ಯಕ್ಷಗಾನ: ಜಾಲತಾಣದ ಉತ್ತಮ ಸಲಹೆಗಳು ಜಾರಿಗೂ ಬಂದ್ರೆ ಒಳ್ಳೆದಲ್ವೇ...
ಇತ್ತೀಚೆಗೆ (ಸುಮಾರು ಒಂದು ತಿಂಗಳ ಅವಧಿಯಲ್ಲಿ) ನಡೆದ ಎರಡು ಇಡೀ ರಾತ್ರಿಯ ಮಳೆಗಾಲದ ಯಕ್ಷಗಾನದಲ್ಲಿ ಅವಹೇಳನಗಳು ಆಗಿವೆ, ಸಂಭಾಷಣೆಗಳು ಟ್ರ್ಯಾಕ್ ತಪ್ಪಿವೆ, ಹಾಸ್ಯ ವಿಜೃಂಭಿಸಿದೆ ಮತ್ತಿತರ ಆರೋಪಗಳು ಜಾಲ ತಾಣಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಒಂದೆರಡು ಗ್ರೂಪುಗಳಲ್ಲಿ ಆರೋಗ್ಯಕರ ಚರ್ಚೆಗಳೂ ನಡೆದವು.
ಯಾರು ಪ್ರಸಂಗದ ನಡೆ ತಪ್ಪಿ ಮಾತನಾಡುತ್ತಾರೋ, ಪ್ರೇಕ್ಷಕರಿಗೆ ಮುಜುಗರ ತರುವಂತೆ ಸಂಭಾಷಣೆ ನಡೆಸುತ್ತಾರೋ ಅಥವಾ ಯಾರು ಹಾಸ್ಯವನ್ನು ವೈಭವೀಕರಿಸಿ ಪ್ರಸಂಗದ ಅವಧಿ ಹೆಚ್ಚಿಸುತ್ತಾರೋ (ಟೈಂ ವೇಸ್ಟ್ ಮಾಡುವುದು) ಅಂಥವರಿಗೆ ತಿಳಿ ಹೇಳಬೇಕು, ಅಂಥಹ ನಡೆಯನ್ನು ವಿರೋಧಿಸಬೇಕು, ಕೇಸು ಹಾಕಬೇಕು, ಅಂಥವರಿಗೆ ಮೊದಲೇ ಎಚ್ಚರಿಕೆ ನೀಡಬೇಕು, ಅಂಥವರನ್ನು ಪ್ರಸಿದ್ಧರ ಕೂಡುವಿಕೆಯ ಆಟಕ್ಕೆ ಆಮಂತ್ರಿಸಲೇಬಾರದೂ ಮತ್ತಿತರ ಚರ್ಚೆಗಳು ನಡೆದವು. ಅನೇಕ ಹಿರಿಯರೂ ಇದಕ್ಕೆ ಧ್ವನಿ ಗೂಡಿಸಿದ್ದಾರೆ.
ಆದರೆ ಸಮಸ್ಯೆ ಏನು ಗೊತ್ತಾ?:
ನಾವು ಇಂತಹ ಅಪಸವ್ಯಗಳು ಘಟಿಸಿದಾಗ ವಾಟ್ಸಪ್ಪು ಮತ್ತು ಫೇಸ್ಬುಕ್ಕುಗಳಲ್ಲಿ ಆಕ್ಷೇಪಿಸುತ್ತೇವೆ. ಅತ್ಯುತ್ತಮವಾಗಿ ನಮ್ಮ ಅಸಮಾಧಾನ ಹೊರ ಹಾಕುತ್ತೇವೆ. ಜೋರು ಜೋರು ಮಾತನಾಡುತ್ತೇವೆ. ಕೆಲವರು ಲೇಖನದ ಕೊನೆಗೆ ತಮ್ಮ ವಿಳಾಸವನ್ನೂ ನೀಡಿರುವುದಿಲ್ಲ. ಆಗ ಇತರರೂ ಧ್ವನಿ ಗೂಡಿಸುತ್ತೇವೆ. ಆದರೆ ಅದು ಅಲ್ಲಿಗೇ ನಿಲ್ಲುತ್ತದೆ. ಸಂಬಂಧಿಸಿದ ಕಲಾವಿದರಿಗೆ ಅದನ್ನು ಮನವರಿಕೆ ಮಾಡುವ ಪ್ರಯತ್ನ ಗಂಭೀರವಾಗಿ ನಡೆಯುವುದಿಲ್ಲ, ಮತ್ತೊಂದು ಅಟದಲ್ಲಿ ಮತ್ತದೇ ರೀತಿಯ ಅಧಿಕಪ್ರಸಂಗ ಮತ್ತದೇ ರೀತಿಯ ಆಕ್ಷೇಪ, ಮತ್ತದೇ ರೀತಿಯ ಬಿಸಿ ಬಿಸಿ ಚರ್ಚೆ...
ಯಾಕೆ ನಾವು ದಾರಿ ತಪ್ಪಿ ಹೋಗುವ ಕಲಾ ಪ್ರಕಾರವನ್ನು ಸರಿದಾರಿಗೆ ತರಲು ಗಂಭೀರವಾಗಿ ಪ್ರಯತ್ನ ಮಾಡುತ್ತಿಲ್ಲ? ಕಳೆದ ವರ್ಷ ನವರಾತ್ರಿ ಸಂದರ್ಭ ಪರವೂರಿನ ಯಾರೋ ಕೆಲವರು ಯಕ್ಷಗಾನದ ವೇಷ ಧರಿಸಿ ರಸ್ತೆಯಲ್ಲಿ ತಿರುಗಾಡುತ್ತಿದ್ದಾಗ ಹಿರಿಯ ಕಲಾವಿದರೊಬ್ಬರು ಅವರನ್ನು ತಡೆದು ಆಕ್ಷೇಪಿಸಿದ್ದು, ಆ ವೀಡೀಯೋ ವೈರಲ್ ಆಯಿತು. ಆ ಕಲಾವಿದರು ಅಷ್ಟಕ್ಕೇ ಸುಮ್ಮನಾಗಲಿಲ್ಲ, ಚಿಕ್ಕಮೇಳದ ಹೆಸರಿನಲ್ಲಿ ಬೇಕಾಬಿಟ್ಟಿ ಯಕ್ಷಗಾನ ಪ್ರದರ್ಶನ ಆಗುವುದಲನ್ನೂ ಗಮನಿಸಿ ಆಕ್ಷೇಪಿಸಿದರು. ಚಿಕ್ಕಮೇಳಗಳಿಗೆ ಒಂದು ರೂಪುರೇಷೆ ರೂಪಿಸಿ, ಅದನ್ನು ಅಧಿಕೃತವಾಗಿ ನೋಂದಾಯಿಸುವ ವ್ಯವಸ್ಥೆ ಮಾಡಿ, ಚಿಕ್ಕಮೇಳಗಳ ಯಜಮಾನರ ಸಮಾವೇಶ ಮಾಡಿ ಅದಕ್ಕೊಂದು ಚೌಕಟ್ಟು ರೂಪಿಸುವಲ್ಲಿ ಶ್ರಮಿಸಿದರು. ಈ ಕೆಲಸದ ಬಗ್ಗೆ ಮೆಚ್ಚುಗೆ ಇದೆ. ಇದೇ ರೀತಿಯ ಒಂದು ಕ್ರಮ ದೊಡ್ಡ ಮೇಳಗಳು ಅಥವಾ ರಂಗಸ್ಥಳದಲ್ಲಿ ಪ್ರದರ್ಶನ ಕಾಣುವ ಬಯಲಾಟಕ್ಕೂ ಬೇಕು ಅಂತ ನಿಮಗೆ ಅನ್ನಿಸುವುದಿಲ್ವ?
ಯಕ್ಷಗಾನದಲ್ಲಿ ಅತಿರೇಕಗಳು ನುಸುಳಿವೆ, ಪದಗಳನ್ನು (ಹಾಡು) ದೀರ್ಘವಾಗಿ ಆಲಾಪಿಸಲಾಗುತ್ತಿದೆ, ಹಾಸ್ಯ ಮಿತಿಮೀರುತ್ತಿದೆ, ನಾಟ್ಯ ವೈಭವಗಳೇ ಸಿಂಹಪಾಲು ಪಡೆಯುತ್ತಿವೆ, ಕುಣಿಯಲು ತೋರಿಸುವ ಆಸಕ್ತಿಯನ್ನು ಕಲಾವಿದರು ಸಂಭಾಷಣೆಗೆ ತೋರಿಸುತ್ತಿಲ್ಲ, ಹೊಸ ಭಾಗವತರಿಗೆ ಪ್ರಸಂಗದ ನಡೆ ಗೊತ್ತಿಲ್ಲ, ಗ್ರಿಪ್ ಇಲ್ಲ.... ಹೀಗೆ ಅನೇಕ ಚರ್ಚೆಗಳು ಸಮಾವೇಶಗಳ ವೇದಿಕೆಗಳಲ್ಲಿ, ವಾಟ್ಸಪ್ ಚರ್ಚೆಗಳಲ್ಲಿ ಧಾರಾಳವಾಗಿ ನಡೆಯುತ್ತವೆ. ಆದರೆ ಈ ಯಾವ ಆಕ್ಷೇಪಗಳೂ ನಿರ್ಧಾರಗಳಾಗಿ, ನಿಯಮಗಳಾಗಿ ಕಾರ್ಯರೂಪಕ್ಕೇ ಬರುವುದೇ ಇಲ್ಲ. ಈ ತನಕ ಬಂದೇ ಇಲ್ಲ ಎಂದರೂ ತಪ್ಪಾಗಲಾರದು. ವರ್ಷಗಳ ಹಿಂದೆ ಕಟೀಲು ಮೇಳದ ದೇವಿಮಹಾತ್ಮೆ ಪ್ರಸಂಗದ ದೃಶ್ಯಗಳ ಪರಿಷ್ಕರಣೆ ಕುರಿತು ಕಾರ್ಯಾಗಾರವೊಂದು ನಡೆದು ಬಳಿಕ ಅಲ್ಲಿನ ನಿರ್ಧಾರದನ್ವಯ ಪ್ರಸಂಗದ ದೃಶ್ಯಗಳಲ್ಲಿ ಮಾರ್ಪಾಡು ಮಾಡಿ, ಈಗ ಅದೇ ರೀತಿ ದೇವಿಮಹಾತ್ಮೆ ಕಟೀಲು ಮೇಳದಲ್ಲಿ ಪ್ರದರ್ಶನವಾಗುತ್ತಿವೆ. ನಿರ್ಧಾರ ನಡೆದರೆ ಈ ರೀತಿ ಅಧಿಕೃತವಾಗಿ ಚರ್ಚಿಸಿ, ಸಂವಾದ ಮಾಡಿ, ಅಭಿಪ್ರಾಯ ಪಡೆದು, ಎಲ್ಲರ ಸಮ್ಮಖದಲ್ಲೇ ಅದಕ್ಕೊಂದು ಮೊಹರು ಬೀಳಬೇಕು.
ಹಾಗಾದರೆ, ಯಕ್ಷಗಾನಲ್ಲಿ ಈಗಲೂ ದಶಕಗಳ ಕಾಲ ದುಡಿದ ಭಾಗವತರು, ಹಿರಿಯ ಕಲಾವಿದರು ಇದ್ದಾರೆ, ಯಕ್ಷಗಾನದ ಪೋಷಕರಿದ್ದಾರೆ, ಯಕ್ಷಗಾನಕ್ಕೆ ರಾಜಾಶ್ರಯ ನೀಡುವ ಕ್ಷೇತ್ರಗಳಿವೆ, ಮೇಳಗಳ ನುರಿತ ಯಜಮಾನರು ಇದ್ದಾರೆ, ಪ್ರಸಂಗಕರ್ತರು ಇದ್ದಾರೆ, ಎಲ್ಲಕ್ಕಿಂತ ಮಿಗಿಲಾಗಿ 50-60 ವರ್ಷಗಳಿಂದ ನಿರಂತರವಾಗಿ ಬಯಲಾಟಗಳನ್ನು ನೋಡುತ್ತಾ ಬಂದ ನುರಿತ ಪ್ರೇಕ್ಷಕರಿದ್ದಾರೆ, ಇವರ ಜೊತೆ ಒಂದು ಯಕ್ಷಗಾನ ಬಯಲಾಟ ಅಕಾಡೆಮಿಯೇ ಇದೆ.!
ಹೀಗಿರುವಾಗ, ಕಳೆದ ಒಂದು ತಿಂಗಳಿನಿಂದ ಕೆಲವು ಪ್ರಸಂಗಗಳ ಪ್ರದರ್ಶನ ನಡೆ, ಸಂಭಾಷಣೆಗಳಲ್ಲಿ ವ್ಯತ್ಯಾಸಗಳು ಬಂದಿವೆ ಎಂಬ ವಿಚಾರವನ್ನು ಇಂತಹ ಹಿರಿಯರನ್ನೆಲ್ಲ ಸೇರಿಸಿ ಒಂದು ಕಾರ್ಯಾಗಾರ ಏರ್ಪಡಿಸಿ ಯಾಕೆ ಸರಿಪಡಿಸುವ ಪ್ರಯತ್ನ ಮಾಡಬಾರದು. ಯಾಕೆ ಕಿರಿಯ ಕಲಾವಿದರಿಗೆ ಒಂದು ಕಿವಿಮಾತು ಹೇಳುವ ಪ್ರಯತ್ನ ಮಾಡಬಾರದು?
1) ಈಗ ಯಕ್ಷಗಾನ ದಾರಿ ತಪ್ಪುತ್ತಿರುವುದೆಲ್ಲಿ?
2) ಈಗ ಆಗುತ್ತಿರುವ ಬದಲಾವಣೆಗಳಲ್ಲಿ ಯಾವುದು ಯಕ್ಷಗಾನದ ಭವಿಷ್ಯಕ್ಕೆ ಮಾರಕ?
3) ಯಕ್ಷಗಾನದಲ್ಲಿ ಹಾಸ್ಯ, ಶೃಂಗಾರ, ಪದಗಳ ಆಲಾಪನೆ, ನಾಟ್ಯ ವೈಭವಕ್ಕೆ ಎಷ್ಟೆಷ್ಟು ಮಹತ್ವ ಬೇಕು
4) ಕೆಲವು ಸೂಕ್ಷ್ಮ ಪ್ರಸಂಗಗಳಲ್ಲಿ ವಿವಿಧ ಜಾತಿ, ಧರ್ಮ, ಆಚರಣೆಗಳು, ಸಂಬಂಧಗಳ ಕುರಿತ ವ್ಯಾಖ್ಯಾನ ಹೇಗೆ ಇರಬೇಕು, ಆ ಪ್ರಸಂಗದ ನಡೆಯನ್ನು ಹೇಗೆ ಮುಂದುವರಿಸಬೇಕು, ಸೂಕ್ಷ್ಮ ಭಾಗಗಳನ್ನೂ ಪ್ರೇಕ್ಷಕರಿಗೆ ಮುಜುಗರ ಆಗದಂತೆ, ಯಾವುದೇ ಜಾತಿಯವರ ನೋಯಿಸದಂತೆ ಹೇಗೆ ಪ್ರದರ್ಶಿಸಬಹುದು?
5) ಇಡೀ ರಾತ್ರಿ ಅಥವಾ ಕಾಲಮಿತಿ ಆಟಗಳಲ್ಲಿ ಯಾವ ದೃಶ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು?
6) ಈಗ ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಒಂದು ಗಂಟೆ ಅವಧಿಯ ಯಕ್ಷಗಾನ (ಹಾಸ್ಯ ಪ್ರಧಾನ) ಪ್ರಸಂಗಗಳಲ್ಲಿ ಏನಾದರೂ ಲೋಪ ಇದೆಯಾ, ಇದರಿಂದ ಯಕ್ಷಗಾನ ಬಯಲಾಟದ ಮೇಲೆ ಪರಿಣಾಮ ಆಗುತ್ತಿದೆಯಾ, ಅದರಲ್ಲಿ ಏನೇನೂ ಸುಧಾರಣೆ ಆಗಬೇಕು...?
ಎಂಬಿತ್ಯಾದಿ ವಿಚಾರಗಳ ಬಗ್ಗೆ ಹಿರಿಯ ಕಲಾವಿದರು, ಮೇಳಗಳ ಯಜಮಾನರು, ಯಕ್ಷಗಾನ ಸೇವಾಕರ್ತರು, ಯಕ್ಷಗಾನದ ಪೋಷಕರು, ಹಿರಿಯ ಭಾಗವತರು, ಹಿರಿಯ ಪ್ರೇಕ್ಷಕರು ಎಲ್ಲರನ್ನೂ ಕೂರಿಸಿ ಒಂದು ಜರೂರು ಕಾರ್ಯಾಗಾರ ಆಗಬೇಕು. ಕಾರ್ಯಾಗಾರ ಆದರೆ ಸಾಲದು, ಅದಕ್ಕೊಂದು ಪಾರಂಪರಿಕ ಸ್ಪರ್ಶ ಇರುವ ಚೌಕಟ್ಟು ರೂಪಿಸಬೇಕು. ಆ ಚೌಕಟ್ಟನ್ನು ಎಲ್ಲ ಮೇಳದ ಕಲಾವಿದರು, ಹವ್ಯಾಸಿಗಳು ಪಾಲಿಸಬೇಕು. ಒಂದು ವೇಳೆ ಪರಂಪರೆಯನ್ನು ಮೀರಿ ಅತಿರೇಕಗಳನ್ನು ಯಕ್ಷಗಾನದಲ್ಲಿ ತಂದರೆ ಅದಕ್ಕೆಂತ ಪ್ರಾಯಶ್ಚಿತ್ತ ಎಂಬುದರ ಕುರಿತೂ ನಿರ್ಧಾರ ಆಗಬೇಕು, ಮತ್ತು ಆ ನಿರ್ಧಾರವನ್ನು ಎಲ್ಲರೂ ಕ್ರೀಡಾ ಸ್ಫೂರ್ತಿಯಿಂದ ಪಾಲಿಸಬೇಕು.
ಇದರ ಹೊರತು ಕೇವಲ ಕಾರ್ಯಾಗಾರದ ಮೈಕಿನ ಎದುರು ಹಾಗೂ ಜಾಲತಾಣದ ಪುಟಗಳುದ್ದಕ್ಕೂ ನಾವು ವ್ಯವಸ್ಥೆಯನ್ನು ಟೀಕಿಸಿ ಏನೂ ಪ್ರಯೋಜನ ಇಲ್ಲ. ಟೀಕಿಸುವುದು ತಪ್ಪು ಅಂತ ಖಂಡಿತಾ ಹೇಳಿದ್ದಲ್ಲ. ಇದು ಸಮಸ್ಯೆ, ಅದಕ್ಕೆ ಇದು ಪರಿಹಾರ, ಮತ್ತು ಇದು ನಮ್ಮ ನಿರ್ಧಾರ ಎಂಬ ಹಾಗೆ ಖಡಕ್ ವ್ಯವಸ್ಥೆಗಳು ಹಿರಿಯರ ಮಾರ್ಗದರ್ಶನದಲ್ಲಿ, ಸಮರ್ಥರ ನೇತೃತ್ವದಲ್ಲಿ ನಡೆಯದೇ ಹೋದರೆ ಯಕ್ಷಗಾನ ಕೂಡಾ ಗೊಂದಲ, ನಿಂದನೆ, ಅತಿರೇಕ, ಅಸಹಜಗಳ ಗೂಡಾಗಿ ಉತ್ತಮ ಪ್ರದರ್ಶನ ಕಲೆಯ ಗುಣಮಟ್ಟದ ಮೇಲೆ ಖಂಡಿತಾ ಕೆಟ್ಟ ಪರಿಣಾಮ ಬೀರುತ್ತದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
-ಕೃಷ್ಣಮೋಹನ ತಲೆಂಗಳ, ಯಕ್ಷಗಾನ ಅಭಿಮಾನಿ, ಮಂಗಳೂರು.
No comments:
Post a Comment