ಮುಸ್ಸಂಜೆ ಮಾತು... ಕೇಳಿಸುವಂಥದ್ದಲ್ಲ, ಯೋಚಿಸುವಂಥದ್ದು!
ಮುಸ್ಸಂಜೆ ಎಂದರೆ ಅತ್ತ ಬೆಳಕೂ ಯಥೇಚ್ಛ ಇರುವುದಿಲ್ಲ, ಕತ್ತಲೂ ಆವರಿಸಿರುವುದಿಲ್ಲ. ಒಂಥರಾ ಮಬ್ಬು. ಅದು ದಿನದ ಲೆಕ್ಕಾಚಾರಗಳನ್ನು ಚುಕ್ತಾ ಮಾಡಲು ಹೇಳಿ ಮಾಡಿಸಿದ ಸಮಯ. ಪ್ರಕೃತಿಗೂ, ದೇಹಕ್ಕೆ, ಮನಸ್ಸಿಗೂ ಸುಸ್ತಾಗಿರುವ ಕಾಲ. ದಿನದ ಕೊನೆ, ಚಟುವಟಿಕೆಗಳು ನಿಧಾನವಾಗಿ ಮತ್ತೊಂದು ವಿಶ್ರಾಂತಿಯತ್ತ ಹೊರಳುವ ಜಂಕ್ಷನ್ ಇದ್ದ ಹಾಗೆ. ಇಡೀ ದಿನದ ಆಗುಹೋಗುಗಳಿಗೊಂದು ಪೋಸ್ಟ್ ಮಾರ್ಟಂ, ಷರಾ ಬರೆಯಬಹುದಾದ, ಕನಿಷ್ಠ ಪಕ್ಷ ಯೋಚಿಸಬಹುದಾದ ಸಂದರ್ಭ.
ಮುಸ್ಸಂಜೆ ಕೆಲಸ ಮುಗಿಸಿ ಲಾಸ್ಟ್ ಬಸ್ಸಿನಲ್ಲಿ ಹೋಗುವಾಗ ಮನಸ್ಸೆಷ್ಟು ಜಡಭರಿತ ಆಗಿರ್ತದಲ್ವ. ತುಂಬ ಯೋಚಿಸದೇ, ಸುಮ್ಮನೆ ಮೆದುಳನ್ನು ಬ್ಲಾಂಕ್ ಆಗಿ ಇರಿಸಬೇಕು ಎಂಬಷ್ಟು ದಿನದ ಸುಸ್ತು, ಬೆವರು, ಟೆನ್ಶನ್, ದಿನದ ಕೆಲಸ ಮುಗಿದ ನಿರಾಳತೆ, ಮತ್ತೆ ಮನೆಗೆ ತೆರಳಿ ದಿನ ಮುಗಿಸುವ ಕಾತುರತೆ, ಕಾಣದ ನಾಳಿನ ಬಗ್ಗೆ ಆತಂಕ... ಸುದ್ದಿ ವಾಹಿನಿಗಳ ಕೆಳಗೆ ಸ್ಕ್ರೋಲ್ ಆಗುವ ಬ್ರೇಕಿಂಗ್ ನ್ಯೂಸುಗಳ ಹಾಗೆ, ಶಾಂತವಾದ ಮನಸ್ಸಿನ ತುಂಬ ಎಂಥೆಂಥದ್ದೋ ಯೋಚನೆಗಳು ಹರಿದಾಡ್ತಲೇ ಇರ್ತವೆ.
ಕಿಕ್ಕಿರಿದು ತುಂಬಿದ ಬಸ್ಸಿನ ಲಾಸ್ಟ್ ಸೀಟಿನಲ್ಲಿ ಕುಳಿತು ಕಿಟಕಿಗೊರಗಿ ಸ್ವಲ್ಪ
ಹೊರಗೆ ನೋಡಿ. ಪ್ರತಿ ಬಸ್ ಸ್ಟ್ಯಾಂಡಲ್ಲೂ ಜನಜಂಗುಳಿ, ಬಸ್ ಹತ್ತಲು, ಮನೆಗೆ ಹೋಗಲು ಭಯಂಕರ
ಆತುರ, ಬಸ್ಸಿನಲ್ಲಿ ಕಾಲೂರಲು ಜಾಗ ಸಿಕ್ಕಿದರೆ ಸಾಕೆಂಬ ಪ್ರಾರ್ಥನೆ, ವಿಪರೀತ ಟ್ರಾಫಿಕ್ ಜಾಂ,
ಚೀಲದ ತುಂಬ ಸಾಮಾನುಗಳು, ಆಕಾಶದಲ್ಲಿ ಗೋಧೂಳಿಯ ಬಣ್ಣ ಕಾಣುತ್ತಿದ್ದರೆ, ಇತ್ತ ಹೈಮಾಸ್ಟ್ ದೀಪ
ಪ್ರಜ್ವಲಿಸುತ್ತಿದ್ದರೆ, ದಿನದ ಧೂಳೆಲ್ಲ ತೆಳುವಾಗಿ ಹರಡಿ, ಬಸ್ಸಿನ ತುಂಬೆಲ್ಲ ಜನ, ಬ್ಯಾಗು,
ಬೆವರು, ಕುಡಿದ ವಾಸನೆ, ಸಿಗರೇಟಿನ ಹೊಗೆ, ಕಡೆಗಣಿಸಲಾಗದ ತಳ್ಳಾಟ, ಮಾತುಕತೆ, ಚರ್ಚೆ, ಮೊಬೈಲಿನ
ಹಾಡು, ಬಸ್ಸಿನ ಕರ್ಕಶ ಹಾರನ್ನು.... ಭಯಂಕರ ಹರಟೆ ಅಲ್ವ...?
ಎಲ್ಲ ಮರೆತು ಆಕಾಶದತ್ತ ನೋಡಿ. ಪಶ್ಚಿಮದಲ್ಲಿ ಕೆಂಪು ಬಣ್ಣ ಸದ್ದಿಲ್ಲದೆ ಘಳಿಗೆ ಘಳಿಗೆಗೂ ಸಂಯೋಜನೆ ಬದಲಿಸುತ್ತಲೇ ಇರ್ತದೆ. ಆಕಾಶದಲ್ಲಿ ಯಾರ ಗೊಡವೆಯೂ ಇಲ್ಲದೆ ಬೆಳ್ಳಕ್ಕಿಗಳು ವಿ ಆಕಾರದಲ್ಲಿ ತಮ್ಮಷ್ಟಕೇ ಹಾರುತ್ತಾ ಹೋಗ್ತಾ ಇರ್ತವೆ. ಚಿತ್ರವಿಚಿತ್ರ ಡಿಸೈನಿನ ಮೋಡ, ಅಸ್ಪಷ್ಟವಾಗಿ ಮೂಡುವ ನಕ್ಷತ್ರ, ಯು ಆಕಾರದಲ್ಲಿ ತೆಳುವಾಗಿ ನಕ್ಕಂತೆ ಕಾಣುವ ಚಂದ್ರ... ಯಬ್ಬ ಆಕಾಶ ಎಷ್ಟು ಕೂಲಾಗಿದೆ, ಅಲ್ಲೆಷ್ಟು ವಿಶಾಲ ಜಾಗ ಇದೆ, ಹರಟೆಯೇ ಇಲ್ಲವೇನೋ ಎಂಬಷ್ಟು ನಿರಾಳತೆಯ ಕಣ್ಣಿಗೇ ಕಾಣಿಸುತ್ತದೆ.
ಕುಳಿತ ಬಸ್ಸು, ಅಲ್ಲಿನ ಹರಟೆ, ವಾಲುತ್ತಾ ಗುಂಡಿಗಿಳಿದು ಹೋಗುವ ಹೊಯ್ದಾಟ ಎಲ್ಲ ಒಂದು ಕ್ಷಣ ಆಕಾಶ ನೋಡಿದಾಗ ಮರೆತೇ ಹೋಗುತ್ತದೆ.
ಮುಸ್ಸಂಜೆಯೇ ಹಾಗೆ. ಒಂದೆಡೆ ಧಾವಂತ, ಒಂದೆಡೆ ನಿರಾಳತೆ ಮತ್ತೊಂದೆಡೆ ನಾಳಿನ ಚಿಂತೆ. ಅಸ್ಪಷ್ಟ ಬೀದಿ ದೀಪದ ಬೆಳಕಿನಲ್ಲಿ ಓರೆಕೋರೆ ಕಾಲುದಾರಿ, ಭಯ ಹುಟ್ಟಿಸುವ ಪೊದೆಗಳು, ದಿನದ ಸೆಕೆ ಮರೆಸಿ ಒಂದಷ್ಟು ತಂಪು ಕೊಡುವ ಗಾಳಿ, ಇರುವಿಕೆ ತೋರಿಸುವ ಸೊಳ್ಳೆಗಳು, ಕೆಲ ಮನೆಗಳಿಂದ ಹೊರಸೂಸುವ ಅಗರಭತ್ತಿಯ ಘಮ, ಅಪರೂಪಕ್ಕೆ ಕೇಳಿಸುವ ಭಜನೆ, ಕಣ್ಣೀರು ತರಿಸುವ ಧಾರಾವಾಹಿಗಳ ರೋದನ, ಗ್ರೌಂಡಿನ ಮೂಲೆಯಲ್ಲಿ ದಿನದ ಮ್ಯಾಚು ಮುಗಿಸಿ ಸುಸ್ತಾಗಿ ಕುಳಿತ ಯುವಕರ ದಂಡು, ಕಾಲಿಗೆ ಬ್ರೇಕು ಹಾಕಿಸಿ ತನ್ನತ್ತ ಸೆಳೆದು ಒಂದು ಪ್ಲೇಟು ತಿನ್ನಿಸುವ ಬೀದಿ ಬದಿ ಫಾಸ್ಟ್ ಫುಡು ಅಂಗಡಿಗಳು...
ಮುಸ್ಸಂಜೆಗೆ ಅಂಥದ್ದೊಂದು ವಿಚಿತ್ರವಾದ ಗುರುತಿಸುವಿಕೆ ಇದೆ. ಪ್ರಖರ ಬೆಳಕಿನಲ್ಲಿ ಕಾಣದ್ದು, ಕಾಣಬಾರದ್ದು, ಕಾಣಲಾಗದ್ದು, ಕಂಡರೂ ಒಪ್ಪಿಕೊಳ್ಳಲು ಆಗದ್ದೆಲ್ಲ ಮುಸ್ಸಂಜೆಯ ಬಳಿಕ ಚಂದವಾಗಿ ತೋರ್ತದೆ. ಮುಸ್ಸಂಜೆಯ ದಿಢೀರ್ ಅಂಗಡಿಗಳು, ರಸ್ತೆ ಪಕ್ಕದ ಉತ್ಸವ, ನೇಮಗಳು, ಬಯಲಾಟಗಳು, ಓಡಾಟಗಳು ಮುಸ್ಸಂಜೆ ನಂತರ ಕಂಡರೆ ಮಾತ್ರ ಚಂದ. ಹಗಲಿನ ಬೆಳಕಿಗೆ ಅವು ಅವುಗಳಾಗಿ ಕಾಣಿಸುವುದೇ ಇಲ್ಲ. ಕತ್ತಲ ನೇಪಥ್ಯದಲ್ಲಿ ಕೃತಕ ಬೆಳಕಿನ ಕೊರೈಸುವಿಕೆಯಲ್ಲಿ ಮುಸ್ಸಂಜೆಯ ಬೀದಿ, ಮುಸ್ಸಂಜೆಯ ಮೈದಾನ, ಮುಸ್ಸಂಜೆಯ ಕಾಲು ದಾರಿ, ಮುಸ್ಸಂಜೆಯ ಅಂಗಳ, ಮುಸ್ಸಂಜೆಯ ಕೈತೋಟ ಭಯಂಕರ ಒಂದು ಏಕಾಂತವನ್ನು ಸೃಷ್ಟಿಸುತ್ತದೆ, ಚಿಂತನೆಗಳನ್ನು ಹುಟ್ಟಿಸುತ್ತವೆ.
ಕೆಂಪಾಗಿ ಹೊಳೆಯುತ್ತಿದ್ದ ಬೀಚ್ ಸಹ ಮುಸ್ಸಂಜೆ ಸೂರ್ಯ ಅಸ್ತಮಿಸಿದ ಬಳಿಕ
ಭಯಂಕರವಾಗಿ ಭೋರ್ಗರೆದ ಹಾಗೆ ಭಾಸವಾಗಿಸುತ್ತದೆ. ಇಡೀ ದಿನ ದಾಟಲು ಕಷ್ಟವಾಗಿ, ಬಿಸಿಲಿನ
ಪ್ರಖರತೆಯ ಬೆವರಿಳಿಸುತ್ತಿದ್ದ ಮುಖ್ಯ ರಸ್ತೆ ಸಹಿತ ರಾತ್ರಿ ಆಗ್ತಾ ಇದ್ದ ಹಾಗೆ ಶಾಪಿಂಗ್
ಸ್ಟ್ರೀಟ್ ಆಗಿ, ವಾಕಿಂಗಿನ ಪಥವಾಗಿ, ಸುತ್ತಾಟಕ್ಕೊಂದು ವೇದಿಕೆಯಾಗಿ ಪರಿಣಮಿಸುತ್ತದೆ.
ಬೆಂಗಳೂರು, ಬೊಂಬಾಯಿ, ಬೆಳಗಾವಿ, ಹುಬ್ಬಳ್ಳಿಗೆ ಹೋಗುವ ಬಸ್ಸುಗಳೆಲ್ಲ ಮುಸ್ಸಂಜೆ ಆಗ್ತಾ ಇದ್ದೆ
ಹಾಗೆ ರಸ್ತೆ ಬದಿ ಪ್ರತ್ಯಕ್ಷವಾಗ್ತವೆ. ಹಗಲು ನೋ ಪಾರ್ಕಿಂಗ್ ಇರುವ ಕಡೆಗಳಲ್ಲೂ ಮುಸ್ಸಂಜೆ ಬಳಿಕ
ನಿರಾಳವಾಗಿ ವಾಹನ ನಿಲ್ಲಿಸಿ ಹೋಗಬಹುದು. ಪಾನಿಪೂರಿ, ಬೇಲ್ ಪೂರಿ, ಚುರ್ಮುರಿ ಅಂಗಡಿಗಳಿಗೆ ಸಂಜೆಯ
ಬಳಿಕವೇ ವ್ಯಾಪಾರ ಜಾಸ್ತಿ. ಬಾರ್ ಆಂಡ್ ರೆಸ್ಟೋರೆಂಟುಗಳ ಬೋರ್ಡುಗಳ ವಿದ್ಯುದ್ದೀಪಾಲಂಕೃತ
ಅಲಂಕಾರದ ಬಗ್ಗೆ ಹೇಳುವುದಕ್ಕೇನೂ ಇಲ್ಲ!!!
ಅಳಿದುಳಿದ ಮಾಲಿನ ಸಹಿತ ಗಾಡಿ ನೂಕಿಕೊಂಡು ಮನೆಗೆ
ತೆರಳುವ ತರಕಾರಿ ವ್ಯಾಪಾರಿ, ಬಾಳ ಮುಸ್ಸಂಜೆಯಲ್ಲಿ ಎಂಥದ್ದೋ ಯೋಚಿಸುತ್ತಾ ಮಬ್ಬು ಕವಿದ
ಪಾರ್ಕಿನಿಂದ ಹೊರಡುವ ವೃದ್ಧ ಜೀವಗಳು, ವಾಕಿಂಗ್ ಮಾಡುತ್ತಲೇ ಕಸರತ್ತು ಮಾಡುವ, ಕಿವಿಯಿಂದ ಇಯರ್
ಫೋನ್ ತೆಗೆಯದೇ, ಹೊರ ಜಗತ್ತಿನಿಂದ ಸೂಕ್ತ ಅಂತರ ಕಾಪಾಡಿಕೊಂಡು ಎಲ್ಲಿಂದ, ಇನ್ನೆಲ್ಲಿಗೋ
ಓಡುತ್ತಾ ಹೋಗುವ ಯಂಗ್ ಆಂಡ್ ಎನರ್ಜೆಟಿಕ್ ಯುವ ಜನತೆ, ಸಂಪೂರ್ಣ ಅಲಂಕಾರ ಮಾಡಿಕೊಂಡು ಸಂಜೆಯ
ಶಾಪಿಂಗಿಗೆ, ಹೊಟೇಲಿನಲ್ಲಿ ಒಂದು ಊಟಕ್ಕೆ ತೆರಳುವ ಜೋಡಿಗಳು, ಸಂಜೆಯಾಗ್ತಾ ಬಂದ ಹಾಗೆ
ಕಣ್ಮುಚ್ಚಿ ಕೂರುವ ಸಿಗ್ನಲ್ಲು ಲೈಟ್ ಗಳು... ಎಲ್ಲ ಸಂಜೆಗೊಂದು ಹೊಸ ಭಾಷ್ಯ ಬರೆದ ಹಾಗೆ
ಅನ್ನಿಸುವುದಿಲ್ವ...?
ಇಡೀ ದಿನದ ಅಹಂಗಳು, ಮಾಡಿದ, ಮಾಡಲ್ಪಟ್ಟ ತಪ್ಪುಗಳು,
ತೋರಿಸಿದ ಸೆಡವು, ಹೇಳಿದ ಸುಳ್ಳುಗಳು, ಕಾಣಿಸಿದ ದರ್ಪ, ಕೇಳಿಸಿಕೊಂಡ ಬೈಗಳು, ಕಾಡಿದ ಅಸಹಾಯಕತೆ,
ನಿರಾಕರಿಸಲಾಗದ ದುರ್ವಿಧಿ ಎಲ್ಲವನ್ನೂ ಕುಳಿತು ಯೋಚಿಸುವಂತೆ ಮಾಡುವುದು, ಯೋಚನೆಗಳು ಕಾಡುವುದು
ಮುಸ್ಸಂಜೆಯೇ ಜಾಸ್ತಿ. ಅಂದಂದೇ ಡ್ರಾ, ಅಂದಂದೆ ಬಹುಮಾನ ಇದ್ದ ಹಾಗೆ. ಇಂತಹ ಚಿಂತೆಗಳನ್ನು
ಮರುದಿನಕ್ಕೆ ಕಟ್ಟಿಟ್ಟು ಬಡ್ಡಿ ಪಡೆಯಲೇನೂ ಇಲ್ಲ. ಹಾಗಂತ ಅಹಂಗಳನ್ನು, ಪಡೆದದ್ದು,
ಕಳೆದುಕೊಂಡದ್ದನ್ನು ಹಜಾರದಲ್ಲಿ ಬಿಡಿಸಿಟ್ಟು ವಿಮರ್ಶೆ ಮಾಡಿದರೂ ಮರುದಿನ ನಾವೇನೂ ಭಯಂಕರ
ಬದಲಾಗುವುದಿಲ್ಲ. ಡಿ.31ರ ರಾತ್ರಿ ಅಮಲಿನಲ್ಲಿ ಕೈಗೊಂಡ ಪ್ರತಿಜ್ಞೆಗಳ ಹಾಗೆ! ನಾವು ನಾವೇ ಆಗಿರುತ್ತೇವೆ. ಪಂಚಭೂತಗಳೂ ಅಸಹಾಯಕ
ಸಾಕ್ಷಿಗಳಾಗಿರ್ತವೆ ಅಷ್ಟೇ. ನಾವು ಬದಲಾಗುವುದಿಲ್ಲ. ಆದರೆ ನಮ್ಮ ಬಗ್ಗೆ ಭಯಂಕರ ಚಿಂತಿಸ್ತೇವೆ.
ಮುಸ್ಸಂಜೆ ಕುಳಿತು ದಿನದ ಬ್ಯಾಲೆನ್ಸ್ ಶೀಟ್ ಬಿಚ್ಚಿಟ್ಟು ದೊಡ್ಡದೊಂದು ನಿಟ್ಟುಸಿರು ಬಿಟ್ಟು
ಮತ್ತೊಂದು ಪರಿಷ್ಕರಣೆಯ, ಬದಲಾವಣೆಯ, ಧನಾತ್ಮಕ ಯೋಚನೆಯ ಕುರಿತು “ಚಿಂತಿಸ್ತೇವೆ”. ರಾತ್ರಿ ಮಲಗಿ, ಬೆಳಗ್ಗೆದ್ದಾಗ ಆ ಚಿಂತನೆಗಳೆಲ್ಲ
ಮಂಜಿನ ಜೊತೆ ಕರಗಿ ಹೋಗಿರ್ತವೆ, ನಮ್ಮ ನಮ್ಮ ಸ್ಟೇಟಸ್ಸಿನಲ್ಲಿ ಭಯಂಕರ ಹಿತೋಪದೇಶದ ರೂಪದಲ್ಲಿ
ಪ್ರಕಟ ಆಗ್ತವೆ. ಹೊರತು “ನಾವು ಬದಲಾಗುವುದಿಲ್ಲ”. ಅಷ್ಟಕ್ಕೂ ಮರುದಿನ ಅಂಥದ್ದೇ ತಪ್ಪು ಮಾಡಿದರೂ
ಚಿಂತಿಸಲು ಮುಸ್ಸಂಜೆ ಖಂಡಿತಾ ಇರ್ತದಲ್ಲ ಎಂಬ ಭಯಂಕರ ನಂಬಿಕೆ ಇದ್ದೇ ಇರ್ತದೆ!!!!
ಬದುಕಿಗೂ ಮುಸ್ಸಂಜೆ ಇದೆ. ಅದು ಯಾವತ್ತೂ ಬರಬಹುದು.
ಗಡಿಯಾರ ನೋಡಿ ಬರುವುದಲ್ಲ, ಆದು ಆವರಿಸುವುದು, ಕಾಡುವುದು, ಅಥವಾ ಸಂಭವಿಸುವುದು. ಆದರೂ
ಎಷ್ಟೊಂದು ಧೈರ್ಯದಲ್ಲಿ, ಎಷ್ಟೊಂದು ಆತ್ಮವಿಶ್ವಾಸದಲ್ಲಿ ಚಿರಂಜೀವಿಗಳೋ ಎಂಬ ಹಾಗೆ ನಾವು ದಿನದೂಡ್ತೇವೆ.
ಹತ್ತಾರು ವರ್ಷಗಳ ಯೋಜನೆಗಳು, ಯಾರು ಯಾರನ್ನೋ “ನೋಡಿಕೊಳ್ಳುವ” ಅಹಂಕಾರದ ಮಾತುಗಳು, ಜಗತ್ತೇ ನಮ್ಮ ಕೈಯ್ಯಲ್ಲಿ
ಇದೆಯೇನೋ ಎಂಬಂಥ ಅತಿ ಆತ್ಮವಿಶ್ವಾಸದ ಅತಿ ಬುದ್ಧಿವಂತಿಕೆಯ ಮಾತುಗಳು... ಸಿಕ್ಕಾಪಟ್ಟೆ ಧೈರ್ಯ
ನಾನೊಬ್ಬ ಶಾಶ್ವತ ಎಂಬ ಹಾಗೆ. ನಮ್ಮ ಶರೀರದೊಳಗೆ ನುಸುಳುವ ವೈರಸ್ಸು, ಒಂದು ರೋಗಾಣು ತೀವ್ರವಾಗಿ
ಪ್ರಕಟವಾಗುವ ತನಕ, ಸ್ಕ್ಯಾನ್, ಎಕ್ಸರೇ ಮಾಡುವ ತನಕ ನಾವು ರೋಗಿಗಳು ಎಂಬ ವಿಷಯವೇ ನಮಗೆ
ತಿಳಿಯುವುದಿಲ್ಲ. ನಮ್ಮ ಮನಸ್ಸು ಕಂಟ್ರೋಲ್ ತಪ್ಪಿ ಮಾನಸಿಕ ಅಸ್ಥಿರತೆ ಆಗಿರುವುದೂ ವೈದ್ಯರನ್ನು
ಕಾಣುವ ವರೆಗೆ ನಮಗೆ ತಿಳಿದಿರುವುದಿಲ್ಲ. ಆದರೂ ಎಷ್ಟೊಂದು ಅಂಧ ಆತ್ಮವಿಶ್ವಾಸ... ನನಗೆಲ್ಲ
ತಿಳಿದಿದೆ, ನಾನು ನಿಭಾಯಿಸುತ್ತೇನೆ, ನೋಡಿಕೊಳ್ಳುತ್ತೇನೆ... ಇತ್ಯಾದಿ ಇತ್ಯಾದಿ... ಜೇಬಿನಲ್ಲಿ
ಎಷ್ಟೇ ದುಡ್ಡಿದ್ದರೂ ತೂತಾದ ಟಯರಿಗೆ ಪಂಕ್ಚರ್ ಹಾಕಿಸದೆ ಗಾಡಿ ಮುಂದೆ ಕೊಂಡು ಹೋಗಲಾಗದಷ್ಟು
ಅಸಹಾಯಕರು ನಾವು. ಮುಸ್ಸಂಜೆ ಕವಿದ ಕತ್ತಲಿನಲ್ಲಿ ಎಷ್ಟೇ ಪರಿಚಿತ ದಾರಿಯಾದರೂ ಟಾರ್ಚ್ ಇಲ್ಲದೆ
ಹೋದರೆ ಜಾರಿ ಬೀಳಲಿಕ್ಕಿಲ್ಲ ಎಂದು ಗಟ್ಟಿಯಾಗಿ ಹೇಳುವಷ್ಟು ಧೈರ್ಯ ಇರುವುದಿಲ್ಲ...
ಮುಸ್ಸಂಜೆ ಒಂದು ಆತ್ಮಾವಲೋಕನ ಮಾಡಿಸುತ್ತದೆ.
ಬಸ್ಸಿನಲ್ಲೋ, ಬೈಕಿನಲ್ಲೋ, ಹಜಾರದಲ್ಲೋ, ಪಾರ್ಕಿನಲ್ಲೋ, ಹಜಾರದಲ್ಲಿ ಕಾಡುವ ಒಂಟಿತನದಲ್ಲೋ,
ಬೋರಲು ಮಲಗಿದ ಹಾಸಿಗೆಯಲ್ಲೋ... ಇನ್ನೆಲ್ಲೋ. ಅಂತರಾತ್ಮಕ್ಕೆ ನಾವು ಮಾಡಿರುವುದು, ಮಾಡದೇ
ಇರುವುದು, ಮಾಡಲು ಹೊರಡುವುದು ಎಲ್ಲ ಖಂಡಿತ ಗೊತ್ತಿರುತ್ತದೆ. ನಮ್ಮೊಳಗಿನ ಸಂಸ್ಕಾರ ಅದನ್ನು
ತೋರಿಸುತ್ತದೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ನಾವದನ್ನು ಒಪ್ಪುವುದಿಲ್ಲ, ಒಪ್ಪಿದರೂ
ತೋರಕೊಡುವುದಿಲ್ಲ, ತೋರಿಸಿಕೊಂಡರೂ ಭಾಗಶಃ ಕಾಣಿಸುವುದಿಲ್ಲ... ಬಹುತೇಕ ಚಿಂತನೆ ಹಾಗೂ ಚಿಂತೆ
ಯೋಚನೆಗಳ ತಾಕಲಾಟದಲ್ಲಿ ಜರ್ಝರಿತವಾಗುತ್ತದೆ ಹೊರತು ಪರಿಹಾರಗಳನ್ನು ಕಾಣುವುದಿಲ್ಲ... ಕಾಣುವುದೇ
ಹೌದಾಗಿದ್ದರೆ ದಿನದಿಂದ ದಿನಕ್ಕೆ ಬದುಕು ಭಯಂಕರವಾಗಿ ಸುಧಾರಿಸುತ್ತಾ ಹೋಗುವುದು ಪ್ರತಿಯೊಬ್ಬರ
ಜೀವನದಲ್ಲೂ ಎದ್ದು ಕಾಣಬೇಕಿತ್ತು...
ಚಂದದ ಸೂರ್ಯಾಸ್ತ, ತೆಳುವಾದ ಮಂಜು, ತಂಪು ಗಾಳಿ,
ಅವರವರ ಲೋಕದ ಏಕಾಂತದ ನಡುವೆ ಮನೆಗಳತ್ತ ಬಿರುಸಿನ ನಡಿಗೆ, ದಿನ ಮುಗಿಸುವ ಧಾವಂತ ಮತ್ತು ಕಾಡುವ
ಯೋಚನೆಗಳು... ಮುಸ್ಸಂಜೆ ಮಾತಿಗೆ ಕೆಲವೊಮ್ಮೆ ಭಾಷೆಯೇ ಇರುವುದಿಲ್ಲ. ಭಾವದ ಸೀಮೆಯ ಆಚೆಗೆ
ಮುಸ್ಸಂಜೆ ಮಾತುಗಳು ದಾಟಿ ಬರುವುದೇ ಇಲ್ಲ. ಬಂದರೂ ಅದು ಯಾರಿಗೂ ಕಾಣಿಸುವುದಿಲ್ಲ, ಕೇಳಿಸುವುದೂ
ಇಲ್ಲ!
-ಕೃಷ್ಣಮೋಹನ ತಲೆಂಗಳ (04.02.2023)
No comments:
Post a Comment