಂತೆ ಸಿದ್ಧಪಡಿಸಿದರೆ  ಸರಿ... ಒಂದಿಷ್ಟಾದರೂ ಓದಲು ಪುರುಸೊತ್ತಾಗುತ್ತದೆ. ಇಲ್ಲದಿದ್ದರೆ ಲಿಂಕ್ ನೋಡಿಯೇ ಲೈಕು ಕೊಟ್ಟು ಪಾರಾಗುತ್ತಾರೆ, ಅಥವಾ ಪಾರಾಗುತ್ತೇನೆ.

ಲೈಕ್ ಮಾಡಿ, ಶೇರ್ ಮಾಡಿ, ಸಬ್ ಸ್ಕ್ರೈಬ್ ಮಾಡಿ ಎಂಬ ಒತ್ತಾಯ, ಕಂಡು ಕೇಳರಿಯದವರನ್ನೂ ಫ್ರಂಡ್ ಆಗಿಸಿ, ಒತ್ತಾಯಪೂರ್ವಕವಾಗಿ ಲೈಕ್ ಮಾಡಿಸಿ... ಆನ್ ಲೈನಿನಲ್ಲೇ ಪ್ರಶಸ್ತಿ ಪತ್ರ ಪಡೆದು, ಅದನ್ನು ಆನ್ ಲೈನಿನಲ್ಲೇ ಪ್ರದರ್ಶಿಸಿ, ಮತ್ತೆ ಪುನಃ ಅದಕ್ಕೆ ನೂರಾರು ಲೈಕುಗಳು ಬಂದು... ಈ ಭ್ರಮೆಯ ಸರಪಳಿ ಮರುಕಳಿಸುತ್ತಲೇ ಇರುತ್ತದೆ.... ಇಷ್ಟುದ್ದದ ಬರಹ ಓದಲೇ ಪುರುಸೊತ್ತಿಲ್ಲ. ಇನ್ನು ಕಾದಂಬರಿಗಳು, ಗ್ರಂಥಗಳ ಪಾಡೇನು?

 

….

 

ಇರಲಿ...

ಆಗಿತ್ತು, ಈಗಿಲ್ಲ ಎಂಬ ಮಾತ್ರಕ್ಕೆ ಈಗ ತಪ್ಪು, ಆಗ ಸರಿ ಅಂತಲ್ಲ... ಆಗ ಇಲ್ಲದ್ದು ಈಗ ಎಷ್ಟೋ ಇದೆ ಬದುಕಿನಲ್ಲಿ. ಆದರೆ ಆ ಪುರುಸೊತ್ತು, ಸೂಕ್ಷ್ಮತೆ, ಮಿತವ್ಯಯದ ಬುದ್ಧಿ, ಕೇಳಿಸಿಕೊಳ್ಳುವ ತಾಳ್ಮೆ, ಸ್ಪಷ್ಟವಾದ, ನೇರವಾದ, ಸ್ವಂತದ್ದೇ ಆದ ಮಾತುಗಳನ್ನೂ ಕಳೆದುಕೊಳ್ಳುತ್ತಿದ್ದೇವಲ್ಲ.. ಇದು ಮಾತ್ರ ಸ್ವಯಂಕೃತಾಪರಾಧ. ಇವೆಲ್ಲ ಯಾರೂ ಹೇರಿದ್ದಲ್ಲ. ನಮಗೆ ನಾವೇ ಯಾಂತ್ರಿಕರಾಗುವ ಮೂಲಕ ಹೇರಿಕೊಳ್ಳುತ್ತಿರುವ ಮುಖವಾಡ.... ಇಂತಹ ಪ್ರವೃತ್ತಿಯನ್ನು ಯಾವ ಸ್ಟೇಟಸ್ಸಿನ ಕ್ವೋಟುಗಳೂ ಬದಲಾಯಿಸಲಾರವು... ನಮ್ಮ ಬಗ್ಗೆ ನಾವೇ ಯೋಚಿಸಿಕೊಳ್ಳದ ಹೊರತು!!!

 

(ಕೊನೆಯ ತನಕ ಯಾರಾದರೂ ಲೇಖನ ಓದಿದ್ದರೆ ಅವರಿಗೆ ಅನಂತಾನಂತ ಧನ್ಯವಾದಗಳು)

-ಕೃಷ್ಣಮೋಹನ ತಲೆಂಗಳ (07.11.2020)

 

No comments: