ಆಗಿನ ಖುಷಿ ಸಹಜವಾಗಿತ್ತು.... ಕಾರಣ 1) ಆಗ ಮೊಬೈಲು ಇರ್ಲಿಲ್ಲ, 2) ಆಗ ಮೊಬೈಲು ಇರ್ಲಿಲ್ಲ ಮತ್ತು 3) ಆಗ ಮೊಬೈಲು ಇರ್ಲಿಲ್ಲ!
ನಾವು ಸಣ್ಣವರಿದ್ದಾಗ ಇಷ್ಟದ ಚಿತ್ರಗೀತೆ ಆಲಿಸಲು ಆಕಾಶವಾಣಿಯ ಕೋರಿಕೆ ವಿಭಾಗಕ್ಕೆ ಕಾರ್ಡು ಕಳುಹಿಸಬೇಕಿತ್ತು. ನಂತರದ ದಿನಗಳಲ್ಲಿ ಆ ಚಿತ್ರಗೀತೆಗೆ ಹೇಗೆ ಕುಣಿದಿದ್ದಾರೆ ಅಂತ ಗೊತ್ತಾಗಬೇಕಾದರೆ ವಾರಕ್ಕೊಂದು ದಿನ ಶುಕ್ರವಾರ ಸಂಜೆ 7.30ಕ್ಕೆ ಮಾತ್ರ ಪ್ರಸಾರ ಆಗುತ್ತಿದ್ದ ಚಿತ್ರಮಂಜರಿಯನ್ನು ಕಾದು ಕುಳಿತು ನೋಡಬೇಕಿತ್ತು. ಭಾನುವಾರ ಬೆಳಗ್ಗೆ 7 ಗಂಟೆಯ ರಂಗೋಲಿ, ಚಿತ್ರಹಾರ್, ವಿವಿಧ ಭಾರತಿ ಸ್ಟೇಷನಿನಲ್ಲಿ ಪ್ರಸಾರವಾಗುತ್ತಿದ್ದ ಫೌಜೀ ಭಾಯಿಯೋಂಕ ಫರ್ಮಾಯಿಶ್, ರೇಡಿಯೋ ಸಿಲೋನಿನ ಬಿನಾಕಾ ಗೀತ ಮಾಲಾ ಹೀಗೆ ಎಲ್ಲ ಕಾದು ಕುಳಿತು ಕೇಳುತ್ತಿದ್ದ, ನೋಡುತ್ತಿದ್ದ ದಿನಗಳು...
ರೇಡಿಯೋ ಬಿಟ್ಟರೆ ಇದ್ದ
ಮನರಂಜನೆ ಅಂದರೆ ಯಕ್ಷಗಾನ. ಅದೂ ಹಾಗೆ, ಯಕ್ಷಗಾನಕ್ಕೆ ಈಗಿನ ಹಾಗೆ ಸಂಜೆ ಹೋಗಿ ಮಧ್ಯರಾತ್ರಿ ಊಟ
ಮಾಡಿ ಬರುವುದಲ್ಲ. ರಾತ್ರಿ ಚೌಕಿ ಪೂಜೆ ಹೊತ್ತಿಗೆ ತಲುಪಿದ್ರೆ ಬೆಳಗ್ಗೆ ಮಂಗಳ ಆದ ಬಳಿಕವೇ ವಾಪಸ್ ಬರುವುದು. ಒಮ್ಮೆ ನೋಡಿದ
ಆಟವನ್ನು ಮತ್ತೆ ಯೂಟ್ಯೂಬಿನಲ್ಲಿ, ಮೊಬೈಲಿನಲ್ಲಿ, ಟಿವಿಯಲ್ಲಿ ಎಲ್ಲ ನೋಡಲು ಮೊಬೈಲು, ಟಿವಿ,
ಯೂಟ್ಯೂಬ್ ಎಂಥದ್ದೂ ಇರಲಿಲ್ಲ...
ಯಕ್ಷಗಾನ ಕಲಾವಿದರು
ನಿಜವಾಗಿ ನೋಡ್ಲಿಕೆ ಹೇಗಿರ್ತಾರೆ ಅಂತ ಗೊತ್ತಿರಲಿಲ್ಲ. ಎಸ್ಪಿ ಬಾಲಸುಬ್ರಹ್ಮಣ್ಯಂ, ಪಿಬಿ
ಶ್ರೀನಿವಾಸ್ ಮುಖ ಹೇಗೆ ಇರ್ತದೆ ಅಂತ ಸಹ ತಿಳಿದಿರಲಿಲ್ಲ. ರೇಡಿಯೋದ ಒಳಗೆ ಕುಳಿತು ವಾರ್ತೆ
ಓದುವವರು, ಉದ್ಘೋಷಕರ ಬಗ್ಗೆ ಭಯಂಕರ ಕಲ್ಪನೆ, ಕುತೂಹಲ ಇತ್ತು...
ಬಸ್ಸಲ್ಲಿ ಹೋಗುವುದು
ನೆಂಟರ ಮನೆಗೆ ಹೋಗುವಾಗ ಮಾತ್ರ. ಶಾಲೆಗೆ ನಡ್ಕೊಂಡೇ ಹೋಗುವುದು. ಸಿನಿಮಾ ನೋಡ್ಲಿಕೆ ಆಗ್ತಾ
ಇದ್ದದ್ದು ಟಾಕೀಸಿನಲ್ಲಿ ಮಾತ್ರ, ತುಂಬ ಮಂದಿಗೆ ಆಗ ಅದು ಗಗನ ಕುಸುಮವಾಗಿತ್ತು. ನೆಂಟರ ಮನೆಗೆ
ಹೋಗುವಾಗ ಮೊದಲೇ ಪತ್ರ ಬರೆಯಬೇಕಿತ್ತು. ಅಥವಾ ಬರೆಯದೇ ಹೋದರೂ ಯಾರಿಗೂ ಸಿಟ್ಟು ಬರ್ತಾ ಇರಲಿಲ್ಲ.
ಎಲ್ಲಿ ಹೋದರೂ ಸೆಲ್ಫೀ ತೆಗೆಯಬೇಕಾದ ರಗಳೆ ಇರಲಿಲ್ಲ, ಯಾಕೆಂದರೆ ಮೊಬೈಲು ಇರ್ಲಿಲ್ಲ.
ಒಂದು ಜಾಗಕ್ಕೆ ಹೊರಟ ಮೇಲೆ
ಈಗ ಇಲ್ಲಿಗೆ ತಲುಪಿದೆ, ಅಲ್ಲಿಗೆ ತಲುಪಿದೆ, ಈಗ ಹೊರಟೆ, ಇವತ್ತು ಲೇಟಾಗ್ತದೆ... ಎಂಥದ್ದೂ
ಮನೆಯವರಿಗೆ ಅಪ್ಡೇಟ್ ಮಾಡ್ಲಿಕೆ ಇರಲಿಲ್ಲ. ಯಾಕೆಂದರೆ ಮೊಬೈಲು ಇರಲಿಲ್ಲ.
ರೇಡಿಯೋದಲ್ಲಿ,
ಟೀವಿಯಲ್ಲಿ, ಸಿನಿಮಾದಲ್ಲಿ, ಯಕ್ಷಗಾನ ರಂಗದಲ್ಲಿ ಯಾರದ್ದಾದರೂ ನಾವು ಅಭಿಮಾನಿಗಳಾಗಿದ್ದರೆ
ಅವರಿಗೆ ನಮ್ಮ ಅಭಿಮಾನ ಹೇಗೆ ತಿಳಿಸಬೇಕು ಅಂತ ಗೊತ್ತಿರ್ಲಿಲ್ಲ. ಕಾರಣ ಆಗ ಫೋನ್, ಮೊಬೈಲು,
ಫೇಸ್ಬುಕ್ಕು, ಟ್ವೀಟರ್, ವಾಟ್ಸಪ್ ಎಂಥದ್ದೂ ಇರಲಿಲ್ಲ. ಮತ್ತೆ ಅವರೆಲ್ಲರ ಹೆಸರು ಗೊತ್ತಿತ್ತು
ವಿನಃ ಅಡ್ರೆಸ್ಸು, ಲ್ಯಾಂಡ್ ಲೈನು, ಸ್ವಭಾವ, ಪಠ್ಯೇತರ ಚಟುವಟಿಕೆಗಳು, ನೈಜ ಸ್ವರೂಪ ಎಂಥದ್ದೂ
ತಿಳಿದಿರಲಿಲ್ಲ. ಎಲ್ಲವೂ ಕಲ್ಪನೆ, ಊಹೆಗಳಿಗೆ ಸೀಮಿತವಾಗಿತ್ತು...
ಓದು ಅಂದ್ರೆ ಯಾವತ್ತೋ
ಪೇಟೆಯಿಂದ ತರುವ ಚಂದಮಾಮ, ಬಾಲಮಿತ್ರ, ಬಾಲಮಂಗಳ ಮಾತ್ರ. ಓದನ್ನು ಕಸಿಯುವ ಟೀವಿ, ಮೊಬೈಲು,
ರೀಲ್ಸು, ಸ್ಟೇಟಸ್ಸು, ಫೇಸ್ಬುಕ್ಕು ಚರ್ಚೆ ಎಂಥದ್ದೂ ಇರಲಿಲ್ಲ...
ಒಂದು ಜಾಗಕ್ಕೆ ಪ್ರವಾಸ
ಹೋದರೆ ನಿರುಮ್ಮಳವಾಗಿ ಫೋಟೋ ತೆಗೆಯದೆ ಪರಿಸರ ಆಸ್ವಾದನೆ ಸಾಧ್ಯ ಇತ್ತು. ಫೋಟೋ ಬೇಕಂದ್ರೆ
ಫೋಟೋಗ್ರಾಫರ್ ಬಂದಾಗಬೇಕಿತ್ತು, ಫೋಟೋ ಒಂದು ಅಮೂಲ್ಯ ವಸ್ತುವಾಗಿತ್ತು...
ಈಗ ಈ ಮೇಲೆ ಹೇಳಿದ್ದೆಲ್ಲ
ಎಷ್ಟು ಸುಲಭವಾಗಿ ಬೆರಳ ತುದಿಯಲ್ಲೇ ಸಿಗ್ತದೆ ಅಂತ ಮತ್ತೆ ಬರೆಯುತ್ತಾ ಕೂತ್ರೆ ನೀವು ನನಗೆ
ಹೊಡೆಯಬಹುದು. ಡೌನ್ಲೋಡ್, ಸಾವಿರಗಟ್ಟಲೆ ಸಿಗುವುದರಲ್ಲಿ ಆರಿಸು, ಸೇವ್ ಮಾಡು, ಶೇರ್ ಮಾಡು,
ಕಾಪಿ ಮಾಡು, ಪೇಸ್ಟ್ ಮಾಡು, ಫಾರ್ವರ್ಡ್ ಮಾಡು.... ಇಷ್ಟರಲ್ಲೇ ಬದುಕೊಂದು ವಿಚಿತ್ರ
ಯಂತ್ರವಾಗಿ, ವಿಚಿತ್ರ ನಿರ್ಭಾವುಕ ನಾಟಕವಾಗಿ ತಿರುಗುತ್ತಲೇ ಇದೆ....
ಒಂದು ವಿಚಾರಕ್ಕೆ ಕಾದು
ಕುಳಿತು, ನಿರೀಕ್ಷೆಯಿಂದ, ಕಾತರದಿಂದ, ಸಹನೆಯಿಂದ ಯಾವತ್ತೋ ಒಮ್ಮೆ ಪಡೆಯುವುದಕ್ಕೂ, ಬೇಕಾಬಿಟ್ಟಿ
ಅನ್ನಿಸಿದ ಕೂಡಲೇ ಪಡೆಯುವುದಕ್ಕೂ ಎಷ್ಟು ವ್ಯತ್ಯಾಸ ಇದೆಯಲ್ವ...
ಅಂದು ನಮಗೊಂದು ಪ್ರೈವೆಸಿ
ಇತ್ತು, ಜನರ ಬಗ್ಗೆ ಒಂದು ಅಪ್ರಚೋದಕ ಕುತೂಹಲ ಇತ್ತು... ಓದುವುದಕ್ಕೆ, ಕೇಳಿಸಿಕೊಳ್ಳುವುದಕ್ಕೆ,
ವಿಮರ್ಶಿಸುವುದಕ್ಕೆ, ಪರಸ್ಪರ ಮಾತನಾಡುವುದಕ್ಕೆ ಎಲ್ಲ ಸಾಕಷ್ಟು ಟೈಮಿತ್ತು. ಟೈಂ ಕಸಿಯುವ
ಯಂತ್ರಗಳು ಯಾವುದೂ ಆಗ ಇರಲಿಲ್ಲ.
ವಿಪರೀತ ಸಂವಹನ, ವಿಪರೀತ
ತೋರಿಸಿಕೊಳ್ಳುವಿಕೆ, ವಿಪರೀತ ಗಾಸಿಪ್ಪು, ವಿಪರೀತ ಚರ್ಚೆ, ವಿಪರೀತ ಸಂಶಯ, ವಿಪರೀತ ಪ್ರಚಾರ,
ವಿಪರೀತ ವೈಭವೀಕರಣ ಎಂಥದ್ದೂ ಇರಲಿಲ್ಲ...
ಅದಕ್ಕೆ ಅನ್ನಿಸುವುದು
ಸಹಜವಾಗಿರುವುದೇ ಚಂದ... ಕಾದು, ನಿರೀಕ್ಷಿಸಿ ಪಡೆಯುವುದರ ಬೆಲೆ ಬೇಕಾಬಿಟ್ಟಿ ಸಿಗುವುದಕ್ಕೆ
ಇಲ್ಲವೇ ಇಲ್ಲ.... ಏನಂತೀರಿ...?
-ಕೃಷ್ಣಮೋಹನ ತಲೆಂಗಳ
(19.09.2024)
1 comment:
ಈಗ ವೃತ್ತಿಗೋಸ್ಕರ ಮೊಬೈಲ್ ಬಳಸುವುದು ಅನಿವಾರ್ಯ ಕರ್ಮವಾಗಿದೆ. ಅದಲ್ಲದಿದ್ದರೆ, 90% ಮೊಬೈಲ್ ಬಳಕೆ ಕಡಿಮೆಯಾಗುತ್ತದೆ ಅಂತ ನನ್ನ ಭಾವನೆ. ರಜೆ ಇದ್ದ ದಿವಸ ವಾಟ್ಸಪ್ ನೋಡದೆ ಆರಾಮವಾಗಿರುತ್ತೇನೆ.
Post a Comment