ಸೆಲ್ಫೀ ತೆಗೆಯಲು ಅಸಾಧ್ಯವಾಗಿದ್ದ ಕಾಲದಲ್ಲಿ ಹುಟ್ಟಿದವರ ತಲ್ಲಣಗಳು...!

 

ಫೋಟೋ ಕೃಪೆ:ಶ್ರೀಕಾಂತ್ ಹೆಮ್ಮಾಡಿ

ಹೌದು, ನಾವು ಸೆಲ್ಫೀ ತೆಗೆಯಲು ಅಸಾಧ್ಯವಾಗಿದ್ದ ಕಾಲದಲ್ಲಿ ಹುಟ್ಟಿದವರು. ಯಾಕೆ ಅಸಾಧ್ಯವಾಗಿತ್ತು ಅಂದರೆ ಆಗ ಮೊಬೈಲೇ ಇರಲಿಲ್ಲ! ನಾವೆಲ್ಲ ಶಾಲಾ, ಕಾಲೇಜು ಕಲ್ತು ಕೆಲಸಕ್ಕೆ ಸೇರಿದ ಮೇಲೆ ಮೊಬೈಲ್ ಅನ್ನುವುದು ಕೈಗೆ, ಮನೆಗೆ ಬಂದದ್ದು. ಫೋಟೋಗ್ರಾಫರ್ ಬಿಟ್ಟು ಇನ್ಯಾರೂ ಫೋಟೋ ತೆಗೆಯದೇ ಇದ್ದ ಕಾಲವದು. ಅದಕ್ಕೇ ನಮ್ಮತ್ರ ಹೋದದ್ದು, ಬಂದದ್ದು, ಕೂತದ್ದು, ನಿಂತದ್ದು, ನಕ್ಕದ್ದು, ಅತ್ತದ್ದು ಎಲ್ಲ ಸೆಲ್ಫೀಗಳ ಭಯಂಕರ ಸಂಗ್ರಹ ಇಲ್ಲ...

ಮೊಬೈಲ್ ಅನ್ನುವುದೇ ಗೊತ್ತಿಲ್ಲದ ಕಾಲದಲ್ಲಿ ಬೆಳೆದು ದೊಡ್ಡವರಾದ ಮಂದಿಗೆ (1990ಕ್ಕೂ ಮುಂಚೆ ಹುಟ್ಟಿದವರು) ಮಾತ್ರ ರೇಡಿಯೋ ಕೇಳುವುದು, ನಡೆದುಕೊಂಡೇ ಶಾಲೆಗೆ ಹೋಗುವುದು, ಸ್ಟುಡಿಯೋಗೆ ಹೋಗಿ ಫೋಟೋ ತೆಗ್ಸೋದು, ಕಾಗದ ಬರೆದು ಪೋಸ್ಟು ಮಾಡುವುದು, ಹಳೆ ನೋಟ್ಸು ಪುಸ್ತಕದ ಹಾಳೆ ಹರಿದು ರಫ್ ಪುಸ್ತಕ ಮಾಡುವುದು, ಟಿ.ವಿ.ಯಲ್ಲಿ ವಾರಕ್ಕೊಂದೇ ಸಿನಿಮಾ ನೋಡುವುದು ಇವೆಲ್ಲ ಗೊತ್ತಿರುತ್ತದೆ. ಅದರ ನಂತರ ಹುಟ್ಟಿದವರ ಪೈಕಿ ಬಹುತೇಕರ ಮಂದಿಯ ಮನೆಯಲ್ಲಿ ಜನಿಸಿದಾಗಲೇ ಕರೆಂಟು, ಟಾಯ್ಲೆಟ್ಟು, ತಾರಸಿ ಮನೆ, ಬಹುಶಃ ಮೊಬೈಲು ಸಹ ಇರುತ್ತದೆ, ಇದ್ದೀತು. ಹಾಗಾಗಿ ಅವರಿಗೆ ಕರೆಂಟಿಲ್ಲದ ಮನೆ, ಟಾಯ್ಲೆಟ್ಟೇ ಇಲ್ಲದ ಬದುಕು, ಫೋನ್ ಇಲ್ಲದ ಜೀವನ ಇವನ್ನೆಲ್ಲ ಕಲ್ಪಿಸಲೂ ಸಾಧ್ಯವಿಲ್ಲ. ಇವೆರಡನ್ನೂ ಕಂಡ ಮಂದಿಗೆ ಭಯಂಕರವಾಗಿ ಅನ್ನಿಸುವುದು ಮೊಬೈಲು ನಮ್ಮ ಸಹಜ ಖುಷಿಯನ್ನೇ ಕಸಿದುಕೊಂಡಿದೆ ಅಂತ.

1985-1990ಕ್ಕೂಮುಂಚೆ ಹುಟ್ಟಿದವರಿಗೆ ಅದೇ ಕಾಗದ ಬರೆಯುತ್ತಾ, ರೇಡಿಯೋ ಕೇಳುತ್ತಾ ಇದ್ದ ಯುಗಕ್ಕೆ ಅಂಟಿಕೊಂಡಿರುವುದಕ್ಕೂ ಆಗುವುದಿಲ್ಲ, ಜಾಲತಾಣ, ಮೊಬೈಲಿನ ಅತಿರೇಕದ, ಅಸಹಜದ ಅವತಾರಗಳನ್ನು ನೋಡಿ ಸುಮ್ಮನೆ ಇರಲಾಗುವುದಿಲ್ಲ. ಅದಕ್ಕೇ ಆಗಾಗ ಇಂತಹ ಲೇಖನಗಳು ಸೃಷ್ಟಿಯಾಗುತ್ತವೆ! ನಮ್ಮ ನಮ್ಮ ಸಮಾಧಾನಕ್ಕೆ.

1)      ಆಗ ನಮಗೆ ನಮ್ಮನ್ನು ನಾವು ಬೇರೆಯೇ ಥರ ತೋರಿಸಿಕೊಳ್ಳಬೇಕು ಅಂತ ಗೊತ್ತಿರ್ಲಿಲ್ಲ. ಪ್ರತಿಭೆ ಇದ್ದರೆ, ಸಾಮರ್ಥ್ಯ ಇದ್ದರೆ, ಧೈರ್ಯ ಇದ್ದರೆ, ಅದೃಷ್ಟ ಇದ್ದರೆ ನಾವು ಬೆಳಕಿಗೆ ಬಂದೇ ಬರುತ್ತೇವೆ ಅಂತ ಬಲವಾಗಿ ನಂಬಿಕೆ. ಈಗ ಹಾಗಲ್ಲ ನಿಮಗೆ ಜನರನ್ನು ತಲುಪಲು ಗೊತ್ತಿದ್ದರೆ, ನೀವು ಸೆಲೆಬ್ರಿಟಿ ಅಂತ ಅನ್ನಿಸಿಕೊಂಡಿದ್ದರೆ, ಸ್ವಲ್ಪ ಜನಪ್ರಿಯತೆ ದಕ್ಕಿದರೆ ಸಾಕು, ಮೇಲೆ ಹೇಳಿದ ಯಾವುದೂ ಬೇಕಾಗಿಲ್ಲ ಅಂತ ನಾನು ಹೇಳಿದರೆ ಉತ್ಪ್ರೇಕ್ಷೆ ಆಗದೇನೋ.

2)      ಗೂಗಲ್ ಇರಲಿಲ್ಲ ನಮ್ಮ ಬಾಲ್ಯದಲ್ಲಿ. ಏನು ಬೇಕಿದ್ದರೂ ಕೇಳಿ, ಓದಿ ತಿಳಿಯಬೇಕಾಗಿತ್ತು. ಇಂದು ಹೇಳುವುದೇ ಬೇಡ. ಓದುವುದು ಬಿಡಿ, ಮಾತನಾಡಲೂ ನಮಗೆ ಪುರ್ಸೊತ್ತಿಲ್ಲ. ಯಾಕೆ ಪುರುಸೊತ್ತಿಲ್ಲ ಅಂತ ಯೋಚಿಸಿದರೆ ಅದಕ್ಕೂ ಉತ್ತರ ಸಿಗುವುದಿಲ್ಲ. ಕೈಯ್ಯಲ್ಲಿನ ಮೊಬೈಲ್, ಅದರ ಡೇಟಾ ಪ್ಲಾನ್, 4ಜಿ ಬಳಿಕ ಈಗ ಬಂದಿರುವ 5ಜಿಯ ಭಯಂಕರ ವೇಗ, ಏನೇನೋ ಆಫರ್ ಗಳು, ಏನೇನೋ ಆಮಿಶಗಳು, ಭ್ರಮೆಗಳ ನಡುವೆ ನಡುವೆ ಸಿಕ್ಕಾಪಟ್ಟೆ ಕಳೆದು ಹೋಗುತ್ತಿದ್ದೇವೆ. ನಾವು ಕೇಳಿಸಿಕೊಳ್ಳುವುದನ್ನು, ಗಂಭೀರವಾಗಿ ಓದುವುದನ್ನು, ಸಹಜವಾಗಿ, ಮನಃಪೂರ್ವಕವಾಗಿ ಮಾತನಾಡುದನ್ನೂ ಬಿಡ್ತಾ ಇದ್ದೇವೆ. ಇದೊಂಥರ ಫೇಡೌಟ್ ಆದ ಹಾಗೆ... ಗೊತ್ತಾಗುವುದೇ ಇಲ್ಲ. ಅಂಚೆ ಕಚೇರಿಯಲ್ಲಿ ಪತ್ರವ್ಯವಹಾರ ಬಹುತೇಕ ನಿಂತೇ ಹೋದ ಹಾಗೆ, ಇಂತಹ ಬದಲಾವಣೆಗಳು ಸದ್ದಿಲ್ಲದೇ, ಅಯಾಚಿತವಾಗಿ, ಕಟ್ಟಿ ಹಾಕಲಾಗದ ಅಸಹಾಯತೆಯಂತೆ ಬದಲಾಗುತ್ತಲೇ ಇದೆ.

3)      ಸಹನೆ ಕಮ್ಮಿಆಗಿದೆ. ಅಲ್ವ. ತುಂಬ ಬೇಗ ಜನಪ್ರಿಯರಾಗಬೇಕು, ತುಂಬ ವೇಗವಾಗಿ ಎಲ್ಲರನ್ನೂ ತಲುಪಬೇಕು, ಎಲ್ಲರಿಗಿಂತ ಮೊದಲು ನನಗೆ ತಿಳಿಯಬೇಕು, ನಾನು ಹೇಳಿಯೇ ಎಲ್ಲರಿಗೂ ತಿಳಿಯಬೇಕು, ಇದಕ್ಕೋಸ್ಕರ ಯಾವ ಮಾರ್ಗದಲ್ಲಿ ನಡೆದರೂ ಸರಿ ಎಂಬಂಥ ಮನಃಸ್ಥಿತಿ ಬಂದೊದಗಿದೆ ಅಲ್ವ? ಏನು ಕಾರಣ, ಯಾರು ಕಾರಣ, ಯಾಕೆ ಆಯಿತು ಎಂಬ ವಿಮರ್ಶೆ ಬೇಡ. ಆಗಿರುವುದಂತೂ ನಿಜ. ಇವರು ಅವರನ್ನು, ಅವರು ಇವರನ್ನು ದೂರಿದರೂ, ಆಂತರಂಗಿಕವಾಗಿ ತಾನೇ ಎಕ್ಸ್ ಕ್ಲೂಸಿವ್ ಅನ್ನಿಸಿಕೊಳ್ಳುವಂಥ ಭಲವಾದ ವಾಂಛೆ ಬಹುತೇಕರಲ್ಲಿ ಇದೆ.

4)      ನಮ್ಮ ಬಾಲ್ಯದಲ್ಲಿ ಸಿಸಿ ಕೆಮರಾ ನೋಡಿಯೇ ಗೊತ್ತಿಲ್ಲ, ಎಟಿಎಂ ವ್ಯವಸ್ಥೆ ಇರಲೇ ಇಲ್ಲ, ಮೊಬೈಲ್ ಬಿಡಿ, ಲ್ಯಾಂಡ್ ಲೈನ್ ಫೋನುಸಹಿತ ಮನೆಯಲ್ಲಿ ಇರಲಿಲ್ಲ. ಇನ್ನು ಆಧಾರ್ ಕಾರ್ಡ್, ಥಂಬ್ ಇಂಪ್ರೆಶನ್, ಸುಳ್ಳು ಪತ್ತೆ ಯಂತ್ರ, ಟೋಲ್ ಗೇಟು, ಇಂಟರ್ನೆಟ್ ಬ್ಯಾಂಕು (ಅಸಲಿಗೆ ಇಂಟರ್ ನೆಟ್ ಜನಪ್ರಿಯವಾಗಿದ್ದೇ 21ನೇ ಶತಮಾನದ ಆರಂಭದಿಂದ), ಯಾವುದೂ ಇರಲಿಲ್ಲ. ಇವತ್ತು ಹಾಗಲ್ಲ, ಇಷ್ಟೆಲ್ಲ ಸಾಕ್ಷಿಗಳು, ನಡೆದಾಡಿದ ವಿವರಗಳು ವೈಜ್ಞಾನಿಕವಾಗಿ ಸಿಗುವ ದಿನಗಳಲ್ಲೂ ನಮಗೆ ಪರಸ್ಪರ ನಂಬಿಕೆಯೇ ಇಲ್ಲ. ಎಷ್ಟು ಸಾಕ್ಷಿಗಳು, ಭದ್ರತೆ, ಸಂಶಯ, ಮುಂಜಾಗ್ರತೆ ಮಾಡಿದರೂ ಸಾಲುವುದಿಲ್ಲ, ಅಪರಾಧ ಪ್ರಮಾಣ, ವಂಚನೆ, ಮಾತಿಗೆ ತಪ್ಪುವುದು ನಡೆಯುತ್ತಲೇ ಇದೆ. ಹಾಗಾದರೆ ಒಂದಂತೂ ನಿಜ. ತಂತ್ರಜ್ಞಾನ ಎಷ್ಟೇ ಬೆಳೆದರೂ ನಂಬಿಕೆಯನ್ನು ಯಂತ್ರಗಳು ಬೆಳೆಸಲಾರವು. ಅಲ್ವ?

5)      ಬಾಲ್ಯದಲ್ಲಿ, ಯೌವ್ವನದಲ್ಲೂ ಸಹ ಜನ ತೋರಿಕೆಗೆ ಮಾತನಾಡ್ತಾರೆ, ತೋರಿಕೆಗೆ ಶುಭ ಕೋರ್ತಾರೆ, ತಮ್ಮನ್ನು ತಾವೇ ಜಾಹೀರುಪಡಿಸಿಕೊಳ್ತಾರೆ ಎಂಬ ಅನುಭವಗಳು ನಮಗೆ ಆದದ್ದು ತುಂಬ ವಿರಳ. ಈಗ ಹಾಗಲ್ಲ, ತನ್ನನ್ನು ತಾನೇ ಹೊಗಳಿಕೊಳ್ಳುವುದು, ರಾಜಕೀಯ ಪಕ್ಷದಲ್ಲಿ, ಸಾಹಿತ್ಯದಲ್ಲಿ, ಕಲೆಯಲ್ಲಿ ಸಹಿತ ಪ್ರತಿ ರಂಗದಲ್ಲೂ ತನ್ನ ಸಾಧನೆಯನ್ನು ತಾನೇ ಹೇಳಿಕೊಳ್ಳುವುದು.ಲೈಕು, ಕಮೆಂಟು, ಶೇರು, ಟಿಆರ್ ಪಿ, ಕಮೆಂಟ್ಸು, ಸಬ್ ಸ್ಕ್ರಿಪ್ಶನ್, ವೋಟಿಂಗ್ ಆಧಾರದಲ್ಲಿ ಯಶಸ್ಸು, ಸಾಧನೆ, ಗೆಲವು, ಪ್ರತಿಭೆಯನ್ನು ಅಳೆಯುವಲ್ಲಿಗೆ ತಲುಪಿದ್ದೇವೆ. ಅಯ್ಯೋ ನಾನೊಬ್ಬನಿದ್ದೇನೆ ಅಂತ ಅವನಾಗಲೀ, ಅವನ ಪಕ್ಕದವನಾಗಲೀ ಹೇಳದೇ ಹೋದರೆ ಆತ ಅಲ್ಲಿಗೇ ಬಾಕಿ ಆಗುತ್ತಾನೆ ಅಷ್ಟೆ.

6)      ಫೇಸ್ಬುಕ್ಕು ಬಳಸ್ತೇವೆ, ವಾಟ್ಸಪು ಬಳಸ್ತೇವೆ, ಅದರಲ್ಲಿ ಸ್ಟೇಟಸ್ ಹಾಕ್ತೇವೆ, ಯೂಟ್ಯೂಬ್ ಚಾನೆಲ್ಲು ಮಾಡ್ತೇವೆ... ಎಲ್ಲವನ್ನು ಸಮಯವಿದ್ದು, ಮನಸ್ಸಿಟ್ಟು ನೋಡ್ತೇವ? ಓದುತ್ತೇವ? ಮನಃಪೂರ್ತಿಯಾಗಿ ಪ್ರಶಂಸೆ ನೀಡ್ತೇವ? ಬೆಳಗ್ಗೆದ್ದು ವಾಟ್ಸಪ್ ಸ್ಟೇಟಸ್ಸಿನಲ್ಲಿ ಹಾಕುವ ಫಾರ್ವರ್ಡೆಂಡ್ ಕ್ವೋಟ್ಸ್ ಗಳನ್ನು ನಾವೆಷ್ಟು ಗಮನವಿಟ್ಟು ಓದುತ್ತೇವೆ,ಒಂದು ವೇಳೆ ಓದಿದರೆ ಅದನ್ನು ನಾವೆಷ್ಟು ಪಾಲಿಸುತ್ತೇವೆ. ತುಂಬ ಮಂದಿ ಪಾಲಿಸುವುದು ಬಿಡಿ, ಸರಿಯಾಗಿ ಅರ್ಥ ಮಾಡಿಕೊಂಡಿರುವುದೇ ಇಲ್ಲ. ಚಂದ ಕಂಡಿತು, ನನ್ನ ಹಾಗೆ ಇನ್ನೂ ನಾಲ್ಕು ಜನಕ್ಕೆ ಚಂದ ಕಾಣಲಿ ಎಂಬ ಉದಾರ ಮನಸ್ಸಿನಿಂದ ಶೇರ್ ಮಾಡ್ತಾರೆ. ಹಾಗಾದರೆ ನಮಗೊಂದು ಚಂದದ ವೇದಿಕೆ ಕಲ್ಪಿಸುವ ಫೇಸ್ಬುಕ್ಕು ವಾಲು, ವಾಟ್ಸಪ್ ಸ್ಟೇಟಸ್ಸು, ಯೂಟ್ಯೂಬ್ ಚಾನೆಲ್ಲು, ಇನ್ ಸ್ಟಾಗ್ರಾಂ ವೇದಿಕೆ ಇದನ್ನು ನಾವೆಷ್ಟು ಪ್ರಾಮಾಣಿಕವಾಗಿ, ನೇರವಾಗಿ, ಆತ್ಮಸಾಕ್ಷಿಗೆ ಲೋಪವಾಗದಂತೆ ಬಳಸ್ತೇವೆ. ಸ್ವಲ್ಪ ಯೋಚಿಸಿ. ತಂತ್ರಜ್ಞಾನ ಇಷ್ಟೊಂದು ಮುಂದುವರಿದಾಗಲೂ ನಂಬಿಕೆ, ಪ್ರಾಮಾಣಿಕತೆ ಹಾಗೂ ಸಹಜತೆ ಅನ್ನುವುದು ಒಂಥರ ಸರಕಿನ ಹಾಗೆ ಕಾಣಿಸ್ತಾ ಇದೆ.?

7)      ಪೇಪರು ಓದುವುದು, ರೇಡಿಯೋ ಕೇಳುವುದು ಬಿಡಿ. ತುಂಬ ಜನ ಟಿ.ವಿ.ನೋಡುವುದನ್ನು ಬಿಟ್ಟಿದ್ದಾರೆ, ಥಿಯೇಟರಿಗೆ ಹೋಗಿ ಸಿನಿಮಾ ನೋಡಲೂ ಕಷ್ಟವಾಗುತ್ತಿದೆ. ನೆಂಟರ ಮನೆಗೆ ಹೋಗಲು, ನೆಂಟರು ಬಂದರೆ ಮಾತನಾಡಲು ಕಷ್ಟ, ಭಾರ, ಅಸಹನೆ ಅನ್ನಿಸುವ ಹಾಗೆ ಇದೆ ಪರಿಸ್ಥಿತಿ. ಅಸಲಿಗೆ ನಮ್ಮ ನೆನಪು, ಜ್ಞಾನ, ಸಂಗ್ರಹಗಳು ಗೂಗಲ್ ಡ್ರೈವಿನಲ್ಲಿ, ಮೊಬೈಲ್ ಮೆಮೊರಿ ಕಾರ್ಡಿನಲ್ಲಿ ಅವಿತಿರುತ್ತವೆ. ಅವೆಲ್ಲಾದರೂ ಕೈಕೊಟ್ಟರೆ ನಮ್ಮ ಸಂಗ್ರಹ, ಕಾಂಟಾಕ್ಟ್ ನಂಬರ್, ತೆಗೆದ ಫೋಟೋ, ಅಮೂಲ್ಯ ಮಾಹಿತಿ ಎಲ್ಲ ನಾಶವಾಗುತ್ತವೆ. ಯಾವ ಫೋನ್ ನಂಬರೂ ನಮಗೆ ನೆನಪಿರುವುದಿಲ್ಲ. ತಲೆಗೆ ನಾವು ಕೆಲಸವನ್ನೇ ಕೊಡುವುದಿಲ್ಲ! ಹಾಗಾದರೆ ಸ್ವಂತ ತಲೆಯನ್ನೂ ಬಳಸದೆ, ನೆನಪಿಗೂ, ಮಾತಿಗೂ, ಆಲಿಸುವುದಕ್ಕೂ ಮೊಬೈಲನ್ನೇ ನಂಬಿರುವ ನಾವು ನಮ್ಮ ತಲೆಯನ್ನು ಯಾವುದಕ್ಕೆ ಬಳಸುತ್ತಿದ್ದೇವೆ?!!!

8)      ಇಷ್ಟುದ್ದದ ಲೇಖನವನ್ನು ತುಂಬ ಮಂದಿ ಓದುವುದೇ ಇಲ್ಲ. ಓದುವಷ್ಟು ವ್ಯವಧಾನ ಯಾರಿಗೂ ಇರುವುದಿಲ್ಲ. ಒಂದು ದಿನಕ್ಕೆ ಎಷ್ಟು ಲೇಖನ ಓದಬಹುದು, ಎಷ್ಟು ವಿಡಿಯೋ ನೋಡಬಹುದು, ಎಷ್ಟು ಮಂದಿಯ ಸ್ಟೇಟಸ್ಸಿಗೆ ಕಮೆಂಟು ಹಾಕಬಹುದು, ಎಷ್ಟು ಮಂದಿಯ ಜೊತೆ ಮನಃಪೂರ್ವಕವಾಗಿ ಹರಟೆ ಹೊಡೆಯಬಹುದು, ಎಷ್ಟು ಸೀರಿಯಸ್ಸಾಗಿ, ಪ್ರಾಮಾಣಿಕವಾಗಿ ನಮ್ಮ ಅನಿಸಿಕೆಗಳನ್ನು ನೇರವಾಗಿ, ದಿಟ್ಟತನದಿಂದ ಪ್ರಕಟಪಡಿಸಬಹುದು. ಸ್ವಲ್ಪ ಯೋಚಿಸಿ, ಅದು ಸಾಧ್ಯ ಉಂಟ? ಮೊದಲು ಆಗ್ತಾ ಇತ್ತಲ್ವ? ಈಗೀಗಿ ಯಾಕೆ ಆಗ್ತಾ ಇಲ್ಲ...?

9)      ಅಸಲಿಗೆ ಈಗ ಯಾರು ಯಾರನ್ನೂ ಅಗಲುವುದಿಲ್ಲ, ಮದುವೆಯಾಗಿ ಹೋಗುವ ಹೆಣ್ಣು ಮಗಳು, ಶಾಲೆ ಕಲಿತು ಹೊರ ನಡೆಯುವ ಮಕ್ಕಳು, ಕೆಲಸ ತ್ಯಜಿಸಿದ ಉದ್ಯೋಗಿ, ಯಾರೂ ಎಲ್ಲಿಗೂ ಹೋಗುವುದಿಲ್ಲ! ಇಲ್ಲೇ ನಮ್ಮ ಮೊಬೈಲ್ ವ್ಯಾಪ್ತಿಯೊಳಗಿರ್ತಾರೆ...! ನಮಗೆ ಅವರ ಆಟೋಗ್ರಾಫ್, ಬೀಳ್ಕೊಡುಗೆ ಎಂಥದ್ದೂ ಬೇಕಾಗುವುದಿಲ್ಲ. ಯಾಕೆಂದರೆ ನಾವು ಅವರನ್ನು ಅಗಲುವುದೇ ಇಲ್ಲ! ಹಾಗಾಗಿಯೇ ತುಂಬ ಸಲ ನಾವು ಕುತೂಹಲಗಳನ್ನು, ಅಚ್ಚರಿಯನ್ನು, ಮನಃಪೂರ್ವಕ ನಗುವನ್ನೂ ಕಳೆದುಕೊಳ್ಳಲು ಇಂತಹ ಒಂದು ಮಾಹಿತಿ ತಂತ್ರಜ್ಞಾನದ ಭಯಂಕರ ವರ್ತುಲ ಕಾರಣವಿರಬಹುದು ಅಂತ ಸಾಕಷ್ಟು ಸಲ ಅನ್ನಿಸುವುದಿದೆ.

10)   ಆಗಲೇ ಹೇಳಿದ್ದೇನೆ.ಇದು ಸೆಲ್ಫೀ ತೆಗೆಯಲು ಗೊತ್ತಿಲ್ಲದ ಕಾಲದಲ್ಲಿ ಹುಟ್ಟಿದವರ ಪರವಾಗಿ ಒಂದು ದೀರ್ಘ ನಿಟ್ಟುಸಿರು ಅಷ್ಟೇ. ನಮಗೆ ಇದರಿಂದ ಆಚೆ ಹೋಗುವುದಕ್ಕೆ ಆಗುವುದಿಲ್ಲ. ಮೊಬೈಲ್ ಪೂರ್ವ ಯುಗ ಹಾಗೂ ಮೊಬೈಲ್ ಉತ್ತರ ಎರಡನ್ನೂ ಕಂಡಿರುವ ನಮಗೆ ಮನಃಶಾಂತಿ, ಬಿಡುವು, ನೆಮ್ಮದಿ, ಸಹಜವಾದ ಜೀವನ ಶೈಲಿ ಇವೆಲ್ಲ ಕೈಜಾರಿ ಹೋಗುತ್ತಿವೆಯಾ ಅಂತ ಅಭದ್ರತೆ ಕಾಡುತ್ತಿದೆ. ಆ ಕಾಲ ಚಂದ, ಈ ಕಾಲ ಕೆಟ್ಟದು ಅಂತ ಹೇಳುವುದು ಅತ್ಯಂತ ಅರ್ಥಹೀನ. ಕಾಲದಿಂದ ಕಾಲಕ್ಕೆ ಬದಲಾವಣೆಗಳು ಅತ್ಯಂತ ಸಹಜ ಹಾಗೂ ಅದು ನಿರಾಕರಿಸಲಾಗದ ಸತ್ಯ. ಆದರೆ, ದೊಡ್ಡದೊಂದು ಜಲಪಾತಕ್ಕೆ ಅಡ್ಡ ನಿಂತು ನಮ್ಮದೇ ಸೆಲ್ಫೀ ಶೇರ್ ಮಾಡುವ ನಮಗೆ... ಫೋಟೋದಲ್ಲಿ ಜಲಪಾತ ಕಾಣದಿದ್ದರೂ ಪರ್ವಾಗಿಲ್ಲ, ಈಗೀಗ ಹೋದಲ್ಲಿ, ಬಂದಲ್ಲಿ ನಮ್ಮನ್ನೇ ತೋರಿಸಿಕೊಳ್ಳುವ ಹುಚ್ಚು ಭಯಂಕರ ಜೋರಾಗಿದೆ ಅಂತ ಅನ್ನಿಸುವುದಿಲ್ವ? ಇಲ್ಲವಾದರೆ, ಇಲ್ಲ ಅನ್ನಿ. ಕೊನೆತನಕ ಯಾರಾದರೂ ಲೇಖನ ಓದಿದ್ದರೆ ನಿಮ್ಮ ಪ್ರತಿಕ್ರಿಯೆಗಳಿಗೆ ಮುಕ್ತ ಸ್ವಾಗತ ಇದೆ.

-ಕೃಷ್ಣಮೋಹನ ತಲೆಂಗಳ (15.01.2022)

1 comment:

Guruprasad T N said...

ಸತ್ಯವಾದ ಮಾತು ಸರ್... ಏನೋ‌ ಭಾರಿ ಸಾಧಿಸುತ್ತೇವೆ ಎಂದುಕೊಳ್ಳುವ ನಾವು ಕಳೆದುಕೊಳ್ಳುತ್ತಿರುವುದೇ ಹೆಚ್ಚು ಎಂಬುದು ನನ್ನ ಅನಿಸಿಕೆ.‌ನಮ್ಮ ಪ್ರಪಂಚ ಚಿಕ್ಕದಿತ್ತು ಆದರೆ ಅದರಲ್ಲಿ ಮುಗ್ಧತೆ ಸಂತೋಷ ಸಂಬಂಧ ಇತ್ತು.‌ಈಗ ಮಕ್ಕಳ ಪ್ರಪಂಚ ದೊಡ್ಡದು, ಆದರೆ ಅವರ ಪ್ರಪಂಚ ಎಂತದ್ದು ಎಂದರೆ ಗೊತ್ತಿಲ್ಲ! ಭವಿಷ್ಯದ ಬಗ್ಗೆ ಕುತೂಹಲಕ್ಕಿಂದ ಆತಂಕವೇ ಹೆಚ್ಚುತ್ತಿದೆ!