ನಿಮಗಿಲ್ಲಿ ಸಲಹೆಗಳು ಉಚಿತವಾಗಿ ಲಭ್ಯ, ಕೂಡಲೇ “ಚೊರೆ” ಮಾಡಿ!

 


1)      ನೀವು ಹೊಟೇಲಿನಲ್ಲಿ ಕುಳಿತು ನಿಮ್ಮಷ್ಟಕ್ಕೇ ಎಂಥದ್ದೋ ಒಂದು ತಿನಿಸು ಆರ್ಡರ್ ಮಾಡಿರ್ತೀರಿ.ತಿಂಡಿ ತಟ್ಟೆ ಬರುತ್ತದೆ, ನೀವು ನಿಮಗಿಷ್ಟದ ತಿಂಡಿಯನ್ನು ತಲ್ಲೀನರಾಗಿ ತಿನ್ನುತ್ತೀರಿ. ಆದರೆ, ನಿಮ್ಮೆದುರು ಕುಳಿತ ಅತೃಪ್ತ ಜೀವಿ ಆರ್ಡರ್ ಮಾಡಿದ ತಿಂಡಿ ಇನ್ನೂ ಬಂದಿರುವುದಿಲ್ಲ. ಆತ ನಿಮ್ಮನ್ನು ಆಪಾದಮಸ್ತಕ ನೋಡುತ್ತಾನೆ, ನಿಮ್ಮ ತಿಂಡಿಯ ತಟ್ಟೆಯನ್ನು ಪರಮ ಕ್ಷುಲ್ಲಕ ಎಂಬ ಹಾಗೆ ಕಡೆಗಣ್ಣಿನಿಂದ ಗಮನಿಸುತ್ತಾನೆ. ಮತ್ತೆ ಪ್ರಪಂಚದ ಅತಿ ಕೊಳಕು ಜೀವಿ ನೀವೇಯೋ ಏನೋ ಎಂಬ ಹಾಗೆ ಕರುಣಾಜನಕವಾಗಿ ನೋಡಿ, ಅಸಹನೆಯಿಂದ ಲೊಚಕ್ ಅಂತ ಮುಖ ತಿರುವುತ್ತಾನೆ! ಮತ್ತೆ ಅಸಹನೆ ತಡೆಯಲಾಗದೆ ಕೇಳ್ತಾನೆ ಅದು ನಿಮಗೆ ಮೆಚ್ತದ?”!!!!

2)      ನಿಮಗೋ, ನಿಮ್ಮ ಮನೆಯಲ್ಲಿ ಯಾರಿಗೋ ದೀರ್ಘ ಕಾಲದ ಆರೋಗ್ಯ ಸಮಸ್ಯೆ ಇದೆ ಅಂದುಕೊಳ್ಳೋಣ. ಅದೊಂಥರ ಅಪರೂಪದ ಅಥವಾ ಸುದೀರ್ಘ ಚಿಕಿತ್ಸೆ ಬಯಸುವ ಕಾಯಿಲೆ. ಶೀತ, ಜ್ವರದ ಹಾಗೆ ನಾಲ್ಕು ಮಾತ್ರೆ ತಿಂದರೆ 15 ದಿನಗಳಲ್ಲಿ ವಾಸಿಯಾಗುವಂಥದ್ದಲ್ಲ. ಇಂತಹ ಸಮಸ್ಯೆ ಇದ್ದರೆ ಬಂಧುಮಿತ್ರರಿಗೆಲ್ಲ ಅದು ಸಾಮಾನ್ಯವಾಗಿ ಅರಿವಿರುತ್ತದೆ. ಆದರೂ ಸಭೆ, ಸಮಾರಂಭಗಳಲ್ಲಿ ಅಂತಹ ರೋಗಿಗಳು ಸಿಕ್ಕಾಗ ನಾಲ್ಕು ಜನರಿಗೆ ಕೇಳುವ ಹಾಗೆ ನಿನಗೀಗ ಕಮ್ಮಿ ಆಯ್ತ ಅಂತ ಗರಿಷ್ಠ ವಾಲ್ಯೂಮಿನಲ್ಲಿ ಕೇಳುವುದು! ಮಾತ್ರ ಅಲ್ಲ, ನೀನು ಓ ಅಲ್ಲಿಗೆ ಹೋಗು, ಹೊಸ ಡಾಕ್ಟ್ರು ಬಂದಿದ್ದಾರೆ, ಮುಟ್ಟಿದ ಕೂಡಲೇ ಕಮ್ಮಿ ಆಗ್ತದೆ, ನೀನು ಯುನಾನಿ ಮಾಡು, ಯೋಗ ಮಾಡು, ಹೋಮಿಯೋ ಮಾಡು, ಆಯುರ್ವೇದವೇ ಮಾಡು... ಅಂತೆಲ್ಲ ಉಚಿತ ಸಲಹೆ ಕೊಡುವುದು... ಮಾತ್ರವಲ್ಲ, ನೀವು ಈ ತನಕ ಮಾಡಿದ ಅಷ್ಟೂ ಚಿಕಿತ್ಸೆಯ ಕುರಿತು ನಿಮ್ಮೊಳಗೇ ಸಂಶಯ ಹುಟ್ಟಿಸಿ, ನಿಮ್ಮ ಜಂಘಾಬಲವನ್ನೇ ಉಡುಗಿಸುತ್ತಾರೆ. ಅವರು ಮತ್ತೆ ನಿಮ್ಮ ಉತ್ತರ ಕೇಳುವ ಮೂಡಿನಲ್ಲಿ ಇರುವುದಿಲ್ಲ! ಮತ್ತೆಂಥದ್ದೋ ಪ್ರಶ್ನೆ ಕೇಳ್ತಾರೆ. ಸ್ವಲ್ಪ ತಿಂಗಳು ಕಳೆದ ಮೇಲೆ ಪುನಃ ಸಿಕ್ಕಾಗ ಅದೇ ಪ್ರಶ್ನೆ ನಿನಗೀಗ ಕಮ್ಮಿ ಆಯ್ತ ಅಂತ.

3)      ಕಾರಣಾಂತರಗಳಿಂದ ನಿಮಗೆ ಮದುವೆಯಾಗುವಾಗ ತಡ ಆಗಿರ್ತದೆ (ತಡ ಎಂಬುದಕ್ಕೆ ವ್ಯಾಖ್ಯಾನ ಇಲ್ಲ, ಆದರೂ ಸಮಾಜ ಒಂದು ವಯಸ್ಸಿಗೆ ಹೋಲಿಸಿ ತಡ ಅಂತ ಪರಿಗಣಿಸ್ತದೆ!), ನಾಲ್ಕು ಜನ ಸೇರಿದಲ್ಲಿ ಪ್ರಶ್ನೆ ಶುರು ನಿಮ್ಮ ಮಗಳನ್ನು ಎಲ್ಲಿಗೆ ಕೊಟ್ಟದ್ದು?”, “ಅವಳಿಗಿನ್ನೂ ಮದುವೆ ಆಗಿಲ್ಲ..., ಓ ಹೌದಾ... ಅದೇನು ಲೇಟಾದ್ದು?”, “ಅವಳಿಗೆ ಇನ್ನೂ ಕಲಿಬೇಕಂತೆ.... ಮದುವೆ ಆದ ಮೇಲೂ ಕಲಿಯಬಹುದಲ್ವ, ಈಗ ಕಾಲ ಸರಿ ಇಲ್ಲ, ಬೇಗ ಮದುವೆ ಮಾಡ್ಸಿ.... ಇದು ಇಷ್ಟಕ್ಕೆ ಮುಗಿಯುವುದಿಲ್ಲ. ಮದುವೆ ಏನೋ ಆಯ್ತು, ಎಷ್ಟು ಮಕ್ಕಳು, ಎರಡ್ನೇ ಮಗು ಯಾವಾಗ, ನಿನಗೆ ಸಂಬಳ ಎಷ್ಟು....? ಹೀಗೆ ಪ್ರಶ್ನೆ ಕೇಳಲೇ ಹುಟ್ಟಿದಂತಿರುವವರು ಪ್ರಶ್ನೆ ಮತ್ತು ಸಲಹೆಗಳನ್ನು ಬಿಡ್ಡು ಬದುಕಲು ಸಾಧ್ಯವೇ ಇಲ್ಲ...

 

ಸ್ನೇಹಿತರೇ... ಮಾನವೀಯತೆ, ಬಾಂಧವ್ಯ ಎಂದರೆ ಪ್ರಶ್ನೆ ಕೇಳುವುದು, ವಿಚಾರಿಸಿಕೊಳ್ಳುವುದು, ಸಲಹೆ ಕೊಡುವುದು, ಸರಿ-ತಪ್ಪುಗಳನ್ನು ವಿವೇಚಿಸುವುದು ಇವೆಲ್ಲ ಖಂಡಿತಾ ಅತ್ಯಂತ ಸಹಜ ಹಾಗೂ ಸಾಮಾನ್ಯ. ಯಾರನ್ನೂ ನಾವು ವಿಚಾರಿಸುವುದು, ಸಲಹೆ ಕೊಡುವುದು ತಪ್ಪು ಅಂತ ನಾನು ಖಂಡಿತಾ ಹೇಳುವುದಿಲ್ಲ. ಆದರೆ ನನ್ನ ಬದುಕೇ ಇಡೀ ಜಗತ್ತಿಗೆ ಆದರ್ಶಪ್ರಾಯ, ನಾನು ನೋಡಿದ್ದು, ಆಡಿದ್ದು, ಮಾಡಿದ್ದು ಮಾತ್ರ ಸತ್ಯ, ನನ್ನ ಹಾಗಿದ್ದರೆ ಮಾತ್ರ ಅದು ಸಾರ್ಥಕ ಜೀವನ ಎಂಬ ಕೆಟ್ಟ ಹಾಗೂ ಮೂರ್ಖ ಕಲ್ಪನೆ ಹಾಗೂ ದಾಷ್ಟ್ರ್ಯದ ನೋಟ ಇರ್ತದಲ್ವ? ಅದರಿಂದಲೇ ಇಂತಹ ಪ್ರಶ್ನೆ ಕೇಳುವವರು ಹಾಗೂ ಉಚಿತ ಸಲಹೆ ನೀಡುವವರು ವಿವೇಚನಾರಹಿತರಾಗಿ ಇತರರಿಗೆ ನೋವುಂಟು ಮಾಡುತ್ತಲೇ ಇರುವುದು.

ಮೇಲೆ ಹೇಳಿದ ಮೂರೂ ಉದಾಹರಣೆಗಳಲ್ಲಿ ಅಂತಹ ವರ್ತನೆ ಯಾಕೆ ಸರಿಯಲ್ಲ ಎಂಬುದಕ್ಕೆ ಕಾರಣ ಕೊಡುತ್ತೇನೆ ಕೇಳಿ....

1)      ಹೊಟೇಲಿನಲ್ಲಿ ಯಾರು, ಏನು ತಿನ್ನಬೇಕು ಎಂಬುದು ಅವರವರ ಇಷ್ಟ. ಅವರವ ಹಸಿವಿನ ವ್ಯಾಪ್ತಿ, ಜೇಬಿನಲ್ಲಿರುವ ದುಡ್ಡು, ಆತನ ಇಷ್ಟಾನಿಷ್ಟ, ಆತನ ಆರೋಗ್ಯ ಪರಿಸ್ಥಿತಿ ಹಾಗೂ ಸಮಯಾವಕಾಶ ಇವೆಲ್ಲವನ್ನು ಲೆಕ್ಕ ಹಾಕಿ ಆತ ತನ್ನ ಲೆವೆಲ್ಲಿಗೆ ಬೇಕಾದ ತಿಂಡಿ ಆರ್ಡರ್ ಮಾಡಿ ತರಿಸಿ ತಿನ್ನುತ್ತಾನೆ, ತಿಂದ ಮೇಲೆ ಅವನೇ ಬಿಲ್ ಕೊಡ್ತಾನೆ, ತಿಂದು ಹೋದ ಮೇಲೆ ಹೆಚ್ಚು ಕಮ್ಮಿ ಆದರೆ ಅವನೇ ಮದ್ದು ಮಾಡಿಕೊಳ್ತಾನೆ. ನಿಮಗ್ಯಾಕೆ ಚಿಂತೆ. ನೀವು ತಿನ್ನುವುದೇ ಜಗತ್ತಿನ ಶ್ರೇಷ್ಠ ಆಹಾರ ಎಂದು ಹೇಳಿದವರು ಯಾರು? ಸಾರ್ವಜನಿಕ ಸ್ಥಳದಲ್ಲಿ ಬೇರೆಯವರನ್ನು ಕ್ಷುಲ್ಲಕವಾಗಿ ಕಾಣುವುದು, ಅಯ್ಯೋ ಪಾಪವೇ ಎಂಬ ಹಾಗೆ ಮೂತಿ ತಿರುವಿ ದೊಡ್ಡಸ್ಥಿಕೆ ಪ್ರದರ್ಶನ ಮಾಡುವುದು ಸಭ್ಯತೆಯೂ ಅಲ್ಲ, ಸೂಕ್ತವೂ ಅಲ್ಲ. ಅವನಲ್ಲಿ ಯಾವ ಅಂಶಗಳನ್ನೆಲ್ಲ ನೀವು ಕೇವಲ ಅಂದುಕೊಂಡು ನೀವು ಕೆಕ್ಕರಿಸಿ ನೋಡಿದ್ದೀರೋ, ಅದಕ್ಕಿಂತ ಹತ್ತು ಪಟ್ಟು ದೌರ್ಬಲ್ಯಗಳು, ನ್ಯೂನತೆಗಳು ನಿಮ್ಮಲ್ಲಿ ಇರಬಹುದು. ಅವನ್ನೆಲ್ಲ ವಿಮರ್ಶೆ ಮಾಡ್ಲಿಕೆ, ನೋಟದಲ್ಲೇ ತೋರಿಸ್ಲಿಕೆ ಸಾರ್ವಜನಿಕ ಸ್ಥಳ ವೇದಿಕೆಯಾ? ಅಷ್ಟಕ್ಕೂ ನಿಮ್ಮ ನಿಲುವು, ನಿಮ್ಮ ಡ್ರೆಸ್ ಸೆನ್ಸ್, ನಿಮ್ಮ ಠೀವಿ, ನಿಮ್ಮ ನಿರ್ಧಾರಗಳೇ ಅಂತಿಮ ಹಾಗೂ ಪರಿಪಕ್ವ ಅಂತ ಹೇಳಿದವರು ಯಾರು?!!!! ಎದುರು ಕುಳಿತವ ನಿಮ್ಮ ಬಂಧುವೋ, ಮಿತ್ರನೋ ಆದರೆ, ತಿಳಿ ಹೇಳಿ. ಆತ ಮಾಡಿದ ತಪ್ಪು ಏನು ಅಂತ. ಯಾರೂ ಅಲ್ಲದವನ ಉಸಾಬರಿ ನಿಮಗ್ಯಾಕೆ....

2)      ಜಗತ್ತಿನಲ್ಲಿ ಪ್ರತಿ ಕಾಯಿಲೆಯೂ ಬೇಜವಾಬ್ದಾರಿಯಿಂದ, ಆಹಾರ ಸ್ವಭಾವವೋ, ಸ್ವಚ್ಛತೆಯ ಕೊರತೆಯೋ, ಅರಿವು ಇಲ್ಲದಿರುವುದರಿಂದ ಬರುವುದಲ್ಲ. ಕೆಲವೊಂದು ಅಪರೂಪದ ಆರೋಗ್ಯ ಸಮಸ್ಯೆಗಳು, ನಮ್ಮ ತಪ್ಪೇ ಇಲ್ಲದೆ ಸಂಭವಿಸುವ ಅಪಘಾತಗಳು ನಮ್ಮ ಶರೀರದ ಮೇಲೆ ಮಾಡಿರಬಹುದಾದ ಘಾಸಿ ಗುಣವಾಗಲು ತುಂಬ ಸಮಯ ಬೇಕಾಗುತ್ತದೆ.ಅಥವಾ ಕೆಲವೊಮ್ಮೆ ಮತ್ತೆ ಮೊದಲಿನಂತೆ ಆಗ್ಲಿಕಿಲ್ಲ ಅಂತ ಡಾಕ್ಟ್ರು ಹೇಳಿರ್ತಾರೆ. ಹಣೆಬರಹ ಕೆಟ್ಟಿದ್ರೆ, ವಯೋಸಹಜವಾಗಿ ಅಥವಾ ಇನ್ಯಾವುದೋ ನಮ್ಮದಲ್ಲದ ತಪ್ಪಿಗೆ ಎಂತದೋ ಆರೋಗ್ಯ ಸಮಸ್ಯೆ ಬಂದಿರ್ತದೆ. ಹಾಗೆ ದಿಢೀರ್ ಪರಿಸ್ಥಿತಿ ಹದಗೆಟ್ಟಾಗ ಖಂಡಿತಾ ಆತ ತನ್ನ ವೈದ್ಯರನ್ನು ಕಂಡಿರ್ತಾನೆ. ಬಂಧುಮಿತ್ರರ ಹತ್ರ ಚರ್ಚಿಸಿ, ಸಲಹೆ ಪಡೆದು ತನ್ನ ಪರಿಸ್ಥಿತಿಗೆ ಒಪ್ಪುವ ಚಿಕಿತ್ಸೆ ಶುರ ಮಾಡಿರ್ತಾನೆ. ಯಾರೂ ಕೂಡಾ ತನ್ನ, ತನ್ನ ಮನೆಯವರ ಅನಾರೋಗ್ಯವನ್ನು ಕಡೆಗಣಿಸಿ ಸತ್ತೇ ಹೋಗ್ಲಿ ಅಂತ ಕಟುಕರಾಗುವಷ್ಟು ಕೆಟ್ಟವರಾಗಿರುವುದಿಲ್ಲ. ಆದಾಗ್ಯೂ, ಯಾರೋ ಒಬ್ಬ ಪರಿಚಿತ ಸಿಕ್ಕಾಗ, ಆತನಿಗೊಂದು ಆರೋಗ್ಯ ಸಮಸ್ಯೆ ಇದ್ದಾಗ, ಅದನ್ನು ನಾಲ್ಕು ಜನರ ಎದುರು ಪ್ರಶ್ನೆ ಕೇಳಿ, ವಿಮರ್ಶೆ ಮಾಡಿ ನಾವು ದೊಡ್ಡವರಾಗುವುದಕ್ಕೆ ಏನೂ ಇಲ್ಲ. ದೈಹಿಕ, ಮಾನಸಿಕ ನ್ಯೂನತೆ, ಅದೃಷ್ಟಹೀನರಾಗಿ ಕಾಡುವ ಬದುಕಿನ ಕಗ್ಗಂಟುಗಳಿಗೆಲ್ಲದಕ್ಕೂ ಅವರವರೇ ಹೊಣೆಗಳಾಗಿರುವುದಿಲ್ಲ. ಎಷ್ಟೋ ಸಲ ನಮಗೆ ಸಮಸ್ಯೆ ಮಾತ್ರ ಕಣ್ಣೆದುರಿಗೆ ಕಾಣಿಸಿರುತ್ತದೆ. ಅದರ ಹಿನ್ನೆಲೆ ಎಂಥದ್ದೂ ಗೊತ್ತಿರುವುದಿಲ್ಲ. ನಿಜವಾಗಿ ನಿಮಗೆ ಅವರಿಗೆ ನೆರವಾಗುವ ಉದ್ದೇಶ ಇದ್ರೆ, ಪ್ರತ್ಯೇಕವಾಗಿ ಕರೆದು ಅವರ ಸಮಸ್ಯೆ ಬಗ್ಗೆ ಕೇಳಿ, ಈಗ ಮಾಡುತ್ತಿರುವ ಪರಿಹಾರದ ಬಗ್ಗೆ ತಿಳಿದುಕೊಳ್ಳಿ. ಅದಕ್ಕಿಂತ ಹೆಚ್ಚಿನ ಸಾಧ್ಯತೆಗಳಿದ್ದರೆ ಅದನ್ನು ಉದಾಹರಣೆ ಸಹಿತ ವಿವರಿಸಿ, ಹೊರತು ನಿಮ್ಮ ಯಾವುದೇ ಅಭಿಪ್ರಾಯಗಳನ್ನು ಅವರ ಮೇಲೆ ಹೇರಬೇಡಿ. ಮೊದಲೇ ಅವರು ತಮ್ಮ ಸಮಸ್ಯೆಗಳಿಂದ ಕಂಗೆಟ್ಟಿರುತ್ತಾರೆ, ಅಲ್ವಸ್ವಲ್ಪ ಧೈರ್ಯದಿಂದ ಬದುಕುತ್ತಿರುತ್ತಾರೆ. ಅಂಥವರನ್ನು ಸಾರ್ವಜನಿಕವಾಗಿ ವಿಮರ್ಶೆ ಮಾಡುವುದು, ನಾಲ್ಕು ಜನರೆದುರು ಆ ಮದ್ದು ಮಾಡು, ಈ ಮದ್ದು ಮಾಡು ಅಂತ ಆದೇಶ ನೀಡುವುದು ಖಂಡಿತಾ ಸಭ್ಯತೆ ಅಲ್ಲ. ಅನಾರೋಗ್ಯ ಎನ್ನುವುದು ನಾಳೆ ಯಾರಿಗೂ ಬರಬಹುದು. ತಾನೊಬ್ಬ ಚಿರಂಜೀವಿ ಎಂಬ ಹಾಗಿನ ಉದ್ಧಟತನದ ಮಾತು, ಇತರರ ದಾರಿ ತಪ್ಪಿಸುವಂಥ ಅಪಾಯಕಾರಿ ಸಲಹೆಗಳನ್ನು ಖಂಡಿತಾ ತೋರಿಸುವ, ನೀಡುವ ಪ್ರಯತ್ನ ಮಾಡಬೇಡಿ. ಡಾಕ್ಟ್ರ ಕೆಲಸವನ್ನು ಡಾಕ್ಟ್ರರಿಕೆ, ಲಾಯರ್ ಕೆಲಸವನ್ನು ಲಾಯರಿಗೆ, ಪೊಲೀಸ್ ಕೆಲಸವನ್ನು ಪೊಲೀಸರಿಗೆ, ಪತ್ರಕರ್ತನ ಕೆಲಸವನ್ನು ಪತ್ರಕರ್ತರಿಗೇ ಮಾಡಲು ಬಿಡಿ.... ಎಲ್ಲರೂ ಎಲ್ಲವೂ ಆಗಲು ಆಗುವುದಿಲ್ಲ. ಅಂದಾಜಿಗೆ ಹೊಡೆಯುವ ಗುಂಡಿನ ಪರಿಣಾಮದ ಪ್ರಜ್ಞೆ ಇರಲಿ. ಒಂದೊಂದು ಆರೋಗ್ಯ ಸಮಸ್ಯೆಗೆ ಒಂದೊಂದು ರೀತಿಯ ಚಿಕಿತ್ಸೆ ಬೇಕಾಗುತ್ತದೆ. ವರ್ಷಗಳಿಂದ ಅದನ್ನು ಅನುಸರಿಸುವವರಿಗೆ ಅದು ಗೊತ್ತಿರುತ್ತದೆ. ಅವರಿಗೆ ಅವರದ್ದೇ ಆದ ಮಿತಿಗಳಿರ್ತವೆ. ಅವೆಲ್ಲವನ್ನೂ ನೀವು ಒಂದೇ ಮಾತಿಗೆ ಪುಸ್ಕ ಮಾಡಿ ಆದೇಶಿಸುವ ಧಾಟಿಯಲ್ಲಿ ಮಾತನಾಡುವ ವಿಕೃತ ನಿಲುವು ಉಂಟಲ್ಲ, ಅದರ ಪರಿಣಾಮಗಳು ಮತ್ತೂ ಘೋರ ಇರ್ತವೆ.

ಸಂಕಟ ಎಂದರೆ ಅದು ಮನರಂಜನೆ ಅಲ್ಲ, ಅವರವರ ಕಾಲಿಗೆ ಚಪ್ಪಲಿಗೆ ಚುಚ್ಚಿದ ಮುಳ್ಳಿನ ಹಾಗೆ. ಪಾಪ ಅದರ ನೋವು ಅವರಿಗೆ ಮಾತ್ರ ಅನುಭವ ವೇದ್ಯವಾಗಿರುತ್ತದೆ. ನೀವು ಸುಮ್ಮನೇ ದೂರ ನಿಂತು ಚಪ್ಪಲಿ ರಿಪೇರಿ ಬಗ್ಗೆ ಪುಕ್ಕಟೆ ಸಲಹೆ ನೀಡಬೇಡಿ. ಸಮಸ್ಯೆ ಪರಿಹಾರದ ನೈಜ ಕಾಳಜಿ ಇದ್ದರೆ ಆ ಚಪ್ಪಲಿಯನ್ನು ನೀವು ಧರಿಸಿ ನೊಡಿ, ಮುಳ್ಳನ್ನು ಹೇಗೆ ಕೀಳಬಹುದು ಅಂತ ಮಾಡಿ ತೋರಿಸಿ! ಸಲಹೆ ಸೂಚಿಸಲು, ಆದೇಶಿಸಲು, ಇದೇ ಮಾಡು ಅಂತ ಕಟ್ಟುನಿಟ್ಟಾಗಿ ಹೇಳಲು ಸುಲಭ. ಅದನ್ನು ಪ್ರಾಕ್ಟಿಕಲ್ ಆಗಿ ಮಾಡಲು, ಅನುಸರಿಸಲು ತುಂಬ ಕಷ್ಟ ಇದೆ. ಕಾಳಜಿ ನೈಜವಾಗಿರಲಿ, ನಿಮ್ಮ ಪಾಂಡಿತ್ಯ, ಅರೆಬೆಂದ ಜ್ಞಾನದ ಪ್ರದರ್ಶನ ದಯವಿಟ್ಟು ಬೇಡ.

3)      ಮನಷ್ಯನಿಗೆ ಪರಿಸ್ಥಿತಿ ಹಾಗೂ ಮನಃಸ್ಥಿತಿ ಅಂತ ಇರ್ತದೆ. ನನ್ನು ಬದುಕು ನಿನ್ನದಲ್ಲ, ನಿನ್ನ ಬದುಕು ನನ್ನದಲ್ಲ. ನನ್ನದನ್ನು ನಿನ್ನದಕ್ಕೆ, ನಿನ್ನದನ್ನು ನನ್ನದಕ್ಕೆ ಹೋಲಿಸುವ ಅಗತ್ಯವೂ ಇಲ್ಲ. ಜಾತಿ, ಹಣಕಾಸು ಪರಿಸ್ಥಿತಿ, ಉದ್ಯೋಗ, ಕುಟುಂಬ, ಆಸ್ತಿ, ಅದೃಷ್ಟ ಎಲ್ಲ ಒಬ್ಬರ ಹಾಗೆ ಇನ್ನೊಬ್ಬರದ್ದು ಖಂಡಿತಾ ಇರಬೇಕಾಗಿಲ್ಲ. ಹಾಗಂತ ಯಾರೂ ಯಾರಿಗೂ ಹೋಲಿಕೆಯೂ ಅಲ್ಲ. ಮದುವೆ, ಮಕ್ಕಳು, ವಿಚ್ಛೇದನ, ಅಂತಸ್ತು, ಧಾರ್ಮಿಕ ನಂಬಿಕೆಗಳು, ಆಹಾರ ಅದೆಲ್ಲ ಅವರವರ ವೈಯಕ್ತಿಕ ಬದುಕಿಗೆ ಸಂಬಂಧಿಸಿದ್ದು. ನಿಮಗೆ ತೀರ ಹತ್ತಿರದ ಬಂಧು ಮಿತ್ರರಿಗೆ ಖಂಡಿತಾ ಸಲಹೆ ನೀಡುವ ಅಧಿಕಾರ, ತರಾಟೆಗೆ ತೆಗೆದುಕೊಳ್ಳುವ ಸಲುಗೆ ಖಂಡಿತಾ ನಿಮಗಿದೆ. ನಾವು ತಪ್ಪು ಮಾಡಿದಾಗ ನಮ್ಮನ್ನು ನಮ್ಮ ಆಪ್ತರಲ್ಲದೆ ಇನ್ಯಾರು ತಿದ್ದಬೇಕು. ಆದರೆ, ನಮಗೆ ತೀರಾ ಪರಿಚಿತರೂ ಅಲ್ಲದ ಅಪರಿಚಿತರು ಸಿಕ್ಕಾಗ ಸಹಿತ ಯಾಕೆ ಮದುವೆ ಲೇಟು, ಯಾಕೆ ಮಕ್ಕಳಾಗ್ಲಿಲ್ಲ, ಇನ್ನೊಂದು ಮಗು ಯಾವಾಗ, ಆ ಶಾಲೆಗೆ ಮಗುವನ್ನು ಯಾಕೆ ಕಳಿಸ್ತೀರಿ, ಛೆ ಈ ಬೈಕು ಯಾಕೆ ತಗೊಂಡ್ರಿ, ಛೇ ನೀವು ಆ ಬಯಲಾಟಕ್ಕೆ ಹೋದದ್ದ, ಎಬೇ ನೀವು ಹೊಟೇಲಿಗೆ ಹೋಗುವುದು ಅದನ್ನು ತಿನ್ನುವುದಕ್ಕ...?” ಅಂತೆಲ್ಲ ಪುಂಖಾನುಪುಂಖವಾಗಿ ವಿಮರ್ಶೆಗೆ ತೊಡಗುವ ಮುನ್ನ ಸ್ವಲ್ಪ ಯೋಚಿಸಿ. ಅವರವರ ಬದುಕು, ಅವರವರ ಪರಿಸ್ಥಿತಿ, ಅವರವರ ಮನಃಸ್ಥಿತಿ, ಅವರಿಷ್ಟ. ನಿಮಗ್ಯಾಕೆ ಅಧಿಕಪ್ರಸಂಗ. ಜಗತ್ತಿನಲ್ಲಿ ಇದು ಮಾತ್ರ ಸತ್ಯ, ಇದು ಮಾತ್ರ ಸರಿ, ಇದುವೇ ಅಂತಿಮ ಆದರ್ಶ ಅಂತ ಖಂಡಿತಾ ಇಲ್ಲ. ಅವೆಲ್ಲ ನಮ್ಮ ಹೋಲಿಕೆ ಹಾಗೂ ವಿಮರ್ಶೆಗಳಿಂದ ಹುಟ್ಟಿರುವುದು ಅಷ್ಟೇ. ಅಷ್ಟಕ್ಕೂ ಯಾರ್ಯಾರಿಗೋ ಪುಕ್ಕಟೆ ಸಲಹೆ ನೀಡುವ, ಅವರ ವೈಯಕ್ತಿಕ ಬದುಕಿಗೆ ಸೌಟು ಹಾಕಿ ಕದಡಿಸಿ ತಪ್ಪುಗಳನ್ನು ಅಥವಾ ತಪ್ಪುಗಳು ಅಂತ ನೀವು ಅಂದುಕೊಂಡಿರುವುದನ್ನು ಎತ್ತಿ ಆಡಿ, ತೋರಿಸುವುದರಿಂದ ನೀವು ಎಷ್ಟು ಪರಿಪೂರ್ಣರಾಗಿದ್ದೀರಿ? ಜಗತ್ತಿನಲ್ಲಿ ಸಮಸ್ಯೆಗಳೇ ಇಲ್ಲದ, ದೌರ್ಬಲ್ಯಗಳೇ ಇಲ್ಲದ ಮನುಷ್ಯರೂ ಇರ್ತಾರ...?! ಸುಮ್ಮನೆ ಒಂದು ದೊಡ್ಡಸ್ಥಿಕೆ, ಒಂದು ಘನಸ್ಥಿಕೆಯ ಪ್ರದರ್ಶನ ಅಷ್ಟೇ... ಬೇರೆಯವರ ಬದುಕಿನೊಳಗೆ ಕಾರಣವೇ ಇಲ್ಲದೆ ಇಣಕುವವರ ಪೈಕಿ ಮುಕ್ಕಾಲು ಪಾಲು ಜನಕ್ಕೆ ಅವರ ಸಮಸ್ಯೆಗಳನ್ನು ಪರಿಹರಿಸುವ ಯಾವ ಆಸಕ್ತಿಯೂ ಇರುವುದಿಲ್ಲ. ನೀನು ಸರಿ ಇಲ್ಲ, ನಾನು ಸರಿ ಇದ್ದೇನೆ. ನೋಡು ನನ್ನನ್ನು ನೋಡಿ ಕಲಿ ಎನ್ನುವ ಅಪ್ಪಟ ದಾಷ್ಟ್ರ್ಯ, ಅಪ್ಪಟ ದುರಹಂಕಾರ ಅಷ್ಟೇ. ನೀವೊಂದು ಗಮನಿಸಿ, ತಮ್ಮ ಬಗ್ಗೆ ಭಯಂಕರವಾಗಿ ಇರುವ ಕೀಳರಿಮೆಯನ್ನು ಮುಚ್ಚಿ ಹಾಕಲು ತುಂಬ ಮಂದಿ ಈ ಥರ ಸಲಹೆ ವೀರರಾಗಿ ದಿನ ದೂಡುತ್ತಲೇ ಇರ್ತಾರೆ. ಅವರು ಬಹಳಷ್ಟು ಸಲ ಪ್ರಶ್ನೆಗಳನ್ನು ಮಾತ್ರ ಕೇಳ್ತಾರೆ, ಉತ್ತರವನ್ನು ಕೇಳಿಸಿಕೊಳ್ಳುವಷ್ಟು ಸಹನೆಯಾಗಲೀ, ಆಸಕ್ತಿಯಾಗಲಿ ಅವರಿಗೆ ಇರುವುದಿಲ್ಲ!

ತಪ್ಪುಗಳನ್ನು ಹುಡುಕಲು, ಇತರರ ನ್ಯೂನತೆಗಳನ್ನು ಎತ್ತಿ ಹೇಳಲು, ಇತರರ ಅಸಹಾಯಕತೆ ಕುರಿತು ಸಾರ್ವಜನಿಕವಾಗಿ ವಿಮರ್ಶೆ ಮಾಡಲು ತುಂಬ ಸುಲಭ. ಅದಕ್ಕೇನೂ ಖರ್ಚಿಲ್ಲ. ಆದರೆ ಸರಿಯಾದ ದಾರಿ ತೋರಿಸಿ, ಕೈಹಿಡಿದು ನಡೆಸಿ, ವೈಜ್ಞಾನಿಕವಾಗಿ, ವಾಸ್ತವಿಕ ನೆಲೆಗಟ್ಟಿನಲ್ಲಿ ಸಲಹೆ ನೀಡಲು, ಸಮಸ್ಯೆ ಮುಗಿಯುವ ತನಕ ಅವರ ಜೊತೆಗೇ ಇರಲು, ಬದುಕನ್ನು ಹತ್ತಿರದಿಂದ ಕಂಡು ಸಾಂತ್ವನ ಹೇಳಲು ನಮಗೆ ಪುರುಸೊತ್ತು ಉಂಟ, ನಾವದನ್ನು ಮಾಡ್ತೇವ....?! ಮತ್ಯಾಕೆ ನಮಗೆ ಅಧಿಕಪ್ರಸಂಗ!!!

-ಕೃಷ್ಣಮೋಹನ ತಲೆಂಗಳ (23.01.2023)

No comments: