ಸ್ಕೂಲ್ಡೇ ಒಂದು ಗೌಜಿ... ಎಂದೋ ಕಳೆದುಹೋದ ಸುಂದರ ಕನವರಿಕೆ.....





ಸ್ಕೂಲ್ ಡೇಗಿಂತಲೂ ಅದಕ್ಕಿಂತ ಮೊದಲು ಎರಡು ತಿಂಗಳು ತಯಾರಿ ನಡೆಯುತ್ತದಲ್ವ...? ಅದು ಮತ್ತು ಸ್ಕೂಲ್ ಡೇ ಮುಗಿದ ನಂತರ ಅದರ ಫೋಟೋಗೆ ಕಾಯುವುದೇ ದೊಡ್ಡ ಖುಷಿ. ಮತ್ತೆ ಸ್ಕೂಲ್ಡೇ ಬಗ್ಗೆ ಒಂದಷ್ಟು ದಿವಸ ಕ್ಲಾಸಿನಲ್ಲಿ ಚರ್ಚೆ ಮಾಡುವುದು, ಸ್ಕೂಲ್ ಡೇ ದಿನ ದೊಡ್ಡದಾಗಿ ಸದ್ದು ಮಾಡಿದ ಸ್ಟೇಜಿನಲ್ಲಿ ಕಾಣಿಸಿದ ಮಾಯಾಲೋಕ ಮತ್ತೆ ಮೌನವಾಗಿ, ಅದೇ ಸ್ಟೇಜಿಗೆ ಅಡ್ಡಲಾಗಿ ತಟ್ಟಿ ಇರಿಸಿ ಏಳನೇ ಕ್ಲಾಸಿನಲ್ಲಿ ಪಾಠ ಮಾಡುವುದನ್ನು ಕಂಡು ನಿಟ್ಟುಸಿರು ಬಿಡುವುದು ಇವೆಲ್ಲ ಪ್ರೈಮರಿ ಶಾಲೆಗೆ ಹೋಗ್ತಾ ಇದ್ದಾಗಿನ ಸಾಮಾನ್ಯ ನೆನಪುಗಳು.

ಅಂತಹ ಸ್ಕೂಲ್ಡೇಗಳು ಶಾಲೆಗಳಲ್ಲಿ ಸದ್ದು ಮಾಡದೆ ಎರಡು ವರ್ಷಗಳು ಕಳೆದು ಹೋದವು. ಸೆಲ್ಫೀ ಯುಗದಲ್ಲೂ, ಯೂಟ್ಯೂಬು ಲೈವ್ ಕಾಣಿಸುವ ಪರ್ವದಲ್ಲೂ, ಆಗಿಂದಾಗ್ಗೆ ಸ್ಟೇಟಸ್ಸುಗಳಲ್ಲಿ ಎಲ್ಲವೂ ಪ್ರತ್ಯಕ್ಷವಾಗಿ, ಅಚ್ಚರಿ, ಕುತೂಹಲಗಳೆಂಬುದೇ ಇಲ್ಲವಾಗುತ್ತಿರುವ ಈ ದಿನಗಳಲ್ಲೂ ಸ್ಕೂಲ್ಡೇ ಮಾತ್ರ ಕೊರೋನಾ ನೆಪದಲ್ಲಿ ನೇಪಥ್ಯ ಸೇರಿರುವುದು ನೋವಿನ ಸಂಗತಿ. ಅದಕ್ಕಾಗಿ ಕಾಯುವ ಒಂದು ವರ್ಗ, ಅದಕ್ಕಾಗಿ ಹಂಬಲಿಸುವ ಎಳೆಯ ಮನಸ್ಸುಗಳು, ಆ ಸ್ಪೋರ್ಟ್ಸ್ ಡೇ, ಆ ಪ್ರಾಕ್ಟೀಸು, ಆ ಡಾನ್ಸು, ಆ ಪ್ರೈಝ್, ಆ ತಯಾರಿ, ಸ್ಟೇಜು, ಪರದೆ, ಕಲರ್ ಡ್ರೆಸ್ಸು ಹಾಕಿ ಓಡಾಡುವ ಖುಷಿಯನ್ನು ಮಿಸ್ ಮಾಡ್ಕೊಳ್ತಾ ಇರುವ ಸಾವಿರಾರು ಮಂದಿಯ ನಿರೀಕ್ಷೆಗಳು ಕಮರಿ ಹೋಗಿವೆ.

.....

ನಾವು ಶಾಲೆಗೆ ಹೋಗ್ತಾ ಇದ್ದ ದಿನಗಳವು. ಸ್ಕೂಲ್ಡೇ ಸರಿಸುಮಾರು ಎರಡು ತಿಂಗಳ ಹಿಂದೆಯೇ ಘೋಷಣೆಯಾಗ್ತಾ ಇತ್ತು. ಸ್ಕೂಲ್ಡೇ ಅಂದರೆ ಶಾಲೆಯ ಮಟ್ಟಿಗೆ ದೊಡ್ಡ ಜಾತ್ರೆ. ಈಗಿನ ಹಾಗೆ ಕಾಲಮಿತಿಯ ಬಯಲಾಟವಲ್ಲ. ಹಳ್ಳಿಯ ಶಾಲೆಗಳಲ್ಲಿ ಇಂದು ಬೆಳಗ್ಗೆ ಧ್ವಜಾರೋಹಣದಿಂದ ಶುರುವಾದರೆ, ನಾಳೆ ಬೆಳಗ್ಗೆಯ ಹಳೆ ವಿದ್ಯಾರ್ಥಿಗಳ ನಾಟಕದ ವರೆಗಿನ 24 ಗಂಟೆಗಳ ಹಬ್ಬ. ಇಡೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಮೈದಾನದ ತುಂಬ ಹೆತ್ತವರು, ಮಕ್ಕಳು, ಊರವರ ಕಲರವ, ಊರಿಡೀ ಕಲೆಕ್ಷನ್ನು, ಮತ್ತೆ ವರ್ಷಕ್ಕೊಮ್ಮೆ ಮಾತ್ರ ನೋಡಲು ಸಿಕ್ಕುವ ಡ್ಯಾನ್ಸ್, ನಾಟಕ, ಕೆಲವು ಕಡೆ ಯಕ್ಷಗಾನ ಕೂಡಾ... ಮನರಂಜನೆಯೆಂಬುದು ಆಗಿನ್ನೂ ಟಿ.ವಿ.ಯ ಪರದೆಗೂ, ಬೆರಳ ತುದಿಯ ಸ್ವೈಪಿಗೂ ಸಿಕ್ಕದ ಕಾಲದಲ್ಲಿ ಎಲ್ಲರೂ ಆ ಮಂಜು ಸುರಿಯುವ ಮೈದಾನದಲ್ಲಿ ತಲೆಗೆ ಶಾಲು ಹೊದ್ದು ಗಡಗಡ ನಡುಗುತ್ತಾ, ಮರದ ಬೆಂಚಿನಲ್ಲೇ ಕುಳಿತು ನಾಟಕ ನೋಡುತ್ತಿದ್ದ ಕಾಲಘಟ್ಟದ ಚಿತ್ರಣ ಈಗಿನ ಸ್ಕೂಲ್ಡೇಗಳಿಗಿಂತ ತುಂಬ ಭಿನ್ನ.

ಸ್ಕೂಲ್ಡೇ ಘೋಷಣೆಯಾದ ಕೂಡಲೇ ಮೊದಲು ಪ್ರಿಂಟಾಗುತ್ತಿದ್ದದ್ದು ಲಕ್ಕಿಡಿಪ್ಪು. ಹತ್ತೋ, ಇಪ್ಪತ್ತೋ ಟಿಕೆಟುಗಳಿದ್ದ ರಶೀದಿ ಪುಸ್ತಕಗಳಿದ್ದ ಲಕ್ಕಿಡಿಪ್ಪುಗಳನ್ನು ಮಕ್ಕಳ ಕೈಗೆ ಕೊಡ್ತಾ ಇದ್ರು. ಮನೆಯವರತ್ರ, ದೊಡ್ಡವರತ್ರ, ಅಂಗಡಿಯವರತ್ರ, ನೆರೆಕರೆಯವತ್ರ ಅವರ ತಲೆತಿಂದು ಲಕ್ಕಿಡಿಪ್ಪು ಮಾರಬೇಕು. ಹೆಚ್ಚು ಪುಸ್ತಕ ಮಾರಿದವರಿಗೆ ಪ್ರೋತ್ಸಾಹಕ ಬಹುಮಾನ ಕೂಡಾ ಇರ್ತಾ ಇತ್ತು! ನನ್ನಂಥವನಿಗೆ ಒಂದು ಪುಸ್ತಕ ಖಾಲಿ ಮಾಡಲೇ ಪ್ರಾಣಕ್ಕೆ ಬರ್ತಾ ಇತ್ತು. ನಮ್ಮ ಪರದಾಟ ಕಂಡು ಅಣ್ಣಂದಿರೋ, ಚಿಕ್ಕಪ್ಪಂದಿರೋ ನಾಲ್ಕೈದು ರಶೀದಿ ಹರಿದು ದುಡ್ಡು ಕೊಟ್ಟರೆ ಪರಮಾನಂದ. ಟಿಕೆಟಿನ ರೇಟಾದರೂ ಎಷ್ಟು... 2 ರುಪಾಯಿ, 5 ರುಪಾಯಿ ಅಷ್ಟೇ... ಹೀಗೆ ಸ್ಕೂಲ್ಡೇಗೆ ದುಡ್ಡು ಕಲೆಕ್ಷನ್ ಆಗ್ತಾ ಇತ್ತು.

ಮತ್ತೆ ಇಡೀ ರಾತ್ರಿಗೆ ಬೇಕಾಗುವಷ್ಟು ಡ್ಯಾನ್ಸು, ನಾಟಕಗಳ ಪ್ರಾಕ್ಟೀಸೂ ಅಷ್ಟೇ. ವಾರಗಳ ಮೊದಲೇ ಶುರುವಾಗ್ತಾ ಇತ್ತು. ಪೂಜಾ ನೃತ್ಯ, ಸ್ವಾಗತ ನೃತ್ಯ, ಕೊರವಂಜಿ ನೃತ್ಯ, ಡಂಬೆಲ್ಸು, ಸಾರಿ ಡ್ಯಾನ್ಸು, ಕೋಲಾಟ, ಸುಗ್ಗಿ ಕುಣಿತ, ರೆಕಾರ್ಡ್ ಡ್ಯಾನ್ಸು (ಮುಕ್ಕಾಲಾ ಮಕಾಬ್ಬುಲಾ.... ವಟ್ಟ ಗಟ್ಟಿ ಕಟ್ಟಿಕ್ಕೋ.... ಇತ್ಯಾದಿ ಇತ್ಯಾದಿ ಶೈಲಿಯ ಎ.ಆರ್.ರೆಹ್ಮಾನ್ ಜಮಾನದ ಕಿವಿಗಡಚಿಕ್ಕುವ ಹಾಡುಗಳು), ಹೀಗೆ ಪಟ್ಟಿಯೇ ಸಿದ್ಧವಾಗ್ತಾ ಇತ್ತು. ಆಗ ಒಂದೊಂದು ಕ್ಲಾಸಿನಲ್ಲೂ 40-50 ಮಕ್ಕಳಿದ್ದ ಕಾರಣ ಮಾನವ ಸಂಪನ್ಮೂಲಕ್ಕೆ ಕೊರತೆ ಇರಲಿಲ್ಲ. ಟೀಚರುಗಳು, ಮಾಷ್ಟ್ರುಗಳು ತಮಗೆ ತೋಚಿದ ಹಾಗೆ ಪ್ರಾಕ್ಟೀಸ್ ಮಾಡಿಸ್ತಾ ಇದ್ರು. ಈಗಿನ ಹಾಗೆ ಯಾರೋ ಹೊರಗಿನವರು ಬಂದು ಡ್ಯಾನ್ಸು ಕಲಿಸಿ ಹೋಗ್ತಾ ಇದ್ದದ್ದಲ್ಲ. ಶಾಲೆಯ ಕೆಲವು ಟೀಚರುಗಳಿಗೆ ಡ್ಯಾನ್ಸಿನ ಮೂಲಜ್ಞಾನ ಇದ್ದು, ಅದರಲ್ಲೇ ಅವರು ಸುಧಾರಿಸ್ತಾ ಇದ್ರು... ಸ್ಕೂಲ್ಡೇಯೂ ರೈಸುತ್ತಾ ಇತ್ತು.

ನಾಟಕಗಳೂ ಅಷ್ಟೇ, ನಾಟಕ ಪುಸ್ತಕ ಆಯ್ಕೆ ಮಾಡಿ, ಪಾತ್ರ ಹಂಚಿಕೆ ಆದ ಬಳಿಕ, ಅವರವರ ಭಾಗದ ಡೈಲಾಗುಗಳನ್ನು ನೋಟ್ಸು ಪುಸ್ತಕದಲ್ಲಿ ಬರೆದು ಬಾಯಿ ಪಾಠ ಮಾಡಬೇಕು. ಆಗಿನ್ನೂ ಝೆರಾಕ್ಸ್ ಪರ್ವ ಕಾಲಿಟ್ಟಿರಲಿಲ್ಲ. ಪುಟಗಟ್ಟಲೆ ಡೈಲಾಗು ಬಾಯಿ ಪಾಠ ಮಾಡಿದ ಬಳಿಕ ಮೈದಾನದ ಕುಂಟಲದ ಮರದಡಿಯೋ, ಕ್ಲಾಸಿನಲ್ಲಿ ಬೆಂಚಿಗಳನ್ನು ಹಿಂದಕ್ಕೆ ನೂಕಿಯೋ, ಸ್ಟಡಿ ಪಿರಿಯಡ್ಡಿನಲ್ಲೋ, ಸಂಜೆ ಆಟದ ಪಿರಿಯಡ್ಡಿನಲ್ಲೋ ಪ್ರಾಕ್ಟೀಸು ನಡೆಯುತ್ತಾ ಇತ್ತು. ಪ್ರಾಕ್ಟೀಸು ನೋಡಲು ದಿನಾ ಬರುವ ಕೆಲವು ಸೈಲೆಂಟ್ ಗಿರಾಕಿಗಳಿಗೆ ನಾಟಕದ ಡೈಲಾಗು ಸ್ಕೂಲ್ಡೇ ಹೊತ್ತಿಗೆ ಬಾಯಿಪಾಠ ಬರ್ತಾ ಇತ್ತು!!! ಒಂದು ವೇಳೆ ಯಾವುದೇ ನಾಟಕದ ಪಾತ್ರಧಾರಿ ಆ ದಿನ ಕೈಕೊಟ್ಟರೆ ಅದನ್ನು ನಿರ್ವಹಿಸುವಷ್ಟು ಡೈಲಾಗು ಈ ಖಾಯಂ ಗಿರಾಕಿ ಪ್ರೇಕ್ಷಕರಿಗೆ ಇರ್ತಾ ಇತ್ತು.

ಎಲ್ಲರಿಗೂ ಡೈಲಾಗು ಬಾಯಿಪಾಠ ಬಂದ ಮೇಲೆ ಸ್ಕೂಲ್ಡೇ ಇನ್ನೇನು ಹತ್ತಿರ ಬಂತು ಅನ್ನುವಾಗ ಸ್ಟೇಜ್ ಪ್ರಾಕ್ಟೀಸ್ ಶುರುವಾಗ್ತಾ ಇತ್ತು. ಎಷ್ಟೇ ಬಾಯಿಪಾಠ ಮಾಡಿ ಕಲಿತರೂ ಸ್ಟೇಜಿಗೆ ಹೋಗಿ ನಿಂತಾಗ ಕೈಕಾಲು ನಡುಗುವುದು, ಸ್ಟೇಜ್ ಭಯಂಕರ ದೊಡ್ಡ ಇದ್ದ ಹಾಗೆ ಕಾಣುವುದು ಅದೆಲ್ಲಾ ಅಗ್ತಾ ಇತ್ತು. ಎಲ್ಲದಕ್ಕಿಂತ ಗಮ್ಮತ್ತು ಅಂದರೆ ನಾಟಕದ ದಿನ ಅಲ್ಲಲ್ಲಿ ಆಯಕಟ್ಟಿನ ಜಾಗಗಳಲ್ಲಿ (ಪರದೆಯ ಹಿಂದೆ, ಸೈಡ್ ವಿಂಗ್ ಪಕ್ಕ... ಇತ್ಯಾದಿ) ನಮಗೆ ನಾಟಕ ಹೇಳಿಕೊಟ್ಟ ಮೇಷ್ಟ್ರು, ಅವರ ಕೆಲ ಸಹೋದ್ಯೋಗಿ ಮೇಷ್ಟ್ರು, ದೊಡ್ಡ ಕ್ಲಾಸಿನ ಮಕ್ಕಳು ಸ್ಕ್ರಿಪ್ಟು ಕೈಯಲ್ಲಿ ಹಿಡ್ಕೊಂಡು ಡೈಲಾಗು ತಪ್ಪಿದವರಿಗೆ ಹೇಳಿ ಕೊಡುವ ಸಂಗತಿ.

ಈ ಡೈಲಾಗು ಹೇಳಿಕೊಡುವುದು ಕೆಲವೊಮ್ಮೆ ಪ್ರೇಕ್ಷಕರಿಗೂ ಪಿಸುಮಾತಿನ ಧ್ವನಿಯಲ್ಲಿ ಕೇಳ್ತಾ ಇತ್ತು. ಡೈಲಾಗ್ ಮರೆತು ಕಕ್ಕಾಬಿಕ್ಕಿಯಾಗುವ ಪಾತ್ರಧಾರಿ ಸ್ಟೇಜಿನಲ್ಲಿ ಸರ್ತ ನಿಂತಾಗ, ಹಿಂದಿನಿಂದ ಹೇಳಿಕೊಡುವುದು ಪ್ರೇಕ್ಷಕರಿಗೇ ಕೇಳಿದರೂ ಪ್ರೇಕ್ಷಕರು ಅದನ್ನು ಕ್ಷಮಿಸ್ತಾ ಇದ್ರು. ನಾಟಕವನ್ನು ಎಂಜಾಯ್ ಮಾಡ್ತಾ ಇದ್ರು ಎಂಬುದು ಆ ಕಾಲದ ಗಮ್ಮತ್ತು.

 

ಪರದೆ ಕಟ್ಟುವುದರಲ್ಲೂ ಹಾಗೆಯೇ, ಎದುರು ಬೀದಿ ದೃಶ್ಯ, ಅದರ ಹಿಂದೆ ಉದ್ಯಾನವನ, ಅದರ ಹಿಂದೆ ಅರಮನೆ, ಎಲ್ಲದಕ್ಕಿಂತ ಹಿಂದೆ ಕಾಡು.... ಹೀಗೆ ಪರದೆಗಳಿಗೂ ಪ್ರೋಟೋಕಾಲ್ ಇತ್ತು. ಎಲ್ಲದಕ್ಕಿಂತ ಎದುರು ದೊಡ್ಡದಾದ ಮೇಲಿನಿಂದ ಇಳಿಯುವ ಅಥವಾ ಅಕ್ಕಪಕ್ಕದಿಂದ ಬರುವ ಕೆಂಪು ಪಟ್ಟಿಪಟ್ಟಿ ಪರದೆ. ಅದನ್ನು ಸ್ಕೂಲ್ಡೇ ಶುರುವಾಗುವಾಗ ಮತ್ತು ಮುಗಿಯುವಾಗ ಮಾತ್ರ ಹಾಕುವುದು. ಎಷ್ಟೋ ಬಾರಿ ಹಗ್ಗ ಎಳೆದಾಗಲೂ ಅರ್ಧಕ್ಕೆ ಬಂದು ಸ್ಟ್ರಕ್ ಆಗುವ ಪರದೆಯನ್ನು ಒಳಗಿನಿಂದ ಬಲಾತ್ಕಾರವಾಗಿ ಎಳೆದುಕೊಂಡು ಹೋಗಿ ದಡ ಸೇರಿಸುವ ಕಾಯಕವಂತೂ ಸ್ಕೂಲ್ಡೇಯ ಕಡೆಗಣಿಸಲಾಗದ ಭಾಗವೂ ಆಗಿತ್ತು.

ಉದ್ಯಾನವನದಲ್ಲಿ ಪ್ರೇಮಿಗಳು ಕುಣಿಯುವ ಸೀನು ಹಿರಿಯ ವಿದ್ಯಾರ್ಥಿಗಳ ನಾಟಕದಲ್ಲಿ ಕಡ್ಡಾಯವಾಗಿತ್ತು. ಅವರು ಕುಣಿಯುವ ತಲೆದೂಗುವ ಮರಗಳು ಎಂಬ ಕಲ್ಪನೆಯನ್ನು ಸಾಕಾರ ಮಾಡಲು ಮರದ ಗೆಲ್ಲುಗಳನ್ನು ಪರದೆಯ ಹಿಂದಿನಿಂದ ಕುಳಿತವರು ಹಿಡಿದುಕೊಂಡು ಅಲ್ಲಾಡಿಸುವ ದೃಶ್ಯವಂತೂ ಯಾವ ಸಿನಿಮಾ ಸೆಟ್ಟಿಂಗಿಗೂ ಕಡಿಮೆ ಇರುತ್ತಾ ಇರಲಿಲ್ಲ. ಜನಪ್ರಿಯ ಚಿತ್ರಗೀತೆಗಳಿಗೆ ಸ್ಥಳೀಯ ಸಾಹಿತಿಗಳು ಬರೆಯುತ್ತಿದ್ದ ಆಕರ್ಷಕ ಸಾಹಿತ್ಯ (ಹೃದಯವೆ ನಿನ್ನ ಹೆಸರಿಗೆ, ರಾಮಚಾರಿ ಹಾಡುವ, ಶಿಲೆಗಳು ಸಂಗೀತವ ಹಾಡಿದೆ... ಇತ್ಯಾದಿ ಇತ್ಯಾದಿ ಜನಪ್ರಿಯ ಹಾಡುಗಳು)ವನ್ನು ಸ್ಥಳೀಯ ಗಾಯಕರು ಅದೇ ರಾಗದಲ್ಲಿ ವಿದ್ ಮ್ಯೂಸಿಕ್ ಹಾಡುವುದು, ಅದಕ್ಕೆ ನಾಟಕದ ಹೀರೋ, ಹೀರೋಯಿನ್ ಕುಣಿಯುವುದು ಇದಕ್ಕೆ ಭಯಂಕರ ಟಿಆರ್ ಪಿ ಇರ್ತಾ ಇತ್ತು !  ನಾಟಕದ ಡೈಲಾಗನ್ನೇ ಭಾರಿ ಕಷ್ಟದಲ್ಲಿ ಕಲಿಯುವ ಪಾತ್ರಧಾರಿಗಳು ಕೆಲವೊಮ್ಮೆ ಪ್ರಾಕ್ಟೀಸಿಗೂ ತಪ್ಪಿಸಿ, ಈ ಡ್ಯಾನ್ಸ್ ಪ್ರಾಕ್ಟೀಸೂ ಸರಿಯಾಗಿ ಆಗದೆ, ಹಾಕಿದ ಸ್ಟೇಪ್ಪನ್ನೇ ಪುನಾ ಪುನಾ ಹಾಕುವುದು, ಯಾವುದೋ ಸಾಹಿತ್ಯಕ್ಕೆ ಹೇಗ್ಹೇಗೋ ಲಿಪ್ ಸಿಂಕ್ ಮಾಡುವುದು ಕೂಡಾ ಆ ಕಾಲದ ನಾಟಕದ ವಿಶೇಷಗಳೂ ಹೌದು. ಮ್ಯೂಸಿಕ್ಕಿನವರು, ಲೈವ್ ಹಾಡು ಹೇಳುವವರು ಸ್ಟೇಜಿನ ಎದುರು ಮೈಕ್ ದವರ ಹತ್ರ ಕೂರುತ್ತಿದ್ದರು. ಅಲ್ಲಿಯೇ ಲೈವ್ ಹಾಡು ಹಾಡ್ತಾ ಇದ್ರು. ಅದಕ್ಕೋಸ್ಕರ ವಿದ್ ಮ್ಯೂಸಿಕ್ ನಾಯಕ ಪ್ರಾಕ್ಟೀಸ್ ಮಾಡುವ ಕ್ರಮವೂ ಇತ್ತು....

 

ಡ್ಯಾನ್ಸ್ ಮಾಡುವಾಗ, ನಾಟಕ ಪ್ರದರ್ಶನವಾಗುವಾಗ ಪಾತ್ರಧಾರಿಗಳಿಗಿಂತಲೂ ಅದನ್ನು ಕಲಿಸಿದ ಮೇಷ್ಟ್ರು, ಟೀಚರುಗಳಿಗೆ ಆಗುವ ಟೆನ್ಶನ್, ಮಕ್ಕಳು ಚೆನ್ನಾಗಿ ಮಾಡ್ಲಪ್ಪ ಎಂಬ ಅವರ ಹಾರೈಕೆ, ಗಡಿಬಿಡಿಯ ಓಡಾಟ, ಕೊನೆಗಳಿಗೆಯಲ್ಲಿ ನರ್ವಸ್ ಆಗುವ ಮಕ್ಕಳಿಗೆ ಪ್ರೋತ್ಸಾಹ ಕೊಟ್ಟು ಧೈರ್ಯ ತುಂಬುವ ಮಾತುಗಳು, ಮೇಕಪ್ಪು ಮಾಡಿ ಗಂಟೆಗಳೂ ಕಳೆದರೂ ತಮ್ಮ ಸರದಿ ಬಾರದೆ ಹಸಿವಿನಿಂದ ಕೂಗುವ ಪುಟ್ಟ ಮಕ್ಕಳು, ಮತ್ತೆ ಅವರಿಗೆ ಸಮಾಧಾನದ ಮಾತು, ಬೈಗಳು, ಪುಟಾಣಿ ಮಕ್ಕಳ ಜೊತೆ ಟೆನ್ಶನ್ನಿನಿಂದ ಸೈಡ್ ವಿಂಗ್ ಹಿಂದೆ ಸ್ವತಃ ಕುಣಿದು ತೋರಿಸುವ ಟೀಚರುಗಳು.... ಪರದೆಯ ಹಿಂದೆ, ನೇಪಥ್ಯದ ಟೆನ್ಶನ್ನುಗಳು ಪಾಪ ಟೀಚರುಗಳಿಗೇ ಗೊತ್ತು... ಎಲ್ಲ ಮುಗಿದಾಗ ಯುದ್ಧ ಗೆದ್ದ ಅನುಭವ ಅವರಿಗೆ!

ನಾಟಕದಲ್ಲಿ ಪಾತ್ರ ಸಿಕ್ಕದವರು, ಡ್ಯಾನ್ಸಿಗೆ ಒಗ್ಗದವರು, ಆದರೆ ಭಯಂಕರ ಎಂಥೂಸಿಯಾಸ್ಟಿಕ್ ಮಕ್ಕಳೆಲ್ಲ ಪರದೆ ಎಳೆಯಲು, ಹಿಂದಿನಿಂದ ಡೈಲಾಗು ಹೇಳಿಕೊಡಲು, ಅತಿಥಿಗಳಿಗೆ ಪ್ರೈಸ್ ತಂದುಕೊಡಲು, ಬಂದ ಅತಿಥಿಗಳನ್ನು ಬೆಂಚಿನಲ್ಲಿ ಕೂರಿಸಲು (ಆಗಿನ್ನೂ ಫೈಬರ್ ಕುರ್ಚಿಗಳನ್ನು ಸಭಾಂಗಣದಲ್ಲಿ ಹಾಕುವ ಕ್ರಮ ಇರಲಿಲ್ಲ) ಸೇರುತ್ತಿದ್ದರು. ಅವರನ್ನು ವಾಲಿಂಟರ್ಸ್ ಅಂತ ನಮ್ಮ ಭಾಷೆಯಲ್ಲಿ ಕರೆಯಲಾಗುತ್ತಿತ್ತು. ಈ ವಾಲಿಂಟರ್ ಆಗಿ ಬ್ಯಾಜ್ ಸಿಕ್ಕಿಸಿಕೊಳ್ಳುವುದು ಹೆಮ್ಮೆಯ ಸಂಗತಿಯೂ ಆಗಿತ್ತು. ಅವ ಪಾಪ ಇಡೀ ರಾತ್ರಿ ನಿದ್ರೆಕೆಟ್ಟು ಕೆಲಸ ಮಾಡಿ ಬೆಳಗ್ಗೆ ಸ್ಕೂಲ್ಡೇ ಮುಗಿದ ಮೇಲೆ ಮೈದಾನದಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಬೆಂಚುಗಳನ್ನು ಆಯಾ ಕ್ಲಾಸ್ ರೂಮುಗಳಲ್ಲಿ ಇಟ್ಟು ಮನೆಗೆ ಹೋಗಬೇಕಿತ್ತು.!

ಮತ್ತೆ ಶಾಲೆಯಲ್ಲೇ ಯಾರೋ ಮೇಷ್ಟ್ರು, ಅಥವಾ ಊರಿನಲ್ಲಿ ಯಕ್ಷಗಾನ ಕಲಿತ ವಿದ್ವಾಂಸರು ಬಂದು ಯಕ್ಷಗಾನ ಕಲಿಸ್ತಾ ಇದ್ರು. ದಿನಾ ಸಂಜೆ ಅಥವಾ ಶಾಲೆ ಬಿಟ್ಟ ಮೇಲೆ ಯಕ್ಷಗಾನ ಪ್ರಾಕ್ಟೀಸು. ಸಣ್ಣ ಸಣ್ಣ ಪ್ರಸಂಗ. ಶುರುವಿಗೆ ಬ್ಯಾಟಿಗೆ ಕೋಲಿನಲ್ಲಿ ಬಡಿದು ಪ್ರಾಕ್ಟೀಸ್... ಮಕ್ಕಳು ಚೆನ್ನಾಗಿ ಕಲಿತ ಮೇಲೆ ಚೆಂಡೆ ಪ್ರಾಕ್ಟೀಸು. ಅದೇ ಮೇಷ್ಟ್ರು ಸ್ವತಃ ಭಾಗವತರೂ, ಮದ್ಲೆಗಾರರು ಆಗಿ ಚೆಂಡೆ ಬಾರಿಸುತ್ತಾ ಯಕ್ಷಗಾನ ಕಲಿಸುವಾಗ ಇಡೀ ಶಾಲೆಯೇ ಕೆಲವೊಮ್ಮೆ ಪ್ರಾಕ್ಟೀಸು ನೋಡಲು ಸೇರ್ತಾ ಇತ್ತು. 3,4ನೇ ಕ್ಲಾಸಿನಲ್ಲಿ ನಡೆದ ಸ್ಕೂಲ್ಡೇ ಯಕ್ಷಗಾನಗಳಲ್ಲಿ ನನ್ನ ಕ್ಲಾಸ್ಮೇಟುಗಳಾದ ಶಿವಪ್ರಸಾದ, ರವೀಂದ್ರ, ಶ್ರೀನಾಥ ಮತ್ತಿತರರು ಪ್ರಾಕ್ಟೀಸು ಮಾಡ್ತಾ ಇದ್ದದ್ದು, ಬಿಲ್ಲಿನ ಬದಲು ಸ್ಕೇಲ್ ಹಿಡ್ಕೊಂಡು ಹಾರಿದ್ದು, ಸ್ಕೂಲ್ಡೇ ಮುಗಿದ ಮೇಲೂ ಸ್ಟಡಿ ಪಿರಿಯಡ್ಡಿನಲ್ಲಿ ಅದೇ ಯಕ್ಷಗಾನವನ್ನು ಅವರು ಮರುಪ್ರಸಾರ (ಮತ್ತೆ ಮತ್ತೆ ಕುಣಿದು) ಮಾಡ್ತಾ ಇದ್ದದ್ದೆಲ್ಲ ಈಗಲೂ ಚೆನ್ನಾಗಿ ನೆನಪಿದೆ. ಸ್ಕೂಲ್ಡೇ ದಿನ ಬಣ್ಣ ಬಣ್ಣದ ವೇಷಗಳಲ್ಲಿ ನೋಡುವುದೇ ಚಂದ. ಪಾಪ. ಎಲ್ಲ ಡ್ಯಾನ್ಸು, ಸಣ್ಣ ಮಕ್ಕಳ ನಾಟಕ ಮುಗಿದ ಮೇಲೆ ಯಕ್ಷಗಾನ. ಬಹುಶಃ ಮುಂಜಾನೆ 2,3 ಗಂಟೆ ಹೊತ್ತಿಗೆ ನಡೆಯುವಂಥದ್ದು. ಅಲ್ಲಿಯವರೆಗೂ ಅವರು, ಅವರ ಪೇರೆಂಟುಗಳೂ, ಹೇಳಿಕೊಟ್ಟ ಬಡ ಮೇಷ್ಟ್ರೂ ಕಾಯಬೇಕು. ಆದರೂ ಅರ್ಧರಾತ್ರಿ ಯಾರೂ ಎದ್ದು ಹೋಗಲು ವಾಹನಗಳ ವ್ಯವಸ್ಥೆ ಹಾಗೂ ಹೋಗುವ ಮನಸ್ಥಿತಿಯೂ ಆಗ ಇಲ್ಲದ ಕಾರಣ, ಯಾವ ಈವೆಂಟಿಗೂ ಪ್ರೇಕ್ಷಕರ ಕೊರತೆ ಎಂಬುದು ಇರಲಿಲ್ಲ.

ಚೆಂಡೆಯ ಪೆಟ್ಟು ಮೈಲು ದೂರಕ್ಕೆ ಕೇಳುವಾಗ ಊರವರೂ ಸ್ಕೂಲ್ಡೇ ದಿನಕ್ಕೆ ಕಾಯುವ ಹಾಗಾಗುತ್ತಿದ್ದದ್ದು ಸುಳ್ಳಲ್ಲ.

ಯಾವತ್ತೂ ಪಂಚೆ ಉಟ್ಟು ಬರುವ ಮೇಷ್ಟ್ರುಗಳು ಆ ದಿನ ಪ್ಯಾಂಟು, ಶೂ ಹಾಕಿ ಸ್ಪೀಡು ಸ್ಪೀಡು ನಡೆಯುವುದು, ಟೀಚರುಗಳು ವಿಶೇಷವಾಗಿ ಮದುವೆಗೆ ಹೊರಟವರಂತೆ ಅಲಂಕಾರ ಮಾಡಿ ಬರುವುದು, ಹೆಡ್ಮಾಷ್ಟ್ರು ತಮ್ಮ ಸಿಡುಕುತನ ಬದಿಗಿಟ್ಟು ನಗುನಗುತ್ತಾ ಓಡಾಡುವುದು ಸ್ಕೂಲ್ಡೇ ದಿನದ ವಿಶೇಷಗಳಲ್ಲಿ ಒಂದು. ಸ್ಕೂಲ್ಡೇ ದಿನ ಎಂದಿನ ಹಾಗಲ್ಲ. ವಿಶೇಷ ಸೂರ್ಯೋದಯ, ಹೊತ್ತು ಯಾಕೆ ಮುಂದೆ ಹೋಗುವುದಿಲ್ಲ ಎಂಬ ಚಡಪಡಿಕೆ. ವಿದ್ಯಾರ್ಥಿ ಜೀವನವೇ ಹಾಗಲ್ವ? ಇಂದು ಯಾಕೆ ಗಡಿಯಾರ ಮುಂದೆ ಹೋಗುವುದಿಲ್ಲ ಎಂಬಂಥ ಪುಟ್ಟದಾದ ಅಸಹನೆ.

 

ಸ್ಕೂಲ್ಡೇಗೆ ಅಂತಲೇ ತೆಗೆದಿಟ್ಟ ಹೊಸ ಡ್ರೆಸ್ಸು ಹಾಕಿ ಶಾಲೆಯತ್ತ ಬೆಳಗ್ಗೆ ಓಡಿದಾಗ ಅಲ್ಲಿ ಧ್ವಜಾರೋಹಣಕ್ಕೆ ತಯಾರಿ. ಪಂಚಾಯತ್ ಅಧ್ಯಕ್ಷರೋ, ಶಾಲೆಯ ಬೆಟರ್ ಮೆಂಟ್ ಕಮಿಟಿಯ ಅಧ್ಯಕ್ಷರೋ ಧ್ವಜಾರೋಹಣದ ನಂತರ ಮಾಡುವ ಭಯಂಕರ ಭಾಷಣ ಕೇಳುವ ಮೂಡು ಯಾರಿಗೂ ಇರುವುದಿಲ್ಲ. ಅಸೆಂಬ್ಲಿ ಮುಗಿದ ಬಳಿಕ ಕೊಡುವ ತಿಂಡಿ, ಶರಬತ್ತು, ಅದಾದ ಬಳಿಕ ಮೈದಾನದಲ್ಲಿ ನಡೆಯುವ ವಿಶೇಷವಾದ ಛದ್ಮವೇಷ ಸ್ಪರ್ಧೆ ನೋಡುವುದೇ ಖುಷಿ... ಅದಾದ ಮೇಲೆ ಮೈಕ್ಕದವರು ಬರುವುದು, ಲೈಟಿಂಗಿನವರು ಬರುವುದು, ಸುತ್ತಲೂ ಟ್ಯೂಬ್ ಲೈಟ್ ಕಟ್ಟುವುದು, ಸಂತೆಯವರು ಬಂದು ತಮ್ಮ ತಮ್ಮ ಜಾಗಗಳಲ್ಲಿ ಮಾರಾಪುಗಳನ್ನು ಬಿಡಿಸಿ (ಗಂಟುಮೂಟೆ) ರೆಡಿ ಮಾಡುವುದು, ಹಿರಿಯ ವಿದ್ಯಾರ್ಥಿಗಳು ಮೈದಾನದ ಸ್ಟೇಜಿನ ಎದುರು ಬೆಂಚಿಯನ್ನು ಸಾಲಾಗಿ ಇಡುವುದು ಇವೆಲ್ಲ ಪಾರಂಪರಿಕ ಆಗುಹೋಗುಗಳು. ಮಧ್ಯಾಹ್ನದ ಊಟಕ್ಕೆ ಮನೆಗೆ ಹೋಗಿ, ರಾತ್ರಿ ನಿದ್ರೆಯಿಲ್ಲ ಎಂಬ ನೆಪದಲ್ಲಿ ಮಧ್ಯಾಹ್ನ ಸ್ವಲ್ಪ ಮಲಗಲು ಪ್ರಯತ್ನ ಮಾಡಿದರೂ ಕೈಬಿಸಿ ಬರೆಯುವ ಸ್ಕೂಲ್ಡೇ ನೆನಪಿನಲ್ಲಿ ನಿದ್ರೆಯೇ ಬರುವುದಿಲ್ಲ!!!

ಸಂಜೆ ನಿದ್ರೆ ಬರುವುದಕ್ಕೆ ಅಂತ ಸ್ವಲ್ಪ ಜಾಸ್ತಿಯೇ ಚಹಾ ಕುಡಿದು ಶಾಲೆಯತ್ತ ಓಡಿದರೆ, ಮತ್ತೆ ಮನೆಗೆ ಬರುವುದು ಮರುದಿನ ಬೆಳಗ್ಗೆಯೇ...

ಸ್ಕೂಲ್ಡೇ ದಿನ ವಿಶೇಷವಾಗಿ ಬರುವ ಸಂತೆಯಲ್ಲಿ ತಿನ್ನುವ ಚರ್ಮುರಿ (ಮಂಡಕ್ಕಿ), ಐಸ್ ಕ್ಯಾಂಡಿ, ಪೆಪ್ಸಿ (ಊದುಬತ್ತಿಯ ತೊಟ್ಟೆಯ ಹಾಗಿರುವುದರಲ್ಲಿ ತುಂಬಿಸಲಾದ ಕ್ಯಾಂಡಿ), ದೂದ್ ಕ್ಯಾಂಡಿ, ಬೆಲ್ಲ ಕ್ಯಾಂಡಿ ತಿನ್ನುವುದಕ್ಕಿಂತ ಖುಷಿ ಬೇರೆ ಉಂಟ. ಮೈದಾನದ ಸುತ್ತಲೂ ಆವರಿಸಿರುವ ಸಂತೆಗಳು, ಮೈದಾನದ ಮೂಲೆಯಲ್ಲಿ ಗಡ ಗಡ ಸದ್ದು ಮಾಡಿ ಅಬ್ಬರಿಸುವ ಜನರೇಟರು, ಸ್ಕೂಲ್ಡೇ ದಿನ ವಿಶೇಷವಾಗಿ ಶಾಲೆಗೆ ಅಮ್ಮಂದಿರೊಂದಿಗೆ ಬರುವ ಟೀಚರುಗಳ ಪುಟ್ಟ ಮಕ್ಕಳನ್ನು ಮುತ್ತಿಕ್ಕುವ ವಿದ್ಯಾರ್ಥಿಗಳು, ಸ್ಕೂಲ್ಡೇ ದಿನ ಮಾತ್ರ (ಆಗ ಪೇರೆಂಟ್ಸ್ ಮೀಟಿಂಗ್ ಆಗ್ತಾ ಇದ್ದ ನೆನಪಿಲ್ಲ) ಶಾಲೆಗೆ ಬರುವ ಪೇರೆಂಟ್ಸ್ ಗಳಿಗೆ ತಮ್ಮ ಕ್ಲಾಸು ತೋರಿಸುವ ಸಂಭ್ರಮ, ಆಗಾಗ ಸ್ಟೇಜಿಗೆ ಹೋಗಿ ಪರದೆಗಳ ನಡುವಿನ ಮಬ್ಬು ಬೆಳಕಿನಲ್ಲಿ ನಿಂತು ಸಂಭ್ರಮಿಸುವ ಖುಷಿ, ಅದೊಂದು ಕನಸಿನಂಥಾ ಲೋಕದಲ್ಲಿ ಹೋಗಿ ಬಂದ ಅನುಭವ. ಸ್ಟೇಜಿನ ಪಕ್ಕ ನಿಲ್ಲಿಸಿದ ಕಪ್ಪು ಬೋರ್ಡಿನಲ್ಲಿ ಇಡೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಪಟ್ಟಿಯನ್ನು ಚಾಕಿನಲ್ಲಿ ಬರೆದದ್ದು, ಅದನ್ನು ಆಗಾಗ ನೋಡಿ, ಮುಂದೇನು, ಮುಂದೇನು ಅಂತ ತಿಳಿಯುವ ಕುತೂಹಲ, ಎಷ್ಟೇ ಪ್ರಯತ್ನ ಪಟ್ಟರೂ ಮಧ್ಯರಾತ್ರಿಯ ಬಳಿಕ ಹಳೆ ವಿದ್ಯಾರ್ಥಿಗಳ ನಾಟಕಕ್ಕಾಗುವಾಗ ಒತ್ತರಿಸಿ ಬಂದ ನಿದ್ರೆ, ಮತ್ತೆಷ್ಟೋ ಹೊತ್ತಿಗೆ ಎಚ್ಚರವಾದಾಗ ನಾಟಕದ ಫ್ಲೋ ತಿಳಿಯದೆ ಚಡಪಡಿಸಿದ್ದು... ಹೀಗೆ ಎಷ್ಟೊಂದು ನೆನಪುಗಳು...

 

ಇನ್ನೂ ನೆನಪಿದೆ ಭಾರತಿ ಶಾಲೆಯಲ್ಲಿ ಐದನೇ ಕ್ಲಾಸಿನಲ್ಲಿ ಮೊದಲನೇ ಬಾರಿಗೆ ಸ್ಟೇಜಿಗೆ ಹತ್ತಿದಾಗ ಸಿಕ್ಕಿದ್ದು ವಾಲ್ಮೀಕಿಯ ಪಾತ್ರ. ರಾತ್ರಿ ಹನ್ನೆರಡೊ, ಒಂದು ಗಂಟೆಗೋ ಪ್ರದರ್ಶನವಾಗುವ ನಾಟಕಕ್ಕೆ ಸಂಜೆ 6 ಗಂಟೆಗೇ ಮೇಕಪ್ಪು ಮಾಡಿ, ಗಡ್ಡ ಕಟ್ಟಿ ಕುಳಿತದ್ದು, ಆ ಗಡ್ಡಕ್ಕೆ ಹಾಕಿದ ಗಮ್ಮಿನ ಘಾಟು, ಮೇಕಪ್ಪಿನ ಪರಿಮಳ, ಕೈಯ್ಯಲ್ಲಿ ಗಂಟೆಗಳ ಮೊದಲೇ ಹಿಡಿದ ಕಮಂಡಲ... ನಮ್ಮ ನಾಟಕದ ವರೆಗೆ ಇನ್ಯಾವುದೇ ಡ್ಯಾನ್ಸು, ನಾಟಕ ನೋಡಲಾಗದ ಅಸಹಾಯಕತೆ (ಮೇಕಪ್ಪಿನಲ್ಲಿ ಇದ್ದ ಕಾರಣ), ಸ್ಟೇಜಿಗೆ ಹೋದಾಗ ಎದುರಿನ ವಿಶಾಲ ಪ್ರೇಕ್ಷಕರ ಗಢಣ ಕಣ್ಣಿಗೆ ಕಾಣದ ಕಾರಣ (ಪ್ರೇಕ್ಷಕರು ಇರುವಲ್ಲಿ ಲೈಟು ಹಾಕುವುದಿಲ್ಲ, ಕತ್ತಲೆ ಕಾಣುತ್ತದೆ) ಡೈಲಾಗು ಮರೆಯದೇ ಮರ್ಯಾದೆ ಉಳಿದದ್ದು... ನಮ್ಮ ಮುಖವನ್ನು ನಾವೇ ಕನ್ನಡಿಯಲ್ಲಿ ನೋಡಿ ಅಚ್ಚರಿಪಟ್ಟದ್ದು.... ಹೀಗೆ ಎಷ್ಟೊಂದು ನೆನಪುಗಳು.

ನಾಟಕದ ಮರುದಿನ ನಮ್ಮ ನಾಟಕ ಚಂದ ಆದ ಖುಷಿಗೆ ಮೇಷ್ಟ್ರು ಗಣೇಶ್ ಮಹಲ್ ಹೋಟ್ಲಿಗೆ ಕರ್ಕೊಂಡು ಹೋಗಿ ನಮಗೆಲ್ಲ ಅಂಬಡೆ ಚಹಾ ಕುಡಿಸಿದ್ದು ಮತ್ತೊಂದು ಖುಷಿ. ಮಾತ್ರವಲ್ಲ. ಊರಿನ ಏಕೈಕ ಫೋಟೋಗ್ರಫರ್ ತೆಗೆದ ಫೋಟೋದಲ್ಲಿ ನಮ್ಮ ಫೋಟವನ್ನು ಮೊದಲೇ ಐದು ರುಪಾಯಿ ಕೊಟ್ಟು ಬುಕ್ ಮಾಡಿ.... ದಿನಗಟ್ಟಲೆ ಅದು ಪ್ರಿಂಟಾಗಲು ಕಾದು, ನಂತರ ಜತನವಾಗಿ ತಂದು ಆಲ್ಬಂನಲ್ಲಿ ಇರಿಸುವ ಅನುಭವ ಇದೆಯಲ್ಲ... ಅದೊಂದು ಐತಿಹಾಸಕ ವಸ್ತುವನ್ನು ಜೋಪಾನವಾಗಿ ಕಾಪಿಟ್ಟ ಹಾಗೆ. ಅಂತಹ ಅನುಭೂತಿ, ಕಾಯುವಿಕೆ ಮತ್ತು ನಿರೀಕ್ಷೆಗಳೇ ಕಡಿಮೆಯಿದ್ದ ಬದುಕಿನ ದಿನಗಳ ಮೆಲುಕು ಬೇರೊಂದು ಜನ್ಮದ ಬದುಕಿನ ಹಾಗೆ. ಆಗಿಂದಾಗ್ಗೆ ಫೋಟೋ ತೆಗೆದು ಸ್ಟೇಟಸ್ಸಿಗೆ ಹಾಕಬಹುದಾದ ಇಂದಿನ ದಿನಗಳಿಗೆ ಅಂದಿನ ದಿನಗಳನ್ನು ಹೋಲಿಸಲೇ ಸಾಧ್ಯವಿಲ್ಲ.

 

ಗುಟ್ಟಾಗಿದ್ದ ಪ್ರಯಣ ಪ್ರಸಂಗಗಳು ಬಹಿರಂಗವಾಗುವುದು, ಪುಂಡು ಪೋಕರಿಗಳು ಪೆಟ್ಟು ಮಾಡುವುದು, ಟ್ಯೂಬ್ ಲೈಟ್ ಒಡೆದು ಹಾಕುವುದು, ಹಳೆ ವಿದ್ಯಾರ್ಥಿಗಳು ಸ್ಕೂಲ್ಡೇ ಹೆಸರಿನಲ್ಲಿ ಶಾಲೆಗೆ ಬಂದು ಹೋಗಲು ಸಾಧ್ಯವಾಗುವುದು ಇಂಥವೂ ಹೈಸ್ಕೂಲು, ಕಾಲೇಜುಗಳ ವಾರ್ಷಿಕೋತ್ಸವದ ನಡೆಯುತ್ತಿದ್ದದ್ದುಂಟು. ಇವೆಲ್ಲ ಪತ್ರಿಕೋದ್ಯಮ ಭಾಷೆಯಲ್ಲಿ ಹೇಳುವುದಾದರೆ ಸ್ಕೂಲ್ಡೇಯ  ಬಾಕ್ಸ್ ಐಟಂಗಳು.

 

ಒಂದು ಡ್ಯಾನ್ಸ್ ಮುಗಿದ ಮೇಲೆ ಮತ್ತೊಂದು ಡ್ಯಾನ್ಸಿನ ಟೀಂ ರೆಡಿ ಆಗದಿದ್ದರೆ ಎಷ್ಟು ಹೊತ್ತಾದರೂ ಪರದೆ ಸೈಡಿಗೆ ಹೋಗದಿದ್ದರೆ ಪ್ರೇಕ್ಷಕರ ಅಸಹನೆ ಶಿಳ್ಳೆಯಾಗಿ ಬದಲಾಗುವುದು, ಡ್ಯಾನ್ಸಿಗೆ ಟೀಚರು ಕೊಟ್ಟ ಕ್ಯಾಸೆಟ್ಟಿನ ಸೈಡು ಬದಲಾಗಿ ಮೈಕ್ಕದವ ಇನ್ಯಾವುದೋ ಹಾಡು ಪ್ಲೇ ಮಾಡಿ ಡ್ಯಾನ್ಸರುಗಳು ಕಕ್ಕಾಬಿಕ್ಕಿಯಾಗಿ ಮತ್ತೆ ಪರದೆ ಎಳೆಯುವುದು, ಟೀಚರು ಆತಂಕದಿಂದ ಬಂದು ಮೈಕ್ಕದವನಿಗೆ ಬೈಯ್ಯುವುದು, ನಾಟಕದಲ್ಲಿ ಡೈಲಾಗು ಮರೆತು ಕಕ್ಕಾಬಿಕ್ಕಿಯಾದವನಿಗೆ ಟೆನ್ಶನ್ನಿನಲ್ಲಿ ಹಿಂದನಿಂದ ಮೇಷ್ಟ್ರು ಹೇಳಿದ ಡೈಲಾಗೂ ಸರಿ ಕೇಳದೆ ಸ್ಟ್ರಕ್ ಆದಾಗ, ಎದುರಿನ ಪಾತ್ರಧಾರಿಯೇ ಅವನ ಡೈಲಾಗು ಹೇಳಿಕೊಡುವುದು ಪ್ರೇಕ್ಷಕರಿಗೇ ಕಾಣುವುದು, ನಾಟಕದ ಎರಡು ಸೀನುಗಳ ನಡುವೆ ಬೀದಿ ಪರದೆ ಎಳೆದಾಗ ನಾಲ್ಕಾರು ನಿಮಿಷಗಳ ಗ್ಯಾಪಿನಲ್ಲಿ ಮೈಕ್ಕದವರು ಜನಪ್ರಿಯ ಚಿತ್ರಗೀತೆಗಳ ಟ್ಯೂನ್ ಸಹಿತ ಬಣ್ಣ ಬಣ್ಣದ ತಿರುಗುವ ಬಲ್ಪುಗಳನ್ನು ಉರಿಸಿ ಟೈಂಪಾಸ್ ಮಾಡುವುದು ಇವೆಲ್ಲ ಆಗಿನ ಸ್ಕೂಲ್ಡೇಯ ಸುತ್ತಮುತ್ತಲಿನ ನೆನಪುಗಳು.

 

ಸ್ಕೂಲ್ಡೇ ದಿನ ಹತ್ತಿರ ಬಂದ ಹಾಗೆ ತೋರಣಗಳನ್ನು ಕಟ್ಟಲು ಬಣ್ಣದ ಪೇಪರುಗಳನ್ನು ತುಂಡು ಮಾಡಿ ಉದ್ದದ ದಾರಕ್ಕೆ ಮೈದಾ ಹಿಟ್ಟಿನ ಗೋಂದಿನಲ್ಲಿ ಅಂಟಿಸುವುದು, ಸ್ಕೂಲ್ಡೇಗೆ ಎರಡು ದಿನ ಇರುವಾಗಲೇ ಸ್ಟೇಜಿಗೆ ಪರದೆ ಕಟ್ಟುವುದು, ಮೈದಾನದ ಕಸ ಹೆಕ್ಕುವುದು, ಅಪರೂಪಕ್ಕೆ ಶಾಲೆಗೇ ಪೈಂಟ್ ಆಗುವುದು, ಹಾಲಿನ ಸ್ಟೇಜಿನಲ್ಲಿ ಆಗಾಗ ಪ್ರಾಕ್ಟೀಸ್ ಆಗುವ ಕಾರಣ ಅಲ್ಲಿನ ಕ್ಲಾಸಿನವರಿಗೆ ತರಗತಿ ಕ್ಯಾನ್ಸಲ್ ಮಾಡಿ ಆಟಕ್ಕೆ ಹೋಗಲು ಬಿಡುವುದು, ಶಾಲೆಯ ಗೇಟಿನಿಂದ ಸ್ಟೇಜಿನ ವರೆಗೆ ಮಾವಿನ ಸೊಪ್ಪಿನ ತೋರಣ ಕಟ್ಟುವುದು ಎಷ್ಟೊಂದು ನೆನಪುಗಳಲ್ವ? ಸ್ಕೂಲ್ಡೇಯ ವಾರದ ಹಿಂದಿನ ದಿನಗಳದ್ದು....

 

ಸಾಂಸ್ಕೃತಿಕ ಕಾರ್ಯಕ್ರಮಕ್ಕಿಂತ ಮೊದಲು ಗಣ್ಯರು ಮಾಡುತ್ತಿದ್ದ ಗಂಭೀರ ಬಾಷಣಗಳನ್ನು ಎಷ್ಟು ಮಂದಿ ಕೇಳುತ್ತಿದ್ದರೋ ಗೊತ್ತಿಲ್ಲ. ಆದರೂ ಸಭಾ ಕಾರ್ಯಕ್ರಮವನ್ನೂ ನೋಡುವುದು ಖುಷಿ ಆಗ್ತಾ ಇತ್ತು. ವರದಿ ವಾಚನ, ಪ್ರೈಸು ತಕ್ಕೊಳ್ಳುವ ಸಂಭ್ರಮ, ಸಣ್ಣ ಬಳಪ, ಸಣ್ಣ ಪೆನ್ಸಿಲ್, ಸಣ್ಣ ಲೋಟೆ, ಮಹಾತ್ಮಾ ಗಾಂಧೀಜಿ ಆತ್ಮಚರಿತ್ರೆ ಹೀಗೆ... ಆಗ ಸಿಗ್ತಾ ಇದ್ದ ಪುಟ್ಟ ಪುಟ್ಟ ಪ್ರೈಸುಗಳೇ ಬದುಕಿನ ದಾರಿಯಲ್ಲಿ ನಮ್ಮ ನಮ್ಮ ದಾರಿಗಳನ್ನು ಕಂಡುಕೊಳ್ಳಲು ಆಗಿದ್ದ ಪ್ರೇರಣೆಯ ಬೂಸ್ಟರುಗಳು ಎಂಬುದರಲ್ಲಿ ಸಂಶಯವಿಲ್ಲ. ಸಿಕ್ಕಿದ ಬಹುಮಾನ ಎಲ್ಲೋ ಜನಜಂಗುಳಿಯಲ್ಲಿ ಬಿಸಾಡಿ ಹೋದಾಗ ಆಗುವ ವೇದನೆ, ಮನೆಗೆ ಬಂದ ನೆಂಟರಿಗೆಲ್ಲ ಪ್ರೈಸು ತೋರಿಸುವ ಹುಮ್ಮಸ್ಸು, ಶಾಲೆಯಲ್ಲಿ ಟೀಚರು ಕಲಿಸುವ ಡ್ಯಾನ್ಸುಗಳನ್ನು ನೋಡಿ ನೆನಪಿಟ್ಟುಕೊಳ್ಳುವ ಕ್ಲಾಸಿನ ಇತರ ಮಕ್ಕಳು ಅದನ್ನು ಬಂದು ಮನೆಯಲ್ಲಿ ಮಾಡಿ ತೋರಿಸುವ ಭರಾಟೆ... ಸ್ಕೂಲ್ಡೇ  ಆವರಿಸಿಕೊಳ್ಳುವ ಮೋಹದ ಪರಿಗೆ ಉದಾಹರಣೆಗಳು.

ಇವರೆಲ್ಲರ ನಡುವೆ...

ಯಾವುದೇ ಡ್ಯಾನ್ಸಿನಲ್ಲಿ ಪಾಲ್ಗೊಳ್ಳದೆ, ನಾಟಕಕ್ಕೆ ಸೇರದೆ, ಸ್ಪೋರ್ಟ್ಸಿನಲ್ಲೂ ಓಡದೆ ಇರುವ ಒಂದು ವಿದ್ಯಾರ್ಥಿ ವರ್ಗವಿದೆ. ತಮ್ಮಷ್ಟಕೇ ಇದ್ದು, ತಮ್ಮಷ್ಟಕೇ ವಿಮರ್ಶೆ ಮಾಡ್ತಾ ದೂರದಲ್ಲಿ ಕುಳಿತು ಎಲ್ಲವನ್ನೂ ನೋಡ್ತಾ, ಸ್ಜೇಜಿಗೆ ಹೋದವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಮಧ್ಯದ ಬೆಂಚುಗಳಲ್ಲಿ ಕೂರುವವರು, ಜಾಸ್ತಿ ನಗದೆ, ಜಾಸ್ತಿ ತಲೆಕೆಡಿಸದೆ ಹೆಚ್ಚು ಸದ್ದು ಮಾಡದೆ ಒಳಗೊಳಗೇ ಖುಷಿ ಅನುಭವಿಸುವವರು. ಅಂಥವರನ್ನೂ ಸ್ಕೂಲ್ಡೇ ಆವರಿಸುತ್ತದೆ, ಆದರೆ ಅವರದನ್ನು ತೋರಿಸಿಕೊಳ್ಳುವುದಿಲ್ಲ ಅಷ್ಟೇ..

 

ಸ್ಕೂಲ್ಡೇ ಮರುದಿನ ಬೆಳಗ್ಗೆ ಮೈದಾನದ ತುಂಬ ಓರೆಕೋರೆ ನಿಂತ, ಮಂಜಿನಲ್ಲಿ ತೋಯ್ದ ಬೆಂಚುಗಳು, ಮುದುಡಿದ ಪರದೆಗಳು, ಮೈದಾನದ ಸುತ್ತ ಹರಡಿದ ಐಸ್ಕ್ಯಾಂಡ್ ಕಡ್ಡಿಗಳು, ಚರ್ಮುರಿ ತುಣುಕುಗಳು, ಮೌನವಾದ ಜನರೇಟರು, ಉರಿದು ಸುಸ್ತಾದ ಟ್ಯೂಬುಲೈಟುಗಳು, ಟೈನ್ಶನ್ನಿಂದ ಉಸ್ಸಪ್ಪಾ ಒಮ್ಮೆ ಸ್ಕೂಲ್ಡೇ ಮುಗಿಯಿತಲ್ಲ ಅಂತ ನಿರಾಳವಾಗಿ ಕೆದರಿದ ತಲೆಕೂದಲು ಸರಿಮಾಡಿ ಮನೆಗೆ ಮರಳಲು ಹೊರಟ ಹೆಡ್ ಮಾಷ್ಟ್ರು.... ಎಷ್ಟೊಂದು ನೆನಪುಗಳಿವೆ ಸ್ಕೂಲ್ಡೇ ಮುಗಿದ ನಂತರವೂ...

 

ಆಗೆಲ್ಲ ನಮಗೆ ಸ್ಕೂಲ್ಡೇಗೆ ಎಷ್ಟು ಖರ್ಚಾಗ್ತಾದೆ, ಮೇಷ್ಟ್ರುಗಳಿಗೆ ಎಷ್ಟು ಟೆನ್ಶನ್ನು ಇರ್ತದೆ, ಖರ್ಚಿಗೆ ಏನು ಮಾಡ್ತಾರೆ, ಇದನ್ನೆಲ್ಲ ಯಾರು ಪ್ಲಾನ್ ಮಾಡ್ತಾರೆ, ಪಿರಿಯಡ್ಡುಗಳನ್ನು ಹೇಗೆ ಅಡ್ಜಸ್ಟ್ ಮಾಡ್ತಾರೆ...? ಯಾವುದರದ್ದೂ ಪರಿವೆ ಇರಲಿಲ್ಲ.... ಸ್ಕೂಲ್ಡೇ ಅಂದ್ರೆ ಸ್ಕೂಲ್ಡೇ ಅಷ್ಟೇ.... ಖುಷಿ, ಗಮ್ಮತ್ತು, ನಿರೀಕ್ಷೆ, ಕಾತರ, ಬಹುಮಾನದ ಕನವರಿಕೆ, ನಾಟಕದ ಗುಂಗು, ಯಕ್ಷಗಾನದ ಮೋಹ, ಛದ್ಮವೇಷ ನೋಡುವ ಆತುರ, ಹೊಸ ಡ್ರೆಸ್ಸಿನೊಂದಿಗೆ ಶಾಲೆಯ ಜಗಲಿಯುದ್ದಕ್ಕೂ ಓಡಾಡುವ ಗೌಜಿ.... ಮದುವೆ ಮನೆಯ ಸಡಗರದ ಹಾಗೆ..

ಹೌದು ಸ್ಕೂಲ್ಡೇ ಒಂದು ಸಡಗರ... ಎಂದೋ ಕಳೆದುಹೋದ ಸುಂದರ ಕನವರಿಕೆ!

-ಕೃಷ್ಣಮೋಹನ ತಲೆಂಗಳ (21.12.2021).

 






7ನೇ ಕ್ಲಾಸ್. ವಿಶ್ವನಾಥ ಮತ್ತು ನವೀನನ ಜೊತೆ (ರಾವಣ)

ಮನೋಜನ ಜೊತೆ

6ನೇ ಕ್ಲಾಸಿನಲ್ಲಿ ಸಂಗೊಳ್ಳಿ ರಾಯಣ್ಣ ಗಣೇಶನ ಜೊತೆ (ಫೋಟೋ-SB Kilingar)

7ನೇ ಕ್ಲಾಸ್ ಪ್ರವೀಣನ ಜೊತೆ

 

2 comments:

. said...

ಸುಪರ್ ಮೋಹನ, ನನಗೂ, ಬಾಲ್ಯದ ನಮ್ಮ ಶಾಲೆಯ ಸ್ಕೂಲ್ ಡೇ ಯ ನೆನಪಾಯಿತು. ಅದಿನ್ನೂ ಹಸಿರಾಗಿಯೇ ಇದೆ. ಒಳ್ಳೆಯ ಬರಹ.

Chandrashekar said...

Super, I felt like I went to my school again.👌👌👌