ಜೀಪೆಂಬೋ ಕನಸಿನ ಬಂಡಿ...





ಚಿಕ್ಕವನಿದ್ದಾಗ ಅಜ್ಜನಮನೆಯ ಹತ್ತಿರದ ಪೆರ್ಲದ ಪೇಟೆಯ ತುಂಬಾ ಇದ್ದ ಟ್ಯಾಕ್ಸಿಗಳೆಂದರೆ ಮಹೀಂದ್ರ ಜೀಪುಗಳು. ಆಗ ಆಟೋಗಳು ಬಹುತೇಕ ಆ ಭಾಗದಲ್ಲಿ ಇರಲಿಲ್ಲವೋ ಏನೋ... ಅದು ಬಿಟ್ಟರೆ ಅಂಬಾಸಿಡರ್ ಕಾರುಗಳು. ಕಾರುಗಳು, ಆಟೋಗಳಿಗೆ  ಹಳ್ಳಿಗಳ ದೊಡ್ಡ ದೊಡ್ಡ ಕಲ್ಲುಗಳು ಎದ್ದುನಿಂತ ಕಚ್ಛಾರಸ್ತೆಯಲ್ಲಿ ಓಡಲು ಸಾಧ್ಯವೇ ಇರಲಿಲ್ಲ. ಹಾಗಾಗಿ "ಯಾರೇ ಬಂದರೂ... ಇನ್ಯಾರೇ ನಿಂದರೂ .... ನೀನೇ ಯಜಮಾನಾ..." ಅಂತ ಓಡಾಡ್ತಾ ಇದ್ದದ್ದು ಜೀಪುಗಳು ಮಾತ್ರ. ಇವೇ ಜೀಪುಗಳು ಎಳವೆಯ ಕನಸು ಕಣ್ಣುಗಳ ಸಶಕ್ತ ವಾಹನ ಮಾತ್ರವಲ್ಲ, ಮುಂದೊಮ್ಮೆ ಆದರೆ ಜೀಪು ಡ್ರೈವರ್ರೇ ಆಗಬೇಕು ಅಂತ ಅನ್ನಿಸುವಷ್ಟು ಹುಡುಗರನ್ನು ಕಾಡುತ್ತಿದ್ದದ್ದು ಸುಳ್ಳಲ್ಲ...

.....

ಆಗ ಪೆರ್ಲದಲ್ಲಿ (ಕಾಸರಗೋಡು ಜಿಲ್ಲೆ, ಕೇರಳ) ಸುಮಾರು 15-20 ಜೀಪುಗಳು ಇದ್ದವೇನೋ. ಮನೆಗಳಿಗೆ ಸಾಮಾನು ಸರಂಜಾಮು ಒಯ್ಯುತ್ತಿದ್ದದ್ದೂ ಇದೇ ಜೀಪು, ಮದುವೆ ದಿಬ್ಬಣಕ್ಕೆ ಎರಡು ಬಾಳೆ ಗಿಡಗಳನ್ನು ಕಟ್ಟಿದರೆ ಇದೇ ಜೀಪು ಐಶಾರಾಮದ ಗಾಡಿಯಾಗಿ ರೆಡಿ. ಮತ್ತೆ ಯಾರಿಗಾದರೂ ಹುಶಾರಿಲ್ಲದೆ ಕಂಗಾಲಾದಾಗ ಕಾಸರಗೋಡಿಗೋ, ಮಂಗಳೂರಿಗೋ, ಮಣಿಪಾಲಕ್ಕೋ ಕರೆದೊಯ್ಯುತ್ತಾ ಇದ್ದದ್ದು ಇದೇ ಜೀಪುಗಳು. ಕಠಿಣ ರಸ್ತೆಯಿದ್ದ ಮನೆಗಳಿಂದ ಗರ್ಭಿಣಿಯರು ಹೆರಿಗೆಗೆ ಹೋಗ್ತಾ ಇದ್ದದ್ದು ಜೀಪುಗಳಲ್ಲಿಯೇ ಬಹುಶಹ. ಮಾತ್ರವಲ್ಲ, ಪೆರ್ಲದಿಂದ ವಿಟ್ಲಕ್ಕೆ, ಅಡ್ಕಸ್ಥಳದಿಂದ ಪುತ್ತೂರಿಗೆ ಬೆರಳೆಣಿಕೆಯ ಬಸ್ಸುಗಳಿದ್ದ ದಿನಗಳಲ್ಲೇ ಇದೇ ಜೀಪಿನಲ್ಲಿ 14-15 ಮಂದಿಯನ್ನು ತುಂಬಿಕೊಂಡ "ಸರ್ವೀಸು ಜೀಪು" ಹೆಸರಿನ ಸಾರಿಗೆ ವ್ಯವಸ್ಥೆಯನ್ನು ಮರೆಯಲು ಸಾಧ್ಯವೇ ಇಲ್ಲ....ಆ ಜೀಪಿನಲ್ಲಿ ಮೆಟ್ಟಿಲಿನಲ್ಲೇ ನೇತಾಡುತ್ತಾ ದುಡ್ಡು ಸಂಗ್ರಹ ಮಾಡಲು ಕ್ಲೀನರ್ ಎಂಬ ವ್ಯಕ್ತಿಯೂ ಇರುತ್ತಿದ್ದ. ಇಂದಿನ ಕ್ಲೀನರೇ ಮುಂದಿನ ಡ್ರೈವರು ಎಂಬ ಮಾತೂ ಜನಜನಿತವಾಗಿತ್ತು.

.....

ಡ್ರೈವರಿಗೆ ಆಕ್ಸಿಲೆಟರ್, ಬ್ರೇಕ್ ಒತ್ತಲು ಮಾತ್ರ ಅವಕಾಶ ಸಿಕ್ಕರೆ ಸಾಕು ಎದುರಿನ ಸೀಟಿನಲ್ಲಿ. ಅವನನ್ನು ಹೊರತು ಮತ್ತೆ ನಾಲ್ಕು ಮಂದಿ ಎದುರು ಕುಳಿತರೆ, ಹಿಂದೆ ಸುಮಾರು 10 ಜನ. ಮತ್ತಿಬ್ಬರು ಹಿಂದಿನ ಡೋರಿನಲ್ಲಿ ನೇತಾಡುವುದು. ಹೀಗೆ ನೇತಾಡುವವರು ಭಯಂಕರ ಶಕ್ತಿವಂತರು ಅಂತ ನಾನು ಬಲವಾಗಿ ನಂಬಿದ್ದೆ ಎಳವೆಯಲ್ಲಿ. ಡೋರು ಕಿತ್ತು ರಸ್ತೆಗೆ ಬಿದ್ದರೆ ಏನಾಗಬಹುದೆಂಬ ಕಲ್ಪನೆ ಆಗ ಇರಲಿಲ್ಲವೆನ್ನಿ. ಡ್ರೈವರಿನ ಪಕ್ಕ ಕುಳಿತು ಆತ ಗೇರು ಚೆಂಜ್ ಮಾಡುವುದು ನೋಡುವುದೇ ದೊಡ್ಡ ಸಂಭ್ರಮವಾಗಿತ್ತು... ಜೀಪು ಸ್ಟಾರ್ಟ್ ಆಗುವಾಗ ಬರುವ ಕರ್ ಕರ್ ರ್ ರ್ ರ್ ರ್...... ಸದ್ದು, ಮತ್ತೆ ರಿವರ್ಸ್ ಹೋಗುವ ಚೆಂದ, ಜೀಪು ತೊಳೆಯುವ ಕೌತುಕ ಇವೆಲ್ಲ ಜೀಪಿನ ಬಗ್ಗೆ ವಿಶೇಷ ಮೋಹ ಹುಟ್ಟಿಸಿತ್ತು...

....

ಇಂದಿಗೂ ದಕ್ಷಿಣ ಕನ್ನಡದ ಉಪ್ಪಿನಂಗಡಿ, ಬೆಳ್ತಂಗಡಿ, ಅಡ್ಯನಡ್ಕ, ಕಾಸರಗೋಡಿನ ಪೆರ್ಲ, ಬದಿಯಡ್ಕ ಸೇರಿದಂತೆ ಹಲವು ಕಡೆ ಜೀಪುಗಳ ಪ್ರಾಬಲ್ಯ ಜೋರಾಗಿದೆ. ಉಪ್ಪಿನಂಗಡಿಯಲ್ಲಿ ಈಗಲೂ 14 ಮಂದಿಯನ್ನು ಏಕಕಾಲಕ್ಕೆ ಕರೆದೊಯ್ಯುವ ಭಯಂಕರ ಶಕ್ತಿಶಾಲಿ ಸರ್ವೀಸು ಜೀಪುಗಳಿವೆ. ಯಾವುದೇ ಅಬ್ಬರವಿಲ್ಲದ ಸರಳ ವಾಹನ ಅಲ್ವೇ... ಸಶಕ್ತ ಟಯರುಗಳು, ಕೆಸರಿನಲ್ಲಿ ಜಾರಿದರೂ ಯುವುದೇ ವಾಹನಕ್ಕೆ ಹಗ್ಗ ಕಟ್ಟಿ ಎಳೆಯಬಲ್ಲ ವಿಶೇಷ ತಾಕತ್ತು... ಉಸಿರುಕಟ್ಟಿಸುವ ಎ.ಸಿ.ಯ ಹಂಗಿಲ್ಲದೆ ಓಪನ್ ಏರ್ ಫ್ಲೋ ಸೌಲಭ್ಯ. ಎದುರಿನ ಗಾಜನ್ನು ಹಾಕಿದರೆ ಮಳೆ ನೀರೂ ನುಗ್ಗದು, ಗಾಜು ಮೇಲೆ ಸರಿಸಿದರೆ ಸಾಕಷ್ಟು ತಂಪು ಗಾಳಿಯ ಸುಖ... ಹಿಂಬದಿ ಟಾರ್ಪಲಿನ್ ಇಲಿಬಿಟ್ಟರೆ ಮಳೆ ಬರುವಾಗಲೂ ಬೆಚ್ಚಗೆ ಕುಳಿತು ಸಾಗಬಹುದು. ಅಗತ್ಯ ಬಿದ್ದರೆ ನಾಲ್ಕು ಮಂದಿ ಹೆಚ್ಚು ಜೀಪು ಏರಿದರೂ ಪುಲ್ಲಿಂಗ್ ಸಮಸ್ಯೆ ಇಲ್ಲ. ಮನುಷ್ಯರರೇ ಇಲ್ಲದಿದ್ದರೂ ಅಢಕೆ, ಹಿಂಡಿ, ತರಕಾರಿ, ತೆಂಗಿನಕಾಯಿ, ಬಾಳೆಕಾಯಿ ಕೊಂಡು ಹೋಗಲು ಜೀಪಿನಷ್ಟು ಚಂದದ ವಾಹನ ಉಂಟೇ...ಕಾಟುಕುಕ್ಕೆಯಿಂದ ಪೆರ್ಲತಡ್ಕಕ್ಕೆ ಹೋಗುವಾಗ ಪ್ರತಿದಿನ ಬೆಳಗ್ಗೆ ತಾಜಾ ಹೆಂಡವನ್ನು ಹೇರಿಕೊಂಡು ಒಂದು ಜೀಪು ದಿನಾ ಹೋಗುತ್ತಿತ್ತು (ಎಲ್ಲಿಂದ, ಎಲ್ಲಿಗೆ ಅಂತ ಗೊತ್ತಿಲ್ಲ) ಆ ಜೀಪು ಅಷ್ಟು ದೂರದಿಂದ ಬರುವಾಗಲೇ ಗೊತ್ತಾಗುತ್ತಿತ್ತು, ಗಂಗಸರ ಜೀಪು ಅಂತ. ಇದೇ ಮಹೀಂದ್ರದವರ ಪಿಕಪ್ ಎಂಬ ವಾಹನ ಬರುವುದಕ್ಕೂ ಮೊದಲು ದನಗಳನ್ನು ಸಾಗಿಸಲೂ ಇದೇ ಜೀಪುಗಳು ಬಳಕೆಯಾಗುತ್ತಿದ್ದದ್ದು....

ಕಲ್ಲಿನ ರಸ್ತೆ, ಇಲಿಜಾರು, ಚಡಾವು, ತೋಡು, ಹಳ್ಳ, ಗುಡ್ಡದ ದಾರಿಗೂ ಜೀಪೇ ಸೈ. ಅದರ ಫೋರ್ ವ್ಹೀಲ್ ಎಂಬ ಅಭೂತಪೂರ್ವ ವ್ಯವಸ್ಥೆ ಹಳ್ಳಿಗರ ಪಾಲಿಗೆ ಒಂದು ವಿಶೇಷ ಸೌಲಭ್ಯ. ಜೀಪನ್ನು ಬಾಡಿಗೆಗೆ ಬುಕ್ ಮಾಡುವ ಮೊದಲು ಪಾತಾಳ ಲೋಕದಲ್ಲಿ ಮನೆಗಳನ್ನು ಹೊಂದಿರುವವರು "ಅಣ್ಣಾ ಫೋರ್ ವ್ಹೀಲ್ ಉಂಡತ್ತೆ ?" ಅಂತ ಕೇಳುತ್ತಿದ್ದುದು ಜೀಪು ಜಾರಿ ಅರ್ಧ ರಸ್ತೆಯಲ್ಲಿ ಬಾಕಿ ಆಗದಿರಲಿ ಎಂಬ ಮುಂಜಾಗ್ರತೆಯಿಂದ...!

.....

ಆಗ ಪೆರ್ಲದಿಂದ ಅಜ್ಜನ ಮನೆ ಕಾಟುಕುಕ್ಕೆಗೆ ಬರುತ್ತಿದ್ದ ಜೀಪುಗಳ ಬಣ್ಣ, ಡ್ರೈವರ್ ಗಳ ಹೆಸರು ನಮಗೆ ಮಕ್ಕಳಿಗೆ ಬಾಯಿ ಪಾಠ ಬರುತ್ತಿತ್ತು. ಜೀಪಿನಲ್ಲಿ ಮದುವೆಗೆ, ಪ್ರವಾಸಕ್ಕೆ ಹೋಗುವಾಗ ಡ್ರೈವರ್ ಜೊತೆ ಮಾತನಾಡುವುದು ಥ್ರಿಲ್ಲಿಂಗ್ ವಿಷಯವಾಗಿತ್ತು. ಜೀಪುಗಳಲ್ಲೇ ದಿಬ್ಬಣಕ್ಕೆ ಹೋದವರು, ಜೀಪಿನಲ್ಲಿ ಕೊನೆ ಕಾಲಕ್ಕೆ ಆಸ್ಪತ್ರೆಗೆ ಹೋದವರು, ಜೀಪಿನಲ್ಲಿ ದಿನಾ ಶಾಲೆ, ಕಾಲೇಜಿಗೆ ಹೋದವರು, ಜೀಪಿನಲ್ಲೇ ಹೊಸದೊಂದು ದನವನ್ನು ಮನೆಗೆ ತಂದವರು ಸಾವಿರ ಸಾವಿರ ಮಂದಿ ಸಿಕ್ಕಾರು. ಮೂರು ದಶಕಗಳ ಹಿಂದೆ ಸ್ವಂತ ಜೀಪಿನಲ್ಲಿ ಸಮಾರಂಭಕ್ಕೆ ಬರುವುದೆಂದರೆ ಈಗಿನ ಎಸ್.ಯು.ವಿ.ಗಳಲ್ಲಿ ಬಂದು ಇಳಿದ ಹಾಗೆ. ಅದೊಂದು ಪ್ರೆಸ್ಟೀಜಿನ ಪ್ರಶ್ನೆಯಾಗಿತ್ತು. ಸುಗಮ ರಸ್ತೆಗಳು, ಹೊಸ ತಂತ್ರಜ್ನಾನದ ಕಾರುಗಳು, ಐಶಾರಾಮಿ ಆಯ್ಕೆಗಳು ಜೀಪನ್ನು ಇಂದು ಬೇರೆಯೇ ಲೆವೆಲ್ಲಿಗೆ ಕೊಂಡು ಹೋಗಿದೆ.

------

ಕೊಲ್ಲೂರು ಸಮೀಪದ ಕೊಡಚಾದ್ರಿಗೆ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ, ಹೊರನಾಡಿನ ಕ್ಯಾತನಮಕ್ಕಿ ಬೆಟ್ಟಕ್ಕೆ, ಮಡಿಕೇರಿಯ ಮಾಂದಾಲಪಟ್ಟಿಗೆ ಹೀಗೆ ಸಾಕಷ್ಟು ಗುಡ್ಡಗಾಡು ಪ್ರದೇಶಗಳಿಗೆ ಇವತ್ತಿಗೂ ಕಠಿಣ ಹಾದಿಯಲ್ಲಿ ಉಸಿರು ಬಿಗಿಗಟ್ಟಿಸಿ ಕೊಂಡೊಯ್ಯುವುದು ಜೀಪುಗಳೇ.... ಎಂಥದ್ದೇ ಐಶಾರಾಮಿ ಕಾರಿನಲ್ಲಿ ಪ್ರವಾಸ ಹೋದವರೂ ಬೆಟ್ಟದ ತುದಿಗೆ ಹೋಗಿ ಬರಲು ಜೀಪನ್ನೇ ಏರಬೇಕು. ಆ ಕುಲುಕಾಟ, ಕಲ್ಲುಗಳನ್ನು ದಾಟಿ ಹಾರುವ ಜೀಪಿನ ಟೈರುಗಳು, ಆವರಿಸುವ ಧೂಳು, ನಾಲ್ಕು ಪಕ್ಕದಿಂದ ನುಗ್ಗಿ ಬರುವ ಗಾಳಿ, ಪರದೆ ತೆಗೆಯುವ ಹಂಗಿಲ್ಲದೆ ಕಾಣುವ ಪ್ರಕೃತಿ ರಮಣೀಯ ದೃಶ್ಯಗಳಿಗೆ ಜೀಪಿನ ಪ್ರಯಾಣವೇ ರೋಚಕ ಮತ್ತು ಅನಿವಾರ್ಯ ಕೂಡಾ...



ಆದರೂ ಬಲ್ಲವರೇ ಬಲ್ಲರು ಜೀಪಿನ ಶಕ್ತಿ, ಸಾಮರ್ಥ್ಯಗಳನ್ನು. ಮಲಯಾಳಂ ಸಿನಿಮಾಗಳಲ್ಲಿ ತುಂಬ ಚೆಂದಕೆ ಈಗಲೂ ಜೀಪನ್ನು ತೋರಿಸುತ್ತಾರೆ, ಜೀಪೆಂದರೆ ಆಸೆಯಾಗುವಷ್ಟರ ಮಟ್ಟಿಗೆ. ಬಹುಪಯೋಗಿ ಎಂಬ ಹಾಗೆ. ಬಂಡಿ ವಿಡ್ರಾ ಅನ್ನುತ್ತಾ ಪಂಚೆ ಎತ್ತಿ ಕಟ್ಟಿ ಜೀಪಿಗೆ ಏರುವುದು, ಒಂದು ಕಾಲು ಹೊರಗೆ ಹಾಕಿ ಕೂರುವುದೂ ಕೇರಳದವರ ಪಾಲಿಗೆ ಒಂದು ಸ್ಟೈಲೇ ಹೌದು...

......

ಕಾಲ ಬದಲಾಗಿ ಸಾಕಷ್ಟು ವಾಹನಗಳು ಬಂದರೂ ಅಂದಿಗೂ, ಇಂದಿಗೂ ಜೀಪು ಕಡೆಗಣಿಸಲಾಗದ ವಿಶಿಷ್ಟ ವಿನ್ಯಾಸದ, ವಿಚಿತ್ರ ಶಕ್ತಿಯ, ವಿಭಿನ್ನ ಸಾಧ್ಯತೆಗಳ ವಾಹನ. ಎಂದೂ ಕೈಕೊಡದ ಮಿತ್ರನ ಹಾಗೆ. ಜಾರಿ ಹೋಗುವ ಸಂದರ್ಭ ಎಳೆದೊಯ್ದು, ಏರು ಹಾದಿಯಲ್ಲಿ ಕೂರಿಸಿ ಧೈರ್ಯ ತುಂಬಿ, ಮತ್ತಿಬ್ಬರು ಎಕ್ಸ್ಟ್ರಾ ಮಂದಿಯನ್ನೂ ಕುಳ್ಳಿರಿಸಿ ಕರೆದೊಯ್ಯುವ ಹೃದಯವಂತ....
-ಕೃಷ್ಣಮೋಹನ ತಲೆಂಗಳ.

No comments: