ಸಾತ್ವಿಕ ಸಾಧಕರ ಜೊತೆಗೆ ಸೆಲ್ಫೀ ತಕ್ಕೊಳ್ಳುವುದರಲ್ಲೂ ಖುಷಿ ಇರ್ತದೆ, ಅಲ್ವ?! RASHEED

 



 

ವ್ಯಕ್ತಿಗೆ ಚಂದದ ಧ್ವನಿ ಇದ್ದರೆ ಅದು ದೇವರ ಕೊಡುಗೆ. ಧ್ವನಿ ಇದ್ದಲ್ಲಿಗೆ ಯಾರೂ ಚಂದದ ನಿರೂಪಕರಾಗಬೇಕಾಗಿಲ್ಲ. ಚಂದದ ಆಲಿಸುವಿಕೆ, ಚಂದದ ಪ್ರಸ್ತುತಿ, ಚಂದದ ಭಾಷೆ, ಸಹಜವಾದ ನಿರೂಪಣಾ ಶೈಲಿ ಮತ್ತು ಸಹನೆಯ, ಸಾಂತ್ವನ ಭಾವ ನೀಡುವ ಮಾತು ಕೂಡಾ ಧ್ವನಿಯಿಂದಲೇ ಕೇಳುಗರ ಹೃದಯ ತಲುಪಲು ಅಗತ್ಯ. ನಾನದನ್ನು ಕಂಡದ್ದು ಅಬ್ದುಲ್ ರಷೀದ್ ಅವರಲ್ಲಿ (ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ).

 

ಹೈಸ್ಕೂಲು, ಕಾಲೇಜು ದಿನಗಳಲ್ಲೇ ಅವರ ಧ್ವನಿಯ ಅಭಿಮಾನಿ. ಕರೆಂಟನ್ನೂ ಕಾಣದ ದಿನಗಳಲ್ಲಿ ಮನೆಯಲ್ಲಿದ್ದ ಸಂವಹನ ಸಾಧನ ಮತ್ತು ಸಾಧ್ಯತೆ ರೇಡಿಯೋ ಮಾತ್ರ, ಆ ವಯಸ್ಸಿಗೆ ಇಷ್ಟವಾಗುವ ಯುವವಾಣಿಯಲ್ಲಿ ಕೇಳಿದ ರಷೀದ್ ಅವರ ಧ್ವನಿ ತುಂಬ ಇಷ್ಟವಾಗಿತ್ತು. ಎಲ್ಲರಂತೆ ನನಗೆ ಕೂಡಾ ಅವರು ನೋಡಲು ಹೇಗಿರ್ತಾರೆ ಎಂಬ ಕುತೂಹಲ ಇತ್ತು. ಆದರೆ, ಭೇಟಿಯಾಗುವುದು ಇತ್ಯಾದಿಗಳೆಲ್ಲ ಈಗಿನಂತೆ ಆಗ ಸುಲಭ ಆಗಿರಲಿಲ್ಲ.

 

ಕಾಕತಾಳೀಯವಾಗಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾಗ, ಯುವವಾಣಿ ವಿಭಾಗಕ್ಕೆ ಕಳುಹಿಸಿದ ಒಂದು ಬರೆಹವನ್ನು ಗುರುತಿಸಿ ಅವರೊಂದು ಭಾಷಣ ಧ್ವನಿಮುದ್ರಣಕ್ಕೆ ಪತ್ರ (ಕಾಂಟ್ರಾಕ್ಟ್ ಕಳುಹಿಸಿದ್ರು), ಬಹುಶಃ 2000ನೇ ಇಸವಿಯಲ್ಲಿ. ಅದು ರೇಡಿಯೋದಲ್ಲಿ ಪ್ರಸಾರವಾದ ನನ್ನ ಮೊದಲ ಭಾಷಣ. ವಿಷಯ:  ನನ್ನ ಸ್ಫೂರ್ತಿಯ ಸೆಲೆ. ಅದು ರಷೀದ್ ಸರ್ ಮೊದಲ ಭೇಟಿ. ಎಷ್ಟು ಸರಳವಾಗಿ, ಎಷ್ಟು ಆತ್ಮೀಯವಾಗಿ ಅವರು ಆ ಭೇಟಿಯಲ್ಲಿ ನಡೆದುಕೊಂಡು ಅದರೆ ಅವರ ಮೇಲಿನ ಗೌರವ ಜಾಸ್ತಿಯಾಯಿತು. ಅವರು ತೀರಾ ಸರ್ಕಾರಿ ಅಧಿಕಾರಿ ಇರುವ ಜನವೇ ಅಲ್ಲ. ಅವರ ಚಿಂತನೆ, ಮಾತು, ಪ್ರತಿಕ್ರಿಯೆ ಎಲ್ಲ ಬೇರಿಯದೇ ರೀತಿ. ಒಬ್ಬ ಮೂಡಿ ಬರಹಗಾರ ಹೇಗಿರ್ತಾನೋ ಹಾಗೆ ಇದ್ದವರು, ಈಗಲೂ ಇರುವವರು ಅವರು. ಅವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಪ್ರಚಾರಕ್ಕೆ, ತನ್ನ ಬಗ್ಗೆ ತಾನೇ ಕೊಚ್ಚಿಕೊಳ್ಳುವುದಕ್ಕೆ, ಸಿಕ್ಕಾಪಟ್ಟೆ ಭಾಷಣ ಮಾಡುವುದಕ್ಕೆ... ಸಂದರ್ಶನಕ್ಕೆ, ಹೊಗಳಿಕೆಗೆ, ಪ್ರಶಸ್ತಿಗೆ, ಸನ್ಮಾನಕ್ಕೆ ಇವಕ್ಕೆಲ್ಲ ಸಿಕ್ಕುವ ಜನವೇ ಅಲ್ಲ...ಅಂತಹ ಪ್ರಸ್ತಾಪ ಬಂದಾಗಲೇ ಅವರು ತಪ್ಪಿಸಿಕೊಳ್ತಾರೆ!

 

ಅಂಥಹ ವ್ಯಕ್ತಿತ್ವದ ಜೊತೆಗೆ ಇಂಟರ್ನ್ ಶಿಪ್ ಮಾಡುವ (ಅಧ್ಯಯನದ ಪೂರಕವಾದ ತರಬೇತಿ ಕಾರ್ಯಕ್ರಮ) ಅವಕಾಶ ಸಿಕ್ಕಿದ್ದು ಸುಯೋಗವೇ ಸರಿ. 2001ನೇ ಇಸವಿ ಜೂನ್ ತಿಂಗಳಲ್ಲಿ ಬಹುಶಃ ನಾನು ಮತ್ತು ಸುಶೀಲೇಂದ್ರ ಇಬ್ಬರೂ ಮಂಗಳೂರು ಆಕಾಶವಾಣಿಗೆ ಇಂಟರ್ನ್ ಶಿಪ್ ಗೆ ನಮ್ಮ ಪತ್ರಿಕೋದ್ಯಮ ವಿಭಾಗದಿಂದ ಕಳುಹಿಸಲ್ಪಟ್ಟೆವು. ಆಗ ಸಹಾಯಕ ನಿಲಯ ನಿರ್ದೇಶಕರಾಗಿದ್ದವರು ಸಿಯು ಬೆಳ್ಳಕ್ಕಿ ಸರ್ ಹಾಗೂ ಯುವವಾಣಿ ವಿಭಾಗದಲ್ಲಿದ್ದವರು ಅಬ್ದುಲ್ ರಷೀದ್ ಅವರು (ಪ್ರಸಾರ ನಿರ್ವಾಹಕ). ಆ ತರಬೇತಿ ಸುಮಾರು ಒಂದು ತಿಂಗಳು ಅವಧಿಯದ್ದು. ಆ ಸಣ್ಣ ಅವಧಿಯಲ್ಲೇ ನನಗೆ ಹಾಗೂ ಸಹಪಾಠಿ ಸುಶಿಲೇಂದ್ರನಿಗೆ ಸಾಕಷ್ಟು ಸ್ವತಂತ್ರ ಕಾರ್ಯಕ್ರಮ ನೀಡಲು ಅವರು ಅವಕಾಶ ಕೊಟ್ಟಿದ್ರು. ಅದೇ ಅವಧಿಯಲ್ಲಿ ನಾವಲ್ಲಿ ರೆಕಾರ್ಡಿಂಗ್, ಎಡಿಟಿಂಗ್ ಕಲ್ತದ್ದು. ನಂತರ ಅಲ್ಲಿ ತಾತ್ಕಾಲಿಕ ನಿರೂಪಕರ ಕೆಲಸಕ್ಕೆ ಕಾಲ್ ಫಾರ್ ಆದಾಗ, ನಮಗೂ ಅರ್ಜಿ ಹಾಕಲು ಸರ್ ತಿಳ್ಸಿದ್ರು... ನಾನು, ಸುಶೀಲೇಂದ್ರನ ಜೊತೆ ಗೆಳೆಯ ವೇಣು ವಿನೋದ್ ಕೂಡಾ ಆಯ್ಕೆಯಾಗಿ ನಾವು ಮೂವರೂ ಯುವವಾಣಿ ವಿಭಾಗದ ಕ್ಯಾಶುವಲ್ ನಿರೂಪಕರಾಗಿ 2001ರಲ್ಲಿ ಆಯ್ಕೆಯಾದೆವು. ನಾವಲ್ಲಿ ಮಾಡಿದ ಕಿತಾಪತಿಗಳಿಗೆ ಲೆಕ್ಕ ಇಲ್ಲ. ಅದರಲ್ಲೂ walkman ಹಿಡ್ಕೊಂಡು ಬೆಟ್ಟ ಗುಡ್ಡಗಳಿಗೆ ನಡೆದು ಮಾಡ್ತಾ ಇದ್ದ ನಡೆದು ನೋಡು ಕಾರ್ಯಕ್ರಮ ಸರಣಿ ಮರೆಯಲು ಸಾಧ್ಯವೇ ಇಲ್ಲ. ಹಾಗೆ ಆಯ್ಕೆಯಾದ ನಾನು ಸುಮಾರು 2007ರ ವರೆಗೂ ಅಲ್ಲಿ ನಿರಂತರವಾಗಿ, ನನ್ನ ವೃತ್ತಿಯ ಜೊತೆಗೇ ಅರೆಕಾಲಿಕ ನಿರೂಪಕನಾಗಿರಲು ಸಾಧ್ಯವಾಯಿತು.

 

ರಷೀದ್ ಅವರು ನಮ್ಮ ಕೈಯಲ್ಲಿ ವಾಕ್ ಮ್ಯಾನ್ ಕೊಟ್ಟು ಹೊರಗೆ ಕಳುಹಿಸುವವರು. ಹೊಸ ಹೊಸ ಕಾರ್ಯಕ್ರಮಗಳು, ಅವರೇ ಕೊಡುವ ಟೈಟಲ್, ನವನವೀನ ಐಡಿಯಾಗಳು, ನಾವು ಜನರನ್ನು ಮಾತನಾಡಿಸಿ, ರೆಕಾರ್ಡ್ ಮಾಡಿ ತರುವುದು. ಅವರದನ್ನು ನಾಜೂಕಾಗಿ ಆಕಾಶವಾಣಿ ಟೇಪಿಗೆ ವರ್ಗಾಯಿಸಿ, ಒಂದು ಓಪನಿಂಗ್, ಕ್ಲೋಸಿಂಗ್ ಅನೌನ್ಸ್ ಮೆಂಟ್ ನಮ್ಮತ್ರವೇ ಬರೆಸಿ, ಓದಿಸಿ, ಅದಕ್ಕೆ ಚಂದದ ಚಿತ್ರಗೀತೆಗಳನ್ನು ಸೇರಿಸಿ ಎಡಿಟ್ ಮಾಡುವುದು ನೋಡಿಯೇ ನಾವು ಎಡಿಟಿಂಗ್ ಕಲ್ತದ್ದು... ರಾತ್ರಿ 8 ಗಂಟೆಗೆ ಯುವವಾಣಿಯಲ್ಲಿ ನಮ್ಮ ಹೆಸರು ಪ್ರಸ್ತುತಿ ಅಂತ ಪ್ರಸಾರವಾಗುವಾಗ ಆಗ್ತಾ ಇದ್ದ ಖುಷಿಗೆ ಪಾರವಿಲ್ಲ. ಆ ದಿನಗಳಲ್ಲಿ ಅವರಂತಹ ಸೃಜನಶೀಲ ವ್ಯಕ್ತಿ ಜೊತೆ ಕೆಲಸ ಮಾಡಿದ್ದು, ಕಲ್ತದ್ದು, ಮತ್ತು ಅವರು ನಮಗೆ ಕಾರ್ಯಕ್ರಮ ಮಾಡಲು ನೀಡಿದ ಸ್ವಾತಂತ್ರ್ಯ ಇವತ್ತಿಗೂ ತುಂಬ ಚಂದದ ನೆನಪು.

2002ರಲ್ಲಿ ಅವರು ಮಡಿಕೇರಿ ಆಕಾಶವಾಣಿಗೆ ವರ್ಗಾವಣೆಯಾದರು. ನಂತರ ಶ್ರೀನಿವಾಸ ಪ್ರಸಾದ್ ಸರ್, ಡಾ.ಶರಭೇಂದ್ರ ಸ್ವಾಮಿ ಸರ್, ಸೂರ್ಯನಾರಾಯಣ ಭಟ್ ಸರ್ ಅವರೆಲ್ಲ ಕೂಡಾ ತುಂಬ ಕೆಲಸ ಕಲ್ಸಿದ್ದಾರೆ. ಯೋಗ್ಯತೆಗೆ ಮೀರಿ ಅವಕಾಶ ನೀಡಿ ರೇಡಿಯೋದಲ್ಲೂ ಕೆಲಸ ಮಾಡಲು ಅವಕಾಶ ಕೊಟ್ಟದ್ದು ತುಂಬ ಖುಷಿಯ ದಿನಗಳು.... ಈಗ ಇತಿಹಾಸದ ಪುಟಗಳು.

 

ಇಂಟರ್ನೆಟ್ ಆಗಷ್ಟೇ ಪ್ರವರ್ಧಮಾನಕ್ಕೆ ಬರ್ತಾ ಇದ್ದ, ಮೊಬೈಲು ಇನ್ನೂ ಕೈಗೆ ಬಾರದಿದ್ದ, ಆಗಷ್ಟೇ ಎಫ್ ಎಂ ತರಂಗಾಂತರಕ್ಕೆ ಮಂಗಳೂರು ಆಕಾಶವಾಣಿ ಕಾಲಿರಿಸುತ್ತಿದ್ದ ಆ ದಿನಗಳಲ್ಲಿ ರಷೀದ್ ಸರ್ ಕಲ್ಪನೆಯ ಪ್ರತಿ ಕಾರ್ಯಕ್ರಮವೂ ಸೂಪರ್ ಹಿಟ್ ಆಗಿತ್ತು.

 

ನಂತರ ದಿನಗಳಲ್ಲಿ ರೇಡಿಯೋ ಕೇಳಲು ಶುರು ಮಾಡಿದವರಿಗೆ ರಷೀದ್ ಸರ್ ಬಗ್ಗೆ ಹೆಚ್ಚುಗೊತ್ತರಲಿಕ್ಕಿಲ್ಲ. ಗೊತ್ತಿಲ್ಲದವರಿಗಾಗಿ ಈ ಮಾಹಿತಿ:

 

ಅಬ್ದುಲ್ ರಷೀದ್ ಅವರು ಮೂಲತಃ ಕೊಡಗಿನ ಸುಂಟಿಕೊಪ್ಪದವರು. ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ ನಿರ್ವಾಹಕ ಅಧಿಕಾರಿಯಾಗಿ  1989ರಿಂದ 2002ರ ವರೆಗೂ ದುಡಿದಿದ್ದರು. ಮುಖ್ಯವಾಗಿ ಅವರು ಕನ್ನಡ ಯುವವಾಣಿ ವಿಭಾಗದಲ್ಲಿ ತಮ್ಮ ಸೃಜನಶೀಲ ಕಾರ್ಯಕ್ರಮಗಳು ಹಾಗೂ ವಿಶಿಷ್ಟ ಧ್ವನಿಯಿಂದ ಕೇಳುಗರ ಮನ ಗೆದ್ದಿದ್ದರು. ಅವರು ಯುವ ಜನತೆಯ ಹೃದಯ ಗೆಲ್ಲುವಂಥ ಅನೇಕ ಹೊಸ ರೀತಿಯ ಕಾರ್ಯಕ್ರಮಗಳನ್ನು ಆರಂಭಿಸಿದ್ದಲ್ಲದೆ ಯುವ ಪ್ರತಿಭೆಗಳಿಗೆ ಭಾಗವಹಿಸಲು ಹೆಚ್ಚು ಹೆಚ್ಚು ಅವಕಾಶ ಕಲ್ಪಿಸಿಕೊಡುತ್ತಿದ್ದರು. ಆಗಷ್ಟೇ ಫೋನಿನ್ ತಂತ್ರಜ್ಞಾನ ಆಕಾಶವಾಣಿಯನ್ನು ಪ್ರವೇಶಿಸಿದ್ದು ಹಾಗೂ ಮಂಗಳೂರು ಆಕಾಶವಾಣಿ ಎಫ್ ಎಂ ಪ್ರಸಾರಕ್ಕೆ ತೆರೆದುಕೊಂಡದ್ದು ಹಾಗೂ ಮಂಗಳೂರು ಆಕಾಶವಾಣಿ 25 ವರ್ಷಗಳನ್ನು ಪೂರೈಸಿದ ಸ್ವರ್ಣ ಯುಗದಲ್ಲಿ ರಷೀದ್ ಅವರು ಕನ್ನಡ ಯುವವಾಣಿ ವಿಭಾಗವನ್ನು ತನ್ನ ಹೊಸತನದ ಕಲ್ಪನೆ ಮೂಲಕ ಸಮೃದ್ಧಗೊಳಿಸಿದರು.

ಪ್ರೀತಿಪಾತ್ರರ ಪತ್ರಗಳನ್ನು ಓದುವ ಪ್ರೀತಿಪಾತ್ರ, ತಮ್ಮ ಊರಿನ ವಿಶೇಷತೆಗಳ ಬಗ್ಗೆ ತಿಳಿಸುವ ನನ್ನೂರು, ನನ್ನ ಕನಸು, ಹನಿಕವಿತೆಗಳನ್ನು ಕಾರ್ಡ್ ಹಾಗೂ ಫೋನ್ ಮೂಲಕ ಹಂಚಿಕೊಳ್ಳುವ ಹನಿಹನಿ ಕವಿತೆ, ಕವಿತೆಗಳ ಕಣಜ, ಕೇಳುಗರು ತಮ್ಮದೇ ಆದ ಒಂದು ಸಿನಿಮಾ ಕತೆಯನ್ನು ರಂಜನೀಯವಾಗಿ ಅರ್ಧ ಗಂಟೆಯಲ್ಲಿ ವಿವರಿಸುವ ಇದು ನನ್ನದೇ ಸಿನಿಮಾ, ತಮಾಷೆಯ ಪ್ರಶ್ನೆಯನ್ನು ಸಾರ್ವಜನಿಕರಲ್ಲಿ ಕೇಳಿ ರಂಜನೀಯ ಉತ್ತರಪಡೆಯುವ ಅಡ್ಡಪ್ರಶ್ನೆ, ಸ್ವಉದ್ಯೋಗ ಮೂಲಕ ಸ್ವಾವಲಂಬನೆಯ ಬದುಕು ಕಟ್ಟಿಕೊಂಡವರ ಯಶೋಗಾಥೆ ನಿನಗೆ  ನೀನೇ ಒಡೆಯ, ತನ್ನ ವೃತ್ತಿ ಎಷ್ಟೇ ಸಣ್ಣದಿರಲಿ ಅದರ ಮಹತ್ವವನ್ನು ಆ ವೃತ್ತಿ ನಿರತರ ಬಾಯಲ್ಲೇ ಕೇಳುವ ನನ್ನ ವೃತ್ತಿ ನನಗೆ ಪ್ರೀತಿ, ಸಾಮುದಾಯಿಕ ಸಮಸ್ಯೆಗಳಿಗೆ, ತಲ್ಲಣಗಳಿಗೆ ಉತ್ತರ ಹುಡುಕುವ ಒಂದು ತಲ್ಲಣ, ನೂರು ಸ್ಪಂದನ, ವಿವಿಧ ಕ್ಷೇತ್ರಗಳ ಪ್ರಶ್ನೆಗಳಿಗೆ ತಜ್ಞರಿಂದ ಫೋನ್ ಇನ್ ಮೂಲಕ ವೈಜ್ಞಾನಿಕ ಉತ್ತರ ಪಡೆಯುವ ಒಂದು ಪ್ರಶ್ನೆ, ಜಾಗತೀಕ ಕೌತುಕಗಳ ಸಾಪ್ತಾಹಿಕ ಮಾಹಿತಿ ಕಣಜ ಲೋಕ ಸಂಚಾರ, ಕ್ರೀಡಾ ಜಗತ್ತಿನ ಸಾಪ್ತಾಹಿಕ ರೌಂಡಪ್ ಕ್ರೀಡಾವಿಶೇಷ, ಒಬ್ಬರು ಕತೆಗಾರರು ಬರೆದ ಅಪೂರ್ಣ ಕತೆಯನ್ನು ಮುಂದಿನ ವಾರ ಪತ್ರದ ಮೂಲಕ ಇನ್ನೊಬ್ಬರು ಕತೆಗಾರರು ಮುಂದುವರಿಸುವ ಅತ್ಯಂತ ಜನಪ್ರಿಯ ಸರಣಿಯಾಗಿದ್ದ ಕಥಾ ಸಾಗರ, ಒಗಟು ಬಿಡಿಸುವ ಫೋನಿನ್ ಕಾರ್ಯಕ್ರಮ ಅದೇನೆಂದು ಹೇಳು ಮತ್ತಿತರ ಹತ್ತಾರು ಕಾರ್ಯಕ್ರಮಗಳು ಮಾತ್ರವಲ್ಲ ಅವುಗಳ ಶೀರ್ಷಿಕೆಗಳನ್ನೂ ಆಕರ್ಷಕವಾಗಿ ನೀಡುವಲ್ಲಿ ರಷೀದ್ ಅವರದ್ದು ಎತ್ತಿದ ಕೈ.

ಇದರ ಜೊತೆಗೆ ಮಂಗಳೂರು ಆಕಾಶವಾಣಿಯಲ್ಲಿದ್ದಾಗ ಅವರು ನೂರಾರು ಹೊರಾಂಗಣ ಧ್ವನಿಮುದ್ರಿತ ಕಾರ್ಯಕ್ರಮಗಳನ್ನು ವಿವಿಧ ಸಂದರ್ಭಗಳಲ್ಲಿ ನಿರ್ಮಿಸಿದ್ದಾರೆ. ಅನೇಕ ನಾಟಕ ಹಾಗೂ ರೂಪಕಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಪೈಕಿ ಅಮೀನಎಂಬ ಅವರೇ ಬರೆದು ನಿರ್ದೇಶಿಸಿದ ಜನಪ್ರಿಯ ನಾಟಕವನ್ನು ಇಂದಿಗೂ ಕೇಳುಗರು ನೆನಪಿಸುತ್ತಾರೆ.

ಇವೆಲ್ಲದಕ್ಕಿಂತ ಮಿಗಿಲಾಗಿ, 2000ನೇ ಇಸವಿ ಜ.21ರಂದು ಮಂಗಳೂರು ಹೊರವಲಯದ ಪಿಲಿಕುಳದ ಸರೋವರದಲ್ಲಿ ದೋಣಿ ದುರಂತ ನಡೆದಾಗ ಅದರಲ್ಲಿ ಐದು ಮಂದಿ ಬಾಲಕಿಯರು ಮೃತಪಟ್ಟ ಘೋರ ದುರಂತ ಸಂಭವಿಸಿತ್ತು. ರಷೀದ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಈ ದುರಂತದ ವರದಿಯ ನೇರ ಪ್ರಸಾರ ನಿರ್ವಹಿಸಿದ್ದರು. ಈಗಿನಂತೆ 24X7 ಟಿವಿ ಸುದ್ದಿವಾಹಿನಿಗಳು ಪ್ರವರ್ಧಮಾನಕ್ಕೆ ಬಾರದಿದ್ದ ಆ ಕಾಲಮಾನದಲ್ಲಿ ಈ ಪ್ರಯೋಗ ಆ ದಿನದಲ್ಲಿ ಸಾಕಷ್ಟು ಪರಿಣಾಮಕಾರಿ ಪ್ರಸಾರವಾಗಿತ್ತು. ಯುವವಾಣಿಯ ಹೊರತಾಗಿ ಅವರು ನಡೆಸಿ ಕೊಟ್ಟ ಸಾಕಷ್ಟು ಸಂದರ್ಶನಗಳು, ಸ್ವತಂತ್ರ ರೂಪಕಗಳು, ಪ್ರಾಯೋಜಿತ ಕಾರ್ಯಕ್ರಮಗಳು ಇವುಗಳೆಲ್ಲ ಕೇಳುಗರ ಅಚ್ಚುಮೆಚ್ಚಿನ ಕಾರ್ಯಕ್ರಮಗಳಾಗಿದ್ದವು.

 

ರಷೀದ್ ಅವರ ಕಂಠ ತುಂಬ ವಿಶಿಷ್ಟವಾದದ್ದು, ಜೊತೆಗೆ ಅವರ ಸಾವಧಾನದ ನಿರೂಪಣೆ, ನಿರೂಪಣೆಯಲ್ಲಿನ ಸಹನೆ, ಸ್ಪಷ್ಟ ಮತ್ತು ಚಂದದ ಕನ್ನಡ ಹಾಗೂ ಕೇಳುಗರ ಜೊತೆಗಿನ ದ್ವಿಮುಖ ಸಂವಹನದಲ್ಲಿ ಅವರ ಕೇಳಿಸಿಕೊಳ್ಳುವ ಮನೋಭಾವ ಹಾಗೂ ತ್ವರಿತ ಸ್ಪಂದನೆ ಈ ಎಲ್ಲ ಕಾರಣಕ್ಕೆ ಅವರು ಓರ್ವ ಬಾನುಲಿ ಪ್ರಸಾರಕರಾಗಿ ಮಂಗಳೂರು ಭಾಗದಲ್ಲೂ ಪ್ರಸಿದ್ಧರಾಗಿದ್ದರು. ಪ್ರತಿ ಗುರುವಾರ ಯುವವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಯುವಪತ್ರೋತ್ತರ ಕೂಡಾ ಅವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮವಾಗಿತ್ತು. ಜನ ಕಾದು ಕುಳಿತು ಕೇಳುತ್ತಿದ್ದ ಕಾರ್ಯಕ್ರಮಗಳಲ್ಲಿ ಇದೂ ಒಂದು...

 

 

ಡಿಟಿಎಚ್, ಕೇಬಲ್ ಟಿವಿ ತಂತ್ರಜ್ಞಾನ, ಮೊಬೈಲ್, ಇಂಟರ್ನೆಟ್ ಇವೆಲ್ಲ ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳವು. ಈ ಕಾಲಘಟ್ಟದಲ್ಲೇ ಯುವವಾಣಿ ವಿಭಾಗದ ಯುವ ತಾತ್ಕಾಲಿಕ ನಿರೂಪಕರಿಗೆ ಸಾಕಷ್ಟು ಅವಕಾಶ, ಮಾರ್ಗದರ್ಶನ ಹಾಗೂ ಸ್ವಾತಂತ್ರ್ಯ ನೀಡಿ ಅವರು ಸೃಜನಶೀಲ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಆಕರ್ಷಕ ಶೀರ್ಷಿಕೆಗಳೇ ಆ ಕಾರ್ಯಕ್ರಮಗಳ ಸೊಬಗನ್ನು ಹೆಚ್ಚಿಸುತ್ತಿದ್ದು. ಅವರು ಫೋನಿನ್ ಪ್ರೋಗ್ರಾಂ, ಹೊರಾಂಗಣ ಧ್ವನಿಮುದ್ರಣಕ್ಕೆ ವಾಕ್ ಮ್ಯಾನ್, ಕಾರ್ಡ್, ಪತ್ರಗಳು ಈ ರೀತಿಯ ದ್ವಿಮುಖ ಸಂವಹನವನ್ನು ಹೆಚ್ಚು ಹೆಚ್ಚು ಕಾರ್ಯಕ್ರಮಗಳಿಗೆ ಬಳಸಿ, ಹೊಸ ಹೊಸ ಚಿತ್ರಗೀತೆಗಳನ್ನು ಯುವವಾಣಿ ಕಾರ್ಯಕ್ರಮಗಳಲ್ಲಿ ಅಳವಡಿಸಿ ಜನರಿಗೆ ಹೆಚ್ಚು ಹತ್ತಿರವಾದರು ಎಂದರೆ ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

 

 

ಬದುಕಿನಲ್ಲಿ ನಮಗೆಷ್ಟು ಒಳ್ಳೆ ಅವಕಾಶ ಸಿಕ್ಕಿತ್ತು ಅಂತ ಗೊತ್ತಾಗುವುದು ಆ ಅವಕಾಶ ಮುಗಿದು ಮತ್ತೆಲ್ಲಿಗೋ ಸಾಗಿ ತಲುಪಿದ ಮೇಲೆ. ಆ ಅವಕಾಶದ ಮಡಿಲಲ್ಲಿ ಇರುವಾಗ ಅದರ ಕಲ್ಪನೆ, ವ್ಯಾಪ್ತಿ ಮತ್ತು ದೊರಕಿದ ಭಾಗ್ಯದ ಕುರಿತು ಅರಿವಾಗಿರುವುದಿಲ್ಲ. ತುಂಬ ದೂರ ಹೋಗಿ ತಿರುಗಿ ನೋಡಿದಾಗ ಒಂದು ಸಣ್ಣ ಮಿಣುಕು ಮತ್ತೊಮ್ಮೆ ಮಿನುಗಲಾಗದಷ್ಟು ದೂರ ಬಂದಾಗಲೂ ಪುಟ್ಟದಾಗಿ ಹೊಳೆಯುತ್ತಿರುತ್ತದೆ. ತುಂಬ ಸಲ ನಮ್ಮ ಸಾಧನೆ, ಪ್ರತಿಭೆ, ಶಕ್ತಿ ಬಗ್ಗೆಲ್ಲ ಏನೇನೋ ಬೊಗಳೆ ಬಿಡುತ್ತೇವೆ, ಸ್ಟೇಟಸ್ ಹಾಕ್ತೇವೆ, ಹತ್ತು ಮಾಡಿದ್ದನ್ನು ಹತ್ತು ಸಾವಿರ ಮಾಡಿದ ಲೆವೆಲ್ಲಿಗೆ ಬಿಲ್ಡಪ್ ಕೊಟ್ಟು ನಾವೋ ದೊಡ್ಡ ಸರ್ವಜ್ಞರು ಅಂತ ಹೇಳಿಕೊಂಡು ತಿರುಗಾಡುತ್ತೇವೆ. ವಾಸ್ತವದಲ್ಲಿ ಸದ್ದೇ ಇಲ್ಲದೆ ದುಡಿಯುವ ಸಂತರ ಹಾಗಿರುವವರ ನಡುವೆ ನಮ್ಮದೆಂತ ಸಾಧನೆಯೂ ಇರುವುದಿಲ್ಲ. ಮಾಡಿದ್ದನೆಲ್ಲ ನಾವು ಸಾಧನೆ ಅಂತ ಲೇಬಲ್ ಹಚ್ಚಿ ಸ್ಟೇಟಸ್ಸಿನಲ್ಲಿ ಮೆರೆಸ್ತೇವೆ ಅಷ್ಟೆ.

 

ಬದುಕಿನಲ್ಲಿ ಗುರುತಿಸಿಕೊಳ್ಳುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ, ಗುರುತಿಸುವುದಕ್ಕೊಂದು ಕಾರಣ ಬೇಕು, ಸಾಧನೆ ಬೇಕು, ಅದು ನಾಲ್ಕು ಮಂದಿಯ ನಡುವೆ ವಿಭಿನ್ನವಾಗಿರಬೇಕು. ತುಂಬ ಸಲ ಅದರ ಹಂಬಲ ಇದ್ದರೂ ಅವಕಾಶ ಗಿಟ್ಟುವುದಿಲ್ಲ, ಅಥವಾ ಹೊಟ್ಟೆಪಾಡು ಮತ್ತು ಆಸಕ್ತಿ ತಾಳಮೇಳ ಹೊಂದದೆ ನಾವು ಗುರುತಿಸುವಿಕೆಯಿಂದ ದೂರ ಬಂದಿರುತ್ತೇವೆ. ಯಾವತ್ತೋ, ಎಂಥದ್ದೋ ಮಾಡಿದ್ದನ್ನೇ ಬದುಕು ಪೂರ್ತಿ ಸಾಧನೆ, ಸಾಧನೆ ಅಂತ ಬೊಟ್ಟೆ ಹಾಕಿಕೊಂಡು ಬರಿದೇ ಓಡಾಡುತ್ತಿರುತ್ತೇವೆ. ಈ ನಡುವೆ ನಿಜವಾಗಿ ಸಾಧನೆ ಮಾಡಿದವರು, ಸದ್ದಿಲ್ಲದೆ ಸೃಜನಶೀಲ ಬದುಕು ಕಟ್ಟಿಕೊಂಡವರು, ನಮ್ಮಿಂದಲೂ ಏನಾದರೂ ಮಾಡಲು ಸಾಧ್ಯ ಅಂತ ತೋರಿಸಿಕೊಟ್ಟವರು ಮತ್ತೆಲ್ಲೋ ಒಮ್ಮೆ ಸಿಕ್ಕಾಗ ಅವರ ಜೊತೆ ಸೆಲ್ಫೀ ತೆಗೆದುಕೊಳ್ಳುವುದರಲ್ಲೂ ಖುಷಿ ಇರ್ತದೆ. ನಮ್ಮ ಸಾಧನೆಗಳ ಹುಸಿ ಭ್ರಮೆಗಳು ಕಳಚಲು... ಆ ಕ್ಷೇತ್ರದಲ್ಲಿ ತುಂಬ ಮುಂದೆ ಸಾಗಿದವರು, ಅದನ್ನು ಎಲ್ಲಿಯೂ ಹೇಳಿಕೊಳ್ಳದೆ ವ್ಯಕ್ತಿತ್ವದ ಪರಿಮಳದಿಂದಲೇ ಜನರ ಮನಸ್ಸಿನಲ್ಲಿ ಉಳಿದವರ ಪಕ್ಕ ನಿಂತು ಒಂದು ಫೋಟೋವನ್ನಾದರೂ ತೆಗೆಸಿಕೊಳ್ಳಬೇಕು... ಅದರಲ್ಲೂ ಒಂದು ಸಾತ್ವಿಕ ಖುಷಿ ಇರ್ತದೆ... ಏನಂತೀರಿ…?!

 

-ಕೃಷ್ಣಮೋಹನ ತಲೆಂಗಳ (24.10.2025).

 

 


No comments:

Popular Posts