ಇತಿಗಳ ಮಿತಿಗಳು ಮರೆತಾಗಲೇ ಅತಿಯಾದ ಮಾತುಗಳು ಹೊರಡುವುದು!
ಕಾಣುವುದು ಮತ್ತು ಕಾಣಿಸುವುದು ಮಾತ್ರವೇ ಸತ್ಯವೋ, ಅಂತಿಮ ವಾಸ್ತವವೋ ಆಗಿರುವುದಿಲ್ಲ. ಆದರೂ ಹಲವು ವಿಚಾರಗಳು ವ್ಯಕ್ತಿಗಳ ಕುರಿತಾಗಿ ನಮ್ಮೊಳಗೊಂದು ಪೂರ್ವಾಗ್ರಹ ಮೂಡಿಸಿರುತ್ತದೆ. ಅವರಿವರ ಬಗ್ಗೆ ಯಾಕೆ... ನಮ್ಮ ಬಗೆಗೇ ನಮಗೆ ಭ್ರಮೆಗಳು ಆವರಿಸಿರುತ್ತವೆ. ಪರಿಸ್ಥಿತಿಗಳು ಮತ್ತು ಸಂದರ್ಭಗಳು ಭ್ರಮೆಗಳ ಪೊರೆಗಳನ್ನು ಕಳಚುವ ಸೂಜಿಯನ್ನು ಚುಚ್ಚುತ್ತವೆ...
ಒಬ್ಬ ಮನುಷ್ಯ ಎಲ್ಲವನ್ನೂ
ಬಲ್ಲ ಸರ್ವಜ್ಞನಾಗಿರಲು ಸಾಧ್ಯವಿಲ್ಲ. ನಮ್ಮ ನಮ್ಮ ಮಿತಿಗಳು, ನಮ್ಮ ಯೋಗ್ಯತೆ ಮತ್ತು ನಮ್ಮ
ಸೀಮಿತ ಯೋಚನೆಗಳ ಸರಣಿ ನಮ್ಮೊಳಗೆ ನಮ್ಮ ಬಗ್ಗೆ ನಮ್ಮದೇ ಆದ ಭ್ರಮೆಗಳು ಮತ್ತು ಇತರರ ಕುರಿತ
ಪೂರ್ವಾಗ್ರಹ ಪೀಡಿತ ಉಡಾಫೆಗಳನ್ನು ಸೃಷ್ಟಿಸಿರುತ್ತವೆ. ನಾವದನ್ನು ತಿಳಿದೋ, ತಿಳಿಯದೆಯೋ
ಪೋಷಿಸುತ್ತಾ ಬಂದಿರುತ್ತೇವೆ. ನಮ್ಮ ಸೀಮಿತ ಓದು, ಸೀಮಿತ ಸುತ್ತಾಟ, ಸೀಮಿತ ಚರ್ಚೆಗಳು, ಸೀಮಿತ
ಜಗತ್ತಿನೊಳಗಿನ ಓಡಾಟ, ಸೀಮಿತ ವ್ಯಕ್ತಿಗಳ ಜೊತೆಗಿನ ಒಡನಾಟ ಇವೆಲ್ಲ ಸೇರಿ ಒಂದು ಸೀಮಿತ ನಂಬಿಕೆ,
ಸೀಮಿತ ಸಿದ್ಧಾಂತ ಮತ್ತು ಸೀಮಿತ ಯೋಗ್ಯತೆಯನ್ನು ನಮ್ಮೊಳಗೆ ರೂಢಿಸಿರುತ್ತದೆ...
ಈ ಸೀಮಿತ ಯೋಗ್ಯತೆಗೆ ಅಹಂ
ಸೇರಿಕೊಂಡಾಗ ಪೂರ್ವಾಗ್ರಹದ ಪೊರೆ ಆವರಿಸಿ, ವಿಪರೀತ ಟೀಕೆ, ಟಿಪ್ಪಣಿ, ಅಪಹಾಸ್ಯ, ವ್ಯಂಗ್ಯ
ಮತ್ತು ವಸ್ತು ಸ್ಥಿತಿಯಾಚೆಗಿನ ಅತಿರೇಕದ ಹೇಳಿಕೆಗಳನ್ನು ನೀಡುತ್ತಾ ಬರುತ್ತಿರುತ್ತೇವೆ. ಪ್ರತಿ
ವಿಚಾರಕ್ಕೂ, ಪ್ರತಿ ನಡವಳಿಕೆಗೂ, ಪ್ರತಿ ಬೆಳವಣಿಗೆಗೂ ಒಂದು ಹಿನ್ನೆಲೆ, ಒಂದು ಕಾರಣ, ಒಂದು
ಮಿತಿ ಮತ್ತು ಒಂದು ಶಿಷ್ಟಾಚಾರ ಅಂತ ಇರ್ತದೆ. ಅದರ ಪ್ರಕಾರವೇ ಎಲ್ಲವೂ ನಡೆಯುತ್ತದೆ ಎಂಬುದು
ಹಲವು ಸಂದರ್ಭಗಳಲ್ಲಿ ನಮಗೆ ಗೊತ್ತಿದ್ದೂ ಮರೆತಿರುತ್ತೇವೆ. ಇದೇ ಕಾರಣಕ್ಕೆ ನಮ್ಮ ಟೀಕೆ, ನಮ್ಮ
ಮಾತು ಮತ್ತು ನಮ್ಮ ಘನಘೋರ ವಿಮರ್ಶೆ ಇತರರನ್ನು, ಇತರರ ವೃತ್ತಿಯನ್ನು, ಇತರರ ನಂಬಿಕೆಗಳನ್ನು, ಇತರರ
ಅನುಭವವನ್ನು, ಇತರರ ಬೌದ್ಧಿಕ ಗಳಿಕೆ, ಬೌದ್ಧಿಕ ಯೋಗ್ಯತೆ, ಬೌದ್ಧಿಕ ಶ್ರೇಷ್ಠತೆ, ಇತರರ
ಭಾವನೆಗಳನ್ನು ನೋಯಿಸುತ್ತವೆ ಮಾತ್ರವಲ್ಲ, ಅವರ ಅಸ್ತಿತ್ವದ ಮಹತ್ವವನ್ನು ನಮ್ಮ ಮಾತುಗಳು
ಕುಗ್ಗಿಸುತ್ತವೆ ಅಥವಾ ಅದಕ್ಕೆ ತಪ್ಪು ವ್ಯಾಖ್ಯೆ ಕೊಟ್ಟು ಅವರ ಮಹತ್ವ ತಿಳಿಯುವಲ್ಲಿ ನಾವು
ಎಡವುತ್ತೇವೆ.
ಚರ್ಚೆಗೂ, ಯುದ್ಧಕ್ಕೂ
ಸಮಬಲರೇ ಬೇಕು ಅನ್ನುವ ಮಾತಿದೆ. ಹೌದಲ್ವ. ಮೊದಲಿಗೆ ನಮ್ಮ ಯೋಗ್ಯತೆ ಏನು ಎಂಬುದನ್ನು ನಾವು
ಅರಿಯುವಲ್ಲಿ ವಿಫಲರಾದಲ್ಲಿಗೇ ನಾವು ಪೂರ್ವಾಗ್ರಹದ ಕೂಪಮಂಡೂಕಗಳ ಬಳಗದಲ್ಲಿದ್ದೇವೆ ಎಂಬುದನ್ನು
ಮರೆತ ಹಾಗೆ. ನಂತರ ನಮ್ಮ ಸಂಕುಚಿತ ದೃಷ್ಟಿಕೋನ, ಸಂಕುಚಿತ ಜೀವನಾನುಭವ ಮತ್ತು ಸಂಕುಚಿತ
ಕಲ್ಪನೆಗಳ ಮಿತಿಗಳು ಸಂಕುಚಿತವಾದ ವಿಮರ್ಶೆ, ಸಂಕುಚಿತ ಟೀಕೆಗಳನ್ನೇ ಸೃಷ್ಟಿಸುತ್ತವೆ.
ಗೊತ್ತಿದ್ದೋ, ಗೊತ್ತಿಲ್ಲದೆಯೋ ಅದೊಂದು ಅನಾರೋಗ್ಯಕರ ಸಂವಹನದ ಏರು ಹಾದಿಯನ್ನು
ನಿರ್ಮಿಸಿಬಿಡುತ್ತದೆ. ಇದರ ಅರಿವಿಲ್ಲದೆ ನಮಗಿಂತ ಶ್ರೇಷ್ಠರಲ್ಲಿ ವಾದಕ್ಕೆ, ಸಲುಗೆ ಸಂವಾದಕ್ಕೆ,
ಸಲಹೆಯ ಅಧಿಕಪ್ರಸಂಗಕ್ಕೆ ಇಳಿಯುತ್ತೇವೆ... ಅಥವಾ ಅಧಿಕಾರದಿಂದ ಮಾತನಾಡಿಬಿಡುತ್ತೇವೆ.
ಪ್ರತಿ ಟೀಕೆಯೂ, ಪ್ರತಿ
ಹಾಸ್ಯ ಚಟಾಕಿಯೂ, ಪ್ರತಿ ವಿಮರ್ಶೆಯೂ ಯಾರನ್ನು ಉದ್ದೇಶಿಸಿ ಹೇಳುತ್ತಿದ್ದೇವೆ, ಯಾರ ಬಗ್ಗೆ
ಮಾತನಾಡುತ್ತಿದ್ದೇವೆ, ಯಾರು ಅದನ್ನು ಸ್ವೀಕರಿಸುವವರು, ನಮ್ಮ ಟೀಕೆಯ ಓದುಗರು, ಕೇಳಗರು,
ಪ್ರೇಕ್ಷಕರು ಯಾರು ಎಂಬ ಕಲ್ಪನೆ ಇದ್ದರೆ ಚೆನ್ನ. ಯಾಕೆಂದರೆ 10 ಮಂದಿಯ ಮನಃಸ್ಥಿತಿ 10 ರೀತಿ
ಇರುತ್ತದೆ. ಎಲ್ಲರೂ ಎಲ್ಲವನ್ನೂ ಒಂದೇ ರೀತಿ ಸ್ವೀಕರಿಸುವುದಿಲ್ಲ. ಕೆಲವರು ಗಂಭೀರವನ್ನೂ
ಹಾಸ್ಯವಾಗಿ ಸ್ವೀಕರಿಸುತ್ತಾರೆ. ಕೆಲವರು ಹಾಸ್ಯದ ಧಾಟಿಯಲ್ಲೇ ಇರುವವರು ಹಾಸ್ಯವನ್ನು, ಜೋಕನ್ನು
ದಿಢೀರನೆ ಗಂಭೀರವಾಗಿ ಸ್ವೀಕರಿಸಿ ಮುಗುಮ್ಮಾಗುತ್ತಾರೆ. ಕೆಲವರು ಟೀಕೆಗಳನ್ನು ಕ್ರೀಡಾಭಾವದಿಂದ
ಸ್ವೀಕರಿಸಿದೆ, ತುಂಬ ಮಂದಿ ಆರೋಗ್ಯಕರ ಟೀಕೆಯನ್ನೂ ಋಣಾತ್ಮಕವಾಗಿ ತಕ್ಕೊಂಡು ಖಿನ್ನರಾಗುತ್ತಾರೆ.
ಹಾಸ್ಯದ ಧಾಟಿಯನ್ನು ವಿನಾಕಾರಣ ಗಂಭೀರವಾಗಿ ತೆಗೆದುಕೊಂಡು ಇಡೀ ಸಂವಹನದ ಗೋಪುರವೇ ಕುಸಿಯುವ
ಸಂಭವಗಳು ಆಗಾಗ ಸಂಭವಿಸುತ್ತಲೇ ಇರುತ್ತದೆ.
ಯಾರ ಜೊತೆ ಗೌರವದ ಭಾವ,
ಯಾರ ಜೊತೆ ಆತ್ಮೀಯ ಭಾವ, ಯೊರ ಜೊತೆ ಸಿದ್ಧತೆಯೇ ಇಲ್ಲದ ಸಲುಗೆಯ ಭಾವ, ಯಾರ ಜೊತೆ ಅಧಿಕಾರ
ಚಲಾವಣೆ, ಯಾರ ಜೊತೆ ಸಲಹೆ ನೀಡುವ ಹಕ್ಕು, ಯಾರ ಜೊತೆ ನಿರೀಕ್ಷೆಯೇ ಇಲ್ಲದ ಮಾತುಗಳಾಡುವ
ಸ್ವಾತಂತ್ರ್ಯ ಇದೆ... ಎಂಬಿತ್ಯಾದಿ ವಿಚಾರಗಳಲ್ಲಿ ಒಂದಿಷ್ಟು ಖಚಿತತೆ ಇದ್ದರೆ ಲೇಸು. ಯಾಕೆಂದರೆ
ಶುರುವಿಗೇ ಹೇಳಿದ ಹಾಗೆ ಪೂರ್ವಾಗ್ರಹಗಳು ಅಥವಾ ಸಂಕುಚಿತ ಭಾವಗಳು ಉತ್ತಮ ಸಂವಹವನ್ನು, ಉತ್ತಮ
ಸಂಬಂಧವನ್ನು, ಉತ್ತಮ ನಂಬಿಕೆಗಳನ್ನು ಕೊಂದು ಹಾಕಬಹುದು. ಅವರಿವರ ಬಗ್ಗೆ ಇಂತಹ ವಿಚಾರದಲ್ಲಿ
ವಿಮರ್ಶೆ ಮಾಡುವ ಬದಲು ನಮ್ಮೊಳಗೇ ಇರುವ ಯೋಗ್ಯತೆಯನ್ನು ಸೋಫಾದ ಅಡಿಯಿಂದ ಎಳೆದು ಈಚೆ ತಂದು ಧೂಳು
ಕೊಡವಿ, ಸ್ವಲ್ಪ ಕ್ಲೀನ್ ಮಾಡಿದರೆ ಈ ಧೂಳಿನಿಂದ ಇತರರಿಗೆ ಅಲರ್ಜಿ ಆಗುವುದನ್ನಾದರೂ ಧಾರಾಳ
ತಡೆಯಬಹುದು.... ಏನಂತೀರಿ?
(ವಿ.ಸೂ.-ಇದೊಂದು ಸ್ವಗತ,
ಸಾರ್ವತ್ರಿಕ ಅಲ್ಲ)
-ಕೃಷ್ಣಮೋಹನ ತಲೆಂಗಳ
(12.09.2024)
No comments:
Post a Comment