ಇಷ್ಟಾನಿಷ್ಟಗಳ ಗೊಡವೆ ಇಲ್ಲದ ಕಾಲ ಕಾಯುವುದೇ ಇಲ್ಲ...!

ಅಯ್ಯೋ ಕಳೆದು ಹೋಗ್ತಿದೆ ಅಂತ ಅಲವತ್ತುಕೊಂಡರೂ ಕಾಲವನ್ನು ಹಿಡಿದು ನಿಲ್ಲಿಸಲಾಗುವುದಿಲ್ಲ, ವಯಸ್ಸನ್ನು ಬಚ್ಚಿಟ್ಟು ಎಲ್ಲೋ ಪೆಟ್ಟಿಗೆಯೊಳಗೆ ಸುರಕ್ಷಿತವಾಗಿ ಠೇವಣಿ ಇರಿಸಲಾಗುವುದಿಲ್ಲ. ಕಷ್ಟದ ದಿನಗಳು ಬೇಗ ದಾಟಿ ಹೋಗಲಿ ಅಂತ ಕಾಲದ ಹರಿವಿನ ವೇಗವನ್ನು ಹೆಚ್ಚಿಸಲು ಆಗುವುದಿಲ್ಲ. ಕಾಲದ ಎದುರು ನಾವು ಪ್ರೇಕ್ಷಕರು ಮಾತ್ರ...

 


ಆಯ್ಕೆ ಇದೆಯೋ, ಇಲ್ಲವೋ, ದಾರಿ ಸರಿ ಇದೆಯೋ ಇಲ್ಲವೋ, ಪೂರ್ವನಿರ್ಧಾರದಂತೆಯೇ ಹೋಗಲು ಆಗುತ್ತಿದೆಯೋ ಇಲ್ಲವೋ...ಕಾಲದ ದಾರಿಯಲ್ಲಿ ಹೋಗಲೇಬೇಕು. ಹೋಗದಿದ್ದರೆ ಯಾವುದೋ ಗುರುತ್ವಾಕರ್ಷಣೆಯ ಶಕ್ತಿ ನಮ್ಮನ್ನು ಮುಂದೆ ದೂಡುತ್ತಲೇ ಇರುತ್ತದೆ. ಆಯ್ಕೆ ನಮ್ಮ ಕೈಯಲ್ಲಿಲ್ಲ...

....

 

ಈ ದಾರಿಯಲ್ಲಿ ನಮ್ಮದೊಂದು ಪಾತ್ರ. ಆ ಪಾತ್ರದ ಕುರಿತ ನಮ್ಮಲ್ಲಿರುವ ಕಲ್ಪನೆ, ದಾರಿಯ ಅಲ್ಲಲ್ಲಿ ಸಿಗುವ ಹಲವರಿಗೆ ನಮ್ಮ ಪಾತ್ರದ ಕುರಿತು ಕಾಣಿಸುವುದು, ಅವರು ಕಂಡುಕೊಳ್ಳುವುದು ಮತ್ತು ನಿಜವಾಗಿ ನಾವು ಇರುವುದು, ಇರಲು ಸಾಧ್ಯವಾಗುವುದು ಅಥವಾ ಹಾಗೆಯೇ ಇದ್ದೇವೆ ಎಂಬುದು ನಮಗೆ ಗೊತ್ತಿರುವುದು, ಇತರರು ನಂಬಿರುವುದು... ಇವೆಲ್ಲ ಕಾಲದ ದಾರಿಯಲ್ಲಿ ಹಾದು ಹೋಗುವಾಗ ದಾಟಲು ಸಿಗುವ ಹಂತಗಳು...

.....

 

ಆಗ ಸರಿ ಇತ್ತ, ಈಗ ಸರಿ ಇದೆಯಾ... ಮುಂದೆ ಹೇಗಿರಬಹುದು ಎಂಬ ಕಲ್ಪನೆಯೂ, ಸಿಂಹಾವಲೋಕನವೂ ನಮ್ಮ ಈಗಿನ ಮನಃಸ್ಥಿತಿಯ ದೃಢತೆಯ ಮೇಲೆ ಅವಲಂಬಿಸಿರುತ್ತದೆ ಅದರ ಫಲಿತಾಂಶ. ಹೋಲಿಕೆ, ಸಾಧ್ಯತೆ, ವಾಸ್ತವ ಮತ್ತು ಗ್ರಹಿಕೆಗಳ ಮಟ್ಟ ಕೂಡಾ ಇದ್ದದ್ದು, ಇರುವುದು ಮತ್ತು ಇರಬಹುದಾದವುಗಳಲ್ಲಿ ಸೋತೆವೋ, ಗೆದ್ದವೋ ಎಂಬುದನ್ನು ಲೆಕ್ಕ ಹಾಕಿ ಹೇಳುತ್ತದೆ. ಈ ಸೋಲು, ಗೆಲವು, ಸಾಧನೆ, ಅಪಮಾನಗಳೆಲ್ಲ ಒಬ್ಬೊಬ್ಬರ ಪದಕೋಶದಲ್ಲಿ ಒಂದೊಂದು ಅರ್ಥವನ್ನು ಹೊಂದಿ ತನ್ನ ಮೀಸೆಯೊಳಗೆ ತಾನೇ ನಗುತ್ತಿರುತ್ತದೆ...

....

 

ಪ್ರತಿ ವ್ಯಕ್ತಿಯ ಬದುಕೂ ಒಂದು ಪರಿಸ್ಥಿತಿ. ಆತನ ಗ್ರಹಿಕೆ, ದೃಷ್ಟಿಕೋನ, ಅರ್ಥೈಸಿಕೊಳ್ಳುವ ಸಾಧ್ಯತೆಗಳನ್ನು ಆ ಪರಿಸ್ಥಿತಿ ಹಾಗೂ ಆತ ಕಟ್ಟಿಕೊಂಡ ಮನಃಸ್ಥಿತಿ ಎರಡೂ ನಿರ್ಧರಿಸುತ್ತವೆ. ಹಾಗಾಗಿ ವ್ಯಕ್ತಿಗಳನ್ನು, ವ್ಯಕ್ತಿಗಳನ್ನು, ವ್ಯವಸ್ಥೆಯನ್ನು ಆತ ತನ್ನ ದೃಷ್ಟಿಯಿಂದ ನೋಡುತ್ತಾನೆ, ತನ್ನದೇ ಗ್ರಹಿಕೆಯಿಂದ ವಿಶ್ಲೇಷಣೆ ಮಾಡುತ್ತಾನೆ. ಅದೇ ಆಧಾರದಲ್ಲಿ ತನ್ನದೇ ಒಂದು ಷರಾ ಬರೆದು ತಾನು ಕಂಡದ್ದೇ ಸತ್ಯ ಅಂತ ನಂಬುತ್ತಾನೆ. ಬದುಕಿನ ವಿವಿಧ ಹಂತಗಳನ್ನು ದಾಟಿ ಬರುವಾಗ ಒಬ್ಬೊಬ್ಬರ ಪಾಲಿಗೆ ನಾವು ಒಂದೊಂದು ರೀತಿ ಕಾಣಿಸಲು ಇದೇ ಕಾರಣ. ವಾಸ್ತವಿಕವಾಗಿ ನಾವು ಏನೋ ಆಗಿರುವುದಕ್ಕೂ, ನಮ್ಮನ್ನು ಅವರಿವರು ಇನ್ನೇನೋ ಅಂದುಕೊಳ್ಳುವುದಕ್ಕೂ ನಡುವೆ ಒಂದು ವ್ಯತ್ಯಾಸ ಕಾಣಿಸುವುದಿದ್ದರೆ ಅದು ಇದೇ ಕಾರಣಕ್ಕೆ. ಕಾಣುವುದೇ ಬೇರೆ, ಕಾಣಿಸಿಕೊಳ್ಳುವುದೇ ಬೇರೆ. ಕಂಡುಕೊಂಡದ್ದು ಸರಿಯಾಗಿದ್ದರೆ ಅದುವೇ ಹೆಚ್ಚಿನ ಅರ್ಥೈಸಿಕೊಳ್ಳುವಿಕೆ ಅಷ್ಟೆ. ಹೊಗಳಿಕೆ, ಸ್ತುತಿ, ಆರಾಧನೆ, ಪುರಸ್ಕಾರಗಳೆಲ್ಲ ಆಯಾ ಕಾಲಘಟ್ಟಕ್ಕೆ ಸಲ್ಲಬಹುದೇ ಹೊರತು ಇಡೀ ಬದುಕನ್ನೇ ಕಡೆದಿಟ್ಟ ಬೆಣ್ಣೆಯ ಮುದ್ದೆಯ ಹಾಗೆ ಪ್ರಶಸ್ತಿಗೆ ಯೋಗ್ಯ, ಜೀವಿತಾವಧಿಗೆ ಪುರಸ್ಕಾರ ಅನ್ನುವ ಹಾಗೆ ಅತಿ ಪ್ರಶಂಸೆಗೆ ಶುರವಿಟ್ಟರೆ ಅದು ಬಹಳಷ್ಟು ಸಾರಿ ಅಪ್ರಸ್ತುತವಾಗಬಹುದು. ಮಿತಿಗಳಿಲ್ಲದ, ದೌರ್ಬಲ್ಯಗಳಿಲ್ಲದ ವ್ಯಕ್ತಿಗಳಿದ್ದಾರೆಯೇ... ಒಂದು ಘಟನೆ, ಒಂದು ಮಾತು, ಒಂದು ಸಂದರ್ಭವೇ ಇಡೀ ಬದುಕನ್ನೂ, ವ್ಯಕ್ತಿತ್ವವನ್ನೂ ತೋರಿಸುವುದಾದರೆ ಜಗತ್ತಿನಲ್ಲಿ ಅಪಾರ್ಥಗಳೇ ಇರುತ್ತಿರಿಲ್ಲ....

 

....

 

ಬದುಕಿನ ವಿವಿಧ ಮಜಲುಗಳಲ್ಲಿ ಕಂಡುಕೊಳ್ಳುವ ಸತ್ಯಗಳೂ ಅಷ್ಟೇ. ವ್ಯತ್ಯಾಸ ಹೊಂದುತ್ತಲೇ ಇರುತ್ತದೆ. ಬಾಲ್ಯ, ಯೌವ್ವನ, ಪ್ರೌಢತೆಗಳು ಕೂಡಾ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದ ಸತ್ಯಗಳ ಬೇರೆ ಬೇರೆ ಮಗ್ಗುಲುಗಳನ್ನು ಆಯಾ ವಯಸ್ಸಿಗೆ ಅನುಗುಣವಾಗಿ ತೋರಿಸುತ್ತಲೇ ಹೋಗುತ್ತದೆ. ಪ್ರೌಢರಾಗಿದ್ದೇವೆ ಅನ್ನಿಸುವುದು, ನಿರ್ಭಾವುಕತೆಯನ್ನು ಆವಾಹಿಸಲು ಪ್ರೇರೇಪಣೆ ನೀಡುವುದು ಇಂತಹದ್ದೇ ನಾವೇ ಕಂಡುಕೊಂಡ ಸತ್ಯಗಳು. ಅದರ ಅನ್ವೇಷಣೆಯೋ ದಿಢೀರ್ ದರ್ಶನವೋ ನಿರಾಕರಿಸಲಾಗದ ಸತ್ಯಗಳು... ಬೇಡವೆಂದರೂ ಕೆಲವು ಸತ್ಯಗಳು ಕಾಣುತ್ತಲೇ, ಕಾಡುತ್ತಲೇ ಇರುತ್ತವೆ... ಅದರ ಹಿಂದೆ ಹೋಗುವುದು, ಅಥವಾ ತಾನಾಗಿ ಕಂಡದ್ದನ್ನು ಮಥಿಸುವುದೇ ಬದುಕು... ಅದುವೆ ಕೊನೆಯಾಗುವ ತನಕ ಸಾಗುವ ಆಯುಷ್ಯ... ಅಸ್ಪಷ್ಟ ಹಾಗೂ ಅಗೋಚರ!

-ಕೃಷ್ಣಮೋಹನ ತಲೆಂಗಳ

(03.03.2021)

No comments: