ಸಭಾ ಕಾರ್ಯಕ್ರಮ ಸೃಜನಶೀಲ ಆಗಿರಲಿ... ಜಡ್ಡುಗಟ್ಟಿದ ಚರ್ವಿತ ಚರ್ವಣಗಳಿಂದ ಆಚೆ ಬಂದು ಭಾಷಣಗಳನ್ನೂ ಸಹ್ಯವಾಗಿಸಬೇಕಾದ ಅಗತ್ಯ ಇಲ್ವೆ?
ಸಾಮಾಜಿಕವಾಗಿ ಕೆಲವೊಂದು ವಿಚಾರಗಳನ್ನು ನಮಗೆ ತುಂಬ ಸೃಜನಶೀಲವಾಗಿ ನಡೆಸಿಕೊಂಡು ಬರಲು ಸಾಧ್ಯವಿದೆ. ಅದಕ್ಕೆ ಯಾವುದೇ ಪಾರಂಪರಿಕ ಕಟ್ಟುಪಾಡು, ಸಂವಿಧಾನ ವಿಧಿಸಿದ ನಿರ್ಬಂಧ ಯಾವುದೇ ಇಲ್ಲ. ಆದರೂ ನಾವೂ ಯಾವುದೇ ಬದಲಾವಣೆಗಳನ್ನೂ ಮಾಡದೆ ಕೆಲವೊಂದನ್ನು ತುಂಬ ಯಾಂತ್ರಿಕವಾಗಿ, ಜಡ್ಡುಕಟ್ಟಿದ ಹಾಗೆ ಮಾಡುತ್ತಾ, ಹೇಳುತ್ತಾ ಬರುತ್ತಿದ್ದೇವೆ. ಅದು ಯಾಕಂದೇ ಅರ್ಥ ಮಾಡಿಕೊಳ್ಳುವಲ್ಲಿ ನಾನು ಸೋತಿದ್ದೇನೆ. ಉದಾಹರಣೆ ಸಭಾ ಕಾರ್ಯಕ್ರಮಗಳು. ಅಂತಹ ಕಲವು ಸಂಧಿಗ್ಥತೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ಪುರುಸೊತ್ತು ಇರುವವರು ಓದಬಹುದು.
1)
ಸಭಾ ಕಾರ್ಯಕ್ರಮಗಳಿಗೆ ಓರ್ವರನ್ನು ಅಧ್ಯಕ್ಷರು ಅಂತ
ನಿಯೋಜಿಸುತ್ತೇವೆ. ಅವರು ಕೊನೇ...ಗೆ (ಮುಕ್ಕಾಲುವಾಶಿ ಜನ ಎದ್ದು ಹೋದ ಮೇಲೆ) ಭಾಷಣ ಮಾಡ್ತಾರೆ.
ಗಣ್ಯ ಅತಿಥಿಗಳು ಎದ್ದು ಹೋದ ಮೇಲೆ ಅನಿವಾರ್ಯವಾಗಿ ಬಹುಮಾನ ವಿತರಣೆ ಮಾಡ್ತಾರೆ ಅನ್ನುವುದು
ಬಿಟ್ಟರೆ, ಅವರಿಗೆ ಅಧ್ಯಕ್ಷರ ನೆಲೆಯಲ್ಲಿ ಸಭಾ ಕಾರ್ಯಕ್ರಮದ ಮೇಲೆ ಯಾವುದಾದರೂ ಹೋಲ್ಡ್ ಅಥವಾ
ನಿಯಂತ್ರಣ ಇರ್ತದ? ಅಧ್ಯಕ್ಷರಿಗೂ, ಮುಖ್ಯ
ಅತಿಥಿಗಳಿಗೂ ವ್ಯತ್ಯಾಸ ಏನು?
2)
ಸಭಾ ಕಾರ್ಯಕ್ರಮವನ್ನು
ಮುಂದೆ ಕೊಂಡು ಹೋಗುವುದು ಎಂಸಿ ಅಥವಾ ನಿರೂಪಕರು. ತುಂಬ ಸಲ ಅತಿಥಿಗಳು ಹೇಳಬೇಕಾದ್ದು,
ಪ್ರಾಸ್ತಾವಿಕವಾಗಿ ಹೇಳಬೇಕಾದ್ದು ಎಲ್ಲ ಅವರೇ ಹೇಳಿ ಮುಗಿಸ್ತಾರೆ. ಮತ್ತೊಂದು ವಿಚಾರ ಅಂದ್ರೆ
ಆಯೋಜಕರು ನಿರೂಪಕನಿಗೆ ಪೂರ್ವಭಾವಿಯಾಗಿ ಸರಿಯಾದ ಮಾಹಿತಿ ನೀಡುರುವುದಿಲ್ಲ. ಅದರ ಬದಲು ಸಭೆ
ಸುರುವಾದ ಮೇಲೆ ವೇದಿಕೆಯಲ್ಲಿ ಆಸೀನರಾಗಿರುವ ಸಂಘಟಕರು ಓಪನ್ ಆಗಿ ಗೊಣಗುವುದು, ಬಯ್ಯುವುದು,
ನಿರೂಪಕನನ್ನು ತರಾಟೆಗೆ ತೆಗೆದುಕೊಳ್ಳುವುದೂ ಮಾಡ್ತಾರೆ.
3)
ಸಭೆಗೆ ವಿಧ್ಯುಕ್ತ ಟೇಕಾಫ್
ಸಿಕ್ಕುವುದು ಪ್ರಾಸ್ತಾವಿಕ ಭಾಷಣದಿಂದ. ಆದರೆ ಕೆಲವೊಮ್ಮೆ ಪ್ರಧಾನ ಭಾಷಣದಿಂದಲೂ ಪ್ರಾಸ್ತಾವಿಕವೇ
ದೀರ್ಘವಾಗುತ್ತದೆ. ಎಲ್ಲಿಯವರೆಗೆ ಅಂದರೆ ಧನ್ಯವಾದ ಸಮರ್ಪಣೆಯೂ ಪ್ರಾಸ್ತಾವಿಕದಲ್ಲೇ ನುಸುಳಿ
ಎಲ್ಲವೂ ಅಲ್ಲಿಗೇ ಮುಗಿದು ಹೋಗಿರುತ್ತದೆ!
4)
ಅತಿಥಿಗಳೂ ಅಷ್ಟೇ ಎರಡು
ಮಾತು ಅಂತ ಹೇಳುವುದು, ಇನ್ನೊಂದು ಮಾತು ಹೇಳಿ ಮುಗಿಸ್ತೇನೆ ಅಂತ ತೊಡಗಿ ಗಂಟೆ ಗಟ್ಲೆ
ಮಾತನಾಡುವುದು, ಸಂಘಟಕರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ತಪ್ಪು ತಪ್ಪಾಗಿ ಮಾತನಾಡುವುದು
ಮಾಡ್ತಾ ಇರ್ತಾರೆ. ಮುಕ್ಕಾಲು ಭಾಗ ಅತಿಥಿಗಳಿಗೆ ಸಮಯಪ್ರಜ್ಞೆಯೇ ಇರುವುದಿಲ್ಲ. ಸಭೆಯಲ್ಲಿ
ಕುಳಿತವರೆಲ್ಲ ತನ್ನ ಭಾಷಣಕ್ಕೇ ಬಂದದ್ದು ಎಂಬ ಭ್ರಮೆಯಲ್ಲಿ ಮಾತನಾಡುತ್ತಲೇ ಹೋಗುತ್ತಾರೆ.
5)
ನಿರೂಪಕ ಅತಿಥಿಯನ್ನು
ಹೊಗಳುವುದು, ಅತಿಥಿ ಅಧ್ಯಕ್ಷನನ್ನು ಹೊಗಳುವುದು, ಸ್ವಾಗತ ಭಾಷಣ ಮಾಡುವವ ಅತಿಥಿಯನ್ನು
ಹೊಗಳುವುದು... ಹೀಗೆ ಹೊಗಳುವಿಕೆಯ ಕೊಡುಕೊಳ್ಳುವಿಕೆ ಮಿತಿ ಮೀರಿದರೆ ತುಂಬ ಗಲೀಜು ಕಾಣಿಸ್ತದೆ.
ಯಾಕೆಂದರೆ ಸಭಿಕರಲ್ಲಿ ಹಲವರಿಗೆ ಕೆಲವರ ಯೋಗ್ಯತೆ ಗೊತ್ತಿರ್ತದೆ. ಸುಮ್ಮನೇ ಮೈಕ್ ಸಿಕ್ಕಿತು ಅಂತ
ವಟ್ರಾಸಿ ಹೊಗಳಿದ್ರೆ ಅದು ವೇದಿಕೆಯ ಪೌರುಷ ಆದೀತೆ ಹೊರತು “ನೀನು ನನ್ನನ್ನು ಹೊಗಳಿದರೆ, ನಾನು
ನಿನ್ನನ್ನು ಹೊಗಳುವೆ” ಎಂಬ ಅಲಿಖಿತ ಒಪ್ಪಂದ
ಸಭೆಯನ್ನು ವೈಯಕ್ತಿಕ ಹೊಗಳು ವೇದಿಕೆಯನ್ನಾಗಿ ಪರಿವರ್ತಿಸುತ್ತದೆ. ಜನ ಆಸಕ್ತಿ ಕಳೆದುಕೊಳ್ತಾರೆ
ಅಷ್ಟೆ.
6)
ತಾನು ಬಹುಮಾನ ಪಡೆದ
ಕೂಡ್ಲೇ ಬಹುಮಾನ ಪಡೆದವ ಎದ್ದು ಹೋಗುವುದು, ತನ್ನ ಭಾಷಣ ಮುಗಿದ ಕೂಡ್ಲೇ ಮುಖ್ಯ ಅತಿಥಿ ಅನಿವಾರ್ಯ
ಕಾರಣದಿಂದ ವೇದಿಕೆಯಿಂದ ನಿರ್ಗಮಿಸುವುದು, ತನ್ನ ಸನ್ಮಾನ ಕಳೆದ ಕೂಡಲೇ ಸಾಧಕರು ಜಾಗ ಖಾಲಿ
ಮಾಡುವುದು... ಹೀಗೆ ಖಾಲಿ ಆಗ್ತಾ ಅಗ್ತಾ... ಕೊನೆಗೆ ಅನಿವಾರ್ಯವಾಗಿ ಉಳಿಯುವುದು ಅಧ್ಯಕ್ಷ
ಸ್ಥಾನ ವಹಿಸಿದವ (ಅವನ ಭಾಷಣ ಆಗಿರುವುದಿಲ್ಲ) ಸೋ... ಮತ್ತು ಅಳಿದುಳಿದ ಸಭಿಕರು, ವಂದನಾರ್ಪಣೆ
ಮಾಡಬೇಕಾದವ, ನಿರೂಪಕ ಮತ್ತು ಮೈಕ್ಕದವರು.
7)
ವೇದಿಕೆಯಲ್ಲಿ
ಹೇಳಿದ್ದನ್ನೇ ಹೇಳುವುದು ಅಗತ್ಯವೇ ಇಲ್ಲ. ನಿರೂಪಕ ಹೇಳಿದ್ದನ್ನೇ ಸ್ವಾಗತ ಭಾಷಣ ಮಾಡಿದವ
ಹೇಳುವುದು, ಸ್ವಾಗತ ಭಾಷಣ ಮಾಡಿದವನ ಮಾತನ್ನೇ ಅತಿಥಿ ಪುನರುಚ್ಚರಿಸುವುದು, ಮತ್ತೆ ನಿರೂಪಕ ಅದರ
ಕಿರು ವರದಿ ಕೊಡುವುದು, ಕೊನೆಗೆ ಅಧ್ಯಕ್ಷ ಮುಖ್ಯಾಂಶದ ಮಾದರಿ ಅದನ್ನೇ ಮೆಲುಕು ಹಾಕುವುದು. ಜನರ
ತಾಳ್ಮೆಗೆ ಮಿತಿ ಇರ್ತದಲ್ವ.
8)
ವೇದಿಕೆಯನ್ನು ತನ್ನ
ಪ್ರಚಾರಕ್ಕೆ ಬಳಸಿಕೊಳ್ಳುವುದು ಸಹ ಬರೀ ಗಲೀಜು. ಒಂದು ಉದ್ದೇಶಕ್ಕೆ ಸಭಾ ಕಾರ್ಯಕ್ರಮ ಮಾಡಿರ್ತಾರೆ. ಅದರಲ್ಲೊಂದು ಸಂದೇಶ ಹೋಗಲು ಸೂಕ್ತ
ವ್ಯಕ್ತಿಗಳನ್ನು ಕರೆಸಿರ್ತಾರೆ. ಅವರು ವಿಷಾಯಾಧಾರಿತ ಮಾತನಾಡಬೇಕೆ ಹೊರತು ತನ್ನನ್ನು, ತನ್ನ
ತಿರುಗಾಟವನ್ನು, ತನ್ನ ಸಾಹಿತ್ಯಿಕ ಸಾಧನೆಯನ್ನು, ತನಗೆ ಬೇಕಾದವರನ್ನು ಸುಳ್ಳು ಸುಳ್ಳೇ ಹೇಳಿ
ಹೊಗಳಿದರೆ ಅದು ವೇದಿಕೆಯ ದುರ್ಬಳಕೆ ಆದೀತೆ ಹೊರತು ಪ್ರಜ್ಞಾವಂತರು ಯಾರೂ ಹೊಗಳಿಸಿದವ ಅಂತಯ
ಯೋಗ್ಯತಾವಂತ ಅಂತ ಅಂದಕೊಳ್ಳಲು ಅಸಾಧ್ಯ.
9)
ಕೆಲವೇ ಕ್ಷಣದಲ್ಲಿ
ಆರಂಭ... ಕೆಲವೇ ಕ್ಷಣದಲ್ಲಿ ಆರಂಭ ಅಂತ ಹೇಳ್ತಾ ಹೇಳ್ತಾ ಗಂಟೆಗಳನ್ನು ದೂಡುವುದು, ಕೊನೆಗೆ ಸಭಾ
ಕಾರ್ಯಕ್ರಮ ತಡವಾಗಿ, ಅದರ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ತಡವಾಗಿ ಬಂದ ಜನರೆಲ್ಲ ಅರ್ಧದಲ್ಲೇ ಹೋಗುವುದು ಅತ್ಯಂತ ಸಹಜ.
10)
ಇಷ್ಟೆಲ್ಲ ಅದ್ವಾನಗಳಿಗೆ
ಕಾರಣ ಯೋಜನಾ ಬದ್ಧ ರೂಪುರೇಷೆ ಕೊರತೆ. ಮೊದಲನೆಯದಾಗಿ ಎಷ್ಟೇ ಕಷ್ಟವಾಗಲಿ ಸಮಯಕ್ಕೆ ಸರಿಯಾಗಿ
ಕಾರ್ಯಕ್ರಮ ಕಾರ್ಯಕ್ರಮ ಆರಂಭಿಸಿ. ಜನ ಬರಲಿ, ಬಾರದೇ ಇರಲಿ. ಸಭಾ ಕಾರ್ಯಕ್ರಮ ಆರಂಭಿಸಿ,
ಒಂದೆರಡು ವರ್ಷದ ಬಳಿಕ ಜನ ಅರ್ಥ ಮಾಡಿಕೊಳ್ತಾರೆ. ಇವರು ಕಾಗದದಲ್ಲಿ ಹಾಕಿದ ಸಮಯಕ್ಕೇ ಶುರು
ಮಾಡ್ತಾರೆ ಅಂತ. ಆಗ ಅತಿಥಿಗಳು, ಸಭಿಕರು ಅರ್ಧದಲ್ಲೇ ಹೋಗುವುದು ತಪ್ಪುತ್ತದೆ. ಜನ ಸಮಯಕ್ಕೆ
ಸರಿಯಾಗಿ ಮನೆ ತಲುಪಲೂ ಸಾಧ್ಯವಾಗುತ್ತದೆ.
ಎರಡನೆಯದಾಗಿ,
ಪ್ರತಿಯೊಬ್ಬರ ಭಾಷಣಕ್ಕೂ ಸಮಯ ಕೊಡಿ. ನೀವು ಖರ್ಚು ಮಾಡ್ತೀರಿ, ನಿಮಗೆ ದಾನಿಗಳಿರ್ತಾರೆ, ಪ್ರಾಯೋಜಕರಿರ್ತಾರೆ.
ಅವರಿಗೆ ಮಾತನಾಡಲು ಖಂಡಿತಾ ಅವಕಾಶ ಕೊಡಲೇಬೇಕು. ಮನರಂಜನೆ ಜೊತೆ ಜನರಿಗೆ ಸಂದೇಶವೂ ಬೇಕು. ಆದರೆ,
ಸಭೆಯ ಜೀವಾಳ ಪ್ರೇಕ್ಷಕರು. ಅವರ ತಾಳ್ಮೆ ಪರೀಕ್ಷಿಸುವಂತಹ ಸಮಯ ಮೀರಿದ ಭಾಷಣ ಬೇಡ. ಆರಂಭದಲ್ಲೇ
ನಿಗದಿತ ಸಮಯವನ್ನು ಭಾಷಣಕಾರರಿಗ ನೀಡಿದರೆ ಎಲ್ಲವೂ ಸಮಯಕ್ಕ ಸರಿಯಾಗಿ ಮುಗಿಯುತ್ತದೆ. ಆಳ್ವಾಸ್
ನುಡಿಸಿರಿ ಯಾಕೆ ಸಮಯಕ್ಕೆ ಸರಿಯಾಗಿ ಶುರುವಾಗಿ, ಮುಗಿಯುತ್ತದೆ? ಅದಕ್ಕೆ ಸಮಯಪಾಲನೆಯೇ ಕಾರಣ.
ಮೂರನೆಯದಾಗಿ ಸ್ವಾಗತ,
ನಿರೂಪಣೆ, ವಂದನೆ ಎಲ್ಲ ಆಯಾ ಶೀರ್ಷಿಕೆಗೆ ಅನುಗುಣವಾಗಿ ಇರಲಿ. ಸಬ್ಜೆಕ್ಟ್ ಬಿಟ್ಟು ಯಾರೂ
ಮಾತನಾಡಬಾರದು. ವೇದಿಕೆ ಪಾಂಡಿತ್ಯ, ಹಿರಿತನದ ಪ್ರದರ್ಶನಕ್ಕೆ ವೇದಿಕೆ ಆಗಬಾರದು. ಆಗ ಸಭಾ
ಕಾರ್ಯಕ್ರಮ ಯಾರಿಗೂ ಹೊರೆ ಆಗಲಾರದು.
ವಿ.ಸೂ. : ನಾನು ಯಾವುದೇ ಕಾರ್ಯಕ್ರಮಗಳ ಸಂಘಟಕ
ಅಲ್ಲ, ಸಾವಿರಗಟ್ಟಲೆ ಡೊನೇಶನ್ ಕೊಡುವವನೂ ಅಲ್ಲ, ಯಾವುದೇ ಸಂಘಟನೆ, ಸಮಿತಿಯ ಸಕ್ರಿಯ
ಕಾರ್ಯಕರ್ತನೂ ಅಲ್ಲ. “ಇಂಬ್ಯೆಗ್ ದಾಯೆ ಅಧಿಕಪ್ರಸಂಗ” ಅಂತ ಅನ್ನಿಸುವವರ ಗಮನಕ್ಕೆ.
ಪ್ರೇಕ್ಷಕನಾಗಿ ನನಗೆ ಅನ್ನಿಸಿದ್ದನ್ನು ಹೇಳಿದ್ದಷ್ಟೆ. ತಪ್ಪು ಹುಡುಕಿದ್ದಲ್ಲ, ಕೊನೆ ತನಕ
ಯಾರಾದರೂ ಲೇಖನ ಓದಿದ್ದಲ್ಲಿ ನಿಮ್ಮ ಪ್ರತಿಕ್ರಿಯೆ ನಮೂದಿಸಿ. ಆಗ ನನ್ನ ಗಮನಿಸುವಿಕೆ ಸರಿಯಾ
ತಪ್ಪಾ ಅಂತ ನಾನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
-ಕೃಷ್ಣಮೋಹನ ತಲೆಂಗಳ
(08.09.2024)
1 comment:
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದವರೇ ಇಡೀ ಕಾರ್ಯಕ್ರಮವನ್ನು ನಿರ್ವಹಿಸುವ ಸಂಪ್ರದಾಯವಿದ್ದ ಕಾಲವಿತ್ತು..ಆದರೆ ನಿರೂಪಕರುಗಳ ಟ್ರೆಂಡ್ ಬಂದ ಮೇಲೆ ಅಚ್ಚುಕಟ್ಟಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳ ನಿರ್ವಹಣೆಯನ್ನು, ಅಮೂಲ್ಯ ಸಮಯವನ್ನು ನಿರೂಪಣೆ ಅನಗತ್ಯವಾಗಿ ತಿಂದುಹಾಕಿತು. ಹೇಳಬೇಕಾದ್ದನ್ನು, ಹೇಳಬೇಕಾದಷ್ಟೇ ರೀತಿಯಲ್ಲಿ ನಿರೂಪಿಸುವ ಬದಲು ಅತಿಥಿ ಅಭ್ಯಾಗತರುಗಳ ಹೊಗಳಿಕೆಯೇ ವಿಜೃಂಭಿಸಿತು. ಈಗಂತೂ ನಿರೂ"ಪೆಕರು"ಗಳು ಎಳೆದೆಳೆದು ಮಾತನಾಡುವ ಕನ್ನಡದ ಅಸಹ್ಯ ಶೈಲಿ ಕೇಳಿದರೆ ಅವರ ಅವತಾರ ನೋಡಿದರೆ ಎದ್ದು ಹೋಗುವ ಅನಿಸುತ್ತದೆ.
Post a Comment