ಗೋಡೆಗಳು ಬರಿಯ ಗಡಿಗಳಲ್ಲ...

ಖಾಲಿ ಬಯಲು, ಸಣ್ಣದೊಂದು ಹಿತ್ತಿಲು ಸಹ ಗೋಡೆ ಕಟ್ಟಿದ ಮೇಲೆ ಖಾಸಗಿ ಆಗ್ತದೆ. ಪ್ರತ್ಯೇಕ ನೆಲೆ ಕಾಣ್ತದೆ. ಸೆಂಟ್ಸುಗಳ ಲೆಕ್ಕದ ಖಾಲಿ ನೆಲ ಚದರ ಅಡಿಗಳ ಕೋಣೆಯಾಗಿ, ಸಾರ್ವಜನಿಕ ಹೋಗಿ ಖಾಸಗಿಯಾಗಿ, ಕತ್ತಲಾಗಿ ಬಿಡುತ್ತದೆ. ಗೋಡೆಯಾಚಿನದ್ದೆಲ್ಲ ಬಹಿರಂಗ, ಗೋಡೆಯೊಳಗೆ ಅಂತರಂಗ. ಕಾಣಿಸದೇ ಉಳಿಯಲು ಗೋಡೆಯೊಂದು ಪರದೆ ಆಗಿಬಿಡುತ್ತದೆ. ಕಾಣದೇ ಹೋಗಿದ್ದು ಊಹೆಗೆ, ಕಲ್ಪನೆಗೆ, ಪೂರ್ವಾಗ್ರಹಗಳಿಗೆ ಅವಕಾಶ ಕಲ್ಪಿಸುತ್ತದೆ... ಕಟ್ಟಿಕೊಳ್ಳುವ ಗೋಡೆ ಮತ್ತು ಎದ್ದು ನಿಲ್ಲುವ ಗೋಡೆ ಎರಡೂ ಬೇರ್ಪಡಿಸುವುದು ಖಂಡಿತ. ಸರಾಗ, ಸಲೀಸು ಮತ್ತು ತಡೆರಹಿತ ಹರಿವನ್ನು, ಗೋಚರವಾಗುವುದನ್ನು ಗೋಡೆ ತಡೆಯುತ್ತದೆ, ಕಟ್ಟಿ ನಿಲ್ಲಿಸುತ್ತದೆ ಮತ್ತು ಕಾಣದಂತೆ ದಿಕ್ಕು ತಪ್ಪಿಸಿ ಬಿಡುತ್ತದೆ... ಅಲ್ವ?

 

…..

 

ಗೋಡೆಯಾಚೆ ಅಸಭ್ಯವಾಗಿರುವುದೂ ಈಚೆ ಸಭ್ಯವಾಗುತ್ತದೆ ಅಥವಾ ಸಭ್ಯವಾಗಿ ತೋರಿಸಿಕೊಳ್ಳುತ್ತದೆ. ಗೋಡೆಯ ಈಚಿನ ಮುಖವಾಡಗಳು, ನಾಟಕಗಳು ಮತ್ತು ತೋರಿಕೆಯ ಹಾವಭಾವಗಳೂ ಗೋಡೆಯಾಚೆ ಕಳಚಿ ಇದ್ದದ್ದು ಇದ್ದ ಹಾಗೆ ಬೆತ್ತಲಾಗುತ್ತವೆ ಮತ್ತು ಗೋಡೆ ಇರುವ ಧೈರ್ಯದಿಂದ ಕಟ್ಟಿಕೊಂಡ ಪದರಗಳು ಸುಲಿದುಕೊಂಡು ಸಹಜ ಗುಣ ಅಂತರಂಗದ ಕೋಣೆಯಲ್ಲಿ ಬಹಿರಂಗವಾಗುತ್ತದೆ! ಫೇಸ್ಬುಕ್ಕಿನ ವಾಲಿನಲ್ಲಿ, ಮೆಸೆಂಜರಿನಲ್ಲಿ ಬೇರೆ ಬೇರೆಯದ್ದೇ ಧಾಟಿಯಲ್ಲಿ ಮಾತನಾಡಿದ ಹಾಗೆ! ಗೋಡೆಯಾಚೆಯಿಂದ ಧ್ವನಿ ಕೇಳಬಹುದು, ಪರಿಮಳ ಆಘ್ರಾಣಿಸಬಹುದು, ಕಂಪನವನ್ನು ಗ್ರಹಿಸಬಹುದು ಆದರೆ ಕಣ್ಣಿನಿಂದ ನೋಡಲಾಗದು. ಕಣ್ಣಿನಿಂದ ನೋಡದ ಹೊರತು ಕೆಲವೊಂದನ್ನು ಕಲ್ಪಿಸಿಯೂ ವಾಸ್ತವದ ಬಳಿಗೆ ಕರೆದೊಯ್ದು ವಸ್ತುಸ್ಥಿತಿಗೆ ಒರೆಗೆ ಹಚ್ಚಲಾಗುವುದಿಲ್ಲ...

…………..


ಮನೆಯ ಹೊಸ್ತಿಲು ದಾಟಿ ಬರುವವರು ಪೌಡರು ಹಾಕುತ್ತಾರೆ, ಚೆಂದದ ಬಟ್ಟೆ ತೊಡುತ್ತಾರೆ, ಪರಿಮಳ ದ್ರವ್ಯಗಳನ್ನು ಪೂಸುತ್ತಾರೆ, ಕ್ರಾಪು ಸರಿ ಮಾಡಿಕೊಂಡು ಮುಖ ತುಂಬ ನಗು ತೋರಿಸಿಕೊಂಡು ರಸ್ತೆಯಲ್ಲಿ ಓಡಾಡುತ್ತಾರೆ. ಜಾಲತಾಣಗಳಲ್ಲಿ ಚೆಂದ ಪ್ರೀತಿ ಸೂಸುವ ಇಮೋಜಿಗಳನ್ನು ಉದಾರವಾಗಿ ಎಸೆಯುತ್ತಾರೆ. ಅದೇ ವ್ಯಕ್ತಿ ಗೋಡೆ ದಾಟಿದ ಬಳಿಕ ನೀವು ಅವರನ್ನು ಕಾಣುತ್ತಲೇ ಇರುವುದಿಲ್ಲ ತಾನೆ, ಮನೆಯೊಳಗೆ ಅದೇ ನಗು ಇರುತ್ತದಾ... ಅಷ್ಟೇ ಅಚ್ಚುಕಟ್ಟಿನ ಕಾಣಿಸಿಕೊಳ್ಳುವಿಕೆ, ನಡವಳಿಕೆ ಇರುತ್ತದಾ ಅಂತ.. ಇಲ್ವಲ್ಲ? ಹಾಗಿದ್ದರೆ ಗೋಡೆಯ ಗಡುವು ನಮ್ಮ ತೋರಿಸಿಕೊಳ್ಳುವಿಕೆಯನ್ನು ಜಾಗೃತಗೊಳಿಸುವುದೂ ಹೌದು ತಾನೆ?

 

…………….

 

ಗಡಿ ಗುರುತಿಸಲೂ ಗೋಡೆ ಕಟ್ಟತ್ತೇವೆ. ಹರಿಯುವ ನೀರನ್ನು ತಡೆದು ನಿಲ್ಲಿಸಿ ಸಂಗ್ರಹಿಸಲೂ ಗೋಡೆ ನಿರ್ಮಿಸುತ್ತಾರೆ, ಮನೆಯ ತೋಟಕ್ಕೆ ಪಶುಗಳು ಬಾರದಂತಿರಲೂ ಗೋಡೆ ರಚಿಸುತ್ತೇವೆ. ಗೋಡೆಯನ್ನು ಆಗಿಂದಾಗ್ಗೆ ನಾವಾದರೂ ದಾಟಲು ಸಾಧ್ಯವಾಗಲಿ ಎಂಬ ಕಾರಣಕ್ಕೆ ನಡುವೆಯೊಂದು ಪುಟ್ಟ ಬಾಗಿಲು, ಇಣುಕಿ ನೋಡಲು ಕಿಟಕಿ, ಅದಕ್ಕೊಂದು ಬಾಗಿಲನ್ನೂ ಮಾಡುತ್ತೇವೆ. ನಂತರ ನಮಗೆ ಹೊರ ಜಗತ್ತು ಕಾಣಿಸುವುದು ಕಿಟಕಿಯ ಚೌಕಟ್ಟಿನಲ್ಲಿ ಮಾತ್ರ. ಕಿಟಕಿಯ ವ್ಯಾಪ್ತಿ ಮೀರಿ ಬೀದಿಯ ತುದಿಯಲ್ಲಿ ಏನಿದೆ ಎಂಬುದು ಕಾಣಬೇಕಾದರೆ ಬಾಗಿಲು ತೆರೆದು ಹೊರಗೆ ಬಂದೇ ನೋಡಬೇಕು. ಕಿಟಕಿಯಿಂದ ನೋಡಿದರೆ ಕಾಣುವುದು ಸೀಮಿತ ತಿಳಿವಳಿಕೆ ಅಷ್ಟೇ... ಚೌಕಟ್ಟಿನೊಳಗಿನ ಮನಸ್ಸುಗಳ ಕಥೆಯೂ ಇದುವೇ... ಕಿಟಕಿಯಿಂದ ನೋಡಿದಾಗ ಕಣ್ಣುಗಳು ಕಾಣುವುದಕ್ಕೂ, ಗ್ರಹಿಸುವಿಕೆಯ ವ್ಯಾಪ್ತಿ ಹಿಗ್ಗಿಸಿ ಮನಸ್ಸಿನ ಬಾಗಿಲು ತೆಗೆದು ವಿಶಾಲವಾಗಿ, ಸೂಕ್ಷ್ಮವಾಗಿ ನೋಡಿದಾಗ ಮನಸ್ಸು ಕಂಡುಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ...

 

...............

 

ಓಡಾಟದ ಅವಶ್ಯಕತೆ ತೀರಿದಾಗ, ಸಂಶಯಗಳು ಹುಟ್ಟಿಕೊಂಡಾಗ, ಸಂವಹನ ಅಪ್ರಸ್ತುತವಾದಾಗ, ಕಾಣಿಸಿಕೊಳ್ಳುವುದು, ಕಂಡುಕೊಳ್ಳುವುದು ಬೇಡವಾದಾಗ ಮನಸ್ಸುಗಳೂ ಗೋಡೆ ಕಟ್ಟುತ್ತವೆ... ಅಥವಾ ಗೋಡೆ ಹುಟ್ಟಿಕೊಳ್ಳುತ್ತದೆ. ಮನಸ್ಸುಗಳ ನಡುವೆ ಎದ್ದು ನಿಂತ ಗೋಡೆ ಮೌನದ ಬಣ್ಣ ಹಚ್ಚಿಕೊಂಡಿರುತ್ತವೆ, ಅಲ್ಲಿ ಸೌಜನ್ಯ, ದಾಕ್ಷಿಣ್ಯ, ಕುತೂಹಲಗಳೂ ಸತ್ತು ಅಟ್ಟ ಸೇರಿರುತ್ತವೆ. ಕಿಟಕಿಗೂ ಅವಕಾಶ ನೀಡದೆ ಕಟ್ಟಿದ ಗೋಡೆಯ ಆಚೆಗಿನ ದೃಶ್ಯಗಳು ಕಾಣಿಸುವುದೇ ಇಲ್ಲ... ನಾವೇ ಗೋಡೆಯೊಳಗಿನ ಕೋಣೆಯಲ್ಲಿ ಬಂಧಿಗಳಾಗಿ ಬಾಗಿಲಿಗೆ ಬೀಗ ಹಾಕಿ ಬೀಗವನ್ನೇ ಗೋಡೆಯಿಂದಾಚೆಗೆ ಎಸೆದು ಬಿಟ್ಟ ಹಾಗೆ!!!


-ಕೃಷ್ಣಮೋಹನ ತಲೆಂಗಳ. (13.12.2020)

No comments: