ಮುಂಜಾನೆ ಕಂಡ ಆನಂದ ರಾವ್ ಸರ್ಕಲ್ ನಡು ಮಧ್ಯಾಹ್ನ ಎಲ್ಲಿಗೆ ಹೋಗಿರ್ತದೆ?!! I ANANDA RAO CIRCLE BENGALURU

 



ಬೆಂಗಳೂರು ಮೆಜೆಸ್ಟಿಕ್ಕಿನಲ್ಲಿ ಆನಂದ ರಾವ್ ಸರ್ಕಲ್ ಅಂತ ಒಂದು ಜಾಗ ಇದೆ. ಮಂಗಳೂರು ಕಡೆಗೆ (ಬೇರೆ ಊರುಗಳಿಗೂ ಸಹ) ಖಾಸಗಿ ಬಸ್ ಗಳಲ್ಲಿ ಓಡಾಡುವವರಿಗೆ ಗೊತ್ತಿರುತ್ತದೆ. ಅದೇ ಬೆಂಗಳೂರಿನ ಫಸ್ಟ್ ಮತ್ತು ಲಾಸ್ಟ್ ಸ್ಟಾಪ್. ಅಲ್ಲಿ ಬೆಳಗ್ಗೆ ಹೋಗಿ ನೀವು ಬಸ್ಸಿನಿಂದ ಇಳಿದ ಅನುಭವ ಉಂಟ? ತಂಪು ತಂಪು ಸುದೀರ್ಘ ಫೈಓವರ್ ಕೆಳಗೆ ಅಂಥ ರಶ್ ಏನೂ ಇರುವುದಿಲ್ಲ. ಬೇರೆ ಬೇರೆ ಕಡೆಗಳಿಂದ ಬಂದ ಬಸ್ಸುಗಳು ನಿಟ್ಟುಸಿರುವ ಬಿಡುತ್ತಾ ನಿಂತಿರುತ್ತವೆ. ಜನ ಪ್ರಯಾಣದ ಆಯಾಸದಿಂದ ಸುಧಾರಿಸಿಕೊಂಡು ಬಸ್ ಇಳಿದು ತಮ್ಮ ಗಮ್ಯ ತಲುಪಲು ದಾರಿ ಹುಡುಕುತ್ತಿರುತ್ತಾರೆ.

ಮಲ್ಲಿಗೆ, ಕನಕಾಂಬರ ಹೂವೇಯ ಮಾರುವವರು, ಪೇಪರ್ ಹಾಕುವವರು ಓಡಾಡ್ತಾ ಇರ್ತಾರೆ. ವಾಕಿಂಗ್ ಹೋಗುವವರು ಬಿರುಸಾಗಿ ನಡೆಯುತ್ತಿರುತ್ತಾರೆ. ಸೂರ್ಯ ಆಗ ತಾನೆ ಉದಯಿಸಿರುತ್ತಾನೆ. ಹೊಟೇಲುಗಳಲ್ಲಿ ಇಡ್ಲಿ ವಡಾ, ಚೌಚೌ ಬಾತ್, ಬೈಟೂ ಕಾಫಿ ವ್ಯಾಪಾರ ಜೋರಾಗಿ ನಡೆಯುತ್ತಿರುತ್ತದೆ... ಸಣ್ಣಗೆ ಚಳಿ ಬೇರೆ...

ಅದೇ ಮಧ್ಯಾಹ್ನ ಅದೇ ಸರ್ಕಲ್ಲಿಗೆ ಒಮ್ಮೆ ಹೋಗಿ ನೋಡಿ... ಕಾಲಿಡಲು ಜಾಗ ಇಲ್ಲದಷ್ಟು ವಾಹನ, ಎಲ್ಲೆಂದರಲ್ಲಿ ಸಿಗ್ನಲ್ಲು, ಆಟೋ, ಬೈಕು, ರಸ್ತೆ ದಾಟಲೂ ತುಂಬ ಕಷ್ಟ. ಸುಡು ಬಿಸಿಲು, ಯಾವ ಬಸ್ಸೂ ರಸ್ತೆ ಪಕ್ಕ ನಿಂತಿರುವುದಿಲ್ಲ. ಎಲ್ಲರೂ ಅವಸರವಸರವಾಗಿ ಓಡಾಡ್ತಾ ಇರ್ತಾರೆ. ಯಾರಿಗೂ ಮಾತನಾಡುವಷ್ಟು ಸಾವಕಾಶ ಇರುವುದಿಲ್ಲ...

ಮತ್ತೊಂದಿಷ್ಟು ಹೊತ್ತು ಕಳೆದು ರಾತ್ರಿ 9 ಗಂಟೆಗೆ ಅದೇ ಆನಂದ ರಾವ್ ಸರ್ಕಲ್ಲಿಗೆ ಹೋಗಿ. ಎಷ್ಟು ತಣ್ಣಗಿನ ರಾತ್ರಿ. ದೂರ ದೂರ ಹೋಗುವ ಬಸ್ಸುಗಳೆಲ್ಲ ಆರಾಮವಾಗಿ ರಸ್ತೆ ಪಕ್ಕ ನಿಂತಿರ್ತವೆ. ಫ್ರೆಶ್ ಆಗಿ ತೊಳೆದು ಅಗರಬತ್ತಿ ಘಮಘಮದ ಹಾಗೆ. ಜನ ಆತುರದಿಂದ ತಮ್ಮ ಬಸ್ ಯಾವುದು ಅಂತ ಹುಡುಕುತ್ತಾ ಇರ್ತಾರೆ. ಲಗೇಜುಗಳು ಲೋಡ್ ಆಗ್ತಾ ಇರ್ತವೆ. ಜನಜಂಗುಳಿ ಬಸ್ ಗಳ ಪಕ್ಕ. ರಸ್ತೆ ದಾಟಲೇನೂ ಕಷ್ಟ ಇಲ್ಲ, ಟ್ರಾಫಿಕ್ಕು ಕಮ್ಮಿ ಆಗಿರುತ್ತದೆ... ಸಣ್ಣಗೆ ತುಂತುರು ಮಳೆ ಇದ್ದರೂ ಫುಟ್ಬಾತ್ ಖಾಲಿ ಇರುತ್ತದೆ. ನಡೆಯುವುದೂ ಕಷ್ಟವಾಗಲಿಕ್ಕಿಲ್ಲ...

ಆನಂದ ರಾವ್ ಸರ್ಕಲ್ಲು ಒಂದೇ ಅಲ್ಲ... ಮಲ್ಲೇಶ್ವರಂ, ಮೆಜೆಸ್ಟಿಕ್ಕು, ನವರಂಗ್, ಯಶ್ವಂತಪುರ, ಗೋರಗುಂಟೆಪಾಳ್ಯ... ಯಾವ ವೃತ್ತವಾದರೂ ಕಥೆ ಅಷ್ಟೇ...

ಮಂಗಳೂರಿಗೆ ಬಂದರೆ ಕಂಕನಾಡಿ, ಬಿಜೈ, ಪಿವಿಎಸ್, ಜ್ಯೋತಿ, ಕರಂಗಲ್ಪಾಡಿ, ಪಂಪ್ವೆಲ್ ಎಲ್ಲಿ ಬೇಕಾದರೂ ನೋಡಿ... ಬೆಳಗ್ಗಿನ ಸಾವಕಾಶ, ಮಧ್ಯಾಹ್ನದ ಭಯಂಕರ ಒತ್ತಡ ಮತ್ತು ರಾತ್ರಿಯಾಗ್ತಾ ಬಂದ ಹಾಗೆ ಗಂಭೀರವಾದ ಶಾಂತತೆ... ಅದು ಆ ಹೊತ್ತಿನ ಮೂಡು, ಆ ಹೊತ್ತಿನ ಮನಃಸ್ಥಿತಿ ಮತ್ತು ಆ ಹೊತ್ತಿನ ಅಗತ್ಯ ಕೂಡಾ ಹೌದು...

ಬದುಕೂ ಹಾಗೆ. ವ್ಯಕ್ತಿತ್ವಗಳೂ ಹಾಗೆ. ಆಯಾ ಪರಿಸ್ಥಿತಿಯಲ್ಲಿ ಮತ್ತು ಮನಃಸ್ಥಿತಿಯಲ್ಲಿ ಕಾಣಿಸುವ ರೀತಿಯೇ ಬೇರೆ. ಪ್ರತಿಯೊಬ್ಬರಿಗೂ ಅವರವರ ಅವಕಾಶ, ಹಿನ್ನೆಲೆ, ಒತ್ತಡಗಳು, ಮಿತಿಗಳಿಂದ ಕೂಡಿದ ಪರಿಸ್ಥಿತಿ ಇರುತ್ತದೆ. ತನ್ನ ಒತ್ತಡ, ತನ್ನ ಸಾಮರ್ಥ್ಯ, ತನ್ನ ಸಹನಾಶಕ್ತಿ, ತನ್ನ ವಿವೇಚನಾ ಶಕ್ತಿ, ಧೈರ್ಯ, ಸಮಯಪ್ರಜ್ಞೆ ಮತ್ತಿತರ ಗುಣಗಳಿಂದ ಕೂಡಿದ ಮನಃಸ್ಥಿತಿ ಸಹ ಇರುತ್ತದೆ. ಅದಕ್ಕನುಗುಣವಾಗಿಯೇ ನಾವು, ನೀವು ಕಾಣಿಸಿಕೊಳ್ಳುತ್ತೇವೆ.

ಸಂದರ್ಭಗಳೂ ಹಾಗೆ. ಒಂದು ಸಂಧಿಗ್ಧತೆ, ಒಂದು ಸವಾಲು, ಒಂದು ಕಷ್ಟದ ಪರಿಸ್ಥಿತಿ ಮತ್ತೊಂದು ನಿರ್ಣಾಯಕ ಅಸಹಾಯಕತೆ ಎಲ್ಲವೂ ಆ ಕ್ಷಣಕ್ಕೆ ಇದುವೇ ಅಂತಿಮವೇನೋ ಎಂಬಂತೆ ಭಾಸವಾಗುವಂತೆ ಮಾಡುತ್ತದೆ. ಇದೇ ನನ್ನ ಬದುಕಿನ ಕೊನೆಯ ಕ್ಷಣ, ಇದೇ ನನ್ನ ಪಾಲಿಗೆ ನಿರ್ಣಾಯಕ ಸಂದರ್ಭ, ಇದರಿಂದ ನಾನು ಹೊರಗೆ ಬರಲಾರೆನೇನೋ ಎಂಬ ಹಾಗಿನ ವಿಚಿತ್ರವಾದ ತಳಮಳ...

ಆದರೆ, ಯಾವುದೇ ಹೈಪೋಥೆಟಿಕಲ್ ತಳಮಳಗಳು ವಾಸ್ತವಿಕವಾಗಿ ದೀರ್ಘಕಾಲೀನ ಸಮಸ್ಯೆ ಆಗಿರಬೇಕಾಗಿಲ್ಲ. ಆ ಸಂದರ್ಭಕ್ಕದು ದೊಡ್ಡ ಸಂಗತಿಯೇ ಇರಬಹುದು. ಹಾಗಂತ ಆ ಸಂದರ್ಭವೇ ಶಾಶ್ವತವಾಗಿ ಇರುವುದಿಲ್ಲ. ಬಹು ಸಂತೋಷದಿಂದ ಉನ್ಮತ್ತನಾಗಿ ಹಾರಾಡುವವನ ಖುಷಿಗೂ ಒಂದು ಅಂತ್ಯ ಇರುತ್ತದೆ. ಕಡು ನೋವಿನಿಂದ ಬಳಲುವವನಿಗೂ ಯಾವುದೋ ರೀತಿಯಲ್ಲಿ ನೋವಿನಿಂದ ಮುಕ್ತಿ ಅಂತ ಇರ್ತದೆ! ಹಾಗಿರುವಾಗ ಈಗಿರುವ ಖುಷಿ ಅಥವಾ ಈಗಿರುವ ಕಷ್ಟ ಅಥವಾ ದುಃಖ ಶಾಶ್ವತವಾಗಿರಲು ಹೇಗೆ ತಾನೇ ಸಾಧ್ಯ.

ಸಮಸ್ಯೆಯ ತೀವ್ರತೆ, ಕಷ್ಟದ ಅಗಾಧತೆ ಮತ್ತು ಸಂಧಿಗ್ಧತೆಯ ಕಂದಂಬ ಬಾಹುಗಳು ನಮ್ಮನ್ನು ಕಂಗೆಡಿಸಿದಾಗ ನಾನಿರುವ ಈ ಸ್ಥಿತಿಯಿಂದ ಆಚೆ ಬರಲು ಅಸಾಧ್ಯ ಎಂಬ ಹಾಗೆ ಭಾಸವಾಗಿಸುತ್ತದೆ ಅಷ್ಟೇ... ಭಯಂಕರ ಗಾಳಿ, ಮಳೆ ಬಂದು ಶಿವಾಜಿನಗರ, ಮೆಜೆಸ್ಟಿಕ್ಕು, ಶಾಂತಿನಗರ, ರೇಸ್ ಕೋರ್ಸು ರೋಡುಗಳು ಜಲಾವೃತವಾದರೆ ಈ ವರ್ಷ ಪೂರ್ತಿ ಮಳೆ ಬರ್ತಾ ಇರುತ್ತದೆ ಅಂತ ಅರ್ಥವ? ಎರಡು ವಾರ ಮುಸಲಧಾರೆ ಸುರಿದು ಶಿರಾಡಿ ಕುಸಿತವಾಗಿ ರಸ್ತೆ ಬಂದ್ ಆದರೆ, ಇನ್ನು ಆ ಮಾರ್ಗದಲ್ಲಿ ವಾಹನ ಹೋಗುವುದೇ ಇಲ್ಲ ಅಂತ ಅರ್ಥವೇ..?. ಎಡಕುಮೇರಿಯಲ್ಲಿ ಹಳಿ ಮೇಲೆ ಮಣ್ಣು ಕುಸಿದು ನಾಲ್ಕಾರು ದಿವಸ ರೈಲು ಸಂಚಾರ ನಿಂತು ಹೋದರೆ, ಇನ್ನು ಮಂಗಳೂರಿನಿಂದ ಬೆಂಗಳೂರಿಗೆ ರೈಲು ಓಡಾಡುವುದೇ ಇಲ್ಲ ಅಂತ ಅರ್ಥವ...? ಅಲ್ಲ ತಾನೆ.

ಇವೆಲ್ಲವನ್ನು ದಾಟಿ, ಸಮಸ್ಯೆಗಳು ನಿವಾರಣೆಯಾದ ಬಳಿಕ ಹಿಂತಿರುಗಿ ನೋಡಿದರೆ ಎಷ್ಟೋ ಸಲ ನಮ್ಮನ್ನು ಕಂಗೆಡಿಸಿದ ಆ ದಿನಗಳು ಇತಿಹಾಸವಾಗಿ ಬದುಕಿನ ಒಂದು ಪುಟದಲ್ಲಿ ಕೂತಿರುತ್ತದೆ ಅಷ್ಟೇ.. ಅದುವೇ ಬದುಕಿನ ರಕ್ಷಾಪುಟ ಆಗಬೇಕಾಗಿಲ್ಲ.

ಆ ಪರಿಸ್ಥಿತಿಯ ತೀವ್ರತೆ ಆ ಕ್ಷಣಕ್ಕೆ ಮಾತ್ರ ಹಾಗೆ ಭಾಸವಾಗುವಂತೆ ಮಾಡುತ್ತದೆ ಅಷ್ಟೇ... ಕಷ್ಟ ಕವಿದಾಗ ತೋರಿಸುವ ವಿವೇಚನಾ ಭಾವ, ಧೈರ್ಯ,  ಸಹನೆ ಮತ್ತು ದೂರದೃಷ್ಟಿಯ ಪ್ಲಾನಿಂಗ್ ನಮ್ಮನ್ನು ನಿರ್ಲಿಪ್ತವಾಗಿ, ವಿಷಯ ನಿಷ್ಠವಾಗಿ ವ್ಯವಹರಿಸಲು ಸಹಾಯ ಮಾಡೀತು.

ಇತ್ತೀಚೆಗೆ ಅಪಘಾತವಾಗಿ ವ್ಯಕ್ತಿಯೊಬ್ಬನ ಎದೆಗೆ ರಾಡ್ ಚುಚ್ಚಿಕೊಂಡಿತ್ತು. ಆ ಫೋಟೋ ನೋಡಿದಾಗ ಆ ವ್ಯಕ್ತಿಯನ್ನು ಬದುಕಿಸಲು ಸಾಧ್ಯವೇ ಇಲ್ಲವೇನೋ ಎಂಬ ಹಾಗೆ ಕಾಣುತ್ತಿತ್ತು. ಆದರೂ ವೈದ್ಯರು ಆ ರಾಡ್ ಸೆಳೆದು. ಆಪರೇಶನ್ ಮಾಡಿ ಆತನನ್ನು ಬದುಕಿಸಿದ್ದಾರೆ. ಆ ಸಮಯಪ್ರಜ್ಞೆ, ಸ್ಥಿತಪ್ರಜ್ಞೆಯ ನಡೆಗಳು ಮತ್ತು ಭವಿಷ್ಯದಲ್ಲಿ ಬೆಳಕು ಕಾಣುತ್ತೇವೆ ಎಂಬಂತಿರುವ ದೂರದೃಷ್ಟಿಯ ಪ್ರಬುದ್ಧತೆ ಮಾತ್ರ ನಮ್ಮನ್ನು ಪರಿಸ್ಥಿತಿಯೊಂದರಿಂದ ಆಚೆ ತರಬಲ್ಲುದು ಅಷ್ಟೇ.

ಯಾವುದೇ ಬಸ್ ಸ್ಟ್ಯಾಂಡು, ಪಿಕಪ್ ಪಾಯಿಂಟು, ಸರ್ಕಲ್ಲು ಬೆಳಗ್ಗೆ ಇದ್ದ ಹಾಗೆ, ಮಧ್ಯಾಹ್ನ, ಮಧ್ಯಾಹ್ನ ಕಂಡ ಹಾಗೆ ರಾತ್ರಿ, ರಾತ್ರಿ ಇದ್ದ ಹಾಗೆ ತಡರಾತ್ರಿ ಇರುವುದೇ ಇಲ್ಲ. ಮಧ್ಯರಾತ್ರಿ ಹೈವೇಯಲ್ಲಿ, ಸರ್ಕಲ್ಲಿನಲ್ಲಿ ಬಿಕೋ ಎಂಬಂತಿರುವ ಪರಿಸ್ಥಿತಿ ನಡು ಮಧ್ಯಾಹ್ನ ಕಾಣಲು ಸಾಧ್ಯವಿಲ್ಲ. ಅದೇ ಜಾಗ, ಅದೇ ನಾವು... ಆದರೆ ನಾವಿರುವ ಸಮಯ ಮತ್ತು ನಮ್ಮ ಸುತ್ತಮುತ್ತಿಲಿರುವ ಸಂದರ್ಭ ಮಾತ್ರ ಬೇರೆ ಬೇರೆ ಅಷ್ಟೇ...

ತಡರಾತ್ರಿ ಬೀದಿ ದೀಪ ನಂದಿದಾಗ ಸುತ್ತ ಏನೂ ಕಾಣಸಿಗದು ಎಂಬಲ್ಲಿಗೆ ದಿನಪೂರ್ತಿ ಅಲ್ಲಿ ಗಾಡಾಂಧಕಾರ ಕವಿದಿರುತ್ತದೆ ಅಂತವೇ ಅರ್ಥ ಅಲ್ಲ... ಬೆಳಕು ಮೂಡಿದಾಗ ಶುರುವಿಗೇ ಮಸುಕಾಗಿ, ಮತ್ತೆ ಗಾಢವಾಗಿ, ಎಲ್ಲ ನಿಚ್ಚಳವಾಗಿ ಕಾಣಿಸಿಯೇ ಕಾಣಿಸುತ್ತದೆ. ಅದಕ್ಕೇ ಅಲ್ವ... ರೈನುಕೋಟನ್ನೇ ಹಾಕದೆ ಬೈಕಿನಲ್ಲಿ ಓಡಾಡುವವರು ತುಂತುರು ಮಳೆಯಾದಾಗ ಬಸ್ ಸ್ಟ್ಯಾಂಡ್ ಮೊರೆ ಹೋಗಿ ತಾಳ್ಮೆಯಿಂದ ಕಾಯ್ತಾ ಇರ್ತಾರೆ. ಟೆನ್ಶನ್ ಮಾಡುವುದಿಲ್ಲ. ಹತ್ತೇ ನಿಮಿಷದಲ್ಲಿ ಮಳೆ ನಿಂತಾಗ ಆರಾಮವಾಗಿ ಬೈಕಿನಲ್ಲಿ ಮುಂದುವರಿದು ಇಡೀ ವರ್ಷ ರೈನು ಕೋಟನ್ನೇ ಬಳಸದೆ ಕೃತಾರ್ಥರಾಗುತ್ತಾರೆ!. ಆಶಾವಾದವನ್ನು ಬಹುಶಃ ಅವರಿಂದಲೂ ಕಲಿಯಬಹುದು. ಏನಂತೀರಿ?!

-ಕೃಷ್ಣಮೋಹನ ತಲೆಂಗಳ (05.10.2024)

1 comment:

ASHWANI BEJAI said...

ಆಯಾ ಕ್ಷಣದ ಬೇಗುದಿ, ತಳಮಳ, ಭಯ, over thinking ಇವುಗಳನ್ನು ದಾಟಿ ಬಂದ ಮೇಲೆ, ಬಹಳ ಹೊತ್ತಿನ ನಂತರ ಶಾಂತವಾಗಿ ಆಲೋಚನೆ ಮಾಡಿದಾಗ ಅನ್ನಿಸುವುದು - " ಆಗಲೂ ಹೀಗೆಯೇ ಶಾಂತವಾಗಿಯೇ ಇರಬಹುದಿತ್ತಲ್ವ" ಅಂತ. ಆದರೆ, ಬೇರೆಯವರ ವರ್ತನೆ, ಆ ಸಮಯದ ತುರ್ತು, ಆಯಾಸ ಇವೆಲ್ಲವೂ ನಮ್ಮ ಪ್ರತಿಕ್ರಿಯೆಗೆ ಕಾರಣವಾಗುತ್ತವೆ ಅನ್ನುವುದು ನಿಜ. ಉತ್ತಮ ಬರಹ

Popular Posts