ನಾನಾಗಿರದ "ನಾನು" ವನ್ನು ನನ್ನ ಹಾಗೆ ನಾನಾಗಿ ತೋರಿಸಿದರೆ, ಅದು ನಾನೇ ಅಂತ ನಾನಲ್ಲದ ನನ್ನನ್ನು ಗುರುತಿಸಲು ಕಷ್ಟ!!!
ನಾವು ನಾವೇ ಅನ್ನುವುದಕ್ಕೆ ಈಗ ಆಧಾರ್ ಕಾರ್ಡ್ ಇದೆ, ಬಯೋಮೆಟ್ರಿಕ್ ದಾಖಲೆಗಳಿವೆ, ಪಾನ್
ಕಾರ್ಡು, ವೋಟರ್ ಐಡಿ ಎಲ್ಲ ಇವೆ. ಆದರೆ, ನಾವೇ ನಾವು ಅಂತ ಲೋಕಕ್ಕೆ ಗೊತ್ತಾಗುವುದು ದಾಖಲೆಗಳಿಂದ
ಅಲ್ಲ, ಈಗಿನ ಭಾಷೆಯಲ್ಲಿ ಹೇಳುವುದಾದರೆ ನಮ್ಮ ಆಟಿಟ್ಯೂಡ್ ಅಥವಾ ನಡವಳಿಕೆ, ಸ್ವಭಾವ ಮತ್ತು
ವರ್ತನೆಗಳಿಂದ. ಅಂತಹ ನಡವಳಿಕೆ, ವರ್ತನೆಗಳಲ್ಲಿ ವ್ಯತ್ಯಾಸವದರೆ ಅಂತಹ ನಾವು ನಾವಾಗಿ
ಇರುವುದಿಲ್ಲ! ಹೇಗೆ ಅಂತೀರ?
1) ನಾನೊಬ್ಬ ಬಿ.ಕಾಂ. ಪದವಿಧರ. ಹೊಟ್ಟೆಪಾಡಿಗೆ ಯಾವುದೋ
ಕೆಲಸ ಮಾಡ್ತಾ ಇರ್ತೇನೆ. ನನ್ನದೊಂದು ಸೀಮಿತ ಜಗತ್ತು. ಮನೆ ಬಿಟ್ಟರೆ ಕಚೇರಿ, ಕಚೇರಿ ಬಿಟ್ಟರೆ
ಮನೆ. ತಪ್ಪಿದರೆ ಪಿಲಿಕುಳಕ್ಕೋ, ತಣ್ಣೀರುಬಾವಿಗೋ, ಮಲ್ಪೆ ಬೀಚಿಗೋ ಯಾವಾಗಾದಾರೂ ಒಮ್ಮೆ ಪ್ರವಾಸ
ಹೋದ ಅನುಭವ. ಅಷ್ಟೇ.. ದೊಡ್ಡದೊಂದು ಓದು ಇಲ್ಲ, ಜಗತ್ತು ಸುತ್ತಿಯೇ ಗೊತ್ತಿಲ್ಲ. ನನ್ನ ವೃತ್ತಿಯ
ಹೊರತು ನನಗೆ ಹೆಚ್ಚಿನ ಪ್ರಪಂಚ ಜ್ಞಾನವಿಲ್ಲ. ವಾಟ್ಸಪ್ ಮತ್ತು ಫೇಸ್ಬುಕ್ ಯೂನಿವರ್ಸಿಟಿಯ
ಸಾಮಾನ್ಯಜ್ಞಾನ ಮತ್ತು ಒಣ ಚರ್ಚೆಗಳೇ ನನ್ನ ಆಸ್ತಿ. ಆದರೂ ನನ್ನ ವಾದ, ನನ್ನ ಟೀಕೆ ಮತ್ತು ನನ್ನ
ಸಾಮಾಜಿಕ ಕಳಕಳಿ ಭಯಂಕರ ಇರ್ತದೆ. ಮಂಗಳೂರು ಬಿಟ್ಟು ಆಚೆಯ ಜಗತ್ತನ್ನೇ ನೋಡದ ನಾನು “ಅಯ್ಯೋ ಹಿಮಾಲಯ ನೋಡ್ಲಿಕೆ ಏನಿದೆ ಬಿಡಿ,
ಹರಿದ್ವಾರ, ಕಾಶ್ಮೀರ, ರಾಜಸ್ತಾನ ನೋಡ್ಲಿಕೇನಿದೆ ಬರೀ ಗುಡ್ಡ, ಬರಿ ಮರುಭೂಮಿ” ಅಂತ ಭಾಷಣ ಬಿಗಿಯುತ್ತೇನೆ. ನೀನು
ಅಷ್ಟಕ್ಕೂ ಅಷ್ಟು ದೂರದ ಹಿಮಾಲಯ ನೋಡಿ ಸಾಧಿಸಿದ್ದಾದರೂ ಏನು, ಎಂತ ತಪಸ್ಸು ಮಾಡ್ತಿಯ, ಸುಮ್ನೆ
ಸಮಯ, ದುಡ್ಡು ವೇಸ್ಟ್ ಅಂತ ನೇರವಾಗಿ ವಾದಕ್ಕಿಳಿಯುತ್ತೇನೆ, ತಮ್ಮದೆ ದುಡ್ಡು, ತಮ್ಮದೇ ಸಮಯ ವ್ಯಯಿಸಿ
ಜಗತ್ತು ಕಂಡವರ ಬಳಿ ಇಡೀ ಜಗತ್ತೇ ನನ್ನ ಕಾಲ ಬುಡದಲ್ಲಿ ಇದೆಯೇನೋ ಎಂಬ ಹಾಗೆ ವಾದ ಮಾಡ್ತೇನೆ...!
2) ಮಂಗಳೂರು… ಜಾಸ್ತಿ ಅಂದ್ರೆ ಬೆಂಗಳೂರು ನೋಡಿರಬಹುದು. ಅಂತಹ ನಾನು ಪ್ರತಿಭಾ ಪಲಾಯನದ ಬಗ್ಗೆ ಭಾಷಣ ಮಾಡ್ತೇನೆ. ದುಬೈ, ಕುವೈಟ್, ಅಮೆರಿಕಾ, ಇಂಗ್ಲೆಂಡ್, ಜರ್ಮನಿ ಎಂಥದ್ದನ್ನೂ ಜನ್ಮದಲ್ಲಿ ಕಂಡಿರದ ನಾನು ಎಲ್ಲ ಗೊತ್ತಿರುವ ಹಾಗೆ ಮಾತನಾಡುತ್ತೇನೆ. ಎಲ್ಲಿಯೋ ಸಿನಿಮಾದಲ್ಲಿ ಕಂಡದ್ದು, ಯಾರದ್ದೋ ಫೇಸ್ಬುಕ್ಕು ಲೇಖನದಲ್ಲಿ ಓದಿದ್ದೇ ಬಂಡವಾಳ.ಪ್ರತಿಭಾ ಪಲಾಯನ, ಆ ದೇಶದ ಸಮಸ್ಯೆ, ಇಲ್ಲಿ ಕಲಿತು ಅಲ್ಲಿ ಹೋಗಿ ದುಡಿಯುತ್ತಾನೆ ಎಂಬ ವೇದಾಂತದ ಬೋಧನೆ ಎಲ್ಲ ಮಾಡ್ತೇನೆ. ವಿದೇಶ ಬಿಡಿ, ಕನಿಷ್ಠ ಮುಂಬೈ ಅಂದ್ರೆ ಹೇಗಿರುತ್ತದೆ ಎಂಬ ಸ್ವಂತ ಜ್ಞಾನವಿಲ್ಲದ ನಾನು ನನ್ನ ವ್ಯಾಪ್ತಿ ಮೀರಿದ ಪ್ರದೇಶದ, ಸಂಸ್ಕಾರದ, ಸಂಸ್ಕೃತಿಯ ಮತ್ತು ಅಲ್ಲಿಗೆ ಹೋಗುವವರ, ದುಡಿಯುವವರ ಬಗ್ಗೆ ಭಾಷಣ ಬಿಗಿಯುತ್ತೇನೆ, ಲೇಖನ ಬರೆಯುತ್ತೇನೆ.
3) ಇಡೀ ಜಗತ್ತು ನನ್ನ ಬಗ್ಗೆಯೇ ಚಿಂತಿಸುತ್ತದೆ. ಇಡೀ ಜಗತ್ತು ನಾನು ಬರೆದ ಭಯಂಕರ ಲೇಖನಗಳನ್ನು ಓದುತ್ತದೆ, ಇಡೀ ವಾಟ್ಸಪ್ ಬಳಕೆದಾರರು ನನ್ನ ಸ್ಟೇಟಸ್ಸುಗಳನ್ನೇ ಕಾದು ಕುಳಿತು ನೋಡುತ್ತಾರೆ, ಅದರಿಂದ ಪ್ರಭಾವಿತರಾಗುತ್ತಾರೆ. ನನ್ನ ದೊಡ್ಡ ದೊಡ್ಡ ಮಾತುಗಳಿಂದ ಅಚ್ಚರಿಯಲ್ಲಿ ಮುಳುಗಿ ಹೋಗುತ್ತಾರೆ, ನಾನು ಕೊಡುವ ಸಂದೇಶದ ಬಗ್ಗೆಯೇ ಇಡೀ ದಿನ ತಲೆ ಕೆಡಿಸುತ್ತಾರೆ ಎಂಬ ಕೆಟ್ಟ ಭ್ರಮೆ. ಜಗತ್ತಿನ ಎಲ್ಲರೂ ಅವರವರ ಬರಹಗಳಲ್ಲಿ, ಅವರವರ ಸ್ಟೇಟಸ್ಸುಗಳಲ್ಲಿ ನನ್ನ ಬಗ್ಗೆಯೇ ಟೀಕೆ ಮಾಡುತ್ತಿದ್ದಾರೆ, ನನ್ನನ್ನು ಉದ್ದೇಶಿಸಿಯೇ ಸಲಹೆ ನೀಡುತ್ತಿದ್ದಾರೆ ಎಂಬ ಕೆಟ್ಟ ಭ್ರಮೆ. ಸ್ವಾಮಿ ವಿವೇಕಾನದಂರೂ, ರವಿಶಂಕರ ಗುರೂಜಿ, ಅಬ್ದುಲ್ ಕಲಾಂ ಕ್ವೋಟನ್ನು ಸಹ ಯಾರಾದರೂ ಸ್ಟೇಟಸ್ಸಿನಲ್ಲಿ ಹಾಕಿದ್ದರೂ ಅದು ನನಗೇ ಉದ್ದೇಶಿಸಿ ಹಾಕಿರಬಹುದ ಎಂಬ ಕೆಟ್ಟ ಸಂಶಯ...
4) ನನಗೊಂದು ಶೈಕ್ಷಣಿಕ ಅರ್ಹತೆ ಇದೆ, ನನಗೊಂದು ಪ್ರತಿಭೆ ಇದೆ, ನನಗೊಂದು ವೃತ್ತಿ ಇದೆ, ಸಮಾಜದಲ್ಲಿ ನನಗೊಂದು ಸಣ್ಣ ಗುರುತಿಸುವಿಕೆ ಇದೆ. ಇದರ ಹೊರತೂ ನನ್ನ ಪ್ರತಿ ನಡೆ ನುಡಿ ಇಡೀ ಸಮಾಜದ ಮೇಲೆ ಗಾಢ ಪ್ರಭಾವ ಬೀರುತ್ತದೆಂಬ ಭ್ರಮೆ. ನಾನೊಂದು ರೀಲ್ಸು ಹಾಕಿದರೆ, ನಾನೊಂದು ಆಡಿಯೋ ಮೆಸೇಜು ಬಿಟ್ಟರೆ ಎಲ್ಲರೂ ಅದನ್ನು ಭಯಂಕರ ಕುತೂಹಲದಿಂದ ನೋಡಿ ಆನಂದಿಸುತ್ತಾರೆ ಎಂಬ ಕಲ್ಪನೆ. ಸಂಗೀತವೆಂದರೆ ಎಂಥದ್ದೆಂದೇ ತಿಳಿದರ ನಾನು ಎಷ್ಟೇ ಕೆಟ್ಟದಾಗಿ ಹಾಡಿದರೂ, “ಜೇನ ದನಿಯೋಳೆ…” ಹಾಡಿಗೆ ಎಷ್ಟೇ ಕೆಟ್ಟದಾಗಿ ಕುಣಿದು ವೀಡಿಯೋ ಶೇರ್ ಮಾಡಿದರೂ ಜನ ಎಂಜಾಯ್ ಮಾಡುತ್ತಾರೆಂಬ ವಿಲಕ್ಷಣವಾದ ಕಾಲ್ಪನಿಕ ರೋಮಾಂಚನ... “ಅಯ್ಯೋ ಅವನ ಉದ್ದುದ್ದ ಲೇಖನ ಯಾರು ಓದುತ್ತಾರೆ, ಎದ್ದ ಕೂಡ್ಲೆ ಯಾರ್ಯಾರಿಗೋ ಬೈದು ಸ್ಟೇಟಸ್ ಹಾಕ್ತಾನೆ, ಅವನ ಆ ದರಿದ್ರ ರೀಲ್ಸು ಯಾರು ಗಮನಿಸುತ್ತಾರೆ, ಅಂತ ಅವರಿವರಿಗೆ ಬಯ್ಯುವ ನಾನು... “ನನ್ನ ಪ್ರತಿ ಪೋಸ್ಟನ್ನೂ ಪ್ರತಿಯೊಬ್ಬರೂ ಕಾದು ಕುಳಿತು ನೋಡುತ್ತಾರೆ, ಖುಷಿ ಪಡ್ತಾರೆ” ಎಂಬ ಮಹತ್ವಾಕಾಂಕ್ಷೆಯ ಹುಸಿ ರೋಮಾಂಚನದಲ್ಲಿ ಸಾಧಕನ ಪೋಸು ಕೊಡ್ತಾ ಇರ್ತೇನೆ...
5) ನನ್ನ ದುಡುಕಿನ ಮಾತುಗಳಿಂದ ಯಾರಿಗೋ ಬೇಸರ ಆಗಿದೆ. ನನ್ನ ತಪ್ಪು ನಡೆಯಿಂದ ಯಾರಿಗೋ ನಷ್ಟವಾಗಿದೆ, ನನ್ನ ಟೀಕೆಯಿಂದ ಯಾರದ್ದೋ ಮನಸ್ಸು ಮುರಿದಿದೆ, ನೇರವಾಗಿ ಯಾರಿಗೋ ಬೈದ ಕಾರಣ ಅವರಿಗೆ ವಿಪರೀತ ಭ್ರಮನಿರಸನ ಆಗಿದೆ, ಯಾರಲ್ಲೋ ನಾನು ದೋಷಗಳನ್ನೇ ಹುಡುಕಿ ಜರೆಯುವುದರಿಂದ ಅವರಿಗೆ ಜೀವನಾಸಕ್ತಿಯೇ ಹೋಗಿದೆ. ಯಾರತ್ರವೋ ನಾನು ಕೇಳಿ ಪಡೆದ ಸಾಲವನ್ನು ಮರಳಿಸಲಾಗದೆ, ಮಹಾನ್ ದಾಕ್ಷಿಣ್ಯಮೂರ್ತಿಯಾಗಿರುವ ಅವರು ಖಿನ್ನತೆಗೆ ಜಾರಿದ್ದಾರೆ.. ಯಾರನ್ನೋ ನಾನು ನನ್ನ ಕೆಲಸಗಳಿಗೆ, ನನ್ನ ಸ್ವಾರ್ಥಕ್ಕೆ ಬೇಕಾಬಿಟ್ಟಿ ಬಳಸಿಕೊಂಡಿದ್ದೇನೆ, ಆದರೆ ಈಗೀಗ ನನ್ನ ಕೆಲಸ ಮುಗಿದ ನಂತರ ನಾನು ಅವನತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಅಂತ ಅವನಿಗೆ ತುಂಬ ನೋವಿದೆ... ಆದರೂ ಇದ್ಯಾವುದೂ ನನ್ನ ಅಂತಃಕರಣವನ್ನು ತಟ್ಟುವುದಿಲ್ಲ. ನನ್ನ ದಿನಚರಿ, ನನ್ನ ಸಮಯಪಾಲನೆ, ನನ್ನ ಬದುಕಿನ ಶಿಸ್ತು, ನನ್ನ ಸಮಸ್ಯೆಗಳು ಮತ್ತು ನನ್ನ ಮಿತಿಗಳು ಈ ಕೋಟೆಯೊಳಗೆ ನನ್ನನ್ನು ನಾನು ಪೋಷಿಸುತ್ತಾ ಇರುತ್ತೇನೆ... ನನ್ನ ಅಹಂ, ನನ್ನ ಅಂತಸ್ತು ಮತ್ತು ನನಗಿರುವ ಸ್ವಾಭಿಮಾನ ಇಷ್ಟರ ಮೇಲೆ ಮಾತ್ರ ನನಗೆ ನಿಯಂತ್ರಣವಿದೆ... “ಅದರಾಚೆಗೆ ಯಾರಿಗೆ ಏನಾದರೂ ಇಡೀ ಜಗತ್ತನ್ನು ಸರಿಪಡಿಸಲು, ಅಳುವವರೆಲ್ಲರ ಕಣ್ಣೀರೊರೆಸಲು ನನಗೆ ಸಮಯ ಇಲ್ಲ ಅಷ್ಟೇ..”.!
6) ನಾವು ಪಾಸಿಟಿವ್ ಆಗಿರ್ಬೇಕು, ನಾವು ಎಂಥೂಸಿಯಾಸ್ಟಿಕ್ ಆಗಿರಬೇಕು, ಸಮಸ್ಯೆಗಳನ್ನು ಗಂಟು ಮೂಟೆ ಕಟ್ಟಿ ಕಪಾಟಿನೊಳಗೆ ಎಸೆದು ಬೇಕಾದಾಗ ಮಾತ್ರ ಅದರ ಬಾಗಿಲು ತೆರೆದು ಸಮಸ್ಯೆಗಳನ್ನು ವಿಂಗಡಿಸಿ ಅದರಿಂದಾಚೆಗೆ ಬರಲು ದಾರಿ ಹುಡುಕಬೇಕು, ಪ್ರತಿ ಸಮಸ್ಯೆಯನ್ನೂ ಸವಾಲಾಗಿ ಸ್ವೀಕರಿಸಬೇಕು. ಚಿಯರ್ ಫುಲ್ ಆಗಿರಬೇಕು ಅಂತೆಲ್ಲ ನಾನೇ ಬೆಳಗ್ಗೆದ್ದು ಸ್ಟೇಟಸ್ಸಿನಲ್ಲಿ ಹಿತೋಪದೇಶ ಹಾಕ್ತೇನೆ. ಆದರೆ ಯಾರಾದರೂ ನನ್ನ ಬಗ್ಗೆ ಟೀಕೆ ಮಾಡಿದರೆ, ಪರೋಕ್ಷವಾಗಿ ಏನಾದರೂ ತಪ್ಪು ತೋರಿಸಿಕೊಟ್ಟರೆ, ನನ್ನ ನಡವಳಿಕೆ ಬಗ್ಗೆ ಏನಾದರೂ ಹೇಳಿದರೆ ಭಯಂಕರ ಅಪ್ಸೆಟ್ ಆಗ್ತೇನೆ. ಮೂಡೌಟ್ ಮೋಡ್ ಗೆ ಹೋಗ್ತೇನೆ. ಎಲ್ಲದರಲ್ಲೂ ನಿರಾಸಕ್ತರಾಗ್ತೇನೆ... ನಾನೇ ನನ್ನ ಸ್ಟೇಟಸ್ಸುಗಳಲ್ಲಿ ಹಾಕಿದ ನನ್ನದೇ ಸಾಲುಗಳಿಗೂ ನನ್ನನ್ನು ಸಾಂತ್ವನಗೊಳಿಸುವ ಶಕ್ತಿ ಇರುವುದಿಲ್ಲ... ಇಷ್ಟೆಲ್ಲ ಆದರೂ, ಅಂತಹ ಮನಃಸ್ಥಿತಿಯಿಂದ ಆಚೆ ಬಂದ ಮೇಲೆ ಮತ್ತದೇ ಒಣ ಹಿತೋಪದೇಶಗಳನ್ನು, ಇತರರಿಗೆ “ಮುಕ್ಕಾಲು ದಕ್ಕುವ”, ಬತ್ತಿ ಇಡುವ ಮಾದರಿಯ ಕ್ವೋಟ್ಸ್ ಗಳನ್ನು ಸ್ಟೇಟಸ್ಸಿನಲ್ಲಿ ಹಾಕಲು ಮರೆಯುವುದಿಲ್ಲ!!!
ಬದುಕು ಧನಾತ್ಮಕವಾಗಿರಬೇಕು, ಉತ್ಸಾಹ ಬೇಕು.
ಎಲ್ಲದರಲ್ಲೂ ಪಾಸಿಟಿವ್ ಎನರ್ಜಿ ಹುಡುಕಬೇಕು. ಯಾವುದಕ್ಕೂ ರೆಡಿ ಇರ್ಬೇಕು. ಎಂಥದ್ದೇ ಟೀಕೆ
ಬಂದರೂ ಅದರಿಂದ ವಿಚಲಿತರಾಗಬಾರದು... ಎಲ್ಲ ಸರಿ. ಆದರೆ ನಿಮ್ಮಲ್ಲಿರುವ ವಾಹನದ ಸಾಮರ್ಥ್ಯ 100
ಸಿಸಿ ಮಾತ್ರ. ಅದಕ್ಕೆ ಎಬಿಎಸ್ ಇಲ್ಲ, ಡಿಸ್ಕ್ ಬ್ರೇಕು ಇಲ್ಲ, ಗಟ್ಟಿ ಟಯರ್ ಇಲ್ಲ, ಹೆಚ್ಚು
ಮೈಲೇಜಿಲ್ಲ, ಜಾಸ್ತಿ ಮಂದಿ ಪ್ರಯಾಣಿಸಲು ಆಗುವುದಿಲ್ಲ. ಆದರೂ ಸಹ “ಇದೇ ವಾಹನದಲ್ಲಿ ನೀನು ವೇಗವಾಗಿ ಹೋಗಬೇಕು, ತುಂಬ ಮಂದಿಯನ್ನು
ಕರೆದೊಯ್ಯಬೇಕು, ಎಂತಹ ಗುಡ್ಡದ ದಾರಿಯಲ್ಲೂ ಜಾರಬಾರದು, ಏನಾದರೂ ಅಡ್ಡ ಬಂದರೆ ಸಡನ್ ಬ್ರೇಕು
ಹಾಕಿದರೂ ಗಾಡಿ ಮಗುಚಬಾರದು...” ಎಂದೆಲ್ಲ ಹಿದೋಪದೇಶ ಮಾಡಿದ್ರೆ ಅದೆಲ್ಲ ವರ್ಕೌಟ್ ಆಗ್ತದ? ಆ ವಾಹನದ ಸಾಮರ್ಥ್ಯ ಎಷ್ಟಿದೆಯೋ ಅಷ್ಟಕ್ಕೇ ಅದರಲ್ಲಿ
ಸವಾರಿ ಮಾಡಬಹುದು. ನಮ್ಮ ಪರಿಸ್ಥಿತಿ ಹಾಗೂ ಮನಃಸ್ಥಿತಿ, ಮತ್ತೆ ನಮ್ಮದೇ ಹುಟ್ಟುಗುಣ, ಸ್ವಭಾವ
ಎಂಬ ಸಾಫ್ಟ್ ವೇರ್ (ಪ್ರೋಗ್ರಾಮಿಂಗ್) ಹೊಂದಿದ ವ್ಯಕ್ತಿತ್ವ
ಎಂಬ ಗಾಡಿಯಲ್ಲೂ ಅದರ ಸಾಮರ್ಥ್ಯಕ್ಕನುಗುಣವಾಗಿ ಸಂಚಾರ, ಸವಾರಿ ಮಾಡಬಹುದೇ ಹೊರದು ಅದರಾಚೆಗಿನ
ಎಂಥದ್ದೇ ಫಿಲಾಸಫಿ ಬೋಧಿಸಿದರೂ ವಾಹನದ ಸಾಮರ್ಥ್ಯ ಮೀರಿ ಸವಾರಿ ಮಾಡಲು ಆಗದು. ಹಿತೋಪದೇಶಗಳು,
ಥಿಯರಿಗಳು ಓದಲು, ಬರೆಯಲು, ಅಭಿನಯಿಸಲು ಚಂದ ಆಗ್ತವೆ. ಅನುಸರಿಸಲು ಅದಕ್ಕೆ ಪೂರಕವಾಗಿರುವ
ಅಂಶಗಳೂ ಬೇಕಾಗ್ತವೆ...!!!
ಇದೆಲ್ಲ ಮೀತಿಗಳ ನಡುವೆಯೂ ಆರಂಭದಲ್ಲಿ ಉಲ್ಲೇಖಿಸಿದ ಆರು
ಆಯ್ದ ಅಂಶಗಳಿಂದ ನಾವು ಬದುಕಿನಲ್ಲಿ ಆಚೆ ಬರುವುದೇ ಇಲ್ಲ. ನನ್ನ ಮಿತಿ, ನನ್ನ ಪುಟ್ಟ ಜಗತ್ತು,
ನನ್ನ ಸಮಸ್ಯೆಗಳು, ನನ್ನ ಯೋಚನೆಯ ಪರಿಮಿತಿ, ನನಗಿರುವ ಜ್ಞಾನದ ವ್ಯಾಪ್ತಿ, ಜೀವನಾನುಭವ, ಪ್ರಪಂಚ
ಪರ್ಯಟನೆಯ ಜ್ಞಾನ... ಎಲ್ಲವನ್ನೂ ಮೀರಿದಂತೆ ನಾವು ವರ್ತಿಸುತ್ತೇವೆ. ಇತರರನ್ನು ಟೀಕಿಸುವಾಗ,
ಇತರರ ಬಗ್ಗೆ ಒಣ ವಿಮರ್ಶೆ ಮಾಡುವಾಗ, ಇತರರ “ಕಣ್ಣಿಗೆ ಕೈಹಾಕಿದಂತೆ” ಮಾತನಾಡಿ ನೋಯಿಸುವಾಗಲೂ ನಮಗೆ ನಮ್ಮ ಪರಿಮಿತಿಯೊಳಗಿನ
ಅಹಂ ತಣಿಯುವುದು ಮುಖ್ಯವಾಗಿರುತ್ತದೆಯೇ ಹೊರತು ಟೀಕಿಸಲು, ವಿಮರ್ಶಿಸಲು ನಾನು ಯಾರು ಎಂಬುದು
ನೆನಪೇ ಆಗುವುದಿಲ್ಲ....
ಇದೇ ಸರಿ, ಇದೇ ತಪ್ಪು ಮತ್ತು ಇದು ಸಾಧನೆ, ಹೀಗಿರುವುದು ಆದರ್ಶ ಎಂಬುದು ವಿಷಯಗಳ ವಿಮರ್ಶೆ
ಮತ್ತು ಹೋಲಿಕೆಗಳನ್ನು ಅವಲಂಬಿಸಿರುತ್ತದೆ. ಯಾರು ಏನು ಮಾಡಿದ್ದಾರೆ ಎಂಬುದೂ ಸಹ ಸಾಧನೆ ಮತ್ತು
ಸರಿ ತಪ್ಪುಗಳಿಗೆ ಮಾನದಂಡ ಆಗಿರುತ್ತದೆ. ಹಾಗಾಗಿ ಸಂಭವಗಳನ್ನು ಅನುಸರಿಸಿ ಮಾಡುವ ಟೀಕೆ,
ವಿಮರ್ಶೆ, ನಿಂದನೆ, ಹಂಗಿಸುವಿಕೆಗಳು ಸಹ ಎಷ್ಟೋ ಸಲ ಅರ್ಥ ಕಳೆದುಕೊಂಡಿರುತ್ತೇವೆ. ಆದರೂ ಸಹ
ನಮ್ಮ ಬುದ್ಧಿ ಒಂದು ಚೌಕಟ್ಟಿನೊಳಗೆ ಯೋಚಿಸುತ್ತಾ ಅಂತಹ ವಿಮರ್ಶೆಗಳ ದಾರಿಯಿಂದ ಬದಿಗೆ
ಸರಿಯುವುದಿಲ್ಲ...
ನನಗೆ ನಾನು ಎಲ್ಲರಿಗೂ ಹಿತದವನಾಗಿರಬೇಕು. ಯಾರೊಂದಿಗೂ ನಿಷ್ಠುರನಾಗಿರುವುದು ಬೇಕಾಗಿಲ್ಲ. ಅದಕ್ಕೇ ನಾನು ಹೊರಗಡೆ ಹೋಗುವಾಗ ಟಿಪ್ ಟಾಪ್ ಡ್ರೆಸ್ ತೊಟ್ಟಿರುತ್ತೇನೆ, ಚಂದಕ್ಕೆ ಶೇವ್ ಮಾಡಿರುತ್ತೇನೆ, ಬಿಳಿಯಾದ ತಲೆಕೂದಲಿಗೆ ಬಣ್ಣ ಬಳಿಯುತ್ತೇನೆ, ಅತಿಥಿಗಳ ಮನೆಗೆ ಹೋಗುವಾಗ ಧರಿಸಲೆಂದೇ ತೆಗೆದಿಟ್ಟ ಹೊಸ ಉಡುಪು ಹಾಕಿರುತ್ತೇನೆ, ಮನೆಗೆ ಅತಿಥಿಗಳು ಬರುತ್ತಾರೆ ಅಂತ ಮೊದಲೇ ಗೊತ್ತಿದ್ದರೆ ಮನೆ ಎಂದಿಗಿಂತ ಜಾಸ್ತಿ ಸ್ವಚ್ಛವಾಗಿರುತ್ತದೆ, ನಾನು ದಿನಾ ತೊಡುವ ಉಡುಪಿನ ಬದಲಿಗೆ ಬೇರೆ ಉಡುಪು ಧರಿಸಿರುತ್ತೇನೆ... ಜನರನ್ನು ಭೇಟಿಯಾಗುವಲ್ಲಿ, ಜನ ಮನೆಗೆ ಬರುವಲ್ಲಿ, ಸಭೆ ಸಮಾರಂಭಗಳಲ್ಲಿ ನನ್ನ ಮುಖದ ತುಂಬ ನಗು ಇರುತ್ತದೆ, ಅತಿ ವಿನಯವಂತನ ಹಾಗೆ ಕಾಣಿಸುತ್ತೇನೆ, ಅತಿ ಸಭ್ಯತೆ, ಅತ್ಯಂತ ಸಾತ್ವಿಕತೆ, ನಯವಾದ ಮಾತುಗಾರಿಕೆ, ಅತ್ಯಂತ ಸಹನಾಮಯಿಯಾಗಿ ಕಾಣಿಸಿಕೊಳ್ಳುತ್ತೇನೆ. ಇದಕ್ಕೇ ಅಲ್ವ ವಧು ಪರೀಕ್ಷೆಯಲ್ಲಿ, ವರ ಪರೀಕ್ಷೆಯಲ್ಲಿ, ಮದುವೆ ಮಂಟಪದಲ್ಲಿ ಸಭಾ ಕಾರ್ಯಕ್ರಮಗಳಲ್ಲಿ, ಸನ್ಮಾನ ಸಮಾರಂಭಗಳಲ್ಲಿ, ಕೆಲಸದ ಸಂದರ್ಶನದ ಹೊತ್ತಿನಲ್ಲಿ, ಮಾಧ್ಯಮಗಳ ಮೈಕಿನ ಎದುರು, ಟಿವಿ ಸುದ್ದಿ ವಾಹಿನಿಗಳ ಪ್ಯಾನೆಲ್ ಚರ್ಚೆಗಳಲ್ಲಿ ಎಲ್ಲ ಕಾಣಿಸುವ ನಾವು “ನಾವೇ” ಆಗಿರುವುದಿಲ್ಲ. ಅದು ನಾವೇ ಆಸ್ಥೆಯಿಂದ ಕಟ್ಟಿದ ನಮ್ಮದೊಂದು ನೆರಳಾಗಿರುತ್ತದೆ. ಲೋಪರಹಿತ, ಸ್ವಭಾವದಲ್ಲಿ ದೋಷರಹಿತ, ಅತ್ಯಂತ ಸಾತ್ವಿಕ, ಸಂಯಮ, ದಯಾಮಯ, ಬುದ್ಧಿವಂತರಾಗಿರುವ ನಮ್ಮನ್ನು ಈ ಮೇಲೆ ಹೇಳಿದ ಸಂದರ್ಭಗಳಲ್ಲಿ ನಾವು “ಪ್ರದರ್ಶಿಸಿರುತ್ತೇವೆ”, ಇಂಥವಕ್ಕೆಲ್ಲ ಯಾರದ್ದೂ ತರಬೇತಿ ಬೇಕಾಗಿರುವುದಿಲ್ಲ. ಇಷ್ಟು ಮಾತ್ರವಲ್ಲ ಚಂದದ ಲೇಖನಗಳಲ್ಲಿ, ಚಂದದ ಭಾಷಣದಲ್ಲಿ, ಚಂದದ ನಟನೆಯಲ್ಲಿ, ಚಂದದ ಕ್ವೋಟ್ಸ್ ಶೇರ್ ಮಾಡುವುದರಲ್ಲೂ “ಕಾಣಿಸುವ” ನಾವು ನಿಜವಾದ ನಾವಾಗಿರುವುದಿಲ್ಲ...!
ಸಭೆ ಮುಗಿದ ಮೇಲೆ, ವಧೂ ಪರೀಕ್ಷೆಯೂ ಕಳೆದು ಮದುವೆ ಕಳಿದ ಬಳಿಕ, ಡಿಸ್ಕಶನ್ ಆದ ನಂತರ, ಮನೆಗೆ ಮರಳಿದ ಬಳಿಕ, ಉದ್ದೇಶಿತ ಕೆಲಸ ಕಾರ್ಯ ಸಂದ ನಂತರ... ವಿವಿಧ ಸಂದರ್ಭಗಳಲ್ಲಿ ನಾವಾಗಿರುವ ನಾವು ಕಾಣಿಸಿಕೊಳ್ಳುತ್ತೇವೆ. ಯಾವುದೋ ಸಂದರ್ಭ ನಮ್ಮನ್ನು ಇನ್ನೊಬ್ಬರೆದುರು ತೆರೆದಿಟ್ಟುರುತ್ತೇವೆ. ನಮ್ಮ ಕುರಿತಾದ ಕಲ್ಪನೆಯೇ ಬದಲಾಗುವಷ್ಟು ನಮ್ಮ ಇನ್ನೊಂದು ಮುಖ ಕಂಡ ಬಳಿಕವೂ ಮತ್ತೊಂದು ಸಾರ್ವಜನಿಕ ಸಂದರ್ಭದಲ್ಲಿ ನಮ್ಮ ಬಾಹ್ಯದಲ್ಲಿ ಅದೇ ಚಂದದ ಡ್ರೆಸ್ಸು, ಮೇಕಪ್ಪು, ಮುಖದ ತುಂಬ ನಗು, ನಯವಿನಯದ ಮಾತು, ಮೆಚ್ಚಿಸುವಷ್ಟು ವಿಶಾಲವಾದ ಹೃದಯ, ನಾನೇ ಜಗತ್ತಿನ ಕಟ್ಟಕಡೆಯ ಸರ್ವಜ್ಞ ಎನ್ನುವಷ್ಟು ಪಾಂಡಿತ್ಯದ ಪ್ರಖರತೆ ನನ್ನ ಕಿವಿಯಿಂದ ಕಿವಿಯ ವರೆಗೆ ಹಣೆಯಿಂದ ಗಲ್ಲದ ವರೆಗೆ ವಿಶಾಲವಾಗಿ ವ್ಯಾಪಿಸಿರುತ್ತದೆ... ಎಂತಹ ಯಂತ್ರಕ್ಕೂ ನನ್ನ ಈ ತೋರಿಸಿಕೊಳ್ಳುವಿಕೆಯ ಠಕ್ಕನ್ನು ಪತ್ತೆ ಹಚ್ಚಲು ಆಗುವುದಿಲ್ಲ...
ನಾವೆಷ್ಟೇ ಬರೆದರೂ, ನಾವೆಷ್ಟೇ ಫೇಸ್ಬುಕ್ಕು ಚರ್ಚೆ ಮಾಡಿದರೂ, ಒಂದುಂದು ದಿನವೂ ಬೆಳಗ್ಗೆದ್ದ ಕೂಡಲೇ ಒಬ್ಬೊಬ್ಬ ಮಹಾತ್ಮರ ಮಾತುಗಳನ್ನು ಸ್ಟೇಟಸ್ಸುಗಳಲ್ಲಿ ಹಾಕಿದರೂ ನಮ್ಮೊಳಗಿರುವ ನಿಜವಾದ ನಾವು ಬದಲಾಗಿ ಮತ್ತೊಬ್ಬ ನಾವು ಪ್ರತಿಷ್ಠಾಪನೆ ಆಗುವುದಿಲ್ಲ. ನಮ್ಮ ಎಲ್ಲ ದೌರ್ಬಲ್ಯ, ಮುಂಗೋಪ, ಮಿತಿಗಳು, ಸೀಮಿತ ಜ್ಞಾನದ ಯೋಚನೆಗಳು, ಸಂಕುಚಿತ ಕಲ್ಪನೆಗಳು, ನಕಾರಾತ್ಮಕ ಚಿಂತನೆಗಳು, ಸಂಶಯ, ಆತಂಕ, ಹೋಲಿಕೆಯ ಕೀಳರಿಮೆ ಯಾವುದೂ ತೊಲಗಿರುವುದಿಲ್ಲ... ಒಂದು ವೇಳೆ ತೊಲಗಿದರೆ ಮರುದಿನದಿಂದ ನಮ್ಮ ಹೆಸರಿನ ಜೊತೆಗಿರುವ ನಾವು ನಾವೇ ಹೌದು ಅಂತ ಜನ ನಂಬ್ಲಿಕೇ ಇಲ್ಲ!!! ಏನಂತೀರ...
(ಈ ಲೇಖನ ಕೊನೆಯ ತನಕ ಐದಾರು ಜನ ಓದಿರಬಹುದು. ಓದಿದವರಿಗೆ ಈ ಶೀರ್ಷಿಕೆ ಕೊಟ್ಟದ್ದು ಯಾಕೆ ಅಂತ ಅರ್ಥ ಆದೀತು. ಅಂದ ಹಾಗೆ ಈ ಲೇಖನ ಯಾರನ್ನೋ ಉದ್ದೇಶಿಸಿ ಬರೆದದ್ದು ಅಂತ ಯಾರೂ ವೃಥಾ ಸಂಶಯ ಪಡುವ ಅಗತ್ಯ ಇಲ್ಲ. ಇದು ನಾನಾಗಿರದ ನಾವು ಆಗಿರುವ ನಾನು ಸಹಿತ ಎಲ್ಲರಿಗೂ ಅನ್ವಯಿಸುತ್ತದೆ... ನನ್ನನ್ನೂ ಸಹಿತ. ಯಾರದ್ದೂ ಕಮೆಂಟು, ಲೈಕು ಬರುತ್ತದೆ ಎಂಬ ಭ್ರಮೆಯನ್ನು ಬಿಟ್ಟೇ ಬರೆದದ್ದು, ಹಾಗಾಗಿ ಯಾವುದೇ ನಿರಾಸೆಯ ನಿರೀಕ್ಷೆಯೇ ಇಲ್ಲ!!!)
-ಕೃಷ್ಣಮೋಹನ ತಲೆಂಗಳ (25.09.2024)
No comments:
Post a Comment