ಮನಃಸ್ಥಿತಿಗೂ ಮಾಸ್ಕು ಬೇಡವೇ, ಬಾಯಿಗೆ ಸಾಕೆ?


ಏಳು ತಿಂಗಳುಗಳಿಂದ ಮುಖಗಳಿಗೆ ಅಯಾಚಿತವಾಗಿ ಮಾಸ್ಕು ಬಂದಿದೆ. ಆದರೆ ಕಟ್ಟಿಕೊಂಡಿದ್ದು ಬಾಯಿಯನ್ನು ಹೊರತು, ಭಾವವನ್ನಲ್ಲ. ಅದೂ ಕೆಲವೊಮ್ಮೆ ಒತ್ತಾಯಕ್ಕೆ. ಪೊಲೀಸರು ನೋಡುತ್ತಾರೆ ಎಂದೋ... ಯಾರೋ ಸ್ವಲ್ಪ ತಿಳಿವಳಿಕೆ ಉಳ್ಳವರು ಬಯ್ಯುತ್ತಾರೆ ಎಂದೋ ಕೂಡಾ ಹೌದು... ಅಸಲಿಗೆ ಬಹುತೇಕರು ಯಾರು? ಯಾಕಾಗಿ? ಯಾರಿಗೋಸ್ಕರ ಮಾಸ್ಕು ಕಟ್ಟುತ್ತಿದ್ದೇವೆ? ಎಂಬುದನ್ನೇ ಮರೆತಂತಿದೆ. ಬಾಯಿ ಮುಚ್ಚಿ ಮೂಗು ತೆರೆದಿರುವುದು ಅಥವಾ ಗುಂಪು ಸೇರುವ ತನಕವೂ ಶಿಸ್ತಿನಿಂದ ಮಾಸ್ಕು ಕಟ್ಟಿ, ಯಾರಾದರೂ ಮಾತಿಗೆ ಸಿಕ್ಕಿದ ತಕ್ಷಣ ಸ್ವರ ಕೇಳುವುದಿಲ್ಲ ಎಂಬ ಕಾರಣಕ್ಕೆ ಮಾಸ್ಕು ಜಾರಿಸಿ ಮಾತನಾಡುವುದೇ ಇದಕ್ಕೆ ಸಾಕ್ಷಿ...!!! (ಸುಶಿಕ್ಷಿತರು ಹಲವರು ಹೀಗೆ ಮಾಡುವುದ ಗಮನಿಸಿದ್ದೇನೆ.)

 

....

 

ಮಾಸ್ಕು ಬಾಯಿಯನ್ನು ಸಾಂಕೇತಿಕವಾಗಿ ಕಟ್ಟಿದರೆ ಸಾಲದು. ಭಾವವನ್ನೂ ನಿಯಂತ್ರಿಸಬೇಕು. ನನ್ನ ಲೆವೆಲಿನಲ್ಲಿ ಕೊರೋನಾ ಹರಡದಂತೆ ತಡೆಯುತ್ತೇನೆ ಎಂಬ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಬಲವಾಗಿ ಮೂಡಿದಾಗ ಬಹಳಷ್ಟು ಪರಿಣಾಮಕಾರಿಯಾಗಿ ದಂಡ, ಶಿಕ್ಷೆ, ಕಡ್ಡಾಯಗಳಿಲ್ಲದೆ, ನಿರ್ಬಂಧ, ಲಾಕ್ಡೌನ್, ಹೇರುವ ಯಾವುದೇ ನಿಬಂಧನೆಗಳಿಲ್ಲದೆ ಕೊರೋನಾದ ಜೊತೆ ಆಯುಷ್ಯ ಇರುವಷ್ಟು ದಿನ ಜೀವಿಸಬಹುದು...

 

ಬದಲಾಗಬೇಕಿದ್ದು, ಎಲ್ಲರೂ ಮಾಡುತ್ತಾರೆ ಎಂದು ನಾನೂ ಹೇಗ್ಹೇಗೋ ಮಾಸ್ಕು ಕಟ್ಟುತ್ತೇನೆ ಎಂಬ ಯಾಂತ್ರಿಕ ಮನಃಸ್ಥಿತಿ... ಬರಬೇಕಾಗಿದ್ದು, ನನಗೋಸ್ಕರ, ನನ್ನ ಸುತ್ತಮುತ್ತಲಿನವರಿಗೋಸ್ಕರ ಮಾಸ್ಕು ಕಟ್ಟುತ್ತೇನೆ ಮತ್ತು ಪ್ರಜ್ಞಾಪೂರ್ವಕವಾಗಿ ಅಂತರ ಹಾಗೂ ಕೋವಿಡ್ ಶಿಷ್ಟಾಚಾರವನನ್ನು ನನಗೋಸ್ಕರ ಪಾಲಿಸುತ್ತೇನೆ ಎಂಬ ಮನೋಭಾವ ಅಷ್ಟೇ... ಇದೇನು ದೊಡ್ಡ ಬಂಡವಾಳ ಅಥವಾ ಕಠಿಣ ತರಬೇತಿ ಬಯಸುವ ವಿಚಾರವಲ್ಲ, ಸಣ್ಣದೊಂದು ಪ್ರಜ್ಞೆ ಮೂಡಬೇಕು ಅಷ್ಟೇ...

 

.......

 

ಪುಟ್ಟದೊಂದು ಉದಾಹರಣೆ ಕೊಡುವುದಾದರೆ: ಇವತ್ತು (ಅ.10) ಬೆಳಗ್ಗಿನಿಂದ ಒಂದು ಸಂದೇಶ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು, ಇಂದಿನ ದಿನ ಮಹತ್ವದ್ದು 10.10.2020 ಎಂಬ ತಾರೀಕು. ಇದು ಅಪರೂಪದ್ದು ಇತ್ಯಾದಿ ಇತ್ಯಾದಿ... ಸರಿ. ಅಪರೂಪದ್ದು ಎಂದ ತಕ್ಷಣ ನಾವು ಮಾಡುವ ಮೊದಲ ಕೆಲಸ ಅದನ್ನು ತೆಗೆದು ವಾಟ್ಸಪ್ಪಿನ ಸ್ಟೇಟಸ್ಸಿಗೆ ಹಾಕುವುದು ಮತ್ತೆ ಫೇಸ್ಬುಕ್ಕಿಗೆ ಹಾಕುವುದು ಮತ್ತೂ ಪುರ್ಸೊತ್ತಿದ್ದರೆ ಯಥಾಶಕ್ತಿ ಹತ್ತಾರು ಗ್ರೂಪುಗಳಿಗೆ ಫಾರ್ವರ್ಡ್ ಮಾಡುವುದು. ಮತ್ತೆ ನಮ್ಮ ಅಂದಿನ ದಿನ ಎಂದಿನಂತೇ ಇರುತ್ತದೆ. ವಿಶೇಷ ಆಗಿ ಎಷ್ಟು ಮಂದಿ ಪಾಲಿಗೆ ಕಾಣುತ್ತದೋ ಗೊತ್ತಿಲ್ಲ. 24 ಗಂಟೆಗಳ ಬಳಿಕ ಆ ಸ್ಟೇಟಸ್ಸು ತನ್ನಷ್ಟಕೇ ಮಾಯವಾಗುತ್ತದೆ... ಅದಕ್ಕಿಂತ ಎಷ್ಟೋ ಗಂಟೆ ಮೊದಲೇ ಸ್ಟೇಟಸ್ಸು ಹಾಕಿದಾಗ ತನ್ನ ಸ್ಟೇಟಸ್ಸನ್ನೇ ಮರೆತಿರುತ್ತಾನೆ!

 

ವಿಶಿಷ್ಟ ದಿನಾಂಕವವನ್ನು ಗುರುತಿಸುವುದು, ಮಾಹಿತಿ ಹಂಚಿಕೆ, ಪ್ರಸಾರ ಯಾವುದೂ ತಪ್ಪಲ್ಲ, ತಪ್ಪು ಹುಡುಕಿದ್ದೂ ಅಲ್ಲ. ಸ್ಟೇಟಸ್ಸಿನಲ್ಲಿ ಇಂತಹ ವಿಚಾರ ಹಾಕ್ತೇವಲ್ಲ, ಯಾರ್ಯಾರೋ ಬದುಕಿನ ಬಗ್ಗೆ ಹೇಳಿದ ಸೂಕ್ತಿಗಳನ್ನು ಎದ್ದಾಕ್ಷಣ ಹಂಚಿಕೊಳ್ಳುತ್ತೇವೆ ಅಲ್ವ...?  ದಿನದ 12 ಗಂಟೆ ಸಕ್ರಿಯರಾಗಿರುವಷ್ಟೂ ಹೊತ್ತಿನಲ್ಲಿ ಎಷ್ಟರ ಮಟ್ಟಿಗೆ ಅಂದಿನ ದಿವನ್ನು ವಿಶಿಷ್ಟವಾಗಿ ನಾವು ಕಂಡುಕೊಳ್ಳುತ್ತೇವೆ?, ಎಷ್ಟರಮಟ್ಟಿಗೆ ಎಂದಿಗಿಂತಲೂ ಭಿನ್ನ ಅಂತ ತಿಳಿದುಕೊಳ್ಳುತ್ತೇವೆ...? ಎಷ್ಟರ ಮಟ್ಟಿಗೆ ಹೊಸದೇನಾದರೂ ಸಾಧಿಸಲು ಸಾಧ್ಯವ? ಅಂತ ಪ್ರಯತ್ನಿಸುತ್ತೇವೆ ಹಾಗೂ ದಿನದ ಕೊನೆಗೆ ಸಾಧನೆಯನ್ನು ಲೆಕ್ಕಹಾಕುತ್ತೇವೆ....? ಎಂಥದ್ದೇ ದಿನಾಂಕವಿರಲಿ, ಪರ್ವ ಇರಲಿ... ಅದನ್ನು ಆಚರಿಸುವ,  ಅನುಭವಿಸುವ ಹೊಸದಾಗಿ ಕಂಡುಕೊಳ್ಳುವ ಮನಃಸ್ಥಿತಿ ರೂಢಿಸಲಾಗದ, ಅನುಸರಿಸಲಾಗದ ಹೊರತು ಅದನ್ನು ಸ್ಟೇಟಸ್ಸಿನಲ್ಲಿ ಹಾಕುವುದು ಯಾಂತ್ರಿಕವಾಗುತ್ತದೆ ಅಷ್ಟೇ (ಖಂಡಿತಾ ತಪ್ಪೆಂದು ಹೇಳುತ್ತಿರುವುದಲ್ಲ, ಪ್ರಾಕ್ಟಿಕಲ್ ಇರೋಣ ಎಂಬ ಕಳಕಳಿ ಅಷ್ಟೇ). ನಾನು ಗಮನಿಸಿದಂತೆ ಬೆಳ್ಳಂಬೆಳಗ್ಗೆ ಸ್ಟೇಟಸ್ಸಿನಲ್ಲಿ ಹಾಕುವ ಹಿತವಚನದ ಸೂಕ್ತಿಗಳನ್ನು ಯಾರನ್ನೋ (ಸ್ಟೇಟಸ್ಸಿನ ವೀಕ್ಷಕರನ್ನು) ಉದ್ದೇಶಿಸಿ ಹಾಕಿದಂತಿರುತ್ತದೆಯೇ ವಿನಃ ವೈಯಕ್ತಿಕವಾಗಿ ತಾನು ಹೇಗಿದ್ದೇನೆಂಬ ವಿಮರ್ಶಾ ಪ್ರಜ್ಞೆ ನಾವು ರೂಢಿಸಿಕೊಂಡಿರುವುದಿಲ್ಲ...

 

...

 

ಮನಸ್ಸು ಯಾಂತ್ರಿಕವಾದಷ್ಟೂ ಬದುಕೂ ಯಾಂತ್ರಿಕವಾಗುತ್ತದೆ, ಪ್ರವೃತ್ತಿಗಳೂ ಸಹ. ಹಾಗಾಗಿ ಅತಿರೇಕ ಪ್ರವೃತ್ತಿಗಳು, ಉಡಾಫೆಯ ಮನಃಸ್ಥಿತಿಗೆ ಮಾಸ್ಕು ಬೇಕಾಗಿದೆ, ಕೇವಲ ಮೂಗು ಮತ್ತು ಬಾಯಿಗೆ ಮಾತ್ರವಲ್ಲ... ಏನು ಹೇಳುತ್ತೀರಿ?

-ಕೃಷ್ಣಮೋಹನ ತಲೆಂಗಳ. (10.10.2020)

 

No comments: