ಮರೀಚಿಕೆಯಾದ ಮಳೆಯೂ... ಜೂನಿನಲ್ಲಿ ಶುರುವಾಗುವ ಶಾಲೆಯೂ....!

ಮೊದಲು ಶಾಲೆಗೆ ಹೋಗುವಾಗ ಜೂನ್ ಆರಂಭದಲ್ಲೇ ಮಳೆಗಾಲ ಶುರು. ಆಗ ನಡೆದುಕೊಂಡು ಶಾಲೆಗೆ ಹೋಗುವಾಗ ಮೊದಲ ಮಳೆಗೆ ಬರುವ ಮಣ್ಣಿನ ಗಾಢ ಪರಿಮಳ, ಬೆನ್ನಿನಲ್ಲಿರುವ ಹೊಸ ಬ್ಯಾಗು, ಹೊಸ ಪುಸ್ತಕದ ಪ್ರತ್ಯೇಕ ಘಮಲು, ಮರೆತು ಹೋದಂತಿದ್ದ ಶಾಲೆಯ ದಾರಿ ಪ್ರೆಶ್ಶಾಗಿ ಕಂಡ ಹಾಗೆ ಭಾಸವಾಗಿ, ಎರಡು ತಿಂಗಳ ಬಳಿಕ ಹೊಸದೊಂದು ಕ್ಲಾಸಲ್ಲಿ ಕುಳಿದಾಗ ಹೊಸದಾಗಿ ರೈಲು ಹೋಗಿ ಹತ್ತಿದ ಹಾಗೆ ಉಂಟಾಗುವ ಅನುಭೂತಿಯನ್ನು ಪ್ರತಿ ಹೊಸ ಮಳೆಯೂ ನೆನಪಿಸುತ್ತದೆ!

ಈಗ ಮಳೆ ಬರಲು ಜೂನೇ ಆಗಬೇಕೆಂದಿಲ್ಲ, ಜೂನಿನಲ್ಲಿ ಮಳೆಯೇ ಆಗಬೇಕೆಂದೂ ಇಲ್ಲ. ಶಾಲೆಗಳೂ ಅಷ್ಟೇ ಯಾವಗ ಮುಗಿದು, ಯಾವಾಗ ಶುರುವಾಗುತ್ತದೆಂದು ಯಾರಿಗೂ ಗೊತ್ತಿಲ್ಲ.. ಆ ಕುತೂಹಲ, ಅಚ್ಚರಿ, ಕಾಯುವಿಕೆ ಅರ್ಥವನ್ನೇ ಕಳೆದುಕೊಳ್ಳುವ ಹಾಗೆ ಮಾಡಿದೆ ಪರಿಸ್ಥಿತಿ.

ಜೂನಿನ ಮಳೆಗೆ ಅಷ್ಟು ಶಕ್ತಿ ಇತ್ತು, ನಾಲ್ಕು ತಿಂಗಳು ಕಾದ ಇಳೆಯನ್ನು ಸಂಪೂರ್ಣ ಒದ್ದೆ ಮಾಡಿ, ಕಸಕಡ್ಡಿಗಳನ್ನು ರಾಶಿ ಹಾಕಿ ಆಚೆ ಒಯ್ದು... ನಸು ಮೋಡ ಮುಸುಕಿದ ವಾತಾವರಣದಲ್ಲಿ ತಂಪು ಗಾಳಿ ಬೀಸುತ್ತಾ ಇರುವಾಗ, ಇದು ಜೂನ್.. ಇದು ಜೂನ್…” ಅಂತ ಪ್ರಕೃತಿಯ ಅಂಗ ಅಂಗಗಳೂ ಸಾರಿ ಹೇಳುತ್ತಿದ್ದವು. ಅದೇ ಹೊತ್ತಿಗೆ ಶಾಲೆ ಪುನರಾರಂಭಗೊಳ್ಳುವುದು ಕಾಕತಾಳೀಯ ಅಷ್ಟೇ.. ಹಾಗಾಗಿ ಎಷ್ಟೋ ತಿಂಗಳ ಬಳಿಕ ಧೋ ಅಂತ ಸುರಿದ ಮಳೆಗೆ ಜೂನ್ ತಿಂಗಳನ್ನು ನೆನಪಿಸುವ ಶಕ್ತಿ ಇರುವುದು...

 

ಭಯಂಕರ ಬೇಸಗೆಗೆ ಮಳೆಯನ್ನೇ ಮರೆಸುವ ಶಕ್ತಿ ಇದೆ. ಮಳೆಯೆಂಬುದು ಕನಸಿನ ಹಾಗೆ, ಮಳೆಯೆಂಬುದು ಮರೀಚಿಕೆಯ ಹಾಗೆ, ಮಳೆಯೆಂಬುದು ಕೈಗೆಟುಕದ ಸಂಪತ್ತಿನ ಹಾಗೆ ನೆತ್ತಿಯನ್ನು ಸುಡುವ ಬಿಸಿಲು ಭಾವಿಸುವಂತೆ ಮಾಡುತ್ತದೆ. ಸುಡು ಬೇಸಿಗೆಯ ನಡು ಮಧ್ಯಾಹ್ನದಲ್ಲಿ ಕಾದ ಹೆಂಚಿನ ಹಾಗಿರುವ ಪ್ರಕೃತಿಯ ನಡುವೆ ನಿಂತು ಕಣ್ಣಾಡಿಸಿದರೆ ಮಳೆಯೇ ಇನ್ನು ಬರುವುದಿಲ್ಲವೇನೋ ಎಂಬ ಭ್ರಮೆ ಹುಟ್ಟುತ್ತದೆ...

ಆದರೆ ಹವಾಮಾನ ಇಲಾಖೆ ಹೇಳಿಯೋ, ಹೇಳದೆಯೋ ಧುತ್ತನೆ ಬರುವ ಮಳೆಯ ಜೊತೆಗಿನ ಭಯಂಕರ ಗಾಳಿ, ಕಣ್ಣು ಕೋರೈಸುವ ಮಿಂಚು, ಕಿವಿಗಡಚಿಕ್ಕುವ ಗುಡುಗಿನ ಜೊತೆಗೆ ಕೆಲವು ನಿಮಿಷಗಳ ಕಾಲ ತೋಯಿಸಿ, ಹಿಂಡಿ ಹಿಪ್ಪೆ ಮಾಡುವ ಮಳೆಗೂ ಒಂದು ಸ್ವಪ್ನಸದೃಶ ಏಕಾಂತ ಕಟ್ಟಿಕೊಡುವ ತಾಕತ್ತಿದೆ. ಮಳೆ ನಿಂತ ಮೇಲೆ ಕಂಡ ಕೃತಕ ಪ್ರವಾಹ, ಮುರಿದ ಮರಗಳು, ಬಾಗಿದ ಕರೆಂಟು ಕಂಬ, ಚೆಲ್ಲಾಪಿಲ್ಲಿಯಾದ ಸೊಪ್ಪು, ಸೌದೆ, ಗೆಲ್ಲು, ಹೂವು, ಗಿಡ ಮರ, ಕಾಣೆಯಾದ ವಿದ್ಯುತ್ತು, ಖಾಲಿಯದ ಮೊಬೈಲು ಚಾರ್ಜು, ಹಾರಿ ಹೋದ ಛಾವಣಿ, ಕರಗಿ ಹೋದ ಮಾರ್ಗಗಳೆಲ್ಲವು ನಿರಾಕರಿಸಲಾಗದ ಸತ್ಯಗಳು. ಅದಕ್ಕೂ ಮೊದಲು ಬಂದು ಹೋದ ಮಳೆ, ಅದು ತಂದುಕೊಟ್ಟ ತಂಪಿನ ರುಚಿ ಮತ್ತು ತಣ್ಣನೆಯ ಗಾಳಿಯ ಸುಖ... ಅವೆಲ್ಲ ಪ್ರಕೃತಿಯ ತಾಕತ್ತು ಮತ್ತು ನಿರೀಕ್ಷೆಗಳನ್ನು ಮೀರಿ ಬರಬಹುದಾದ ಹಾಗೂ ನಿರಾಕರಿಸಲಾಗದ ಪರಿಸ್ಥಿತಿಗ



ಳನ್ನು ತೋರಿಸಿಕೊಡಬಹುದಾದ ಸಾಮರ್ಥ್ಯವನ್ನು ಸಾರಿ ಹೇಳುತ್ತವೆ... ಮರುದಿನ ಕಾಯುವ ಸುಡು ಬಿಸಿಲಿಗೂ ಮುನ್ನಾದಿನ ಮಳೆಯ ತಂಪಿನ ಕಚಗುಳಿಯನ್ನು ಆಗಾಗ ನೆನಪಿಸುವ ಶಕ್ತಿ ಇರುತ್ತದೆ. ಅದು ಕ್ರಮೇಣ ಮಂಕಾಗುತ್ತಾ ಬಂದು ಪುನಶ್ಚೇತನಗೊಳ್ಳುವುದು ಮತ್ತೊಂದು ಧುತ್ತನೆ ಮಳೆ ಬಂದಾ ಆವರಿಸಿ ಹೋದಾಗಲೇ...
! ಅದು ಪ್ರಕೃತಿಯ ತಾಕತ್ತು ಮತ್ತು ಬುದ್ಧಿವಂತರೆನಿಸಿದ ಹುಲು ಮಾನವನ ದೌರ್ಬಲ್ಯ.

-ಕೃಷ್ಣಮೋಹನ ತಲೆಂಗಳ (12.03.2021)

No comments: