ಕಟೀಲು ಮೇಳದ ಕಾಲಮಿತಿಗೆ ಕಾರಣಗಳು ನೂರು ಇರಬಹುದು.... ಪರಂಪರೆಯ ಪ್ರೇಕ್ಷಕನಿಗೆ ಇದು ನಿರಾಸೆಯೇ ಸರಿ!

 ಕಟೀಲು ಮೇಳಗಳ ಯಕ್ಷಗಾನ ಅದು ಅಭಿಮಾನಿಗಳ ಪಾಲಿಗೆ ಒಂದು ಅನುಭೂತಿ. ವ್ಯವಸ್ಥಾಪಕರು, ಸಂಚಾಲಕರು, ಕಲಾವಿದರು ಹಾಗೂ ಸೇವಾಕರ್ತರು ಇವರಿಗೆಲ್ಲ ಮೇಳ ನಡೆಸುವಲ್ಲಿ, ಆಟ ಆಡಿಸುವಲ್ಲಿ ತಮ್ಮದೇ ಆದ ಸವಾಲುಗಳು, ಕಷ್ಟಗಳು, ಮಿತಿಗಳು ಖಂಡಿತಾ ಇರುತ್ತವೆ. ಇದನ್ನೆಲ್ಲ ಪಕ್ಕಕ್ಕಿಟ್ಟು ಓರ್ವ ಪ್ರೇಕ್ಷಕನೆಂಬ ನೆಲೆಯಲ್ಲಿ ಮಾತ್ರ ಕಟೀಲು ಮೇಳಗಳ ಆಟಗಳ ಮೇಲಿನ ಅಭಿಮಾನದಿಂದ ಬರೆಯುತ್ತಿರುವ ಬರಹ ಇದು. ಇಲ್ಲಿ ಯಾವುದೇ ಪೂರ್ವಾಗ್ರಹಗಳಾಗಲಿ, ಹಿತಾಸಕ್ತಿಗಳಾಗಲಿ ಇಲ್ಲ.

 


ವಿವರವಾದ ಪೂರ್ವರಂಗದ ಸಹಿತ, ರಾತ್ರಿ ಪೂರ್ತಿ ಬಯಲಾಟವನ್ನು ಸಮಗ್ರವಾಗಿ ನೋಡುವ ಅವಕಾಶವನ್ನು ಕಳೆದ ವರ್ಷದ ವರೆಗೂ ಕಾಪಾಡಿಕೊಂಡು ಬಂದ ತೆಂಕುತಿಟ್ಟಿನ ಏಕೈಕ ಮೇಳ ಕಟೀಲು ಮೇಳ. ಕಟೀಲಿನ ಆರೂ ಮೇಳಗಳ ಪರಂಪರೆ, ನಂಬಿಕೆಗಳು ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ದೈವಿಕವಾದ ನಂಬಿಕೆ, ಭಕ್ತಿ ಹಾಗೂ ಭಕ್ತರಿಗೆ ಆಟದಿಂದ ದೊರಕುತ್ತಿದ್ದ ಸಂತೃಪ್ತಿಗೆ ಬೆಲೆ ಕಟ್ಟಲಾಗದು.

ಹಾಗೆಂದು ಕಟೀಲು ಮೇಳದಲ್ಲಿರುವ ಎಲ್ಲ ಕಲಾವಿದರೂ ಪರಿಪಕ್ವರು, ಎಲ್ಲ ಪ್ರಸಂಗಗಳ ಪ್ರದರ್ಶನಗಳಲ್ಲೂ ಕಲಾವಿದರ ನಿರ್ವಹಣೆ ಶೇ.100ರಷ್ಟು ಅಚ್ಚುಕಟ್ಟಾಗಿ ಇರುತ್ತವೆ ಅಂತ ಅರ್ಥ ಅಲ್ಲ. ಆರು ಮೇಳಗಳನ್ನು ಹೊಂದಿರುವ ಕಾರಣ ಕಟೀಲು ಮೇಳಗಳಲ್ಲಿ ಪ್ರಸಿದ್ಧ ಕಲಾವಿದರು ಬೇರೆ ಬೇರೆ ಸೆಟ್ಟುಗಳಲ್ಲಿ ಹಂಚಿ ಹೋಗಿದ್ದಾರೆ. ಮಾತುಗಾರಿಕೆಯಲ್ಲಿ ಹಿಡಿತ ಹೊಂದಿದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ದಶಕಗಳಿಂದ ಸೇವೆಯಲ್ಲಿದ್ದರೂ ಪ್ರಚಾರಕ್ಕೆ ಬಾರದ ಹಿರಿಯ ಕಲಾವಿದರು ತುಂಬ ಮಂದಿ ಇದ್ದಾರೆ. ಇವರೆಲ್ಲರ ಜೊತೆಗೆ ಹೊಸ ತಲೆಮಾರಿನವರು, ಕಲಿಯುತ್ತಿರುವವರು, ಅಂಬೆಗಾಲಿಡುತ್ತಿರುವವರು, ಮೇಳಕ್ಕೆ ಸೇರಿ 2-3 ವರ್ಷಗಳಲ್ಲೇ ತಮ್ಮ ಸಾಮರ್ಥ್ಯದಿಂದ ಉತ್ತಮ ವೇಷಗಳನ್ನು ಪಡೆದವರು ಎಲ್ಲರೂ ಇದ್ದಾರೆ. ಹೀಗಿರುವಾಗ ಮೇಳದಲ್ಲಿರುವ ಕಲಾವಿದರ ತಂಡಕ್ಕಿಂತಲೂ ಮೇಳದ ಪರಂಪರೆಯ ಪ್ರದರ್ಶನದ ರೀತಿ, ಇಡೀ ರಾತ್ರಿಯ ಆಟದ ಅನುಭೂತಿ, ಭಕ್ತಿ, ಹರಿಕೆಯ ನಂಬಿಕೆಗಳು, ಆಚರಣೆಗಳು, ದೇವಿಮಹಾತ್ಮೆಯಂತಹ ಪ್ರಸಂಗವನ್ನು ಸವಿವರವಾಗಿ ಇಡೀ ರಾತ್ರಿ ಪ್ರದರ್ಶಿಸುವ ರೀತಿ ... ಇವು ಕಟೀಲು ಮೇಳದ ಪ್ರೇಕ್ಷಕರಿಗೆ ಇಷ್ಟವಾಗುವ ಸಂಗತಿಗಳು.

ಕಟೀಲು ಮೇಳದಲ್ಲೂ ಅನನುಭವಿ ಕಲಾವಿದರಿದ್ದಾರೆ. ಕಲಿಯುವವರಿದ್ದಾರೆ, ಮಾತುಗಾರಿಕೆಗೆ ಕಷ್ಟ ಪಡುವವರಿದ್ದಾರೆ. ಸಂಬಳ ಕಡಿಮೆ ಎಂದು ಆರೋಪಿಸುವವರು ಇರಬಹುದು. ಮೇಳದ ಆಂತರಿಕ ವಿಚಾರಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಹಾಗೆಂದು ಇವತ್ತಿನ ಬಹುತೇಕ ಗಜಮೇಳಗಳಲ್ಲಿರುವ ಜನಪ್ರಿಯ ಕಲಾವಿದರ ಪೈಕಿ ಬಹುತೇಕ ಮಂದಿ ಕಟೀಲು ಮೇಳದಲ್ಲೇ ತಿರುಗಾಟ ಶುರು ಮಾಡಿದವರು, ಪಳಗಿದವರು ಎಂಬುದನ್ನು ಮರೆಯುವಂತಿಲ್ಲ...

ಅದಿರಲಿ...

ಕಟೀಲು ಮೇಳವನ್ನು ಕಾಲಮಿತಿಗೊಳಪಡಿಸಲು ಧ್ವನಿವರ್ಧಕದ ಸಮಸ್ಯೆ ಮಾತ್ರ ಕಾರಣ ಎಂಬುದು ಈಗಾಗಲೇ ಬಹಳಷ್ಟು ಕಲಾಭಿಮಾನಿಗಳು ಟೀಕಿಸಿದಂತೆ ಬಾಲಿಶ ಕಾರಣವೇ ಹೌದು. ಅದನ್ನೊಂದನ್ನೇ ನೆಪವಾಗಿರಿಸಿ ಕಾಲಮಿತಿ ಮಾಡುತ್ತೇವೆ, ಅದೂ ರಾತ್ರಿ 10.30ಕ್ಕೇ ಆಟ ಮುಗಿಸುತ್ತೇವೆ ಎಂಬ ಅಂಶ ತುಂಬ ಮಂದಿ ಕಟೀಲು ಮೇಳದ ಪ್ರೇಕ್ಷಕರಲ್ಲಿ ಹತಾಶೆ ಹುಟ್ಟಿಸಿದೆ. ಇದರಾಚಿಗಿನ ಕಾರಣಗಳನ್ನು ನೋಡುವುದಾದರೆ:

1)      ಇಡೀ ರಾತ್ರಿಯನ್ನು ಸಮಗ್ರವಾಗಿ ನೋಡುವುದಾದರೆ, ಮಧ್ಯರಾತ್ರಿಯ ಬಳಿಕದ ಪ್ರದರ್ಶನಗಳಿಗೆ ಪ್ರೇಕ್ಷಕರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುತ್ತದೆ. ದೇವಿಮಹಾತ್ಮೆ ಹೊರತುಪಡಿಸಿ ಇತರ ಪ್ರಸಂಗಗಳನ್ನು ಇಡೀ ರಾತ್ರಿ ಕುಳಿತು ನೋಡುವವರ ಸಂಖ್ಯೆ ಕಡಿಮೆ ಇರುತ್ತದೆ. ಕೊರೋನಾ ಕಾಲದಲ್ಲಿ ನಡೆದ ಕಾಲಮಿತಿಯ ಆಟಗಳಿಗೆ ಕಿಕ್ಕಿರಿದ ಪ್ರೇಕ್ಷಕರು ಆಗಿದ್ದರು.

2)      ಜನಜೀವನ ಶೈಲಿ ಬದಲಾಗಿದೆ. ಇಡೀ ರಾತ್ರಿ ಕುಳಿತು ನಿದ್ರೆಗೆಟ್ಟು ಆಟ ನೋಡುವ ಸಹನೆಯನ್ನು ಜನ ಕಳೆದುಕೊಂಡಿದ್ದಾರೆ. ತೀರಾ ಹಳೆಪ್ರೇಕ್ಷಕರಿಗೆ ವಯಸ್ಸಾಗ್ತಾ ಬಂದಿದೆ. ಅವರ ವಯಸ್ಸು ಇಡೀ ರಾತ್ರಿಯ ಆಟ ವೀಕ್ಷಣೆಗೆ ಅವಕಾಶ ಕೊಡುತ್ತಿಲ್ಲ. ಹಾಗಾಗಿ ಕಾಲಮಿತಿ ಈಗಿನ ಅನಿವಾರ್ಯತೆ.

3)      ಕಲಾವಿದರಿಗೂ ಇಡೀ ರಾತ್ರಿ ಕುಳಿತು ಪ್ರದರ್ಶನ ನೀಡುವುದು ಹೊರೆ ಆಗುತ್ತಿದೆಯೋ ಏನೋ. ಏಕೆಂದರೆ ಬಹಳಷ್ಟು ಮಂದಿ ಕಲಾವಿದರು ಹಗಲು ಬೇರೆ ಕಡೆ ದುಡಿದು ರಾತ್ರಿ ವೇಷ ಹಾಕುತ್ತಾರೆ. ಅಂತಹ ಕಲಾವಿದರಿಗೆ ಕಾಲಮಿತಿಯ ಆಟದಿಂದ ಪ್ರಯೋಜನ ಆದೀತು. ಅವರ ಆರೋಗ್ಯವೂ ಪಾಲನೆಯಾದೀತು.

4)      ಕಟೀಲು ಹೊರತುಪಡಿಸಿ ತೆಂಕುತಿಟ್ಟಿನ ಇತರ ಎಲ್ಲ ಮೇಳಗಳೂ ಕಾಲಮಿತಿ ಪ್ರಯೋಗ ಮಾಡಿ ಯಶಸ್ವಿ ಎನಿಸಿವೆ. ಪ್ರಸಿದ್ಧ ಧರ್ಮಸ್ಥಳ ಮೇಳ ವರ್ಷಗಳ ಹಿಂದೆಯೇ ಕಾಲಮಿತಿಗೊಳಪಟ್ಟು, ಈಗ ಪ್ರೇಕ್ಷಕರೂ ಅದನ್ನು ಒಪ್ಪಿಕೊಂಡಿದ್ದಾರೆ.

5)      ಹಿಂದೆಲ್ಲ ಜನ ರಾತ್ರಿ ಆಟಕ್ಕೆ ಬಂದರೆ ಅವರಿಗೆ ಮನೆಗೆ ಮಧ್ಯರಾತ್ರಿ ಮರಳಲು ಅವಕಾಶ ಇರುತ್ತಿರಲಿಲ್ಲ. ಆಗ, ಹಾಗಲ್ಲ, ತುಂಬ ಮಂದಿ ಸ್ವಂತ ವಾಹನದಲ್ಲಿ ಬರುತ್ತಾರೆ, ಅಥವಾ ಈಗ ವಾಹನಗಳು, ರಸ್ತೆ ಸಂಚಾರಕ್ಕೆ ಅವಕಾಶ ಹೆಚ್ಚಿದೆ. ಹಾಗಾಗಿ ಮಧ್ಯರಾತ್ರಿ ಆಟ ಮುಗಿದರೂ ಮನೆಗೆ ಮರಳುವುದು ಸಮಸ್ಯೆ ಆಗುವುದಿಲ್ಲ.

6)      ಕಲಾವಿದರಿಗೆ, ಸಿಬ್ಬಂದಿಗೆ ಕಾಲಮಿತಿಯ ಆಟದಿಂದ ಹೆಚ್ಚು ರೆಸ್ಟ್ ಸಿಗುತ್ತದೆ.

 

ಓರ್ವ ಪ್ರೇಕ್ಷಕನಾಗಿ ಕಾಲಮಿತಿಯ ಪರವಾಗಿ ಸಂಚಾಲಕರು ಈ ಎಲ್ಲ ವಿಚಾರಗಳನ್ನು ಪರಿಗಣಿಸಿರಬಹುದು ಎಂದು ನಾನು ಭಾವಿಸುತ್ತೇನೆ. ಇದರ ಹೊರತಾಗಿ ಇತರ ಆರೋಪಗಳ ಕುರಿತು ನನಗೆ ಹೆಚ್ಚಿನ ಜ್ಞಾನ ಇಲ್ಲದ ಕಾರಣ ಆ ಬಗ್ಗೆ ನನಗೆ ಹೇಳುವುದಕ್ಕೇನೂ ಇಲ್ಲ. ಇತರ ಆರೋಪಗಳಿದ್ದರೆ ಆ ಕುರಿತು ಕಲಾವಿದರು, ಸೇವಾಕರ್ತರು, ಸಂಚಾಲಕರೇ ಸ್ಪಷ್ಟನೆ ಕೊಡಬೇಕು.

 

ಕಟೀಲು ಮೇಳ ಕಾಲಮಿತಿ ಬೇಡ ಎನ್ನುವುದು ಯಾಕೆ?

1)      ಭಾಷಣಗಳಲ್ಲಿ, ಬರಹಗಳಲ್ಲಿ ಪರಂಪರೆ, ಸಂಸ್ಕೃತಿ ಎಂದೆಲ್ಲ ಮಾತನಾಡುವ ನಾವು ಪರಂಪರೆಯ ಪ್ರದರ್ಶನಗಳನ್ನೇ ಮೊಟಕುಗೊಳಿಸುತ್ತಾ ಬಂದರೆ ಹೇಗೆ ತಾನೆ ಪರಂಪರೆಯನ್ನು ಉಳಿಸಲು ಸಾಧ್ಯ. ಒಂದು ಭಾಷೆಯನ್ನೇ ತೆಗೆದುಕೊಳ್ಳಿ, ಅದನ್ನು ಬಳಸಿದರೆ ಮಾತ್ರ ಭಾಷೆ ಉಳಿಯುತ್ತದೆ. ಅದೇ ರೀತಿ ಯಕ್ಷಗಾನವನ್ನು ಅದರ ಮೂಲ ಸ್ವರೂಪದಲ್ಲಿ ಆಡುತ್ತಾ ಬಂದರೆ ಮಾತ್ರ ಪರಂಪರೆಯನ್ನು ಯಥಾಪ್ರಕಾರ ಉಳಿಸಲು ಸಾಧ್ಯ. ಹಾಗಾಗಿ ಕಟೀಲು ಮೇಳವೂ ಕಾಲಮಿತಿ ಆದರೆ ಸವಿವರವಾದ ತೆಂಕುತಿಟ್ಟಿನ ಯಕ್ಷಗಾನದ ವೈವಿಧ್ಯತೆಗಳು ಮರೆಯಾಗಿ ಎಡಿಟೆಡ್ ಸಿನಿಮಾದ ಹಾಗೆ ಯಕ್ಷಗಾನ ಒಂಥರಾ ಓಡಿಸಿಕೊಂಡು ಹೋಗುವ ಪ್ರದರ್ಶನ ಆಗ್ತದೆ ಅಷ್ಟೆ.

2)      ತೆಂಕುತಿಟ್ಟಿನಲ್ಲಿ ಸುಮಾರು ಒಂದೂವರೆ ಗಂಟೆಯ ಪೂರ್ವರಂಗ ಪ್ರದರ್ಶನ ಇದ್ದದ್ದು ಕಟೀಲು ಮೇಳದಲ್ಲಿ ಮಾತ್ರ. ನೀವು ಮೇಳವನ್ನು ಕಾಲಮಿತಿ ಮಾಡಿದರೆ ಪೂರ್ವರಂಗವನ್ನು ಮುಂದೆ ಯೂಟ್ಯೂಬಿನಲ್ಲಿ ಮಾತ್ರ ನೋಡುವ ಹಾಗಾಗುತ್ತದೆ ಅಷ್ಟೆ.

3)      ಇತರ ಕಾಲಮಿತಿಯ ಮೇಳಗಳು ಬಹುತೇಕ ಸಂಜೆ 6ರ ಬಳಿಕ ಶುರುವಾಗಿ ಮಧ್ಯರಾತ್ರಿ 12 ಅಥವಾ ತಡರಾತ್ರಿ 1 ಗಂಟೆ ತನಕ ಪ್ರದರ್ಶನ ನೀಡುತ್ತಿವೆ. ಧರ್ಮಸ್ಥಳ, ಹನುಮಗಿರಿ, ಪಾವಂಜೆ ಇತ್ಯಾದಿ ಮೇಳಗಳು. ಬಪ್ಪನಾಡು, ಸಸಿಹಿತ್ಲು ಮೇಳದವರೂ ಇಂತಹ ಪ್ರಯೋಗಕ್ಕೆ ಒಗ್ಗಿಕೊಂಡಿದ್ದಾರೆ. ಹಾಗಿರುವಾಗ ಕಟೀಲಿನಂತಹ ಗಜ ಮೇಳ ಏಕಾಏಕಿ ರಾತ್ರಿ 10.30ಕ್ಕೆ ಪ್ರದರ್ಶನ ನಿಲ್ಲಿಸುವುದಾಗಿ ಘೋಷಿಸಿದರೆ ಇದನ್ನು ಪ್ರೇಕ್ಷಕರು ಹಾಗೆ ತಾನೆ ಒಪ್ಪಿಕೊಂಡಾರು.

4)      ಕಳೆದ ತಿರುಗಾಟದಲ್ಲಿ ಕೋವಿಡ್ ನಿರ್ಬಂಧದ ಹಿನ್ನೆಲೆ ಕೆಲವು ವಾರ ಕಟೀಲು ಮೇಳದ ಪ್ರದರ್ಶನಗಳು ಕಾಲಮಿತಿಗೊಳಪಟ್ಟಾಗ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದ್ದು ಹೌದು. ಆದರೆ, ಬಿಸಿಲಿನಲ್ಲಿ ಕಲಾವಿದರು ಪ್ರದರ್ಶನ ನೀಡಿದ್ದು, ಫಾಸ್ಟ್ ಫಾರ್ವರ್ಡ್ ಮಾದರಿಯಲ್ಲಿ ದೇವಿ ಮಹಾತ್ಮೆ ಆಡಿದ್ದು, ದೇವಿ ಮಹಾತ್ಮೆಯ ಸೀನುಗಳೇ ಆಚೀಚೆ ಆಗಿದ್ದು, ಇದನ್ನೆಲ್ಲ ಪ್ರೇಕ್ಷಕರು ಮರೆತಿಲ್ಲ. ಹಾಗಿರುವಾಗ ದಶಕಗಳಿಂದ ಕಟೀಲು ಮೇಳದ ದೇವಿಮಹಾತ್ಮೆಯನ್ನೇ ಆರಾಧಿಸಿಕೊಂಡು ಬಂದವರು ಇನ್ನು ಮುಂದೆ ಎಡಿಟೆಡ್ ದೇವಿಮಹಾತ್ಮೆಯನ್ನೇ ನೋಡಬೇಕೇ

5)      ಬೆಳಕಿನ ಸೇವೆ ಎಂದು ಕರೆಯಲ್ಪಡುವ ಯಕ್ಷಗಾನ ಕತ್ತಲೆಯಲ್ಲಿ ಪ್ರದರ್ಶನ ಕಂಡರೇ ಚಂದ. ಹೊಳೆಯುವ ಕಿರೀಟಗಳು, ವೇಷಭೂಷಣ, ರಂಗಸ್ಥಳದ ವಿಶಿಷ್ಟ ಬೆಳಕಿನ ಅನುಭೂತಿಗೆ ಕತ್ತಲೆಯ ನೇಪಥ್ಯವೇ ಸೊಗಸು. ದೊಂದಿ, ರಾಳದ ಹುಡಿ ಇತ್ಯಾದಿಗಳೂ ಪ್ರಜ್ವಲಿಸುವುದು ರಾತ್ರಿ ಮಾತ್ರ. ಹಾಗಿರುವಾಗ ಸಂಜೆ 3ರಿಂದ, 5ರಿಂದ ಆಟ ಶುರು ಮಾಡಿದರೆ ಅದು ಹೇಗಿರಬಹುದು. ಮೈದಾನ, ರಸ್ತೆ, ವಾಹನಗಳ ಓಡಾಟದ ಸದ್ದು, ಮನೆಗೆ ಮರಳುವ ಸಾರ್ವಜನಿಕರು, ಮುಖಕ್ಕೇ ಬೀಳುವ ಬಿಸಿಲು, ಧೂಳು ಇವುಗಳ ನಡುವೆ ಆಟದಲ್ಲಿ ಹೇಗೆ ಏಕಾಗ್ರತೆ ಮೂಡಲು ಸಾಧ್ಯ. ಕನಿಷ್ಠ ಸೂರ್ಯಾಸ್ತವಾದರೂ ಆಗದೆ ಆಟ ಶುರು ಮಾಡಿದರೆ ಅದು ಪರಂಪರೆಯ ಪ್ರೇಕ್ಷಕರಿಗೆ ಆಟವೆಂದು ಅನ್ನಿಸಲು ಸಾಧ್ಯವೇ.

6)      ಎಲ್ಲದಕ್ಕಿಂತ ಹೆಚ್ಚಾಗಿ ಮೇಧಿನಿ ನಿರ್ಮಾಣ, ಮಹಿಷವಧೆ, ಶಾಂಭವಿ ವಿಲಾಸಗಳೆಂಬ ಮೂರು ಕಥೆಯನ್ನೊಳಗೊಂಡ ಶ್ರೀದೇವಿಮಹಾತ್ಮೆ ಪ್ರದರ್ಶನ ಕಟೀಲು ಮೇಳದ ಥರ ಇತರ ಮೇಳಗಳಲ್ಲಿ ನಡೆಯುವುದಿಲ್ಲ. ಕಟೀಲು ಮೇಳದ ದೇವಿಮಹಾತ್ಮೆಗೆ ಬೇರೆಯದ್ದೇ ಆಧ್ಯಾತ್ಮಿಕವಾದ ಕೊಂಡಿಗಳಿವೆ. ಸವಿವರವಾದ, ಅವಸರವಿಲ್ಲದ ಪ್ರದರ್ಶನ, ನಂಬಿಕೆಗಳು, ಸೊಗಸು, ಬೇರೆ ಬೇರೆ ಜಾವದಲ್ಲಿ ಭಾಗವತರ ಶೃತಿ, ಚೆಂಡೆಯ ಬಿಗಿ ಇತ್ಯಾದಿಗಳು ಬದಲಾಗುವುದು ಮತ್ತಿತರ ಪಾರಂಪರಿಕ ವಿಚಾರಗಳ ಸ್ಪರ್ಶವಿದೆ. ಸಂಜೆ 5ರಿಂದ ರಾತ್ರಿ 10ರ ವರೆಗಿನ ಅವಧಿಯಲ್ಲಿ ಇವನ್ನೆಲ್ಲ ಹೇಗೆ ಉಳಿಸುತ್ತೀರಿ... ಸಾಧ್ಯ ಇದೆಯೇ..

7)      ಹಗಲಿಡೀ ದುಡಿದು ಅಥವಾ ತಡರಾತ್ರಿ ವರೆಗೆ ದುಡಿದು ನಂತರ ಆಟ ನೋಡಲು ಹೋಗುವ ನನ್ನಂಥ ಪ್ರೇಕ್ಷಕರಿದ್ದಾರೆ. ನಮಗೆ ರಾತ್ರಿ 9, 10, 11,12 ಗಂಟೆ ವರೆಗೆ ನಮ್ಮ ಕೆಲಸ ಇರುತ್ತದೆ. ನಂತರ ನಾವು ಕಚೇರಿಗಳಿಂದ ಹೊರ ಬಂದರೆ ಈ ತನಕ ನಮ್ಮ ಪಾಲಿಗೆ ಆಟ ನೋಡಲು ಅವಕಾಶ ಕಲ್ಪಿಸುತ್ತಾ ಇದ್ದದ್ದು ಕಟೀಲು ಮೇಳಗಳು ಮಾತ್ರ. ಕೋವಿಡ್ ಸಂದರ್ಭ ಕಟೀಲು ಮೇಳಗಳ ಆಟ ರಾತ್ರಿ 11ಕ್ಕೇ ಮುಗಿದಾಗ ನಮಗೆ ಯಾವ ಆಟವೂ ನೋಡಲು ಸಿಗುತ್ತಿರಲಿಲ್ಲ. ಯಾವ ರೀತಿ ಹಗಲು ದುಡಿದು ರಾತ್ರಿ ವೇಷ ಹಾಕುವ ಕಲಾವಿದರಿದ್ದಾರೋ ಅದೇ ರೀತಿ ಹಗಲು ದುಡಿದು ರಾತ್ರಿ ಆಟ ನೋಡಲು ಬರುವ ಪ್ರೇಕ್ಷಕರೂ ಇದ್ದಾರೆ. ನೀವು ಸಂಜೆ 5, 6 ಗಂಟೆಗೆ ಆಟ ಶುರು ಮಾಡಿದರೆ ಸುಮಾರು ಮುಕ್ಕಾಲು ಭಾಗ ಆಟ ನೋಡುವ ಭಾಗ್ಯದಿಂದ ನಾವು ವಂಚಿತರಾಗುತ್ತೇವೆ. ಇದೂ ಕೂಡಾ ನಾನು ಕೊಡುವ ಕಾರಣಗಳಲ್ಲೊಂದು.

 

 

ಇಂತಹ ಹತ್ತಾರು ಕಾರಣಗಳನ್ನುಪಟ್ಟಿ ಮಾಡುತ್ತಾ ಹೋಗಬಹುದು. ವ್ಯವಸ್ಥೆಯನ್ನು ದೂರುವುದು, ದೂಷಿಸುವುದು, ತಮಾಷೆ ಮಾಡುವುದು ಸುಲಭ. ಅದು ನನ್ನ ಕೆಲಸವಲ್ಲ. ಪ್ರೇಕ್ಷಕನಾಗಿ ನನ್ನ ಅಹವಾಲು ಮಂಡಿಸುವುದಷ್ಟೇ ನನ್ನ ಉದ್ದೇಶ. ನನಗೆ ಗೊತ್ತಿಲ್ಲದ ತೊಡಕುಗಳು, ಮಿತಿಗಳ ಬಗ್ಗೆ ನಾನೇನೂ ಹೇಳಲಾರೆ. ಸಭೆಯಲ್ಲಿ ಕುಳಿತು ನನಗೆ ಸಾಧ್ಯವಾದಷ್ಟು ಹೊತ್ತು ಆಟ ನೋಡಿ ಹೋಗುವ ನಾನು ಆಡಳಿತ ಮಂಡಳಿಯವರಲ್ಲಿ ವಿನಂತಿಸುವುದು ಇಷ್ಟೇ... ಕಾಲಮಿತಿಯ ಮೇಳವನ್ನಾಗಿ ಪರಿವರ್ತಿಸಲು ನಿಮಗೆ ನಿಮ್ಮದೇ ಕಾರಣಗಳು ಇರಬಹುದು. ಆದರೆ, ರಾತ್ರಿ 10.30ರಿಂದ ಬೆಳಗ್ಗೆ 6ರ ತನಕ ಪ್ರದರ್ಶನ ಆಗುತ್ತಿದ್ದ ಅವಧಿ ಇದೆಯಲ್ಲ, ಆ ಏಳೂವರೆ ಗಂಟೆಯ ಅವಧಿಯನ್ನಾದರೂ ಉಳಿಸಿಕೊಂಡು ಕಾಲಮಿತಿಯ ಆಟ ಆಡಬಹುದಲ್ವ.... ಸಂಜೆ 5.30ಕ್ಕೆ ಪೂರ್ವರಂಗ ಶುರು ಮಾಡಿ, ರಾತ್ರಿ 1.30 ಅಥವಾ 2 ಗಂಟೆ ತನಕ ಆಟ ಆಡಬಹುದಲ್ವ.... ಮೈಕ್ ಮಿತಿ ಸಮಸ್ಯೆಯಾದರೆ ಕಾನೂನು ತಜ್ಞರ ಜೊತೆ ಸಮಾಲೋಚಿಸಿ, ನಿಗದಿಪಡಿಸಿತ ಡೆಸಿಬಲ್ ಮೀರದಂತಹ ಉಪಕರಣ ಬಳಸಿ, ಆಟ ಆಡಬಹುದಲ್ವ....? ದಯವಿಟ್ಟು ಈ ಬಗ್ಗೆ ಯೋಚಿಸಿ.

 

-ಕೃಷ್ಣಮೋಹನ ತಲೆಂಗಳ, ಓರ್ವ ಯಕ್ಷಗಾನ ಅಭಿಮಾನಿ, ಸಾಮಾನ್ಯ ಪ್ರೇಕ್ಷಕ.

No comments: