ನಮ್ಮ ಮುಷ್ಟಿಯೊಳಗೆ ಮೊಬೈಲ್ ಇರುವುದಲ್ಲ!!!! ಹಲಸು ತಿಂದ ನಂತರ ಅಂಟುವ ಮೇಣದ ಹಾಗೆ ಜಾಲತಾಣದ ಮೋಹ....

ಸುಮಾರು 2002ರ ವೇಳೆಗೆ ನಮ್ಮ ಭಾಗದಲ್ಲಿ ಮೊಬೈಲ್ ಫೋನ್ ಚಾಲ್ತಿಗೆ ಬಂದದ್ದು. ನಾವೆಲ್ಲ ಮೊಬೈಲ್ ತಕ್ಕೊಂಡದ್ದು 2003ರಲ್ಲಿ ಇರಬಹುದು, ಬಹುಶಃ. ಶುರುವಿಗೆ ಮೊಬೈಲ್ ಫೋನ್ ಬಂದಾಗ ಇನ್ ಕಮಿಂಗ್ ಕಾಲ್ ಗೆ ಸಹಿತ ದುಡ್ಡು ಹೋಗ್ತಾ ಇತ್ತು. ಮೆಸೇಜ್ ಅಂತೂ ದುಬಾರಿ. ಫ್ರೀ ಮೆಸೇಜ್ ಕಲ್ಪನೆ ಆರಂಭದಲ್ಲಿ ಇರಲಿಲ್ಲ. ಶುರುವಿಗೆ ಬಂದ ಬೇಸಿಕ್ ಹ್ಯಾಂಡ್ ಸೆಟ್ಟುಗಳಲ್ಲಿ ಇಂಟರ್ ನೆಟ್ ಸಂಪರ್ಕವೇ ಇರಲಿಲ್ಲ (ಈಗಿನವರಿಗೆ ಇದರ ಕಲ್ಪನೆ ಇರಲಿಕ್ಕಿಲ್ಲ). ಹಾಗಾಗಿ ಮೊಬೈಲ್ ಅಂದ್ರೆ ಕಾಲ್, ಮೆಸೇಜು ಮಾತ್ರ.


ಆಗೆಲ್ಲ ಹೊಸದಾಗಿ ಮೊಬೈಲ್ ತಗೊಂಡಾಗ, ಒಂದು ಮೆಸೇಜ್ ಬರಲಿ ಅಂತ ಆಸೆ. ಸರ್ವೀಸ್ ಪ್ರೊವೈಡರ್ ಕಡೆಯಿಂದ ಮಸೇಜ್ ಬಂದರೂ (ವೆಲ್ ಕಂ ಟು ಕೇರಳ, ರೋಮಿಂಗ್... ಇತ್ಯಾದಿ ಸಹಿತ) ಅದನ್ನು ಪೂರ್ತಿ ಓದುವಷ್ಟು ಸಹನೆ ಹಾಗೂ ಸಮಯ ಎರಡೂ ಇತ್ತು. ಆದರೂ ದಿನಕ್ಕೆ ಬೆರಳೆಣಿಕೆಯ ಮೇಸೇಜುಗಳು ಬರುತ್ತಾ ಇದ್ದಿರಬಹುದು. ಆದರೆ, ಇಂದು ಸುಮಾರು 20 ವರ್ಷಗಳ ಬಳಿಕ ತಿರುಗಿ ನೋಡಿದರೆ, ಈ ಮೊಬೈಲು, ಅದರೊಳಗಿನ ಇಂಟರ್ ನೆಟ್ಟು ಹಾಗೂ ಡೇಟಾದ ಜನರೇಶನ್ನುಗಳ ಕಂಬಂಧ ಬಾಹುಗಳು ನಮ್ಮನ್ನು ಎಷ್ಟು ವ್ಯಾಪಿಸಿದೆ ಅಂದರೆ, ಮೆಸೇಜು ಓದುವುದು ಬಿಡಿ, ನೋಡಬೇಕು ಅನ್ನಿಸದಷ್ಟು, ಬಹುತೇಕ ಸಂದರ್ಭ ಓದಿದರೂ ಪ್ರತಿಕ್ರಿಯೆಯೇ ನೀಡುವುದು ಬೇಡ ಎಂಬಷ್ಟು ರೇಜಿಗೆ ಹುಟ್ಟಿಸುವಷ್ಟರ ಮಟ್ಟಿಗೆ ತಲುಪಿದೆ. ಆನ್ ಲೈನಿನಲ್ಲಿ ಇದ್ದರೂ ವಾಟ್ಸಪ್ಪಿನಿಂದ ದೂರ ಇರುವುದು ಹೇಗೆ ಎಂಬ ಟಿಪ್ಸ್ ಸಿಕ್ಕಿದರೆ ತುಂಬ ಖುಷಿ ಆಗುತ್ತದೆ
!

ಇಂತಹ ಒಂದು ಸಂಧಿಗ್ಧತೆ, ಇಂತಹ ಒಂದು ಡೋಲಾಯಮಾನದ ಆತಂಕ ಆಗುತ್ತಿರುವುದು 1970, 1980ರ ದಶಕದಲ್ಲಿ ಹಾಗೂ ಅದಕ್ಕೂ ಹಿಂದೆ ಹುಟ್ಟಿದವರಿಗೆ ಮಾತ್ರ ಇರಬಹುದು. ನಾವು ಮೊಬೈಲನ್ನೇ ನೋಡದೆ ಸುಮಾರು 20 ವರ್ಷ ಬದುಕಿದವರು, ಮನೆಯಲ್ಲಿ ಕರೆಂಟಿಲ್ಲದೆ, ಟಿ.ವಿ. ಇಲ್ಲದೆ ಯೌವ್ವನವನ್ನು ಕಳೆದವರು, ಪತ್ರ,ರೇಡಿಯೋ, ದೂರದರ್ಶನ ಚಾನೆಲ್ಲುಗಳ ಜೊತೆಗೆ ಪ್ರವರ್ಧಮಾನಕ್ಕೆ ಬಂದವರು. ಹಾಗಾಗಿ ಇಂಥದ್ದೆಲ್ಲ ತಲ್ಲಣಗಳು ಕಾಡುತ್ತಿರುವುದು ಇರಬಹುದು.

 

ಶುರುವಿಗೆ ಯಾವುದೇ Gಗಳ ಹಂಗಿಲ್ಲದೆ (2G, 3G) ಬಂದ ಮೊಬೈಲಿನಲ್ಲಿ ಇಂಟರ್ ನೆಟ್ಟೇ ಇಲ್ಲದ ಕಾಲದಲ್ಲಿ ಮೆಸೇಜೇ ಸರ್ವಸ್ವ ಆಗಿತ್ತು. ಒಂದು ಮೆಸೇಜಿಗೆ ಇಂತಿಷ್ಟು ಪೈಸೆ ಕಟ್ ಆಗುತ್ತಿತ್ತು. ಈ ನಡುವೆ ಸ್ಟೂಡೆಂಟ್ ಸಿಂ ಎಂಬ ಆಫರ್ ಬಂತು. ಎಷ್ಟೇ ಮೆಸೇಜ್ ಮಾಡಿದರೂ ಫ್ರೀ ಎಂಬ ಆಮಿಷ. ಸ್ಟುಡೆಂಟ್ ಅಲ್ಲದವರೂ ಈ ಸಿಮ್ ಗೋಸ್ಕರ ಸ್ಟೂಡೆಂಟ್ ಗಳಾದರು! ಆಗ ಕೆವೈಸಿ ಎಂಬ ಕಲ್ಪನೆಯೇ ಇಲ್ಲದ ಕಾರಣ ಯಾರೂ, ಯಾವುದೇ ಸಿಮ್ಮು ತಕ್ಕೊಳ್ಬಹುದಿತ್ತು. ಆಗ ಆಧಾರ್ ಕಾರ್ಡ್ ಎಂಬುದೇ ಇರಲಿಲ್ಲ... ನಂತರ ಈ ನಡುವೆ ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಮೆಸೇಜ್ ಫ್ರೀ, ದಿನದ ಆರಂಭದ ಮೆಸೇಜಿಗೆ 1 ರು. ಕಟ್ ಆಗ್ತದೆ, ನಂತರ 100 ಮೆಸೇಜ್ ಫ್ರೀ. ನಿರ್ದಿಷ್ಟ 5 ನಂಬರಿಗೆ ಎಷ್ಟೇ ಕಾಲ್ ಮಾಡಿದರೂ, ಮೆಸೇಜ್ ಮಾಡಿದರೂ ಪ್ರೀ... ಎಂಬಿತ್ಯಾದಿ ಆಕರ್ಷಕ ಪ್ಲಾನುಗಳು ಬಂದವು, ಗೆದ್ದವು. ಮೊಬೈಲಿಗೆ ಇಂಟರ್ ನೆಟ್ಟು ಇಲ್ಲದ ಕಾರಣ ಆರ್ಕುಟ್ಟು, ಮೇಲ್ ಏನಿದ್ದರೂ ಕಂಪ್ಯೂಟರಿಗೇ ಸೀಮಿತವಾಗಿತ್ತು.

 

ನಂತರ 2ಜಿ ಬಳಿಕ 3ಜಿ ಬಂದಾಗಲೇ ಇತಿಹಾಸ ಬದಲಾಗಿದ್ದು. ಸ್ಮಾರ್ಟ್ ಫೋನ್ ಗಳ ಯುಗ ಶುರುವಾಗಿದ್ದು. ಅದಕ್ಕೂ ಮೊದಲೇ ಪಿ.ಸಿ.ಗಳಲ್ಲಿ ನೋಡಬಹುದಾಗಿದ್ದ ಫೇಸುಬುಕ್ಕು ಮೊಬೈಲಿಗೇ ಬಂದಾಗ ಜನ ಭಯಂಕರ ಖುಷಿ ಪಟ್ರು. ಈ ನಡುವೆ ಜಿಮೇಲ್ ಚಾಟಿಂಗ್ ಜನಪ್ರಿಯವಾಯ್ತು. ಅರ್ಕೂಟ್ ಹೋಗಿ ಫೇಸ್ಬುಕ್ಕು ಯುಗ ಆರಂಭವಾಯಿತು. ಜಿಮೇಲ್ ಚಾಟ್ ಜನಪ್ರಿಯವಾದ ಹಾಗೆ ಜಿಮೇಲ್ ನವರು ಹ್ಯಾಂಗೌಂಟ್ ಎಂಬ ಆಪ್ ಶುರು ಮಾಡಿ ಅದರ ಮೂಲಕ ಚಾಟಿಂಗ್ ಗೆ ಪ್ರೋತ್ಸಾಹ ನೀಡಿದರು. ಎಂಎಂಎಸ್ ಸಹಿತ ಜನಪ್ರಿಯವಾಯಿತು. ಫೋಟೋ, ವಿಡಿಯೋ ಕಳುಹಿಸಬಹುದಾದ ಎಂಎಂಎಸ್ ಒಂದಷ್ಟು ಕಾಲ ಜನಪ್ರಿಯವಾಗಿತ್ತು.... ಆಗಲೂ ಜನರಿಗೆ ಇದೆಲ್ಲ ನಿಭಾಯಿಸಲಾಗದಷ್ಟು ವರ್ತುಲ ಎಂಬ ಹಾಗೆ ಭಾಸವಾಗುತ್ತಿರಲಿಲ್ಲ. ಜನ ಆಗಾಗ ಆಫ್ ಲೈನ್ ಹೋಗ್ತಾ, ಬೇಕಾದಾಗ ಮಾತ್ರ ಆನ್ ಲೈನ್ ಬರ್ತಾ ಇದ್ರು... ಈಗಿನ ಹಾಗೆ ದಿನದ 24 ಗಂಟೆ ಆನ್ ಲೈನ್ ಇರ್ತಾ ಇರಲಿಲ್ಲ.

ಯಾವಾಗ 4ಜಿ ತಂತ್ರಜ್ಞಾನ ಬಂತೋ, ಯಾವಾಗ ವಾಟ್ಸಪ್ಪು (ಇಲ್ಲಿ ವಾಟ್ಸಪ್ಪು ಎಂಬುದು ಸಾಂಕೇತಿಕ, ಎಲ್ಲ ಸೋಶಿಯಲ್ ಮೆಸೇಜಿಂಗ್ ಆಪುಗಳನ್ನು ಸೇರಿಸಿ ಹೇಳ್ತಾ ಇರೋದು) ಬಂತೋ ಅಲ್ಲಿಂದ ಸಂವಹನದ ಇತಿಹಾಸವೇ ಬದಲಾಯ್ತು. ತಿಂಗಳಿಗೆ ಜಿಬಿ ಲೆಕ್ಕದಲ್ಲಿದ್ದ ಡೇಟಾ ದಿನಕ್ಕೆ 2 ಜಿಬಿ ಎಂಬಲ್ಲಿಗೆ ಬಂದಾಗ, ಉಚಿತ ಸಿಂ, ಉಚಿತ ಸ್ಕೀಂ, ಟಾಪ್ ಅಪ್, ಕ್ಯಾಶ್ ಬ್ಯಾಕಿನಂತಹ ಭಯಂಕರ ಆಫರುಗಳು ಬಂದಾಗ ಜನ ತಿರುಗಿ ನೋಡಲೇ ಇಲ್ಲ... ಈಗ ತಿರುಗಿ ನೋಡಲೂ ಪುರುಸೊತ್ತೇ ಇಲ್ಲ!

....

 

ನಂತರ ಏನೇನಾಯ್ತು. ಗ್ರೂಪುಗಳು, ಫೇಸು ಬುಕ್ಕು ಚರ್ಚೆಗಳು, ರೀಲ್ಸುಗಳು, ವಾಟ್ಸಪ್ ಸ್ಟೇಟಸ್ಸುಗಳು, ಇನ್ ಸ್ಟಾಗ್ರಾಂ ಪ್ರಪಂಚ, ಯೂಟ್ಯೂಬ್ ಚಾನೆಲ್ಲುಗಳು, ವೆಬ್ ಪುಟಗಳು... ಹೀಗೆ ಆಗಿದ್ದಕ್ಕೆಲ್ಲ ನಾವು, ನೀವು ಸಾಕ್ಷಿಗಳೇ ಆಗಿದ್ದೇವೆ... ಜನ ತಿಂದು, ಕುಡಿದು ಅರಗಿಸಲಾಗದಷ್ಟು ಮೇಸೇಜುಗಳು, ಆಫ್ ಲೈನ್ ಹೋಗಲೇ ಆಗದಂಥಹ ವಿಚಿತ್ರ ಅನಿವಾರ್ಯತೆಗಳು, ಬದಿಗಿಟ್ಟರೂ ಮತ್ತೆ ಮತ್ತೆ ಫೋನನ್ನು ಕೈಗೆತ್ತಿಕೊಂಡು ನೋಡಬೇಕಂದು ತೀವ್ರವಾಗಿ ಅನ್ನಿಸುವಂತೆ ಮಾಡುವ ಜಾಲತಾಣದ ಸಮ್ಮೋಹಕ ಆಕರ್ಷಣೆ ನಮ್ಮನ್ನು ಸುಮಾರು 15-18 ವರ್ಷಗಳ ನಡುವೆ ಇನ್ನೆಲ್ಲಿಗೋ ಕರೆ ತಂದು ನಿಲ್ಲಿಸಿದೆ.

 

ಒಂದೇ ಉದಾಹರಣೆಯಲ್ಲಿ ಸಾಂಕೇತಿಕವಾಗಿ ಹೇಳುವುದಾದರೆ, ಹಿಂದೆಲ್ಲ ಒಂದು ಜನ್ಮದಿನಕ್ಕೆ ಫೇಸುಬುಕ್ಕಿನಲ್ಲಿ ಶುಭ ಕೋರಿದರೆ, ಪ್ರತಿ ಮೆಸೇಜಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳುವಷ್ಟು ವ್ಯವಧಾನ, ಸಮಾಧಾನ ಇತ್ತು. ಆ ಬಳಿಕ, ಪ್ರತಿ ಇಂಡಿವಿಜುವಲ್ ಶುಭಾಶಯಕ್ಕೆ ಕನಿಷ್ಠ ಲೈಕ್ ಕೊಡುವಷ್ಟಾದರೂ ಟೈಮಿತ್ತು. ಇಂದು ಹಾಗಲ್ಲ. ಯಾವುದನ್ನೂ ಗಮನಿಸಲು ಟೈಮಿಲ್ಲ. ಕೊನೆಗೊಮ್ಮೆ ಶುಭ ಕೋರಿದ ಎಲ್ಲರಿಗೂ ಥ್ಯಾಂಕ್ಸ್ ಅಂತ (ಅದಕ್ಕೂ ರೆಡಿಮೇಡ್ ಟೆಂಪ್ಲೇಟುಗಳು ಸಿಗ್ತವೆ) ಹಾಕಿದಲ್ಲಿಗೆ ಧನ್ಯವಾದ ಸಮರ್ಪಣೆಯೂ ಸುಲಭವಾಗಿ ಮುಗಿಯುತ್ತದೆ. ಅಷ್ಟು ಯಾಕೆ... ಫೇಸ್ಬುಕ್ಕಿನಲ್ಲೂ, ಈಗ ವಾಟ್ಸಪ್ಪಿನಲ್ಲೂ ಯಾವುದೇ ಮೆಸೇಜಿಗೆ ರೆಡಿಮೇಡ್ ಉತ್ತರಗಳನ್ನು ಚಿತ್ತಾಕರ್ಷಕ ಇಮೋಜಿಗಳ ಸಹಿತ ಅವರೇ ತೋರಿಸಿಕೊಡುತ್ತಾರೆ. ನೀವು ಕ್ಲಿಕ್ ಮಾಡಿದರೆ ಮುಗಿಯಿತು... ನಿಮ್ಮ ಉತ್ತರವನ್ನು ನಿಮ್ಮ ಫೇಸ್ಬುಕ್ಕೇ ನೀಡುತ್ತದೆ! ಅಲ್ಲಿಗೆ ನಿಮ್ಮ ಸ್ಪಂದಿಸುವ ಮನಸ್ಸನ್ನೂ ನೀವು ಕಳೆದುಕೊಂಡ ಹಾಗಾಯ್ತು....

 

ನೂರಾರು ವಾಟ್ಸಪ್ ಗ್ರೂಪುಗಳು, ಬೇಕಿದ್ದರೂ, ಬೇಡದಿದ್ದರೂ ಅಲ್ಲಿ ನಾವು ಸೇರಿಕೊಂಡಿರುವುದು. ಫೇಸ್ಬುಕ್ಕಿನಲ್ಲಿ ಇರುವ ಗ್ರೂಪುಗಳು, ಪುಟಗಳು, ಮೇಲೆ ಅಯಾಚಿತವಾಗಿ ಸೆಳೆಯುವ ಫೇಸ್ಬುಕ್ಕು ಸ್ಟೋರಿಗಳು, ರೀಲ್ಸುಗಳು, ಇನ್ ಸ್ಟಾ ಲಿಂಕುಗಳು, ವಾಟ್ಸಪ್ಪಿನ ಸ್ಟೇಟಸ್ಸುಗಳು, ಇನ್ ಸ್ಟಾ ಫೋಟೋಗಳು...ಇಮೋಜಿಗಳು, ಜಿಫ್ ಚಿತ್ರಗಳು, ಇವುಗಳನ್ನು ತಿರುಗಿಸಿ, ತಿರುಗಿಸಿ ನೋಡುವಷ್ಟರಲ್ಲಿ ದಿನ ಮುಗಿದು ಹೋಗಿರುತ್ತದೆ. ಬೇಕಾದ್ದನ್ನು ಮಾತ್ರ ಹೆಕ್ಕಿ ನೋಡೋಣ ಎಂದರೆ, ಯಾವುದು ಬೇಕಾದ್ದು, ಯಾವುದು ಬೇಡದ್ದು ಅಂತ ಹುಡುಕಿ ಹೆಕ್ಕಿ ತೆಗೆಯುವಷ್ಟರಲ್ಲಿ ನಮಗೇ ಗೊತ್ತಿಲ್ಲದೆ ಮತ್ತಷ್ಟು ಹೊತ್ತನ್ನು ಈ ವರ್ತುಲದೊಳಗೆ ಕಳೆದು ಬಿಟ್ಟಿರುತ್ತೇವೆ.

 

ಎರಡೇ ನಿಮಿಷದಲ್ಲಿ ಮೊಬೈಲ್ ಮೆಸೇಜ್ ಚೆಕ್ ಮಾಡಿ ಬಿಡುವ ಅಂದುಕೊಂಡವರು ತಮಗೇ ಗೊತ್ತಿಲ್ಲದೆ 10-15 ನಿಮಿಷ ಸ್ವೈಪ್ ಮಾಡ್ತಲೇ ಇರುವ ಹಾಗಿದ್ದನ್ನು ಕಂಡಾಗ ಅನ್ನಿಸುವುದೇನು ಗೊತ್ತ... ನಮ್ಮ ಮುಷ್ಟಿಯಲ್ಲಿ ಮೊಬೈಲ್ ಇಲ್ಲ, ಮೊಬೈಲ್ ಮುಷ್ಟಿ ನಮ್ಮನ್ನು ಹಿಡಿದುಕೊಂಡಿದೆ ಅಂತ....!

 

ನಮಗೆ ದಿನಕ್ಕೆ ಇಂತಿಷ್ಟು ಮಾಹಿತಿ ಸಿಕ್ಕರೆ ಸಾಕು, ಇಂತಿಷ್ಟು ಸಂವಹನ ಸಾಕು. ಅದಕ್ಕೂ ಆಚೆ ನಮಗೊಂದು ಮನೆ, ಕುಟುಂಬ, ವೃತ್ತಿ, ಸಾಮಾಜಿಕ ಒಡನಾಟಗಳು ಇರುತ್ತವೆ. ಅದಕ್ಕೂ ವಿನಿಯೋಗಿಸಲು ಸಮಯ ಬೇಕು. ಆದರೆ ಇಡೀ ದಿನ ನೀವು ಜಾಲತಾಣಗಳೊಳಗೆ ಮುಳುಗಿದ್ದರೆ, ಅಲ್ಲಿನ ಲೈಕು, ಕಮೆಂಟುಗಳ ಬೆನ್ನು ಹತ್ತಿದರೆ ಯಾವುದಕ್ಕೂ ಸಮಯ ಸಿಕ್ಕುವುದಿಲ್ಲ. ಇಲ್ಲಿ ಯಾವುದು ನೈಜ, ಯಾವುದು ಕೃತಕ, ಯಾವುದು ರೆಡಿಮೇಡ್, ಯಾವುದು ಉದ್ದೇಶಪೂರ್ವಕ, ಕುಹಕ ಎಂಬಿತ್ಯಾದಿಗಳನ್ನು ಕೂಲಂಕಷವಾಗಿ ವಿಮರ್ಶಿಸಿ, ಪರಾಮರ್ಶೆ ಮಾಡದೆ ನಂಬುತ್ತಾ ಹೋದರೆ, ನಾವು ನಾವಾಗಿ ಉಳಿಯುವುದಿಲ್ಲ. ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತೇವೆ ಅಷ್ಟೇ....

 

ತುಂಬ ಮಂದಿ ಮೊಬೈಲಿನಿಂದ ದೂರ ಇರಬೇಕು, ಬೇಕಾದಷ್ಟೇ ಬಳಸಬೇಕು ಅಂತ ಹಿತವಚನ ಹೇಳುತ್ತಾರೆ. ಆದರೆ, ಅವರಿಂದಲೂ ಹಾಗಿರಲು ಸಾಧ್ಯವಾಗುತ್ತಾ ಇಲ್ಲ. ನಮ್ಮ ಒತ್ತಡ, ನಮ್ಮ ನೋವು, ನಮ್ಮ ಹತಾಶೆ, ನಮ್ಮ ದುಡುಕುಗಳನ್ನೂ ಹೊರಹಾಕಲು, ಹೇಳಿಕೊಳ್ಳಲು ಸಾಮಾಜಿಕ ಜಾಲತಾಣಗಳೇ ವೇದಿಕೆಗಳು ಎಂಬ ವಿಚಿತ್ರ ಭ್ರಮೆ ಆವರಿಸಿದೆ. ಉಚಿತವಾಗಿ ಸಿಗುವ ಜಾಲತಾಣಗಳ ಹಿಂದಿನ ವಾಣಿಜ್ಯಿಕ ಉದ್ದೇಶಗಳು, ಆರ್ಟಿಫಿಶಿಯಲ್ ಇಂಟಲಿಜನ್ಸ್ (ಕೃತಕ ಬುದ್ಧಿಮತ್ತೆ) ನಂತಹ ತಂತ್ರಜ್ಞಾನ ನಮ್ಮ ಬದುಕನ್ನು ಹಿಂಬಾಲಿಸುವುದು ನಮಗೆ ಗೊತ್ತೇ ಆಗುವುದಿಲ್ಲ. ಇದೇ ಕಾರಣಕ್ಕೆ ದಿನಕ್ಕೆ 2 ಜಿಬಿ ಡೇಟಾ ಇದ್ದರೂ ಸಹಿತ ಅದು ಕಡಿಮೆ ಎಂದು ಅನ್ನಿಸುತ್ತದೆ, ಹಾಗೂ ಹಾಗೆ ಮಾಡಲಾಗುತ್ತಿರುವುದು ನಮಗೆ ಗೊತ್ತೇ ಆಗುವುದಿಲ್ಲ!

ವದಂತಿ, ಅತಿರೇಕದ ತೋರಿಕೆಗಳು, ಗಾಳಿಸುದ್ದಿ, ಸುಳ್ಳುಸುದ್ದಿ, ವಿಪರೀತವಾದ ಕೃತಕ ಹಾವಭಾವ, ಅತಿಯಾದ ಭಕ್ತಿ, ಅತಿಯಾದ ಗೌರವ, ಅತಿರೇಕದ ಪ್ರೀತಿ, ಅತಿ ವಿನಯ, ಅತಿ ಕೋಪ, ಅತಿಯಾದ ಚರ್ಚೆ, ಅತಿಯಾದ ದ್ವೇಷ... ಫಿಲ್ಟರುಗಳನ್ನು ಬಳಸಿ ತೆಗೆದ ನಮ್ಮ ಸೆಲ್ಫೀ ಫೋಟೋಗಳು, ಅದಕ್ಕೊಂದಿಷ್ಟು ಯಾರೋ ಬರೆದಿಟ್ಟ ಸಾಲುಗಳ ಕ್ವೋಟಿನ ಅಲಂಕಾರ, ಭಯಂಕರ ಮ್ಯೂಸಿಕ್ಕುಗಳ ಹಂಚಿಕೆ, ಅನಾವಶ್ಯಕ ಸಂದರ್ಭದಲ್ಲೂ ನಮ್ಮ ವೈಯಕ್ತಿಕ ಬದುಕನ್ನು ತೆರೆದಿಡುವ ಸರ್ಕಸ್ಸು.... ಎಲ್ಲದಕ್ಕೂ ಜಾಲತಾಣಗಳು ವೇದಿಕೆ ಆಗ್ತಾ ಉಂಟು. ಇದಕ್ಕೆ ನಿಯಂತ್ರಣವೂ ಇಲ್ಲ, ಕೆಲವೊಮ್ಮೆ ನಮ್ಮ ಮನಸ್ಸಿನ ಹಾಗೆ.

 

ಬದುಕು, ಕೆಲಸ ಹಾಗೂ ನಮ್ಮದೇ ಆದ ಸ್ಪೇಸ್ ಎಲ್ಲವನ್ನೂ ಆವರಿಸುತ್ತಿದೆ ಜಾಲತಾಣ. ಅದು ಗೊತ್ತಿದ್ದೂ ಗೊತ್ತಿದ್ದೂ ಅದರ ವರ್ತುಲ, ಅದರ ಪಾಶ, ಅದರ ತೀವ್ರ ಹಂಬಲಿಸುವಂತೆ ಮಾಡುವ ಸೆಳೆತ ನಮ್ಮಿಂದ ನಮ್ಮನ್ನು ಕಸಿದುಕೊಳ್ಳುತ್ತಿದೆ!

ಮಾತು, ಬರಹ, ಓದು, ನಡಿಗೆ, ವ್ಯಾಯಾಮ, ಸುಮ್ಮನೆ ಕುಳಿತು ಆಲಿಸುವ, ಯೋಚಿಸುವ ಸಮಯಕ್ಕೂ ನಮ್ಮ ಮೊಬೈಲ್ ಲಗ್ಗೆ ಹಾಕಿದೆ!!!!! ಹೌದಾ, ಅಲ್ವ ಅಂತ ನೀವೇ ಯೋಚಿಸಿ....

ಇವತ್ತು ಫ್ರೀ ಎಸ್ಸೆಮ್ಮೆಸ್ ಫೇಸ್ಬುಕ್ ಮಸೆಂಜರು ಸಹಿತ ಹಳೇ ಕಾಲದ ಪತ್ರದ ಹಾಗೆ ಮೂಲೆಗುಂಪಾಗುತ್ತಾ ಬಂದಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಸಂವಹನದ ಸಾಧ್ಯತೆಗಳು, APPಗಳು, ಹೊಸ ಹೊಸ ವೇದಿಕೆಗಳು ನಮ್ಮನ್ನು ಬಾ ಬಾ ಅಂತ ಕೈಬೀಸಿ ಕರೆಯುತ್ತಲೇ ಇರುತ್ತವೆ.... ಎಷ್ಟು ಬೇಕೋ ಅಷ್ಟೇ ಬಳಸು ಎಂಬ ಸಿದ್ಧಾಂತವನ್ನು ತಾಲತಾಣದ ಮಟ್ಟಿಗೆ ಅನ್ವೈಯಿಸಲು ತುಂಬ ಕಷ್ಟ. ಹಲಸಿನ ಹಣ್ಣು ತಿನ್ನುವಾಗ ಕೈಗಂಟುವ ಮೇಣದ ಹಾಗೆ, ಜಾಲತಾಣದಾಚೆ ಇಣುಕಲು ಹೋದರೆ ನಮ್ಮ ಮೈಕೈಗೆ ಮೇಣ ಅಂಟಿಯೇ ಅಂಟುತ್ತದೆ... ಕೈಗಂಟಿದ ಜಿಡ್ಡು ತೊಳೆಯಲು ತುಂಬ ಹೊತ್ತು ಬೇಕಾಗುತ್ತದೆ. ಅಸಲಿಗೆ ಹಲಸಿನ ಹಣ್ಣು ತಿನ್ನುವುದಕ್ಕಿಂತ ಹೆಚ್ಚು ಹೊತ್ತು ಮೇಣವನ್ನು ತೊಳೆಯಲು ಬೇಕಾಗ್ತದೆ ಅಲ್ವ? ಅಂದ ಹಾಗೆ, ಮುಂದಿನ ಬದಲಾವಣೆ 5ಜಿ ತಂತ್ರಜ್ಞಾನ... ಹೇಗಿರಬಹುದು? ನಿರೀಕ್ಷಿಸಿ?!!!!!!

-ಕೃಷ್ಣಮೋಹನ ತಲೆಂಗಳ (27.07.2022)

No comments: