ಕಾಣದ್ದು, ನೋಡದ್ದು, ಆಗದ್ದು, ಹೋಗದ್ದರ ಬಗ್ಗೆ ವಿಪರೀತ ಟೆನ್ಶನ್... ಇಷ್ಟವಿಲ್ಲದ್ದಕ್ಕೆಲ್ಲ ಸ್ಪಷ್ಟವಾಗಿ NO ಹೇಳಲು ಸಂಕೋಚ ಆಗ್ತಾ ಇರ್ತದ?!

 




ಬದುಕು ಸಕಾರಾತ್ಮಕ ಇರ್ಬೇಕು ಹೇಳ್ತೇವೆ. ಸಮಸ್ಯೆಗಳನ್ನು ಗಂಟು ಕಟ್ಟಿ ಕಪಾಟಿನೊಳಗಿಡು ಅನಿವಾರ್ಯ ಆದಾಗ ಮಾತ್ರ ಈಚೆ ತೆಗೆದು ಸ್ವಚ್ಛ ಮಾಡು ಅಂತ ಹಿತವಚನ ಬೋಧಿಸ್ತೇವೆ. ನಾಲ್ಕು ಮಂದಿ ತಮ್ಮ ದುಃಖ, ನೋವು ತೋಡಿಕೊಂಡಾಗ, ನಮಗಿಂತ ಅಸಹಾಯಕರು ಕಂಡಾಗ, ಕ್ಲಿಷ್ಟ ಸನ್ನಿವೇಶ ಕಂಡಾಗಲೆಲ್ಲ ನಮಗೆ ತೋಚಿದ ಪರಿಹಾರ ಹೇಳ್ತೇವೆ, ಧೈರ್ಯ ತುಂಬಿಸಬೇಕು, ಉತ್ಸಾಹ ತುಂಬಬೇಕು ಅಂತ ಅಂದುಕೊಳ್ಳುತ್ತೇವೆ.

ಆದರೆ...

ಪ್ರತಿ ಬದುಕೂ ಸಹ ಒಂದೊಂದು ಕತೆ. ಗಟ್ಟಿಯಾಗಿರುವವರಂತೆ, ಆಶಾವಾದಿಗಳಂತೆ, ಬಲಿಷ್ಠರಂತೆ, ಬುದ್ಧಿವಂತರಂತೆ ಕಾಣುವವರಲ್ಲೂ ಅನೇಕರು ಒಳಗೊಳಗೆ ಒಂದೊಂದು ಸಂಕೀರ್ಣ ಯೋಚನೆಗಳಿಂದ ಬಳಲುತ್ತಾ ಇರ್ತಾರೆ. ಮಾನಸಿಕವಾಗಿ ದುರ್ಬಲರಿರ್ತಾರೆ. ತೋರಿಕೆಗೆ, ಸಾರ್ವಜನಿಕವಾಗಿ ಅತ್ಯಂತ ಸಮರ್ಥರಂತೆ ಕಾಣುವವರಿಗೂ ಬಲಹೀನತೆಗಳಿರ್ತವೆ. ಸಣ್ಣ ಸಣ್ಣ ವಿಚಾರಗಳೂ ದೊಡ್ಡದಾಗಿ ಕಾಡ್ತವೆ. ಅವರದನ್ನು ತೋರಿಸಿಕೊಳ್ಳದ, ಹೇಳಿಕೊಳ್ಳದ ಮಾತ್ರಕ್ಕೆ ಅವರದ್ದು ಸುಖೀ ಬದುಕು ಅಂತ ನಿರ್ಧರಿಸಲು ಕಷ್ಟ. ಎಲ್ಲವನ್ನೂ ಬಲ್ಲವನು ಏನೂ ಅರಿಯದಂತೆ ಇರಬಹುದು. ಎಲ್ಲವನ್ನೂ ಅರೆದು ಕುಡಿದಂತೆ ಓಡಾಡುವವನೊಳಗಿನ ಬಂಡವಾಳ ಶೂನ್ಯವೂ ಆಗಿರಬಹುದು. ಅದು ಸಾಂಗತ್ಯದಿಂದ ಮಾತ್ರ ಅರ್ಥವಾಗಲು ಸಾಧ್ಯ.

ನಮ್ಮ ನಿಮ್ಮೊಳಗೇ ಸಣ್ಣ ಸಣ್ಣ ಸಂಗತಿಗಳೂ ಕೆಲವೊಮ್ಮೆ ಎಷ್ಟೊಂದು ಕಾಡ್ತವೆ ಅಲ್ವ... ಆತಂಕವೇ ಸ್ವಭಾವವಾಗಿರುವವರಿಗಂತೂ ಪ್ರತಿ ಟೆನ್ಶನ್ನೂ ಕೂಡಾ ಬೆಟ್ಟವಾಗಿ ಆವರಿಸಿಕೊಳ್ತದೆ. ಇಂತಹ ಆತಂಕಗಳ ಪೈಕಿ ಬಹುತೇಕ ಊಹೆ ಅಥವಾ ಸಾಧ್ಯತೆಗಳ ಭಯಂಕರ ಅಂಜಿಕೆ ಆಗಿರ್ತದೆ ವಿನಃ ವಾಸ್ತವದಲ್ಲಿ ಅವೆಲ್ಲ ದೊಡ್ಡ ದೊಡ್ಡ ಸಮಸ್ಯೆಗಳಾಗಿರುವುದಿಲ್ಲ. ಕಾಣದ್ದು, ಮತ್ತು ಆಗಬೇಕಾಗಿರುವುದರ ಕುರಿತ ಆತಂಕ ಮತ್ತು ಹಿಂಜರಿಕೆ ನಮ್ಮನ್ನು ಹಿಂಡಿ ಬಿಡಬಲ್ಲುದು... ತುಂಬ ಮಂದಿಗೆ ಇಂತಹ ಆತಂಕಗಳು ದಿನನಿತ್ಯ ಕಾಡುತ್ತಿರಬಹುದು.

ಉದಾಹರಣೆಗೆ:

1)      ನಾನೊಂದು ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡಲಿದ್ದೇನೆ (ಒಬ್ಬನೇ). ಸಹಪ್ರಯಾಣಿಕರು ಹೇಗಿರಬಹುದು. ಊಟಕ್ಕೆ ಎಲ್ಲಿ ನಿಲ್ಲಿಸಬಹುದು, ಮೂತ್ರ ಶಂಕೆ ಬಂದರೆ ಸರಿಯಾದ ಶೌಚಾಲಯದ ಬಳಿ ಬಸ್ ನಿಲ್ಸಿಯಾರ. ಶೌಚಾಲಯಕ್ಕೆ ಹೋಗುವಾಗ ಬ್ಯಾಗ್ ತಕ್ಕೊಂಡು ಹೋಗಬೇಕಲ್ವ?. ಯಾರಾದರೂ ಕಳ್ಳರು ಕದ್ದಾರ, ನಾನು ಶೌಚಾಲಯಕ್ಕೆ ಹೋಗಿ ಬರುವದಕ್ಕೂ ಮುನ್ನ ನನ್ನನ್ನು ಬಿಟ್ಟು ಬಸ್ ಹೋದರೆ ಎಂತ ಮಾಡುವುದು....?!

2)      ತೀರಾ ಇತ್ತೀಚೆಗೆ ವಾಹನದ ಟಯರ್ ಪಂಕ್ಚರ್ ಆಗಿತ್ತು. ರಸ್ತೆಗಿಳಿದು ಸ್ವಲ್ಪ ದೂರ ಹೋಗುವಷ್ಟರಲ್ಲಿ ವಾಹನ ಅಲ್ಲಾಡಲು ಶುರುವಾಗಿ ಸಂಶಯ ಬಂದು ನಿಂತಾಗ ಟಯರ್ ಪಂಕ್ಚರ್ ಆಗಿದ್ದು ಗೊತ್ತಾಯಿತು. ದೇವರ ದಯದಿಂದ ಅಲ್ಲೇ ಪಕ್ಕದಲ್ಲಿ ಪಂಕ್ಚರ್ ಅಂಗಡಿ ಇತ್ತು. ಸುಸೂತ್ರವಾಗಿ ಪಂಕ್ಚರ್ ಹಾಕಿಸಿ ಹೊರಟೆ.. ಆದರೂ ಸಂಶಯ, ನಾಳೆ ಟಯರಿಗೆ ಮತ್ತೊಂದು ಆಣಿ ಚುಚ್ಚಿದರೆ ಎಂತ ಮಾಡುವುದು, ಈಗ ಪಂಕ್ಚರ್ ಹಾಕಿದ್ದು ಸರಿ ಇರಬಹುದ... ಅಂತ. ಅಷ್ಟು ಮಾತ್ರವಲ್ಲ. ಆಗಾಗ ಗಾಡಿ ವಾಲಾಡಿದ ಹಾಗೆ, ವಾಲಿದ ಹಾಗೆ ಅನ್ನಿಸುವುದು. ಪದೇ ಪದೇ ಗಾಡಿ ಸೈಡಿಗೆ ಹಾಕಿ ಟಯರಿನಲ್ಲಿ ಗಾಳಿ ಎಷ್ಟು ಉಂಟು ಅಂತ ನೋಡುವವರೆಗೆ ಸಮಾಧಾನ ಇಲ್ಲ!

3)      ಮೊನ್ನೆ ತಾನೇ ಸ್ಕೂಟರಿನಲ್ಲಿ ಓ ಅಲ್ಲಿ ಇಳಿಜಾರಿನಲ್ಲಿ ಹೋಗುವಾಗ ರಸ್ತೆಯಲ್ಲಿ ಮರಳು ಚೆಲ್ಲಿತ್ತು. ದಿಢೀರ್ ಬ್ರೇಕ್ ಹಾಕಿದಾಗ ಗಾಡಿ ಸ್ಕಿಡ್ ಆಯಿತು. ವಾಹನ ವಾಲಿತು. ನಾನು ರಸ್ತೆಗೆ ಬಿದ್ದೆ. ಆದರೆ ಏಟೇನೂ ಆಗಲಿಲ್ಲ. ಹೆಲ್ಮೆಟ್ಟಿನ ಗಾಜು ಪುಡಿಯಾಯಿತು, ಮುಂಗೈಗೆ ಸ್ವಲ್ಪ ತರಚಿದ ಗಾಯ ಅಷ್ಟೇ... ಆದರೆ ಆ ನಂತರ ಇಳಿಜಾರು ಸಿಕ್ಕಿದಾಗಲೆಲ್ಲ ಮೈಯೆಲ್ಲ ನಡುಗಿನ ಅನುಭವ. ಫಸ್ಟು ಗೇರಿನಲ್ಲಿ ಹೋಗ್ತಾ ಇದ್ದರೂ ಎದೆ ಬಡಿತ ಜೋರಾಗುವುದು. ಇನ್ನೇನು ಸಡನ್ ಬ್ರೇಕ್ ಹಾಕಿದರೆ ಗಾಡಿ ಬಿದ್ದೇ ಹೋಗುತ್ತದೇನೋ ಅಂತ ಆತಂಕದಲ್ಲಿ ಬ್ರೇಕು ಒತ್ತಲು ಬೆರಳು ಮುಂದಾಗುವುದೇ ಇಲ್ಲ...!

4)      ಬೆಳಗ್ಗೆದ್ದರೆ ಅನಾರೋಗ್ಯದ್ದೇ ಸಂಗತಿಗಳು ಕೇಳಿ ಬರುತ್ತವೆ. ಅವರಿಗೆ ಬ್ಲಾಕ್ ಇತ್ತಂತೆ, ಇವರಿಗೆ ಆಕ್ಸಿಡೆಂಟ್ ಆಯ್ತಂತೆ, ಅವರಿಗೆ ಆಂಜಿಯೋ ಮಾಡಬೇಕಾಯಿತಂತೆ, ಇವರಿಗೆ ಹೈಬಿಪಿ ಅಂತೆ... ಅವರಿಗೆ ...ಅದಂತೆ ಗೊತ್ತುಂಟ. ಯಾರತ್ರವೂ ವಿಷಯ ಬೇಡ ಆಯ್ತ...? ಅಂತೆಲ್ಲ ವಿಚಿತ್ರವಾದ ತಳಮಳ ಸೃಷ್ಟಿಸುವ ಸುದ್ದಿಗಳು. ಮೊನ್ನೆ ಮೊನ್ನೆ ಹೊಟ್ಟೆಯಲ್ಲಿ ನೋವು ಕಂಡಾಗಲೂ, ಎದೆಯಲ್ಲಿ ಉರಿ ಹೊತ್ತಿದಾಗಲೂ ಭಯಂಕರ ತಳಮಳ... ನನಗೆ ಹಾರ್ಟ್ ಸಮಸ್ಯೆ ಇರಬಹುದ, ಗ್ಯಾರಂಟಿ ಇದು ಕ್ಯಾನ್ಸರೇ ಇರಬೇಕು, ಇಷ್ಟೊಂದು ಸಲ ತಲೆನೋವು ಬರ್ತದೆ ಅಂತಾದರೆ ಇದೊಂದು ಮೆದುಳಿನ ಕಾಯಿಲೆ ಇರಬಹುದು. ಸ್ಕ್ಯಾನಿಂಗ್ ಹೇಳಿದ್ದಾರೆ ಅಂದರೆ ಭಯಂಕರ ಆಪತ್ತು ಕಾದಿರಬಹುದು... ನಾನಿಷ್ಟು ಹೆಚ್ಚು ದಿನ ಬದುಕುವುದಿಲ್ಲ ಅಂತ ಕಾಣ್ತದೆ, ನಾನು ಸತ್ತರೆ ಜಾಲತಾಣದಲ್ಲಿ ಯಾವ ಥರ ನನಗೆ ಶ್ರದ್ಧಾಂಜಲಿ ಹಾಕಿಯಾರು... ?!!

5)      ನಾನು ಕೆಲಸ ಮಾಡುವ ಕಚೇರಿಯಲ್ಲಿ ನನಗೆ ಯಾರೂ ಉಪದ್ರ ಕೊಡುವುದಿಲ್ಲ, ಸಂಬಳ ಸರಿಯಾಗೇ ಕೊಡುತ್ತಾರೆ. ಆದರೂ ಒಂದು ದಿನ ಕಾರಣಾಂತರಗಳಿಂದ ತಡವಾದರೆ, ಅದಕ್ಕೆ ಸರಿಯಾದ ಕಾರಣ ಕೊಟ್ರೂ ದೊಡ್ಡವರು ಏನಂದುಕೊಂಡಾರು, ನನ್ನ ಮೇಲೆ ಭಯಂಕರ ಸಿಟ್ಟು ಬಂದೀತ, ನಾನು ನಾಡಿದ್ದು ಎರಡು ದಿನ ರಜೆ ಕೇಳಿದ್ದೇನೆ, ಅವರು ನನ್ನ ಬಗ್ಗೆ ತಪ್ಪು ತಿಳಿದುಕೊಂಡಾರ... ನನ್ನನ್ನು ಬ್ಲಾಕ್ ಲಿಸ್ಟಿಗೆ ಸೇರಿಸಿಯಾರ... ಎಂದೆಲ್ಲ ವಿಪರೀತ ಸಂಕಟ... ಹೇಳಿಕೊಳ್ಳಲಾಗದ ತಳಮಳ...

6)      ನನಗೆ ಭಯಂಕರ ಟೆನ್ಶನ್ ಆಗಿ ನನ್ನ ಸಮಾಧಾನಕ್ಕೆ ನಾನೊಂದು ವಾಟ್ಸಪ್ ಸ್ಟೇಟಸ್ ಹಾಕಿದ್ದೇನೆ. ಆದರೆ ಅವರು ಅದನ್ನು ನೋಡಿದರೆ ಏನು ಗ್ರಹಿಸಿಯಾರೂ, ಇವರಿಗೆ ಬೇಜಾರಾದೀತ, ಅವರು ನನ್ನತ್ರ ಇದು ಯಾರಿಗೆ ಹಾಕಿದ್ದು ಅಂತ ಜೋರು ಮಾಡಿದರೆ ಎಂತ ಮಾಡುವುದು... ಛೇ... ಹಾಕಲೇಬಾರದಿತ್ತು, ಆದರೆ ಹಾಕಿ ಈಗಾಗಲೇ ತುಂಬ ಮಂದಿ ನೋಡಿಯಾಗಿದೆ. ಇನ್ನು ಡಿಲೀಟ್ ಮಾಡಿದರೆ ಯಾಕೆ ಡಿಲೀಟ್ ಮಾಡಿದ್ದು ಅಂತ ಯಾರಾದರೂ ಕೇಳಿದರೆ ಎಂತ ಮಾಡುವುದು, ಛೆ...ಛೆ...!

7)      ನನಗೆ ಮೊದಲೇ ಇಂತಹ ಡ್ರೆಸ್ ಹಾಕ್ಲಿಕೆ ಇಷ್ಟ ಇರಲಿಲ್ಲ... ಆದರೂ ಸಹೋದ್ಯೋಗಿಗಳು ಮರ್ಲು ಕಟ್ಟಿದ್ರು ಅಂತ ಹಾಕಿ ಆಗಿದೆ. ಈಗ ಎಂತದ್ದೋ ಫಿಟ್ಟಿಂಗ್ ಸರಿ ಇಲ್ಲದಾಗೆ ಅನ್ನಿಸ್ತಾ ಇದೆ. ಎಷ್ಟೇ ತಮಾಷೆ ಮಾಡಿದ್ರೂ ತೊಂದರೆ ಇರ್ಲಿಲ್ಲ, ಇಂತಹ ಡ್ರೆಸ್ಸು ಹಾಕಬಾರದಿತ್ತು... ಇನ್ನು ಜನ್ಮದಲ್ಲಿ ಇಂತಹ ಡ್ರೆಸು  ಹಾಕುವುದಿಲ್ಲ. ಭಯಂಕರ ಮುಜುಗರ ಫೀಲಾಗ್ತಾ ಇದೆ...

8)      ಅವನೊಬ್ಬ ಕಾಲ್ ಮಾಡಿದ್ರೆ ಎಷ್ಟು ಹೊತ್ತಾದ್ರೂ ಇಡುವುದಿಲ್ಲ. ನಾನು ಬಿಝೀ ಇರುವಾಗಲೇ ಕಾಲ್ ಮಾಡಿ ಫುಲ್ ಸ್ಟಾಪಿಲ್ಲದೆ ಮಾತಾಡ್ತಾ ಇರ್ತಾನೆ. ನಂಗೆ ಮಾತನಾಡೂವ ಮೂಡಿಲ್ಲ, ಬಿಝಿ ಇದ್ದೇನೆ, ತಲೆನೋವಾಗ್ತದೆ ಅಂತ ಹೇಳ್ಲಿಕೆ ಸರಿ ಆಗುವುದಿಲ್ಲ. ಇನ್ನೇನು ಎಲ್ಲಿಗೋ ಹೊರಡಬೇಕು ಅನ್ನುವಷ್ಟರಲ್ಲಿ ಕಾಲ್ ಮಾಡಿ ತಲೆ ತಿನ್ತಾನೆ, ನನ್ನ ಕೆಲಸ ಎಲ್ಲ ಹಾಳಾಗ್ತದೆ. ಹಾಗಂತ ಕಾಲ್ ಕಟ್ ಮಾಡ್ಲಿಕೆ, ರಿಸೀವ್ ಮಾಡದೇ ಇರ್ಲಿಕೆ ಧೈರ್ಯ ಇಲ್ಲ. ಅವನೇನಾದರೂ ನನ್ನ ಬಗ್ಗೆ ತಪ್ಪು ತಿಳಿದುಕೊಂಡ್ರೆ ಎಂತ ಮಾಡುವುದು?!

9)      ನನ್ನನ್ನು ಯಾವುದೋ ಕಮಿಟಿಗೆ ಸೇರ್ಸಿದ್ದಾರೆ, ನನಗೆ ಅಲ್ಲಿಗೆ ಹೋಗಿ ಕೆಲಸ ಮಾಡಲು ಟೈಮಿಲ್ಲ, ಹಾಗಂತ ನೇರ ಹೇಳ್ಲಿಕೆ ಒಳ್ಳೆದಾಗುದಿಲ್ಲ. ಮತ್ತೊಬ್ಬರು ವಾರ್ಷಿಕೋತ್ಸವಕ್ಕೆ ನಿಮ್ಮ ಹೆಸರಿನಲ್ಲ 1000 ರುಪಾಯಿ ರಶೀದಿ ಬರೀತೇನೆ ಹೇಳಿದ್ದಾರೆ, ಈಗ ಮಂತ್ ಎಂಡ್, ನನ್ನತ್ರ ಅಷ್ಟು ದುಡ್ಡಿಲ್ಲ ಅಂತ ಅವರಿಗೆ ಗೊತ್ತಾಗುವುದಿಲ್ಲ. ದುಡ್ಡಿಲ್ಲ ಅಂತ ಹೇಳ್ಲಿಕೆ ಬಾಯಿಯೇ ಬರುವುದಿಲ್ಲ. ಎಂತ ಮಾಡುವುದೂ ಅಂತವೇ ಗೊತ್ತಾಗುವುದಿಲ್ಲ. ಬೇಡ ಬೇಡ ಅಂದ್ರೂ ನನಗಿಷ್ಟ ಇಲ್ಲದ ವಿಷಯಕ್ಕೆಲ್ಲ ಸೇರಿಸ್ತಾರೆ. ಅವಾಯ್ಡ್ ಮಾಡ್ಲಿಕೇ ಆಗುವುದಿಲ್ಲಂತ....!

10)    ಬಸ್ಸಿನಲ್ಲಿ ಯಾರೋ ಬಂದು ಸ್ವಲ್ಪ ಆಚೆ ಜರುಗಿ ಅಂತ ನನ್ನ ಸೀಟಿನಲ್ಲಿ ನನ್ನನ್ನು ನೂಕಿ ಕೂತರೂ ಸುಮ್ಮನಿರ್ತೇನೆ. ಕ್ಯೂವಿನಲ್ಲಿ ನನ್ನನ್ನು ತಳ್ಳಿ ಮುಂದೆ ದಾಟಿ ಹೋದರೂ ನೀವು ಕ್ಯೂನಲ್ಲೇ ಬನ್ನಿ ಅಂತ ಹೇಳ್ಲಿಕೆ ಧೈರ್ಯ ಬರುವುದಿಲ್ಲ. ಅವ ಕೇಳಿದ ಸಾಲ ವಾಪಸ್ ಕೊಡುವುದೇ ಇಲ್ಲ ಅಂತ ಸ್ಪಷ್ಟವಾಗಿ ಗೊತ್ತಿದ್ರೂ ಅಣ್ಣ ಅರ್ಜೆಂಟ್ ಒಂದು 200 ರುಪಾಯಿ GPay ಮಾಡಿ ಅಂತ ಹಲ್ಲು ಕಿಸಿಯುತ್ತಾ ಹೇಳುವಾಗ ಇಲ್ಲ, ನನ್ನತ್ರ ದುಡ್ಡಿಲ್ಲ, ನಿಂಗೆ ಕೊಡುವುದಿಲ್ಲ ಅಂತ ಹೇಳ್ಲಿಕೆ ನಾಲಿಗೆಯೋ ಹೊರಳುವುದಿಲ್ಲ... ನಾನು ಖರೀದಿ ಮಾಡುವ ತರಕಾರಿಗೆ ರೇಟು ಜಾಸ್ತಿ ಅಂತ ಗೊತ್ತಿದ್ರೂ, ಸ್ಪಲ್ಪ ರೇಟು ಕಡಿಮೆ ಮಾಡಿ ಅಂತ ಚೊರೆ ಮಾಡ್ಲಿಕೆ ನಂಗೆ ಆಗುವುದೇ ಇಲ್ಲಂತ...!!!

 

ಇವಿಷ್ಟು ಸಾಂಕೇತಿಕ ಉದಾಹರಣೆಗಳಷ್ಟೇ... ನಮ್ಮೆಲ್ಲರೊಳಗೆ ಇಂತಹ ವೈಯಕ್ತಿಕವಾದ ಇತಿಮಿತಗಳು, ಅತಿ ದಾಕ್ಷಿಣ್ಯ, ನೋ ಹೇಳ್ಲಿಕಾಗದ ಸ್ವಭಾವ, ತಪ್ಪುಗಳನ್ನೂ ವಿರೋಧಿಸ್ಲಿಕೆ ಆಗದ ದೌರ್ಬಲ್ಯ, ಅಸಹಾಯಕತೆಗಳು ಇರ್ತವೆ. ಸಣ್ಣ ಸಣ್ಣ ಸಂಗತಿಗಳೂ ಕೆಲವೊಮ್ಮೆ ಹೀಗಾದರೆ... ಹಾಗಾದರೆ... ಅಂತ ಕಾಡಿ ಕಾಡಿ ಇರುವ ಮನಃಶಾಂತಿಯನ್ನೂ ಕಲಕಿ ಬಿಡಬಹುದು... ಅವೆಲ್ಲ ನಮ್ಮ ಮಿತಿಗಳು, ದೌರ್ಬಲ್ಯಗಳು ಅಂತ ಗೊತ್ತಿದ್ರೂ ಇಷ್ಟವಿಲ್ಲದ ವಿಷಯಗಳಿಗೆ ಸ್ಪಷ್ಟವಾಗಿ NO ಅಂತ ಹೇಳಲಾಗದೆ ತೊಳಲಾಡ್ತೇವೆ. ಅತಿಯಾದ ದಾಕ್ಷಿಣ್ಯ, ಅವರೇನಂದ್ಕೊಳ್ತಾರೋ ಎಂಬ ವಿನಾ ಕಾರಣ ಆತಂಕ, ಹೀಗಾದರೆ, ಹಾಗಾದರೆ ಎಂಬ ಊಹನಾತ್ಮಕ ಭಯ, ಸಾಧ್ಯಾಸಾಧ್ಯತೆಗಳ ಬಗ್ಗೆ ವಿಪರೀತ ಯೋಚನೆ ಮಾಡಿಕೊಂಡು ನಡುಗುವುದು... ನಕಾರಾತ್ಮಾಕ ಬೆಳವಣಿಗೆಗಳ ಬಗ್ಗೆ ನಮ್ಮನ್ನು ಹೋಲಿಸಿಕೊಂಡು ಹೆದರುವುದು... ಹೀಗೆ....

 

ಮನೋವೈದ್ಯರು ಹೇಳ್ತಾ ಇರ್ತಾರೆ... ನೀವು ಏನನ್ನು ಬಲವಾಗಿ ಮನಸ್ಸಿನಲ್ಲಿ ಸಂಕಲ್ಪಿಸುತ್ತೀರೋ ಅದೇ ಬದುಕಿನಲ್ಲಿ ಆಗ್ತದೆ. ವಿನಾ ಕಾರಣ ಟೆನ್ಶನ್ ಮಾಡಬೇಡಿ, ನಕಾರಾತ್ಮಕವಾಗಿ ಚಿಂತೆ ಮಾಡಿದರೆ ನಕಾರಾತ್ಮಕ ಫಲಿತಾಂಶವೇ ಸಿಗ್ತದೆ. ಕಾಣದ್ದೇ ಇರುವುದರ ಬಗ್ಗೆ ಚಿಂತೆ ಮಾಡಬೇಡಿ ಅಂತ...

ಆದರೆ, ನಮಗದು ಗೊತ್ತಿರ್ತದೆ, ನಮ್ಮ ದುರ್ಬಲ ಮನಸ್ಸು ಅದನ್ನು ದಾಟಿ ಬರುವಲ್ಲಿ ಮೀನ-ಮೇಷ ಎಣಿಸ್ತಾ ಇರ್ತದೆ. ಆದರೂ ಬಹಳಷ್ಟು ಸಲ ಹೊತಜಗತ್ತಿಗೆ ನಾವೊಬ್ಬ ಭಯಂಕರ ವಿಚಾರವಾದಿಗಳೇ ಆಗಿರ್ತೇವೆ. ಏನಂತೀರಿ?

-ಕೃಷ್ಣಮೋಹನ ತಲೆಂಗಳ (01.10.2024)

 

 

No comments:

Popular Posts