ಇದೆಲ್ಲ ಆಗಿ 20 ವರ್ಷಗಳೇ ಕಳೆದು ಹೋದವು...! ನೆನಪುಗಳು ಅಷ್ಟೊಂದು ಹಳತಾಗಿಲ್ಲ...
2000ನೇ ಸಾಲಿನಲ್ಲಿ ವಿ.ವಿ.ಕಾಲೇಜಿನಲ್ಲಿ ಬಿಕಾಂ ಮುಗಿದ ಬಳಿಕ ಮುಂದೆ ಎಂತ
ಮಾಡುವುದು ಅಂತ ಯಾವುದೇ ಕಲ್ಪನೆ ಕನಸು ಇರಲಿಲ್ಲ. ಬಿ.ಕಾಂ. ಮೆಷ್ಟ್ರಾಗಿದ್ದ ಡಾ.ಉದಯಕುಮಾರ್ ಸರ್
ಹಾಗೂ ಸುಧಾ ಮೇಡಂ ಒಮ್ಮೆ ಕರೆದು ಹೇಳಿದ್ರು, “ನೀನು ವಾಲ್ ಮ್ಯಾಗಝೀನ್ ಗೆ ಬರೀತಿ ಅಲ್ವ, ಕೊಣಾಜೆಯಲ್ಲಿ
ಎಂಸಿಜೆ ಅಂತ ಕೋರ್ಸ್ ಇದೆ ಟ್ರೈ ಮಾಡು ಅಂತ”. ಅಲ್ಲಿಯವರೆಗೂ ಬಿ.ಕಾಂ ಮುಗಿಸಿ ಎಂತ ಮಾಡುವುದು
ಎಂದು ಯೋಚಿಸಿಯೇ ಇರಲಿಲ್ಲ! ಹಾಗೊಂದು ಕೋರ್ಸು ಉಂಟತ ಸಹ ನನಗೆ ಗೊತ್ತೇ ಇರಲಿಲ್ಲ.
ಪತ್ರಿಕೆಗಳನ್ನೇ ಸರಿಗಟ್ಟು ಓದದೇ ಇದ್ದ ನನಗೆ ಪತ್ರಿಕೆಗಳು ಹೊರ ಬರಬೇಕಾದರೆ ದಿನಾ ಕಚೇರಿಗಳಲ್ಲಿ
ಪತ್ರಕರ್ತರು ಕೆಲಸ ಮಾಡಬೇಕಾಗ್ತದೆ ಅನ್ನುವ ಕಲ್ಪನೆಯೂ ಇರಲೇ ಇಲ್ಲ.
ಹೇಗೂ ಮನೆ ಸಮೀಪವೇ ವಿಶ್ವವಿದ್ಯಾನಿಲಯ ಇದ್ದ ಕಾರಣ
ಸ್ನಾತಕೋತ್ತರ ಮಾಡುವ ಉತ್ಸಾಹದಲ್ಲಿ ಎಂಕಾಂ ಹಾಗೂ ಎಂಸಿಜೆ (ಮಾಸ್ಟರ್ ಆಫ್ ಮಾಸ್ ಕಮ್ಯೂನಿಕೇಶನ್
ಆಂಡ್ ಜರ್ನಲಿಸಂ) ಎರಡಕ್ಕೂ ಅರ್ಜಿ ಗುಜರಾಯಿಸಿದ್ದಾಯಿತು. ಡಿಗ್ರಿಯಲ್ಲಿ ಉಲ್ಲೇಖಾರ್ಹ ಮಾರ್ಕು
ಇರಿಲ್ಲ. ಅದೃಷ್ಟವೋ, ದುರಾದೃಷ್ಟವೋ ಎಂ.ಕಾಂ.ನ ಮೆರಿಟ್ ಲಿಸ್ಟಿನಲ್ಲಿ ನನ್ನ ಹೆಸರು 19ನೇ
ಸ್ಥಾನದಲ್ಲಿತ್ತು. ಎಂಸಿಜೆಗೆ ಪ್ರವೇಶ ಪರೀಕ್ಷೆ ಇತ್ತು, ಅದನ್ನು ಬರೆದ ಬಳಿಕ ಮೆರಿಟ್ ಗೆ ಇದ್ದ
5 ಸೀಟುಗಳ ಪೈಕಿ ನನ್ನದು 3ನೇ ಅಥವಾ 4ನೇ ವೇಟಿಂಗ್ ಲಿಸ್ಟಿನಲ್ಲಿತ್ತು. ಆಗ ಎಂಸಿಜೆಗೆ ಇದ್ದದ್ದೇ
11 ಅಥವಾ 12 ಸೀಟುಗಳು ಅಂತ ನೆನಪು. ಅಂತೂ ಇಂತೂ ವೇಟಿಂಗ್ ಲಿಸ್ಟಿನಲ್ಲಿದ್ದ ಪುಣ್ಯಾತ್ಮರ ಪೈಕಿ
ಮೊದಲಿನವರು ಬಾರದೇ ಇದ್ದ ಕಾರಣ ಕ್ಲೈಮಾಕ್ಸಿನಲ್ಲಿ ಪತ್ರಿಕೋದ್ಯಮ ವ್ಯಾಸಂಗಕ್ಕೆ ಸೀಟು
ಸಿಕ್ಕಿತು.
ನಂತರ ಭಾಷೆಯ ಸಮಸ್ಯೆ. ಇಂಗ್ಲಿಷ್ ಅಂದ್ರೆ ಭಯ! ಅಡ್ಮಿಶನ್ ಆಗುವ ಮೊದಲು ವಿಭಾಗ ಮುಖ್ಯಸ್ಥರಾದ
ಡಾ.ಕೆ.ವಿ.ನಾಗರಾಜ್ ಸರ್ ಅವರನ್ನು ಭೇಟಿ ಮಾಡಲು ಒಂದು ಸಂಜೆ ಹೋದೆ. ಅವರು ಡೆಕ್ಕನ್ ಹೆರಾಲ್ಡ್
ಓದ್ತಾ ಇದ್ರು. ಸರ್, ನನಗೆ ಇಂಗ್ಲಿಷ್ ಸಮಸ್ಯೆ ಇದೆ, ಇಂಗ್ಲಿಷ್ ಮೇಲೆ ಹಿಡಿತ ಇಲ್ಲ, ಈಗ ಇಲ್ಲಿ
ಸೀಟು ಸಿಕ್ಕಿದೆ, ಎಂತ ಮಾಡುವುದು ಅಂತ ಅಳಲು ತೋಡಿಕೊಂಡೆ. ಅವರು ಧೈರ್ಯ ತುಂಬಿದರು.
ನೋಡ್ಯಪ್ಪ, ಭಾಷೆ ಯಾವುದಾದರೂ ಪರ್ವಾಗಿಲ್ಲ. ಒಂದು
ಭಾಷೆಯ ಮೇಲೆ ಸರಿಯಾದ ಹಿಡಿತ ಇರಲಿ. ಎರಡೂ ದೋಣಿಗೆ ಕಾಲಿರಿಸುವುದು ಸೂಕ್ತ ಅಲ್ಲ, ಬೇಕಾದ ಭಾಷೆ
ಆರಿಸಿ. ನೀವು ಕನ್ನಡದಲ್ಲೂ ಬರೆಯಬಹುದು ಅಂತ ತಿಳಿ ಹೇಳಿದರು.
ಸರಿಯೋ ತಪ್ಪೋ, ಗೊತ್ತಿಲ್ಲ. ಅವತ್ತೇ ತೀರ್ಮಾನ
ಮಾಡಿದೆ, ಎಂತ ಬರೆದರೂ ಅದು ಕನ್ನಡದಲ್ಲೇ ಅಂತ. ಮೊದಲಿನಿಂದಲೂ ಇಂಗ್ಲಿಷ್ ಗ್ನಾನ (ಜ್ಞಾನ)
ಅಷ್ಟಕ್ಕಷ್ಟೇ ಇದ್ದ, ಕಾರಣ, ಡಿಗ್ರಿ ವರೆಗೂ ನನಗೆ ಗೊತ್ತಿದ್ದ ಇಂಗ್ಲಿಷಿನಲ್ಲೇ ಪರೀಕ್ಷೆ ಬರೆದು
ಪಾಸಾಗುತ್ತಾ ಬಂದರೂ, ಸ್ನಾತಕೋತ್ತರದಲ್ಲೂ ನನ್ನ ಅತ್ಯಪೂರ್ವ ಇಂಗ್ಲಿಷ್ ಜ್ಞಾನ ಪ್ರಯೋಗಕ್ಕೆ
ಒಡ್ಡುವ ಧೈರ್ಯ ಇರಲಿಲ್ಲ.
ಅಲ್ಲಿಂದ ಶುರು. ಪರೀಕ್ಷೆ, ಕ್ಲಾಸ್ ಟೆಸ್ಟು, ಅಸೈನ್
ಮೆಂಟ್,ಕ್ಲಾಸ್ ಪ್ರೆಸೆಂಟೇಶನ್, ಸೆಮಿನಾರು, ಕೊನೆಗೆ ಡೆಸರ್ಟೇಶನ್ ಸಮೇತ ಇಂಗ್ಲಿಷಿನಲ್ಲೇ
ಬರೆದೆ... ನಮ್ಮ ಕ್ಲಾಸಿನಲ್ಲಿ ಆಗ 12 ಮಂದಿ ಇದ್ರು ಅಂತ ನೆನಪು. ಎಂಸಿಜೆಯ ಎರಡೂ ವರ್ಷ ಇರುವ
ಎಲ್ಲವನ್ನೂ ಕನ್ನಡದಲ್ಲೇ ಬರೆದು ಕೊನೆಗೆ ಕೋರ್ಸ್ ಮುಗಿಯುವಾಗ ಅತಿ ಹೆಚ್ಚು ಅಂಕ ಗಳಿಸಿ, ಚಿನ್ನದ
ಪದಕ ಪಡೆಯಲು ಸಾಧ್ಯವಾದದ್ದು ಖಂಡಿತಾ ನಿರೀಕ್ಷಿತ ಆಗಿರಲಿಲ್ಲ ಹಾಗೂ ಅದೊಂದು ವಿಚಿತ್ರವಾಗ ಖುಷಿ
ಎನ್ನುವುದು ಈ ಬರಹದ ತಾತ್ಪರ್ಯ. ಎಂಸಿಜೆಯಲ್ಲಿ ನನ್ನ ತರಗತಿಯಲ್ಲಿ ನನಗೆ ಥಿಯರಿಗಳಲ್ಲಿ ಅತಿ
ಹೆಚ್ಚು ಅಂಕ (ಶೇ.64 ಅಂತ ನೆನಪು) ಪಡೆದ ಕಾರಣಕ್ಕೆ ಸಹಜವಾಗಿ ನಾನು ಪ್ರಥಮ ರಾಂಕ್
ವಿದ್ಯಾರ್ಥಿಯಾದೆ ಹಾಗೂ ಚಿನ್ನದ ಪದಕ ಸಿಕ್ಕಿತು. ಅದು ಸಿಕ್ಕಿ ಇಂದಿಗೆ (15.02.2023) 20 ವರ್ಷ
ಪೂರ್ಣವಾಯಿತು. ಇದೇ 15.02.2003ರಂದು ನಡೆದ ಮಂಗಳೂರು ವಿ.ವಿ. ಘಟಿಕೋತ್ಸವದಲ್ಲಿ ಅಂದಿನ
ರಾಜ್ಯಪಾಲರಾಗಿದ್ದ ಟಿ.ಎನ್. ಚತುರ್ವೇದಿ ಅವರಿಂದ ಪದಕ ಪಡೆಯುವ ಅವಕಾಶ ಸಿಕ್ಕಿತು. (ಅವರು ಕೆಲ
ಸಮಯದ ಹಿಂದೆ ತೀರಿ ಹೋದರು. ನಮಗೆ ಫೋಟೋಗ್ರಫಿ ಪ್ರಾಕ್ಟಿಕಲ್ ಕ್ಲಾಸ್ ಮಾಡ್ತಾ ಇದ್ದ, ಕಾನ್ವಕೇಶನ್ ಸರ್ಟಿಫಿಕೇಟ್ ಗಳಲ್ಲಿ ವಿವರಗಳನ್ನು ಚಂದದ ಕೈಬರಹದಲ್ಲಿ ಬರೆಯುತ್ತಿದ್ದ ಕೆ.ವಿ.ರಾವ್ ಸರ್ ಸಹ ಕೆಲ ಸಮಯದ ಹಿಂದೆ ತೀರಿ ಹೋದರು.).
ಅದಕ್ಕಂತಲೇ ವೈಟ್ ಆಂಡ್ ವೈಟ್ ಬಟ್ಟೆ ಧರಿಸಿದ್ದು, ಆಗ
ನಾನು ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ನಾಲ್ಕು ತಿಂಗಳಷ್ಟೇ ಆಗಿದ್ದು, ನಮ್ಮ ಪತ್ರಿಕೆಯ
ಮುಖಪುಟದಲ್ಲೇ ನನ್ನ ಫೋಟೋ ಪ್ರಕಟಿಸಿದ್ದು, ಮರುದಿನ ಎಲ್ಲ ಪತ್ರಿಕೆಗಳಲ್ಲಿ ಫೋಟೋ ಬಂದದ್ದು,
ನಾನಾಗ ಮಂಗಳೂರು ಆಕಾಶವಾಣಿಯ ಯುವವಾಣಿ ವಿಭಾಗದಲ್ಲಿ ತಾತ್ಕಾಲಿಕ ನಿರೂಪಕನಾಗಿಯೂ ಕೆಲಸ ಮಾಡ್ತಾ
ಇದ್ದು, ನನ್ನ ನೆಚ್ಚಿನ ಶ್ರೀನಿವಾಸ ಪ್ರಸಾದ್ ಅವರು ಪದಕ ಪಡೆದ ಖುಷಿಗೆ ಸಂದರ್ಶನ ಮಾಡಿ ಅದು
ರೇಡಿಯೋದಲ್ಲಿ ರಾತ್ರಿ 7.45ಕ್ಕೆ ಪ್ರಸಾರ ಆಗಿದ್ದೆಲ್ಲ ಚಂದದ ನೆನಪುಗಳು... ಇಂತಹ ಖುಷಿ
ಬದುಕಿನಲ್ಲಿ ಯಾವತ್ತೋ ಒಮ್ಮೆ ಸಿಗ್ತದೆ ಹಾಗೂ ಮತ್ತೊಮ್ಮೆ ಪಡೆಯಲು ತುಂಬ ಕಷ್ಟವಾಗಿದ್ದೂ
ಆಗಿರುತ್ತದೆ ಅಂತ ನನ್ನ ಅನಿಸಿಕೆ.
ಬುದ್ಧಿವಂತ ಎಂಬ ಹೆಗ್ಗಳಿಕೆಗೆ ಪದಕ ಸಿಕ್ಕಿದ ಭ್ರಮೆ
ಇಲ್ಲ:
ಹಾಗಂತ ನಾನು ಸರ್ವಶ್ರೇಷ್ಠ ನಿರ್ವಹಣೆಯ
ವಿದ್ಯಾರ್ಥಿಯೂ, ಅತೀ ಬುದ್ಧಿವಂತನೂ, ಚುರುಕುಮತಿಯೂ ಆಗಿದ್ದೆ, ಅದಕ್ಕೇ ಚಿನ್ನದ ಪದಕ ಸಿಕ್ಕಿತು
ಅಂತವೂ ಅಲ್ಲ. ನಾನು ಟಾಪರ್ ಆಗಿದ್ದು, ಹೆಚ್ಚು ಮಾರ್ಕು ಸಿಕ್ಕಿದ ಕಾರಣಕ್ಕೆ ನನಗೆ ಪದಕ ಸಿಕ್ಕಿತು
ಹೊರತು ನನ್ನ ಸಹಪಾಠಿಗಳು ಯಾರೂ ನನಗಿಂತ ನಿರ್ವಹಣೆಯಲ್ಲಿ ಕನಿಷ್ಠರಲ್ವೇ ಅಲ್ಲ. ಯಾರೂ ದಡ್ಡರೂ ಅಲ್ಲ.
ಅವರೆಲ್ಲರೂ ಚುರುಕಾಗಿದ್ದರು. ನನಗಿಂತ ಹೆಚ್ಚಿನ ಚಾಕಚಕ್ಯತೆಗಳನ್ನು ಹೊಂದಿದ್ದರು. ವಿವಿಧ
ಮಾಧ್ಯಮ ಕ್ಷೇತ್ರಗಳಲ್ಲಿ ಈಗ ಉತ್ತಮ ಹುದ್ದೆಗಳಲ್ಲಿದ್ದಾರೆ, ನನಗಿಂತ ಚೆನ್ನಾಗಿ ವೃತ್ತಿ
ನಿಭಾಯಿಸುತ್ತಿದ್ದಾರೆ, ಯಶಸ್ಸು ಗಳಿಸಿದ್ದಾರೆ ಸಹ. ಹಾಗೆ ನೋಡುವುದಕ್ಕೆ ಹೋದರೆ
ಪತ್ರಿಕೋದ್ಯಮದಲ್ಲಿ ಟಾಪರ್ ಆಗುವುದು, ಪಡೆದ ಮಾರ್ಕ್ ಇದೆಲ್ಲ ಮಾಧ್ಯಮ ರಂಗದ ವೃತ್ತಿ ಬದುಕಿಗೆ
ಯಾವುದೇ ಪ್ರಯೋಜನ ಆಗುವುದಿಲ್ಲ, ಮಾರ್ಕು ನೋಡಿ ಯಾರೂ ಕೆಲಸ ಕೊಡುವುದೂ ಇಲ್ಲ. ಮಾರ್ಕ್ ಪಡೆದವ
ಮಾತ್ರ ಯಶಸ್ವಿ ಪತ್ರಕರ್ತ ಆಗುತ್ತಾನೆ ಅಂತ ಅರ್ಥವೂ ಅಲ್ಲ. ಇಂಗ್ಲಿಷ್ ಭಯದಿಂದ ಕೋರ್ಸ್ ಮಾಡಲೇ
ಅಂಜಿಕೆ ಇದ್ದ ನನಗೆ ಆ ಎರಡು ವರ್ಷಗಳಲ್ಲಿ ಕನ್ನಡದಲ್ಲೇ ಬರೆದೂ ಹೆಚ್ಚು ಮಾರ್ಕು ಪಡೆಯಲು
ಸಾಧ್ಯವಾಗಿದ್ದಕ್ಕೆ ಖುಷಿ ಇದೆ. ಅದರ ಮೆಲುಕು ಅಷ್ಟೇ...
ಜೊತೆಗೇ ಕಲಿತ ದೀಪ್ತಿ ಶ್ರೀಧರ್ (ಸೆಕೆಂಡ್ ಟಾಪರ್),
ಅಂಬರೀಷ್, ರಾಘವೇಂದ್ರ ಕಾಮತ್, ವೇಣು ವಿನೋದ್, ಸದಾಶಿವ, ಸೌಮ್ಯ, ಸುಪ್ರಭ, ಖಾದರ್ ಶಾ (ಈಗ
ವಾರ್ತಾಧಿಕಾರಿ), ಕಿರಣ್ ಸಿರ್ಸೀಕರ್, ಲೋಕೇಶ್ ನೀರಬಿದಿರೆ, ಸುಶಿಲೇಂದ್ರ ಎಲ್ರೂ ಬೇರೆ ಬೇರೆ
ಮಾಧ್ಯಮಗಳಲ್ಲಿ ವೃತ್ತಿ ನಿರತರು. ಈ ಪೈಕಿ ನಾನು, ಲೋಕೇಶ್, ಕಿರಣ್ ಹಾಗೂ ಸುಪ್ರಭ ಮಾತ್ರ
ಕನ್ನಡದಲ್ಲಿ ಪರೀಕ್ಷೆ ಬರೆದವರು. ಕ್ಲಾಸಿನಲ್ಲಿ ಹೇಳಿದ ಪಾಯಿಂಟುಗಳ ತರ್ಜುಮೆ, ಪಠ್ಯ ಪುಸ್ತಕದ
ತರ್ಜುಮೆ, ಲೇಖನಗಳ ತರ್ಜುಮೆ, ನಂತರ ಎಲ್ಲ ಶೇರಿಂಗ್... ಹಾಗೂ ಹೀಗೂ ಕನ್ನಡದಲ್ಲೇ ಬರೆಯಲು
ಎಲ್ಲವೂ ನೆರವಾಯಿತು. ಇದರಿಂದಾಗಿ ನನ್ನ ಇಂಗ್ಲಿಷ್ “ಇಂಪ್ರೂವ್” ಆಗಬಹುದಾಗಿದ್ದ ಸದಾವಕಾಶ ತಪ್ಪಿ ಹೋಯಿತು. ಕನ್ನಡವೇ
ನನ್ನ ಪಾಲಿಗೆ ಗಟ್ಟಿಯಾಯಿತು! ಅದಕ್ಕೋ ಏನೋ “ಕನ್ನಡ”ಪ್ರಭದಲ್ಲೇ ಕೆಲಸವೂ ಸಿಕ್ಕಿತು.
ವಾಸ್ತವದಲ್ಲಿ ಸ್ನಾತಕೋತ್ತರ ವ್ಯಾಸಂಗ ಇತರ
ವ್ಯಾಸಂಗಗಳಿಗಿಂತ ತುಂಬ ಭಿನ್ನವಾಗಿರುತ್ತದೆ. ಕೊಣಾಜೆ ಮಂಗಳಗಂಗೋತ್ರಿಯ ಕ್ಯಾಂಪಸ್ಸಿನಲ್ಲಿ
ಎಂಸಿಜೆಗೆ ಸೇರಿದ್ದ ನಮ್ಮಲ್ಲಿ ಬಹುತೇಕರಿಗೆ ಸೇರಿದ ಆರಂಭದ 2 ತಿಂಗಳು ಯಾಕಾದರೂ ಇಲ್ಲಿಗೆ
ಬಂದೆವೋ ಅಂತ ಟೆನ್ಶನ್, ವೈರಾಗ್ಯ ಮೂಡಿತ್ತು. ಅಲ್ಲಿನ ಕ್ಲಾಸುಗಳು, ಪ್ರಾಕ್ಟಿಕಲ್, ದೊಡ್ಡ
ಲೈಬ್ರೆರಿ, ದಪ್ಪ ದಪ್ಪ ರೆಫರೆನ್ಸ್ ಪುಸ್ತಕಗಳು, ಆರಂಭದಲ್ಲಿ ಸೀನಿಯರ್ ಗಳ ಬಿಗು ಪ್ರವೃತ್ತಿ
ಇವೆಲ್ಲ ಕಂಗೆಡಿಸಿತ್ತು. ಹೋಗ್ತಾ ಹೋಗ್ತಾ ಎಲ್ಲ ರೂಢಿಯಾಯಿತು. 2 ವರ್ಷದ ಕೋರ್ಸ್ ಮುಗಿಯುವ
ಹೊತ್ತಿಗೆ ನಾವೆಲ್ಲ ಮಾನಸಿಕವಾಗಿ ಪತ್ರಕರ್ತರೇ ಆಗಿದ್ದೆವು.
ಆರಂಭದ ವೆಲ್ಕಂ ಡೇ, ಬಳಿಕ ಸೀನಿಯರುಗಳಿಂದ ನೋಟ್ಸುಗಳ
ವಿನಿಮಯ, ಕ್ಲಾಸ್ ಸೆಮಿನಾರ್, ಅಸೈನ್ ಮೆಂಟ್, ಫೋಟೋಗ್ರಫಿ, ಲ್ಯಾಬ್ ಜರ್ನಲ್, ದಿನಾ ಪಿಟಿಐ ಕಾಪಿ
ನೋಡಿ ಮಾಡುತ್ತಿದ್ದ ಭಿತ್ತಿ ಪತ್ರಿಕೆ, ಸಮಾರಂಭಗಳ ವರದಿ ಎಲ್ಲವೂ ಹೋಗ್ತಾ ಹೋಗ್ತಾ ರೂಢಿಯಾಯಿತು.
ಎರಡನೇ ವರ್ಷ ಪೂರ್ಣಾನಂದ ಸರ್ ನಮ್ಮನ್ನು
ಕುದುರೇಮುಖದ ಗಂಗಡಿಕಲ್ಲಿಗೆ ಚಾರಣ ಕರ್ಕೊಂಡು ಹೋದದ್ದು, ನಾವೇ ಬೇಕಲ ಕೋಟೆಗೆ ಹೋದದ್ದು,
ಪ್ರೊ.ನಾಗರಾಜ್ ಸರ್ ಗೋವಾಗೆ ಶೈಕ್ಷಣಿಕ ಪ್ರವಾಸ ಕರ್ಕೊಂಡು ಹೋದದ್ದು, ಮತ್ತೆ ವಾರ್ತಾ ಇಲಾಖೆಯ
ಸರ್ವೇಗೆ ಬಂಟ್ವಾಳ, ಬೆಳ್ತಂಗಡಿ ಭಾಗದ ಬೇರೆ ಬೇರೆ ಹಳ್ಳಿಗಳಿಗೆ ಒಟ್ಟಾಗಿ ತೆರಳಿದ್ದು ಎಲ್ಲ
ಯಾವತ್ತೂ ನೆನಪಿರುವ ಅನುಭವಗಳು.
ಎರಡನೇ ವರ್ಷದಲ್ಲಿ ಮಾಡಿದ ಡೆಸರ್ಟೇಶನ್
(ಸ್ನಾತಕೋತ್ತರ ವ್ಯಾಸಂಗ ಆಂಶಿಕ ಅವಶ್ಯಕತೆಯ ಪೂರಕ ಮಹಾ ಪ್ರಂಬಧ ಮಂಡನೆ), ವಿಜಯಕರ್ನಾಟಕದಲ್ಲಿ
ಇಂಟರ್ನ್ ಶಿಪ್, ಅದಕ್ಕೂ ಮೊದಲು 2ನೇ ವರ್ಷಕ್ಕೂ ಆರಂಭದ ಮೊದಲು ವೇಣುವಿನೋದ್ ಹಾಗೂ ಸುಶಿಲೇಂದ್ರನ ಜೊತೆ ಮಂಗಳೂರು ಆಕಾಶವಾಣಿಯಲ್ಲಿ
ಇಂಟರ್ನ್ ಶಿಪ್ ಮಾಡಿದ್ದು (ಸಿ.ಯು.ಬೆಳ್ಳಕ್ಕಿ ಹಾಗೂ ಅಬ್ದುಲ್ ರಷೀದ್ ಸರ್ ಮಾರ್ಗದರ್ಶನದಲ್ಲಿ) ಎಲ್ಲ
ನಮ್ಮನ್ನು ಹೋಗ್ತಾ ಹೋಗ್ತಾ ಮಾಧ್ಯಮರಂಗದ ಕಡೆಗೆ ನಮಗರಿವಿಲ್ಲದ ಹಾಗೇ ತಿರುಗುವ ಹಾಗೆ ಮಾಡಿತು.
ಹಾಗಾಗಿ ಕೋರ್ಸ್ ಮುಗಿದ ಬಳಿಕ ನಾವೆಲ್ಲ ಸಹಜವಾಗಿ
ಬೇರೆ ಬೇರೆ ಮಾಧ್ಯಮಗಳಲ್ಲಿ ಕೆಲಸಕ್ಕೆ ಸೇರಿದೆವು ಹಾಗೂ ಅದರಲ್ಲೇ ಇದ್ದೇವೆ.
ನಾವು ಪತ್ರಿಕೋದ್ಯಮ ಕಲಿತು 21 ವರ್ಷ ಆಗ್ತಾ ಬಂತು.
ಆಗಷ್ಟೇ ಮೊಬೈಲು, ಇಂಟರ್ ನೆಟ್, ಡಿಜಿಟಲ್ ಕ್ಯಾಮೆರಾ ಬಂದ ಕಾಲವರು (2002) ಈ ಎರಡು ದಶಕದಲ್ಲಿ
ಇಷ್ಟು ಬದಲಾವಣೆಗಳು ಇಡೀ ಮಾಧ್ಯಮ ರಂಗದ ಸ್ವರೂಪ ಬದಲಾಯಿಸಿದೆ. ಆಗ ಕಲಿತ ವಿಚಾರಗಳ ಪೈಕಿ
ಬಹಳಷ್ಟು ಈಗ ಪ್ರಾಕ್ಟಿಕಲ್ ಆಗಿ ಇಲ್ಲ. ಹಾಗಂತ ಎಲ್ಲವೂ ವೇಸ್ಟೂ ಸಹ ಅಲ್ಲ. ಹಳೆ ಬೇರು, ಹೊಸ
ಚಿಗುರು ಬೇಕು. ನಾವು ಕೆಲಸಕ್ಕೆ ಬಂದಾಗ “ಪತ್ರಿಕೋದ್ಯಮ ಕಲಿತು ಬಂದವರು, ಇವರಿಗೆ ಪುಸ್ತಕದ
ಬದನೆಕಾಯಿ ಮಾತ್ರ ಗೊತ್ತಿರ್ತದೆ” ಅಂತ ಇಂಡಸ್ಟ್ರಿಯಲ್ಲಿ ಹಂಗಿಸುವ ಪ್ರವೃತ್ತಿ
ಜೋರಿತ್ತು. ಈಗ ಕಾಲ ಬದಲಾಗಿದೆ. ಬಹುತೇಕ ಪತ್ರಿಕೋದ್ಯಮ ಪದವಿ ಕಲಿತವರಿಗೆ ಹೆಚ್ಚಿನ ಆದ್ಯತೆ
ಸಿಗುತ್ತಿದೆ (ಇತರರಿಗೂ ಅವಕಾಶ ಇದೆ). ಈಗ ಪತ್ರಿಕೋದ್ಯಮ ಶಿಕ್ಷಣ ಸಂಸ್ಥೆಗಳಲ್ಲೂ ಹೆಚ್ಚಿನ
ವೃತ್ತಿಪರತೆ ಬಂದಿದೆ...
ಏನೇ ಇರಲಿ... ಬದುಕಿನಲ್ಲಿ ಎಲ್ಲವೂ ಬರೆದಿಟ್ಟಂತೆ,
ಅಂದುಕೊಂಡತೆಯೇ ಆಗುವುದಲ್ಲ. ಈ ಪೈಕಿ ಕೆಲವು ಆಗಿ ಹೋಗಿದ್ದಕ್ಕೆ ನಾವು ಅಯಾಚಿತ
ಸಾಕ್ಷಿಗಳಾಗುತ್ತೇವೆ ಅಷ್ಟೇ... ಇದೂ ಅಷ್ಟೇ... ಪದಕ ಸಿಕ್ಕಿದ ಕಾಲಕ್ಕೆ ನಾನು
ಫೇಸ್ಬುಕ್ಕು,ವಾಟ್ಸಪ್ ನಲ್ಲಿ ಇರಲಿಲ್ಲ. ಅಸಲಿಗೆ ಆಗ ನನ್ನತ್ರ ಸೆಲ್ಫೀ ತೆಗೆಯಲು ಮೊಬೈಲೂ ಸಹ
ಇರಲಿಲ್ಲ. ಇಲ್ಲಿ ಹಂಚಿಕೊಂಡ ಫೋಟೋ ಆಗಿನ ಇಂಡಿಯನ್ ಎಕ್ಸ್ ಪ್ರೆಸ್ ಛಾಯಾಗ್ರಹಕ ರಾಮಕೃಷ್ಣ ಭಟ್ ಹಾಗೂ ಸ್ನೇಹಿತ ವಸಂತ
ಕೊಣಾಜೆ ಅವರು ತೆಗೆದುಕೊಟ್ಟದ್ದು. ಆಗ ಫೇಸ್ಬುಕ್ಕು ಇನ್ನೂ ಹುಟ್ಟಿರಲಿಲ್ಲ. ಅದಕ್ಕಾಗಿ ಇದೆಲ್ಲ
ಆಗಿ 20 ವರ್ಷಗಳ ಬಳಿಕ ಇಂಥದ್ದೊಂದು ಬರಹ... ನೆನಪಿಗೆ ಇರಲಿ ಅಂತ ಅಷ್ಟೇ! ಟಾಪರ್ ಆದವರ ಕುರಿತು ಬೇರೆ ಬೇರೆ ವಶೀಲಿ ಮಾಡಿದ ಆರೋಪಗಳಿರ್ತವೆ.
ಟಾಪರ್ ಆಗಿದ್ದು, ಅದು ಬದುಕಿಗೆ ಪ್ರಯೋಜನ ಇಲ್ಲ ಅಂತ ಹೇಳುವವರೂ ಇದ್ದಾರೆ. ನಾನು
ಪ್ರಾಮಾಣಿಕವಾಗಿಯೇ ಪರೀಕ್ಷೆ ಬರೆದು ಮಾರ್ಕು ಸಿಕ್ಕಿದೆ ಹಾಗೂ ಕೋರ್ಸಿಗೆ ಸೇರುವಾಗ ಅದು ನನ್ನ
ಪಾಲಿನ ಗುರಿಯೋ, ಕನಸೋ ಎಂಥದ್ದೂ ಆಗಿರಲಿಲ್ಲ. ಇದು ಮಹತ್ಸಾಧನೆಯೂ ಅಲ್ಲ, ಯಾರೂ ಮಾಡದ್ದೂ
ಅಲ್ಲ... ಆದರೆ ವೈಯಕ್ತಿಕ ಬದುಕಿನ ಪುಟದೊಳಗೆ ನನಗೆ ವಿಶೇಷ ದಿನ ಅಷ್ಟೆ.
-ಕೃಷ್ಣಮೋಹನ ತಲೆಂಗಳ (15.02.2023)
No comments:
Post a Comment