ಸಿಟ್ಟು ಬಂದರೆ ನಾನೇನು ಹೇಳುತ್ತೇನೋ. ನನಗೇ ಗೊತ್ತಿಲ್ಲ!!!

ಒಂದು ಕ್ರಿಕೆಟ್ ಮ್ಯಾಚ್ ವೀಕ್ಷಿಸುತ್ತಿರುತ್ತೇವೆ ಟಿ.ವಿ.ಯಲ್ಲಿ. ಭಾರತ ಚೆನ್ನಾಗಿ ಆಡುವಷ್ಟೂ ಹೊತ್ತು ತಂಡವನ್ನು, ತಂಡದವರನ್ನು ಮುಕ್ತಕಂಠದಿಂದ ಸ್ತುತಿಸುತ್ತೇವೆ. ಸ್ಟೇಟಸ್ಸಿನಲ್ಲಿ ಹಾಡಿ ಹೊಗಳುತ್ತೇವೆ. ಸೆಂಚುರಿ ಆದಾಗ, ವಿಕೆಟ್ ಪಡೆದಾಗ ಹಿರಿಹಿರಿ ಹಿಗ್ಗಿ ಆರಾಧಿಸಿ ಕಮೆಂಟುಗಳನ್ನು ಹಾಕುತ್ತೇವೆ. ಅದೇ ತಂಡ, ಅದೇ ದಿನ ಎರಡನೇ ಇನ್ನಿಂಗ್ಸಿನಲ್ಲಿ ಕುಸಿದರೆ, ರನ್ ಪಡೆಯುವಲ್ಲಿ, ವಿಕೆಟ್ ಗಳಿಸುವಲ್ಲಿ ವಿಫಲವಾದರೆ ನಮ್ಮ ಅಭಿಮಾನ ಅಸಹನೆಯಾಗಿ ಬದಲಾಗುತ್ತದೆ. ಇದು ಫಿಕ್ಸಿಂಗ್ ಕಣ್ರೀ, ದುಡ್ಡು ತಿಂದು ಆಡ್ತಾರೆ ಕಣ್ರೀ, ಇಂತಹ ಮ್ಯಾಚ್ ನೋಡ್ತೇವಲ್ಲ ನಮಗೆ ಹುಚ್ಚು, ಇವರಿಗೆ ದುಡ್ಡಿನ ಮದ... ಹೀಗೆಲ್ಲ ಪುಂಖಾನುಪುಂಖವಾಗಿ ನಮ್ಮದೇ ತಂಡದವರ ಅವಹೇಳನ ನಿರರ್ಗಳವಾಗಿ ಹೊರಹೊಮ್ಮುತ್ತದೆ.

ಸುಮ್ನೆ ಗಮನಿಸಿ ನಮ್ಮದೇ ದೇಶದ ತಂಡ, ಅದೇ ದಿವಸ, ಅದೇ ಮ್ಯಾಚು, ಅದೇ ಆಟಗಾರರು, ಅದೇ ನಾವು... ಆದರೆ ಆ ಸಂದರ್ಭ, ಸನ್ನಿವೇಶ ಮತ್ತು ಪ್ರಕ್ರಿಯೆಗಳಿಗೆ ನಮ್ಮ ಅದೇ ನಾಲಗೆಯಿಂದ ಬರುವ ಪ್ರತಿಕ್ರಿಯೆ ಬೇರೆ ಬೇರೆ.

....

ವಿಚಿತ್ರ ಅಂದ್ರೆ ಈ ಥರ ಸುಖಾಸುಮ್ಮನೆ ಜಡ್ಜ್ ಮೆಂಟಲುಗಳಾಗುವ, ತೀರ್ಪು ನೀಡುವ ನಮ್ಮ ಗ್ರಹಿಕೆಯ, ಮೂಡಿನ, ಮೂಗಿನ ನೇರಕ್ಕೆ ವಿಮರ್ಶಿಸುವ, ವಿಶ್ಲೇಷಿಸುವ ಇದುವೇ ಅಂತಿಮ ಎಂಬಂತೆ ಮಾತನಾಡುವ ನಾವು ನಮ್ಮನ್ನು, ನಮ್ಮ ಸುತ್ತಲಿನ ಜಗತ್ತನ್ನು, ಅಲ್ಲಿರುವವರನ್ನು ಎಲ್ಲವನ್ನೂ ಭಯಂಕರ ಅರ್ಥ ಮಾಡಿಕೊಂಡಿದ್ದೇವೆ ಅಂತ ಭಾವಿಸಿರುತ್ತೇವೆ. ಅದೇ ಕಾರಣಕ್ಕೆ ಪುಂಖಾನುಪುಂಖವಾಗಿ ನಮ್ಮ ಗ್ರಹಿಕೆಗೆ, ನಮ್ಮ ಚೌಕಟ್ಟಿನ ಕಣ್ಣಿಗೆ ಕಂಡದ್ದೇ ಅಂತಿಮವೇನೋ ಎಂಬಂತೆ ನಾಲಿಗೆ ಹರಿಯಬಿಡುತ್ತೇವೆ. ನಾನು ಸರಿಯಾಗೇ ಇದ್ದೇನೆ, ನನ್ನ ಗ್ರಹಿಕೆ ಯಾವತ್ತೂ ತಪ್ಪಿಲ್ಲ, ನನಗೆ ಕಂಡದ್ದನ್ನು ಹೇಳುವುದು ನನ್ನ ಸ್ವಭಾವ (ಸರಿಯೋ, ತಪ್ಪೋ ಬೇರೆ ವಿಷಯ), ಸಿಟ್ಟು ಬಂದಾಗ ನಾನು ಹೇಗೆ ಅಂತ ನನಗೇ ಗೊತ್ತಿಲ್ಲ ಎಂಬಿತ್ಯಾದಿ ಅತಿ ಆತ್ಮವಿಶ್ವಾಸದ ಮಾತುಗಳನ್ನು ಕೇಳುವಾಗಲೋ, ಕಾಣುವಾಗಲೋ, ಗಮನಿಸುವಾಗಲೋ ಒಳಗಿಂದೊಳಗೆ ನಾವೆಷ್ಟು ಜೊಳ್ಳುಗಳು ಅಂತ ನಮಗೆ ಗೊತ್ತೇ ಇರುವುದಿಲ್ಲವಲ್ಲ ಅಂತ ಆಶ್ಚರ್ಯವಾಗುತ್ತದೆ...  ಎಲ್ಲ ಗೊತ್ತು, ಎಲ್ಲ ಅರ್ಥವಾಗುತ್ತದೆ, ಎಲ್ಲವನ್ನು ಒಂದೇ ಏಟಿಗೆ ತಿಳಿಯಬಲ್ಲೆ, ನಾನು ಸರಿಯಾಗೇ ಇದ್ದೇನೆ ಅಂದುಕೊಳ್ಳುವ ನಮಗೆಷ್ಟು ಮಿತಿಗಳಿರುತ್ತವೆ, ನಾವೆಷ್ಟು ಭ್ರಮೆಯಲ್ಲಿ ಇರುತ್ತೇವೆ ಅಂತ ನಮಗೇ ತಿಳಿಯುವುದಿಲ್ಲ... ಪುರುಸೊತ್ತಿದ್ದರೆ ಈ ಕೆಳಗಿನ ಉದಾಹರಣೆಗಳನ್ನು ನೋಡಿ.

1)      ಎಲ್ಲ ಗೊತ್ತಿದೆ ಎನ್ನುವ ನಮಗೆ ನಮ್ಮೊಳಗೊಂದು ಮಾರಣಾಂತಿಕ ರೋಗ ಕಾಲಿಟ್ಟದ್ದು ಗೊತ್ತಾಗುವುದಿಲ್ಲ, ನಮ್ಮ ಹೃದಯಕ್ಕೆ ರಕ್ತ ಸಂಚಲನ ಮಾಡುವ ನರಗಳು ಬ್ಲಾಕ್ ಆಗಿದ್ದು ಪರೀಕ್ಷೆ ಮಾಡುವ ತನಕ ಅಂದಾಜೇ ಆಗಿವುದಿಲ್ಲ, ಗಂಟಲ ಗ್ರವ ಮಾದರಿ ಪರೀಕ್ಷೆ ವರದಿ ಬರುವ ವರೆಗೆ ಕೊರೋನಾ ಆವರಿಸಿದ್ದೂ ತಿಳಿಯುವುದೇ ಇಲ್ಲ. ಪರೀಕ್ಷೆಗಳು, ಪ್ರಯೋಗಗಳು, ಔಷಧಿಗಳು ಇವುಗಳ ಸಂಪರ್ಕಕ್ಕೆ ಬಂದಾಗ ನಮ್ಮ ಶರೀರದೊಳಗೆ ಏನೇನೋ ಆಗಿದೆ ಎಂಬುದು (ಕೆಲವೊಮ್ಮೆ ಗಂಭೀರ ಹಂತದಲ್ಲಿ) ತಿಳಿಯುವುದು. ಆದರೂ ಮನಸ್ಸಿನಲ್ಲಿ ಒಂದು ಅಹಂ... ನನಗೆ ಎಲ್ಲ ಗೊತ್ತಾಗುತ್ತದೆ ಎಂಬ ಹಾಗೆ.

2)      ಯಾವುದೋ ಸಮಸ್ಯೆಗೆ, ರೋಗಕ್ಕೆ ಮದ್ದಿಲ್ಲ, ಇನ್ಯಾವುದೋ ಬಾಧೆ ಸದಾ ಕಾಲ ಜೊತೆಗಿರಬಹುದು ಎಂಬ ಮಾಹಿತಿ ಸಿಕ್ಕಾಗ, ಯಾವುದೇ ನಿರಾಕರಿಸಲಾಗದ ಸಮಸ್ಯೆ ಕಾಡಿದಾಗಲೂ ಅದನ್ನು ಸ್ವೀಕರಿಸಿ ಅದರೊಂದಿಗೆ ಬದುಕು ಕಳೆಯುವ ಕುರಿತು ಮನಸ್ಸು ಸಿದ್ಧವಾಗಿಡಬೇಕಾಗುತ್ತದೆ. ನಾವು ಅತಿ ಬುದ್ಧಿವಂತರೆಂಬ ಕಾರಣಕ್ಕೆ, ನಾವು ವಿಶಿಷ್ಟರು, ವಿಮರ್ಶಕರು, ವಾಗ್ಮಿಗಳು, ಪ್ರಖಂಡ ಪಂಡಿತರು, ನೇರ ನಡೆನುಡಿಯವರು ಎಂಬಿತ್ಯಾದಿ ವಿಶೇಷಣಗಳು ಇದೆಯೆಂಬ ಕಾರಣಕ್ಕೆ ವಿಧಿಯೋ, ಹಣೆಬರಹವೋ ನಮಗೆ ಕಷ್ಟಂದ ಸಂದರ್ಭಗಳಲ್ಲಿ ವಿಶೇಷ ರಿಯಾಯಿತಿ ನೀಡುವುದಿಲ್ಲ ಎಂಬ ಸತ್ಯ ನಮಗೆ ಹೊಳೆಯುವುದೇ ಇಲ್ಲ.!

3)      ನಮ್ಮಲ್ಲಿ ತುಂಬ ದುಡ್ಡಿರಬಹುದು, ಭಯಂಕರ ಪ್ರಭಾವಗಳಿರಬಹುದು. ನಾವು ಮಹಾನ್ ಹಠವಾದಿಗಳು, ಗರ್ವಿಷ್ಠರೂ ಆಗಿರಬಹುದು. ಚಿಟಿಕೆ ಹೊಡೆದರೆ ನಾಲ್ಕು ಜನ ಬರುತ್ತಾರೆ ಅಂತ ಕೊಚ್ಚಿಕೊಳ್ಳಬಹುದು. ಆದರೆ, ನಿರ್ಜನ ಜಾಗವೊಂದರಲ್ಲಿ ನಮ್ಮ ವಾಹನದ ಟಯರ್ ಪಂಕ್ಚರ್ ಆದರೆ ಅದನ್ನು ರಿಪೇರಿ ಮಾಡುವ ವರೆಗೆ ನಾವು ಕೂಡಾ ಅಸಹಾಯಕರೇ ಆಗಿರುತ್ತೇವೆ. ಕೈಯ್ಯಲ್ಲಿರುವ ಕಂತೆ ಕಂತೆ ದುಡ್ಡನ್ನು ಪಂಕ್ಚರ್ ಆದ ಟಯರಿಗೆ ಹಾಕಲು ಆಗುವುದಿಲ್ಲ. ಎಷ್ಟೇ ಶ್ರೀಮಂತನಾದರೂ ಕರ್ಚೀಫು ಮರೆತು ಬಂದರೆ ಬೇಕಾದಾಗ ಕರ್ಚೀಫು ಕೈಗೆ ಸಿಕ್ಕದೆ ಹೋದರೆ ಅಸಹಾಯಕನೇ ಆಗಿರುತ್ತಾನೆ. ಹೀಗಾಗಿ ಅಸಹಾಯಕತೆ, ಸಂಧಿಗ್ಧತೆ ಎಂಬುದು ಜನರ ಸ್ಟಾಂಡರ್ಡ್ ಗಮನಿಸಿ ಕಾಡುವುದಲ್ಲ. ಧನಿಕನಿಗೂ ಅನಾರೋಗ್ಯ ಕಾಡಿದಾಗ ರಕ್ತ ಬೇಕಾದರೆ ಬದಲಿಗೆ ರಕ್ತವನ್ನೇ ನೀಡಬೇಕು ವಿನಃ ಶರೀರಕ್ಕೆ ದುಡ್ಡನ್ನು ನೀಡಾಲುಗುವುದಿಲ್ಲ. ಹಸಿವಾದಾಗ ಅನ್ನವನ್ನೇ ತಿನ್ನಬೇಕೇ ಹೊರತು ದುಡ್ಡು ತಿನ್ನಲಾಗುವುದಿಲ್ಲ.

4)      ನಾವು ನಿತ್ಯ ನೂರಾರು ಮಂದಿಯನ್ನು ಕಾಣುತ್ತೇವೆ, ಈ ಪೈಕಿ ಹತ್ತಾರು ಮಂದಿಯ ಒಡನಾಟ ಹೊಂದಿರುತ್ತೇವೆ. ಎಲ್ಲರ ಬದುಕನ್ನು ಅಷ್ಟೋ ಇಷ್ಟೋ ಕಂಡಿರುತ್ತೇವೆ ಅಥವಾ ಗಮನಿಸಿರುತ್ತೇವೆ. ಆದರೆ ನಮ್ಮಲ್ಲಿರುವ ಅತಿ ಆತ್ಮವಿಶ್ವಾಸ, ನಮ್ಮಲ್ಲಿ ಲೆಕ್ಕಕ್ಕಿಂತ ಜಾಸ್ತಿಯೇ ಇರಬಹುದಾದ ಬುದ್ಧಿವಂತಿಕೆಯ ಸಹಾಯದಿಂದ ನಾನು ಎಲ್ಲ ಅರಿತಿದ್ದೇನೆ, ನನಗೆಲ್ಲ ತಿಳಿದಿದೆ ಎಂದೇ ಭಾವಿಸುತ್ತೇವೆ. ಅದೇ ಕಾರಣಕ್ಕೆ ಅರ್ಧರ್ಧ ಕಂಡ ಬದುಕಿನ ನೆರಳುಗಳಿಂದ, ಅವರಿವರು ಕಿವಿ ಊದಿದ ಮಾತುಗಳಿಂದ, ಆಕಸ್ಮಿಕವಾಗಿ, ಸಾಂದರ್ಭಿಕವಾಗಿ ಕಂಡ ದೃಶ್ಯಗಳಿಂದ ಅವುಗಳ ಹಂದರವನ್ನೆಲ್ಲ ಸೇರಿಸಿ ಒಬ್ಬ ವ್ಯಕ್ತಿ ಹೀಗೆಯೇ, ಇಷ್ಟೇ ಎಂಬ ಗಡಿಬಿಡಿಯ ತೀರ್ಮಾನಕ್ಕೆ ಬರುತ್ತೇವೆ. ಮತ್ತು ಮುಲಾಜಿಲ್ಲದೆ ಹಣೆಪಟ್ಟಿ ಕಟ್ಟುತ್ತೇವೆ ಮತ್ತು ನಮ್ಮ ನಾಲಗೆಯ ವ್ಯಾಪ್ತಿಗನುಸಾರ ಮಾತನಾಡುತ್ತೇವೆ. ಅಷ್ಟೆಲ್ಲ ದುಡುಕಿ ಯೋಚಿಸುವಾಗ ಪ್ರತಿಯೊಬ್ಬನ ಬದುಕೂ ಒಂದು ಪುಸ್ತಕದ ಹಾಗೆ, ಮುನ್ನುಡಿ ಓದಿ, ಪುಟ ಬಿಟ್ಟು ಪುಟ ಓದಿ ವಿಮರ್ಶೆ ಮಾಡುವುದು ಸರಿಯಲ್ಲ, ನಾಳೆ ಅವರ ಜಾಗದಲ್ಲಿ ನಾವಿದ್ದರೂ ಅಷ್ಟೆಯೇ ಎಂಬ ಕಟು ಸತ್ಯ ನೆನಪಾಗುವುದೇ ಇಲ್ಲ.

5)      ನಾನಿರುವುದೇ ಹೀಗೆ, ನಾನು ಇದ್ದದ್ದನ್ನು ಇದ್ದ ಹಾಗೆ ಹೇಳುವುದು, ನನಗೆ ಸಿಟ್ಟು ಬಂದರೆ ಏನು ಮಾಡುತ್ತೇನೋ, ಏನು ಹೇಳುತ್ತೇನೋ ನನಗೇ ಗೊತ್ತಿಲ್ಲ.. ಎಂಬಿತ್ಯಾದಿ ಹೇಳುವವರು ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸುತ್ತಾರೆ. ಇದೆಲ್ಲ ಮನುಷ್ಯನ ತಾಕತ್ತೋ, ದೌರ್ಬಲ್ಯವೋ? ಶಾಂತವಾಗಿ ಯೋಚಿಸಿದರೆ ಅರ್ಥವಾಗುತ್ತದೆ. ನಾನಿರುವುದೇ ಹೀಗೆಯೇ ಅಂತ ಘೋಷಿಸುತ್ತೇವಲ್ವ? ಅದನ್ನು ಹೇಳ್ಲಿಕೆ ಏನಿದೆ. ಪ್ರತಿ ಮನುಷ್ಯನೊಳಗೂ ನಾನು ಇರುತ್ತದೆ. ಹಾಗೂ ಅವರು ಇರುವುದೇ ಹಾಗೆಯೇ ಆಗಿರುತ್ತದೆ. ಪದೇ ಪದೇ ತನ್ನ ಬಗ್ಗೆ ಸ್ಪಷ್ಟೀಕರಣ ಕೊಡುವುದು, ಹೊಗಳಿಕೊಳ್ಳುವುದು, ಪದೇ ಪದೇ  ತಾನು ಹೀಗೆಯೇ ಅಂತ ಜಾಹೀರಾತು ನೀಡುತ್ತಾ ಬರುವುದು ಅವರೊಳಗಿನ ಕೀಳರಿಮೆ ಅಥವಾ ಅತಿ ಆತ್ಮವಿಶ್ವಾಸದ ಕೊರತೆ ಹೊರತು ಸಾಮರ್ಥ್ಯ ಆಗಿರಬೇಕಾಗಿಲ್ಲ. ವ್ಯಕ್ತಿತ್ವ ಅಥವಾ ನಿರ್ಧಾರಗಳು, ಸ್ವಭಾವಗಳು ನಡವಳಿಕೆಯಲ್ಲಿ ಕಂಡರೆ ಸಾಕು ಹೊರತು ಅದು ಘೋಷಣೆಗೋ, ಸ್ಟೇಟಸ್ಸಿನ ಮೆಸೇಜಿಗೋ ಬರುವ ಹೇಳಿಕೆಯಾಗಬೇಕಾಗಿಲ್ಲ. ನೀವು ಹೇಗೆ ಎಂಬುದನ್ನು ನಡವಳಿಕೆ ತೋರಿಸಿದರೆ ಸಾಕು... ಪದೇ ಪದೇ ಅದನ್ನು ಹೇಳುವ ಅಗತ್ಯ ಏನಿದೆ?  ಇದ್ದದ್ದನ್ನು ಇದ್ದ ಹಾಗೆ ಹೇಳುವ ಶೂರ ನಾನು ಎಂದು ಮಾತನಾಡುತ್ತೇವಲ್ವ... ಇದ್ದದ್ದು ಎನ್ನುವುದನ್ನು ನಿರ್ಧರಿಸುವವರು ಯಾರು, ಇದುವೇ ಸತ್ಯ ಎಂಬುದನ್ನು ನಿರ್ಧರಿಸುವವರು ಯಾರು? ನಾವು ಮಾತ್ರವ? ಮೂರನೆಯದಾಗಿ ನನಗೆ ಸಿಟ್ಟು ಬಂದರೆ ಏನು ಮಾಡುತ್ತೇನೋ, ಹೇಳುತ್ತೇನೋ ಗೊತ್ತಿಲ್ಲ ಎಂಬ ಡೈಲಾಗು. ನೀವು ಏನು ಮಾಡುತ್ತೀರಿ, ಹೇಳುತ್ತೀರಿ ಅಂತ ನಿಮಗೇ ಗೊತ್ತಿಲ್ಲದಿದ್ದರೆ ನಿಮಗೆ ನಿಮ್ಮ ಮೇಲೆ ನಿಯಂತ್ರಣ ಇಲ್ಲ ಅಂತ ಅರ್ಥ. ಅದು ನಿಮ್ಮ ದೌರ್ಬಲವೇ ಹೊರತು, ಸಾಮರ್ಥ್ಯ ಖಂಡಿತಾ ಅಲ್ಲ. ಸಿಟ್ಟು ಎಂಬುದು ಒಬ್ಬನ ಆಸ್ತಿಯೋ, ಹಕ್ಕುಸ್ವಾಮ್ಯದ ಭಾವವೋ ಅಲ್ಲ. ಸಿಟ್ಟು ಬಂದಾಗ ತಾನು ಏನು ಮಾಡುತ್ತೇನೆ ಎಂಬುದು ಜಗತ್ತಿನ ಪ್ರತಿಯೊಬ್ಬರಿಗೂ ಗೊತ್ತಿಲ್ಲದೇ ಹೋದರೆ ಜಗತ್ತು ರಣರಂಗವಾದೀತು. ಒಂದು ಸಿಟ್ಟು ಬಂತೆಂದು ಒಬ್ಬರ ತಲೆ ಕಡಿದರೆ ಮತ್ತೊಂದು ಸಿಟ್ಟು ಬಂದಾಗ ಅವರನ್ನು ಬದುಕಿಸುವ ಸಾಮರ್ಥ್ಯ ನಮಗಿದೆಯೇ? ಒಂದು ಸಿಟ್ಟು ಬಂದಾಕ್ಷಣ ದುಡುಕಿ ಬಾವಿಗೆ ಹಾರಿದರೆ ಮತ್ತೊಂದು ಸಿಟ್ಟು ಬಂದಾಗ ಮೇಲೆದ್ದು ಬರಲು ಆಗುತ್ತದೆಯೇ? ಒಂದು ಸಿಟ್ಟು ಬಂದಾಗ ಹೇಳಿದ ಪದಪುಂಜಗಳನ್ನು ಸಿಟ್ಟು ಇಳಿದ ಬಳಿಕ ಅವರ ಮನಸ್ಸಿನಿಂದ ಸೆಲೆಕ್ಟ್ ಆಲ್ ಕೊಟ್ಟು ಡಿಲೀಟ್ ಆಲ್ ಮಾಡುವ ಮಾನವಾತೀತ ಶಕ್ತಿ ನಮಲ್ಲಿದೆಯೇ? ಯೋಚಿಸಿ.

6)      ವ್ಯಕ್ತಿಯ ಮನಃಸ್ಥಿತಿ ಮತ್ತು ಪರಿಸ್ಥಿತಿ ಆತ ಬೆಳೆದು ಬಂದ ಹಿನ್ನೆಲೆ, ಅನುಕೂಲ, ಅದೃಷ್ಟ, ಹಣೆಬರಹ, ಒಡನಾಟ, ಚಿಂತನೆ, ಆತನಿದ್ದ ವ್ಯವಸ್ಥೆ ಇವೆಲ್ಲದನ್ನೂ ಅವಲಂಬಿಸಿ ನಿರ್ಧಾರವಾಗುತ್ತದೆ. ಅದೇ ಮನಃಸ್ಥಿತಿ ನಮ್ಮ ಚಿಂತನೆ, ಗ್ರಹಿಕೆ, ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತವೆ. ಹಾಗಾಗಿ ನಮ್ಮ ಸೀಮಿತ ಮನಃಸ್ಥಿತಿಯ ಅಥವಾ ಕೆಟ್ಟದೋ, ಒಳ್ಳೆಯದೋ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಗತ್ತನ್ನೂ, ವ್ಯಕ್ತಿಗಳನ್ನೂ ಗಮನಿಸುತ್ತೇವೆ. ನಮ್ಮ ಕಣ್ಣಿನ ಫ್ರೇಮಿಗೆ ಕಂಡದ್ದನ್ನು ನಮ್ಮ ಪಾಲಿಗೆ ಸತ್ಯ ಅಂತ ನಂಬುತ್ತೇವೆ. ಅಲ್ಲಿ ಕಾಣದೆ ಉಳಿದದ್ದು ಇರಬಹುದು, ನಮ್ಮ ಸಹನೆಯ ಕೊರತೆಯಿಂದ ನಾವು ಕಂಡುಕೊಳ್ಳಲು ವಿಫಲವಾದ ಅಂಶಗಳು ಇರಬಹುದು, ಅಡೆತಡೆಗಳು ಮರೆಮಾಚಿದ ದೃಶ್ಯಗಳಿರಬಹುದು ಇವೆಲ್ಲವುಗಳನ್ನೂ ಬಿಟ್ಟು ದಕ್ಕಿದ ಒಂದಷ್ಟು ಚದುರಿದ ಚಿತ್ರಗಳನ್ನು ಇರಿಸಿ ನನಗೆಲ್ಲ ಅರ್ಥ ಆಗಿದೆ ಎಂಬ ಘೋಷಣೆ ಮಾಡುತ್ತೇವೆ. ಇಂತಹ ಅರ್ಧಂಬರ್ಧ ದೃಷ್ಟಿಕೋನ, ಗಡಿಬಿಡಿಯ ತೀರ್ಮಾನಗಳೇ ಅಪಾರ್ಥಗಳಿಗೆ, ಅತಿ ನಂಬಿಕೆಗಳಿಗೆ, ತಪ್ಪು ಕಲ್ಪನೆಗಳಿಗೆ ಕಾರಣವಾಗುವುದು ಎಂಬುದು ನಮಗೆ ಆ ಹೊತ್ತಿಗೆ ಅಂದಾಜಾಗುವುದೇ ಇಲ್ಲ. ಒಂದು ಆವೇಶದಲ್ಲಿ, ಕೆಟ್ಟ ಮೂಡಿನಲ್ಲಿ, ಉದ್ವೇಗದಲ್ಲಿ, ಬೇಸರದಲ್ಲಿ, ಅಪಾರ ನೋವಿನಲ್ಲಿ ಕಂಡ ದೃಶ್ಯಗಳು, ತೆಗೆದುಕೊಳ್ಳುವ ನಿರ್ಧಾರಗಳು ಯಾವ ಕಾರಣಕ್ಕೂ ವಿವೇಚನೆಯಿಂದ ಕೂಡಿರಬೇಕಾಗಿಲ್ಲ. ಆದರೂ ನಾವು ಬಾಲಿಶ ನಿರ್ಧಾರ ತೆಗೆದುಕೊಳ್ಳುತ್ತೇವೆ, ಬಾಳಿಶ ಹೇಳಿಕೆಗಳನ್ನು ನೀಡುತ್ತೇವೆ, ಸಿಟ್ಟಿನ ಭರದಲ್ಲಿ ಏನೇನೋ ನಿಂದಿಸುತ್ತೇವೆ. ಎಲ್ಲದಕ್ಕಿಂತ ದುರಂತ ಎಂದರೆ ನಮ್ಮ ಸಿಟ್ಟು ಇಳಿದ ಬಳಿಕ, ಉದ್ವೇಗ ಶಮನವಾದ ಬಳಿಕ... ಆಗ ಹೇಳಿದ್ದು ತಪ್ಪು, ದುಡುಕಿದೆ ಅಂತ ವಿವೇಚನೆ ಎಚ್ಚರಿಸಿದರೂ ನಮ್ಮಲ್ಲಿನ ಇಗೋ (ಅಹಂ) ಅದನ್ನು ಒಪ್ಪಲು ಬಿಡುವುದೇ ಇಲ್ಲ. ಅಲ್ಲಿಗೆ ನಮ್ಮನ್ನು ನಾವು ಸರಿಪಡಿಸಲು ಸಿಕ್ಕ ಕೊನೆಯ ಅವಕಾಶವನ್ನೂ ಕಳೆದುಕೊಳ್ಳುತ್ತೇವೆ. ತುಳುವಿನಲ್ಲಿ ಇದಕ್ಕೆ ಪರ್ನಗೊಂಜಿ, ಬಿರಿನಗೊಂಜಿ (ಕುಡಿದಾಗ ಒಂದು ವರ್ತನೆ, ಅಮಲು ಬಿರಿದಾಗ ಇನ್ನೊಂದು ವರ್ತನೆ) ಅಂತ ಕರೆಯುತ್ತಾರೆ. ನಮ್ಮೊಳಗಿನ ಆವೇಶ ನಮ್ಮ ಚಿಂತನೆಯನ್ನ ಹಿಡಿದಿಟ್ಟಾಗ ನಮ್ಮದೇ ನಾಲಿಗೆ ನಮ್ಮ ಹಿಡಿತ ತಪ್ಪಿ ಮಾತನಾಡುತ್ತದೆ, ನಮ್ಮದೇ ಮನಸ್ಸು ಅಂಕೆ ಮೀರಿ ವರ್ತಿಸುತ್ತದೆ. ಇದು ಗೊತ್ತಿದ್ದರೂ ನಾವು ಇಂತಹ ಹಂತಗಳಿಗೆ ಒಳಗಾಗುತ್ತಲೇ ಇರುತ್ತೇವೆ.

7)      ಅಸಹಾಯಕತೆ, ಅಭದ್ರತೆ, ಹಿನ್ನಡೆ ಎಂಬುದು ಸ್ವಯಂಕೃತಾಪರಾಧದಿಂದ ಆಗಬೇಕಾಗಿಲ್ಲ, ಸಂದರ್ಭಗಳಿಂದಲೂ ಸೃಷ್ಟಿಯಾಗಬಹುದು, ಅವರವರ ಅದೃಷ್ಟದಿಂದಲೂ ಅದು ಉಂಟಾಗಬಹುದು. ಆಗೆಲ್ಲ ಅವರನ್ನು ಅರ್ಥ ಮಾಡಿಕೊಂಡವರು, ಅವರನ್ನು ಇದ್ದ ಹಾಗೆ ಒಪ್ಪಿದವರು, ಗೌರವಿಸುವವರು ಅವರ ಅಸಹಾಯಕತೆಯನ್ನೂ ಮನ್ನಿಸುತ್ತಾರೆ, ಗೌರವಿಸುತ್ತಾರೆ, ಅದರ ಹಿನ್ನೆಲೆಯನ್ನು ತಾವಾಗಿ ಒಪ್ಪಿಕೊಳ್ಳುತ್ತಾರೆ ಮತ್ತು ಯತಾರ್ಥದ ಬಗ್ಗೆ ನಂಬಿಕೆ ಉಳಿಸಿಕೊಂಡಿರುತ್ತಾರೆ. ಆದರೆ, ನಾನು ಹೀಗೆಯೇ ಎಂಬ ವರ್ಗದವರಿಗೆ ಮಾತ್ರ ಅಸಹಾಯಕತೆ ಸಮಯಸಾಧಕತನದ ಹಾಗೆ, ಹಿನ್ನಡೆ ಎಂಬುದು ಸೋಲಿನ ಹಾಗೆ, ವಿಷಾದ ಎಂಬುದು ತಪ್ಪಿಗೆ ದೊರಕಿದ ಶಿಕ್ಷೆಯ ಹಾಗೆ ಕಾಣಿಸುತ್ತದೆ. ಅಂಥವರು ಅಸಹಾಯಕರನ್ನೂ ಬಿಡುವುದಿಲ್ಲ. ತಾನೂ ಒಂದು ದಿನ ಅಸಹಾಯಕತೆಗೆ ಸಿಲುಕಬಹುದು ಎಂಬ ಸತ್ಯ ಮರೆತು ಪುಂಖಾನುಪುಂಖವಾಗಿ ಜಡ್ಜ್ ಮೆಂಟಲ್ ಗಳು ಆಗುತ್ತಾರೆ. ಇದಕ್ಕೇ ನಾನು ಆರಂಭದಲ್ಲಿ ಕ್ರಿಕೆಟ್ ಮ್ಯಾಚಿನ ಉದಾಹರಣೆ ಕೊಟ್ಟದ್ದು... ಮ್ಯಾಚಿನ ಹಿನ್ನಡೆ ಮ್ಯಾಚ್ ಫಿಕ್ಸಿಂಗಿನಿಂದ ಮಾತ್ರ ಆಗುವುದಲ್ಲ, ಕ್ರೀಡೆಯ ಸ್ವಭಾವವೇ ಅದು, ಒಂದು ತಂಡ ಸೋಲಲೇ ಬೇಕು ಎಂಬ ಕನಿಷ್ಠ ಸತ್ಯವನ್ನು ನಮ್ಮೊಳಗೆ ಆವರಿಸಿರುವ ಅವಿವೇಕ ಎಂಬ ಅಮಲು ಆ ಕ್ಷಣಕ್ಕೆ ಮರೆಸಿಬಿಡುತ್ತದೆ!!

8)      ತಪ್ಪನ್ನೇ ಮಾಡದವರು, ಸೋಲನ್ನೇ ಅನುಭವಿಸದವರು, ಅಸಹಾಯಕತೆಯನ್ನೇ ಕಾಣದವರು, ಪ್ರಾಮಾಣಿಕ ಪ್ರಯತ್ನದ ಹೊರತು ಅವಕಾಶಗಳಿಂದ ವಂಚಿತರಾಗದವರು ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ ಅಂತ ಅಂದುಕೊಂಡಿದ್ದೇನೆ. ಇದರ ಹೊರತೂ ಅಂಥವರು ಇದ್ದರೆ ಬಹುಶಃ ಅವರಿಗೆ ಇವಿಷ್ಟೂ ವಿಚಾರಗಳು ಅರ್ಥವಾಗಲಾರದು. ಯಾಕಂದರೆ ಅದೇ ಬದುಕು. ಅಲ್ಲಿ ಅನುಭವವೇ ಪಾಠ ಕಲಿಸುತ್ತದೆ. ಅನುಭವಿ ಮನಸ್ಸನ್ನು ಪಕ್ವಗೊಳಿಸುತ್ತದೆ. ಅದೇ ಪಕ್ವತೆ ವಿವೇಚನೆಯನ್ನು ಉದ್ದೀಪನಗೊಳಿಸುತ್ತದೆ. ಆಗ ಸಹನೆ ಜೊತೆಗಿದ್ದರೆ ಸಂಯಮವೂ ರೂಢಿಯಾಗಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಮಾದವಾದಾಗ ಒಪ್ಪಿಕೊಳ್ಳುವ, ಯಾರನ್ನು ನಂಬಬೇಕು, ನಂಬಬಾರದು ಅಂತ ತಿಳಿದುಕೊಳ್ಳುವ, ಪ್ರತಿದಿನವೂ ಬದಲಾಗುವ ಚಾಂಚಲ್ಯ ಚಿತ್ತವನ್ನು ಸಮಚಿತ್ತವಾಗಿಸುವ ಶಕ್ತಿಯನ್ನು ಗಳಿಸಿಕೊಳ್ಳಲು ಸಾಧ್ಯವಾಗಬಹುದು.

9)      ಬೆಳಗ್ಗೆದ್ದ ತಕ್ಷಣ ಮಹಾನ್ ನಾಯಕರ, ಯತಿಗಳ, ದಾರ್ಶನಿಕರ ಮಾತುಗಳನ್ನು ಸ್ಟೇಟಸ್ಸುಗಳಲ್ಲಿ ಹಾಕಿಕೊಳ್ಳುತ್ತೇವೆ. ಅದು ಒಳ್ಳೆಯದೇ. ಬೆಳಗ್ಗಿನ ಪ್ರಫುಲ್ಲ ಮನಸ್ಸಿಗೆ ದನಾತ್ಮಕ ಚಿಂತನೆಗಳು ಬೇಕು. ಆದರೆ ಒಂದು ನೆನಪಿಡಬೇಕು. ಆ ಸ್ಟೇಟಸ್ಸು ನಮಗೇ ಪಾಠವಾಗಬೇಕು ಹೊರತು, ನಮಗೆ ಅನುಸರಿಸಲು ಆಗದ್ದನ್ನು ಉಳಿದವರು ಪಾಲಿಸಲಿ ಎಂಬ ದಾಷ್ಟ್ರ್ಯವಾಗಲೀ, ಔದಾಸೀನ್ಯವಾಗಲಿ ಪ್ರಾಕ್ಟಿಕಲ್ ಅಲ್ಲ ಅಂತ ಅನ್ನಿಸುತ್ತದೆ.

10)   ಜಾಲತಾಣಗಳಲ್ಲಿ ಕಂಡ ಹಲವು ಮಾತುಗಳಲ್ಲಿ ಬಹುತೇಕ ಕಾಡಿದ ಎರಡು ವಿಚಾರಗಳನ್ನು ಉಲ್ಲೇಖಿಸಿ ಈ ಬರಹ ಮುಗಿಸುತ್ತೇನೆ:

-          ಜನ ಬಹುತೇಕ ಸಂದರ್ಭ ಅರ್ಥ ಮಾಡಿಕೊಳ್ಳಲು ನಿಮ್ಮ ಮಾತುಗಳನ್ನು ಕೇಳುವುದಿಲ್ಲ, ನಿಮ್ಮ ಮಾತಿಗೆ ಉತ್ತರ ಕೊಡಲು ಕೇಳಿಸುತ್ತಾರೆ, ಆದ್ದರಿಂದ ಅರ್ಥ ಆಗುವುದಕ್ಕಿಂತಲೂ ಪ್ರತಿಕ್ರಿಯೆ ಕೊಡುವುದೇ ಅವರ ಉದ್ದೇಶವಾಗಿರುತ್ತದೆ.


- ನಿಮ್ಮ ಸಮಸ್ಯೆ, ಬೇಸರ, ದುಃಖ, ಅಸಹಾಯಕತೆಗಳನ್ನು ಕಂಡ ಕಂಡವರಲ್ಲೆಲ್ಲ ಹೇಳುತ್ತಾ ಹೋಗಬೇಡಿ, ಯಾಕಂದರೆ ಜನ ತಮಗೆ ಬೇಕಾದ್ದನ್ನು ಮಾತ್ರ ಕೇಳಿಸಿಕೊಂಡು ವಿಮರ್ಶಿಸುತ್ತರೆ, ನೀವು ಹೇಳಿದ್ದನ್ನೆಲ್ಲ ಅದೇ ಭಾವದಲ್ಲಿ ಅವರು ಕೇಳುವುದಿಲ್ಲ.

ಈ ಮೇಲಿನ ಎರಡೂ ಉದಾಹರಣೆಗಳಿಗೂ, ಕ್ರಿಕೆಟ್ ಮ್ಯಾಚು ನೋಡಿ ಬೈಯ್ಯುವುದಕ್ಕೂ, ಅರ್ಧಂಬರ್ಧ ಅರ್ಥ ಮಾಡಿಕೊಂಡು ವ್ಯಕ್ತಿತ್ವಗಳನ್ನು ವಿಮರ್ಶೆ ಮಾಡುವುದಕ್ಕೂ ಹತ್ತಿರದ ಸಂಬಂಧಗಳಿವೆ. ಯೋಚಿಸಿ ನೋಡಿ!

-ಕೃಷ್ಣಮೋಹನ ತಲೆಂಗಳ (03.04.2021).

No comments: