ಮುಂದಿನ ಸಲ ವಾಟ್ಸಪ್ ಗ್ರೂಪು ಕಟ್ಟಲು ಹೊರಡುವ ಮುನ್ನ ಸ್ವಲ್ಪ ಯೋಚಿಸಿ, ದುಡುಕಬೇಡಿ!

 



ಇತ್ತೀಚೆಗೆ ಜಾಲತಾಣದಲ್ಲಿ ಒಂದು ಜೋಕು ನೋಡಿದೆ. ಹಾಸ್ಯವಾದರೂ ತುಂಬ ಅರ್ಥಗರ್ಭಿತವಾಗಿದ್ದು, ಆಕರ್ಷಿಸಿತು. ವಾಟ್ಸಪ್ ಗ್ರೂಪೊಂದು ಹುಟ್ಟಿದ ಕೆಲ ದಿನ ಹೇಗಿರುತ್ತದೆ, ಬಳಿಕ ಹೇಗಾಗುತ್ತದೆ ಹಾಗೂ ಕೊನೆಗೆ ಎಲ್ಲಿಗೆ ತಲಪುತ್ತದೆ ಎಂಬ ಕುರಿತ ವಿಡಿಯೋ. ಅದರ ಸಾರಾಂಶ ಹೀಗಿದೆ:

1)      ಗ್ರೂಪು ಹುಟ್ಟಿದ ಮೊದಲಿಗೆ ಯಜಮಾನ ಸಿನಿಮಾದ ನಮ್ಮ ಮನೆಯಲಿ ದಿನವೂ ಮಿನುಗೋ ಚೈತ್ರವೇ... ಹಾಡಿನೊಂದಿಗೆ ಎಲ್ರೂ ಕೈಕೈ ಹಿಡ್ಕೊಂಡು ಕುಣಿಯುತ್ತಾ ಇರುತ್ತಾರೆ. ಭಯಂಕರ ಒಗ್ಗಟ್ಟು, ಉತ್ಸಾಹ, ಪರಿಚಯ, ಸೌಜನ್ಯ, ಗ್ರೂಪನ್ನು ಎಲ್ಲಿಗೋ ತಲುಪಿಸುವ (?) ಕುರಿತ ಶೂರತ್ವದ ಮಾತುಗಳು, ಹಾಕಿದ ಪ್ರತಿ ಪೋಸ್ಟಿಗೂ ಪ್ರತಿಕ್ರಿಯೆಗಳು, ಹೊಗಳಿಕೆಗಳು ಇತ್ಯಾದಿ...

2)      ಎರಡನೇ ಭಾಗದಲ್ಲಿ ಒಬ್ರು ಹಲೋ…” ಅನ್ನುತ್ತಾರೆ, ಸ್ವಲ್ಪ ಗ್ಯಾಪ್ ಕೊಟ್ಟು ಆಚೆ ಕಡೆಯಿಂದ ಹಲೋ ಅಂತ ನೀರಸ ಪ್ರತಿಕ್ರಿಯೆ ಬರುತ್ತದೆ. ವಾಟ್ಸಪ್ ಗ್ರೂಪಿನ ಮಧುಚಂದ್ರದ ಅವಧಿ ಮುಗಿದ ಬಳಿಕದ ಹಂತ. ಕ್ರಮೇಣ ಒಬ್ಬೊಬ್ರೇ ಗ್ರೂಪಿನಲ್ಲಿ ಆಸಕ್ತಿ ಕಳೆದುಕೊಂಡು ವಿರಳವಾಗಿ ಪ್ರತಿಕ್ರಿಯೆ ನೀಡುವ ಹಂತ ಇದು.

3)      ಮೂರನೇ ಭಾಗದಲ್ಲಿ ಒಬ್ಬ ಗಾಢರಾತ್ರಿಯಲ್ಲಿ ತೆಪ್ಪವೊಂದರಲ್ಲಿ ಅಸಹಾಯಕನಾಗಿ ನಿಂತಿರ್ತಾನೆ (ಅವ ಅಡ್ಮಿನ್). ಹಲೋ... ಯಾರಾದ್ರೂ ಇದ್ದೀರ... ಹಲೋ ಯಾರಾದ್ರೂ ಇದ್ದೀರ.. ಮಾತಾಡ್ರಿ.... ಅಂತ ಕಿರುಚುವ ದೃಶ್ಯ ಕಾಣಿಸುತ್ತದೆ. ಇದು ಎಲ್ರೂ ಗ್ರೂಪಿನಲ್ಲಿ ಆಸಕ್ತಿ ಕಳೆದುಕೊಂಡ ಹಂತ... ಅಡ್ಮಿನ್ ಗ್ರೂಪನ್ನು ಉಳಿಸಬೇಕು ಅಂತ ಶತಪ್ರಯತ್ನ ಮಾಡುತ್ತಿರುವುದು ವಿಫಲವಾಗುತ್ತಿರುವ ಹಂತ.

4)      ಕೊನೆಯ ಭಾಗದಲ್ಲಿ ಒಬ್ಬ ಮಹಿಳೆ ಅಸಹಾಯಕವಾಗಿ ಗೋಳೋ... ಅಂತ ಭಯಂಕರವಾಗಿ ಅಳ್ತಾ ಇರ್ತಾಳೆ. ಅದು ಕೂಡಾ ಅಡ್ಮಿನ್. ಎಲ್ರೂ ಗ್ರೂಪು ಬಿಟ್ಟೋದ ಬಳಿಕ ಆಕೆ, ಇಷ್ಟು ದಿನಗಳ ಶ್ರಮ, ನಿರೀಕ್ಷೆ, ಕನಸುಗಳೆಲ್ಲ ಮಣ್ಣುಪಾಲಾದ ಕುರಿತು ಅಳ್ತಾ ಇರ್ತಾಳೆ....

ಹಾಗಾದ್ರೆ ಗ್ರೂಪಿನಲ್ಲಿ ಅಷ್ಟೂ ದಿನ ಇದ್ದ ಮಂದಿ ಎಲ್ಲ ಎಲ್ಹೋದ್ರು? ಅವರೆಲ್ಲ ಮತ್ತೊಂದು ಹೊಸ ಗ್ರೂಪಿನ ಸದಸ್ಯರಾಗಿರ್ತಾರೆ... ಅವರೇನು ಮಾಡ್ತಾರೆ ಅಂತ ಓದಲು ಮತ್ತೆ 1ನೇ ಪಾಯಿಂಟಿನಿಂದ ಓದುತ್ತಾ ಬನ್ನಿ!. ಹೊಸದಾಗಿ ಏನೂ ಆಗುವುದಿಲ್ಲ. ನಾನು ಕಂಡ ಹಾಗೆ ಯಕ್ಷಗಾನ ಹಾಗೂ ಔದ್ಯೋಗಿಕ ಹೊರತುಪಡಿಸಿ (ನನ್ನ ತಿಳಿವಳಿಕೆ ವ್ಯಾಪ್ತಿಯಲ್ಲಿ) ಮತ್ತೆಲ್ಲ ಗ್ರೂಪುಗಳಲ್ಲೂ ಇಷ್ಟೇ ಆಗುವುದು.

 

ಸಾಕಷ್ಟು ವಾಟ್ಸಪ್ ಗ್ರೂಪುಗಳನ್ನು ಕಟ್ಟಿದ, ಬೆಳೆಸಿದ, ಖುಷಿ ಪಟ್ಟ, ನೋವುಂಡ ಅನುಭವದಲ್ಲೇ ಈ ಬರಹ ಬರೆದಿದ್ದೇನೆ. ಇದನ್ನು ಕೊನೆಯ ತನಕ ಯಾರೂ ಓದುವುದಿಲ್ಲ ಎಂಬ ಬಲವಾದ ನಂಬಿಕೆ ಇದೆ, ನನ್ನ ಸಮಾಧಾನಕ್ಕಾಗಿ ಬರೆದಿದ್ದೇನೆ.

 

 ವಾಟ್ಸಪ್ ಎಂಬುದು ಚಂದದ ತಂತ್ರಜ್ಞಾನ, ನಾವಿರುವಲ್ಲಿಂದಲೇ ಜಗತ್ತಿನ ಜೊತೆ ಕನೆಕ್ಟೆಡ್ ಆಗಿರಬಹುದು, ನಾವದನ್ನು ಪರಿಣಾಮಕಾರಿಯಾಗಿ ಬಳಸಬೇಕು ಅಷ್ಟೇಎಂಬುದು ಯಾರೋ ಅರಸಿಕ ಹೇಳಿದ ಅವಾಸ್ತವಿಕ ಹೇಳಿಕೆ ಅಷ್ಟೇ... ವಾಟ್ಸಪ್ ಗ್ರೂಪುಗಳನ್ನು ಸಂವೇದನಾರಹಿತರಾದ, ಸೂಕ್ಷ್ಮತೆಯನ್ನು ಕಳೆದುಕೊಂಡ, ಸ್ವಾರ್ಥಿಗಳಾದ ನಾವು ಎಲ್ರೂ ಸೇರಿ ನಿಶ್ಶಕ್ತ ಆಯುಧವಾಗಿ ರೂಪಿಸಿಬಿಟ್ಟಿದ್ದೇವೆ. ಭಾರತದ ಯಾವುದೇ ಸಮಾರಂಭಕ್ಕೆ ಹೋಗುವುದಾದರೂ ಅದು ಸಮಯಕ್ಕೆ ಸರಿಯಾಗಿ ಶುರುವಾಗುವುದಿಲ್ಲ ಬಿಡ್ರಿ ಅಂತ ಮೊದಲೇ ನಿರ್ಧಾರ ಮಾಡಿ, ನಮ್ಮ ಹೊತ್ತಿಗೇ ಹೋಗಿ, ಸಾಮೂಹಿಕವಾಗಿ ಕಾರ್ಯಕ್ರಮದ ವಿಳಂಬಕ್ಕೆ ಎಲ್ಲರೂ ಕಾರಣೀಭೂತರಾಗುವ ಹಾಗೆ, ವಾಟ್ಸಪ್ ಗ್ರೂಪುಗಳೆಂದರೆ ಅಷ್ಟೇ, ಅದೊಂದು ತಮಾಷೆ, ಅದೊಂದು ಕಾಲಹರಣದ ವೇದಿಕೆ, ಅದೊಂದು ಸಾರ್ವಜನಿಕ ಕಕ್ಕುಸು, ಅದೊಂದು ಕೆಲಸವಿಲ್ಲದವರ ನಡೆಸುವ ಆಟ, ಅದೊಂದು ತುಂಬ ಗಂಭೀರವಾಗಿ ತೆಗೆದುಕೊಳ್ಳಬಾರದೇ ಇರಬೇಕಾದ ಸಂವಹನ ವೇದಿಕೆ, ಅದೊಂದು ಬೇಕಾದಾಗ ನೋಡಿ, ಬೇಡವಾದಾಗ ಕಡೆಗಣಿಸಬಹುದಾದ ಪ್ರದೇಶ ಎಂಬ ಹಾಗೆ ನಾವೆಲ್ರೂ ಸೇರಿ ನಿರ್ಧಾರ ಮಾಡಿ ಆಗಿದೆ.

ಇಲ್ಲಿ ಬರೆದಿರುವುದು ಯಾವುದೂ ಹೊಸ ವಿಚಾರವಲ್ಲ, ಯಾವುದೂ ಮುಂದಕ್ಕೂ ಹೊಸತಾಗಿರುವುದಿಲ್ಲ. ಯಾವುದೋ ಸಂಘಟನೆಗೋ,ಸಂಘಕ್ಕೋ, ಕಲಿತ ಶಾಲೆಗೋ, ಯಾರದ್ದೋ ನೆರವಿಗೋ ನಾನು ವಾಟ್ಸಪ್ ಗ್ರೂಪು ಮಾಡಿ ಜನ ಸೇರಿಸಿ ಕೊಡುತ್ತೇನೆ ಅಂತ ಪೌರುಷದಿಂದ ಮುಂದೆ ಹೋಗುವ ಮುನ್ನ ದಯವಿಟ್ಟು ಈ ಕೆಳಗಿನ ವಿಚಾರಗಳನ್ನು ಗಮನಿಸಿ. ಅಪಾತ್ರರಿಗೆ, ನಿಮ್ಮ ಸಮಯದ ಬೆಲೆಯೇ ಗೊತ್ತಿಲ್ಲದವರಿಗೆ ಸಮಯವನ್ನು ನೀಡುವುದು, ಅವರಿಗೋಸ್ಕರ ಶ್ರಮ ಹರಿಸುವುದು ವ್ಯರ್ಥ ಅನ್ನುವುದನ್ನು ವಾಟ್ಸಪ್ ಗ್ರೂಪುಗಳನ್ನು ತುಂಬ ಪರಿಣಾಮಕಾರಿಯಾಗಿ ಅಡ್ಮಿನ್ಗಳಿಗೆ ಪಾಠ ಕಲಿಸಿಕೊಡುತ್ತವೆ. ಅಡ್ಮಿನ್ ಗಳಾಗಿ ಗ್ರೂಪುಗಳನ್ನು ನಡೆಸುವ ಚಟ ಹೊಂದಿದದವರು ನಾಲ್ಕಾರು ಬಾರಿ ವಾಟ್ಸಪ್ ಗ್ರೂಪುಗಳಿಂದ ತೀರಾ ಅವಮಾನಿತರಾಗಿ ಭ್ರಮನಿರಸನಗೊಂಡಾಗ ತಮ್ಮ ಆವೇಶಗಳಿಂದ ಹೊರ ಬಂದಿರುತ್ತಾರೆ... ಅಂಥವರ ಪೈಕಿ ನೀವೂ ಒಬ್ಬರಾಗಿರಲೂಬಹುದು. ಇದೆಲ್ಲ ಆಗುವುದು ಹೀಗೆ...:

1)      ಪ್ರತಿ ಸಂಘಟನೆಗೆ, ಸಂಘಕ್ಕೆ, ದೇವಸ್ಥಾನಗಳಿಗೆ, ಶಾಲೆಯ ಹಳೆ ವಿದ್ಯಾರ್ಥಿ ಸಂಘಕ್ಕೆ, ಯಾವುದೋ ಪ್ರವಾಸಕ್ಕೆ, ಯಾವುದೋ ಸಮಾರಂಭದ ಯಶಸ್ಸಿಗೆ ಜನಗಳನ್ನು ಸೇರಿಸಲು ವಾಟ್ಸಪ್ ಗ್ರೂಪುಗಳು ಈಗಿನ ಕಾಲದಲ್ಲಿ ಬೇಕಾಗುತ್ತದೆ. ಹಾಗಂತ ಪ್ರತಿಯೊಬ್ಬರೂ ರಿಸ್ಕ್ ತಕ್ಕೊಂಡು ಅಷ್ಟೂ ನಂಬರುಗಳನ್ನು ಸೇರಿಸಿಕೊಂಡು ಗ್ರೂಪು ಕಟ್ಟಲು ಸಿದ್ಧರಿರುವುದಿಲ್ಲ. ಯಾರೋ ಕೆಲವರು ಜಾಲತಾಣದ ಬಗ್ಗೆ ಅಷ್ಟಿಷ್ಟು ಗೊತ್ತಿದ್ದವರು ನಾನು ವಾಟ್ಸಪ್ ಗ್ರೂಪು ಕಟ್ಟಿಕೊಡುತ್ತೇನೆ ಅಂತ ರಂಗಕ್ಕಿಳಿಯುತ್ತಾರೆ.

2)      ಹಾಗೆ ಗ್ರೂಪು ಕಟ್ಟಲು ಹೊರಟವ ಪ್ರಧಾನ ಅಡ್ಮಿನ್ ಆಗಿಯೂ, ಆ ಸಂಘಟನೆಗಳಿಗೆ ಸಂಬಂಧಪಟ್ಟ ಇತರ ಮಹನೀಯರು ಸಹ ಅಡ್ಮಿನ್ ಗಳಾಗಿಯೂ ಗ್ರೂಪಿನಲ್ಲಿ ಇರುತ್ತಾರೆ. ತನ್ನಲ್ಲಿರುವ ಸಂಪರ್ಕದ ವ್ಯಾಪ್ತಿ, ಸ್ನೇಹಿತರ ಸಹಕಾರದಿಂದ ಆತ ತನ್ನ ಶಕ್ತ್ಯಾನುಸಾರ ವಾಟ್ಸಪ್ ಗ್ರೂಪು ಕಟ್ಟಿ ಅಲ್ಲಿ 200,300,400,500 ಮಂದಿಯನ್ನು ಸೇರಿಸಿ ಗ್ರೂಪು ಕಟ್ಟುತ್ತಾನೆ. ಅಷ್ಟು ಹೊತ್ತಿಗೆ ಹಾಗೊಂದು ಗ್ರೂಪು ಕಟ್ಟಿರುವುದು, ಗ್ರೂಪಿನ ಮೂಲಕ ಎಂತದೋ ನಡೆಯಲಿದೆ ಎಂಬುದು ಒಂದಷ್ಟು ಮಂದಿಗೆ ಗೊತ್ತಾಗಿರುತ್ತದೆ.

3)      ನಂತರ ಆಟ ಶುರುವಾಗುವುದು. ಪಾಪ ಆ ಗ್ರೂಪು ಕಟ್ಟುವ ಆರಂಭದಲ್ಲಿ ಮೂಲ ಅಡ್ಮಿನ್ ಗ್ರೂಪು ಶಿಸ್ತುಬದ್ಧವಾಗಿರಬೇಕು, ಗ್ರೂಪಿನಲ್ಲಿ ಎಲ್ಲವೂ ವಿಷಯಾಧಾರಿತವಾಗಿರಬೇಕು ಎಂಬಿತ್ಯಾದಿ ಕನಸು ಕಂಡು ಕೆಲವು ನಿಯಮಗಳನ್ನು ರೂಪಿಸಿರುತ್ತಾನೆ. ಹಾಗೂ ಅದನ್ನು ಸಂಘಟನೆಯ ಪ್ರಮುಖರಲ್ಲೂ ಹೇಳಿರುತ್ತಾನೆ. ಅನಗತ್ಯ ವಿಚಾರಗಳು ಬಂದರೆ ಡಿಲೀಟ್ ಮಾಡಿ ಎಂದೂ ಹೇಳಿರುತ್ತಾನೆ. ಎಲ್ರೂ ತಲೆ ಆಡಿಸಿರುತ್ತಾನೆ. ಯಾವಾಗ ಗ್ರೂಪು ಭರ್ತಿ ಆಯಿತೋ, ಗ್ರೂಪಿನಲ್ಲಿ ಹಾಕಿದ ಮೆಸೇಜು ನೂರಾರು ಮಂದಿಯನ್ನು ಕೆಲವೇ ಕ್ಷಣದಲ್ಲಿ ತಲಪುತ್ತದೆ ಎಂದು ಗೊತ್ತಾಯಿತೋ, ಆ ಕ್ಷಣದಿಂದ ಶಿಸ್ತಿನ ಬಗ್ಗೆ ಮಾತನಾಡುವ ಪ್ರಧಾನ ಅಡ್ಮಿನ್ ದೊಡ್ಡ ಹೊರೆ ಅಂತ ಗ್ರೂಪಿನ ಇತರರಿಗೆ ಅನಿಸಲು ಶುರುವಾಗುತ್ತದೆ. :ಇಂಬ್ಯೆನ ದಾದ ಯಾಪಲ ಕಿರಿಕಿರಿ, ಇಂಬ್ಯೆನ ದಾದ ಮಲ್ಲ ಶಿಸ್ತು ಎಂಬಿತ್ಯಾದಿ ಅಸಹನೆಗಳು ಆರಂಭದಲ್ಲಿ ಹಿಂದಿನಿಂದ, ನಂತರ ಮುಂದಿನಿಂದಲೂ ಪ್ರಕಟವಾಗಲು ಶುರುವಾಗುತ್ತದೆ.

4)      ಯಾವಾಗ ಒಂದು ಭರ್ತಿ ಗ್ರೂಪು ಸೃಷ್ಟಿಯಾಗಿದೆ ಎಂದು ಗೊತ್ತಾಯಿತೋ, ಆಗಲೇ ನೀವು ರಚಿಸಿದ ಮೈದಾನದಲ್ಲಿ (ವಾಟ್ಸಪ್ ಗ್ರೂಪಿನಲ್ಲಿ) ಆಟವಾಡಲು ಹತ್ತಾರು ಮಂದಿ ಅಂಗಿ ಕೈ ಮೇಲೇರಿಸಿ ಮುಂದೆ ಬರುತ್ತಾರೆ. ಒಬ್ಬ ತನ್ನೂರಿನಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಗ್ರೂಪಿನಲ್ಲಿ ಹಾಕುತ್ತಾನೆ. ನೀವು ಪ್ರಧಾನ ಅಡ್ಮಿನ್ ನೆಲೆಯಲ್ಲಿ ಅದನ್ನು ಡಿಲೀಟ್ ಫಾರ್ ಎವ್ರಿವನ್ ಕೊಡುತ್ತೀರಿ. ಮತ್ತೊಬ್ಬ ತನ್ನೂರಿನ ಜಾತ್ರೆಗೆ ಬನ್ನಿ ಅಂತ ಹಾಕ್ತಾನೆ, ಮತ್ತೊಬ್ಬ ತನ್ನೂರಿನ ಬಯಲಾಟಕ್ಕೆ ಬನ್ನಿ ಅಂತ, ಮತ್ತೊಬ್ಬ ಉಚಿತ ರಕ್ತದಾನ ಶಿಬಿರಕ್ಕೆ ಬನ್ನಿ ಅಂತ, ಮತ್ತೊಬ್ಬ ಒಬ್ರು ಅಸಹಾಯಕರಾಗಿದ್ದಾರೆ, ಇಂತಹ ನಂಬರಿಗೆ ದುಡ್ಡು ಹಾಕಿಅಂತ ಮೆಸೇಜು ಹಾಕ್ತಾನೆ. ಪ್ರಧಾನ ಅಡ್ಮಿನ್ ಹೊರತುಪಡಿಸಿ ಮತ್ಯಾರೂ ಅದನ್ನು ಡಿಲೀಟ್ ಫಾರ್ ಎವ್ರಿವನ್ ಆಯ್ಕೆ ಬಳಸಿ ಡಿಲೀಟ್ ಮಾಡುವುದಿಲ್ಲ. ಇರ್ಲಿ ಬಿಡಿ, ಯಾಕೆ ಸುಮ್ನೆ ಅಂತ ಸುಮ್ಮನಿರ್ತಾರೆ. ಡಿಲೀಟ್ ಮಾಡುವ ಮೂಲಕ ಯಾರ ದೃಷ್ಟಿಯಲ್ಲೂ ತಾವು ಕೆಟ್ಟವರಾಗಲು ಅವರಿಗೆ ಇಷ್ಟ ಇರುವುದಿಲ್ಲ.

5)      ಇದಾದ ನಂತರದ ಹಂತದಲ್ಲಿ ಒಬ್ಬ ತಾನು ಬರೆದ ಅತ್ಯಂತ ಕೆಟ್ಟ (ಒಳ್ಳೆಯದೂ ಇರಬಹುದು,) ಕವನವೊಂದನ್ನು ಒಬ್ಬ ಗ್ರೂಪಿನಲ್ಲಿ ಹಾಕುತ್ತಾನೆ. ಗ್ರೂಪಿನ ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡದವರೂ ಅದಕ್ಕೆ ಥಂಬ್ ಎತುತ್ತಾರೆ. ಮತ್ತೊಬ್ಬ ಗ್ರೂಪಿನ ವ್ಯಕ್ತಿಯೊಬ್ಬನ ಜನ್ಮದಿನಕ್ಕೆ ಶುಭಾಶಯ ಕೋರುತ್ತಾನೆ. ಆಗ ಪುಂಖಾನುಪುಂಖವಾಗಿ ಇಮೋಜಿಗಳು, ಸ್ಮೈಲೀಗಳ ಸಹಿತ ಶುಭಾಶಯಗಳ ಮಹಾಪೂರ ಹರಿದುಬರುತ್ತದೆ. ಇನ್ನೊಬ್ಬ ದೇಶದ ಮಹಾನ್ ನಾಯಕ ಮೃತಪಟ್ಟದ್ದಕ್ಕೆ ಗ್ರೂಪಿನಲ್ಲಿ ಗಾಢ ಸಂತಾಪ ವ್ಯಕ್ತಪಡಿಸುತ್ತಾನೆ. ಅದಕ್ಕೇ ಕಾದು ಕುಳಿತಿದ್ದವರ ಹಾಗೆ “RIP ಹಾಗೂ ಓಂಶಾಂತಿಯ ಮಹಾಪೂರಗಳು ಸಾರಗೋಪಾದಿಯಲ್ಲಿ ತೇಲಿ ಬರುತ್ತವೆ. ಮತ್ತೊಬ್ಬ ಮಹಾನುಭಾವ... ನನಗೆ ಇಂದು ಆನ್ ಲೈನಿನಲ್ಲಿ ಇಂತಹ ಪ್ರಶಸ್ತಿ ಬಂತು ಅಂತ ಘೋಷಿಸುತ್ತಾನೆ. ಆತನಿಗೆ ಬೇಜಾರಾಗುವುದು ಯಾಕೆ ಅಂತ ಅಷ್ಟೂ ಮಂದಿ ವಿಧ ವಿಧದ ಹೂವುಗಳ ಚಿತ್ರದೊಂದಿಗೆ ಶುಭಾಶಯ ಕೋರುತ್ತಾರೆ. ಮತ್ತೊಬ್ಬ ತಾನು ಜೀವಮಾನದಲ್ಲಿ ಮಾಡಿದ ವಿವಿಧ ಸಾಧನೆಗಳ ಕುರಿತು ಪತ್ರಿಕೆಗಳಲ್ಲಿ ಬಂದ ವರದಿಗಳನ್ನೆಲ್ಲ ಸಾಲು ಸಾಲಾಗಿ ಗ್ರೂಪಿನಲ್ಲಿ ಇದು ತಾನೇ ಕಟ್ಟಿದ ಗ್ರೂಪೋ ಎಂಬಷ್ಟು ಸಲುಗೆಯಿಂದ ಶೇರ್ ಮಾಡುತ್ತಾನೆ.... ಇತರ ಯಾವ ಅಡ್ಮಿನ್ ಗಳು ಕೂಡಾ ಅದರ ಬಗ್ಗೆ ತಲೆ ಕೆಡಿಸುವುದಿಲ್ಲ. ಕನಿಷ್ಠ ಅತ್ತ ನೋಡುವುದೂ ಇಲ್ಲ. ಕೇಳಲು ಹೋದರೆ ಬಿಝಿ”!

ನೆನಪಿಡಿ ಈ ರೀತಿ ಗ್ರೂಪಿಗೆ ಸಂಬಂಧಿಸದ ವಿಚಾರಗಳನ್ನು ತಮ್ಮ ಮೂಗಿನ ಹಾಗೂ ಮೂಡಿನ ನೇರಕ್ಕೆ ಶೇರ್ ಮಾಡುವವರ ಪೈಕಿ ಶೇ.99 ಮಂದಿ ಇಂತಹ ದಿನ ಮೀಟಿಂಗ್ ಇದೆ ಬನ್ನಿ ಅಂತ ಕರೆದರೆ, ಗ್ರೂಪಿನಲ್ಲಿ ಇಂತಹ ಅಭಿವೃದ್ಧಿ ಚಟುವಟಿಕೆಗಳಾಗಿವೆ ಅಂತ ವರದಿ ಹಾಕಿದರೆ ಅದಕ್ಕೆ ಯಾವ ಕಾರಣಕ್ಕೂ ಪ್ರತಿಕ್ರಿಯೆ ಕೊಡುವುದಿಲ್ಲ, ಗ್ರೂಪನ್ನು ಹೇಗೆ ಅಭಿವೃದ್ಧಿಪಡಿಸಬಹುದು ಅಂತ ಪ್ರಶ್ನೆ ಕೇಳಿದರೆ ಅದನ್ನು ನೋಡುವುದೇ ಇಲ್ಲ.... ಎಲ್ಲದಕ್ಕಿಂತ ವಿಪರ್ಯಾಸವೆಂದರೆ ಅವರು ಯಾವತ್ತೂ ಜೀವಮಾನದಲ್ಲಿ ತಮ್ಮದೇ ಆದ ಒಂದು ಗ್ರೂಪನ್ನೇ ಕಟ್ಟಿರುವುದಿಲ್ಲ”!

6)      ಅಷ್ಟು ಹೊತ್ತಿಗೆ ಗ್ರೂಪಿನಲ್ಲಿ ಸದಾ ಮೌನವಾಗಿರುವ ಕೆಲವು ಮಡಿವಂತ ಹಾಗೂ ಹಿರಿಯ ಸದಸ್ಯರಿಂದ ಪ್ರಧಾನ ಅಡ್ಮಿನ್ (ಗ್ರೂಪಿಗೆ ಒತ್ತಾಯದಿಂದ ಅವರನ್ನು ಸೇರಿಸಿದ ತಪ್ಪಿತಸ್ಥ!) ಗೆ ವೈಯಕ್ತಿಕ ಮೆಸೇಜು ಬರುತ್ತದೆ. ಏನ್ರೀ, ಗ್ರೂಪಿನಲ್ಲಿ ಏನು ನಡೀತಾ ಇದೆ. ಹೀಗಾದ್ರೆ ನಮಗೆ ಭಯಂಕರ ಹೆವೀ ಆಗ್ತದೆ, ನಮ್ಮ ಮೊಬೈಲ್ ಹ್ಯಾಂಗ್ ಆಗ್ತದೆ, ಬಾಯಿಗೆ ಬಂದ ಹಾಗೆ ಗ್ರೂಪಿನಲ್ಲಿ ಪೋಸ್ಟು ಬರ್ತಾ ಇದೆ ಅಂತ ಹೇಳ್ತಾರೆ. ಅಷ್ಟು ಹೇಳಿ ಅಷ್ಟು ದಿನಗಳಿಂದ ಗ್ರೂಪಿನಲ್ಲಿದ್ದ ಅವರು ಲೆಫ್ಟ್ ಆಗ್ತಾರೆ. ಇತರ ಅಡ್ಮಿನ್ ಗಳು ತಮಗೂ ಅದಕ್ಕೂ ಸಂಬಂಧವೇ ಇಲ್ಲದ ಹಾಗೆ ಅಂತರ ಕಾಪಾಡ್ತಾರೆ. ನೀವು ಅಸಹಾಯಕರಾಗಿ ಗ್ರೂಪಿನಲ್ಲಿ ಅಸಂಬಂದ್ಧ ಹಾಕಿದ ಪೋಸ್ಟುಗಳನ್ನು ಡಿಲೀಟ್ ಫಾರ್ ಎವ್ರಿವನ್ ಕೊಟ್ಟು ಡಿಲೀಟ್ ಮಾಡ್ತೀರಿ. ಆಗ ತೀವ್ರ ಅಪಮಾನಕ್ಕೆ ಒಳಗಾದ ಆ ಮಹಾನ್ ಸಾಧಕ ತಾನೂ ಲೆಫ್ಟ್ ಆಗ್ತಾನೆ. ಈ ಥರ ಹಲವರು ಗ್ರೂಪು ಬಿಡ್ತಾರೆ.

7)      ನಂತರದ ಹಂತ ಹೊಸವರ್ಷ, ದೀಪಾವಳಿ, ಯುಗಾದಿ ಇತ್ಯಾದಿಗಳು ಬಂದಾಗ ಮೈಮೇಲೆ ಆವೇಶ ಬಂದವರ ಹಾಗೆ ಶುಭಾಶಯಗಳ ಮಹಾ ಪೂರವನ್ನು ಗ್ರೂಪಿನಲ್ಲಿ ಹಾಕುವುದು ಶುರುವಾಗ್ತದೆ. ಇದನ್ನು ಆಕ್ಷೇಪಿಸಿದರೆ, ಅಯ್ಯೋ, ವರ್ಷಕ್ಕೊಂದು ಹಬ್ಬ ಬರುವುದು, ಅದಕ್ಕೆ ಶುಭಾಶಯ ಹಾಕಿದ್ರೂ ನೀವು ನಕ್ಷತ್ರಿಕನ ಹಾಗೆ ಅಡ್ಡ ಗಾಲು ಹಾಕ್ತೀರಲ್ಲ ಅಂತ ಎಲ್ರೂ ಸೇರಿ ಮುಖ್ಯ ಅಡ್ಮಿನ್ ಬಾಯಿ ಮುಚ್ಚಿಸುತ್ತಾರೆ. ಶುಭಾಶಯಗಳ ಮಹಾಪೂರವೇ ಹರಿದು ಬರುತ್ತದೆ. ನಡು ನಡುವೆ ಎಂದಿನ ಹಾಗೆ ಸ್ವರಚಿತ ಕವನಗಳು, ತನಗೆ ಪ್ರಶಸ್ತಿ ಬಂತು, ಅಧ್ಯಕ್ಷನಾಗಿ ಆಯ್ಕೆಯಾದೆ, ನನ್ನ ಕತೆಗೆ ಪ್ರೋತ್ಸಾಹಕರ ಬಹುಮಾನ ಬಂತು ಅಂತ ತಾನೇ ಹಾಕಿಕೊಳ್ಳುವುದು, ಯೂಟ್ಯೂಬ್ ಲಿಂಕ್ ಹಾಕಿ ಲೈಕ್, ಶೇರ್, ಕಮೆಂಟ್ ಮಾಡಿ ಅಂತ ಹಾಕುವು, ಜೋಕು, ತಮಾಷೆ, ಆಹ್ವಾನಪತ್ರಿಕೆಗಳು.... ಅನಿಯಂತ್ರಿತವಾಗಿ ಬರುತ್ತಲೇ ಇರುತ್ತದೆ.... ಅಷ್ಟೊತ್ತಿಗೆ ತಾನು ಯಾಕೆ  ಈ ಗ್ರೂಪು ಕಟ್ಟಿ 500-600 ಜನರನ್ನು ಸೇರಿಸಿದೆ ಎಂಬುದು ಅಡ್ಮಿನ್ ಗೇ ಮರೆತುಹೋಗಲು ಶುರುವಾಗಿರುತ್ತದೆ...!!!

8)      ನಂತರ ಒಬ್ಬ ಶುರು ಮಾಡುತ್ತಾನೆ. ಈ ಗ್ರೂಪನ್ನು ಅಡ್ಮಿನ್ ಓನ್ಲಿ ಮಾಡಿ, ಈ ಮೆಸೇಜುಗಳನ್ನು ಕಂಟ್ರೋಲ್ ಮಾಡಲು ಆಗ್ತಾ ಇಲ್ಲ. ಏನಿದು ಅಂತ. ಈ ನಡುವೆ ಗ್ರೂಪಿನಲ್ಲಿ ಬಣ ರಾಜಕೀಯ, ಚೀಪ್ ಟ್ರಿಕ್ಕುಗಳು ಶುರುವಾಗುತ್ತವೆ. ಕೆಲವರ ಮೆಸೇಜಿಗೆ ಮಾತ್ರ ಥಂಬ್ ಎತ್ತೋದು, ಗ್ರೂಪಿಗೇ ಸಂಬಂಧಿಸಿದ ಗಂಭೀರ ಮೆಸೇಜು ಬಂದರೆ ಕಡೆಗಣಿಸುವುದು, ಮುಖ್ಯ ಅಡ್ಮಿನ್ ಏನು ಸೂಚನೆ ಹಾಕಿದರೂ ಪಾಲಿಸದೇ ಇರುವುದು ಇತ್ಯಾದಿ. ಯಾಕೆಂದರೆ ಅಷ್ಟು ಹೊತ್ತಿಗೆ ಆ ಸಂಘಟನೆಯವರಿಗೆ ಗ್ರೂಪಿನ ಮೂಲಕ ಹಲವು ಮಂದಿಯ ಪರಿಚಯ ಆಗಿರ್ತದೆ. ಮುಂದೆ ಗ್ರೂಪು ಇಲ್ಲದಿದ್ದರೂ ಅಡ್ಡಿ ಇಲ್ಲ ಎಂಬ ಮನೋಭಾವ ಆವರಿಸಿರುತ್ತದೆ. ಮತ್ತು ಕಂಡಾಪಟ್ಟೆ ಶಿಸ್ತಿನ ಬಗ್ಗೆ ಮಾತನಾಡುವ ಗ್ರೂಪು ಕಟ್ಟಿದ ಅಡ್ಮಿನ್ ದೊಡ್ಡ ತಲೆನೋವಾಗಿ ಕಾಡುತ್ತಿರುತ್ತಾನೆ!. ಆತ ಒಮ್ಮೆ ತೊಲಗಿದರೆಸಾಕು ಅಂತ ಒಳಗಿಂದೊಳಗೆ ಯೋಚಿಸ್ತಾ ಇರ್ತಾರೆ.

9)      ಅಸಲಿಗೆ ತುಂಬ ಮಂದಿ ತಾವು ಯಾಕೆ ಗ್ರೂಪಿಗೆ ಸೇರಿದ್ದೇವೆ ಅಂತವೇ ಗೊತ್ತಿರುವುದಿಲ್ಲ. ಶೇ.90 ಮಂದಿ ಯಾರ್ಯಾರದ್ದೊ ಒತ್ತಾಯಕ್ಕೆ ಗ್ರೂಪು ಸೇರಿರುತ್ತಾರೆ. ಅವರು ಆಗಾಗ ಕ್ಲಿಯರ್ ಚಾಟ್ ಕೊಟ್ಟು ಸುಮ್ಮನಿರುತ್ತಾರೆ. ಬಡಪಾಯಿ ಅಡ್ಮಿನ್ ತಾನೇ ಬರೆದು, ತಾನೇ ಓದಿ ಸಮಾಧಾನ ಪಡ್ತಾನೆ. ಯಾರಿಗೂ ಎಲ್ಲವನ್ನೂ ಓದುವ ತಾಳ್ಮೆ, ಆಸಕ್ತಿ ಇರುವುದಿಲ್ಲ. ಗಂಟೆಗಟ್ಟಲೆ ಕ್ರಿಕೆಟ್ ನೋಡಿಯಾರು, ಫೇಸ್ಬುಕ್ಕಿನಲ್ಲಿ ಅಪ್ರಸ್ತುತ ಪೋಸ್ಟುಗಳನ್ನು ಓದಿ ಪ್ಯಾರಾಗಟ್ಟಲೆ ಕಮೆಂಟು ಹಾಕಿಯಾರೂ, ಆದರೆ ತಮ್ಮೂರಿನ, ತಾವು ಕಲಿತ ಶಾಲೆಯ, ತಮ್ಮದೇ ಆಸಕ್ತಿಯ ವಿಚಾರಕ್ಕೆ ರಚನೆಯಾದ ಗ್ರೂಪಿನ ಮೇಲೆ ಕಣ್ಣಾಡಿಸಲು, ಪ್ರತಿಕ್ರಿಯೆ ನೀಡಲು, ಕನಿಷ್ಠ ಥಂಬ್ ಎತ್ತಲು ಶೇ.90ಕ್ಕೂ ಅಧಿಕ ಮಂದಿಗೆ ಆಸಕ್ತಿಯೇ ಇರುವುದಿಲ್ಲ. ಹೀಗಾಗಿ ಯಾವುದೋ ಹಂತದಲ್ಲಿ ಗ್ರೂಪ್ ತನ್ನ ಮೂಲ ಉದ್ದೇಶ ಕಳಕೊಂಡಿರುತ್ತದೆ... ಎಲ್ಲರೂ ಸೇರಿ ಅದಕ್ಕೆ ಸೂಕ್ತ ಆಹಾರ ನೀಡದೆ, ಜಂಕ್ ಫುಡ್ ನೀಡಿ ಅಕ್ಷರಶಃ ಗ್ರೂಪನ್ನು ಕೊಂದಿರುತ್ತಾರೆ”!

10)   ನಂತರ ಮಾಮೂಲಿ... ಹತಾಶ ಅಡ್ಮಿನ್ ಗ್ರೂಪು ತ್ಯಜಿಸುತ್ತಾನೆ. ಅಷ್ಟು ದಿವಸ ಅವನ ಕಿರಿಕಿರಿಯಿಂದ (ಶಿಸ್ತಿನ ಕಟ್ಟುಪಾಡುಗಳಿಂದ) ಬೇಸತ್ತವರು ಒಳಗೊಳಗೇ ಸಂಭ್ರಮಿಸುತ್ತಾರೆ.... ಸ್ವಾತಂತ್ರ್ಯ ಪಡೆದ ನಿರಾಳತೆ ಅನುಭವಿಸುತ್ತಾರೆ. ಗ್ರೂಪು ಮತ್ತಷ್ಟು ಗುಡ್ ಮಾರ್ನಿಂಗ್, ಗುಡ್ ನೈಟ್, ಹ್ಯಾಪ್ಪಿ ಬರ್ತೇ ಡೇ ರಿಪ್ ಗಳಿಂದ ನಳನಳಿಸುತ್ತಿರುತ್ತದೆ.... ಸ್ವಯಂಕೃತಾಪರಾಧಿ ಅಡ್ಮಿನ್ ಇವುಗಳಿಂದ ಪಾಠ ಕಲಿಯದೆ ಮತ್ತೊಂದು ಗ್ರೂಪು ಕಟ್ಟುತ್ತಾನೆ. ಮತ್ತೇನಾಗುತ್ತದೆ... ತಿಳಿಯಲು ಇದೇ ಪಾಯಿಂಟುಗಳನ್ನು ಶುರುವಿನಿಂದ ಓದಿ!

 

ನಾನು ಕೇಳಲು ಇಷ್ಟಪಡುವುದು:
1) ನೀವೊಂದು ಚಂದದ ಮನೆ ಕಟ್ಟಿ ಗೋಡೆಗೆ ಪೈಂಟ್ ಮಾಡಿಸಿರುತ್ತೀರಿ. ನಿಮ್ಮ ಮನೆಯ ಗೋಡೆಯಲ್ಲಿ ಕಂಡ ಕಂಡವರು ಬಂದು ತಮ್ಮಇಷ್ಟದ ಪೋಸ್ಟರ್ ಹಚ್ಚಲು ನೀವು ಬಿಡ್ತೀರಾ.... ಇಲ್ವಲ್ವ. ಹಾಗಿದ್ದರೆ ಯಾರೋ ಶ್ರಮವಹಿಸಿಕಟ್ಟಿದ ವಾಟ್ಸಪ್ ಗ್ರೂಪಿನಲ್ಲಿ ಪ್ರವೇಶ ಪಡೆದು ಯಾಕೆ ನಿಮ್ಮ ವೈಯಕ್ತಿಕ ಪ್ರಚಾರಕ್ಕೆ ಗ್ರೂಪನ್ನು ಬಳಸ್ತೀರಿ...
? ನಿಮ್ಮ ಕವನ ಓದಲು, ನಿಮ್ಮ ಪ್ರಶಸ್ತಿ ಪತ್ರ ವಾಚಿಸಲು, ನಿಮ್ಮ ಊರಿನ ಸಮಾರಂಭಕ್ಕೆ ಪ್ರಚಾರ ನೀಡಲು ಆ ಗ್ರೂಪು ಕಟ್ಟಿಲ್ಲ, ಯಾವುದೋ ಬೇರೆ ಕಾರಣಕ್ಕೆ ಗ್ರೂಪು ಮಾಡಿದ್ದಾರೆ. ನಾನದನ್ನು ನನ್ನ ಸ್ವಾರ್ಥಕ್ಕೆ ಬಳಸಬಾರದು ಅಂತ ಸುಶಿಕ್ಷಿತರು ಅನ್ನಿಸಿಕೊಂಡ ನಿಮಗೆ ಯಾಕೆ ತಿಳಿಯುವುದಿಲ್ಲ? ನಾಚಿಕೆ ಆಗುವುದಿಲ್ವೇ, ಯಾರದ್ದೋ ವೇದಿಕೆಯಲ್ಲಿ ಹೋಗಿ ಕುಣಿಯಲು.

2) ಜಗತ್ತಿನಲ್ಲಿ ಎಲ್ಲರ ಪಾಲಿಗೂ ಒಳ್ಳೆಯವರಾಗಿ ಬದುಕಲು ಅಸಾಧ್ಯ. ಶಿಸ್ತು, ನಿಯಮ, ಕಟ್ಟುಪಾಡು, ಗುರಿ ಇಲ್ಲದೆ ಮಾಡುವ ಯಾವುದೇ ಕಾರ್ಯ ಯಶಸ್ವಿಯಾಗದು. ವಾಟ್ಸಪ್ ಗ್ರೂಪೂ ಅಷ್ಟೇ. ಗ್ರೂಪಿಗೆ ಸಂಬಂಧಪಡದ ವಿಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೆಸೆಯಬೇಕು. ಅದು ಕೇವಲ ಗ್ರೂಪು ಕಟ್ಟಿದ ಬಡಪಾಯಿಯ ಹೊಣೆಯಲ್ಲ, ಗ್ರೂಪಿನ ಪ್ರಯೋಜನ ಪಡೆಯುವ ಪ್ರತಿಯೊಬ್ಬರ ಹೊಣೆ. ಎಲ್ಲ ಮರೆತು ಎಲ್ಲ ಕಷ್ಟಗಳನ್ನು ಗ್ರೂಪಿನ ಪ್ರಧಾನ ಅಡ್ಮಿನ್ ತಲೆಗೆ ಕಟ್ಟಿ ನಿರಾಳವಾಗಿರಲು ಅವನೇನು ಮಾಡಲು ಕೆಲಸ ಇಲ್ಲ ಎಂದು ಗ್ರೂಪು ಕಟ್ಟಿರಿರುವುದಲ್ಲ ಎಂಬ ಕನಿಷ್ಠ ಪ್ರಜ್ಞೆ ಬೇಕು.

3) ವಾಟ್ಸಪ್ ಗ್ರೂಪೆಂದರೆ ಹಾಸ್ಯಾಸ್ಪದ ಸಂಗತಿ, ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಚಾರವಲ್ಲ, ಎಷ್ಟೆಂದರೂ ಅಷ್ಟೇ ಎಂಬ ಉಡಾಫೆಯ ಧೋರಣೆಯನ್ನು ಹುಟ್ಟಿಹಾಕಿದವರು ನಾವೇ... ಈ ರೀತಿ ಬೇಜಾವಾಬ್ದಾರಿಯಿಂದ ವರ್ತಿಸುವ ಮೂಲಕ ಒಂದು ಘನ ಉದ್ದೇಶ ಹಾಳುಗೆಡಹುತ್ತಿದ್ದೇವೆ, ಚಂದದ ಸಾರ್ವಜನಿಕ ಪ್ರದೇಶವನ್ನು ಕಸದ ಕೊಂಪೆ ಆಗಿಸುತ್ತಿದ್ದೇವೆ ಅಂತ ನಿಮಗೆ ಪಶ್ಚಾತ್ತಾಪ ಆಗುವುದಿಲ್ಲವೇ...?

 

ಅಪ್ಪಿತಪ್ಪಿ ಕೊನೆಯ ತನಕ ಯಾರಾದರೂ ಓದಿದ್ದರೆ... ಅವರಿಗೆ ಹೇಳುವುದು. ಯಾವುದೇ ಸಂಘಟನೆ, ಸಂಸ್ಥೆ, ಉದ್ದೇಶಗಳ ಕುರಿತು ವಾಟ್ಸಪ್ ಗ್ರೂಪು ಮಾಡಹೊರಟಾಗ ಅತಿ ಭಾವುಕತೆ, ನಿರೀಕ್ಷೆ, ತ್ಯಾಗ ಬೇಡ. ಅವುಗಳಿಗೆ ಬೆಲೆ ಇಲ್ಲ. ನಿಮಗಿರುವ ಗಂಭೀರತೆ ಎಲ್ಲರಿಗೂ ಇದ್ದಾಗ ಮಾತ್ರ ಗ್ರೂಪು ಯಶಸ್ವಿಯಾಗುತ್ತದೆ.ಇಲ್ಲವಾದರೆ ನಿಮ್ಮನ್ನು ವ್ಯವಸ್ಥೆ ಒಂದು ಹಂತದ ವರೆಗೆ ಬಳಸಿಕೊಳ್ಳುತ್ತದೆ. ನಂತರ ನಿಮ್ಮ ನಿರ್ಗಮನವನ್ನು ಕಾಯುತ್ತದೆ, ಬಳಿಕ ನಿಮ್ಮನ್ನು ಮರೆತುಬಿಡುತ್ತದೆ. ನೀವು ನೀಡಿದ ಸಮಯ, ತೊಡಗಿಸಿದ ಶ್ರಮ ಹಾಗೂ ಅನುಭವಿಸಿದ ಮಾನಸಿಕ ಒತ್ತಡವನ್ನು ನೆನಪಿಟ್ಟು ಯಾರೂ ನಿಮಗೆ ಮರಣೋತ್ತರವಾಗಿ ಶೌರ್ಯ ಪ್ರಶಸ್ತಿ ನೀಡುವುದಿಲ್ಲ. ತೋರಿಕೆಗೆ ನಾಲ್ಕು ಒಣ ಹೊಗಳಿಕೆ ನೀಡಿಯಾರು ಅಷ್ಟೇ... ಸತ್ತ ಬಳಿಕವೂ ಅಷ್ಟೇ... ನೀನಿಷ್ಟು ವಾಟ್ಸಪ್ ಗ್ರೂಪು ನಡೆಸಿದ್ದೀಯ,ಗ್ರೇಟ್.... ನೇರ ಸ್ವರ್ಗಕ್ಕೇ ನಡೆ ಅಂತ ಯಮಧರ್ಮ ಕಳಿಸಿಯಾನು ಅಂತ ಯಾವ ಗ್ಯಾರಂಟಿಯೂ ಇಲ್ಲ.!

ಹಾಗಾಗಿ ಮುಂದಿನ ಬಾರಿ ನಾನು ವಾಟ್ಸಪ್ ಗ್ರೂಪು ಕಟ್ತೇನೆ ಅಂತ ಆವೇಶದಿಂದ ಹೊರಡುವ ಮೊದಲು ಸ್ವಲ್ಪ ಯೋಚಿಸಿ... ಮತ್ತೆ ಮುಂದುವರಿಯಿರಿ... ಸಲಹೆ ಅಷ್ಟೇ.. ಸೂಚನೆ ಅಲ್ಲ!

-ಕೃಷ್ಣಮೋಹನ ತಲೆಂಗಳ (13.02.2023).

No comments:

Popular Posts