ಕೋವಿಡ್ ಲಸಿಕೆ ಪಡೆಯುವುದು ಹೇಗೆ? (ಆರೋಗ್ಯ ಇಲಾಖೆಯ ಮಾಹಿತಿ Forwarded)

ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರು ಲಸಿಕೆ ಪಡೆಯಬಹುದು. ಲಸಿಕೆ ಪಡೆಯಲು ಎಲ್ಲಿ ಮತ್ತು ಹೇಗೆ ನೋಂದಣಿ ಮಾಡಿಕೊಳ್ಳೋದು, ಏನೆಲ್ಲಾ ತಯಾರಿ ಮಾಡಿಕೊಳ್ಬೇಕು, ಯಾರನ್ನು ಸಂಪರ್ಕಿಸಬೇಕು ಎನ್ನುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಈ ಎಲ್ಲಾ ಅನುಮಾನಗಳಿಗೆ ಉತ್ತರ ಇಲ್ಲಿದೆ.

ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬೇಕಾ? ಎಲ್ಲಿ? ಹೇಗೆ? 

ಹೌದು, ಲಸಿಕೆ ಪಡೆಯುವ ಮೊದಲು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ Co-WIN ಪೋರ್ಟಲ್ ನಲ್ಲಿ ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅದರ ಲಿಂಕ್ ಇಲ್ಲಿದೆ: Co-WIN Portal https://www.cowin.gov.in/home . ನಿಮ್ಮ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನೀಡಿ ರೆಜಿಸ್ಟರ್ ಮಾಡಿಕೊಳ್ಳಲು ಅವಕಾಶವಿದೆ.ಒಂದು ದೂರವಾಣಿ ಸಂಖ್ಯೆಗೆ 4 ಜನ ನೋಂದಣಿ ಮಾಡಿಕೊಳ್ಳಬಹುದು. ಆದರೆ ಎಲ್ಲರಿಗೂ ಅವರದ್ದೇ ಆದ ಫೋಟೋ ಗುರುತಿನ ಚೀಟಿ ಇರಬೇಕು (ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಓಟರ್ ಐಡಿ, ಇತ್ಯಾದಿ).

ಆನ್​ಲೈನ್ ಮೂಲಕ ನೋಂದಣಿ ಮಾಡುವಾಗ ಲಸಿಕಾ ಕೇಂದ್ರಗಳು ಮತ್ತು ಲಸಿಕೆ ನೀಡುವ ಸಮಯದ ಪಟ್ಟಿ ಇರುತ್ತದೆ. ನಿಮ್ಮ ಅನುಕೂಲದ ಸಮಯ ಮತ್ತು ದಿನಾಂಕವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ರೆಜಿಸ್ಟರ್ ಮಾಡಿದಾಗ ನಿಮ್ಮ ದೂರವಾಣಿ ಸಂಖ್ಯೆಗೆ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ನೀಡಿದ ನಂತರ ನೋಂದಣಿ ಪೂರ್ಣವಾಗುತ್ತದೆ. ಇದರ ಬಗ್ಗೆ ನಂತರ ಒಂದು ಎಸ್​ಎಂಎಸ್ ಕೂಡಾ ಬರುತ್ತದೆ.
ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಆನ್​ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಸರ್ಕಾರಿ ಆಸ್ಪತ್ರೆಗಳಿಗೆ ಆನ್​ಲೈನ್ ಮೂಲಕ ನೋಂದಣಿಗೆ ಕೆಲವು ಸ್ಲಾಟ್​ಗಳನ್ನು ನೀಡಿ ಉಳಿದವುಗಳನ್ನು ಸ್ಥಳೀಯವಾಗಿ ನೋಂದಣಿ ಮಾಡಿಕೊಳ್ಳಲು ಹಾಗೆಯೇ ಇರಿಸಲಾಗುತ್ತದೆ.ಲಸಿಕೆ ಪಡೆಯುವ ಹಿಂದಿನ ದಿನ ಮಧ್ಯಾಹ್ನ 12 ಗಂಟೆಗೆ ಆ ದಿನದ ಲಸಿಕೆಯ ಅಪಾಯಿಂಟ್​ಮೆಂಟ್​ಗಳನ್ನು ನಿಲ್ಲಿಸಲಾಗುತ್ತದೆ.

 ಆನ್​ಲೈನ್ ಸೌಲಭ್ಯ ಇಲ್ಲದವರು ನೋಂದಣಿ ಮಾಡಿಕೊಳ್ಳುವುದು ಹೇಗೆ?

ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದವರು ಸ್ಥಳೀಯ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬಹುದು. ಅವರು ನಿಮ್ಮ ಮನೆಯ ಬಳಿಯೇ ಇರುವ ಆರೋಗ್ಯ ಕೇಂದ್ರದಲ್ಲಿ ಅಂದೇ ನೋಂದಣಿ ಮತ್ತು ಲಸಿಕೆ ಎರಡನ್ನೂ ಪಡೆಯಲು ಸಹಾಯ ಮಾಡುತ್ತಾರೆ. ನಿಮ್ಮ ಸಮೀಪದ ಆರೋಗ್ಯ ಕೇಂದ್ರದಲ್ಲಿ ಯಾವ ದಿನಗಳು ಮತ್ತು ಯಾವ ಸಮಯಕ್ಕೆ ಲಸಿಕೆ ಪಡೆಯಬಹುದು ಎನ್ನುವುದನ್ನೂ ಅವರು ತಿಳಿಸುತ್ತಾರೆ. ಅಂದು ನೀವು ನಿಮ್ಮ ಮೊಬೈಲ್ ಫೋನ್ ಮತ್ತು ಫೋಟೋ ಐಡಿ ತೆಗೆದುಕೊಂಡು ಹೋದರೆ ಆಯಿತು, ಅಂದೇ ನೋಂದಣಿ ಮಾಡಿ ಲಸಿಕೆಯನ್ನೂ ಪಡೆಯಬಹುದು. ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯುವ ಅವಕಾಶ ಇದ್ದರೂ ನೋಂದಣಿ ಕಡ್ಡಾಯವಾಗಿದೆ.

 ಲಸಿಕೆ ಪಡೆದ ನಂತರವೂ ಆ ಬಗ್ಗೆ ಮಾಹಿತಿ ತಿಳಿಯುತ್ತದೆಯೇ? ಎರಡನೇ ಹಂತದ ಲಸಿಕೆ ಪಡೆಯಲು ಏನು ಮಾಡಬೇಕು?

ಮೊದಲ ಡೋಸ್ ಲಸಿಕೆ ಪಡೆದ ನಂತರ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ನಿಮ್ಮ ಮೊಬೈಲ್ ಫೋನ್​ಗೆ ಎಸ್​ಎಂಎಸ್ ಮೂಲಕ ಬರುತ್ತದೆ. ಎರಡೂ ಡೋಸ್ ಮುಗಿದ ನಂತರವೂ ಮಾಹಿತಿ ತಿಳಿಸಲಾಗುತ್ತದೆ. ಲಸಿಕೆ ಪೂರ್ಣವಾದ ನಂತರ ಸರ್ಟಿಫಿಕೇಟ್​ನ್ನು ಪಡೆಯುವ ವಿಧಾನವನ್ನೂ ಅದರಲ್ಲಿ ತಿಳಿಸಲಾಗುತ್ತದೆ.

 ಕೋವಿಡ್ ಸೋಂಕಿತರೂ ಲಸಿಕೆ ಪಡೆಯಬಹುದೇ?

ಸೋಂಕು ಇರುವ ವ್ಯಕ್ತಿ ಲಸಿಕಾ ಕೇಂದ್ರಕ್ಕೆ ಬಂದರೆ ಅಲ್ಲಿರುವ ಎಲ್ಲರಿಗೂ ಸೋಂಕು ಹರಡುವ ಅಪಾಯವಿರುತ್ತದೆ. ಆದ್ದರಿಂದ ಗುಣಮುಖರಾಗಿ 14 ದಿನಗಳ ಕ್ವಾರಂಟೈನ್ ಮುಗಿಸಿದ ನಂತರವೇ ಲಸಿಕೆ ಪಡೆಯಬೇಕು.

 ನನಗೆ ಯಾವ ಲಸಿಕೆ ಬೇಕು ಎಂದು ಆಯ್ದುಕೊಳ್ಳಬಹುದೇ?

ಇಲ್ಲ, ವಿವರವಾದ ತಪಾಸಣೆ ಮತ್ತು ಸಂಶೋಧನೆಗಳ ನಂತರವೇ ನಮ್ಮ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಸದ್ಯ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಈ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಇವುಗಳಲ್ಲಿ ನಿಮಗೆ ಯಾವುದು ಬೇಕು ಎಂದು ಆಯ್ದುಕೊಳ್ಳುವ ಅವಕಾಶವಿಲ್ಲ. ಆದಾಗ್ಯೂ ಮೊದಲ ಡೋಸ್ ಯಾವ ಲಸಿಕೆ ನೀಡಿರುತ್ತಾರೋ ಎರಡನೇ ಡೋಸ್ ಕೂಡಾ ಅದನ್ನೇ ನೀಡಲಾಗುತ್ತದೆ.

 ಲಸಿಕಾ ಕೇಂದ್ರದಲ್ಲಿ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

ಇದುವರಗೆ ಪಾಲಿಸಿದಂತೆಯೇ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಮತ್ತು ಸ್ವಚ್ಛತೆ ಲಸಿಕಾ ಕೇಂದ್ರದಲ್ಲಿಯೂ ಪಾಲಿಸಬೇಕು. ಲಸಿಕೆ ಪಡೆಯುವ ಮುನ್ನ ನಿಮ್ಮ ಬಳಿ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯಲಾಗುತ್ತದೆ. ಲಸಿಕೆ ನೀಡಿದ ನಂತರವೂ ಅರ್ಧ ಗಂಟೆಯವರಗೆ ಲಸಿಕಾ ಕೇಂದ್ರದಲ್ಲೇ ಇರುವಂತೆ ಸೂಚಿಸಲಾಗುತ್ತದೆ. ಒಂದು ವೇಳೆ ಲಸಿಕೆ ಪಡೆದ ನಂತರ ನಿಮಗೆ ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಕೂಡಲೇ ಚಿಕಿತ್ಸೆ ನೀಡಲು ಅದು ಸಹಕಾರಿ.


 ಲಸಿಕೆ ಪಡೆಯುವ ಮೊದಲು ಈ ಮೊದಲು ತೆಗೆದುಕೊಳ್ಳುತ್ತಿದ್ದ ಯಾವುದಾದರೂ ಔಷಧಗಳನ್ನು ನಿಲ್ಲಿಸಬೇಕೆ?

ಇದುವರೆಗೂ ಅಂತಃ ಯಾವುದೇ ನಿಬಂಧನೆಗಳಿಲ್ಲ. ಲಸಿಕೆ ಪಡೆಯುವ ಮೊದಲು ನೀವು ಹಿಂದಿನಂತೆಯೇ ಯಾವುದಾದರೂ ಅನಾರೋಗ್ಯದ ಸಲುವಾಗಿ ಔಷಧ ತೆಗೆದುಕೊಳ್ಳುತ್ತಿದ್ದರೆ ಅದನ್ನು ಮುಂದುವರೆಸಬಹುದು. ನೋಂದಣಿಯ ಸಂದರ್ಭದಲ್ಲಿ ನಿಮ್ಮ ಔಷಧಿಯ ಬಗ್ಗೆ ಅಲ್ಲಿನ ಸಿಬ್ಬಂದಿಗೆ ತಿಳಿಸಿ.

 ಲಸಿಕೆ ಪಡೆದು ಮನೆಗೆ ತೆರಳಿದ ನಂತರ ಆರೋಗ್ಯ ಸಮಸ್ಯೆ ಕಂಡುಬಂದರೆ ಏನು ಮಾಡಬೇಕು?

ಇದು ಬಹಳ ವಿರಳವಾದರೂ ಲಸಿಕೆ ಪಡೆದು ಮರಳಿದ ನಂತರ ನಿಮಗೇನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ತಪ್ಪದೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ಸಾಧ್ಯವಿದ್ದರೆ ನೀವು ಲಸಿಕೆ ತೆಗೆದುಕೊಂಡ ಕೇಂದ್ರಕ್ಕೇ ತೆರಳಿದರೆ ಇನ್ನೂ ಉತ್ತಮ. ಅಥವಾ ನಿಮ್ಮ ಸಮೀಪದ ಯಾವುದೇ ಆರೋಗ್ಯ ಕೇಂದ್ರ ಅಥವಾ ವೈದ್ಯರನ್ನು ಈ ಬಗ್ಗೆ ಸಂಪರ್ಕಿಸಿ.

ಕೊರೊನಾ ವಿರುದ್ಧ ರಕ್ಷಣೆ ಕೊಡಬಲ್ಲ ಏಕೈಕ ಸಾಧನ ಲಸಿಕೆಯಾಗಿದೆ. ಹಾಗಾಗಿ ತಪ್ಪದೇ ಲಸಿಕೆ ಪಡೆಯುವುದು ಮಾತ್ರವಲ್ಲ, ನಂತರವೂ ಎಲ್ಲಾ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಬಹಳ ಮುಖ್ಯವಾಗಿದೆ.

No comments: