ಇಂಥ ವಿಷಯಗಳೆಲ್ಲ ಯಾಕೆ ನಮಗೆ ದೊಡ್ಡ ಸಮಸ್ಯೆ ಅನ್ನಿಸುವುದಿಲ್ಲ? ಭಯಂಕರ ಪ್ರತಿಭಟನೆ ನಡೆಯುವುದಿಲ್ಲ?!

ನಮಗೆ ಭಾವನಾತ್ಮಕವಾದ ವಿಚಾರಗಳನ್ನು ಹಿಡ್ಕೊಂಡು ಪ್ರತಿಭಟನೆ ಮಾಡುವುದಕ್ಕೆ ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಕಷ್ಟು ಸಂಗತಿಗಳು, ಟಾಪಿಕ್ಕುಗಳು ಸಿಗ್ತವೆ. ಅಂತಹ ಸಂಗತಿಗಳ ಬಗ್ಗೆ ಇಲ್ಲಿ ಫೇಸ್ಬುಕ್ಕಿನಲ್ಲಿ, ಟಿ.ವಿ. ಪ್ಯಾನೆಲ್ಲಿನ ವೇದಿಕೆಗಳಲ್ಲೂ ಸಾಕಷ್ಟು ಚರ್ಚೆಗಳೂ ಆಗುತ್ತವೆ. ಆದರೂ ಇವುಗಳಿಗೆಲ್ಲ ಸರ್ವಸಮ್ಮತವಾದ ಇದಮಿತ್ಥಂ ಅನ್ನುವಂತಹ ಇತ್ಯರ್ಥಗಳು ಸಿಗುವುದು ಬಹಳ ಅಪರೂಪ.

ಒಂದು ದೊಡ್ಡ ಸಬ್ಜೆಕ್ಟ್ ಹುಟ್ಟಿಕೊಂಡಾಗ ಆ ಬಗ್ಗೆ ಚರ್ಚೆಗಳು, ಹೋರಾಟಗಳು, ವಾಗ್ದಾಳಿಗಳು, ಹ್ಯಾಶ್ ಟ್ಯಾಗುಗಳು, ದ್ವೇಷಪೂರಿತ ಹೇಳಿಕೆಗಳು, ಕೀಳು ಭಾಷೆಯ ತೆಗಳಿಕೆಗಳು, ಆಕ್ರಮಣಗಳು ಭರಪೂರವಾಗಿ ದಾಳಿ ಇಡ್ತವೆ. ಆದರೆ ನಮ್ಮ ನಿತ್ಯ ಬದುಕಿಗೆ ಸಂಬಂಧಿಸಿ ಸಾಮಾಜಿಕವಾಗಿ ಹಾಗೂ ವೈಯಕ್ತಿಕವಾಗಿ ನಮಗೆ ಸಾಮಾನ್ಯವಾಗಿ ಎದುರಾಗುವ ಹಲವು ವಿಷಯಗಳು ಅಥವಾ ಸಮಸ್ಯೆಗಳಿಗೆ ನಾವೆಷ್ಟು ಒಗ್ಗಿ ಹೋಗಿರುತ್ತೇವೆ ಎಂದರೆ, ನಮಗೆ ಅವುಗಳ ಕುರಿತು ಪ್ರತಿಭಟಿಸುವುದು ಬಿಡಿ, ಅವು ಅಸಹಜ ಎಂದು ಅನ್ನಿಸುವುದೇ ಇಲ್ಲ! ಅವುಗಳಿಂದ ಹೊರ ಬರಲೂ ಆಗುವುದಿಲ್ಲ ಮತ್ತು ಸಾಧಾರಣ ಯಾರೂ ಹೋರಾಟಕ್ಕೆ ಇಳಿಯುವುದಿಲ್ಲ, ಹೋರಾಟ ಮಾಡಿದರೂ ಯಾರೂ ಪ್ರತಿಕ್ರಿಯಿಸುವುದೂ ಇಲ್ಲ.

ನ್ಯಾಯಯುತವಾಗಿ ಕ್ರಮ ಪ್ರಕಾರವೇ ಪ್ರಶ್ನಿಸಲು, ಪ್ರಯತ್ನಿಸಲು ಹೋದರೂ ಸುಲಭವಾಗಿ ನಿಮ್ಮ ಬೇಡಿಕೆಗಳು ಈಡೇರುವುದೂ ಇಲ್ಲ. ಪೈಪೋಟಿಗೆ ಬಿದ್ದವರಂತೆ ಮುದ್ರಣ ಹಾಗೂ ದೃಶ್ಯ ಮಾಧ್ಯಮದವರು ಇಂತಹ ವಿಚಾರಗಳ ಕುರಿತು ಸರಣಿ ವರದಿಗಳನ್ನು ಮಾಡಿದರೂ ಒಂದೊಮ್ಮೆಗೆ ಪರಿಹಾರ ಸಿಕ್ಕಂತೆ ಕಂಡರೂ ಮತ್ತೊಂದು ಸಲ ಅದೇ ಚಾಳಿ, ಅದೇ ವರಸೆ... ಅಂಥದ್ದು ಕೆಲವನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ... ನಿಮ್ಮಲ್ಲಿ ಇನ್ನಷ್ಟು ವಿಚಾರಗಳಿದ್ದರೆ, ನೀವು ಈ ಸುದೀರ್ಘ ಬರಹವನ್ನು ಇಡೀ ಓದುವಷ್ಟು ವ್ಯವಧಾನ ನಿಮಗಿದ್ದರೆ, ನೀವಿದಕ್ಕೆ ಸೇರಿಸಬಹುದು.

ಸಾಮಾಜಿಕವಾಗಿ:

1)      ದಿನ ಹೋಗುವ ರಸ್ತೆಯಲ್ಲಿ ಹೊಂಡಗಳು ಬಿದ್ದಿರುತ್ತವೆ. ಮಳೆಗಾಲ ಮುಗಿದ ಕೂಡಲೇ ಒಮ್ಮೆ ಡಾಂಬರಿನ ತೇಪೆ ಹಾಕ್ತಾರೆ. ಒಂದೆರಡು ತಿಂಗಳ ಸರಿ ಇರ್ತದೆ. ಮತ್ತೆ ಬೇಸಿಗೆ ಬಂದಾಗ ಕಡು ಧೂಳು, ಮಳೆಗಾಲದಲ್ಲಿ ಭೀಕರ ಕೆಸರು. ಇದರಿಂದಾಗಿ ಸಾವಿರಾರು ವಾಹನಗಳ ಬಿಡಿ ಭಾಗ ಹಾಳಾಗ್ತವೆ, ತೊಟ್ಟ ಉಡುಪು ಮಲಿನವಾಗ್ತವೆ, ಗಂಟೆಗಟ್ಟಲೆ ಎಲ್ಲರ ಸಮಯ ವೇಸ್ಟ್ ಆಗ್ತದೆ, ತಾಳ್ಮೆ ತಪ್ತದೆ. ಆದರೂ ಬಹಳಷ್ಟು ಸಂದರ್ಭ ಯಾರೂ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುವುದು, ಜಾಲತಾಣಗಳಲ್ಲಿ ಇವುಗಳ ಬಗ್ಗೆ ಚರ್ಚಿಸುವುದು ಮಾಡುವುದಿಲ್ಲ. ಮಾಡುವುದೇ ವೇಸ್ಟ್ ಎಂಬ ನಿರ್ಧಾರಕ್ಕೆ ಬಂದ ಹಾಗಿದೆ. ಅಷ್ಟಕ್ಕೂ ರಸ್ತೆಗಳು ಹಾಳಾಗಿರುವುದನ್ನು, ಮೇಲ್ಸೇತುವೆ ಸೋರುವುದನ್ನು ಗಮನಕ್ಕೆ ತರಲು ಜನ ಯಾಕೆ ಪ್ರತಿಭಟನೆ ಮಾಡಬೇಕು?  ದಿನಾ ಅಲ್ಲೇ ಓಡಾಡುವ ಜನಪ್ರತಿನಿಧಿಗಳ ಕಣ್ಣಿಗೆ ಅದು ಕಾಣುವುದಿಲ್ವ?!!

2)      ನಿಮ್ಮಲ್ಲಿ ಎಷ್ಟು ಮಂದಿ ಡ್ರೈವಿಂಗ್ ಲೈಸೆನ್ಸ್, ಆರ್ ಸಿ ನವೀಕರಣ, ವಾಹನದ ಮಾಲಿಕತ್ವ ಬದಲಾವಣೆ ಇತ್ಯಾದಿಗಳಿಗೆ ನೇರವಾಗಿ ಆರ್ ಟಿಒ ಕಚೇರಿಗೇ ಹೋಗಿ ನಿಗದಿತ ಶುಲ್ಕ ತೆತ್ತು ಸೇವೆ ಪಡೆದುಕೊಳ್ತೀರಿ? ಮತ್ತು ಎಷ್ಟು ಮಂದಿ ಡ್ರೈವಿಂಗ್ ಸ್ಕೂಲಿನವರು ಅಥವಾ ಬ್ರೋಕರುಗಳ ಮೂಲಕ ಹೆಚ್ಚುವರಿ ದುಡ್ಡು ತೆತ್ತು ಕೆಲಸ ಮಾಡಿಸಿಕೊಳ್ತೀರಿ? ಕಾನೂನಾತ್ಮಕವಾಗಿ ಪಡೆದುಕೊಳ್ಳಬೇಕಾದ ಸಂಚಾರ, ಕಂದಾಯ, ಕೃಷಿ ಇಲಾಖೆ ಮತ್ತಿತರ ಕಚೇರಿಗಳ ಸೌಲಭ್ಯವನ್ನು ನೇರವಾಗಿ, ತ್ವರಿತವಾಗಿ ಪಡೆದುಕೊಳ್ಳಲು ಇಂದಿಗೂ ಯಾಕೆ ಸಾಧ್ಯವಾಗುವುದಿಲ್ಲ? ಹಾಗೂ ಯಾಕೆ ಈ ಕುರಿತು ಭಯಂಕರ ಪ್ರತಿಭಟನೆ ನಡೆಯುವುದಿಲ್ಲ?

3)      ಸದ್ಯ ಮಂಗಳೂರು ಕಡೆ, ಬಹುತೇಕ ಖಾಸಗಿ ಬಸ್ಸುಗಳಲ್ಲಿ ಮಿನಿಮಂ ಪ್ರಯಾಣ ದರ 12 ರುಪಾಯಿ ಇದ್ದರೂ ಕಂಡಕ್ಟರ್ 10 ರು. ಪಡೆದು ಟಿಕೆಟ್ ನೀಡದೆ ಪ್ರಯಾಣಿಸಲು ಬಿಡ್ತಾನೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಸರ್ಕಾರಿ ಬಸ್ಸಿನಲ್ಲೂ ಇದು ನಡೆಯುತ್ತದೆ. ಇದು ಕಾನೂನು ಪ್ರಕಾರ ಅಲ್ಲ ಅಂತ ಯಾಕೆ ಯಾರಿಗೂ ಅನ್ನಿಸುವುದಿಲ್ಲ.

4)      ಮದ್ಯಪಾನದ ಪರಿಣಾಮದಿಂದ ಕೌಟುಂಬಿಕ ಹಿಂಸೆ ಜಾಸ್ತಿ ಆಗ್ತಾ ಇದೆ, ಅಪಘಾತಗಳು ಹೆಚ್ಚುತ್ತವೆ ಅನ್ನುವುದು ವೈಜ್ಞಾನಿಕವಾಗಿಯೇ ಸಾಬೀತಾಗಿವೆ. ದೈಹಿಕ ಅನಾರೋಗ್ಯಕ್ಕೂ ವಿಪರೀತ ಮದ್ಯ ಸೇವನೆ ಒಳ್ಳೆದಲ್ಲ ಅಂತ ಪಾಠಗಳಲ್ಲೂ ನಾವು ಕಲಿಯುತ್ತೇವೆ. ಆದರೂ ಯಾಕೆ ಮದ್ಯದ ದುಷ್ಪರಿಣಾಮಗಳ ಕುರಿತು ಭಾವನಾತ್ಮಕವಾಗಿ ಫೇಸ್ಬುಕ್ಕು ಪೇಜಿನಲ್ಲಿ ಚರ್ಚೆಗಳು ನಡೆಯುವುದಿಲ್ಲ? ಯಾಕೆ ಭಾರತ್ ಬಂದ್ ಇತ್ಯಾದಿಗಳು ಆಗುವುದಿಲ್ಲ? ಇದೊಂದು ದೊಡ್ಡ ಕೌಟುಂಬಿಕ, ಸಾಮಾಜಿಕ ಸಮಸ್ಯೆ ಅಂತ ಯಾರಿಗೂ ತೋರುವುದಿಲ್ಲ? ಇಷ್ಟು ಮಾತ್ರವಲ್ಲ ಸಿನಿಮಾಗಳಲ್ಲಿ, ನಾಟಕಗಳಲ್ಲಿ, ಯಕ್ಷಗಾನಗಳಲ್ಲಿ ಎಣ್ಣೆ ಅನ್ನುವ ಶಬ್ದ ಬಂದರೆ ಸಾಕು, ಪ್ರೇಕ್ಷಕರು ಸಾಕಷ್ಟು ಎಂಜಾಯ್ ಮಾಡ್ತಾರೆ, ಖುಷಿ ಪಡ್ತಾರೆ. ಸಿನಿಮಾಗಳಲ್ಲಂತೂ ಭಯಂಕರವಾಗಿ ಎಣ್ಣೆ ಹಾಗೂ ಸಿಗರೇಟನ್ನು ಸಾಮರ್ಥ್ಯ ವರ್ಧಕವಾಗಿ ತೋರಿಸ್ತಾರೆ. ಹಾಗಾಗಿ ಮದ್ಯಪಾನ, ಧೂಮಪಾನ ನಿಷೇಧ, ಮಾರಾಟಕ್ಕೆ ತಡೆ, ಆರೋಗ್ಯಕ್ಕೆ ಹಾನಿಕರ ಎಂಬ ವಾಕ್ಯಗಳೆಲ್ಲ ಹರಿಕೆ ಸಂದಾಯಕ್ಕೆ ಮಾಡ್ತಾ ಇರುವ, ಕೊಡ್ತಾ ಇರುವ ಸಾಲುಗಳ ಅಂತ ಇಡೀ ಲೋಕಕ್ಕೇ ಗೊತ್ತಾಗಿದೆ. ಇದು ಯಾರ ಪ್ರೀತ್ಯರ್ಥ ಮಾಡ್ತಿರೋದು?

5)      ಶಾಲೆಗಳು ಶುರುವಾಗಿ, ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುವಾಗ ಮಕ್ಕಳಿಗೆ ಸೈಕಲ್ ಸಿಗೋದು, ಪಠ್ಯಪುಸ್ತಕ ಸಿಗುವುದು, ನೂತನ ಶೈಕ್ಷಣಿಕ ನೀತಿ ಅನುಷ್ಠಾನಕ್ಕೆ ಇರುವ ತೊಡಕುಗಳು, ಶಾಲೆಗಳಲ್ಲಿ ಮೂಲ ಸೌಕರ್ಯ, ಶಿಕ್ಷಕರ ಕೊರತೆ... ಇತ್ಯಾದಿ, ಇತ್ಯಾದಿ ಸಮಸ್ಯೆಗಳೆಲ್ಲ ಪತ್ರಿಕೆಗಳ ವಿಶೇಷ ವರದಿಗಳ ಅಂಕಣಕ್ಕೆ ಸೀಮಿತವಾಗಿದೆಯೇ ವಿನಃ ಭಾವನಾತ್ಮಕ ವಿಚಾರಗಳಲ್ಲಿ ಭಯಂಕರ ಚರ್ಚೆಗಳಲ್ಲಿ ತೊಡಗಿರುವವರಾಗಿ ಕಾಡುವ ಸಮಸ್ಯೆಯಾಗಿ ತೋರುವುದೇ ಇಲ್ಲ!

6)      ಅಲ್ಲಲ್ಲಿ ಟೋಲ್ ಗೇಟುಗಳಾದರೂ ಹೆದ್ದಾರಿ ನಿರ್ಮಾಣ ಸರಿಯಾಗಿ ಮುಗಿಯದೇ ಇರುವುದು, ಹೆದ್ದಾರಿಯಲ್ಲಿ, ನಗರಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಸರಿಯಾದ ಟಾಯ್ಲೆಟ್ಟು ಇಲ್ಲದಿರೋದು, ಇರುವ ಟಾಯ್ಲೆಟ್ಟಿನಲ್ಲಿ ನೀರು ಬಾರದೇ ಇರುವುದು, ಸಮುದ್ರ ತೀರಗಳಲ್ಲಿ, ಪೆಟ್ರೋಲ್ ಬಂಕುಗಳಲ್ಲಿ ಟಾಯ್ಲೆಟ್ಟುಗಳಿಗೆ ಬೀಗ ಜಡಿದೇ ಇರುವುದು... ಇಂತಹ ಸಣ್ಣ ಸಣ್ಣ ಅನ್ನಿಸುವ ದೊಡ್ಡ ದೊಡ್ಡ ಸಮಸ್ಯೆಗಳ ಕುರಿತು ಹ್ಯಾಶ್ ಟ್ಯಾಗ್ ಹೋರಾಟ, ಪರ-ವಿರೋಧ ಹೇಳಿಕೆ ಇತ್ಯಾದಿ ಬಂದದ್ದು ಎಲ್ಲಿಯಾದರೂ ನೋಡಿದ್ದೀರ? ಪತ್ರಿಕೆಗಳಲ್ಲಿ ನಾವು ದಿನಾ ಇಂತಹ ವರದಿ ಪ್ರಕಟಿಸುತ್ತೇವೆ, ಫೇಸ್ಬುಕ್ಕಿಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ಇಂತಹ ವಿಚಾರ ಬರೆದು ಆತ್ಮತೃಪ್ತಿ ಪಡೆಯುತ್ತಾರೆ ವಿನಃ ಆಯಕಟ್ಟಿನಲ್ಲಿ ಸುಸಜ್ಜಿತ ಶೌಚಾಲಯಗಳು ಜನರ ಮೂಲ ಸೌಕರ್ಯಗಳಲ್ಲಿ ಒಂದು ಅಂತ ಯಾಕೆ ಬಲವಾಗಿ ಅನ್ನಿಸ್ತಾ ಇಲ್ಲ? ವಾಟ್ಸಪ್ ಸ್ಟೇಟಸ್ಸುಗಳಲ್ಲಿ, ಫೇಸ್ಬುಕ್ಕು ಸ್ಟೋರಿಗಳಲ್ಲಿ ಕಣ್ಣಿಗೆ ರಾಚುವಂಥ ಸಮಸ್ಯೆಗಳ ಕುರಿತು ಟ್ರೋಲ್ ಮಾಡುವುದಾಗಲಿ, ಅಣಕ ಮಾಡುವುದಾಗಲಿ ಯಾಕೆ ಯಾರೂ ಮಾಡುವುದಿಲ್ಲ?

7)      ಸಮಯಕ್ಕೆ ಸರಿಯಾಗಿ ಬಾರದ ಬಸ್ಸು, ಓಟು ಕೇಳಿದ ಬಳಿಕ ನಾಪತ್ತೆಯಾಗುವ ಜನಪ್ರತಿನಿಧಿ, ಜನರಲ್ಲಿ ಚರ್ಚೆಯನ್ನೇ ಮಾಡದೆ ಏರುವ ಟೋಲ್ ಗೇಟ್ ದರ, ದಿನಬಳಕೆ ವಸ್ತುಗಳ ದರ, ತುಂಬಿ ಹರಿಯುವ ಚರಂಡಿ, ಡ್ರೈನೇಜು, ರಸ್ತೆ ವಿಸ್ತರಣೆ ವೇಳೆ ನಾಪತ್ತೆಯಾಗಿ ಶಾಶ್ವತವಾಗಿ ಕಾಣೆಯಾಗುವ ಬಸ್ ತಂಗುದಾಣಗಳು, ಸಿಬ್ಬಂದಿ ಕೊರತೆ ಹೊಂದಿರುವ ಸರ್ಕಾರಿ ಕಚೇರಿಗಳು, ಕಸ ವಿಲೇವಾರಿಯಾಗದೆ ನಾರುವ ಪಟ್ಟಣಗಳು.... ಇವು ಯಾವುವೂ ಸಾಮೂಹಿಕ ಚರ್ಚೆಗೆ, ಹೋರಾಟಕ್ಕೆ ಯೋಗ್ಯ ವಿಷಯಗಳೇ ಅಲ್ವೇ?

8)      ಇದೆಲ್ಲ ಬಿಡಿ... ಸಣ್ಣದೊಂದು ಉದಾಹರಣೆ ಕೊಡ್ತೇನೆ... ನಿಮ್ಮ ಊರಿನ ರಸ್ತೆಯೊಂದರಲ್ಲಿ ಹೊಸದಾಗಿ ಡಾಂಬರು ಹಾಕಿದ್ದಾರೆ ಎಂದಿಟ್ಟುಕೊಳ್ಳಿ. ಫೋನ್ ಕೇಬಲ್ ಅಳವಡಿಸಲು ಸಣ್ಣದೊಂದು ಅಗೆತವಾಗಿ ಕೇಬಲ್ ಹಾಕಿ ಮಣ್ಣು ಮುಚ್ಚಿ ಬಿಡುತ್ತಾರೆ. ನಂತರ ನಾಲ್ಕೈದು ವರ್ಷಗಳ ಕಾಲವೂ ಆ ಅಗೆದ ಸ್ಥಳದಲ್ಲಿನ ಕೊರಕಲು ಹಾಗೆಯೇ ಶಾಶ್ವತವಾಗಿ ಉಳಿಯುತ್ತದೆ. ಪ್ರತಿದಿನ ನಿಮ್ಮ ಬೈಕಿನ ಟಯರ್ ಅದರೊಳಗೆ ಇಳಿದು ಮೇಲೆ ಹತ್ತುವಾಗ ನಿಮ್ಮ ಕರುಳು ಕಿವುಚಿದ ಅನುಭವ ಆಗ್ತದೆ... ಅಲ್ಲಿ ಓಡಾಡುವ ನೂರಾರು ಮಂದಿ ಅದನ್ನು ಸಹಿಸಿಕೊಂಡು, ಅಡ್ಜಸ್ಟ್ ಆಗಿಕೊಂಡು ಓಡಾಡ್ತಾರೆ... ಹಾಗಾದರೆ ಸಾರ್ವಜನಿಕವಾಗಿ ರಸ್ತೆಯಲ್ಲಿ ಆಗಿರುವ ಹಾನಿ ಹಾಗೂ ಅದರಿಂದ ನೂರಾರು ಮಂದಿಗೆ ಪ್ರತಿದಿನ ಆಗ್ತಾ ಇರುವ ಕಿರಿಕಿರಿ ಇವೆಲ್ಲ ರಾಷ್ಟ್ರಮಟ್ಟದಲ್ಲಿ ರಾಜಕೀಯ ಪಕ್ಷಗಳು ಭಾವನಾತ್ಮಕವಾಗಿ ಎಬ್ಬಿಸುವ ಸಂಗತಿಗಳಷ್ಟು ಮಹತ್ವದ್ದು ಅಲ್ಲವೇ...? ನಾವು ಇಂಥದ್ದಕ್ಕೆ ಅಡ್ಜಸ್ಟ್ ಆಗಿಕೊಂಡೇ ಬದುಕಬೇಕೇ...? ಹೋರಾಟ ಮಾಡದೆ, ಪೇಪರಿನಲ್ಲಿ ವರದಿ ಪ್ರಕಟವಾಗದೆ ತನ್ನಷ್ಟಕೇ ಆಳುವವರಿಗೆ, ಅಧಿಕಾರಿಗಳಿಗೆ ಸಮಸ್ಯೆಗಳು ಕಾಣಿಸುವುದು ಅಂತ ಇಲ್ವೇ ಇಲ್ವ?

ಇಂತಹ ಹತ್ತಾರು ಸಂಗತಿಗಳನ್ನು ಬರೆಯುತ್ತಾ ಹೋಗಬಹುದು.. ನಿಮ್ಮ ಜೋಳಿಗೆಯಲ್ಲಿದ್ದರೆ ಇದ್ದರೆ ಹಂಚಿಕೊಳ್ಳಿ...

ಇನ್ನು ವೈಯಕ್ತಿಕವಾಗಿ ಮತ್ತು ಕೌಟುಂಬಿಕವಾಗಿ ಕೆಲವು ನಿರಾಕರಿಸಲಾಗದ ಸತ್ಯಗಳನ್ನು ಹೇಳಬೇಕೆಂದರೆ... ಒಂದಷ್ಟು ಪಟ್ಟಿ ಮಾಡಿದ್ದೇನೆ, ಪುರುಸೊತ್ತಿದ್ದರೆ ಓದಿಕೊಳ್ಳಿ

1)      ನೀವೆಷ್ಟೇ ತಲೆ ಖರ್ಚು ಮಾಡಿ ಮನೆ ನಿರ್ಮಾಣ ಮಾಡಿ, ನಿಮ್ಮಲ್ಲಿ ಎಷ್ಟೇ ದುಡ್ಡಿರಲಿ... ಅದರೊಳಗೆ ಉಪದ್ರ ಮಾಡುವ ಜಿರಳೆ, ಹಲ್ಲಿ, ಗೆದ್ದಲು, ಇರುವೆ, ಇಲಿ... ಇವುಗಳಿಂದ 100 ಶೇಕಡಾ ಪರಿಹಾರ ಪಡೆದುಕೊಳ್ಳುವ ಉಪಾಯ ನಿಮಗೆ ಗೊತ್ತಿದೆಯಾ?

2)      ನೀವೆಷ್ಟೇ ಕಾಸ್ಟ್ಲಿ ವಾಹನವನ್ನೇ ಹೊಂದಿರಿ, ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸ ಇರಲಿ, ನೀವೆಷ್ಟೇ ಶ್ರೀಮಂತರಾಗಿರಿ, ನಿರ್ಜನ ಪ್ರದೇಶದಲ್ಲಿ ನಿಮ್ಮ ವಾಹನದ ಟಯರ್ ಪಂಕ್ಚರ್ ಆದರೆ ಅದನ್ನು ಸರಿಪಡಿಸದೇ ನಿಮಗೆ ಮುಂದೆ ಹೋಗಲು ಸಾಧ್ಯವ?

3)      ಬಸ್ಸಿನಲ್ಲಿ ಹೋಗ್ತಾ ಇದ್ದೀರಿ ಎಂದುಕೊಳ್ಳಿ... ನಿಮ್ಮದು ತುಂಬ ಮುಜುಗರದ ಸ್ವಭಾವ ಅಂತ ಇಟ್ಕೊಳ್ಳುವ. ನಿಮಗೆ ಜೋರು ಮೂತ್ರದೊತ್ತಡ ಉಂಟಾಗ್ತದೆ ಅಂತ ಭಾವಿಸಿ. ದೂರ ಪ್ರಯಾಣದ ಬಸ್ ತಕ್ಷಣಕ್ಕೆ ನಿಲ್ಲಿಸುವ ಸಾಧ್ಯತೆ ಇಲ್ಲ. ಆಗ ನೀವು ನಾಚಿಕೆ ಬಿಟ್ಟು ಕಂಡಕ್ಟರ್ ಹತ್ರ ಮೂತ್ರ ಮಾಡ್ಲಿಕಿದೆ, ಬಸ್ ನಿಲ್ಲಿಸಿ ಅಂತ ಹೇಳ್ತೀರೋ ಅಥವಾ ಮೂತ್ರದೊತ್ತಡ ಅನುಭವಿಸಿ ಪ್ರಾಣ ಕೈಯಲ್ಲಿ ಹಿಡ್ಕೊಂಡು ನಿಲ್ದಾಣದ ವರೆಗೆ ಚಿತ್ರಹಿಂಸೆ ಅನುಭವಿಸ್ತೀರೋ?

4)      ಅರ್ಜೆಂಟಿಗೆ ಕೈಕೊಡುವ ನೆನಪು, ಅವಸರದಲ್ಲಿ ಬಾಕಿ ಆಗುವ ಕರ್ಚೀಫು, ಹಾಳಾಗುವ ಪ್ಯಾಂಟಿನ ಜಿಪ್ಪು, ಮನೆಯಲ್ಲೇ ಉಳಿದ ಮೊಬೈಲು... ಹೀಗೆ ಮುಜುಗರ ಸೃಷ್ಟಿಸುವ ಸಂದರ್ಭಗಳು ಅಷ್ಟಿಷ್ಟಲ್ಲ.

5)      ಈ ಪಟ್ಟಿಯನ್ನು ನೀವೂ ಮುಂದುವರಿಸಬಹುದು. ನಾವೆಷ್ಟೇ ಶಕ್ತಿಶಾಲಿಗಳು, ಬುದ್ಧಿವಂತರು, ಅನುಭವಿಗಳು ಅಂದುಕೊಂಡರೂ ಆ ಕ್ಷಣಕ್ಕೆ ಇಕ್ಕಟ್ಟಿಗೆ ಸಿಲುಕಿಸುವ, ತಬ್ಬಿಬ್ಬಾಗಿಸುವ ಸನ್ನಿವೇಶಗಳನ್ನು ಅನುಭವಿಸುತ್ತಲೇ ಇರ್ತೇವೆ. ಸಾಮಾಜಿಕವಾಗಿ ಸಮಸ್ಯೆಗಳನ್ನು ತುಟಿ ಕಚ್ಚಿ ಸಹಿಸ್ತಲೇ ಇರ್ತೇವೆ. ನಮಗೆ ಅನ್ಯಾಯ ಆಗಿದೆ ಅಂತ ಗೊತ್ತಿದ್ದರೂ ಪಕ್ಷದ, ಧರ್ಮದ, ಜಾತಿಯ ಮುಲಾಜಿನಿಂದ ಮಾತನಾಡುವುದೇ ಇಲ್ಲ. ಮಾತನಾಡಿದರೂ ಪ್ರತ್ಯೇಕ ಆಗ್ತೇವೆ, ಹಣ್ಣೆಪಟ್ಟಿ ಕಟ್ಟಲಾಗ್ತದೆ. ಆದರೂ ನಮ್ಮೊಳಗೆ ನಾನೊಬ್ಬ ಎಲ್ಲರಿಗೂ ಅತೀತನಾದವ, ಬುದ್ಧಿವಂತ, ಚಿರಂಜೀವಿ ಎಂಬ ಭ್ರಮೆ ಮೆರೆಯುತ್ತಲೇ ಇರುತ್ತದೆ... ಎಂತ ಮಾಡುವುದು... ಒಬ್ಬರ ಅನುಭವ ಇನ್ನೊಬ್ಬನಿಗೆ ಪಾಠವಾಗುವುದು ಬಹಳ ಅಪರೂಪ!

-ಕೃಷ್ಣಮೋಹನ ತಲೆಂಗಳ (28.06.22)

No comments: