‘ಒರಟ’

ಮೊದ ಮೊದಲು ನಿಮ್ಮ ದುಡುಕು, ಸಿಟ್ಟನ್ನು ಅಕ್ಕಪಕ್ಕದವರು, ಸ್ನೇಹಿತರು ಸಹಿಸಿಕೊಂಡಾರು. ಆದರೆ ಕೂತಲ್ಲಿ, ನಿಂತಲ್ಲಿ ಸಿಟ್ಟು ಬರುತ್ತದೆ ಎಂದಾದರೆ, ನಿಮ್ಮಿಂದ ಉಗಿಸಿಕೊಳ್ಳುವುದೇ ನಿಮ್ಮ ಆಪ್ತರ ಪಾಡು ಎಂದಾದರೆ ನೀವೊಬ್ಬ ‘ಒರಟ’ ಎನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಸಿಟ್ಟಿನಲ್ಲಿ ಆಡುವ ಮಾತಿನ ಬಗ್ಗೆ ಎಚ್ಚರವಿರಲಿ. ಸಿಟ್ಟಿನಲ್ಲಿ ಆಡಿದ ಮಾತು ವಿವೇಚನೆಗೆ ತಲಪುವಾಗ ತುಂಬಾ ತಡವಾದೀತು!
ಅಯ್ಯೋ ಹಂಗಂದ್ ಬಿಟ್ರಾ? ಹೇಳಿ ಆಯ್ತಾ? ಮೆಸೇಜ್ ಮೂವ್ ಆಯ್ತ? ಏನೂ ಮಾಡೋಕಾಗಲ್ಲ. ತಲೆ ತಲೆ ಚಚ್ಚಿಕೊಳ್ಬೇಕಷ್ಟೆ!
ಗಡಿಬಿಡಿಯ ಬದುಕು, ಈಗಲೂ ದಿನಕ್ಕೆ ೨೪ ಗಂಟೆ ಇದ್ರೂ ಪುರ್ಸೊತ್ತಿಲ್ಲದ ಓಡಾಟ, ಅಂಗೈ ಬಿಟ್ಟು ಕದಲದ ಮೊಬೈಲ್‌ನಲ್ಲಿ ಮೆಸೇಜ್‌ಗಳ ಹರಿದಾಟ. ಖಾಸಗಿತನವೇ ಇಲ್ಲವೇನೋ ಎಂಬಂತ ಭಾವನೆ ನಡುವೆ ದುಡುಕಿ ಆಡುವ ಮಾತುಗಳು ಮತ್ತಷ್ಟು ಸಂಕಷ್ಟ ಉಂಟು ಮಾಡುವುದು ಸುಳ್ಳಲ್ಲ.
ಸಾಧು ಹಸುವಿನಂತೆ ಕಾಣೋ ಮನುಷ್ಯ ಪ್ರಾಣಿಯೂ ಸಿಟ್ಟು ಬಂದಾಗ ಇನ್ನೊಂದು ಮುಖ ತೋರಿಸ್ತಾನೆ. ಅಥವಾ ಸಿಟ್ಟು ಆ ದರ್ಶನ ಮಾಡಿಸುತ್ತದೆ. ಆಲ್ಕೋಹಾಲ್ ತಗೊಂಡು ಮಾತಾಡೋದಕ್ಕು, ಸಿಟ್ಟು ನಮ್ಮನ್ನು ಮಾತಾಡಿಸೋದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇರೋದಿಲ್ಲ. ಅಲ್ಲಿ ಮಾತುಗಳನ್ನು ಸೆನ್ಸರ್ ಮಾಡಲು ಜಗತ್ತಿನ ಯಾವ ಶಕ್ತಿಗೂ ಅಸಾಧ್ಯವೇನೋ. ನಿತ್ಯ ಬದುಕಿನಲ್ಲಿ ಮನಸ್ಸಿನಲ್ಲಿ ಹುಟ್ಟುವ ಮಾತು, ಅನಿಸಿಕೆ, ಸಿಟ್ಟು, ಸೆಡವು, ಬೇಸರಗಳನ್ನೆಲ್ಲಾ ‘ಉಪೇಂದ್ರ’ ಸಿನಿಮಾ ಹೀರೋ ಥರ ಫಿಲ್ಟರ್ ಇಲ್ಲದೇನೇ ಹೇಳ್ಕೊಂಡು ತಿರುಗಾಡೋದಕೆ ಸಾಧ್ಯವಿಲ್ಲ. ಯಾಕೆಂದರೆ ಒಂದು ಸಭ್ಯತೆ, ಶಿಷ್ಟಾಚಾರ, ಸಹನೆಯಿಂದ ಬದುಕುವ ವ್ಯವಸ್ಥೆ ನಮ್ಮದು. ಹೇಳೋದಕ್ಕೂ, ಕೇಳೋದಕ್ಕೂ ಒಂದು ವ್ಯವಸ್ಥೆಯನ್ನು ಹಿರಿಯರು ರೂಪಿಸಿದ್ದಾರೆ. ಎಲ್ಲರೂ ಹಂಗಂಗೇ ಮಾತಾಡಿಬಿಟ್ಟರೆ ‘ಒಂದು ಸಿಟ್ಟು ಬಂದು ಬಾವಿಗೆ ಹಾರಿದಾತ, ಇನ್ನೊಂದು ಸಿಟ್ಟು ಬಂದಾಗ ಮೇಲೆ ಬರಲಾರ’ ಎಂಬಂಥ ಸಂಧಿಗ್ಧತೆಗೆ ಕಾರಣವಾಗುತ್ತದೆ.


ಎಲ್ಲಾ ಮಾತೂ, ಎಲ್ಲೂ ಸಂಭಾಷಣೆಯನ್ನು ರಿಹರ್ಸಲ್ ಮಾಡಿ ಆಡಲು ಅಸಾಧ್ಯ, ನಿಜ. ಆದರೆ, ತಲೆಯೆಂಬೋ ಸಿ.ಪಿ.ಯು.ನಲ್ಲಿರುವ ವಿವೇಚನೆ ಎಂಬ ಸಾಫ್ಟ್‌ವೇರ್ ಬಳಸಿ ಯೋಚಿಸಿ ಮಾತನಾಡಬೇಕಾದ ಜವಾಬ್ದಾರಿ ಜೊತೆಗೆ ಕರ್ತವ್ಯವೂ ನಮಗಿದೆ. ಯಾಕೆಂದರೆ ಸಂಬಂಧದ ತಳಹದಿ ಸಂವಹನ, ಸಂವಹನದ ಪ್ರಬಲ ಮಾಧ್ಯಮ ಮಾತು (ಮೆಸೇಜ್, ಬರಹ ಎಲ್ಲವೂ). ಅವು ಸರಿಯಾಗಿ ಸಂವಹನ ಆಗದ ಹೊರತು ಸಂಬಂಧವೂ ಉಳಿಯಲಾರದು.


ಸಿಟ್ಟಿನಿಂದಲೇ ಇಕ್ಕಟ್ಟು: ಆವಾಗ್ಲೇ ಹೇಳಿದ ಹಾಗೆ ಸಿಟ್ಟು ಬಂದಾಗ ವಿವೇಕ ಕೈಕೊಟ್ಟಿರುತ್ತದೆ. ಏನು ಯೋಚನೆ ಬರುತ್ತದೆ, ಏನು ಮಾತು ಹೊರಡುತ್ತದೆ, ಏನು ರೋಷ ಹೊರ ಹೊಮ್ಮುತ್ತದೆ ಹೇಳಲಾಗದು. ಆಗ ಆರೋಪಿಗಳು.ಅಪರಾಧಿಗಳು, ನಿರಪರಾಧಿಗಳು ಎಲ್ಲರ ಮೇಲೂ ರೋಷ ಹುಟ್ಟಿ ಸಾರಾಸಗಟಾಗಿ ಬೈಯ್ದು ಬಿಡುವ ಸಂದರ್ಭಗಳೂ ಇರುತ್ತವೆ. ಬೈದು ಎಷ್ಟೋ ಹೊತ್ತಾಗಿ ಆವೇಶ ಇಳಿದ ಮೇಲೆ ಬೈದವನಿಗೇ ಅನ್ನಿಸುವುದೂ ಇದೇ, ಇಷ್ಟೆಲ್ಲಾ ಬೇಕಿತ್ತ ಅಂತ. ಕೊನೆಗೊಮ್ಮೆ ತಪ್ಪು ತನ್ನದೇ ಎಂಬಂಥ ಸಂದರ್ಭ ಅರ್ಥವಾಗುವ ಹೊತ್ತಿಗೆ ಬೈಗುಳ ತಿಂದಾತ ಎಲ್ಲೋ ಕಣ್ಮರೆಯಾಗಿರುತ್ತಾನೆ. ಒಂದು ಯಕಶ್ಚಿತ್ ಸಿಟ್ಟು ಒಂದು ಚೆಂದದ ಸಂಬಂಧದ ಬುಡಕ್ಕೆ ಪೆಟ್ಟು ಹಾಕುತ್ತದೆ. ಪದೇ ಪದೇ ಹೀಗಾದಾಲೂ ಯಾಕೆ ನಾವು ಬುದ್ಧಿ ಕಲಿಯುವುದಿಲ್ಲ.


.....................
ಹೀಗೆ ಮಾಡಿ:


೧) ಸಿಟ್ಟು ಜಾಸ್ತಿಯಾದರೆ ಮೌನಕ್ಕೆ ಶರಣಾಗಲು ಪ್ರಯತ್ನಿಸಿ. ಸಂಭಾಷಣೆಯ ಸುರಕ್ಷಿತ ವಲಯ ಮೌನ!
೨) ಮಾತು, ಮೆಸೇಜು, ಬರವಣಿಗೆಗೆ ಸಿಟ್ಟು ಕಡಿಮೆಯಾಗುವ ತನಕ ರೆಸ್ಟ್ ಕೊಡಿ.
೩) ಯಾರಿಗೋ ಬೈಯ್ಯಲು, ಯಾರನ್ನೋ ನಿಂದಿಸಲು ಏನನ್ನೋ ಟೈಪ್ ಮಾಡಿದರೂ ಆ ಕ್ಷಣಕ್ಕೆ ಅದನ್ನು ಕಳುಹಿಸುವ ಆತುರ ಬೇಡ. ಸಿಟ್ಟು ಶಮನವಾಗುವ ತನಕ ಕಾಯಿರಿ
೪) ಸಾಮಾಜಿಕ ಜಾಲ ತಾಣಗಳಲ್ಲಿ ನಿಮ್ಮ ಸಿಟ್ಟು, ಸೆಡವು ತೋರಿಸುವ ಬರಹ, ಫೋಟೊ ಹಾಕುವ ಕೆಟ್ಟ ಹಪಹಪಿಕೆ ಬಿಡಿ.
೫) ಸಿಟ್ಟು ಶಮನಕ್ಕೆ ಮಾರ್ಗ ಹುಡುಕಿ. ನಿಮ್ಮ ಆತ್ಮೀಯ ಜೀವಗಳಿಗೊಂದು ಕರೆ ಮಾಡಿ ಮಾತನಾಡಿ, ಒಂದು ನಡಿಗೆ ಹೋಗಿ, ಇಷ್ಟದ ಹಾಡು ಕೇಳಿ. ಏನೂ ಇಲ್ಲದಿದ್ದರೆ ಸಣ್ಣದೊಂದು ನಿದ್ರೆ ಮಾಡಿ ಫ್ರೆಶ್ ಆಗಿ.
೬) ಸಿಟ್ಟಿನಲ್ಲಿ ಹೇಳಿದ ಮಾತನ್ನು ಮತ್ತೆ ರಿಪೇರಿ ಮಾಡಲಾಗದು. ಅದರಿಂದಾಗುವ ದುಷ್ಟರಿಣಾಮಗಳೇನು ಅನ್ನುವುದು ಪದೇ ಪದೇ ನಿಮ್ಮ ಗಮನದಲ್ಲಿರಲಿ. ಹಾಗಿದ್ದಾಗ ಸಿಟ್ಟಿನ ಸೈಡ್ ಇಫೆಕ್ಟ್‌ಗಳು ಸದಾ ನೆನಪಲ್ಲಿರುತ್ತದೆ.
೭) ನಿಮ್ಮದು ದುಡುಕು ಸ್ವಭಾವವಾದರೆ ನಿಮ್ಮ ಸ್ನೇಹಿತರಿಗೂ ಅದನ್ನು ತಿಳಿಸಿ. ಕೊನೆಪಕ್ಷ ನಿಮ್ಮನ್ನು ಅರ್ಥ ಮಾಡಿಕೊಳ್ಳಲಾದರೂ ಪ್ರಯತ್ನಿಸಿಯಾರು!
೮) ವಿನಾ ಕಾರಣ ಸಿಟ್ಟು ಬರಿಸುವವರಿಂದ ದೂರವಿರಲು ಪ್ರಯತ್ನಿಸಿ, ಅವರನ್ನು ಕಂಡು ನಕ್ಕು ಸುಮ್ಮನಾಗಿ
೯) ಯಾರ ಕುರಿತಾದರೂ ಪೂರ್ವಾಗ್ರಹದಿಂದ ದ್ವೇಷದ ಮೂಟೆಯನ್ನು ಕಟ್ಟಿ ಕೂರಬೇಡಿ. ಹೇಳಲಿರುವುದನ್ನು ನೇರವಾಗಿ ಹೇಳಿಬಿಡಿ. ಇಲ್ಲವಾದಲ್ಲಿ ಕೋಪ ಬಂದಾಗ ಅವೆಲ್ಲಾ ವಾಂತಿಯಾದೀತು!
೧೦) ದುಡುಕಿ ಆಡುವ ಮಾತು ನಿಮ್ಮನ್ನು ಘಾಸಿಗೊಳಿಸುವಂತೆ, ನಿಮ್ಮಿಂದ ಬೈಸಿಕೊಂಡವನನ್ನೂ ಅದು ಗಾಯಗೊಳಿಸುತ್ತದೆ ಎಂಬ ಸಾಮಾನ್ಯಜ್ಞಾನವಿರಲಿ!

No comments: