ಕಾಣದ ಕಡಲಿನ ಮೊರೆತದ ಜೋಗುಳ....


 

ಅರ್ಥವಾಗದ್ದನ್ನು ಅರ್ಥವಾಗಿದೆ ಎಂದುಕೊಂಡು ಅರ್ಥವಾದ ಭ್ರಮೆಯಲ್ಲಿ ವ್ಯವಹರಿಸಿ ಅರ್ಥವಾಗಿದೆ ಎಂದುಕೊಂಡದ್ದೆಲ್ಲ ನಿಜವಾಗಿ ಅರ್ಥವಾಗಿರಲಿಲ್ಲ, ಅರ್ಥವಾಗದ್ದು ಸಾಕಷ್ಟಿದೆ ಎಂದು ಅರಿವಾಗುವ ಹೊತ್ತಿಗೆ ಅರ್ಥವಾಗಿದ್ದಕ್ಕಿಂತಲೂ ಅರ್ಥವಾಗದ್ದೇ ದೊಡ್ಡ ಸಂಗತಿಯಾಗಿ ಕಾಡಿ, ಅರ್ಥವಾಗದ್ದೆಲಲ್ಲ ಅರ್ಥಹೀನ ಎನಿಸಿ, ಅರ್ಥವನ್ನು ಅಪಾರ್ಥ ಆವರಿಸಬಹುದು.

ಈ ವಾಕ್ಯ ಸ್ಪಷ್ಟವಾಗಿದೆ, ಅರ್ಥ ಮಾಡಿಕೊಂಡು ಓದಿದರೆ ಅರ್ಥವಾಗುವಂಥದ್ದೇ ಆಗಿದೆ.

ಪರಿಸ್ಥಿತಿ ಮನಃಸ್ಥಿತಿಯನ್ನು ಕಟ್ಟಿಕೊಡುತ್ತದೆ ಎಂಬುದಕ್ಕೆ ಸಮುದ್ರವೇ ಸಾಕ್ಷಿ.

ಅದೇ ಸಮುದ್ರ, ಅದೇ ಮರಳು, ಅದೇ ಅಲೆ, ಗಾಳಿ, ಮಸುಕಾದ ದಿಗಂತ, ಚಲಿಸದೇ ನಿಂತತೆ ಕಾಣುವ ದೂರದ ನಾವೆಗಳು, ನೀಲಿ ಆಕಾಶ, ನಿರ್ಲಿಪ್ತ ಬಂಡೆಗಳು... ದೃಢವಾಗಿ, ಯಾವತ್ತೋ ಹೊರಡಲೆಂಬಂತೆ ಕಾದು ಕುಳಿತ ಹಗ್ಗಗಳಲ್ಲಿ ಬಂಧಿಯಾದ ದೋಣಿಗಳು...

ಆದರೆ, ಕಡಲ ತಡಿಗೆ ನೀವೆಷ್ಟು ಹೊತ್ತಿಗೆ ಹೋಗುತ್ತೀರಿ ಎಂಬುದರ ಮೇಲೆ ಕಡಲಿನ ಮೇಲಿನ ಆಪ್ಯಾಯಮಾನ, ಮೋಹ ನಿರ್ಧಾರವಾಗುತ್ತದೆ. ಮುಂಜಾನೆ ತುಂಬ ಪ್ರಶಾಂತ, ಸೂರ್ಯ ನೆತ್ತಿ ಏರುತ್ತಾ ಬಂದ ಹಾಗೆ ಸುಡು ಬಿಸಿಲು, ಮಧ್ಯಾಹ್ನವಂತೂ ಕಣ್ಣು ತೆರೆಯಲಾಗದಷ್ಟು ಗಾಢ ಸೆಖೆ, ಸುಡುವ ಮರಳು, ಬಿಸಿ ಗಾಳಿ, ಕಾದ ಬಂಡೆ... ಮತ್ತೆ ಸಂಜೆಯಂತೂ ಕೇಳುವುದೇ ಬೇಡ. ತಂಪು ಗಾಳಿ, ಹೊಂಬಣ್ಣದ ಆಕಾಶ, ಅಸ್ಪಷ್ಟ ಬೆಳಕು, ಸ್ಪಷ್ಟ ತೆರೆ, ನಿಟ್ಟುಸಿರು ಬಿಡುವ ಬಂಡೆ, ಮತ್ತು ಕಡಲಿನತ್ತ ಬಿರುಸಾಗಿ ಸಾಗುವ ದೋಣಿಗಳು... ಪರಿಸ್ಥಿತಿಗೆ ತಕ್ಕ ಹಾಗೆ ಬದಲಾಗುವ ಮನಸ್ಸುಗಳ ಹಾಗೆ... ಅದು ಮನುಷ್ಯ ಸಹಜ ಗುಣ.

ಸಮುದ್ರದತ್ತ ಎಷ್ಟು ಹೊತ್ತಿಗೆ ಹೋಗುತ್ತೇವೆ, ಪರಿಸರ ಆಗ ಹೇಗಿದೆ ಎಂಬುದನ್ನು  ಬಿಸಿಲು ಮತ್ತು ಹೊತ್ತು ನಿರ್ಧಾರ ಮಾಡುತ್ತದೆ. ಕೆಟ್ಟ ತಲೆಯನ್ನು ಹೊತ್ತುಕೊಂಡು ನಡು ಮಧ್ಯಾಹ್ನ ಸಮುದ್ರದತ್ತ ತೆರಳಿದರೆ ಖಂಡಿತಾ ಅದು ನಿಮ್ಮ ಮನಸ್ಸನ್ನು ತಂಪು ಮಾಡಲು ಸಾಧ್ಯವಿಲ್ಲ. ಅದೇ ಜಾಗಕ್ಕೆ ಸಂಜೆ 5ರ ನಂತರ ಹೋದರೇ ಜಾಗವೇ ಬದಲಾದಂಥಹ ಭಾವ. ಎಲ್ಲವೂ ತನ್ಮಯವಾಗಿ, ಪ್ರಶಾಂತವಾಗಿ, ಜೋಗುಳ ತೂಗಲು ಕಾದು ಕುಳಿತ ಹಾಗೆ! ಹೇಳಿದ್ದನ್ನೆಲ್ಲ ಕಡಲು ಕೇಳುತ್ತದೆ, ಅರಗಿಸಿಕೊಳ್ಳುತ್ತದೆ ಎಂಬ ಹಾಗೆ...

ಪ್ರಕ್ಷುಬ್ಧ ಮನಸ್ಸುಗಳು ಕೂಡಾ ಹಾಗೆಯೇ. ಆವೇಶದಲ್ಲಿ, ಅಸಹಾಯಕತೆಯಲ್ಲಿ, ಬೇಸರದಲ್ಲಿ, ಸಿಟ್ಟಿನಲ್ಲಿ ನಡು ನೆತ್ತಿಯ ಮೇಲೆ ಸೂರ್ಯನನ್ನು ಹೊತ್ತ ಕಡಲಿನ ಹಾಗೆ. ಹುಣ್ಣಿಮೆಯ ರಾತ್ರಿ ಉಬ್ಬರಕ್ಕೆ ಸಿಲುಕಿ ಭೋರ್ಗರೆದ ಹಾಗೆ. ಆ ಹೊತ್ತು, ಆ ಸಂದರ್ಭ, ಆ ಪರಿಸರ ನಿಗಿನಿಗಿ ಕೆಂಡದ ಹಾಗೆ. ಆಗ ಹೇಳಿದ್ದು, ಕೇಳಿದ್ದು, ಯೋಚಿಸಿದ್ದು, ನಿರ್ಧಿರಿಸಿದ್ದು, ಮಾಡುತ್ತೇನೆ ಅಂದುಕೊಂಡದ್ದು ಯಾವುದೂ ವಿವೇಚನೆಯಿಂದ ಕೂಡಿರಬೇಕಾಗಿಲ್ಲ. ಅದು ಆ ಕ್ಷಣದ ಆವೇಶದಲ್ಲಿ ಬೆಂದ ಒಗ್ಗರಣೆಯ ಹಾಗೆ. ಮತ್ತೊಂದು ಕ್ಷಣಕ್ಕೆ ಆವೇಶ, ಬೇಸರ, ಅಪಾರ್ಥ ಇಳಿದ ಬಳಿಕ ಶಾಖ ಕಳೆದುಕೊಂಡ ಕಾವಲಿಯ ಹಾಗೆ. ಮುಟ್ಟಿದರೂ ಕೈ ಸುಡುವುದಿಲ್ಲ. ಆವೇಶ ವಿವೇಚನೆಯನ್ನು, ತಾರ್ಕಿಕತೆಯನ್ನು, ವಾಸ್ತವವನ್ನು, ಭೂತವನ್ನು, ಭವಿಷ್ಯವನ್ನು ಮರೆಸುತ್ತದೆ. ವಾಸ್ತವದ ಪ್ರಜ್ಞೆಯನ್ನು ಆವೇಶ ಎಂಬ ವೈರಸ್ ವಶಕ್ಕೆ ತೆಗೆದುಕೊಂಡಿರುತ್ತದೆ. ಕನಿಷ್ಠ ಆ ಹೊತ್ತಿಗೆ ಮಾತನಾಡುವುದು, ನಿರ್ಧಾರ ಮಾಡುವುದು, ಸಮರ್ಥನೆ ಕೊಡುವುದು, ಘೋಷಣೆ ಮಾಡುವುದು ಬಾಲಿಶವಾಗಿ ಕಾಣಿಸಬಲ್ಲುದು. ಮಧ್ಯಾಹ್ನದ ಸಮುದ್ರ ಸಂಜೆಯ ವೇಳೆಗೆ ನಸುನಗುತ್ತಾ ಕಾಯುವ ಸ್ನೇಹಿತನ ಹಾಗೆ ಭಾಸವಾಗುವುದು ಇದೇ ಕಾರಣಕ್ಕೆ ಆ ಪರಿಸ್ಥಿತಿ ಮತ್ತು ಮನಃಸ್ಥಿತಿ.

....

 

ಸಮುದ್ರ ಗಂಭೀರ ಎನ್ನುತ್ತೇವೆ, ಅದಕ್ಕೆ ನಿರ್ಲಿಪ್ತತೆಯ ಹಣೆಪಟ್ಟಿ ಕಟ್ಟುತ್ತೇವೆ, ಕಾದ ಬಂಡೆಗೆ ಮನಸ್ಸೇ ಇಲ್ಲವೇನೋ ಅನ್ನಿಸುತ್ತದೆ. ಬಂಡೆಗೆ ಅಲೆಗಳು ಬಡಿದಪ್ಪಳಿಸಿದರೂ ಅದು ಒಂದಿಷ್ಟು ಕದಲದೆ ನಿಂತದ್ದು ಹೇಗೆ ಅಂತ ಆಶ್ಚರ್ಯ ಪಡುತ್ತೇವೆ. ಕಾಣದ ಕಡಲಿನ ಒಡಲಿನ ಬಗ್ಗೆ, ಅಲೆಗಳ ಮೂಲಗಳ ಬಗ್ಗೆ ವಿಮರ್ಶೆ ಮಾಡುತ್ತೇವೆ. ನಮ್ಮ ಸೀಮಿತ ದೃಷ್ಟಿಯ ಪುಟ್ಟದೊಂದು ಚೌಕಟ್ಟಿನಲ್ಲಿ ನಾವು ಕಂಡದ್ದಕ್ಕಿಂತಲೂ ಕಾಣದ್ದು ತುಂಬಾ ಇದೆ ಎಂಬ ವಾಸ್ತವ ಆ ಹೊತ್ತಿಗೆ ನಮಗೆ ಅರಿವಾಗುವುದಿಲ್ಲ. ಕಡಲನ್ನು ಕಂಡಿದ್ದೇವೆ ಅಂತಲೇ ಭಾವಿಸುತ್ತೇವೆ. ಕಂಡದ್ದಕ್ಕಿಂತ, ಕಾಣದ್ದು, ಕೇಳದ್ದಕ್ಕಿಂತ ಕೇಳಿಸಿಕೊಳ್ಳದೇ ಇದ್ದದ್ದು, ಘೋಷಿಸುವುದಕ್ಕಿಂತ ಪಾಲಿಸದೇ ಇದ್ದದ್ದು ಸಾಕಷ್ಟಿವೆ ಅನ್ನುವುದು ಅರ್ಥವಾಗುವುದಿಲ್ಲ. ಕಂಡವುಗಳಿಂದ ನಾವಿರಿಸಿದ ನಿರೀಕ್ಷೆಗಳು, ಮುಂದಿಟ್ಟ ಪ್ರಶ್ನೆಗಳಿಗೆ ತಕ್ಕ ಉತ್ತರ ಆ ಹೊತ್ತಿಗೆ ಸಿಗದೇ ಹೋದರೆ ನಾವು ಅಂದುಕೊಂಡದ್ದರ ಬಗ್ಗೆ, ನಿರೀಕ್ಷಿಸಿದ್ದರೆ ಬಗ್ಗೆ ನೀರಸ ಭಾವ, ಹತಾಶಾ ಭಾವ ಮೂಡಲೂಬಹುದು.

ದೃಷ್ಟಿಕೋನವನ್ನು, ವಿಮರ್ಶೆಗಳನ್ನು, ನಿರ್ಧಾರಗಳನ್ನು ಚೌಕಟ್ಟಿನೊಳಗೆ ಕಟ್ಟಿಕೊಡಲು ಹೊರಟಾಗ ಅದು ಕೇವಲ ನಮ್ಮ ದೃಷ್ಟಿಕೋನವಾಗಬಹುದು, ನಮ್ಮದೊಂದು ಪುಟ್ಟ ಜಗತ್ತಿನ ತಿಳಿವಳಿಕೆಯ ಮಟ್ಟಕ್ಕೆ ಸೀಮಿತವಾದ ಚಿಂತನೆಯಾಗಬಹುದೇ ಹೊರತು ಸಾರ್ವಕಾಲಿಕವಾಗಲೀ, ಎಲ್ಲರೂ ಮೆಚ್ಚುವಂಥಹ ಸಂಗತಿ ಆಗಬೇಕೆಂದೇನೂ ಇಲ್ಲ. ಕಾಣದ್ದನ್ನು ಕಂಡಿದ್ದೇವೆ ಅಂದುಕೊಳ್ಳುವುದು, ಅರ್ಥವಾಗದ್ದನ್ನು ಅರ್ಥ ಮಾಡಿಕೊಂಡಿದ್ದೇವೆ ಎಂದು ಭ್ರಮಿಸಿ ನಾವು ವರ್ತಿಸುವುದು ಇದೆಯಲ್ವ ಇಂಥದ್ದೇ ಸಂಕುಚಿತ ಭಾವಗಳು ಆವಿರ್ಭವಿಸಲು, ಅಪಾರ್ಥಗಳನ್ನು ಮಾಡಿಕೊಳ್ಳಲು, ಮತ್ತು ಆಗಾಗ ವ್ಯಗ್ರರಾಗಲೂ ಕಾರಣವಾದೀತು.

......

 

ಬಂಡೆ ಕದಲದೆ ಅಲ್ಲಿಯೇ ನಿಂತಿದೆ... ಅಲೆಗಳು ಅಪ್ಪಳಿಸಿದ ಮಾತ್ರಕ್ಕೆ ಹಿಂದೆ ಜರುಗುವುದು, ಅಲ್ಲಾಡುವುದು ಮಾಡುವುದಿಲ್ಲ. ಅದೇ ಕಾರಣಕ್ಕೆ ವರ್ಷಗಳಿಂದ ಅದು ಅಲ್ಲಿಯೇ ಇದೆ. ಬಂಡೆ ಚಂಚಲವಲ್ಲ, ಅದು ಕಠಿಣ. ಅದು ನಿರ್ಲಿಪ್ತವಾಗಿರುವುದಕ್ಕೇ, ಅಲ್ಲಿಯೇ ಉಳಿದಿರುವುದಕ್ಕೇ ನಾವು ಸಲೀಸಾಗಿ ಅದರ ಮೇಲೆ ಹತ್ತಿ ಸಮುದ್ರವನ್ನು ಹತ್ತಿರದಿಂದ ಕಂಡು ಬರಲು ಸಾಧ್ಯವಾಗಿರುವುದು. ಅಲೆಗಳ ಹೊಡೆತಕ್ಕೆ ತತ್ತರಿಸಿದ್ದರೆ, ಜರುಗಲು ನೋಡಿದ್ದರೆ, ಕರಗಿ ನೀರಾಗಿದ್ದರೆ, ಅಲ್ಲಿ ಬಂಡೆಯೂ ಇರುತ್ತಿರಲಿಲ್ಲ, ಕಾಠಿಣ್ಯದ ದರ್ಶನವೂ ಆಗುತ್ತಿರಲಿಲ್ಲ... ಅಲ್ವೇ...

 

ಕಡಲಿನ ಹಾಲ್ನೊರೆಯ ನಡುವೆ ಕಸಕಡ್ಡಿಗಳಿವೆ, ಮೃತದೇಹಗಳಿವೆ, ಚಿಪ್ಪುಗಳು, ಅವಶೇಷಗಳು, ಜಲಚರಗಳೂ ಇವೆ... ಎಲ್ಲವೂ ಸೇರಿ ಸಮುದ್ರವಾಗುತ್ತದೆ. ರಾಗ-ದ್ವೇಷಗಳಿರುವ ಮನಸ್ಸುಗಳ ಹಾಗೆ. ಅವುಗಳನ್ನು ಇದ್ದ ಹಾಗೆ ಕಂಡಾಗ ಮಾತ್ರ ಅದು ಸಮುದ್ರ ಎನ್ನಿಸುವುದು. ಸಮುದ್ರದ ನೀರು ಸಿಹಿಯಾದರೆ, ಅಲೆಗಳು ಅಬ್ಬರ ಕಳೆದುಕೊಂಡರೆ, ಮರಳು ಹೋಗಿ ಮಣ್ಣಾದರೆ ಅದು ಸಮುದ್ರವೆಂದು ಕರೆಯಲ್ಪಡುವುದೇ ಇಲ್ಲ!!! ಅದರ ಅಸ್ತಿತ್ವವೇ ಇಲ್ಲವಾಗುತ್ತದೆ. ಸುತ್ತಮುತ್ತಲಿನ ಮನಸ್ಸುಗಳೂ ಹಾಗೆಯೇ... ಇದ್ದ ಹಾಗೆಯೇ ಅರ್ಥ ಮಾಡಿಕೊಂಡಾಗ, ಸ್ವೀಕರಿಸಿದಾಗ ಅವರೂ ಇರುವವರು ಇರುವ ಹಾಗೆಯೇ ಕಾಣಿಸುತ್ತಾರೆ. ಅದರ ಬದಲು ಸಮುದ್ರ ನಾನು ಹೇಳಿದ ಹಾಗೆ ಇರಬೇಕು ಅಂದುಕೊಂಡರೆ, ನನ್ನ ಕ್ಯಾಮೆರಾದ ಫ್ರೇಮಿಗೆ  ಸರಿಹೊಂದುವಂತೆ ಸಮುದ್ರದ ಅಲೆ ಬಡಿಯಬೇಕು ಎಂದು ನಿರೀಕ್ಷಿಸಿದರೆ ಇಲ್ಲದ ಸಮುದ್ರದ ಲಕ್ಷಣಗಳು ಇದ್ದ ಹಾಗೆ, ಅಥವಾ ಇರುವ ಲಕ್ಷಣಗಳು ತಿರುಚಲ್ಪಟ್ಟ ಹಾಗೆ ಕಾಣಿಸುತ್ತದೆ...!

ಅದೇ ಸಮುದ್ರ, ಅದೇ ತೀರ, ಅದೇ ಮರಳು... ಅಲ್ಲಿಗೆ ಬರುವವರು ಬೇರೆ ಬೇರೆ. ಅವರವ ದೃಷ್ಟಿಗೆ ಒಂದೊಂದು ಥರ ಕಾಣಿಸುತ್ತದೆ. ವಿಷಾದದಲ್ಲಿ, ಖುಷಿಯಲ್ಲಿ, ನಿರ್ಲಿಪ್ತತೆಯಲ್ಲಿ, ಬದುಕು ಕಳೆದುಕೊಳ್ಳಬೇಕೆಂಬ ವೈರಾಗ್ಯ ಹೊಂದಿದವರಲ್ಲಿ ಒಂದೊಂದು ಭಾವತೀವ್ರತೆಯನ್ನು ಹುಟ್ಟಿಸಬಹುದು ಸಮುದ್ರ... ಎಲ್ಲವೂ ಅರ್ಥವಾಗಿದೆಯೆಂದುಕೊಂಡು ಕೆಲವನ್ನು ಕಡೆಗಣಿಸಿದ ಹಾಗೆ, ಅಪಾರ್ಥವನ್ನೇ ಅರ್ಥವೆಂದುಕೊಂಡು ಅರ್ಥ ಕಳೆದುಕೊಂಡ ಹಾಗೆ... ನಿರೀಕ್ಷೆಯಿಟ್ಟು, ಆಗ್ರಹಗಳನ್ನು ಕಟ್ಟಿಕೊಂಡು ಸಮುದ್ರದ ವಿಮರ್ಶೆಗೆ ಹೊರಟರೆ ಅದು ಬೆರಳಿನ ನಡುವೆ ಜಾರಿ ಹೋಗುವ ನೀರಿನ ಹಾಗೆ ಅಂಕೆಗೆ ಸಿಕ್ಕಲಾರದು.

ಕೇವಲ ಭೌತಿಕ ದರ್ಶನ ಮಾತ್ರ ಅರ್ಥ ಮಾಡಿಸುವುದಲ್ಲ. ಪರಿಸ್ಥಿತಿ ಕಟ್ಟಿಕೊಡುವ ಮನಃಸ್ಥಿತಿ ಮತ್ತು ಇದ್ದದನ್ನು ಇದ್ದ ಹಾಗೆ ಸ್ವೀಕರಿಸಲು ಸಾಧ್ಯವಾಗಬಹುದಾದ ವಿವೇಕ ಸಮುದ್ರದ್ದೂ ವಿಶ್ವರೂಪ ದರ್ಶನ ಮಾಡಿಸೀತು... ಆದರೆ ಒಳ್ಳೇ ಕೇಳುಗ, ಪ್ರೇಕ್ಷಕ, ಶಾಂತ ಚಿತ್ತದಿಂದ ಸ್ವೀಕರಿಸಬಲ್ಲ ಸ್ಥಿತಪ್ರಜ್ಞತೆ ರೂಢಿಸಲು ಸಾಧ್ಯವಾಗಬೇಕು. ಆಗ ಕಂಡೀತು ಪೂರ್ಣ ಸಮುದ್ರ ಆಳದ ವರೆಗೂ!

-ಕೃಷ್ಣಮೋಹನ ತಲೆಂಗಳ.

(19.04.2021)

No comments: