ದುಡುಕಿನ ಮಾತೂ... ಹರಿದ ಕಾಗದವೂ...



ಆತ್ಮೀಯರ ವಿಶ್ವಾಸ ಕಳೆದುಕೊಳ್ಳುವದೆಂದರೆ ಕಾಗದವನ್ನು ಹರಿದಂತೆ...ಕಾಗದವನ್ನು ಮತ್ತೆ ಅಂಟು ಹಾಕಿ ಜೋಡಿಸಬಹುದು, ಆದರೆ... ಈ ಹಿಂದಿದ್ದ ನಾಜೂಕು ಅಲ್ಲಿ ಬರಲು ಕಷ್ಟ, ಬಿರಕು ಸೂಕ್ಷ್ಮವಾಗಿಯಾದರೂ ಕಂಡೇ ಕಾಣುತ್ತದೆ....
-ಓದಿದ ಸಾಲುಗಳು.

ಬದುಕಿನಲ್ಲಿ ಯಾರ ಜೊತೆ, ಎಷ್ಟು ತಿಂಗಳು, ಎಷ್ಟು ವರ್ಷ ಹೆಜ್ಜೆ ಹಾಕಿದೆವು ಎಂಬ ಕಾರಣಕ್ಕೆ ಯಾರೂ ಹತ್ತಿರವಾಗುವುದಿಲ್ಲ. ಆದರೆ, ಒಂದೆರಡು ನಿಮಿಷವಾದರೂ ಸರಿ ಜೊತೆಗೆ ನಡೆದವರ ಹೆಜ್ಜೆ ಗುರುತು ನಮ್ಮ ಎದೆಯಲ್ಲಿ ಎಷ್ಟ ಆಳವಾಗಿ ನಿಂತುಕೊಂಡಿದೆ ಎಂಬ ಕಾರಣಕ್ಕೆ ಆತ್ಮೀಯತೆ ಕೊಂಡಿ ಹುಟ್ಟಿಕೊಳ್ಳುತ್ತದೆ... ಅಲ್ವ
ಕಾರಣವೇ ಇಲ್ಲದ ಸ್ನೇಹದ ಸಂಕೋಲೆ ಕಾರಣವೇ ಇಲ್ಲದೆ ಕಡಿಯುವುದೇ ಸೋ ಕಾಲ್ಡ್ ಅಸಹಿಷ್ಣುತೆಯ ಕಿಡಿಗಳಿಗೆ ಕಾರಣವಲ್ವ. ಅದು ಜೀವಂತ ಸುಡದಿದ್ದರೂ ಒಳಗೊಳಗೇ ಸುಟ್ಟು ಶಿಥಿಲವಾಗಿಸಲ ಸಾಕು ಆ ಅಸಹಿಷ್ಣುತೆಯ ಕಿಡಿ.
ಆತುರ, ಭ್ರಮೆ ಮತ್ತು ನಿರೀಕ್ಷೆಗಳೇ ಬಹುಷಃ ಸಂಬಂಧಗಳ ತಳಹದಿಗೆ ಪೆಟ್ಟು ಹಾಕುವುದು ಅಥವಾ ಅಪನಂಬಿಕೆಗಳ ಬೇಲಿಗಳನ್ನು ನಿರ್ಮಿಸುವುದು...
ಬೇಕಿದ್ದರೆ, ನಿಮ್ಮ ಬಾಳ ದಾರಿಯನ್ನು ಒಮ್ಮೆ ತಿರುಗಿ ನೋಡಿ... ಮರೆತಿದ್ದರೆ ತಲೆ ಕೆರೆದುಕೊಂಡು ನೋಡಿ. ಓ ಅಲ್ಲಿ, 10-15 ವರ್ಷಗಳ ಹಿಂದೆ ಜೊತೆ ಜೊತೆಗೆ ಹೆಜ್ಜೆ ಹಾಕಿದವರೆಲ್ಲಾ ಒಟ್ಟಿಗೆ ಇದ್ದಾರಾ...


ಇಲ್ವಲ್ಲ... ಕಾಲನ ಓಟದ ರೇಸಿನಲ್ಲಿ ಹಿಂದುಳಿದವರುು, ಕಳೆದುಕೊಂಡವರು, ನಂಬರನ್ನೂ ಕೊಡದೆ ನಾಪತ್ತೆಯಾದವರು, ಕೂದಲೆಳೆ ಅಂತರದಲ್ಲಿ ಕೈ ತಪ್ಪಿಹೋದವರು ಹತ್ತಾರು ಜನರಾದರೆ, ಶುರುವಿನಲ್ಲಿ ಹೇಳಿದ ಹಾಗೆ ಭದ್ರವಾದ ಹೆಜ್ಜೆ ಊರಿ ನಡೆದವರೂ ಎಂತಹದ್ದೋ ಒಂದು ಇಗೋ ಪ್ರಾಬ್ಲಂಗೆ, ಯಾರೋ ಗೀರಿದ ಅಪನಂಬಿಕೆಯ ಬೆಂಕಿ ಕಡ್ಡಿಗೆ ಬಿಸಿಯಾಗಿ ಅಂತರ ಕಾಯ್ದು ಬಳಿಕ ಮರೆಯಾದವರೂ ಇದ್ದಾರು...
ಯೋಚಿಸದೆ ಆಡುವ ಮಾತು, ಸಲುಗೆಯೆಂಬ ಭ್ರಮೆ, ನಾನಂದುಕೊಂಡಂತೆ ಅವನಿರಬೇಕೆಂಬ ನಿರೀಕ್ಷೆಗಳೆಲ್ಲ ಒಂದಲ್ಲ ಒಂದು ದಿನ ಕಾಗದವನ್ನು ಹರಿಯುವುದು ಖಚಿತ. ಹರಿಯಬಾರದೆಂದಿದ್ದರೆ ಕಾಗದವನ್ನು ಜೋಪಾನವಾಗಿ ಕಾಪಿಡಬೇಕು. ಎಚ್ಚರದಿಂದ ಎತ್ತಿ ಒಯ್ಯಬೇಕು. ಹರಿದ ಬಳಿಕ ಜೋಡಿಸಲು ಯತ್ನಿಸಿದರೂ ಎರಡೂ ತುಂಡುಗಳು ಅನುಭವಿಸಿದ ನೋವನ್ನು ತೊಡೆದು ಹಾಕಲು ಅಸಾಧ್ಯ.

ಯಾಕೆ ಕಾಗದ ಹರಿಯುತ್ತದೆ...

-ಆತ್ಮೀಯರಲ್ಲಿ ಸಲುಗೆ, ಆತ್ಮೀಯತೆ, ಅಧಿಕಾರವಹಿಸಿ ಮಾತನಾಡುವುದೂ ಕೆಲವೊಮ್ಮೆ ಮುಳುವಾಗಬಹುದು. ನೀವೇನೋ ಅನ್ಯತಾ ಭಾವಿಸದೆ ನೀಡುವ ಒಂದು ಸಲಹೆ, ಒಂದು ಕಿವಿಮಾತ, ಒಂದು ಹಾಸ್ಯದ ಹೊನಲು, ತುಂಟನಗೆಯೂ ಕೆಲವೊಮ್ಮೆ ಸಮಯ ಸಂದರ್ಭ ಚೆನ್ನಾಗಿಲ್ಲದಿದ್ದರೆ ವ್ಯತಿರಿಕ್ತವಾಗಬಹುದು. ಏನೋ ಹೇಳಿದ್ದು ಇನ್ನೇನೋ ಅರ್ಥವಾಗಿ ಹೋದರೆ ಅಪಾರ್ಥಗಳು ಹುಟ್ಟಿಕೊಂಡು, ಮುಖಕ್ಕೆ ಹೊಡದಂತಹ (ಮುಂಗೋಪಿಗಳಿಗೆ ಅನ್ವಯ) ಪ್ರತ್ಯುತ್ತರ ಸಿಕ್ಕಿ, ಒಂದು ಅಸಹನೆ ಹುಟ್ಟಿ....ನಿಮ್ಮ ಸ್ನೇಹ ಅಲುಗಾಡಬಹುದು. ಒಂದುು ಮಾತು, ಒಂದು ಹೆಚ್ಚಿನ ಸಾಲು, ಒಂದು ನಗು ಸಾಕು ಅಪಾರ್ಥದ ಕ್ಷಣವನ್ನು ಹುಟ್ಟುಹಾಕಲು.
-ನಿಮ್ಮ ಬಗ್ಗೆ ಇನ್ಯಾರಲ್ಲೋ ವಿನಾಕಾರಣ ಹುಟ್ಟಿಕೊಂಡ ಅಪನಂಬಿಕೆ, ಅಪಾರ್ಥಗಳು ನಕಾರಾತ್ಮಕ ದೃಷ್ಟಿಕೋನವನ್ನೇ ಕಾಣಿಸುತ್ತದೆ. ಅವರಾಗಿಯೇ ಅಪಾರ್ಥ ಮಾಡಿಕೊಂಡರೋ, ಕಾಲದ ಮಹಿಮೆಯೋ ಅಥವಾ ಇನ್ಯಾರೋ ಕಿವಿತುಂಬಿಸಿ ಅಪಾರ್ಥವನ್ನು ರೆಡಿ ಮಾಡಿ ಕೊಟ್ಟರೋ ಮನಸ್ಸಿನಲ್ಲಿ ಆ ವೈರಸ್ ಇರುವಷ್ಟೂ ಹೊತ್ತು ನೀವೇನು ಮಾಡಿದರೂ, ಆಡಿದರೂ ಅದು ಕೆಟ್ಟದ್ದಾಗಿಯೇ, ಅಪಾರ್ಥಕ್ಕೀಡಾವುಂತೆಯೇ ಕಾಣಿಸುತ್ತದೆ. ಉದಾಹರಣೆಗೆ-ಕಳೆ ಕೀಳಲು ಕೈಯ್ಯಲ್ಲಿ ಕತ್ತಿ ಹಿಡಿದು ಹೋದರೆ ಅದು ಕೊಲ್ಲಲು ಬಳಸುವ ಮಚ್ಚಿನ ಹಾಗೆ ಅನ್ನಿಸಬಹುದು. ಅದು ತಲೆಯೊಳಗಿರುವ ವೈರಸ್ ದೂರವಾಗುವ ವರೆಗೆ ಹಾಗೆಯೇ... ನಮ್ಮ ಬಗ್ಗೆ ನಮಗೆ ವಿಶ್ವಾಸ ಇರುವ ತನಕ ಯಾರ ತಲೆಯಿಂದಲೂ ನಾನು ಹಾಗಲ್ಲ ಹೀಗೆ ಎಂದು ನಂಬಿಸುವ, ಸಾಬೀತುಪಡಿಸುವುದು ವೇಸ್ಟ್ ಮತ್ತು ವ್ಯರ್ಥಪ್ರಯತ್ನ ಕೂಡಾ. ನಾವು ಹೇಗೆ ಎಂಬುದು ನಮ್ಮ ನಡತೆಯಿಂದ ತಿಳಿಯಬೇಕು ವಿನಹ ನಾವು ಹಚ್ಚುವ ಸೋಪಿನಿಂದಲ್ಲ.
-ದುಡುಕಿ ಆಡುವ ಮಾತಿನ ಪರಿಣಾಮ ನಮಗೆ ತಿಳಿಯುವುದಿಲ್ಲ. ಮಾತಿಗೆ ಪ್ರತಿ ಮಾತು ಹೇಳುವ ಸಂದರ್ಭ, ಅದರ ಪರಿಣಾಮಗಳನ್ನು ಆ ಕ್ಷಣಕ್ಕೆ ತಿಳಿಯದೇ ಹೋದರೆ ಅದರ ದೂರಗಾಮಿ ಪರಿಣಾಮ ತಿಳಿಯುವ ಹೊತ್ತಿಗೆ ಆಗಬಾರದ್ದು ಆಗಿ ಹೋಗಿರುತ್ತದೆ. ಯೋಚಿಸದೆ ನಿಮ್ಮ ಆತ್ಮೀಯರೊಬ್ಬರ ಬಗ್ಗೆ ಕಠಿಣವಾಗಿ ಒಂದು ಮಾತು ಹೇಳಿ, ಸ್ವಲ್ಪ ಹೊತ್ತಿನ ಬಳಿಕ ನಮಗೇ ಅದರಿಂದಾಗಬಹುದಾದ ಇತರ ಅರ್ಥಗಳು ಮನವರಿಕೆಯಾಗಿ, ಹಾಗಲ್ಲ ಕಣೋ... ಹೀಗೆ ಎಂದು ತಿಳಿಹೇಳುವ ಎಂದುಕೊಂಡರೆ, ಆ ಹೊತ್ತಿಗೆ ನೊಂದುಕೊಂಡಿರುವ ಅವರು ಕಿವಿ ಕೇಳಿಸದಷ್ಟು ದೂರ ಹೋಗಿ ಆಗಿರಬಹುದು.... ಮತ್ತೆ ಕಾಗದ ಅಂಟಿಸುವುದಷ್ಟೇ ನಾವು ಮಾಡಬಹುದಾದ ವ್ಯರ್ಥಪ್ರಯತ್ನ. ನನ್ನ ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ಸಿಕ್ಕಲಿ ಅಂತ ಹಂಬಲಿಸುವ ನಾವು ದುಡುಕಿನ ಕೈಗೆ ಸಿಕ್ಕು ಮತ್ತೆ ಅಂತಹದ್ದೆ ತಪ್ಪು ಮಾಡುವಾಗ ಈ ಸಂದಿಗ್ಧತೆಗಳೆಲ್ಲ ಹೇಳಹೆಸರಿಲ್ಲದೆ ಹೈಡ್ ಆಗಿರುತ್ತವೆ ಅನ್ನುವುದು ವಿಪರ್ಯಾಸ.
-ನಮ್ಮಬಗ್ಗೆ ನಮಗೆ ನಿಯಂತ್ರಣವಿರುತ್ತದೆ ಹೊರತು, ಸಮಾಜವನ್ನು ರಿಪೇರಿ ಮಾಡುವ, ಯಾವುದೂ ಸರಿ ಇಲ್ಲ ಎಂದು ಹೇಳುವ ಅಧಿಕಪ್ರಸಂಗದ ಹೊಣೆಗಾರಿಕೆ ಯಾರೂ ನಮಗೆ ಕೊಟ್ಟಿಲ್ಲ. ಹಾಗಾಗಿ ನೀನು ಹೀಗೆಯೇ ಇರು, ಹೀಗಿಲ್ಲದಿದ್ದರೆ ನಾನು ಇಷ್ಟಪಡುವುದಿಲ್ಲ ಇತ್ಯಾದಿ ನಿರೀಕ್ಷೆಗಳು ಸಂಬಂಧಗಳನ್ನು ಅಲುಗಾಡಿಸುವ ವಿಷವಸ್ತುಗಳು. ನೀನು ಹೀಗೆ ಅಂತ ಅಂದುಕೊಂಡಿಲ್ಲ ಎಂದು ಹೇಳುವುದೂ ನಮ್ಮ ಅತಿ ನಿರೀಕ್ಷೆಯ ಭಾಗವೇ ಆಗಿರುವುದರ ಪರಿಣಾಮ (ಕೆಲವೊಮ್ಮೆ). ಹಾಗಾಗಿ ಜಾಸ್ತಿ ನಿರೀಕ್ಷೆ ಇರಿಸಿ, ನಿನ್ನಿಂದ ನನಗೆ ಬೇಸರವಾಯಿತು ಎಂದರೆ ಆ ನಿರೀಕ್ಷೆಯ ಉತ್ತರದಾಯಿತ್ವ ನಾವೇ ಹೊರಬೇಕಾಗುತ್ತದೆ ಅಲ್ವೇ... ಯೋಚಿಸಿ ನೋಡಿ.
-ನಾವೇ ಇಷ್ಟಪಟ್ಟು ಯಾರನ್ನೋ ಆತ್ಮೀಯರೆಂದುಕೊಳ್ಳುತ್ತೇವೆ, ಸ್ನೇಹಿತರನ್ನಾಗಿಸುತ್ತೇವೆ. ಆ ಸ್ನೇಹ ಸಂಬಂಧ ಚಿಗುರುವಲ್ಲಿ ನಮ್ಮ ಪಾತ್ರವೂ ಇದೆ. ಹಾಗಿರುವಾಗ ಏಕಾಏಕಿ ಅವರ ಬಗ್ಗೆ ತಪ್ಪು ಕಲ್ಪನೆ ಮೂಡಿತು, ಸಿಟ್ಟು ಬಂತು ಅಂತಾದರೆ ಸ್ವಲ್ಪ ತಾಳ್ಮೆಯಿಂದ ಯೋಚಿಸಬೇಕು. ಹಿಂದೆ ಮುಂದೆ ನೋಡದೆ, ಕೂಗಾಡುವುದಾದರೆ ಅಷ್ಟು ದಿನದ ಆತ್ಮೀಯತೆಗೆ ಏನು ಬೆಲೆ ಕೊಟ್ಟ ಹಾಗಾಯಿತು...
-------------------
ಹಾಗೇ ಸುಮ್ಮನೆ...

-ದುಡುಕು, ನಿರೀಕ್ಷೆ, ಅಪಾರ್ಥ ಮನುಷ್ಯ ಸಹಿಜ ಭಾವನೆ... ಆದರೆ, ಪರಿಸ್ಥಿತಿ ಒತ್ತಡಗಳಿಗೆ ಸಿಲುಕಿ ಭಾವೋದ್ವೇಗಕ್ಕೊಳಗಾಗಿ ನಾಲ್ಕು ಮಾತು ದುಡುಕಿ ಆಡಬೇಕು ಅನ್ನಿಸುವ ಸಂದರ್ಭ ಬಂದರೂ ತಾಳ್ಮೆ ವಹಿಸಿ. ಯಾಕೆಂದರೆ ಕೋಪದ ಕೈಗೆ ಸಿಲುಕುವ ಮನಸ್ಸು ಮುಖಕ್ಕೆ ಹೊಡೆದಂತೆ ಹೇಳಿ ಬಿಟ್ಟರೆ ಅಷ್ಟು ದಿನ ನೀವು ಗೌರವಿಸಿದ ಆ ಜೀವಕ್ಕೆ ಆಗುವ ನೋವನ್ನು ಅರ್ಥಮಾಡಿಕೊಳ್ಳಬೇಕು. ದುಡುಕಿ ಮಾತನಾಡುವುದು, ನಾವಾಗಿ ಕೈಯ್ಯಾರೆ ಕಾಗದ ಹರಿಯುವುದು ಎರಡೂ ಒಂದೇ ಅಲ್ವ.
-ಮೌನಿಗಳಾದರೂ ಪರವಾಗಿಲ್ಲ, ಅದರಿಂದ ಯಾರಿಗೂ ತೊಂದರೆಯಾಗದು. ಅತಿರೇಕದ ಮಾತು, ದುಡುಕುವ ಮನಸ್ಸಿನ ಬೈಗುಳ ಎಲ್ಲ ಅಪಾಯಕಾರಿ. ಆಡಿದ ಮಾತನ್ನು ತಿದ್ದಲು, ಸಮರ್ಥಿಸಲು ಹಾಕುವ ಶ್ರಮದ ಬದಲು ಆ ಹೊತ್ತಿಗೆ ಶರಣಾಗುವ ಮೌನ ಉಳಿಸುತ್ತದೆ. ಒಂದು ಮಾತು ಆಡದಿದ್ದರೆ, ತಡವಾಗಿ ಆಡಿದರೂ ಅದು ಒಂತು ಉತ್ತಮ ಸಂಬಂಧವನ್ನು ಉಳಿಸಬಹುದು.
-ಕೆಲವೊಮ್ಮೆ ತಿಳಿಯದೆ ಪ್ರಮಾದವಾಗುತ್ತದೆ, ಕೆಲವೊಮ್ಮೆ ಏನೋ ಹೇಳಲು, ಮಾಡಲು ಹೋಗಿ ಇನ್ನೇನೋ ಆಗಿಬಿಡುತ್ತದೆ. ಸಮಯ, ಸಂದರ್ಭ ಪರಾಮರ್ಶಿಸದೆ ಅದರ ವಿಮರ್ಶೆಯನ್ನು ಕೋಪದ ಕೈಗೆ ಕೊಟ್ಟು ಮಾಡಿಬಿಟ್ಟರೆ ಮತ್ತೆ ಪಶ್ಚಾತ್ತಾಪಪಡಬೇಕಾದೀತು.

ಅದಕ್ಕೆ ಬಲ್ಲವರು ಹೇಳಿದ್ದು ಮಾತು ಬೆಳ್ಳಿ... ಮೌನ ಬಂಗಾರ. ಮೌನದೊಳಗಿನ ಅಳು ನಿಮ್ಮನ್ನು ಮಾತ್ರ ಸುಡುತ್ತದೆ. ಮಾತಿನಲ್ಲಿ, ಸಿಟ್ಟಿನಲ್ಲಿ ಹೊರಬರುವ ಆಕ್ರೋಶ ಎದುರಿನವರನ್ನು, ಅಕ್ಕಪಕ್ಕದವರನ್ನೂ ಸುಡುತ್ತದೆ. ಯಾವುದು ಬೆಟರ್...?

1 comment:

Pavana Shetty said...

ಬಹಳ ಒಳ್ಳೆ ಬರಹ KM👌👌