ಕಾಯುವುದು ಟೆನ್ಶನ್ ಮಾತ್ರ ಅಲ್ಲ, ಅದು ದಿಢೀರ್ ಸಿಕ್ಕುವ ಏಕಾಂತ...! TRAFFIC JAM
1) ನಾವೊಂದು ಕಡೆ ಬಸ್ಸಿಗೆ ಕಾಯ್ತಾ
ಇದ್ದೇವೆ. ವಿಪರೀತ ಟ್ರಾಫಿಕ್ ಜಾಂ, ವೀಕೆಂಡ್ ಬೇರೆ. ಬಸ್ ನಿಂತಲ್ಲೇ ನಿಂತಿದೆ, ನಾಲ್ಕಾರು
ಕಿ.ಮೀ. ದೂರದಲ್ಲಿದೆ ಅಂತ ಟ್ರ್ಯಾಕಿಂಗ್ ಸಿಸ್ಟಂ ತೋರಿಸ್ತಾ ಇರ್ತದೆ. ಕೂರಲಿಕ್ಕೂ ಜಾಗ
ಇಲ್ಲದಷ್ಟು ಜನವೋ ಜನ. ಸೆಕುಂಡಿಗೆ 2-3ರಂತೆ ಬಸ್ಸುಗಳು ಇರುವೆಗಳ ಥರ ಬರ್ತಾ ಇರ್ತದೆ. ಬೆನ್ನಿನಲ್ಲಿ
ಮಣಭಾರದ ಬ್ಯಾಗು, ಗಾಢವಾಗಿ ಕವಿಯುತ್ತಿರುವ ಕತ್ತಲು ಮತ್ತು ಜನರ ಧಾವಂತ, ನುಗ್ಗಿಕೊಂಡು ಬರುವ
ಆಟೋ, ಬೈಕ್ಕು, ಕಾರುಗಳು ಸಹಿತ...
2) ಡಾಕ್ಟ್ರ ಅಪಾಯಿಂಟ್ಮೆಂಟಿಗೆ ಕಾಯ್ತಾ
ಇದ್ದೇವೆ. ನಮಗಿಂತ ಮೊದಲು 14 ಜನ ಇದ್ದಾರೆ. ಡಾಕ್ಟ್ರು ನಿಧಾನವಾಗಿ ಒಬ್ಬೊಬ್ಬರನ್ನೇ ಪರೀಕ್ಷಿಸಿ
ಬಿಡ್ತಾ ಇದ್ದಾರೆ. ನಡು ನಡುವೆ ಲ್ಯಾಬ್ ರಿಪೋರ್ಟ್ ತೋರಿಸಲು ಬರುವವರು, ಮೆಡಿಕಲ್ ರೆಪ್ಪುಗಳು
ಮತ್ತು ಸ್ಟಾಫ್ ನರ್ಸುಗಳು ಬೇರೆ... ನಿಮಿಷಗಳು ಗಂಟೆಗಳಾದಂತೆ ಭಾಸ. ಅದೇ ಸುಮಾರು ಸಲ ನೋಡಿ ನೋಡಿ
ಸಾಕಾದ, ಮಾಸಿದ, ನೀರಸವಾಗಿ ತಿರುಗುವ ಫ್ಯಾನು, ನಗುವೇ ಬಾರದ ರಿಸೆಪ್ಷನಿಸ್ಟ್, ಮಣ ಭಾರದ ಮುಖ
ಹೊತ್ತು ಪೇಶಂಟುಗಳು ಮತ್ತು ಹತ್ತಾರು ಸಲ ಓದಿ ಮತ್ತೊಮ್ಮೆ ಓದುವ ಆರೋಗ್ಯ ಕಾಳಜಿ ಕುರಿತ ತಗಡಿನ
ಬೋರ್ಡು... ಒಳಹೋಗುವ ಸಮಯವನ್ನು ಕಾಯುವ ತೀವ್ರತೆಯನ್ನು ತೋರಿಸಿಕೊಡುವ ಜಾಗ ಒಪಿಡಿ ಅಥವಾ ಪಾಲಿ
ಕ್ಲಿನಿಕ್ಕು.
3) ಡಾಕ್ಟ್ರು ಧೈರ್ಯ ಹೇಳಿದ್ದಾರೆ. ದೊಡ್ಡ
ಸಮಸ್ಯೆ ಇರ್ಲಿಕಿಲ್ಲ ಅಂತ. ಆದರೂ ಯಾವುದಕ್ಕೂ “ಸಾಧ್ಯತೆ ಅವಾಯ್ಡ್
ಮಾಡುವುದಕ್ಕೆ” ಲ್ಯಾಬಿಗೆ ಸ್ಯಾಂಪಲ್
ಕೊಟ್ಟು ಹೋಗ್ಲಿಕೆ ಹೇಳಿದ್ದಾರೆ. ರಿಪೋರ್ಟ್ ಬರ್ಲಿಕೆ ಒಂತು ವಾರ ಆಗ್ತದೆ, ಅದು ಮತ್ತೂ ನಾಲ್ಕು
ದಿನ ಪೋಸ್ಟ್ ಫೋನ್ ಆಗಿದೆ. ಈ ನಡುವೆ ಎಷ್ಟೊಂದು ಟನ್ಶನ್ ಅಲ್ವ? ಬದುಕೇ ನೀರಸವಾದ ಹಾಗೆ, ಎಂಥದ್ದೂ ಬೇಡ
ಅನ್ನಿಸುವ ಹಾಗೆ. ಜೊತೆಗೆ ಡಾಕ್ಟ್ರ ಮೇಲೆ ವಿಚಿತ್ರ ಸಿಟ್ಟು ಇಷ್ಟು ಗಂಭೀರ ವಿಷಯವನ್ನೂ ಎಷ್ಟು
ಕ್ಯಾಶುವಲ್ ಆಗಿ ಹೇಳ್ತಾರೆ, ಯಾರಿಗೆ ಏನೇ ಆದರೂ ಅವರಿಗೊಂದು ಸಂಗತಿಯೇ ಅಲ್ಲ ಅಲ್ವ ಅಂತ...
ಇವು ಮೂರು ಸಾಂದರ್ಭಿಕ
ಉದಾಹರಣೆಗಳಷ್ಟೇ... ಯಾರೋ ಬರೆದಿಟ್ಟ ಚಿತ್ರಕತೆಯ ಹಾಗೆ... ನಿರೀಕ್ಷಿತವಾಗಿ ಮತ್ತು ಬಹುತೇಕ ಸಂದರ್ಭ ಅಯಾಚಿತವಾಗಿ ಕಾಯುವುದನ್ನು,
ಕಾಯಬೇಕಾಗಿ ಬರುವುದನ್ನು, ಟ್ರಾಫಿಕ್ಕು ಜಾಮುಗಳನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಆಗೆಲ್ಲ
ಮನಸ್ಸು ಉದ್ವಿಗ್ನಗೊಳ್ಳುವುದಿದೆ, ಆತಂಕ ಜಾಸ್ತಿ ಆಗುವುದಿದೆ. “ಎಲ್ಲರ ಬಸ್ ಬಂದರೂ ನನ್ನದು
ಯಾಕೆ ಬರ್ತಾ ಇಲ್ಲ...” ಎಂಬ ಟೆನ್ಶನ್... ಜನಜಂಗುಳಿ ಖಾಲಿ
ಆಗುತ್ತಾ ಬಂದರೂ ನನ್ನ ಬಸ್ ಬಾರದೆ “ನಾನೊಬ್ಬನೇ ಇಲ್ಲಿ ಉಳೀತೆನಾ?” ಎಂಬಂಥ ವಿಚಿತ್ರ ತಳಮಳ... ಜೊತೆಗೆ
ಟ್ರಾಫಿಕ್ಕಿಗೆ, ದರಿದ್ರ ಸಿಗ್ನಲ್ ವ್ಯವಸ್ಥೆಗೆ ಶಪಿಸುವುದು ಬೇರೆ, ಕೈಕೈ ಹಿಸುಕಿ ಬಾರದ ಬಸ್ಸಿನ
ಬಗ್ಗೆ, ಬಾರದ ಡಾಕ್ಟ್ರ ಬಗ್ಗೆ, ಒಟ್ಟೂ ವ್ಯವಸ್ಥೆ ಬಗ್ಗೆ ಬೈಯ್ಯುವುದು, ಟೆನ್ಶನ್ ಮಾಡುವುದು
ಬೇರೆ...
ಇದರಾಚೆಗೆ ನಿಂತು
ಯೋಚಿಸೋಣ...
1) ಟ್ರಾಫಿಕ್ಕಿನಲ್ಲಿ, ಕ್ಲಿನಿಕ್ಕಿನಲ್ಲಿ,
ಕ್ಲಿನಿಕಲ್ ಲ್ಯಾಬಿನಲ್ಲಿ ಪರಿಸ್ಥಿತಿ ನಿಯಂತ್ರಣ ನಮ್ಮ ಕೈಲಿಲ್ಲ. ನಾವು ವ್ಯವಸ್ಥೆಯ ಭಾಗಗಳು
ಅಷ್ಟೇ... ಅಥವಾ ಬರಿದೇ ಪ್ರೇಕ್ಷಕರು, ಸಾಕ್ಷಿಗಳು... ಹಾಗಾಗಿ ಆ ಪರಿಸ್ಥಿತಿಗೆ ನಾವು ಕಾರಣರಲ್ಲ
ಎಂಬುದು ಮೊದಲಿಗೆ ಅರ್ಥ ಆಗಬೇಕು.
2) ಕಾಯುವುದು ಅನಿವಾರ್ಯ ಅಂತ ಒಂದು
ಹಂತದಲ್ಲಿ ನಮಗೆ ಗೊತ್ತಾಗ್ತದೆ, ಮತ್ತದು ನಮಗೆ ಅರ್ಥವೂ ಆಗಬೇಕು ಮತ್ತು ಜೀರ್ಣವೂ ಆಗಬೇಕು.
ಯಾಕೆಂದರೆ ನಮ್ಮನ್ನು ನಾವು ಸಂಭಾಳಿಸಲು ಪರಿಸ್ಥಿತಿ ಅರ್ಥ ಮಾಡಿಕೊಳ್ಳುವುದು ಮುಖ್ಯ.
3) ಬೈಯ್ಯುವುದರಿಂದ, ಶಪಿಸುವುದರಿಂದ,
ಟೆನ್ಶನ್ ಮಾಡುವುದರಿಂದ, ಸಿಗರೇಟ್ ಎಳೆಯುವುದರಿಂದ ಅವರಿವರಿಗೆ ಫೋನ್ ಮಾಡಿ ನಮ್ಮ ಕೋಪವನ್ನು
ಅವರಲ್ಲಿ ಪ್ರದರ್ಶನ ಮಾಡುವುದರಿಂದ ಟ್ರಾಫಿಕ್ಕಿನಲ್ಲಿ ಸಿಕ್ಹಾಕ್ಕೊಂಡ ಬಸ್ ಬೇಗ ಬರುವುದಿಲ್ಲ,
ಏಕಾಏಕಿ ರಸ್ತೆ ಖಾಲಿಯಾಗಿ ಬಸ್ ಓಡೋಡಿ ಬರುವುದಿಲ್ಲ, ಕ್ಯೂ ತಪ್ಪಿಸಿ ಡಾಕ್ಟ್ರು ನಮ್ಮನ್ನು
ವೀಶೇಷವಾಗಿ ಟೆಸ್ಟ್ ಮಾಡುವುದಿಲ್ಲ. ಹಾಗಾಗಿ ಟೆನ್ಶನ್ ಮಾಡುವುದರಿಂದ ಯಾವ ಪರಿಸ್ಥಿತಿಯೂ
ಬದಲಾಗುವುದಿಲ್ಲ.
4) ಅನಿರೀಕ್ಷಿತ ಕಾಯುವಿಕೆಯನ್ನು ಹೇಗೆ
ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಆ ಕ್ಷಣಕ್ಕೆ ನಾವೇ ಪ್ಲಾನ್ ರೂಪಿಸುವುದರಿಂದ ಆ ಕಾಯುವ ಹೊರೆಯನ್ನು ಹಗುರವಾಗಿಸಬಹುದು, ಅದನ್ನೂ ಒಂದು ಕಲಿಕೆಗೆ
ಬಳಸಬಹುದು ಮತ್ತು “ಅಷ್ಟು ಹೊತ್ತು ಹಾಳಾ.... ಗಿ ಹೋಯ್ತಲ್ಲ” ಅಂತ ಗೋಳಾಡುವುದನ್ನು ತಪ್ಪಿಸಬಹುದು.
5) ಬೇರೆನೂ ಬೇಡ. ಪಕ್ಕದಲ್ಲಿ ಮನೆಯವರು
ಇಲ್ಲದೇ ಇದ್ದರೂ ಕೈಯ್ಯಲ್ಲಿ ಮೊಬೈಲ್ ಇದ್ದೇ ಇರ್ತದೆ. ಅಲ್ಲಿ ಸುಮ್ಮನೇ ನನ್ನ ಸ್ಟೇಟಸ್ಸಿಗೆ
ಎಷ್ಟು ಲೈಕ್ ಬಂತು ಅಂತ ಹುಡುಕುವ ಬದಲು, ರೀಲ್ಸ್ ಮೇಲೆ ರೀಲ್ಸ್ ನೋಡಿ ಮಂಡೆ ಶರ್ಬತ್ತು ಮಾಡುವ
ಬದಲು ಕಡತ ವಿಲೇವಾರಿ ಮಾಡಿಯಲ್ವ. ಜಂಕ್ ಫೈಲ್, ಬೇಡದ ಫೈಲ್, ರಿಸೈಕಲ್ ಬಿನ್ ಕ್ಲೀನ್ ಮಾಡಬಹುದು.
ಇಂಟರ್ನಲ್ ಮೆಮೊರಿ, ಎಸ್ಡಿ ಕಾರ್ಡ್ ಮೆಮೊರಿಯನ್ನು ವ್ಯವಸ್ಥಿತವಾಗಿ ಪರಿಶೀಲಿಸಿ, ಬೇಡದ್ದು
ಡಿಲೀಟ್ ಮಾಡಿ, ಬೇಕಾದ್ದು ಫೋಲ್ಡರ್ ಮಾಡಿ ಇಡಬಹುದು. ಯಾವತ್ತೋ ನೋಡಲು ಬಾಕಿ ಆದ ಮೆಸೇಜು,
ವೀಡಿಯೋ, ಕಥೆ ಓದಬಹುದು, ಯಾರಿಗೆ ಪುರುಸೊತ್ತಲ್ಲಿ ಮಾಡಬೇಕಿತ್ತು ಅಂದುಕೊಂಡ ಕಾಲ್ ಮಾಡಬಹುದು (ಆ
ವ್ಯಕ್ತಿ ಎಚ್ಚರ ಸ್ಥಿತಿಯಲ್ಲಿದ್ದರೆ), ಆ ಹೊತ್ತಿಗೆ ಅನ್ನಿಸಿದ್ದು ಬರೆದಿಡಬಹುದು, ಇನ್ನೂ ತುಂಬ
ಕೆಲಸವನ್ನು ಆ ಅರ್ಧ ಗಂಟೆಯಲ್ಲಿ, ಒಂದು ಗಂಟೆಯಲ್ಲಿ ಮಾಡಿ ಮುಗಿಸಬಹುದು. ದೊಡ್ಡದಾಗಿ ರೀಲ್ಸ್
ಹಾಕಿ ಸುತ್ತಮುತ್ತಲ ಎಲ್ಲರಿಗೂ ಉಪದ್ರ ಕೊಡುವ ಬದಲು ಇದನ್ನಾದರೂ ಮಾಡಬಹುದಲ್ವ
6) ಇಷ್ಟು ಮಾತ್ರವಲ್ಲ, ಸುಮ್ಮನೆ
ಸುತ್ತಮುತ್ತ ನೋಡಿದರೆ ಗಮನಿಸುವಂಥದ್ದು, ಕಲಿಯುವಂಥದ್ದು ತುಂಬ ಸಂಗತಿ ಇರ್ತದೆ. ಬಾಕಿ ಹೊತ್ತು
ನಾವು ಬಿಝೀ ಅಂತಿರುವಾಗ ನೋಡದ ಸುಮಾರು ಸಂಗತಿ ಅಲ್ಲಿರ್ತದೆ. ಎಷ್ಟೊಂದು ಜನ, ಅವರ ಅವಸರ,
ಗಡಿಬಿಡಿ, ಮಾತುಗಳು, ಆತಂಕ, ತಳಮಳ, ತಲ್ಲಣ, ಡೋಂಟ್ ಕೇರ್ ನಗು, ವಿಚಿತ್ರ ಭಯ... ಎಷ್ಟೊಂದು
ಸಂಗತಿ. ಎಷ್ಟೊಂದು ವಾಹನ, ಎಷ್ಟೊಂದು ಹೆಸರುಗಳು, ಎಷ್ಟೊಂದು ಬಣ್ಣ, ಎಷ್ಟು ಚಂದದ ಕತ್ತಲು,
ಹೆಬ್ಬಾವಿನಂತೆ ಮಲಗಿದ ರಸ್ತೆ, ಮೇಲೊಂದು ಮೆಟ್ರೋ ಸೇತುವೆ, ಅಂತರಿಕ್ಷದಲ್ಲಿ ಸಾಗಿದಂತೆ ಕಾಣುವ
ಮೆಟ್ರೋ ರೈಲು, ಮೇಲ್ಸೇತುವೆಯಡಿ ನಗುವ ಪುಟ್ಟ ಚಂದಿರ, ಮತ್ತೆ ಮೂಲೆಯ ಕಂಪೌಂಡ್ ಆಚೆಯಿಂದ ತೂರಿ
ಬರುವ ಪರಿಜಾತದ ಪರಿಮಳ... ಹೀಗೆ ಮನಸ್ಸಿದ್ದರೆ ಇವನ್ನೆಲ್ಲ ಆಸ್ವಾದಿಸಬಹುದು.
7) ಕಾಯುವಿಕೆ ಎಂದರೆ ಅದೊಂದು ಬೋನಸ್ ಏಕಾಂತ
ಸಿಕ್ಕಿದ ಹಾಗೆ. ನಾವು ಬಿಝೀ ಅಂತ ಬಿಲ್ಡಪ್ ಕೊಟ್ಟು ಮೊಬೈಲಿನಲ್ಲೇ ಮುಳುಗಿರುವಾಗ ಅಥವಾ ಕೆಲಸ
ಕೆಲಸ ಅಂತ ತೊಡಗಿಸಿಕೊಂಡಿರುವಾಗ ಯೋಚಿಸಲಾಗದ ಏಕಾಂತವನ್ನು ಕಾಯುವಿಕೆ ಕಟ್ಟಿಕೊಡುತ್ತದೆ. ನಮಗದು
ಅರ್ಥವೇ ಆಗುವುದಿಲ್ಲ. ಯಂತ್ರಕ್ಕೂ ಒಂದು ವಿಶ್ರಾಂತಿಯ ಸಮಯ ಅಂತಿರ್ತದೆ, ಸರ್ವೀಸ್ ಅಂತಿರ್ತದೆ.
ನಮ್ಮ ಮನಸಿಗೊಂದು ಸರ್ವೀಸ್ ಬೇಡ್ವ. ಸುಮ್ನೆ ನಿಶ್ಯಬ್ಧವಾಗಿ ಕೂರಲು, ಯೋಚಿಸಲು, ಕನಸು ಕಾಣಲು
ಮತ್ತು ಹಿಂತಿರುಗಿ ನೋಡಲು ಅಂತ ನಾವೊಂದು ಸಮಯವನ್ನೇ ನಮ್ಮ ಪಾಲಿಗೆ ನಿಗದಿ ಮಾಡಿರುವುದಿಲ್ಲ.
ಯಾಚಿಸದೇ ಬಂದ ಕಾಯುವಿಕೆಯ ಅವಧಿಯನ್ನು ಎಷ್ಟೇ ಸಿಟ್ಟು ಬಂದರೂ ಲೆಕ್ಕಿಸದೆ ಒಂದು ಏಕಾಂತದ ಪುಟ್ಟ
ಮನೆ ಅಂತ ಭಾವಿಸಿದರೆ ಅದರಲ್ಲೂ ಒಂದು ಚಂದದ ಹೊತ್ತನ್ನು ಕಂಡುಕೊಳ್ಳಬಹುದು. ಏನಂತೀರಿ?
ಎಲ್ಲ ಓದಿಯಾದ ಮೇಲೆ: ಇಂತಹ ಹಿತವಚನ, ಬೋಧನ
ಕೊಡ್ಲಿಕೆ, ಬರಿಲಿಕೆ ತುಂಬ ಸುಲಭ. ತಲುಪಬೇಕಾದ ಹೊತ್ತಿಗೆ ತಲುಪಬೇಕಾದ ಜಾಗವನ್ನು ತಲುಪಲಾಗದ
ಅಸಹಾಯಕತೆ ಸೃಷ್ಟಿಸುವ ಇಂಥಹ ಕಾಯುವಿಕೆಯ ಕ್ಷಣಗಳಲ್ಲಿ ಬೇಡ ಬೇಡವೆಂದರೂ ಪ್ರಕ್ಷುಬ್ಧಗೊಳ್ಳುವ
ಮನಸ್ಸು ಇಂತದ್ದನ್ನೆಲ್ಲ ಕೇಳ್ತದ ಅಂತ ನೀವು ನನ್ನತ್ರ ಕೇಳಿದರೆ ನನ್ನತ್ರ ಉತ್ತರ ಇಲ್ಲ... ಯಾಕೆಂದರೆ
ಬರೆಹ ಮುಗಿದಿದೆ!!!.
-ಕೃಷ್ಣಮೋಹನ ತಲೆಂಗಳ (14.10.2025)
No comments:
Post a Comment