ನನ್ನ ಕನ್ನಡಕದಿಂದ ನಾನು ಕಾಣುವ ಜಗತ್ತು ಮತ್ತು ನನ್ನೊಳಗೆ ನನಗೇ ಸಿಕ್ಕದ ಪುರುಸೊತ್ತು!

ಈ ಕೆಳಗೆ ಉಲ್ಲೇಖಿಸಿರುವ ಎಲ್ಲ ಅಂಶಗಳು ನಾನು-ನೀವು ಸೇರಿದಂತೆ ಸುಶಿಕ್ಷಿತರು, ಅಕ್ಷರಸ್ಥರು, ವಿವೇಕಿಗಳು ಎಂದು ಎನಿಸಿಕೊಂಡವರ ನಡವಳಿಕೆಯನ್ನು ಗಮನಿಸಿ ಬರೆದಿರುವಂಥದ್ದು. ಇಂತಹ ಸ್ವಭಾವ ನಿಮ್ಮೊಳಗೂ ಇದ್ದರೆ ಯೋಚಿಸಿ. ಅದರ ಹೊರತು, ಇದು ನನಗೆ ಬರೆದದ್ದ? ನನ್ನನ್ನು ಉದ್ದೇಶಿಸಿ ಹೇಳಿದ್ದ? ಎಂಬಿತ್ಯಾದಿ ಪ್ರಶ್ನೆಗಳು ಅನಗತ್ಯ. ನಮ್ಮೊಳಗೆ ಅಂತಹ ಸ್ವಭಾವ ಅಡಕವಾಗಿದ್ದರೆ ನಾವದರ ಬಗ್ಗೆ ತಲೆ ಕೆಡಿಸಿದರೆ ಸಾಕು. ನಮಗೆ ನಮ್ಮ ಮೇಲೆ ನಂಬಿಕೆ ಇದ್ದರೆ, ಅದಕ್ಕೆ ಹತ್ತಾರು ಮಂದಿಯ ದೃಢೀಕರಣ ಪತ್ರ ಅಗತ್ಯವಿಲ್ಲ. ಅಷ್ಟಕ್ಕೂ ಸ್ಟೇಟಸ್ ಅನ್ನುವುದನ್ನು ಯಾರೋ ಒಬ್ಬರು ನೋಡುವುದಲ್ಲ. ದಿನವೊಂದು ಕಳೆಯುವ ಹೊತ್ತಿಗೆ ನೂರಾರು ಮಂದಿ ನೋಡುತ್ತಾರೆ ಎಂಬ ಪ್ರಜ್ಞೆ ಅಲ್ಲಿ ವಿಚಾರಗಳನ್ನು ಹಂಚಿಕೊಳ್ಳುವವರಿಗೆ ಇರಬೇಕು. ನನಗಂತೂ ಖಂಡಿತಾ ಇದೆ!

1)      ನಮಗೆ ಬರಹಗಳನ್ನು ಪೂರ್ತಿ ಓದುವಷ್ಟೂ, ಮಾತುಗಳನ್ನು ಪೂರ್ತಿ ಕೇಳುವಷ್ಟು ಸಹನೆ ಇರುವುದಿಲ್ಲ. ಅರ್ಧ ಓದಿ, ಅರ್ಧ ಕೇಳಿ ದುಡುಕಿ ಪ್ರತಿಕ್ರಿಯೆ ನೀಡುತ್ತೇವೆ. ಎಲ್ಲೋ ಓದಿದ ನೆನಪು ಜನ ಅರ್ಥ ಮಾಡಿಕೊಳ್ಳುವುದಕ್ಕೋಸ್ಕರ ಕೇಳುವುದಿಲ್ಲವಂತೆ, ಪ್ರತಿಕ್ರಿಯೆ ಕೊಡುವುದಕ್ಕೋಸ್ಕರ ಕೇಳುತ್ತಾರಂತೆ!” ಹಾಗಾಗಿ ಮಾತಿನ, ಬರಹದ ಅಶಯವನ್ನು ಅರ್ಥ ಮಾಡುವ ಬದಲು ಇದಕ್ಕೆ ಹೇಗೆ ಉತ್ತರ ಕೊಡಬೇಕು, ಇದು ನನ್ನನ್ನೇ ಉದ್ದೇಶಿಸಿ ಹೇಳಿದ್ದಾ? ಎಂದೇ ಮನಸು ಯೋಚಿಸುತ್ತಾ, ಉತ್ತರಕ್ಕೆ, ವಾದಕ್ಕೆ ಸಿದ್ಧವಾಗುತ್ತಿರುತ್ತೇವೆ.

2)      ನಾನು ಕೆಲಸದಲ್ಲಿ ಬಿಝಿ, ನನಗೆ ಭಯಂಕರ ಕೆಲಸದ ಒತ್ತಡ ಇದೆ, ನನಗೆ ತುಂಬ ವೈಯಕ್ತಿಕ ಸಮಸ್ಯೆಗಳಿವೆ, ನನಗೆ ಯಾವುದಕ್ಕೂ ಸಮಯ ಸಿಕ್ಕುವುದಿಲ್ಲ ಎನ್ನುವ ನಾವು ಕೆಲವೊಮ್ಮೆ ಯಾರಿಗೂ ಸಂಪರ್ಕಕ್ಕೆ ಸಿಕ್ಕುವುದಿಲ್ಲ. ಆದರೆ ದೊಡ್ಡ ದೊಡ್ಡ ನಾಯಕರು, ವಿಜ್ಞಾನಿಗಳು, ಮೇಧಾವಿಗಳು, ಚಿಂತಕರು, ಸಾಧಕರಿಗೂ ನಮ್ಮ ಹಾಗೆಯೇ ದಿನಕ್ಕೆ 24 ಗಂಟೆಯೇ ಇರುವುದು ಎಂಬ ಅಂಶ ಮರೆತೇ ಹೋಗಿರುತ್ತದೆ. ನಾವು ಚಿಕ್ಕವರಿದ್ದಾಗಲೂ ದಿನಕ್ಕೆ 24 ಗಂಟೆಯೇ ಇತ್ತು. ಈಗಲೂ ಅಷ್ಟೇ ಇದೆ ಎಂಬುದೂ ನೆನಪಾಗುವುದೇ ಇಲ್ಲ. ಈ ಟಿ.ವಿ., ಮೊಬೈಲು, ವಾಹನಗಳನ್ನು ಕಂಡು ಹುಡುಕಿದವನಿಗೂ ಪುರುಸೋತ್ತೇ ಇಲ್ಲದಿದ್ದರೆ ಜಗತ್ತಿನಲ್ಲಿ ಅವು ಯಾವುವೂ ನಮಗೆ ಸಿಗುತ್ತಿರಲಿಲ್ಲ. ಇದೇ 24 ಗಂಟೆಗಳೊಳಗೆ ಅವೆಷ್ಟೋ ಸಾಧನೆಗಳು ನಡೆದಿವೆ, ಎಷ್ಟೋ ಮಹತ್ವದ ವಿದ್ಯಮಾನಗಳು ಸಂಭವಿಸಿವೆ. ಅವರೆಲ್ಲ ಬಿಝಿ ಇದ್ರೂ ಅಷ್ಟೆಲ್ಲ ಮಾಡಿದ್ದಾರೆ ಎಂಬುದು ಸತ್ಯ ತಾನೆ.

3)      ನಾನೀಗ ಬಿಝಿ, ನನಗೆ ನನ್ನದೇ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ನನ್ನ ಕೆಲಸದ ವೇಳೆಯಲ್ಲಿ ನಾನು ಯಾರ ಜೊತೆಗೂ ಮಾತನಾಡುವುದಿಲ್ಲ. ಕೆಲಸದ ನಡುವೆ ಮಾತನಾಡಿದರೆ ನನಗೆ ಕೆಲಸ ಮಾಡಲು ಆಗುವುದಿಲ್ಲ, ಏಕಾಗ್ರತೆ ತಪ್ಪುತ್ತದೆ,ಕೆಲಸ ಕೆಡುತ್ತದೆ ಟೈಂ ವೇಸ್ಟು ಆಗುತ್ತದೆ ಎಂದು ಹಲುಬುವ ನಮ್ಮಲ್ಲಿ ಹಲವರು ಬೇರೆಯವರ ಕೆಲಸದ ನಡುವೆ ಕರೆ ಮಾಡಿ, ಮೆಸೇಜ್ ಮಾಡಿ ಮಾತನಾಡುವಾಗ ನೀವೀಗ ಫ್ರೀ ಇದ್ದೀರ, ಮಾತನಾಡಬಹುದ?” ಎಂಬ ಕನಿಷ್ಠ ಸೌಜನ್ಯದ ಪ್ರಶ್ನೆ ಕೇಳುವುದಿಲ್ಲ. ಮಾತ್ರವಲ್ಲ. ಮಾತನಾಡುವುದು ಮಾತನಾಡಿ ಆದ ಬಳಿಕವೂ ಗಂಟೆಗಟ್ಟಲೆ ಫೋನ್ ಕಟ್ ಮಾಡದೆ ತಲೆತಿನ್ನುತ್ತಲೇ ಇರುತ್ತಾರೆ. ಹಾಗಾದರೆ ಒತ್ತಡ, ಸಮಸ್ಯೆ, ಬಿಝಿ ಎನ್ನವುದು ಜಗತ್ತಿನಲ್ಲಿ ಕೆಲವೇ ಕೆಲವರ ಸೊತ್ತ?

4)      ಮೆಸೆಂಜರಿನಲ್ಲಿ ಬರುವ ಅಪರಿಚಿತರ ಸಂದೇಶಕ್ಕೆ ಉತ್ತರಿಸಿ ಸ್ನೇಹಿತರಾಗುತ್ತಾರೆ. ನಿಮ್ಮ ಎಟಿಎಂ ಪಿನ್ ಕೊಡಿ ನಾವು ಬ್ಯಾಂಕಿನವರು ಎಂಬ ಮರುಳು ಮಾತು ನಂಬಿ ಪಿನ್ ಕೊಟ್ಟು ದುಡ್ಡು ಕಳೆದುಕೊಳ್ಳುತ್ತರೆ, ಈ ಮೆಸೇಜನ್ನು 10 ಮಂದಿಗೆ ಫಾರ್ವರ್ಡ್ ಮಾಡಿದರೆ ಆಂಜನೇಯನ ಕೃಪೆಗೆ ಪಾತ್ರರಾಗಬಹುದು ಎಂಬ ಅರ್ಥದ ಮೆಸೇಜು ಬಂದಾಗ ಅದನ್ನು ನಂಬಿ ಶಿರಸಾವಹಿಸಿ ಕಂಡ ಕಂಡಲ್ಲಿಗೆ ಫಾರ್ವರ್ಡ್ ಮಾಡುತ್ತೇವೆ. ಅದೇ ಹೊತ್ತಿಗೆ ನಮ್ಮ ಸ್ನೇಹಿತನೋ, ಸಹೋದ್ಯೋಗಿಯೋ ವಾಟ್ಸಪ್ಪಿನಲ್ಲಿ ಮಾಡಿದ ಮೆಸೇಜು ನಮ್ಮನ್ನು ತಲುಪಿದ್ದರೂ ಅದಕ್ಕೆ ಉತ್ತರ ಕೊಡುವುದಿಲ್ಲ, ಥಂಬ್ ರೈಸ್ ಮಾಡುವುದಿಲ್ಲ, ನಾನು ಬಿಝಿ ಅಂತ ಕೂಡಾ ದಾಕ್ಷಿಣ್ಯಕ್ಕೂ ಹೇಳುವುದಿಲ್ಲ, ನೀನು ನನಗೆ ಮೆಸೇಜು ಮಾಡಬೇಡ, ಅದು ನನಗೆ ಇಷ್ಟ ಇಲ್ಲ ಎಂದೂ ಹೇಳುವುದಿಲ್ಲ. ಅಸಲಿಗೆ ಏನನ್ನೂ ನೀಡದೆ ನಿರ್ಭಾವುಕರಾಗಿ ಸುಮ್ಮನಿರುತ್ತೇವೆ. ಅದೇ ದೀಪಾವಳಿಯೋ ಹೊಸ ವರ್ಷವೋ ಬಂದಾಗ ಪ್ರೀತಿ ಉಕ್ಕಿ ಬಂದು ಎಲ್ಲಿಂದಲೋ ಬಂದ ಶುಭ ಕೋರುವ ಮೆಸೇಜು ಫಾರ್ವರ್ಡ್ ಮಾಡುತ್ತೇವೆ. ನಮ್ಮ ಮಕ್ಕಳು ಯೂಟ್ಯೂಬಿನಲ್ಲಿ ಹಾಡಿದಾಗ ಅದನ್ನು ಲೈಕು, ಶೇರ್ ಮಾಡಲು ಆಜ್ಞಾಪಿಸಿ ಮೆಸೇಜು ಕಳುಹಿಸುತ್ತೇವೆ. ಆಗಲೇ ನಮಗೆ ಗೊತ್ತಾಗುವುದು ಓಹೋ... ಇವರಲ್ಲೂ ನನ್ನ ನಂಬರು ಸೇವ್ ಆಗಿದೆ ಅಂತ!!

5)      ಜಾಲತಾಣದಲ್ಲಿ ಇಷ್ಟವಾದ ವಿಚಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದರೆ, ಅದರ ಬಗ್ಗೆ ಮಾತನಾಡಿದರೆ, ಅಥವಾ ಅಗತ್ಯ ಸಂದರ್ಭದಲ್ಲೂ ಯಾರಾದರೂ ಏನಾದರೂ ಮಾಹಿತಿ ಕೇಳಿ, ಅಪೇಕ್ಷಿಸಿ ಮೆಸೇಜು ಮಾಡಿದರೆ, ಅದಕ್ಕೆ ಉತ್ತರಿಸಿದರೆ ನಮ್ಮ ಘನತೆಗೆ ಎಲ್ಲಿ ಕುಂದಾಗುತ್ತದೋ ಅಂತ ಹಲವರು ಭಾವಿಸಿದ ಹಾಗಿರುತ್ತದೆ. ಮಾತನಾಡುವುದೇ ಇಲ್ಲ. ಕರೆ ಮಾಡಿದರೆ ಸ್ವೀಕರಿಸುವುದಿಲ್ಲ, ವಾಪಸ್ ಮಾಡುವುದೂ ಇಲ್ಲ. ಎಷ್ಟೇ ಬಿಝಿ ಇದ್ದರೂ ಫ್ರೀ ಇರುವಾಗ ನಾಲ್ಕು ಸೆಕೆಂಡು ವ್ಯಯಿಸಿ ಒಂದು ಪುಟ್ಟ ರಿಪ್ಲೈ ಕೂಡಾ ಬರುವುದೇ ಇಲ್ಲ. ಆದರೆ ಅವರ ಸ್ಟೇಟಸ್ಸುಗಳಲ್ಲಿ ಬೆಳ್ಳಂಬೆಳಗ್ಗೆ ವಿವೇಕಾನಂದ, ಕಲಾಂ, ಗಾಂಧೀಜಿಯವರ ಮಾತುಗಳ ಸಾಲು ಸಾಲು ಕ್ವೋಟುಗಳು ರಾರಾಜಿಸುತ್ತಿರುತ್ತವೆ!!! ಮಹಾತ್ಮರ ಮಾತುಗಳಿಗೆ ಕಿವಿಯಾಗುವ ಆತನಿಗೆ ತನ್ನ ಓರಗೆಯವ, ಸ್ನೇಹಿತ, ಸಹೋದ್ಯೋಗಿ ಹೇಳಿದ್ದಕ್ಕೆ ಕಿವಿಕೊಡಲು ಪುರುಸೊತ್ತು ಇರುವುದಿಲ್ಲ!

6)      ತುಂಬ ಮಂದಿ ಬೆಳಗ್ಗೆದ್ದ ಕೂಡಲೇ ಸ್ಟೇಟಸ್ಸುಗಳಲ್ಲಿ ಡಾ.ಕಲಾಂ, ಗಾಂಧೀಜಿ, ವಿವೇಕಾನಂದ, ಭಗವಾನ್ ಶ್ರೀಕೃಷ್ಣ ಎಲ್ಲೆಲ್ಲೋ ಹೇಳಿದ ಮಾತುಗಳ ಸೂಕ್ತಿಗಳನ್ನು (ಡೌನ್ ಲೋಡ್ ಮಾಡಿದ್ದು ಅಥವಾ ಫಾರ್ವರ್ಡ್ ಆಗಿರುವಂಥದ್ದು) ಹಂಚಿಕೊಳ್ಳುತ್ತಾರೆ. ಈ ಪೈಕಿ ಹಲವರು ಅದನ್ನು ಓದಿರುವುದಿಲ್ಲ. ಮತ್ತಷ್ಟು ಮಂದಿಗೆ ಅದು ಅರ್ಥವೇ ಆಗಿರುವುದಿಲ್ಲ. ಮತ್ತೆ ಕೆಲವರಿಗೆ (ಎಲ್ಲರಿಗೂ ಅಲ್ಲ) ಅದರಲ್ಲಿರುವ ಒಂದೇ ಒಂದು ಅಕ್ಷರವನ್ನು ಅನುಸರಿಸುವ ಆಸಕ್ತಿಯೂ, ಪುರುಸೊತ್ತೂ ಇರುವುದಿಲ್ಲ. ಆದರೂ ಲೋಕ ಉದ್ಧಾರ ಆಗಲಿ, ಬೇರೆಯವರು ಓದಲಿ ಅಂತ ಎಲ್ಲಿಯೋ ಸಿಕ್ಕಿದ ಸೂಕ್ತಿಗಳನ್ನು ಸ್ಟೇಟಸ್ಸುಗಳಲ್ಲಿ ಹಾಕಿ ಕೃತಾರ್ಥರಾಗುತ್ತಾರೆ. ಇದೇ ಮಂದಿಗೆ ಕಲಾಂ, ಗಾಂಧಿ, ವಿವೇಕಾನಂದರು ಸತ್ಯ, ಪ್ರಾಮಾಣಿಕತೆ, ನೇರ ನಡೆ ನುಡಿ ಬಗ್ಗೆ ಏನು ಹೇಳಿದರು? ಅವನ್ನು ಬದುಕಿನಲ್ಲಿ ಅಳವಡಿಸಿದರೆ ನಾವು ಹೇಗೆ ಬದಲಾಗಬಹುದು? ಎಂಬ ಪ್ರಜ್ಞೆಯೇ ಇರುವುದಿಲ್ಲ.

7)      ತುಂಬ ಮಂದಿಗೆ ಮೊಬೈಲಿನಲ್ಲಿ ಜಂಕ್ ಫೈಲ್ ಕ್ಲೀನ್ ಮಾಡುವುದು ಹೇಗೆ ಅಂತ ಗೊತ್ತಿರುವುದಿಲ್ಲ. ಕನ್ನಡ ಟೈಪ್ ಮಾಡಲು ಯಾವ ಆಪ್ ಬಳಸಬೇಕು ಎಂಬ ಮಾಹಿತಿ ಇರುವುದಿಲ್ಲ. ಆದರೆ ಗ್ರೂಪುಗಳಲ್ಲಿ ಬರುವ ಮೆಸೇಜುಗಳನ್ನು ಎಲ್ಲೆಲ್ಲಿ ಹೇಗ್ಹೇಗೆ ಫಾರ್ವರ್ಡ್ ಮಾಡಬೇಕು, ಬರಹದಲ್ಲಿ ಬರೆದವನ ಹೆಸರು ಹೇಗೆ ಕ್ರಾಪ್ ಮಾಡಬೇಕು, ಸ್ಕ್ರೀನ್ ಶಾಟ್ ತೆಗೆಯುವುದು ಹೇಗೆ, ಸ್ಟೇಟಸ್ಸಿನಲ್ಲಿರುವ ವಿಡಿಯೋವನ್ನು ಎಬ್ಬಿಸುವುದು ಹೇಗೆ ಎಂಬಿತ್ಯಾದಿ ವಿದ್ಯೆಗಳು ಚೆನ್ನಾಗಿ ಗೊತ್ತಿರುತ್ತದೆ. ಆದರೆ, ಯಾವುದೇ ಪೋಸ್ಟುಗಳ ಮೂಲ ಕರ್ತೃ ನೇರವಾಗಿ ನನ್ನ ಪೋಸ್ಟು ಯಾಕೆ ಕದ್ದಿರಿ ಎಂದು ಕೇಳಿದರೆ ಆ ಮಾತು ಅವರಿಗೆ ಇಷ್ಟವಾಗುವುದಿಲ್ಲ. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಆಯಿತು ಮಾರಾಯ ಯಾರಿಗೆ ಬೇಕು ನಿನ್ನ ಸ್ಟೇಟಸ್ಸು ಅಂತ ಭುಸುಗುಡುತ್ತಾರೆ. ಇದು ಸಾಲ ಕೊಟ್ಟ ಮೇಲೆ ಹೆದರಿ ಹೆದರಿ ವಾಪಸ್ ಕೇಳಿ ಬೈಗಳು ತಿಂದವನ ಪಾಡು ಅಷ್ಟೇ....!

8)      ನಾನು ಸ್ವಾಭಿಮಾನಿ, ನಾನು ಇದ್ದದ್ದು ಇದ್ದ ಹಾಗೆ ಹೇಳುವವ, ನನಗೆ ತಾಳ್ಮೆ ಕಡಿಮೆ ಎಂದೆಲ್ಲ ಹೇಳುವವರು ಅದೇ ಸ್ವಭಾವ ಇತರರಲ್ಲೂ ಇರುತ್ತದೆ ಎಂಬ ಕನಿಷ್ಠ ಪ್ರಜ್ಞೆಯನ್ನೇ ಮರೆಯುತ್ತಾರೆ. ಮನಸುಗಳೆಲ್ಲ ಮೊಬೈಲಿನ ಆಪರೇಟಿಂಗ್ ಸಿಸ್ಟಂನ ಥರ. ಕೆಲವು ಅಪ್ಡೇಟ್ ಆಗಿರುತ್ತವೆ, ಕೆಲವು ಹಳೆ ಓಎಸ್  (ಆಪರೇಟಿಂಗ್ ಸಿಸ್ಟಂ) ಗಳಲ್ಲೇ ಕೆಲಸ ಮಾಡುತ್ತಿರುತ್ತವೆ. ಆದರೆ ಎಲ್ಲ ಮನಸುಗಳ ಮೂಲಭೂತ ಭಾವನೆಗಳು ಒಂದೇ ಅವರು ಅದನ್ನು ವ್ಯಕ್ತಪಡಿಸುವ, ತೋರ್ಪಡಿಸುವ ರೀತಿ, ಪ್ರಮಾಣ ವ್ಯತ್ಯಾಸ ಇರುತ್ತದೆ ಅಷ್ಟೇ. ಹಾಗಾಗಿ ಈ ಅಪಮಾನ, ಕೋಪ, ಬೇಸರ ಎಲ್ಲ ಒಬ್ಬರಿಬ್ಬರ ಆಸ್ತಿ ಅಲ್ಲ, ಮನಸ್ಸು ಅಂತ ಇರುವ ಎಲ್ಲರಿಗೂ ಇರುತ್ತದೆ ಎಂಬುದು ಎಷ್ಟೋ ಬಾರಿ ಉದ್ವಿಗ್ನತೆಗೆ ಒಳದಾದಾಗ ನಮಗೆ ನೆನಪೇ ಇರುವುದಿಲ್ಲ. ಹಾಗಾಗಿ ಸಾರಿ ನಾನು ಸಿಟ್ಟಿನಲ್ಲಿ ಏನೋ ಹೇಳಿದೆ ಮರೆತು ಬಿಡು ಅಂದಾಗ... ನಾನು ಸಿಟ್ಟಿನಲ್ಲಿ ಏನು ಹೇಳಿದರೂ ನಡೆಯುತ್ತದೆ. ಅದನ್ನು ಸಿಟ್ಟಿನಲ್ಲಿ ಹೇಳಿದ್ದು ಅಂತ ಮನ್ನಿಸು, ಸಾರಿ ಅಂತ ಕೇಳಿದಾಗ ಬ್ಯಾಕ್ ಸ್ಪೇಸ್ ಕೊಟ್ಟು ಮರೆತು ಬಿಡು ಅಥವಾ ಮನಸ್ಸಿನಿಂದ ಡಿಲೀಟ್ ಮಾಡು ಎಂದು ಆದೇಶಿಸಿದ ಥರ ಇರುತ್ತದೆ. ವಿಪರ್ಯಾಸ ಎಂದಾಗ ಸಿಟ್ಟು ಬರುವಾತನಿಗೆ ಆಗಾಗ ಸಿಟ್ಟು ಬರುತ್ತಲೇ ಇರುತ್ತದೆ, ಹಾಗು ಸಿಟ್ಟಿನನಲ್ಲಿ ಏನೇನೋ ಹೇಳುತ್ತಲೇ ಇರುತ್ತಾನೆ. ಆತನ ಸಿಟ್ಟಿಗೆ ಸಿಲುಕಿದಾತ ಆತನ ಮಾತುಗಳನ್ನು ಮನ್ನಿಸಿ ಆ ಮಾತಗಳನ್ನು ಮನಸ್ಸಿನಿಂದ ಡಿಲೀಟ್ ಮಾಡುತ್ತಲೇ ಇರಬೇಕಾಗುತ್ತದೆ. ಅಥವಾ ರಿಸೈಕಲ್ ಬಿನ್ನಿನಲ್ಲಿ ಬಚ್ಚಿಡಬೇಕಾಗುತ್ತದೆ!

9)      ನಾಲ್ಕು ಜನಕ್ಕೆ ಉಪಕಾರಕ್ಕೆ ಹೊರಡುವವರು, ನಿಷ್ಪಕ್ಷಪಾತದ ಸಾಮೂಹಿಕ ಸಂಘಟನೆಯಲ್ಲಿ ತೊಡುವವರಿಗೆಲ್ಲ ಬೇರೆ ಕೆಲಸ ಇಲ್ಲ ಅಂತ ಸಮುದಾಯ ಭಾವಿಸುತ್ತದೆ. ವಾಟ್ಸಪ್ ಗ್ರೂಪು ಇದಕ್ಕೆ ಉತ್ತಮ ಉದಾಹರಣೆ. ಒಬ್ಬ ಬಡಪಾಯಿ ಯಾವುದೋ  ಉದ್ದೇಶಕ್ಕೆ ಗ್ರೂಪು ಸ್ಥಾಪಿಸುತ್ತಾನೆ. ಅದಕ್ಕೆ ಸಂತೋಷದಿಂದ ಎಲ್ಲರೂ ಸೇರುತ್ತಾರೆ. ಹೋಗ್ತಾ ಹೋಗ್ತಾ ಅಡ್ಮಿನ್ ಬಿಟ್ಟು ಮತ್ತೆಲ್ಲರೂ ಬಿಝಿ ಆಗುತ್ತಾರೆ. ತಮ್ಮ ತಮ್ಮೊಳಗಿನ ಭಿನ್ನಾಭಿಪ್ರಾಯಕ್ಕೆ ಗ್ರೂಪನ್ನು ಬಳಸುತ್ತಾರೆ. ಗ್ರೂಪು ಚೆನ್ನಾಗಿರಲಿ ಅಂತ ಮಧ್ಯ ಪ್ರವೇಶಿಸಿದ ಅಡ್ಮಿನ್ನಿಗೂ ಬೈಗಳು ಸಿಗುತ್ತದೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಕೊಂಡು ಹೋಗಲು ಒದ್ದಾಡುವ ಅಡ್ಮಿನ್ನಿಗೆ ಪಕ್ಷಪಾತ ಮಾಡಿದ, ಸ್ವಾರ್ಥಕ್ಕೋಸ್ಕರ ಕೆಲಸ ಮಾಡುವ ಆರೋಪ ಬರುತ್ತದೆ. ಗ್ರೂಪಿನಲ್ಲಿ ನಡೆಯುವ ಅನುಚಿತ ಘಟನೆಗಳ ಪೆಟ್ಟೂ ಪರೋಕ್ಷವಾಗಿ ಬೀಳುವುದು ಅಡ್ಮಿನ್ನಿಗೇ. ಇಷ್ಟೆಲ್ಲ ಆಗಿ ಒಂದು ಮಹತ್ವದ ವಿಚಾರಕ್ಕೆ ಸದಸ್ಯರ ಅಭಿಮತ ಕೇಳಿದಾಗ ಯಾರಿಗೂ ಉತ್ತರಿಸಲು ಪುರುಸೊತ್ತು ಇರುವುದಿಲ್ಲ. ಯಾಕೆಂದರೆ ಅವರೆಲ್ಲ ಬಿಝಿ ಇರುತ್ತಾರೆ! ಮತ್ತು ಅವರ್ಯಾರೂ ಅಡ್ಮಿನ್ ಹತ್ರ ಗ್ರೂಪು ಮಾಡಲು ಹೇಳಿರುವುದಿಲ್ಲ. ಗ್ರೂಪು ಮಾಡಿದ ತಪ್ಪಿಗೆ ಅಡ್ಮಿನ್ ಅದನ್ನೆಲ್ಲ ಸಹಿಸಬೇಕಾಗುತ್ತದೆ. ಯಾವಗಲಾದರೊಮ್ಮೆ ಅಡ್ಮಿನ್ನಿಗೆ ಜಯಕಾರ ಹಾಕಿದಾಗ ಅದರಿಂದಲೇ ಆತನ ಹೊಟ್ಟೆ ತುಂಬುತ್ತದೆ!!!

10)   ನಮಗೆ ಅಧ್ಯಯನ ಮಾಡಿದ ಬರಹ ಓದಲು, ವಸ್ತುನಿಷ್ಠ ವಿಚಾರಗಳನ್ನು ಒದಲು ಪುರುಸೊತ್ತು ಇರುವುದಿಲ್ಲ. ನೀವು ಚಂದ ಬರೀತೀರಿ ಮಾರಾಯರೆ, ಆದರೆ ತುಂಬ ಉದ್ದ ಬರೀತಿರಿ…” ಅಂತೇವೆ. ಅದೇ ಫೇಸ್ಬುಕ್ಕಿನಲ್ಲಿ ಜಾತಿಯ ಬಗ್ಗೆ, ಧರ್ಮದ ಬಗ್ಗೆ, ಎಲ್ಲೋ ನಡೆದ ವಿವಾದದ ಬಗ್ಗೆ ಬರುವ ಪುಂಖಾನುಪುಂಖ ಬರಹಗಳನ್ನು, ಅದಕ್ಕೆ ಎಲ್ಲರ ಪ್ರತಿಕ್ರಿಯೆಗಳನ್ನು ಶ್ರದ್ಧೆಯಿಂದ ಓದುತ್ತೇವೆ. ಜಾಲತಾಣಗಳಲ್ಲಿ ಎಲ್ಲಿಂದಲೋ ಹರಿದು ಬರುವ ಸುದ್ದಿಯಲ್ಲದ ಸುದ್ದಿಗಳನ್ನು, ಸುಳ್ಳು ವಿಚಾರಗಳನ್ನು ಕಣ್ಮುಚ್ಚಿ ಸ್ಟೇಟಸ್ಸುಗಳಲ್ಲಿ, ಫೇಸ್ಬುಕ್ಕು ವಾಲುಗಳಲ್ಲಿ ಹಂಚಿಕೊಳ್ಳುತ್ತೇವೆ. ಕಂಡ ಕಂಡ ಗ್ರೂಪುಗಳಿಗೆ ಫಾರ್ವರ್ಡ್ ಮಾಡುತ್ತೇವೆ. ಕೊನೆಗೆ ಅಧಿಕಾರಯುತವಾಗಿ ಈ ಟೀವಿ ಚಾನೆಲ್ಲಿನವರಿಗೆ ಮಾನ ಮರ್ಯಾದೆ ಇಲ್ಲ, ಸ್ವಂತಿಕೆ ಇಲ್ಲ, ಅವುಗಳನ್ನು ಬ್ಯಾನ್ ಮಾಡಬೇಕು, ಟಿಆರ್ಪಿಗೋಸ್ಕರ ಏನೂ ಮಾಡುತ್ತಾರೆ…” ಎಂತ ನಾಲ್ಕು ಜನ ಸೇರಿದಲ್ಲಿ ಭಾಷಣ ಬಿಗಿದು ಅವರೆಲ್ಲರ ದೃಷ್ಟಿಯಲ್ಲಿ ಹೀರೋಗಳಾಗುತ್ತೇವೆ!

11)   ನಮ್ಮಿಂದಾಗುವ ಪ್ರಮಾದಗಳಿಗೆ ನಮ್ಮಲ್ಲಿ ಸಾಕಷ್ಟು ಸಮರ್ಥನೆಗಳು ಇರುತ್ತವೆ. ಯಾಕೆ ಹಾಗಾಯಿತು ಎಂದು ಕಾನೂನು ಪದವಿ ಪಡೆದ ಲಾಯರುಗಳಿಗಿಂತ ಚೆನ್ನಾಗಿ ವಾದ ಮಾಡುತ್ತೇವೆ. ನಮ್ಮನ್ನು ನಾವು ಸರಿ ಅಂತ ತೋರಿಸಿಕೊಳ್ಳುತ್ತೇವೆ. ಅದೇ ಇತರರು ಮಾಡುವ ಪ್ರಾಮಾಣಿಕ ಕೆಲಸಗಳಲ್ಲೂ ತಪ್ಪು ಹುಡುಕಲು, ವ್ಯಂಗ್ಯ ಮಾತನಾಡಲು, ಮುಖಕ್ಕೆ ಹೊಡದಂತೆ ನಿಷ್ಠುರವಾಗಿ ಮಾತನಾಡಲು ಹಿಂಜರಿಯುವುದಿಲ್ಲ. ರಸ್ತೆ ಪಕ್ಕ ಬಸ್ಸಿಗೆ ಕಾಯುವಲ್ಲಿ ಬಸ್ ನಿಲ್ದಾಣ ಇಲ್ಲ ಎಂದಿಟ್ಟುಕೊಳ್ಳೋಣ. ಯಾರೋ ಪುಣ್ಯಾತ್ಮ ಜನರು ಕೂರಲು ಅನುಕೂಲವಾಗಲಿ ಅಂತ ಒಂದು ಕಲ್ಲು ತಂದು ಇಡುತ್ತಾನೆ. ಆ ಕಲ್ಲು ತಂದು ಇಡುವಲ್ಲಿ ನಮ್ಮ ಕೊಡುಗೆ ಏನೂ ಇರುವುದಿಲ್ಲ. ಆದರೂ ಆ ಕಲ್ಲಿನ ಮೇಲೆ ಕುಳಿತ ನಾವು ಈ ಕಲ್ಲು ಇಟ್ಟದ್ದು ಓರೆಯಾಗಿದೆ,ವಾಸ್ತು ಸರಿಯಿಲ್ಲ, ಈ ಕಲ್ಲು ಚಿಕ್ಕದಾಯಿತು ಎಂಬಿತ್ಯಾದಿ ವಿಮರ್ಶೆಗಳನ್ನು ಮಾಡುವಲ್ಲಿ ಧಾರಾಳಿಗಳಾಗಿರುತ್ತೇವೆ. ಇಂತಹ ಮಾತುಗಳು ನಿಸ್ವಾರ್ಥವಾಗಿ ಕೆಲಸ ಮಾಡಿದ ಆ ಮನುಷ್ಯನಿಗೆ ಎಷ್ಟು ನೋವು ಕೊಡಬಹುದು ಎಂದೂ ನಾವು ಯೋಚಿಸುವುದಿಲ್ಲ.

12)   ಟಿ.ವಿ.ಚಾನೆಲ್ಲುಗಳನ್ನು ಬಯ್ಯುವ ನಮಗೆ, ಧಾರಾವಾಹಿಗಳಿಂದ ಮನೆ ಹಾಳಾಯಿತು ಅಂತ ದೂರುವ ನಮಗೆ, ಮೊಬೈಲ್ ಬಂದು ಜಗತ್ತೇ ಕೆಟ್ಟು ಹೋಯಿತು ಅಂತ ಕೂಗಾಡುವ ನಮಗೆ ಸತ್ಯವನ್ನು ಇದ್ದ ಹಾಗೆಯೇ ಹೇಳಿದರೆ ರುಚಿಸುವುದಿಲ್ಲ. ವಿಚಾರಗಳನ್ನು ತರ್ಕಬದ್ಧವಾಗಿ ಮುಂದಿಟ್ಟರೆ ನಾವದಕ್ಕೆ ಸಮರ್ಪಕ ಉತ್ತರ ಕೊಡುವುದಿಲ್ಲ. ಮಸಾಲೆ ಬೆರೆಸಿ, ಆಕರ್ಷಕವಾಗಿ ಜಾಲತಾಣಗಳಲ್ಲಿ ಬರುವುದೆಲ್ಲ ಸತ್ಯ ಅಂತ ನಂಬುತ್ತೇವೆ. ಆಕರ್ಷವಾಗಿ ಕಾಣಿಸುವುದಕ್ಕೆ ಪ್ರೇಕ್ಷಕರು ಜಾಸ್ತಿ ಎಂಬ ತತ್ವವೇ ಎಲ್ಲ ಕಡೆ ವರ್ಕೌಟ್ ಆಗುವುದು ಎಂಬ ಸರಳ ಸತ್ಯ ಟಿ.ವಿ.ಯನ್ನು ಬಯ್ಯುವಾಗ ನಮಗೆ ನೆನಪೇ ಇರುವುದಿಲ್ಲ. ಯಾವುದೇ ವಿಚಾರವನ್ನು ನಾನೇ ಮೊದಲು ಸ್ಟೇಟಸ್ಸಿನಲ್ಲಿ ಹಾಕಿದ್ದು ಎಂದು ಬೀಗುವಾಗ ಉದ್ಯಮವಾಗಿ ನಡೆದುಬರುವ ಟಿ.ವಿ.ಯವರು ಅದನ್ನು ಉದ್ಯಮದ ದೃಷ್ಟಿಯಿಂದ ಹೇಳಿಕೊಂಡಾಗ ಕೆಂಡದಂಥ ಸಿಟ್ಟು ಬರುತ್ತದೆ.

13)   ಸಮಾಜದಲ್ಲಿ, ಜಾಲತಾಣಗಳಲ್ಲಿ ಅಥವಾ ಎಲ್ಲೇ ಆಗಲಿ ನಮಗೆ ಆಗುವ ಹಿನ್ನಡೆ, ನಿರಾಸೆ, ಅಪಮಾನ ಜಗತ್ತಿನಲ್ಲಿ ಇತರರನ್ನೂ ಕಾಡಬಹುದು ಎಂಬ ಸಣ್ಣ ಸತ್ಯ ಉದ್ವೇಗದಲ್ಲೋ, ಸಿಟ್ಟಿನಲ್ಲೋ ಇರುವ ನಮಗೆ ಅರ್ಥವೇ ಆಗುವುದಿಲ್ಲ. ಹೇಳುವುದನ್ನೆಲ್ಲ ಹೇಳಿ ಯಾರನ್ನೋ ನೋಯಿಸಿದ ಬಳಿಕವೂ ಕೆಲವೊಮ್ಮೆ ತಲೆಗೆ ಹೋಗುವುದಿಲ್ಲ. ಜಗತ್ತಿನಲ್ಲಿ ನಾನೊಬ್ಬನೇ ಅತ್ಯಂತ ನೊಂದವ, ನನ್ನಂಥ ಸಮಸ್ಯೆ ಯಾರಿಗೂ ಇರಲಿಕ್ಕಿಲ್ಲ, ನನ್ನ ಹಣೆಬರಹ ಮಾತ್ರ ಸರಿಯಿಲ್ಲ ಎಂಬಂತೆ ಹಲುಬುತ್ತಿರುತ್ತೇವೆ. ನೋವು, ಸಮಸ್ಯೆ ಇಲ್ಲದವರು ಯಾರೂ ಇಲ್ಲ. ಕೆಲವರು ಹೇಳಿಕೊಳ್ಳುತ್ತಾರೆ. ಹಲವರು ಹೇಳುವುದೇ ಇಲ್ಲ ಅಷ್ಟೆ.

14)   ವೈದ್ಯಕೀಯ ರಂಗದಲ್ಲಿ, ಪತ್ರಿಕೋದ್ಯಮ ರಂಗದಲ್ಲಿ, ರಾಜಕೀಯರಂಗದಲ್ಲಿ ನಮಗೆ ಇರುವುದು ಅಲ್ಪ ಜ್ಞಾನವೇ ಆದರೂ ನಾವು ಬಹಳಷ್ಟು ತಿಳಿದ ಹಾಗೆ ಜಾಲತಾಣಗಳಲ್ಲಿ ಭಾಷಣ ಮಾಡುತ್ತೇವೆ. ಅವರಿವರ ಬಗ್ಗೆ ತೀರ್ಪು ಕೊಟ್ಟಂತೆ ಬರೆಯುತ್ತೇವೆ, ಹಂಗಿಸುತ್ತೇವೆ. ಆಗ ನಮಗೆ ಏನೂ ಅನ್ನಿಸುವುದಿಲ್ಲ. ನನಗೆ ಅರಿವಿಲ್ಲದ ಒಂದು ವೃತ್ತಿಯ ಬಗ್ಗೆ ಅರ್ಧ ಜ್ಞಾನದಿಂದ ಏನೋ ಬಡಬಡಿಸುತ್ತಿದ್ದೇನೆಂಬ ಭಾವ ಕಾಡುವುದಿಲ್ಲ. ಅದೇ ಅದರ ಬದಲಿಗೆ ನಮ್ಮ ವೃತ್ತಿಯ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡಿದರೆ ನಮ್ಮೊಳಗಿನ ಸ್ವಾಭಿಮಾನ ಜಾಗೃತವಾಗುತ್ತದೆ, ಅಪಮಾನ ಕಾಡುತ್ತದೆ ಅಲ್ವ? ಟೀಕೆಗಳೂ ಅಷ್ಟೇ... ಬರೆದ್ದನ್ನು ಅರ್ಧರ್ಧ ಓದಿ ಬರೆದವನಿಗೆ ಬೇಜಾರಾಗದಿರಲಿ ಅಂತ ಕಮೆಂಟು ಮಾಡುವವರು, ಹುಡುಕಬೇಕು ಅಂತ ತಪ್ಪು ಹುಡುಕಿ ಹೇಳುವವರು, ನಾನು ಬರೆದಿದದ್ದಕ್ಕೆ ಇವನೂ ಮುಂದೆ ಕಮೆಂಟು ಮಾಡಲಿ ಅಂತ ಪೂರ್ವಾಲೋಚನೆಯಿಂದ ಸೂಪರ್ ಅಂತ ಹಾಕುವವರೂ ಇರುತ್ತಾರೆ. ಅರ್ಥ ಮಾಡಿಕೊಂಡು ಕಮೆಂಟು ಮಾಡುವುದಕ್ಕೂ ದೂರಾಲೋಚನೆಯಿಂದ ಕಮೆಂಟು ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂಬುದು ಕಹಿ ಸತ್ಯ.

15)   ನಾವು ಚಂದ ಚಂದ ಸ್ಟೇಟಸ್ಸು ಹಾಕುತ್ತೇವೆ. ಹಬ್ಬ ಹರಿದಿನಗಳಂದು ಶುಭಾಶಯಕೋರುತ್ತೇವೆ. ಶಿಸ್ತಿನಿಂದ ಎಲ್ಲರಿಗೂ ಗುಡ್ ಮಾರ್ನಿಂಗ್, ಗುಡ್ ನೈಟ್ ಹೇಳುತ್ತೇವೆ. ಎಲ್ಲಿಯಾದರೂ ಚಂದದ ಮಾತುಗಳು ಓದಲು ಸಿಕ್ಕಿದರೆ ನಮಗಿಷ್ಟದ ಗ್ರೂಪುಗಳಿಗೆ ಫಾರ್ವರ್ಡ್ ಮಾಡುತ್ತೇವೆ. ಆದರೆ ಯಾವತ್ತೂ ಇವುಗಳಿಂದ ನಾವೆಷ್ಟು ಬದಲಾಗಿದ್ದೇವೆ ಅಂತ ಯೋಚಿಸುವುದೇ ಇಲ್ಲ. ಯಾಕೆಂದರೆ ನಮಗೆ ನಮ್ಮ ಕುರಿತಾಗಿ ಇರುವುದಕ್ಕಿಂತ ಹೆಚ್ಚಿನ ಕಾಳಜಿ ಲೋಕದ ಬಗ್ಗೆ ಇರುತ್ತದೆ!

16)   ಜಾಲತಾಣಗಳಲ್ಲಿ ಬೇರೆಯವರ ಪೋಸ್ಟು ಕದಿಯುವುದು, ವಾಟ್ಸಪ್ಪು ಗ್ರೂಪುಗಳಲ್ಲಿ ಅನಾವಶ್ಯಕ ವಿಚಾರಗಳನ್ನು ಫಾರ್ವರ್ಡ್ ಮಾಡುವುದು, ಅನಿವಾರ್ಯ ಸಂದರ್ಭದಲ್ಲೂ ನಮ್ಮ ಆತ್ಮೀಯರ ಸಂದೇಶಗಳಿಗೆ ಉತ್ತರಿಸದೆ ಕಡೆಗಣಿಸುವುದು ತಪ್ಪು ಅಂತ ಬಹುತೇಕ ಸಂದರ್ಭ ಬಹುತೇಕರಿಗೆ ಅನ್ನಿಸುವುದೇ ಇಲ್ಲ. ಆದರೆ ನಮ್ಮ ಮೆಸೇಜಿಗೆ ಯಾರಾದರೂ ಉತ್ತರ ಕೊಡದಿದ್ದರೆ ಮಾತ್ರ ತುಂಬ ಬೇಜಾರಾಗುತ್ತದೆ!

17)   ಇಷ್ಟು ಉದ್ದದ ಬರಹಗಳನ್ನು ಓದಲು ಹಲವರಿಗೆ ಪುರುಸೊತ್ತು ಇರುವುದಿಲ್ಲ. ಆದರೂ ಓದಿದ ಬಳಿಕ ಬಹಳಷ್ಟು ಮಂದಿಗೆ ಅನ್ನಿಸುತ್ತದೆ, ಎಲ್ಲೋ ಮನಸ್ಸಿನ ಮೂಲೆಯಲ್ಲಿ, ಇವನಿಗೆ ಬೇರೆ ಕೆಲಸ ಇಲ್ಲ, ತಪ್ಪು ಹುಡುಕುವುದೇ ಕೆಲಸ. ಹೇಳಿದ್ದನ್ನೇ ಹೇಳುತ್ತಿರುತ್ತಾನೆ ಅಂತ. ಆದರೆ ಆ ನಿರ್ಭಾವುಕ ನಿರ್ಧಾರದ ಹಿಂದೆ, ನಾವೆಷ್ಟೇ ಓದಿದರೂ, ನಾವೆಷ್ಟೇ ಮಾತನಾಡಿದರೂ ಕೆಲವೊಂದು ವಿಚಾರದಲ್ಲಿ ನಮ್ಮನ್ನೇ ನಮಗೆ ತಿದ್ದಲು ಸಾಧ್ಯವಾಗದಿರುವ ಉದಾಸೀನದ ಸತ್ಯ ಅಂದಾಜಾಗುವುದೇ ಇಲ್ಲ!

18)   ಖುಷಿಯಾಗಲಿ ಅಂತ ಹೊಗಳುವುದು, ತನ್ನ ಪ್ರಯೋಜನಕ್ಕಾಗಿ ಮಾತನಾಡಿಸುವುದು, ಕೇಳಿಸಿದ ಮಾತಿನಲ್ಲಿ ಮಾತಿನ ಆಶಯಕ್ಕೆ ಬೇಕಾದ್ದನ್ನು ಕಿವಿಗೆ ಹಾಕಿಕೊಳ್ಳದೆ, ನಮಗೆ ಬೇಕಾದ ಆಯ್ದ ಸಾಲುಗಳನ್ನು ಹಿಡಿದು ಅಪಾರ್ಥ ಮಾಡಿಕೊಳ್ಳುವುದು. ಅದೇ ಅಪಾರ್ಥದ ಆಧಾರದಲ್ಲಿ ಮೊಂಡು ವಾದಕ್ಕೆ ಬರುವುದು... ಹೀಗೆ ಸಂವಹನ ವಿಫಲವಾದಲ್ಲಿ ತಪ್ಪು ನಮ್ಮ ಕಡೆಯಿಂದಲೇ ಇದ್ದರೂ ಎದುರಿನವನನ್ನು ಗುರಿಯಾಗಿಸಿ ಮಾತನಾಡುವ ಆ ಕ್ಷಣದ ಉದ್ವೇಗದ ನಡೆ ಕೂಡಾ ಜಾಲತಾಣದ ಅಸಹನೀಯ ತ್ವರಿತ ಸಂವಹನದ ದುರಂತಗಳಿಗೆ ಸಾಕ್ಷಿಯೂ ಹೌದು.

19)   ನಾವು ಕೇಳುವುದಕ್ಕಿಂತ ಜಾಸ್ತಿ ಹೇಳಿಕೊಳ್ಳುತ್ತೇವೆ. ಕಂಡುಕೊಳ್ಳುವುದಕ್ಕಿಂತ ಜಾಸ್ತಿ ನಮ್ಮನ್ನು ನಾವು ತೋರಿಸಿಕೊಳ್ಳುತ್ತೇವೆ. ತೋರಿಸಿಕೊಂಡದ್ದನ್ನೇ ಸತ್ಯ ಅಂತ ನಂಬುತ್ತೇವೆ. ಹಾಗಾಗಿ ಈ ಜಾಲತಾಣದ ಜಗತ್ತಿನಲ್ಲಿ ಪ್ರಾಮಾಣಿಕತೆ ಹಾಗೂ ಸತ್ಯವನ್ನು ಪುಷ್ಟೀಕರಿಸಲು ಕಷ್ಟಪಡಬೇಕಾಗುತ್ತದೆ. ಸುಳ್ಳು ಮತ್ತು ಮಸಾಲೆಗಳು ತಮ್ಮಷ್ಟಕೇ ಜನಪ್ರಿಯವಾಗುತ್ತವೆ!

20)   ನಮ್ಮದೊಂದು ಬದುಕು ಅಂತ ಇರುತ್ತದೆ. ನಮ್ಮ ಪರಿಸರ, ನಾವು ಬೆಳೆದು ಬಂದ ರೀತಿ, ನಮಗೆ ಸಿಕ್ಕಿದ ಸಂಸ್ಕಾರ, ನಾವು ಮಾಡುವ ಕೆಲಸ, ಅದರ ಟೈಮಿಂಗ್ಸ್, ನಮ್ಮ ಒತ್ತಡಗಳು, ವೈಯಕ್ತಿಕ ಸಮಸ್ಯೆಗಳು, ಬಗೆಹರಿಯದ ಕೆಲವು ಗೊಂದಲಗಳು ಇವೆಲ್ಲ ನಮ ಪರಿಸ್ಥಿತಿಯನ್ನು ಹಾಗೂ ಮನಃಸ್ಥಿತಿಯನ್ನು ನಿರ್ಧಾರ ಮಾಡುತ್ತವೆ. ನಮಗೊಂದು ಮೂಡು ಕಟ್ಟಿಕೊಡುತ್ತವೆ. ನಮಗೊಂದು ದೃಷ್ಟಿಕೋನದ ಕನ್ನಡಕವನ್ನು ಹಾಕಿಸುತ್ತದೆ. ಅದೇ ಕನ್ನಡಕದಿಂದ ನಾವು ಜಗತ್ತನ್ನು ನೋಡುತ್ತೇವೆ. ಅದೇ ಮೂಡಿನಿಂದ ಇತರರ ಜೊತೆ ವ್ಯವಹಾರ ಮಾಡುತ್ತೇವೆ. ಆ ವ್ಯವಹಾರದ ಬಳಿಕ ನಾವು ನಮ್ಮದೆ ಕೆಲಸಗಳಲ್ಲಿ ಬಿಝಿ ಆಗಿರುತ್ತೇವೆ. ನಮ್ಮ ಮೂಡಿನ, ಮೂಗಿನ ನೇರಕ್ಕೆ ನಾವಾಡುವ ಮಾತುಗಳು, ನಮ್ಮ ವರ್ತನೆ ನಮ್ಮಂಥೇ ಇರುವ ಇತರರ ಮೇಲೆ ಏನು ಪರಿಣಾಮ ಬೀರಿರಬಹುದು ಎಂದು ಯೋಚಿಸಲೂ ನಮಗೆ ಕೆಲವೊಮ್ಮೆ ಪುರುಸೊತ್ತು ಇರುವುದಿಲ್ಲ... ಯಾಕಂದರೆ ನಾವು ಯಾವಾಗಲೂ ಬಿಝಿ ಇರುತ್ತೇವೆ!!!

(ಯಾರಾದರೂ ತಪ್ಪಿ ಈ ಬರಹವನ್ನು ಕೊನೆಯ ತನಕ ಓದಿದ್ದರೆ ಸೂಚನೆ: ಈ ಬರಹ ಯಾರನ್ನೂ ವೈಯಕ್ತಿಕವಾಗಿ ಗುರಿಯಾಗಿಸಿ ಬರೆದಿದ್ದಲ್ಲ. ಯಾರನ್ನೂ ಬದಲಾಯಿಸಲು ಬರೆದ್ದಲ್ಲ. ನಾನು ಸರಿಯಾಗಿದ್ದೇನೆ, ಜಗತ್ತು ಸರಿಯಾಗಿಲ್ಲ ಎಂಬ ಉಡಾಫೆಯಿಂದಲೂ ಬರೆದಿದ್ದಲ್ಲ... ಕಂಡದ್ದು, ಕೇಳಿದ್ದನ್ನು ಗೀಚಿದ್ದು ಅಷ್ಟೇ... ಪ್ರತಿಕ್ರಿಯೆ ಕೊಡಬೇಕೆಂದು ತೀವ್ರವಾಗಿ ಅನಿಸಿದರೆ ಮಾತ್ರ ಪ್ರತಿಕ್ರಿಯೆ ಕೊಟ್ಟರೆ ಸಾಕು.... ಕೊಡದಿದ್ದರೆ ಯಾವುದೇ ಬೇಸರ ಇಲ್ಲ)


-
ಕೃಷ್ಣಮೋಹನ ತಲೆಂಗಳ.

(25.02.2021)

No comments: