ತೆಂಕುತಿಟ್ಟಿನ ಸಾತ್ವಿಕ ಹೆಬ್ಬುಲಿ ಬಲಿಪಜ್ಜ... ಯಕ್ಷಗಾನದ ಸ್ಥಿತ್ಯಂತರ ಪರ್ವದಲ್ಲಿ ನಿರ್ಗಮನ...
PHOTO: ULLAS CK |
ನನಗೆ ತಿಳಿದ ಮಟ್ಟಿಗೆ ಬಲಿಪಜ್ಜರು ನಿಧನ ಹೊಂದುವ
ತನಕವೂ ಅವರ ಹೆಸರಿನ ಹಿಂದೆ ಯಾವುದೇ ಬಿರುದು, ಹೆಗ್ಗಳಿಕೆ, ಹೊಗಳಿಕೆಗಳ ಜೋಡಣೆ ಇರಲಿಲ್ಲ! ಕೊನೆಯ ತನಕವೂ ಅವರು “ಬಲಿಪ ನಾರಾಯಣ ಭಾಗವತ” ಮಾತ್ರ ಆಗಿದ್ದರು. ಸುಮಾರು 6 ದಶಕಗಳಿಗೂ ಮಿಕ್ಕಿದ
ಯಕ್ಷರಂಗದ ಅನುಭವದ ದೊಡ್ಡದೊಂದು ಕಣಜವಾಗಿದ್ದ ಅವರು ನಿರ್ಗಮಿಸುವ ಕಾಲಕ್ಕೂ ಅಷ್ಟೇ
ನಿಗರ್ವಿಯಾಗಿ, ಅದೇ ಮುಗ್ಧರಾಗಿ, ಅಷ್ಟೇ ಸರಳರಾಗಿ, ನಮ್ಮೊಳಗಿನ ಒಬ್ಬ ಯಕ್ಷಗಾನ ಅಭಿಮಾನದ
ಪ್ರತೀಕದಂತೆ ಕಾಣ್ತಾ ಇದ್ರು.
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ನೆನಪಾಗ್ತಾರೆ. ಅವರು
ಕೇವಲ ಅವರ ಧ್ವನಿಗೋಸ್ಕರ ಕೋಟ್ಯಾಂತರ ಹೃದಯಗಳನ್ನು ತಲುಪಿದ್ದಲ್ಲ. ಕೊನೆಯ ವರೆಗೂ ಎಸ್ಪಿಬಿ ಅವರ
ಸರಳತೆ, ಸಜ್ಜನಿಕೆ, ವಿಧೇಯತೆ ಮತ್ತು ಅವರೊಳಗಿದ್ದ ಮಾನವೀಯ ಗುಣಗಳು ಅವರನ್ನು ಜನ ಸಿಕ್ಕಾಪಟ್ಟೆ
ಪ್ರೀತಿಸುವ ಹಾಗೆ ಮಾಡಿತು. ನಮ್ಮ ಬಲಿಪಜ್ಜ ಕೂಡಾ ಹಾಗೆಯೇ... ರಂಗಕ್ಕೆ ಬಂದು ಇಷ್ಟು ಸುದೀರ್ಘ
ಅನುಭವ ಹೊಂದಿದ, 50ಕ್ಕೂ ಅಧಿಕ ಪ್ರಸಂಗಗಳು ನಾಲಗೆ ತುದಿಯಲ್ಲಿ ಓಡಾಡುತ್ತಿದ್ದ, ಸಮರ್ಥ ರಂಗ
ನಿರ್ದೇಶಕರಾಗಿದ್ದ ಬಲಿಪಜ್ಜರ ಸರಳತೆ ಹಾಗೂ ಬದುಕಿನುದ್ದಕ್ಕೂ ವಿವಾದಗಳಿಗೆ ಸಿಲುಕದೆ, ತೀರಾ
ಸಾಮಾನ್ಯರಾಗೇ ಓಡಾಡ್ತಾ ಇದ್ದುದರಿಂದಲೇ ಶ್ರೇಷ್ಠರಾದರು. ಧ್ವನಿಯಷ್ಟೇ ಅವರ ವ್ಯಕ್ತಿತ್ವವೂ
ನಿಖರವಾಗಿತ್ತು. ಅವರ ಭಾಗವತಿಕೆಯ ಸಾಹಿತ್ಯದ ಹಾಗೆ ಸುಸ್ಪಷ್ಟವಾಗಿತ್ತು.
ಇಷ್ಟು ವರ್ಷ ರಂಗದಲ್ಲಿ ದುಡಿದರೂ ಅವರು ಕೂಡಿ ಹಾಕಿದ
ಸಂಪತ್ತು ಅಷ್ಟರಲ್ಲೇ ಇದೆ. ಅವರ ಲಕ್ಷಾಂತರ ಅಭಿಮಾನಿಗಳು, ಬಲಿಪ ಶೈಲಿಯ ಪ್ರತಿಪಾದಕ ಮಕ್ಕಳು
ಮತ್ತು ಕಲೆಯ ಕುರಿತು ಕಾಪಿಟ್ಟಿದ್ದ ಅಪಾರ ಪ್ರೀತಿಯೇ ಅವರ ಸಂಪಾದನೆ ಆಗಿತ್ತು. ಬಲಿಪ ಅಂದರೆ “ಹೆಬ್ಬುಲಿ” ಅಂತವೂ ಅರ್ಥ ಇದೆ ಅಂತ ಅವರ ನುಡಿನಮನ ಬರಹದಲ್ಲಿ
ಶಾಂತಾರಾಮ ಕುಡ್ವರು ಬರೆದಾಗ ಗೊತ್ತಾಯಿತು. ಹೌದಲ್ವ... ಯಕ್ಷಗಾನದ ಬಗ್ಗೆ ಸಮರ್ಥವಾಗಿ
ಮಾತನಾಡಬಲ್ಲವರಾಗಿದ್ದ, ಆದರೆ ಎಲ್ಲಿಯೂ, ಯಾರ ಕುರಿತೂ ತುಚ್ಛವಾಗಿ ಮಾತನಾಡದ ಬಲಿಪಜ್ಜ ನಮ್ಮ
ಪಾಲಿಗೆ ಹೆಬ್ಬುಲಿಯೇ ಆಗಿದ್ದರು. ಆದರೆ ಸಾತ್ವಿಕ ಹೆಬ್ಬುಲಿ... ಅವರ ಘರ್ಜನೆ ಏರು ಪದಗಳಲ್ಲಿ
ಮಾತ್ರ... ಮಾತನಾಡಲು ಹೊರಟರೆ ನಾಚಿಕೊಂಡವರಂತೆ ಕಾಣಿಸುತ್ತಿದ್ದರು...
ಕ್ಯಾಸೆಟ್ಟುಗಳು ಮತ್ತು ಬಲಿಪಜ್ಜ....
ನಾವು ರೇಡಿಯೋ ಕೇಳ್ತಾ ಬೆಳೆದ ಯುಗದವರು. ನಂತರ ಟೇಪ್
ರೆಕಾರ್ಡರ್ ಗಳ ಮೂಲಕ ಕ್ಯಾಸೆಟ್ಟುಗಳನ್ನು ಕೇಳ್ತಾ ದೊಡ್ಡವರಾದರು. ಎಸ್ಪಿ ಬಾಲಸುಬ್ರಹ್ಮಣ್ಯಂ,
ಪೀಬಿ ಶ್ರೀನಿವಾಸ್, ಎಸ್.ಜಾನಕಿ, ಡಾ.ರಾಜ್ ಕುಮಾರ್ ಮತ್ತಿತರರು ಯಾರೆಂದೇ ಗೊತ್ತಿಲ್ಲದಿದ್ದರೂ
ನಮಗರಿವಿಲ್ಲದೇ ದಿನಾ ರೇಡಿಯೋದಲ್ಲಿ ಅವರ ಹಾಡುಗಳನ್ನೇ ಕೇಳ್ತಾ ಕೇಳ್ತಾ ಅವರ ಬಗ್ಗೆ ಅಭಿಮಾನ
ಬೆಳೆಸಿಕೊಂಡವರು. ಹಾಗೆಯೇ ಬಲಿಪರೂ ಸಹ. ಎಳವೆಯಲ್ಲಿ ಅವರ ಭಾಗವತಿಕೆಯ ತಾಳಮದ್ದಳೆಯ
ಕ್ಯಾಸೆಟ್ಟುಗಳನ್ನು ಕೇಳಿದ್ದಕ್ಕೆ ಲೆಕ್ಕವಿಲ್ಲ. ರೇಡಿಯೋದಲ್ಲೂ ಬುಧವಾರ ಮತ್ತು ಆದಿತ್ಯವಾರ
ಯಕ್ಷಗಾನಗಳಲ್ಲಿ ಬಲಿಪರ ಹಾಡು ಕೇಳಿದ್ದಕ್ಕೆ ಲೆಕ್ಕವೇ ಇಲ್ಲ. ಮಾಗಧ ವಧೆ, ರಾವಣ ವಧೆ,
ಕೃಷ್ಣಸಂಧಾನ, ಭೀಷ್ಮ ವಿಜಯ... ಹೀಗೆ ಸಾಲು ಸಾಲು ಪ್ರಸಂಗಗಳ ಹಿಂದಿದ್ದ ಧ್ವನಿ ಬಲಿಪರು. ಶೇಣಿ,
ಜೋಷಿ, ಪೆರ್ಲ ಕೃಷ್ಣ ಭಟ್ರು, ಗೋವಿಂದ ಭಟ್ರು, ತೆಕ್ಕಟ್ಟೆ, ಸಾಮಗರು ಯಾರನ್ನೂ ನೋಡಿ
ಗೊತ್ತಿಲ್ಲದಿದ್ದರೂ ಕ್ಯಾಸೆಟ್ಟುಗಳಲ್ಲಿ “ಕೇಳಿ” ಗೊತ್ತಿತ್ತು.
ಬಲಿಪ ಎಂದರೆ ಅನ್ವರ್ಥಕನಾಮವೋ, ಕ್ರಿಯಾಪದವೋ,
ಜಾತಿಯೋ, ಊರೋ, ಮನೆತನದ ಹೆಸರೋ ಎಂಥದ್ದೂ ಗೊತ್ತಿರಲಿಲ್ಲ. ಅಜ್ಜ ಬಲಿಪ ಎಂದರೆ ಯಾರು, ಬಲಿಪರು
ಎಂದರೇನು ಎಂಥದ್ದೂ ಗೊತ್ತಿರಲಿಲ್ಲ. ಆದರೆ ಬಲಿಪರ ಧ್ವನಿ ನಿದ್ರೆಯಿಂದ ಎಬ್ಬಿಸಿ ಕೇಳಿಸಿದರೂ
ಗೊತ್ತಾಗಲು ಸಾಧ್ಯ. ಇವತ್ತಿಗೂ ಬಲಿಪರ ಅದೇ ತದ್ರೂಪಿ ಧ್ವನಿ ಹೊಂದಿದ ಭಾಗವತರನನ್ನು ಹುಡುಕಲು
ಕಷ್ಟ.
ಬಲಿಪ ಎಂಬುದು ಅವರ ಮನೆತನಕ್ಕೆ ಸಿಕ್ಕಿದ ಬಿರುದು, ಬಲಿಪ
ಶೈಲಿ ಎಂಬುದು ಒಂದು ಪರಂಪರೆ ಎಂಬುದು ನಂತರ ತಿಳಿಯಿತು. ಬಲಿಪರ ಹಾಗೆ ಎಲ್ಲರಿಗೂ ಏರು ಶೃತಿಯಲ್ಲಿ
ಹಾಡಲು ಕಷ್ಟ ಉಂಟು, ಬಲಿಪರ ಶೈಲಿಯಲ್ಲಿ ಹಾಡುವ ಭಾಗವತರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಎಂಬುದೂ
ನಂತರ ತಿಳಿಯಿತು.
ನಂತರ ಪ್ರೈಮರಿ ಶಾಲೆಗೆ ಹೋಗುವ ಹೊತ್ತಿಗೆ ಕಟೀಲು
ಮೇಳದ ಆಟಗಳಿಗೆ ಹೋಗಲು ಶುರು ಮಾಡಿದಾಗ ಅಲ್ಲಿ ಬಲಿಪರು “ಕಾಣಲು ಸಿಕ್ಕಿದರು”. ಮಧ್ಯರಾತ್ರಿಯ ಬಳಿಕ ಬಿಳಿ ಉಡುಪು, ಕೆಂಪು
ಮುಂಡಾಸು ಕಟ್ಟಿ ಬಲಿಪರು ಪ್ರವೇಶವಾದರೆ ಬೆಳಗ್ಗಿನ ತನಕ ಅವರ ಹಾಡುಗಳನ್ನು ಸಾಕಷ್ಟು ಸಾರಿ
ನೋಡಿದ್ದು ಅಸ್ಪಷ್ಟವಾಗಿ ನೆನಪಿದೆ. ಆಗ ಮೊಬೈಲು, ಕೆಮರಾ ಎಂಥದ್ದೂ ಇಲ್ಲದ ಕಾಲ. ಇವತ್ತಿನ ವರೆಗೆ
ಬಲಿಪರ ಲೈವ್ ಪ್ರದರ್ಶನದ ವಿಡಿಯೋ ಮಾಡುವ ಅವಕಾಶವೇ ನನಗೆ ಸಿಗಲಿಲ್ಲ. ನನ್ನ ಕೈಗೆ ಮಲ್ಟಿಮೀಡಿಯಾ ಮೊಬೈಲ್
ಬರುವ ವೇಳೆಗೆ ಬಲಿಪರು ಬಹುಶಃ ಮೇಳದಿಂದ ನಿವೃತ್ತರಾಗಿದ್ದರು. ಸಾರ್ವಜನಿಕವಾಗಿ ಅಪರೂಪಕ್ಕೆ
ಹಾಡುತ್ತಿದ್ದರು. ಕುರಿಯ, ಬಲಿಪ, ಪೂಂಜ, ಕುಬಣೂರು ಎಂಬ ನಾಲ್ಕು ಕಟೀಲು ಮೇಳಗಳಿದ್ದದ್ದು ನನ್ನ
ಬಾಲ್ಯದಲ್ಲಿ. ಆಗ 1ನೇ ಮೇಳ, 2ನೇ ಮೇಳ ಅಂತ ಕರೆಯುವುದಕ್ಕಿಂತ ಜಾಸ್ತಿ ಬಲಿಪೆರ್ನ ಸೆಟ್, ಕುರಿಯದಾರೆನ
ಸೆಟ್, ಕುಬಣೂರರ ಸೆಟ್, ಪೂಂಜರ ಸೆಟ್ ಅಂತಲೇ ಕರೆಯುತ್ತಿದ್ದರು (ಪ್ರಧಾನ ಭಾಗವತರ ಹೆಸರಿನಲ್ಲಿ).
ನಂತರದ ದಿನಗಳಲ್ಲಿ ಕೇಬಲ್ ಟಿ.ವಿ.
ಪ್ರವರ್ಧನಮಾನಕ್ಕೆ ಬಂದ ಬಳಿಕ, ಯೂಟ್ಯೂಬ್ ಚಾನೆಲ್ಲುಗಳು ಸಾಕಷ್ಟು ಬೆಳದ ಬಳಿಕ ಬಲಿಪರ ಧ್ವನಿ
ಜೊತೆ ಅವರನ್ನು ಹೆಚ್ಚು ಹೆಚ್ಚು ನೋಡುವ ಅವಕಾಶವೂ ಸಿಕ್ಕಿತು. ವಾಟ್ಸಪ್ ಬಂದ ಮೇಲೆ ಆಗಾಗ ಬಲಿಪರ
ದಂತಕಥೆಗಳಾದ ಹಾಡುಗಳನ್ನು ಸಾಕಷ್ಟು ಹರಿದಾಡುತ್ತಲೇ ಇವೆ.
ಬಲಿಪರು ನಿಜವಾಗಿ ಜೀವಂತ ದಂತಕಥೆ ಹೌದು. ಬಲಿಪ ಎಂಬ
ತೂಕದ ಹೆಸರು, ಅವರಿಗಿದ್ದ ಘನತೆ, ಆಜಾತಶತ್ರು ವ್ಯಕ್ತಿತ್ವ, ಅವರ ಗಂಭೀರ ವ್ಯಕ್ತಿತ್ವ ಮತ್ತು
ಕ್ಷೇತ್ರದಲ್ಲಿ ಅವರಿಗಿದ್ದ ಗೌರವ ಅಷ್ಟೂ ಸೇರಿ ಅವರನ್ನು “ಭೀಷ್ಮ”ರಾಗಿಸಿತು. ಸ್ವತಃ ಸಂಕೋಚದ ಸ್ವಭಾವದ ಬಲಿಪರು
ವ್ಯಾವಹಾರಿಕವಾಗಿಯೂ ವಾಣಿಜ್ಯ ದೃಷ್ಟಿಕೋನ ಹೊಂದಿರಲಿಲ್ಲ ಅಂತ ಎಲ್ಲರೂ ಹೇಳುತ್ತಾರೆ. ಅವರಿಗೆ
ಪ್ರಶಸ್ತಿಗಳು ಸಿಕ್ಕಿವೆ, ಆದರೆ ಯಾವುದೇ ಬಿರುದುಗಳು ಹೆಸರಿಗೆ ಜೋಡಣೆ ಆಗಿರಲಿಲ್ಲ. ಲಾರಿಯಲ್ಲಿ
ಮೇಳಗಳು ಊರಿನಿಂದ ಊರಿಗೆ ಹೋಗುತ್ತಿದ್ದ ಕಾಲದಲ್ಲೇ ಮೇಳದಲ್ಲಿದ್ದ ಅವರು ಯಕ್ಷಗಾನದ ತೀರಾ ಕಷ್ಟದ
ದಿನಗಳನ್ನೂ ಕಂಡವರು. ಹಾಗಾಗಿ ಕೊನೆಯ ತನಕವೂ ಸರಳತೆಯೇ ಅವರ ಬದುಕಾಗಿತ್ತು. ಅವರಿಗೆ
ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ, ಬಲಿಪರ ಏರು ಪದ ಶುರುವಾದರೆ ಮೈಮರೆತು “ಆಹಾ, ಓಹೋ” ಅಂತ ದೊಡ್ಡದಾಗಿ ಉದ್ಘರಿಸುವವರನ್ನು ಸ್ವತಃ
ಕಂಡಿದ್ದೇನೆ. ಬಲಿಪರ ಆಟಗಳಿಗೆ ಮಾತ್ರ ಹುಡುಕಿ ಹುಡುಕಿ ಹೋಗುವವರನ್ನು ನೋಡಿದ್ದೇನೆ. ನನ್ನನ್ನು
ಇವತ್ತು ಈಮಟ್ಟಕ್ಕೆ ತಂದವರೇ ಬಲಿಪರು ಅಂತ ವಿನೀತರಾಗಿ ಹೇಳಿದ ಕಲಾವಿದರನ್ನು ನೋಡಿದ್ದೇನೆ.
ಎಷ್ಟೊಂದು ಸಾರ್ಥಕ ವ್ಯಕ್ತಿತ್ವ ಬಲಿಪರದ್ದು.
ನಟಿಸಿದ ಒಂದು ಚಿತ್ರ ಹಿಟ್ ಆದರೆ ಆತ ಸ್ಟಾರ್ ಆಗ್ತಾನೆ. ಒಂದು ಸಲ ಚಿತ್ರೀಕರಣವಾದ ಸಿನಿಮಾ 100
ದಿನ ಪ್ರದರ್ಶನ ಕಾಣ್ತದೆ ಹೊರತು, ಆತ 100 ಸಲ ನಟಿಸುವುದಿಲ್ಲ. ಆದರೆ ಬದುಕಿನ 60ಕ್ಕೂ ಅಧಿಕ
ವರ್ಷಗಳನ್ನು ವ್ಯಾವಸಾಯಿಕ ಯಕ್ಷಗಾನ ರಂಗದಲ್ಲಿ ಕಳೆದ ಬಲಿಪರು ಅದೆಷ್ಟು ಸಾವಿರ ಪ್ರದರ್ಶನಗಳಲ್ಲಿ
ಪಾಲ್ಗೊಂಡಿರಬಹುದು. ಅದೆಷ್ಟು ಸಾವಿರ ಪದಗಳನ್ನು ಹಾಡಿರಬಹುದು, ತನ್ನ ನಾಲ್ಕು ದಶಕಗಳ ಕಟೀಲು
ಮೇಳದ ತಿರುಗಾಟದಲ್ಲಿ ಅದೆಷ್ಟು ಸಾವಿರ ಸಲ “ಶ್ರೀದೇವಿ ಮಹಾತ್ಮೆ” ಆಟ ಆಡಿಸಿರಬಹುದು. ಇದಕ್ಕೆಲ್ಲ ಲೆಕ್ಕವೇ
ಇರಲಿಕ್ಕಿಲ್ಲ. ನೆನಪಿಡಿ ಅಷ್ಟೂ ಸಹ ಲೈವ್ ಶೋಗಳು. ರಾತ್ರಿ ನಿದ್ರೆಗೆಟ್ಟು, ಊರಿನಿಂದ ಊರಿಗೆ
(ಸ್ವಂತ ವಾಹನ ಬಿಡಿ, ಕಲಾವಿದರಿಗೆ ಹೋಗಲು ಬಸ್ ಕೂಡಾ ಇರಲಿಲ್ಲ, ಆ ಕಾಲದಲ್ಲಿ) ತೆರಳಿ ನೀಡಿದ
ಪ್ರದರ್ಶನಗಳು.
ಸರಿಯಾದ ವಿಶ್ರಾಂತಿಗೆ ಜಾಗ, ಸರಿಯಾದ ಶೌಚಾಲಯ ಸಹ
ಇಲ್ಲದ ಜಾಗದಲ್ಲೂ ದಶಕಗಳ ಕಾಲ ತಿರುಗಾಡಿ ಸಾವಿರಾರು ಶೋಗಳನ್ನು ನೀಡಿದ ಬಲಿಪರಂಥವರು ಎಂದಿಗೂ
ರಾಜ್ಯಮಟ್ಟದ ಸ್ಟಾರ್ ಗಳು ಆಗುವುದೇ ಇಲ್ಲ. ಬೆರಳೆಣಿಕೆಯ ಹಿಟ್ ಸಿನಿಮಾಗಳನ್ನು ನೀಡಿದ ನಟ,
ನಟಿಯರು ಸಹ ಕ್ಯಾರವಾನ್, ಸ್ವಂತ ಕಾರು, ಐಷಾರಾಮಿ ಬಂಗಲೆಗಳನ್ನು ಹೊಂದಿರುತ್ತಾರೆ. ಕೋಟ್ಯಂತರ
ಅಭಿಮಾನಿಗಳಿಂದ ಪೂಜಿಸಲ್ಪಡುತ್ತಾರೆ. ಅದೂ ಸಹ ಒಂದು ವಯಸ್ಸಿನ ತನಕ ಮಾತ್ರ. ಆದರೆ ಬಲಿಪರು
ಬಹುತೇಕ 75 ವರ್ಷ ಕಳೆಯುವ ತನಕವೂ “ಬಲಿಪ ಭಾಗವತರೇ” ಆಗಿದ್ದರು. ಬಲಿಪರ ಹಾಗೆ ಯಕ್ಷಗಾನದಲ್ಲಿ 50, 60,
70 ವರ್ಷಗಳ ತಿರುಗಾಟ ಮುಗಿಸಿದ ಕಲಾವಿದರೂ ಈಗಲೂ ನಮ್ಮ ನಡುವೆ ಇದ್ದಾರೆ. ಬದುಕಿನುದ್ದಕ್ಕೂ
ಸಹಸ್ರಾರು ಲೈವ್ ಶೋಗಳನ್ನು ನೀಡಿದ್ದಾರೆ. ಆದರೆ, ಯಾವತ್ತೂ ಅವರಿಗೆ ಸಿನಿಮಾ ನಟ, ನಿರ್ದೇಶಕರಿಗೆ
ಸಿಗುವ ಮರ್ಯಾದ, ಮನ್ನಣೆ, ಸಂಪತ್ತು ಸಿಕ್ಕಿಯೇ ಇಲ್ಲ. ಅವರಿಗೆ ಅದರ ನಿರೀಕ್ಷೆಯೂ ಇಲ್ಲ.
ಬಲಿಪರ ಯುಗಾಂತ್ಯ, ಯಕ್ಷಗಾನದಲ್ಲೂ ಪಲ್ಲಟಗಳು:
ಬಲಿಪರು ನಿರ್ಗಮಿಸಿದ್ದಾರೆ, ಇದೇ ಕಾಲಕ್ಕೆ ಯಕ್ಷಗಾನದಲ್ಲಿ
ಸಾಕಷ್ಟು ಸ್ಥಿತ್ಯಂತರಗಳು ಬಂದಿವೆ. ನಾವು ಎಳವೆಯಲ್ಲಿ ನೋಡಿದ ಹಾಗೆ ಈಗ ಯಕ್ಷಗಾನ, ಕಲಾವಿದ,
ಪ್ರೇಕ್ಷಕರು ಖಂಡಿತಾ ಇಲ್ಲ.
1) ಪರಂಪರೆ ಬೇಕು ಬೇಕು ಅಂತ ಭಾಷಣ, ಬರಹ, ಕಮ್ಮಟಗಳಲ್ಲಿ
ಮಾತನಾಡ್ತಾರೆ. ಯಕ್ಷಗಾನ ಪ್ರದರ್ಶನ ಮಾತ್ರ ಬದಲಾವಣೆಗಳನ್ನು ವೇಗವಾಗಿ ರೂಢಿಸಿಕೊಂಡು ತನಗೆ
ಬೇಕಾದ ಹಾಗೆ ಹೋಗ್ತಾ ಇದೆ. ಭಾಷಣ ಭಾಷಣಕ್ಕೇ ಸೀಮಿತ ಆಗ್ತಾ ಇದೆ.
2) ಯಕ್ಷಗಾನ ಕಾಲಮಿತಿ ಆಗಿದೆ. ಹಿಂದೆ ಇದ್ದ ಇಡೀ ರಾತ್ರಿಯ ಯಕ್ಷಗಾನದ
ಅನುಭೂತಿ ಸಿಗ್ತಾ ಇಲ್ಲ. ವಿವಿಧ ಜಾವಗಳು, ಶೃತಿ ಬದಲಾವಣೆ, ಸೂರ್ಯೋದಯದ ಹೊತ್ತಿಗೆ ಮೊಳಗುವ ಮಂಗಳ
ಪದದ ವ್ಯಾಖ್ಯೆಗಳೇ ಬದಲಾಗಿವೆ.
3) ತೆಂಕುತಿಟ್ಟಿನಲ್ಲಿ ಟೆಂಟು ಮೇಳಗಳೇ ಇಲ್ಲ. ಒಂದು ಕಾಲದಲ್ಲಿ ನೆಲ,
ಬೆಂಚಿನಲ್ಲಿ ಕುಳಿತು ಆಟ ನೋಡುತ್ತಿದ್ದ ಕಾಲ ಇದಲ್ಲ. ಸಂಘಟಕರು ಊಟ, ಚಹಾ, ಚಟ್ಟಂಬಡೆ ನೀಡಿ ಆಟ
ಆಡಿಸಿದರೂ, ಉತ್ತಮ ಆಸನ, ಮಂಜು ಸುರಿಯದಂತೆ ಶಾಮಿಯಾನದ ವ್ಯವಸ್ಥೆ ಮಾಡಿದರೂ ಪ್ರೇಕ್ಷಕರಿಗೆ ಇಡೀ
ಆಟ ನೋಡುವಷ್ಟು “ಪುರುಸೊತ್ತಿಲ್ಲ”
4) ಪ್ರಸಂಗಗಳ ಕುರಿತು ವಿಮರ್ಶೆಗಳ ದೃಷ್ಟಿಕೋನ ಬದಲಾಗಿದೆ. ಜಾತಿ
ನಿಂದನೆಯಂತಹ ವಿಚಾರ ಕಳೆದ ಕೆಲವು ತಿಂಗಳುಗಳಿಂದ ಗಂಭೀರವಾಗಿ ಬೆಳೆಯುತ್ತಿದೆ. ಜಾಲತಾಣದ
ಪ್ರಭಾವದಿಂದ ಸಣ್ಣ ಸಣ್ಣ ವಿಡಿಯೋ ತುಣುಕುಗಳು ಇಡೀ ಯಕ್ಷಗಾನದ ಅಷ್ಟೂ ಉದ್ದೇಶವನ್ನು ಅಣಕಿಸುತ್ತಾ
ವೈರಲ್ ಆಗ್ತಾ ಇವೆ.
5) ಮೇಳ, ಜಾತಿ, ಭಾಗವತರು, ಪ್ರಸಂಗಗಳಿಗೆ ಪ್ರತ್ಯೇಕ ಪ್ರತ್ಯೇಕ
ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸಮಗ್ರ ಯಕ್ಷಗಾನದ ಅಭಿಮಾನಿ ಅನ್ನುವುದಕ್ಕಿಂತಲೂ ಇಂತಹ
ಮೇಳದ, ಇಂತಹ ಕಲಾವಿದರಿಗೆ ಮಾತ್ರ ಅಭಿಮಾನಿ ಅಂತ ಹೇಳುವಲ್ಲಿ ವರೆಗೆ ತಲುಪಿದೆ.
6) ಪುರಾಣ ಪ್ರಸಂಗಳ ಪ್ರದರ್ಶನ ಈಗಲೂ ಆಗ್ತಾ ಇದೆ ಅನ್ನುವುದು
ಸಮಾಧಾನಕರ ಅಂಶ. ಆದರೆ, ಇಡೀ ರಾತ್ರಿಯ ಸಾವಧಾನದ ಪ್ರದರ್ಶನ, ಎಳೆಯ ಕಲಾವಿದರಿಗೆ ಕಲಿಯಲು
ಹೆಚ್ಚಿನ ಅವಕಾಶ, ಸಭಾ ಕ್ಲಾಸ್, ತೆರೆ ಕುಣಿತ, ಪೂರ್ವರಂಗದ ಪ್ರದರ್ಶನಗಳಿಗೆ ಕತ್ತರಿ ಬೀಳ್ತಾ
ಇದೆ. ಪ್ರದರ್ಶನಕ್ಕಿಂತಲೂ ಪ್ರಚಾರದ ಭರಾಟೆ ಜೋರಾಗಿದೆ.
7) ಲೈವ್ ನೀಡುವುದರಿಂದ ಆಟಕ್ಕೆ ಜನ ಬರ್ತಾ ಇಲ್ಲ ಎಂಬ ಕೂಗೂ ಇದೆ.
ನಿದ್ರೆ ಕೆಟ್ಟರೆ ಮರುದಿನ ಕೆಲಸ ಮಾಡಲು ಆಗುವುದಿಲ್ಲ ಎಂಬ ಆತಂಕ ಇದೆ. ಯುವ ಕಲಾವಿದರ ಕುರಿತು ವಸ್ತುನಿಷ್ಠ
ವಿಮರ್ಶೆ ಮಾಡಿದರೂ ಅದು ವಿವಾದ ಆಗ್ತಾ ಇದೆ. ಕ್ರೀಡಾಮನೋಭಾವದಿಂದ, ಅನುಭವ ವೃದ್ಧಿಸುವ
ದೃಷ್ಟಿಯಿಂದ ಸಲಹೆಗಳನ್ನು ಸ್ವೀಕರಿಸುವವರ ಸಂಖ್ಯೆ ಕಡಿಮೆಯಾಗ್ತಾ ಇದೆ.
ಇನ್ನೂಸಾಕಷ್ಟು ವಿಚಾರಗಳನ್ನು ಪಟ್ಟಿ ಮಾಡಬಹುದು.
ಇದೇ ಕಾಲಘಟ್ಟದಲ್ಲಿ ಬಲಿಪರು ನಿರ್ಗಮಿಸಿದ್ದಾರೆ. ಅವರು ದುಡಿದ ಅಷ್ಟೂ ವರ್ಷ ಯಕ್ಷಗಾನದ ಆಯಾಮ
ತೀರಾ ಬೇರೆಯೇ ರೀತಿಯಲ್ಲಿತ್ತು. ಪರಂಪರೆಯ ಪ್ರಕಾರವೇ ಹೋಗ್ತಾ ಇತ್ತು. ಬಲಿಪರ ಧ್ವನಿ, ಬಲಿಪರ
ಆಕೃತಿ, ಬಲಿಪರ ಮುಗ್ಥ ನಗು ಏರು ಪದ ಹಾಡುವಾಗ ಮೊಬೈಲ್ ಬಳಸಿದ ಹಾಗೆ ಜಾಗಟೆಯನ್ನು ಕಿವಿಯ ಬಳಿ
ಹಿಡಿಯುವ ವಿಶಿಷ್ಟಶೈಲಿ... ಎಲ್ಲವೂ ವಿಭಿನ್ನ. ಬಲಿಪರು ಪ್ರಚಾರದ ಹಿಂದೆ ಹೋದ್ದಲ್ಲ, ಪ್ರಚಾರ
ಬಲಿಪರನ್ನು ಅರಸಿ ಬಂತು. ಅದಕ್ಕೆ ಬಲಿಪರು ಕೊನೆಯ ತನಕ ಬಲಿಪರೇ ಆಗಿದ್ದರೂ. ನಾವು ಅಜ್ಜ
ಬಲಿಪರನ್ನು (ಈ ಬಲಿಪರ ಅಜ್ಜ) ಕಂಡವರಲ್ಲ, ನಮ್ಮ ಪಾಲಿಗೆ ಇವರೇ ಅಜ್ಜ ಬಲಿಪರಾಗಿದ್ದರು. ಮತ್ತು
ಬಲಿಪರ ಧ್ವನಿ ಒಂದು ದಂತಕಥೆಯಾಗಿದ್ದಾಗಲೇ ನಾವು ಒಂದಷ್ಟು ವರ್ಷ ಅವರ ಸಮಕಾಲೀನ
ಪ್ರೇಕ್ಷಕರಾಗಿದ್ದೆವು ಎಂಬುದೇ ನನ್ನಂಥವರಿಗೆ ಹೆಮ್ಮೆ.... ಬಲಿಪರು ಮತ್ತೊಮ್ಮೆ ಹುಟ್ಟಿ ಬರಲಿ,
ಯಕ್ಷಗಾನಂ ಗೆಲ್ಗೆ.
-ಕೃಷ್ಣಮೋಹನ ತಲೆಂಗಳ (22.02.2023)
1 comment:
ಬಲಿಪ ನಾರಾಯಣ ಭಾಗವತರ ಬಗ್ಗೆ ಬರೆದ ಒಂದು ಸಮಗ್ರ ಲೇಖನ. ನಾನೂ ಕೂಡ ಬಲಿಪರ ಭಾಗವತಿಕೆಯ ಕೆಲವು ಆಟಗಳನ್ನು ನೋಡಿ ಖುಷಿ ಪಟ್ಟಿದ್ದೆ. ಅವರ ಸಂಪೂರ್ಣ ವ್ಯಕ್ತಿ ಚಿತ್ರಣ ನೀಡಿದ ಉತ್ತಮ ಲೇಖನ. ಬಲಿಪರ ಆತ್ಮಕ್ಕೆ ವಿಷ್ಣು ಸಾಯುಜ್ಯ ದೊರೆಯಲಿ.
Post a Comment