ಸವೆದ ದಾರಿಯಡಿ ನಲುಗಿದ ಹೆಜ್ಜೆ ಗುರುತು...!

 

ಒಂದಾನೊಂದು ಕಾಲದಲ್ಲಿ ಒಂದು ರಾಜ್ಯದಲ್ಲಿ ಕು ಎಂಬ ಹೆಸರಿನ ಗ್ರಾಮವೊಂದಿತ್ತು. ಆ ಹೆಸರು ಯಾಕೆ ಬಂತೆಂಬ ಬಗ್ಗೆ ಹೆಚ್ಚಿನ ದಾಖಲೆ ಇಲ್ಲ. ಅಂತಹ ಕುಗ್ರಾಮದಲ್ಲಿ ಇಬ್ಬರು ವೃದ್ಧ ಸ್ನೇಹಿತರು ಇದ್ದರು. ಅವರಿಗೊಂದು ವಿಚಿತ್ರ ಹವ್ಯಾಸ. ನಾಲ್ಕಾರು ಜನರನ್ನು ಒಟ್ಟು ಸೇರಿಸಿ ಏನಾದರೂ ಮಾಡಬೇಕು ಅಂತ. ಚಟುವಟಿಕೆಗಳು ಅಂದ್ರೆ ಇಷ್ಟ.

 

ಆ ಗ್ರಾಮದ ನಡುವೆ ದೊಡ್ಡದೊಂದು ಕಾಡಿನಿಂದ ಕೂಡಿದ ಬೆಟ್ಟ ಇತ್ತು. ಆ ಬೆಟ್ಟದ ತುದಿಯಲ್ಲಿ ಪುಟ್ಟ ಊರು. ಬೆಟ್ಟದ ತಪ್ಪಲಿನಲ್ಲಿ ಪುಟ್ಟ ಊರು. ಎರಡೂ ಊರುಗಳ ನಡುವೆ ದಟ್ಟ ಕಾಡು, ಏರು ಬೆಟ್ಟದ ಕಾರಣ ಸಂಪರ್ಕವೇ ಇರಲಿಲ್ಲ. ಮೇಲಿನ ಊರಿನಲ್ಲಿ ಎಂಥವರು ಇದ್ದಾರೆ ಅಂತ ಕೆಳಗಿನವರಿಗೆ, ಕೆಳಗಿನ ಊರಿನವರ ಬಗ್ಗೆ ಮೇಲಿನವರಿಗೆ ಕಲ್ಪನೆ, ಮಾಹಿತಿ, ಒಡನಾಟ ಯಾವುದೂ ಇರಲಿಲ್ಲ...

 

ಹೀಗಿರುವಾಗ ಅತ್ಯುತ್ಸಾಹಿಗಳಾದ ಮುದುಕರಿಬ್ಬರೂ ಸೇರಿ ತುಂಬ ದಿನಗಳ ಕಾಲ ಕಷ್ಟಪಟ್ಟು ಬೆಟ್ಟದ ಬುಡದಿಂದ ತುದಿವರೆಗಿನ ಪೊದರು, ಸೊಪ್ಪುಗಳನ್ನು ಕಡಿದು, ಕಲ್ಲು ಮಣ್ಣುಗಳನ್ನು ಸರಿಸಿ ಒಂದು ಕಚ್ಛಾರಸ್ತೆ ಮಾಡಲು ಹೊರಟರು. ನಮ್ಮ ಊರು ಮುಂದುವರಿಯಬೇಕು. ಮೇಲೂರು ಮತ್ತು ಕೆಳಗೂರಿನವರು ಸೇರಿ ಕುಗ್ರಾಮಕ್ಕೆ ದೊಡ್ಡ ಹೆಸರು ಬರಬೇಕು ಎಂಬುದು ಅವರ ಕನಸಾಗಿತ್ತು. ತಿಂಗಳುಗಟ್ಟಲೆ ಕಷ್ಟಪಟ್ಟು, ಪೊದರುಗಳನ್ನು ಕಡಿದು ಅಂತೂ ಇಂತೂ ಜೀಪು ಹೋಗುವಂಥ ರಸ್ತೆಯೊಂದು ಬೆಟ್ಟದ ಸೆರಗಿನಲ್ಲಿ ಸಿದ್ಧವಾಯಿತು. ಇವರು ದಿನಾ ಮಾಡುತ್ತಿದ್ದ ಸರ್ಕಸ್ಸನ್ನು ಕಂಡು ಜನ ನಗುತ್ತಿದ್ದರು., ಮೊಕ್ಲೆಗ್ ಮರ್ಲ್ ಅಂತ ಹಿಂದಿನಿಂದ ಲೇವಡಿ ಮಾಡುತ್ತಿದ್ದವರೆಲ್ಲ ಆರೇ ತಿಂಗಳಿನಲ್ಲಿ ಸಿದ್ಧವಾದ ಕಚ್ಛಾ ರಸ್ತೆಯನ್ನು ಕಂಡು ಹುಬ್ಬೇರಿಸಿದರು.

ಒಂದು ಶುಭ ದಿನದಂದು ರಸ್ತೆ ಪೂರ್ತಿಯಾಗಿ ಕೆಳಗೂರಿನ ಜನ ಜೀಪು ಮಾಡಿಕೊಂಡು ಮೇಲೂರಿಗೆ ಹೋದರು. ಬೆಟ್ಟದ ತುದಿಯನ್ನು ಜೀವಮಾನದಲ್ಲೇ ಮೊದಲ ಬಾರಿಗೆ ಕಂಡ ಕೆಳಗೂರಿನವರು ಭಯಂಕರ ರೋಮಾಂಚನಗೊಂಡರು. ತುದಿಯ ತಂಪುಗಾಳಿ, ಸೂರ್ಯಾಸ್ತದ ಸೊಬಗು, ಮಂಜಿನ ರಾಶಿಯನ್ನು ಕಂಡು ಹಿರಿಹಿರಿ ಹಿಗ್ಗಿದರು.

ಮೇಲೂರಿನವರು ಅಷ್ಟೇ... ಅದೇ ಜೀಪಿನಲ್ಲಿ ಕೆಳಗೂರಿಗೆ ಬಂದು ಅಲ್ಲಿನ ಚಂದದ ಸರೋವರ ಕಂಡರು, ಬಯಲು, ತೋಟ, ಗದ್ದೆಗಳಲ್ಲಿ ಓಡಾಡಿದರು. ತರಕಾರಿ, ಹಣ್ಣುಗಳನ್ನು ತಿಂದು ನಲಿದರು... ಮೇಲೂರಿನವರು, ಕೆಳಗೂರಿನವರ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ಇಬ್ಬರೂ ಮುದುಕರನ್ನು ಜನರೆಲ್ಲ ಅಪ್ಪಿ ಕೊಂಡಾಡಿದರು. ಹಾಡಿ ಹೊಗಳಿದರು. ಜೈಕಾರ ಹಾಕಿದರು.  ಮೇಲೂರಿನ ಬಂಡೆಯೊಂದರ ಮೇಲೆ ಪುಟ್ಟ ಸಮಾರಂಭ ಮಾಡಿ ಇಬ್ಬರೂ ಮುದುಕರಿಗೆ ಗಂಧದ ಮಾಲೆಯಂತೆ ಕಾಣುವ ಯಾವುದೋ ಮಾಲೆ ಹಾಕಿ, ಎರಡು ಮೂಸುಂಬಿ, ನಾಲ್ಕು ಆಪಲ್ ಇರಿಸಿ, ಶಾಲು ಹೊದೆಸಿ ಸನ್ಮಾನಿಸಲಾಯಿತು. ಮುದುಕರ ಇಚ್ಛಾಶಕ್ತಿಯನ್ನು ಸ್ಥಳೀಯರು ಹಾಡಿ ಹೊಗಳಿದರು. ರಸ್ತೆಗೆ ಅವರ ಹೆಸರನ್ನೇ ಇಡಬೇಕೆಂದು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯವಾಯಿತು.

ಸರಿ... ಹೊಸ ರಸ್ತೆಯಾದ ಹುರುಪಿನಲ್ಲಿ ಮೇಲೂರಿನಲ್ಲಿ ರಸ್ತೆ ಶುರುವಾಗುವಲ್ಲಿ ರಸ್ತೆಗೆ ಮುದುಕರ ಹೆಸರನ್ನೇ ಇರಿಸಲಾಯಿತು. ನಾಮಫಲಕ ಸ್ಥಾಪನೆಯಾಯಿತು. ಯಾರೋ ಅತ್ಯುತ್ಸಾಹಿ ಸ್ವಂತ ಖರ್ಚಿನಲ್ಲಿ ಮುದುಕರ ಪ್ರತಿಮೆಗಳನ್ನು ಸಿದ್ಧಪಡಿಸಿ, ಹೊಸ ಸಂಪರ್ಕ ಕೊಂಡಿಯ ರಾಯಭಾರಿಗಳು ಅಂತ ಬರೆಸಿ ರಸ್ತೆ ಪಕ್ಕ ಅವರ ಮೂರ್ತಿಗಳನ್ನೂ ಪ್ರತಿಷ್ಠಾಪನೆ ಮಾಡಿದರು. ಮುದುಕರಿಬ್ಬರೂ ಇದನ್ನು ನಿರ್ಲಿಪ್ತವಾಗಿ ನೋಡುತ್ತಿದ್ದರು. ಜನರ ಅತ್ಯುತ್ಸಾಹ ಕಂಡು ಒಳಗೊಳಗೆ ನಗುತ್ತಿದ್ದರು...

 

ನಂತರ ಕುಗ್ರಾಮದ ಚಹರೆಯೇ ಬದಲಾಯಿತು. ನಿತ್ಯ ಕೆಳಗೂರಿನಿಂದ ಮೇಲೂರಿಗೆ, ಅಲ್ಲಿಂದ ಪುನಃ ಕೆಳಗೂರಿಗೆ ವಾಹನಗಳ ಓಡಾಟ ಶುರುವಾಯಿತು. ವ್ಯಾಪಾರ, ವಹಿವಾಟು ಹೆಚ್ಚಾಯಿತು. ಪ್ರವಾಸಿಗರೂ ಬರತೊಡಗಿದರು. ನಾಗರಿಕತೆ ಊರಿಗೆ ಕಾಲಿಟ್ಟಿತು. ಮೊಬೈಲ್ ಟವರು ಬಂತು, ಅಂಗಡಿ, ಹೋಟೆಲು, ಹೋಂ ಸ್ಟೇ, ಬಾರು, ರೆಸ್ಟೋರಂಟು ಎಲ್ಲ ಬಂತು. ರಸ್ತೆ ಡಾಂಬರೀಕರಣ ಆಯಿತು.  ಆದರೂ ಮಾರ್ಗ ಮಾಡಿದಲ್ಲಿಗೆ ಮುದುಕರ ಕೆಲಸ ನಿಲ್ಲಲಿಲ್ಲ... ಪ್ರತಿನಿತ್ಯ ಅವರು ಏಣಿ ಹಿಡಿದು ಬಂದು ರಸ್ತೆ ಉದ್ದಕ್ಕೂ ಓಡಾಡಿ ಬೆಳೆದ ಗೆಲ್ಲುಗಳನ್ನು ಸವರುವುದು, ಕಲ್ಲುಗಳನ್ನು ಬದಿಗೆ ಸರಿಸುವ ಕಾರ್ಯವನ್ನು ಮಾಡುತ್ತಲೇ ಇದ್ದರು.... ರಸ್ತೆಯನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದರು. ಅಪಾಯಕಾರಿ ತಿರುವುಗಳಲ್ಲಿ ನಿಂತು ಚಾಲಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಎಷ್ಟೋ ಬಾರಿ ರಸ್ತೆಯಲ್ಲಿ ಅವರ ಓಡಾಟ ವೇಗವಾಗಿ ಬೈಕುಗಳಲ್ಲಿ ಹೋಗುವವರಿಗೆ ಉಪದ್ರ ಅನ್ನಿಸುತ್ತಿತ್ತು. ಈ ಮುದುಕರು ಏಣಿ ಹಿಡಿದುಕೊಂಡು ಓಡಾಡುವುದು ಕಿರಿಕಿರಿ ಆಗುತ್ತಿತ್ತು. ನಿಮಗೀಗ ವಯಸ್ಸಾಗಿದೆ... ಇಲ್ಲಿ ರಸ್ತೆ ನೋಡಿಕೊಳ್ಳಲು ಜನ ಇದ್ದಾರಲ್ವ... ಯಾಕೆ ಅಡ್ಡಡ್ಡ ಬರ್ತೀರಿ?” ಅಂತ ಬೈಕುಗಳಲ್ಲಿ ಹೋಗುವ ಯುವಕರು ಮುದುಕರಿಗೆ ನೇರವಾಗಿ ಬಯ್ಯುತ್ತಿದ್ದರು. ಮತ್ತೆ ಕೆಲವು ಪ್ರವಾಸಿಗರು ಸ್ಥಳೀಯ ಪಂಚಾಯಿತಿ ಕಚೇರಿಗೆ ದೂರು ನೀಡಿದರು. ಆ ಮುದುಕರು ಹೊತ್ತು ಗೊತ್ತಿಲ್ಲದೆ ರಸ್ತೆಯಲ್ಲಿ ಏಣಿ ಹಿಡ್ಕೊಂಡು ಓಡಾಡುತ್ತದ್ದಾರೆ, ಆ ಏಣಿ ವಾಹನಗಳಿಗೆ ತಾಗಿದರೆ ಯಾರು ಹೊಣೆ?, ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದರೆ ಯಾರು ಹೊಣೆ...?” ಇತ್ಯಾದಿ ದೂರುಗಳು ಪಂಚಾಯಿತಿ ಕಚೇರಿಗೂ ಹೋಯಿತು.

ಪಂಚಾಯಿತಿಯವರು ಮುದುಕರನ್ನು ಕರೆಸಿ ಬುದ್ಧಿ ಹೇಳಿದರು. ನೋಡ್ರಬ್ಬ ನೀವಿಬ್ಬರು ಸೇರಿ ರಸ್ತೆ ಮಾಡಿದ್ದೇನೋ ಹೌದು. ಹಾಗಂತ ಇಡೀ ದಿನ ರಸ್ತೆಯಲ್ಲೇ ಓಡಾಡಿದರೆ ಅದರ ಪರಿಣಾಮ ನಿಮಗೆ ಅರಿವಿದೆಯಾ? ಸ್ವಲ್ಪ ಜಾಗ್ರತೆ ಮಾಡಿ. ನಿಮ್ಮದೆ ಸ್ವಂತ ರಸ್ತೆ ಥರ ವರ್ತಿಸ್ತೀರಲ್ವ ಅಂತ ಬೈದು ಕಳ್ಸಿದ್ರು... ಮುದುಕರಿಗೂ ಅನ್ನಿಸಿತು... ರಸ್ತೆ ಮಾಡಿದ್ದೇನೋ ಹೌದು. ಹಾಗಂತ ಜೀವಮಾನ ಇಡೀ ನಾವೇ ರಸ್ತೆಯಲ್ಲಿ ಓಡಾಡಿ ನೋಡಬೇಕಾಗಿಲ್ವಲ್ಲ. ಯಾರು ಬೇಕಾದ್ರು ಸರಿ ಮಾಡಲಿ ಅಂತ ಅಂದಿನಿಂದ ಗೆಲ್ಲುಗಳನ್ನು ಕಡಿಯುವುದು, ರಸ್ತೆ ಸ್ವಚ್ಛ ಮಾಡುವ ಕಾಯಕ ಬಿಟ್ರು. ಏಣಿ ಮೂಲೆ ಸೇರಿತು....

....

ಆರು ತಿಂಗಳು ಕಳೆಯಿತು. ಈಗ ಮುದುಕರು ಆ ರಸ್ತೆಯಲ್ಲಿ ಓಡಾಡುವುದನ್ನೇ ಬಿಟ್ಟಿದ್ದರು. ಇನ್ನು ಆ ರಸ್ತೆಗೆ ತಮ್ಮ ಅವಶ್ಯಕತೆ ಅಗತ್ಯ ಇಲ್ಲ ಎಂದು ಗೊತ್ತಾದ ಬಳಿಕ ಅತ್ತ ಸುಳಿಯುತ್ತಿರಲಿಲ್ಲ. ಜನರೂ ಅವರ ಬಗ್ಗೆ ಯೋಚಿಸುವುದನ್ನು ಮರೆತಿದ್ದರು. ಆದರೂ ಮೇಲೂರಿನಲ್ಲಿ ರಸ್ತೆ ಪಕ್ಕ ಅವರ ಹೆಸರಿನ ಫಲಕ ಹಾಗೂ ಪ್ರತಿಮೆ ಬಿಸಿಲಿಗೆ ತಣ್ಣಗೆ ಹೊಳೆಯುತ್ತಲೇ ಇತ್ತು. ಹೀಗಿರುವಾಗ ಆ ಊರಿನಲ್ಲಿ ಚುನಾವಣೆ ನಡೆದು ಹೊಸ ಶಾಸಕರು ಬಂದರು. ಅವರಿಗೆ ಕುಗ್ರಾಮವನ್ನು ದೊಡ್ಡ ಪ್ರವಾಸಿ ತಾಣ ಮಾಡಬೇಕು ಅಂತ ಅಮೋಘ ಐಡಿಯಾ ಬಂತು. ಒಂದು ಯೋಜನಾ ವರದಿ ಸಿದ್ಧಮಾಡಿ ಸರ್ಕಾರಕ್ಕೆ ಕಳುಹಿಸಿಯೇ ಬಿಟ್ಟರು. ರಸ್ತೆ ಅಗಲೀಕರಣ, ರೋಪ್ ವೇ, ವೀಕ್ಷಣಾ ತಾಣಗಳ ನಿರ್ಮಾಣ, ಪ್ರವಾಸಿ ಬಂಗ್ಲೆ ನಿರ್ಮಾಣ ಇತ್ಯಾದಿ ವಿಚಾರಗಳಿಗೆ ಅನುಮೋದನೆ ಸಿಕ್ಕಿತು. ಶಾಸಕರಿಗೆ ದೊಡ್ಡ ಅನುಯಾಯಿಗಳ ಪಡೆಯೇ ಇದ್ದುದರಿಂದ ಪ್ರವಾಸಿ ತಾಣ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ಭರ್ಜರಿಯಾಗಿಯೇ ನಡೆಯಿತು..

 

ಶಿಲನ್ಯಾಸ ಸಮಾರಂಭ ಮಾನ್ಯ ಸಚಿವರ ಸಮ್ಮುಖದಲ್ಲಿ ಆರಂಭವಾಯಿತು. ಸ್ಥಳೀಯ ಪುಢಾರಿಯೊಬ್ಬನ ಸ್ವಾಗತ ಭಾಷಣ ಶುರುವಾಯಿತು...

ಆತ್ಮೀಯರೇ ಈ ಕುಗ್ರಾಮ ಮೊದಲು ಹೇಗಿತ್ತು ಅಂತ ನಿಮಗೆಲ್ಲ ಗೊತ್ತೇ ಇದೆ. ಇಲ್ಲಿ ಕೆಳಗೂರು ಮತ್ತು ಮೇಲೂರಿನವರಿಗೆ ಶತಮಾನಗಳಿಂದ ಸಂಪರ್ಕವೇ ಇರಲಿಲ್ಲ. ಹೀಗಿರುವಾಗ ಮಾನ್ಯ ಶಾಸಕರ ಪ್ರಯತ್ನದಿಂದ ಇಲ್ಲೊಂದು ರಸ್ತೆಯಾಯಿತು. ಇಂದು ಆ ರಸ್ತೆ ಅಗಲೀಕರಣ ಕಾರ್ಯ ನಡೆಯತ್ತಿದೆ. ಇದು ಅವರ ದೂರದೃಷ್ಟಿ ಮತ್ತು ಇಚ್ಛಾಶಕ್ತಿಯ ಪ್ರತೀಕ. ಮೇಲೂರು ಮತ್ತು ಕೆಳಗೂರಿನವರ ಸಂಪರ್ಕದ ಬಗ್ಗೆ ಮುತುವರ್ಜಿ ವಹಿಸಿರುವ ಮಾನ್ಯ ಶಾಸಕರು ಇಂದು ರಸ್ತೆ ವಿಸ್ತರಣೆ ಮಾಡಿಸಿ, ಇಡೀ ವಿಶ್ವಕ್ಕೆ ಈ ಊರನ್ನು ತೋರಿಸಿಕೊಡಲಿದ್ದಾರೆ. ಹಾಗಾಗಿ ಅವರಿಗೆ ಇಂದು ಸಂಪರ್ಕ ಶಕ್ತಿ ಪ್ರಶಸ್ತಿ ನೀಡಿ ಪುರಸ್ಕಾರ ಮಾಡಲಿದ್ದೇವೆ. ಹಾಗೂ ನಾಗರಿಕತೆಯ ಬೆಸುಗೆ ಮಾಡಿದ ಈ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತೇವೆ... ಬಹುಶಃ ಅವರು ಈ ರಸ್ತೆ ಬಗ್ಗೆ ಯೋಚಿಸದೇ ಇದ್ದರೆ ಈ ಊರಿನಲ್ಲಿ ನಾಗರಿಕತೆ ಎಂಬುದು ಇರುತ್ತಲೇ ಇರಲಿಲ್ಲವೇನೋ...ಮೇಲೂರು ಮತ್ತು ಕೆಳಗೂರನ್ನು ಬೆಸೆಯಬೇಕೆಂಬ ಅಮೋಘ ಯೋಚನೆ ಆರಂಭದಲ್ಲಿ ಬಂದದ್ದೇ ನಮ್ಮ ಮಾನ್ಯ ಶಾಸಕರಿಗೆ... ಆದರೆ ಅವರಿಗೆ ಪ್ರಚಾರದ ತೆಲವಿಲ್ಲ, ಅವರಿಗೆ ಹೊಗಳಿಕೆ ಆಗುವುದಿಲ್ಲ. ಅವರು ಎಲೆ ಮರೆಯ ಕಾಯಿ... ಹೀಗೆ ಭಾಷಣ ಮುಂದುವರಿಯುತ್ತಲೇ ಇತ್ತು.

ಭಾಷಣದ ಸೊಬಗು ಕಿವಿ ತುಂಬಿಕೊಳ್ಳಲು ಅಲ್ಲಿ ಮುದಕರಿಬ್ಬರು ಇರಲೇ ಇಲ್ಲ. ಅವರನ್ನು ಯಾರೂ ಕರೆಯಲೂ ಇಲ್ಲ. ಅವರ ಪ್ರತಿಮೆಗಳು ಮತ್ತು ನಾಮಫಲಕಗಳಿಗೂ ಈ ಭಾಷಣ ಕೇಳಿಸಲೇ ಇಲ್ಲ.. ಕಾರಣ, ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಪ್ರತಿಮೆ ಮತ್ತು ನಾಮಫಲಕಗಳನ್ನು ಕಿತ್ತು ಅದರ ಕಬ್ಬಿಣವನ್ನು ವೇದಿಕೆ ನಿರ್ಮಾಣಕ್ಕೆ ಬಳಸಲಾಗಿತ್ತು....!!!

ಈ ಭಾಷಣ ಕೇಳದಷ್ಟು ದೂರದಲ್ಲಿ... ಮುದುಕರಿಬ್ಬರು ಮರದ ಗೆಲ್ಲು ಸವರಲು ಬಳಸುತ್ತಿದ್ದ ಹಳೆ ಏಣಿಯನ್ನು ಮಾರಾಟ ಮಾಡಲು ಗುಜರಿ ಅಂಗಡಿಗೆ ಪೇಟೆಗೆ ತೆಗೆದುಕೊಂಡು ಹೋಗಿದ್ದರು!!!!

-ಕೃಷ್ಣಮೋಹನ ತಲೆಂಗಳ

(09.03.2021)

No comments: