ಕಾಲಮಿತಿ ಬಯಲಾಟ ವಿಸ್ತರಣೆಗೆ ಸಕಾಲ...


ಸುಮಾರು ಮೂರು ದಶಕಗಳಿಂದ ಯಕ್ಷಗಾನವನ್ನೇ ನೋಡುತ್ತಾ ಬೆಳೆದವನು. ಇಡೀ ರಾತ್ರಿ ತುಂಬಿದ ಸಭೆಯೊಂದಿಗೆ ಸೂರ್ಯೋದಯ ತನಕ ಆಟ ನೋಡುತ್ತಿದ್ದ ಕಾಲ, ಬಳಿಕ ರಾತ್ರಿಯಿಡೀ ಆಟ ನೋಡುವವರ ಸಂಖ್ಯೆ ಕಡಿಮೆಯಾಗಿ ಮಧ್ಯರಾತ್ರಿ ಸಭೆ ಮುಕ್ಕಾಲು ಭಾಗ ಖಾಲಿಯಾಗಿ, ಬೆಳಗ್ಗೆ ನೀರಸವೆನ್ನಿಸುತ್ತಿದ್ದ ಕಾಲ, ಈಗೀಗ ಆರಂಭದಲ್ಲಿ ತುಂಬುವ ಸಭೆ, ಮಧ್ಯರಾತ್ರಿ ಖಾಲಿ, ಬೆಳಗ್ಗಿನ ಜಾವ ಅಲಾರಂ ಇಟ್ಟು ತಮ್ಮ ಇಷ್ಟದ ಭಾಗವತರು, ಕಲಾವಿದರ ಪರ್ ಫಾರ್ಮೆನ್ಸ್ ನೋಡಲು ಬರುವ ಕಲಾ ಪ್ರೇಮಿಗಳ ಆಟದ ಆಸಕ್ತಿ ಹೆಚ್ಚುತ್ತಿರುವ ಕಾಲ ಘಟ್ಟ ಎಲ್ಲದಕ್ಕೂ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ನಾನು ಕಾಲಮಿತಿಯ ಆಟದ ಪ್ರಯೋಗವನ್ನು ಸ್ವಾಗತಿಸುತ್ತೇನೆ. 

ಕಳೆದ ಸುಮಾರು ಒಂದು ದಶಕದಂದ ಯಶಸ್ವಿಯಾಗಿ ಕಾಲಮಿತಿಯ ಆಟಕ್ಕೆ ಸಾಕಷ್ಟು ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿರುವ ಎಡನೀರು ಹಾಗೂ ಹೊಸನಗರ ಮೇಳ ಹಾಗೂ ಮಳೆಗಾಲದ ಶ್ರೀ ನಿಡ್ಲೆ ಮೇಳದ ಬಯಲಾಟಗಳನ್ನು ಗಮನಿಸುತ್ತಾ ಬಂದಿದ್ದೇನೆ. ಹಾಗಾಗಿ ಕಾಲಮಿತಿಯ ಆಟಕ್ಕೆ ಪ್ರೋತ್ಸಾಹ, ಬೆಂಬಲ, ಹಾಗೂ ಪ್ರೇಕ್ಷಕರಿಗೆ ಖುಷಿ ಇದೆ ಎಂಬುದನ್ನು ಖಂಡಿತಾ ಹೇಳಬಹುದು.
ಕಾಲಮಿತಿಯ ಆಟದಿಂದ ವಿವಿಧ ಜಾವಗಳ ಸಂಗೀತಗಳಿಗೆ ಪ್ರಾಧಾನ್ಯತೆ ಇರುವುದಿಲ್ಲ, ಆಟದ ವಿಸ್ತಾರ ಪ್ರಸ್ತುತಿ ಅಸಾಧ್ಯ, ಕಲಾವಿದರ ಪೂರ್ಣ ಸಾಮರ್ಥ್ಯ ಪ್ರದರ್ಶನಕ್ಕೆ ಸಮಯಾವಕಾಶವಿಲ್ಲ... ಜೊತೆಗೆ ಮಧ್ಯರಾತ್ರಿ ಪ್ರೇಕ್ಷಕರು ಆಟ ಮುಗಿದ ಮೇಲೆ ಎಲ್ಲಿಗೆ  ಹೋಗಬೇಕು ಎಂಬಿತ್ಯಾದಿ ಪ್ರಶ್ನೆಗಳನ್ನು ಕಾಲಮಿತಿ ವಿರೋಧಿಸುವವರು ಕೇಳುತ್ತಾರೆ.

ಎಲ್ಲವೂ ನಿಜ. ಆದರೆ, ಪ್ರಸಿದ್ಧ ಭಾಗವತರೂ, ಕಲಾವಿದರೂ ಬೆಳಗ್ಗಿನ ಜಾವ ಖಾಲಿ ಕುರ್ಚಿಗಳ ಎದುರು ಉತ್ಸಾಹದಿಂದ ಪ್ರದರ್ಶನ ನೀಡುವ ಬದಲು ಕೊನೆ ತನಕ ತುಂಬಿದ ಸಭೆಯೆದುರು ಪ್ರದರ್ಶನ ನೀಡುವುದು ಉತ್ತಮವಲ್ಲವೇ ಎಂಬುದು ನನ್ನ ವಾದ.
ನಿದ್ದೆಗೆಟ್ಟು, ಅನಾರೋಗ್ಯವನ್ನೂ ಕಡೆಗಣಿಸಿ ಖ್ಯಾತ ಭಾಗವತರು, ಕಲಾವಿದರು ಪರಿಪೂರ್ಣ ಉತ್ಸಾಹದಿಂದ ಪ್ರದರ್ಶನ ನೀಡುತ್ತಿದ್ದರೆ, ಬೆಳಗ್ಗಿನ ಜಾವ 2,3 ಗಂಟೆ ಬಳಿಕ ಅದನ್ನು ಆಸ್ವಾದಿಸುವವರು, ಅದನ್ನು ಗ್ರಹಿಸಿ ಪ್ರೋತ್ಸಾಹಿಸುವವರು ಇಲ್ಲದೆ ಹೋದಲ್ಲಿ ಅವರಿಗೆ ಪ್ರದರ್ಶನಕ್ಕೆ ಉತ್ಸಾಹ ಬರುವುದಾದರೂ ಹೇಗೆ...ಇದರಿಂದಾಗಿಯೇ ಎಷ್ಟೋ ಮಂದಿಗೆ ಬೆಳಗ್ಗಿನ ಜಾವ ಬರುವ ಕಲಾವಿದರ ಪರಿಚಯ, ಕಥೆಯ ವಿಸ್ತಾರ ಗೊತ್ತಿರುವುದೇ ಇಲ್ಲ. ತುಂಬ ಮಂದಿಯ ಪಾಲಿಗೆ ಮಹಿಷ ವಧೆಯಾದಲ್ಲಿಗೆ ದೇವ ಮಹಾತ್ಮೆ ಮುಗಿಯಿತು...

ಈಗಿನ ಕಾಲಘಟ್ಟದಲ್ಲಿ ಇಡೀ ರಾತ್ರಿ ಕುಳಿತು ಆಟ ನೋಡಿದರೆ ಮರುದಿನ ನಿದ್ದೆಗೆಟ್ಟು ಕಚೇರಿ ಕೆಲಸ ಕಾರ್ಯಗಳಲ್ಲಿ ತೊಡಗಲು ಕಷ್ಟ, ಹಳ್ಳಿಯವರಲ್ಲೂ ಇಡೀ ರಾತ್ರಿ ನಿದ್ದೆಗೆಟ್ಟು ಆಟ ನೋಡುವ ತಾಳ್ಮೆಯಿಲ್ಲ. ಚಿಕ್ಕ ಕುಟುಂಬಗಳಲ್ಲಿ ಮನೆ ಬಿಟ್ಟು ಇಡೀ ರಾತ್ರಿ ಬರುವ ಪರಿಸ್ಥಿತಿಯೂ ಇಲ್ಲ. ಹಿಂದಿನ ಹಾಗೆ ಸೂಟೆ ಹಿಡಿದುಕೊಂಡು ಮೈಲಿಗಟ್ಟಲೆ ನಡೆದು ಬಂದು ಆಟ ನೋಡುವ ಪರಿಸ್ಥಿತಿಯೂ ಈಗಿಲ್ಲ (ಇಲ್ಲವೇ ಇಲ್ಲ ಎಂದಲ್ಲ). ಹಾಗಾಗಿ ರಾತ್ರಿಯಿಡೀ ಪ್ರೇಕ್ಷಕರನ್ನು ಹಿಡಿದಿಡಲು ಕಷ್ಟ. ಮಾತ್ರವಲ್ಲ, ಮಧ್ಯರಾತ್ರಿ ಆಟ ಮುಗಿದರೂ ಮನೆ ತಲುಪುವ ಮಾರ್ಗ ಪ್ರೇಕ್ಷಕರಿಗೆ ಗೊತ್ತಿರುತ್ತದೆ ಎಂಬುದಕ್ಕೆ ಹೊಸನಗರ, ಎಡನೀರು ಮೇಳಗಳ ಪ್ರೇಕ್ಷಕರೇ ಸಾಕ್ಷಿ (ನಾನು ಕಂಡ ಹಾಗೆ).

ಇಡೀ ರಾತ್ರಿ ಆಟದ ಬಗ್ಗೆ ಹೇಳುವುದಾದರೆ ಕಟೀಲು ಮೇಳದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಪೂರ್ವರಂಗ ಮುಗಿದು ಕತೆ ಶುರುವಾಗುವಾಗ ರಾತ್ರಿ 10.30 ಆಗಿರುತ್ತದೆ.ಬೆಳಗ್ಗೆ 6 ಗಂಟೆ ತನಕ ಆಡಿದರೂ ಏಳೂವರೆ ಗಂಟೆ ಪ್ರದರ್ಶನ. ಹೊಸನಗರ ಮೇಳದಲ್ಲಿ ರಾತ್ರಿ 7 ಗಂಟೆಗೆ ಆಟ ಶುರುವಾಗುತ್ತದೆ, ಸಾಮಾನ್ಯ 12 ಗಂಟೆ ತನಕ ಇರುತ್ತದೆ. ಅಂದರೆ, ಒಟ್ಟು 5 ಗಂಟೆ ಪ್ರದರ್ಶನ. ಖೋತಾ ಆಗುವುದು ಕೇವಲ ಎರಡು ಗಂಟೆ. ಇದು ದೊಡ್ಡ ನಷ್ಟ ಅಂತ ನನಗೆ ಅನ್ನಿಸುವುದಿಲ್ಲ. ಬೇಕಿದ್ದರೆ ರಾತ್ರಿ 6ರಿಂದ 1 ಗಂಟೆ ತನಕ ಆಟ ಆಡಿದರೂ 7 ಗಂಟೆ ಸಿಗುತ್ತದೆ. ಅದು ಪ್ರೈಂ ಟೈಂ (ಪ್ರೇಕ್ಷಕರ ಪಾಲಿಗೆ) ಖಂಡಿತಾ ಕತೆ ನಷ್ಟ ಆಗುವುದಿಲ್ಲ. ಸ್ವಲ್ಪ ಕುಣಿತ, ಒಂದೆರಡು ದೃಶ್ಯ ಹೋಗಬಹುದೇನೋ. 

ಕಾಲಮಿತಿಯಿಂದ ಪ್ರೇಕ್ಷಕರನಿಗೂ ಇಡೀ ರಾತ್ರಿ ಆಟ ನೋಡಿದ ತೃಪ್ತಿ. ಮಾತ್ರವಲ್ಲ. ಹಿರಿಯ ಕಲಾವಿದರಿಗೂ ಅರ್ಧರಾತ್ರಿ ಬಳಿಕ ನಿದ್ರಿಸುವುದು ಅವರ ಆರೋಗ್ಯದ ದೃಷ್ಟಿಯಿಂದಲೂ ಸಹಕಾರಿ. ಮರುದಿನ ಹಗಲು ನಿತ್ಯಕರ್ಮಗಳಲ್ಲಿ ತೊಡಗಲು ತುಸು ಸಮಯ ಸಿಗುತ್ತದೆ. ಕಲಾವಿದರೂ ಆಟದ ಜಾಗದಲ್ಲೇ ರಾತ್ರಿ ನಿದ್ರಿಸಿ ಬೆಳಗ್ಗೆ ಮುಂದಿನ ಊರಿಗೆ ಹೋಗುವುದರಿಂದ ಅವರ ಪ್ರಯಾಣವೇನೂ ದೊಡ್ಡ ಸಮಸ್ಯೆಯಾಗದು. ಮಹಿಳೆಯರು, ಶಾಲೆಗೆ ತೆರಳುವ ಮಕ್ಕಳಿಗೂ ಮಧ್ಯರಾತ್ರಿ ತನಕ ಕುಳಿತು ಆಟ ನೋಡುವುದು ದೊಡ್ಡ ಹೊರೆಯಾಗದು. ಆದ್ದರಿಂದ ಆಟ ಹೆಚ್ಚಿನ ವರ್ಗದ ಪ್ರೇಕ್ಷಕರನ್ನು ತಲಪಲು ಸಾಧ್ಯ.


ಮೇಳದ ಯಜಮಾನರು ತುಸು ಉದಾರಿಗಳಾಗಿ ಪ್ರತಿ ವಾರಾಂತ್ಯಗಳಲ್ಲಿ ಇಡೀ ರಾತ್ರಿಯ ಆಟ ನಿಗದಿಗೆ ಮನಸ್ಸು ಮಾಡಬೇಕು. ಶನಿವಾರ, ಭಾನುವಾರಗಳಂದು ರಜಾ ಇರುವುದರಿಂದ ಆ ಎರಡು ದಿನ ವಿಸ್ತಾರ ಪ್ರಸಂಗ ನಿಗದಿಪಡಿಸಿ (ವೀಳ್ಯ ಜಾಸ್ತಿ ನಿಗದಿಪಡಿಸಲಿ) ಇಡೀ ರಾತ್ರಿ ಆಟ ಆಡಬಹುದು. ಇದರಿಂದ ಪರಂಪರೆಯೂ ಉಳಿಯುತ್ತದೆ, ಇಡೀ ರಾತ್ರಿ ಆಟ ನೋಡಬೆಕೆನ್ನುವವರು ಆಸೆಯೂ ಈಡೇರುತ್ತದೆ.
ದೇವಿಮಹಾತ್ಮೆ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯಂತಹ ಆಟಗಳನ್ನೂ ಇಡೀ ರಾತ್ರಿಯಷ್ಟು ಚೆನ್ನಾಗಿ ಕಾಲಮಿತಿಯಲ್ಲಿ ಪ್ರದರ್ಶಿಸಲು ಸಾಧ್ಯವಿಲ್ಲ ನಿಜ. ಆದರೆ, ಈಗಾಗಲೇ ಹೇಳಿದಂತೆ ವಾರಾಂತ್ಯದ ದಿನಗಳು ಹಾಗೂ ರಜಾ ದಿನಗಳ ಸಂದರ್ಭ ಅಥವಾ ಮಳೆಗಾಲದಲ್ಲಿ ಸಭಾಂಗಣಗಳಲ್ಲಿ ಕಾಲಮಿತಿ ಮೇಳದವರೂ ಇಡೀ ರಾತ್ರಿಯ ಆಟಗಳನ್ನು ಹಮ್ಮಿಕೊಂಡು ಈ ಕೊರತೆ ನೀಗಬಹುದು. ಅದೇ ರೀತಿ ಧರ್ಮಸ್ಥಳ ಮೇಳದವರು ರಾತ್ರಿ 7ರಿಂದ 12ರ ತನಕ ಆಡುವಾಗ 7 ಗಂಟೆಗೆ ಪೂರ್ವರಂಗ ಶುರು ಮಾಡುವ ಬದಲು, ರಾತ್ರಿ 6ಕ್ಕೇ ಆಟ ಶುರು ಮಾಡಿ, 7 ಗಂಟೆಗೆ ಪೂರ್ವರಂಗ ಮುಗಿಸಿದರೆ, ಪ್ರಸಂಗದ ಪಾಲಿಗೆ ಒಂದು ಗಂಟೆ ಹೆಚ್ಚುವರಿ ಸಿಗುತ್ತದೆ, ಈ ಕುರಿತು ಚಿಂತಿಸಬಹುದು.

ಒಟ್ಟಿನಲ್ಲಿ, ಕಾಲಮಿತಿಯಿಂದ ಪ್ರದರ್ಶನಕ್ಕೆ ತುಸು ಕತ್ತರಿ ಬೀಳುತ್ತದೆ ವಿನಃ ಪರಂಪರೆ ಕೆಟ್ಟು ಹೋಗದು, ಏನಂತೀರಿ


No comments: